ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಕೋವಿಡ್‌ ಪ್ರಕರಣ ಇಳಿಕೆಯ ಆಶಾಕಿರಣ

Last Updated 25 ಮೇ 2021, 19:30 IST
ಅಕ್ಷರ ಗಾತ್ರ

ಕೋವಿಡ್‌–19ರ ಎರಡನೇ ಅಲೆಯು ಇಳಿಕೆಯತ್ತ ಸಾಗುತ್ತಿದೆ ಎಂಬ ಆಶಾಕಿರಣವು ಕಾಣಿಸಿಕೊಂಡಿದೆ. ಸೋಮವಾರ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ 1.96 ಲಕ್ಷ. ಮಂಗಳವಾರವೂ ಸರಿಸುಮಾರು ಇದೆ ಸಂಖ್ಯೆಯ ಹೊಸ ಪ್ರಕರಣಗಳು ಪತ್ಯೆಯಾಗಿವೆ. ಕಳೆದ ವಾರದಿಂದ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಮತ್ತು ಗುಣಮುಖರ ಸಂಖ್ಯೆ ಏರುತ್ತಿದೆ. ಜನರ ಆತಂಕವು ಇಳಿಮುಖವಾಗುತ್ತಿದೆ.

ಈ ವರ್ಷ ಮಾರ್ಚ್‌ನಿಂದ ತೀವ್ರಗೊಂಡ ಕೋವಿಡ್‌–19ರ ಎರಡನೇ ಅಲೆಯು ಮೊದಲ ಅಲೆಯ ರೀತಿಯಲ್ಲಿ ಇರಲಿಲ್ಲ. ಹರಡುವಿಕೆಯ ದರ, ರೋಗ ಲಕ್ಷಣಗಳ ತೀವ್ರತೆ ಮತ್ತು ಸಾವಿನ ಪ್ರಮಾಣ ಎಲ್ಲವೂ ಹೆಚ್ಚೇ ಇತ್ತು. ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಇಳಿಕೆಯಾಗುವ ಗಂಭೀರ ಸಮಸ್ಯೆಯೂ ಕಾಣಿಸಿಕೊಂಡಿತು. ಹಾಗಾಗಿಯೇ ಜನರಲ್ಲಿ ಹೆಚ್ಚು ಆತಂಕ ಮತ್ತು ಕಳವಳವನ್ನು ಎರಡನೇ ಅಲೆಯು ಮೂಡಿಸಿತ್ತು.

ಈ ತಿಂಗಳ 5ರಂದು ಭಾರತದಲ್ಲಿ 4,12,262 ಪ್ರಕರಣಗಳು ವರದಿಯಾಗಿದ್ದವು. ಇದು ದೇಶದಲ್ಲಿ ಈವರೆಗೆ ವರದಿಯಾದ ಗರಿಷ್ಠ ಸಂಖ್ಯೆ. ಮಹಾರಾಷ್ಟ್ರ (57,640), ಕರ್ನಾಟಕ (50,112), ಕೇರಳ (41,953), ಉತ್ತರ ಪ್ರದೇಶ (31,111), ತಮಿಳುನಾಡು (23,310) ರಾಜ್ಯಗಳಲ್ಲಿ ಭಾರಿ ಸಂಖ್ಯೆಯ ಪ್ರಕರಣಗಳು ದೃಢಪಟ್ಟಿದ್ದೇ ಈ ಹೆಚ್ಚಳಕ್ಕೆ ಕಾರಣ. ಹೊಸ ಪ್ರಕರಣಗಳು ಮಾರ್ಚ್‌ನಿಂದ ಸತತವಾಗಿ ಏರಿಕೆಯಾಗುತ್ತಲೇ ಇದ್ದವು. ಏಪ್ರಿಲ್‌ 15ರಂದು ಹೊಸ ಪ್ರಕರಣಗಳು ಎರಡು ಲಕ್ಷ ದಾಟಿದ್ದವು. ಏಪ್ರಿಲ್‌ 22ರ ಹೊತ್ತಿಗೆ ಮೂರು ಲಕ್ಷ, ಏಪ್ರಿಲ್‌ 30ರ ಹೊತ್ತಿಗೆ ನಾಲ್ಕು ಲಕ್ಷವನ್ನೂ ಮೀರಿ ಸಾಗಿದವು. ಈ ತ್ವರಿತವಾದ ಏರಿಕೆಯು ಆಸ್ಪತ್ರೆ ಮತ್ತು ಇತರ ಮೂಲಸೌಕರ್ಯಗಳ ಮೇಲೆ ಭಾರಿ ಒತ್ತಡ ಹೇರಿದ್ದಲ್ಲದೆ ದೇಶದಾದ್ಯಂತ ಕಳವಳಕ್ಕೆ ಕಾರಣವಾಗಿತ್ತು.

ಹಲವು ರಾಜ್ಯಗಳು ಮತ್ತು ದೊಡ್ಡ ನಗರಗಳಲ್ಲಿ ಕರ್ಫ್ಯೂ ಮತ್ತು ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳನ್ನು ಕಳೆದ ಒಂದೂವರೆ ತಿಂಗಳಲ್ಲಿ ಕೈಗೊಳ್ಳಲಾಗಿದೆ. ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದು ಪರಿಣಾಮ ಬೀರಿದಂತೆ ಕಾಣಿಸುತ್ತಿದೆ. ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಮಹಾರಾಷ್ಟ್ರ (22,122), ಕರ್ನಾಟಕ (25,311), ಕೇರಳ (17,821), ಉತ್ತರ ಪ್ರದೇಶದಲ್ಲಿ (3,894) ಸೋಮವಾರ ದೃಢಪಟ್ಟ ಪ‍್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಏಪ್ರಿಲ್‌ 20ರಂದು ಗರಿಷ್ಠ ಎಂದರೆ 28,395 ಹೊಸ ಪ್ರಕರಣಗಳು ದಾಖಲಾಗಿದ್ದ ದೆಹಲಿಯಲ್ಲಿ ಸೋಮವಾರ 1,550 ಹೊಸ ಪ್ರಕರಣಗಳಷ್ಟೇ ಪತ್ತೆಯಾಗಿವೆ.

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಇಳಿಕೆ ಕಾಣಿಸಿದೆ. ಇದೇ 9ರಂದು ದೇಶದಲ್ಲಿ ಈವರೆಗಿನ ಗರಿಷ್ಠ ಎಂದರೆ 37.41 ಲಕ್ಷ ಸಕ್ರಿಯ ಪ್ರಕರಣಗಳು ಇದ್ದವು. ಅದರ ಸಂಖ್ಯೆಯು ಸೋಮವಾರ 25.81 ಲಕ್ಷಕ್ಕೆ ಕುಸಿದಿದೆ.

ಸಾವಿನ ಸಂಖ್ಯೆ ಕುಸಿಯದಿರಲು ಕಾರಣವೇನು?
ದೇಶದಲ್ಲಿ ಕೋವಿಡ್‌ನಿಂದಾಗಿ ಮೂರು ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಅದರಲ್ಲಿ ಅರ್ಧದಷ್ಟು ಸಾವುಗಳು ಎರಡನೇ ಅಲೆಯ ಸಂದರ್ಭದಲ್ಲಿ ಸಂಭವಿಸಿವೆ. ಮಾರ್ಚ್‌ ನಂತರದ ಏಳು ವಾರಗಳಲ್ಲಿ ಸುಮಾರು 1.4 ಲಕ್ಷ ಮಂದಿ ಸತ್ತಿದ್ದಾರೆ ಎಂಬುದೇ ಕೋವಿಡ್‌ ಎರಡನೆಯ ಅಲೆಯು ಎಷ್ಟು ಅಪಾಯಕಾರಿ ಎಂಬುದನ್ನು ಸೂಚಿಸುತ್ತದೆ.

ಮೇ ತಿಂಗಳಲ್ಲಿ ಸುಮಾರು 92 ಸಾವಿರ ಜನರು ಕೋವಿಡ್‌ನಿಂದಾಗಿ ಪ್ರಾಣ ಬಿಟ್ಟಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಪ್ರಮುಖ ನಗರ ಹಾಗೂ ರಾಜ್ಯಗಳಲ್ಲಿ ಲಾಕ್‌ಡೌನ್‌ ಹಾಗೂ ಕಟ್ಟುನಿಟ್ಟನ ನಿಯಮಗಳ ಜಾರಿಯಿಂದಾಗಿ ಸೋಂಕಿನ ಪ್ರಕರಣಗಳು ಕಡಿಮೆಯಾಗಿವೆ. ಆದರೂ ಸಾವಿನ ಸಂಖ್ಯೆ ಹೆಚ್ಚು ಕಾಣಿಸಿದೆ. ಈ ತಿಂಗಳಲ್ಲಿ ಕಡತಗಳಲ್ಲಿ ದಾಖಲಾಗಿರುವ ಎಲ್ಲಾ ಸಾವುಗಳು ಇದೇ ತಿಂಗಳಲ್ಲಿ ಸಂಭವಿಸಿದ್ದಲ್ಲ ಎಂಬುದು ಇದಕ್ಕೆ ಕಾರಣ. ಎರಡು ವಾರಗಳ ಹಿಂದೆ ಸತ್ತವರ ಲೆಕ್ಕವನ್ನೂ ಮೇ ತಿಂಗಳಲ್ಲಿ ತೆಗೆದುಕೊಂಡಿರುವುದರಿಂದ ಈ ತಿಂಗಳಲ್ಲಿ ಸತ್ತವರ ಸಂಖ್ಯೆ ಅತಿ ಹೆಚ್ಚು ಕಾಣಿಸುತ್ತಿದೆ.

ಉದಾಹರಣೆಗೆ ಹೇಳುವುದಾದರೆ, ಕಳೆದ ಭಾನುವಾರ ಮಹಾರಾಷ್ಟ್ರದಲ್ಲಿ 1,320 ಮಂದಿ ಸತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳಿವೆ. ಆದರೆ ವಾಸ್ತವದಲ್ಲಿ, ಅವರಲ್ಲಿ 726 ಮಂದಿ ಎರಡು ವಾರಕ್ಕೂ ಹಿಂದೆ ಸತ್ತವರು. ಅವರ ದಾಖಲೆಗಳನ್ನು ಭಾನುವಾರ ಅಪ್‌ಲೋಡ್‌ ಮಾಡಲಾಗಿದೆ. ಅಂದರೆ, ಆ ದಿನ ಸತ್ತವರ ಸಂಖ್ಯೆಯು 594 ಮಾತ್ರ. ತಾಂತ್ರಿಕ ಸಮಸ್ಯೆಗಳಿಂದಾಗಿ ಹಿಂದಿನ ಸಾವಿನ ಪ್ರಕರಣಗಳು ತಡವಾಗಿ ವರದಿಯಾಗಿವೆ. ತಮಿಳುನಾಡು ಮತ್ತು ಕರ್ನಾಟಕದಲ್ಲೂ ಇಂಥ ಬೆಳವಣಿಗೆಗಳು ನಡೆದಿವೆ ಎಂದು ಹೇಳಲಾಗಿದೆ. ಈಗ ಎಲ್ಲಾ ರಾಜ್ಯಗಳಲ್ಲೂ ಸೋಂಕು ಹಾಗೂ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿದೆ ಎಂದು ಅಂಕಿಅಂಶಗಳು ಹೇಳುತ್ತವೆ.

ಸತ್ತವರ ಸಂಖ್ಯೆಯನ್ನು ತಡವಾಗಿ ವರದಿ ಮಾಡುವುದು ಎಲ್ಲಾ ರಾಜ್ಯಗಳಲ್ಲೂ ನಡೆದಿದೆ. ಕರ್ನಾಟಕದಲ್ಲಿ ಮಾರ್ಚ್‌ ತಿಂಗಳಲ್ಲಿ ಸಂಭವಿಸಿರುವ ಕೆಲವು ಸಾವುಗಳನ್ನು ಈಗ ದಾಖಲಿಸಲಾಗುತ್ತಿದೆ ಎಂದು ಹೇಳಲಾಗಿದೆ. ಹೀಗೆ ಬಾಕಿ ಪ್ರಕರಣಗಳ ವಿವರಗಳೆಲ್ಲವೂ ಕಡತವನ್ನು ಸೇರಿದ ನಂತರ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ.

ಜೂನ್‌ನಲ್ಲಿ ನಿಯಂತ್ರಣಕ್ಕೆ
ಮೇ ತಿಂಗಳ ಕೊನೆಯ ಹೊತ್ತಿಗೆ ಪ್ರತಿ ದಿನ ವರದಿಯಾಗುವ ಪ್ರಕರಣಗಳ ಸಂಖ್ಯೆಯು 1.50 ಲಕ್ಷಕ್ಕೆ ಕುಸಿಯಲಿದೆ. ಜೂನ್‌ ತಿಂಗಳ ಕೊನೆಗೆ ದಿನದ ಹೊಸ ಪ್ರಕರಣಗಳು 20 ಸಾವಿರಕ್ಕೆ ಇಳಿಯಲಿವೆ. ಜುಲೈ ಹೊತ್ತಿಗೆ ಸಾಂಕ್ರಾಮಿಕವು ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ‘ಸೂತ್ರ’ ಗಣಿತಶಾಸ್ತ್ರೀಯ ಮಾದರಿಯನ್ನು ಬಳಸಿಕೊಂಡು ಈ ಲೆಕ್ಕ ಹಾಕಲಾಗಿದೆ. ಸೋಂಕಿಗೆ ಒಳಗಾಗುವ ಅಪಾಯ ಇರುವವರ ಪ್ರಮಾಣ, ಪರೀಕ್ಷೆಗೆ ಒಳಪಟ್ಟು ಕೋವಿಡ್‌ ದೃಢಪಟ್ಟವರ ಪ್ರಮಾಣ, ಪತ್ತೆಯಾಗದ ಪ್ರಕರಣಗಳ ಪ್ರಮಾಣಗಳನ್ನು ಗಣನೆಗೆ ತೆಗೆದುಕೊಂಡು ಈ ಸೂತ್ರವು ಸಾಂಕ್ರಾಮಿಕದ ಹರಡುವಿಕೆಯನ್ನು ಲೆಕ್ಕ ಹಾಕುತ್ತದೆ.

ಉತ್ತರ ಮತ್ತು ಮಧ್ಯ ಭಾರತದ ಹಲವು ರಾಜ್ಯಗಳು ಎರಡನೇ ಅಲೆಯ ಶಿಖರಾವಸ್ಥೆಯನ್ನು ದಾಟಿ ಹೋಗಿವೆ. ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕೂಡ ಗರಿಷ್ಠ ಹರಡುವಿಕೆಯ ಘಟ್ಟವು ಮುಗಿದಿದೆ. ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ಗುಜರಾತ್, ಹರಿಯಾಣ ಇದರಲ್ಲಿ ಸೇರಿವೆ. ದಕ್ಷಿಣದಲ್ಲಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಈ ತಿಂಗಳ ಕೊನೆಯ ಹೊತ್ತಿಗೆ ಗರಿಷ್ಠ ಪ್ರಕರಣಗಳು ಕಾಣಿಸಿಕೊಳ್ಳಬಹುದು.

ನಗರಗಳು ಅಲ್ಪ ನಿರಾಳ
ಕೋವಿಡ್‌ ಎರಡನೇ ಅಲೆಯು ದೇಶದ ಪ್ರಮುಖ ನಗರಗಳನ್ನು ಹೈರಾಣಾಗಿಸಿತ್ತು. ಅಂದಾಜಿಸಿದ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಸರಣ ಕಂಡದ್ದು ಹಾಗೂ ಆಮ್ಲಜನಕದ ಕೊರತೆ ತೀವ್ರಗೊಂಡದ್ದು ಸಾವಿರಾರು ಮಂದಿಯ ಸಾವಿಗೆ ಕಾರಣವಾಯಿತು. ಇದರಿಂದಾಗಿ ಕೆಲವು ರಾಜ್ಯ ಸರ್ಕಾರಗಳು ಒಲ್ಲದ ಮನಸ್ಸಿನಿಂದ ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಹಾಗೂ ಕಠಿಣ ನಿರ್ಬಂಧಗಳನ್ನು ಜಾರಿ ಮಾಡುವಾತಾಯಿತು. ಆದರೆ, ಈಗ ಬಹುತೇಕ ಎಲ್ಲಾ ನಗರಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬಂದಿದ್ದು, ಕೆಲವು ನಗರಗಳಲ್ಲಿ ಮೂರನೇ ಅಲೆ ಎದುರಿಸಲು ಸಿದ್ಧತೆಗಳನ್ನು ಆರಂಭಿಸಲಾಗಿದೆ.

*ದೇಶದ ರಾಜಧಾನಿ ದೆಹಲಿಯಲ್ಲಿ ಸೋಮವಾರ 1,550 ಪ್ರಕರಣಗಳು ದಾಖಲಾಗಿವೆ. ಮಾರ್ಚ್‌ 30ರ ನಂತರ ದಾಖಲಾದ ಕನಿಷ್ಠ ಪ್ರಮಾಣ ಇದಾಗಿದೆ. ಹಿಂದಿನ 24 ಗಂಟೆಗಳಲ್ಲಿ ದೆಹಲಿಯಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆಯು 207ಕ್ಕೆ ಇಳಿದಿದೆ. ಜೂನ್‌ 1ರಿಂದ ನಗರದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗುವ ಸೂಚನೆ ಇದೆ.
* ಕೋವಿಡ್‌ ಎರಡನೇ ಅಲೆಯ ನಿರ್ವಹಣೆಯಲ್ಲಿ ಮುಂಬೈ ನಗರವು ದೇಶಕ್ಕೇ ಮಾದರಿಯಾಗಿತ್ತು. ಅಲ್ಲಿಯೂ ಸೋಂಕು ಹಾಗೂ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಹಿಂದಿನ 24 ಗಂಟೆಗಳಲ್ಲಿ ಇಲ್ಲಿ ಹೊಸ ಸೋಂಕಿತರ ಪ್ರಮಾಣವು 1,049 ಇದ್ದರೆ ಸತ್ತವರ ಸಂಖ್ಯೆ 48 ಮಾತ್ರ.
* ಕೋಲ್ಕತ್ತದಲ್ಲಿ ಹೊಸ ಸೋಂಕಿತರ ಸಂಖ್ಯೆ ಇತರ ನಗರಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಹೊಸ ಸೋಂಕಿತರ ಸಂಖ್ಯೆಯು 3,121 ಹಾಗೂ ಸಾವಿನ ಸಂಖ್ಯೆ 35 ಇತ್ತು.
* ಚೆನ್ನೈಯಲ್ಲಿ ಹೊಸ ಸೋಂಕಿತರು ಹಾಗೂ ಸತ್ತವರ ಸಂಖ್ಯೆಯು ಕ್ರಮವಾಗಿ 5,047 ಮತ್ತು 81 ಇದೆ. ಹಿಂದಿನ ಕೆಲವು ದಿನಗಳಿಗೆ ಹೋಲಿಸಿದರೆ ಇಲ್ಲಿಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದು ಕಾಣಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT