ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಕೊರೊನಾದಿಂದ ಕಾಯೋ ದೇವ...

Last Updated 22 ಏಪ್ರಿಲ್ 2020, 2:33 IST
ಅಕ್ಷರ ಗಾತ್ರ

ದಿನ ಬೆಳಗಾದರೆ ಯಾವುದೋ ಒಂದು ವ್ರತ, ಹಬ್ಬ, ಹರಿದಿನದ ಸಂಭ್ರಮ; ಅದಿಲ್ಲದಿದ್ದರೂ ಹಲವರಿಗೆ ಗುಡಿಗೆ ಹೋಗುವ ಸಡಗರ; ಆಗಾಗ ಬೇಕೇ ಬೇಕು ಪೂಜೆ, ಹೋಮ, ಹವನ. ಎಲ್ಲದಕ್ಕೂ ಧಾರ್ಮಿಕ ವಿಧಿವಿಧಾನಗಳದ್ದೇ ಅವಲಂಬನ.

ಈ ಎಲ್ಲ ವಿಧಿವಿಧಾನಗಳಿಗೂ ನಾವು ಆಶ್ರಯಿಸುವುದು ಪುರೋಹಿತರನ್ನೇ ಅಲ್ಲವೆ?

’ಪುರೋಹಿತ’ ಎಂದರೆ ಪುರದ ಹಿತವನ್ನು ಕಾಪಾಡುವವನು ಎಂದರ್ಥ. ಪುರ ಎಂದರೆ ಊರು, ಪಟ್ಟಣ, ಸಮಾಜ; ದೇಶವೂ ಆದೀತು. ಈಗ ದೇಶ, ಅಷ್ಟೇಕೆ ಜಗತ್ತೇ ಅಹಿತದ ವಾತಾವರಣದಲ್ಲಿದೆ. ಕೊರೊನಾ ಭೀತಿಯಲ್ಲಿ ಅನೇಕ ದೇಶಗಳಂತೆ ನಮ್ಮ ದೇಶವೂ ಲಾಕ್‌ಡೌನ್‌ನಲ್ಲಿದೆ. ಈ ಸಮಯದಲ್ಲಿ ಪುರೋಹಿತರ ಜೀವನ ಹೇಗೆ ಸಾಗಿದೆ?

ಈ ಪ್ರಶ್ನೆಯನ್ನು ಹಲವು ಪುರೋಹಿತರಿಗೆ ಕೇಳಿದಾಗ ಒಬ್ಬೊಬ್ಬರಿಂದ ದೊರೆತ ಉತ್ತರ ಒಂದೊಂದು ರೀತಿಯದು; ಆದರೆ, ಎಲ್ಲರ ಉತ್ತರದಲ್ಲೂ ಒಂದು ಅಂಶವಂತೂ ಸಾಮಾನ್ಯವಾಗಿತ್ತು: ‘ಸಮಾಜದ ಚಟುವಟಿಕೆಗಳನ್ನೇ ನಮ್ಮ ಜೀವನದ ನಿರ್ವಹಣೆ ಅವಲಂಬಿಸಿದೆಯಷ್ಟೆ. ಈಗ ಸಮಾಜವೇ ಸ್ತಬ್ಧವಾಗಿರುವುದರಿಂದ ಸಹಜವಾಗಿಯೇ ನಮ್ಮ ಅನ್ನಕ್ಕೆ ಕುತ್ತು ಬರುವಂತಹ ಅಪಾಯ ಎದುರಾಗಿದೆ’ – ಇದು ಎಲ್ಲರ ಮಾತಿನಲ್ಲೂ ಅಡಗಿದ್ದ ಆತಂಕದ ಧ್ವನಿ.

ಧಾರ್ಮಿಕ ವಿಧಿವಿಧಾನಗಳಲ್ಲಿ ತೊಡಗಿರುವವರೆಲ್ಲರನ್ನೂ ‘ಪುರೋಹಿತರು’ ಎಂದು ಕರೆಯುವುದು ವಾಡಿಕೆ. ಆದರೆ ಪೌರೋಹಿತ್ಯ ವೃತ್ತಿಯನ್ನು ಮುಖ್ಯವಾಗಿ ಎರಡು ಗುಂಪುಗಳನ್ನಾಗಿಸಹುದು. ಒಂದು: ಪುರೋಹಿತರು; ಇನ್ನೊಂದು: ಅರ್ಚಕರು. ವ್ರತ, ಮದುವೆ, ಮುಂಜಿ, ಹವನ, ಅಂತ್ಯಸಂಸ್ಕಾರ ಮುಂತಾದ ವಿಧಿಗಳನ್ನು ಮಾಡಿಸುವವರು ಪುರೋಹಿತರು; ದೇವಾಲಯಗಳಲ್ಲಿ ಪೂಜೆ ಮಾಡುವವರು ಅರ್ಚಕರು. ಕೆಲವರು ಎರಡನ್ನೂ ಮಾಡುವುದುಂಟು.

’ಲಾಕ್‌ಡೌನ್‌ ಕಾರಣದಿಂದ ಮನೆಯಿಂದ ಕಾಲು ಹೊರಗಿಟ್ಟು ಒಂದು ತಿಂಗಳಾಯಿತು. ಒಂದೇ ಒಂದು ಕೆಲಸವೂ ಈ ಸಮಯದಲ್ಲಿ ಬಂದಿಲ್ಲ. ಮುಂದಿನ ಎರಡು ತಿಂಗಳು ನಿಶ್ಚಯವಾಗಿದ್ದ ಕಾರ್ಯಕ್ರಮಗಳೂ ರದ್ದಾಗಿವೆ. ಪೌರೋಹಿತ್ಯ ಬಿಟ್ಟು ನನಗೆ ಇನ್ನೊಂದು ವೃತ್ತಿ ತಿಳಿದಿಲ್ಲ. ಕೂತು ತಿಂದರೆ ಕುಡಿಕೆ ಹೊನ್ನಾದರೂ ಎಷ್ಟು ದಿನ ಬಂದೀತು’ ಹೀಗೆಂದು ಮಾತನ್ನು ಆರಂಭಿಸಿ ಯೋಚನೆಗೆ ಬಿದ್ದವರು, ಸುಮಾರು ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಪೌರೋಹಿತ್ಯ ನಡೆಸುತ್ತಿರುವ ಸುರೇಶ್‌ ಶರ್ಮಾ.

‘ಅಲ್ಪ ಸ್ವಲ್ಪ ಉಳಿತಾಯ ಮಾಡಿದ್ದ ಹಣದಲ್ಲಿ ಇಷ್ಟು ದಿನಗಳನ್ನು ಕಳೆದೆವು. ಮುಂದಿನ ದಿನಗಳ ಬಗ್ಗೆ ಆತಂಕ ಶುರುವಾಗಿದೆ. ನನ್ನ ಸಂಪಾದನೆಯ ಮೇಲೆ ಆರು ಮಂದಿಯ ಜೀವನವಿದೆ. ಬ್ಯಾಂಕ್‌ನಲ್ಲಿ ಸಾಲ ಮಾಡಿರುವೆ. ಇಎಂಐ ಕಟ್ಟುವುದು ಹೇಗೆ? ಬಡ್ಡಿ ತುಂಬುವುದು ಹೇಗೆ? ವೃದ್ಧ ತಂದೆತಾಯಿಗಳ ಔಷಧಕ್ಕಾಗಿ ತಿಂಗಳಿಗೆ ಮೂರು ಸಾವಿರ ರೂಪಾಯಿ ಬೇಕು...’ ಎಂದು ಅವರು, ತಮ್ಮ ಸಂಕಷ್ಟದ ಸರಮಾಲೆ ಬಿಡಿಸಿಟ್ಟರು.

’ಬದುಕನ್ನು ಅರಸಿ ಬೆಂಗಳೂರಿಗೆ ಬಂದವರು ನಾವು. ಈಗ ಅಪ್ಪ ಇಲ್ಲ; ಅಪ್ಪನ ವೃತ್ತಿಯನ್ನೇ ಮುಂದುವರೆಸಿರುವೆ. ದೇವಸ್ಥಾನಗಳಲ್ಲಿ ನಡೆಯುವ ಪೂಜೆಗಳಿಗೆ ಸಹಾಯಕನಾಗಿ ಹೋಗುತ್ತಿದ್ದೆ. ಈಗ ಮನೆಯಲ್ಲಿ ಅಕ್ಕಿಬೇಳೆ ಖಾಲಿ. ಮುಂದಿನ ತಿಂಗಳು ಮನೆಯ ಬಾಡಿಗೆ ಹೇಗೆ ಕಟ್ಟುವುದು? ಮನೆಯಲ್ಲಿ ದೇವರ ಪೂಜೆಗೆ ಹೂವು ತರಲು ಕೂಡ ಕಷ್ಟ. ಲಾಕ್‌ಡೌನ್‌ನ ದುರ್ಲಾಭ ಪಡೆದುಕೊಂಡು ಎಲ್ಲ ವಸ್ತುಗಳ ದರಗಳನ್ನೂ ಹೆಚ್ಚಿಸುತ್ತಿದ್ದಾರೆ‘ ಎಂದು ಅಳಲನ್ನು ತೋಡಿಕೊಂಡವರು ಪ್ರಭಾಕರ ಭಟ್ಟ (ಹೆಸರನ್ನು ಬದಲಾಯಿಸಲಾಗಿದೆ).

ಹೌದು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಯುವಕರು ಈಚಿನ ವರ್ಷಗಳಲ್ಲಿ ಬೆಂಗಳೂರಿಗೆ ಪೌರೋಹಿತ್ಯ ವೃತ್ತಿಗೆಂದು ಬಂದಿದ್ದಾರೆ. ಸಣ್ಣ ಸಣ್ಣ ದೇವಸ್ಥಾನಗಳಲ್ಲಿ ಅರ್ಚಕರಾಗಿ, ಮದುವೆ ಮುಂಜಿ ಹೋಮಗಳಂತಹ ಕಾರ್ಯಕ್ರಮಗಳಿಗೆ ಸಹಾಯಕರಾಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದವರು ಅವರು. ಈಗ ಸಂಪಾದನೆಯ ಆಸರೆ ತಪ್ಪಿದೆ; ಬೆಂಗಳೂರಿಗೆ ಬಂದು ತಪ್ಪು ಮಾಡಿದ್ದೇವೆ – ಎಂಬ ಆತ್ಮಾವಲೋಕನವೂ ಕೆಲವರಲ್ಲಿ ನಡೆದಿದೆ.

ಇನ್ನು ಶ್ರೀನಿವಾಸ ಶಾಸ್ತ್ರಿಯವರ (ಹೆಸರನ್ನು ಬದಲಾಯಿಸಲಾಗಿದೆ) ಕಥೆಯೇ ಬೇರೆ. ಅವರು ರಸ್ತೆ ಬದಿಯಲ್ಲಿರುವ ಗಣೇಶ ದೇವಾಲಯದ ಅರ್ಚಕ. ‘ಭಕ್ತರು ಆರತಿಗೆ ಸಲ್ಲಿಸುತ್ತಿದ್ದ ಕಾಣಿಕೆಯಿಂದಲೇ ನನ್ನ ಜೀವನ ನಡೆಯುತ್ತಿತ್ತು. ಈಗ ದೇವಸ್ಥಾನಕ್ಕೆ ಭಕ್ತರು ಬರುವಂತಿಲ್ಲ. ಕೊರೊನಾ ಭೀತಿ ಸದ್ಯಕ್ಕೆ ದೂರವಾಗುವಂತಿಲ್ಲ. ಮುಂದಿನ ದಿನಗಳು ಭಯ ಉಂಟುಮಾಡುತ್ತಿವೆ’ ಎನ್ನುತ್ತ ಅವರು ಆಕಾಶದತ್ತ ಮುಖ ಮಾಡಿದರು. ಅವರಂತೆಯೇ ಕಷ್ಟಕ್ಕೆ ತುತ್ತಾಗಿರುವ ನಾಲ್ಕು ಮಂದಿಯನ್ನು ಉಲ್ಲೇಖಿಸಿದರು.

ಭಕ್ತರು ಸಲ್ಲಿಸುವ ಕಾಣಿಕೆಯೇ ಆಧಾರ

ಅರ್ಚಕರನ್ನು ಎರಡು ಗುಂಪುಗಳಲ್ಲಿ ವಿಂಗಡಿಸಬಹುದು: ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಅರ್ಚಕರು ಮತ್ತು ಖಾಸಗಿ ಆಡಳಿತ ಮಂಡಳಿಗಳ ನಿರ್ವಹಣೆಯಲ್ಲಿರುವ ದೇವಸ್ಥಾನಗಳ ಅರ್ಚಕರು.

ಕರ್ನಾಟಕದಲ್ಲಿ 34,218 ದೇವಸ್ಥಾನಗಳು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿವೆ. ಸುಮಾರು ಅರವತ್ತು ಸಾವಿರ ಅರ್ಚಕರು ಅವುಗಳಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಈ ಅರ್ಚಕರಿಗೆ ಸಂಬಳ ಬರುತ್ತದೆ, ನಿಜ. ಆದರೆ, ಆ ಸಂಬಳದಿಂದ ಕೆಲವೇ ಕೆಲವು ಅರ್ಚಕರು ಜೀವನವನ್ನು ನಡೆಸಬಲ್ಲರು. ಏಕೆಂದರೆ ಈ ದೇವಸ್ಥಾನಗಳನ್ನು ಅವುಗಳ ಆದಾಯಗಳಿಗೆ ಅನುಗುಣವಾಗಿ ಎ, ಬಿ ಮತ್ತು ಸಿ ಎಂಬ ಶ್ರೇಣಿಗಳಲ್ಲಿ ವಿಂಗಡಿಸಲಾಗಿದೆ.

ಒಂದು ಲಕ್ಷ ರೂಪಾಯಿಗಿಂತಲೂ ಕಡಿಮೆ ಆದಾಯದ ದೇವಸ್ಥಾನಗಳನ್ನು ‘ಸಿ’ ಶ್ರೇಣಿ ಎಂದು ಪರಿಗಣಿಸಲಾಗಿದೆ. ಸುಮಾರು ಮುನ್ನೂರು ದೇವಸ್ಥಾನಗಳನ್ನು ಹೊರತುಪಡಿಸಿ ಉಳಿದವೆಲ್ಲವೂ ಮೂರನೇ ಶ್ರೇಣಿಯಲ್ಲಿಯೇ ಇರುವಂಥವು. ಸಾವಿರಾರು ದೇವಸ್ಥಾನಗಳಿಂದ ಇಲಾಖೆಗೆ ಯಾವುದೇ ವರಮಾನವೂ ಇಲ್ಲ. ಸಿ ಶ್ರೇಣಿ ದೇವಸ್ಥಾನದ ಯಾವ ಅರ್ಚಕನೂ ತನಗೆ ಬರುವ ಸಂಬಳದಿಂದ ಜೀವನವನ್ನು ಮಾಡಲು ಸಾಧ್ಯವಿಲ್ಲ ಎನ್ನುವುದು ಅರ್ಚಕರೇ ಹೇಳುವ ಮಾತು.

‘ಆರತಿಗೆ ಭಕ್ತರು ಸಲ್ಲಿಸುವ ಕಾಣಿಕೆಯೇ ಅವರಿಗೆ ಆಧಾರ. ಇದೂ ಕೂಡ ಸುಮಾರು 200–250 ದೇವಸ್ಥಾನಗಳನ್ನು ಹೊರತುಪಡಿಸಿದರೆ ಉಳಿದ ಅರ್ಚಕರು ಪೌರೋಹಿತ್ಯಕ್ಕೆ ತೊಡಗಿಕೊಳ್ಳದ ಹೊರತು ಜೀವನಕ್ಕೆ ದಾರಿ ಒದಗದು. ಆದರೆ, ಆಹಾರದ ಕಿಟ್‌ ವಿತರಿಸಲು ಮುಜರಾಯಿ ಇಲಾಖೆ ಆದೇಶಿಸಿದೆಯಂತೆ. ಸಿಕ್ಕರೆ ಅನುಕೂಲ’ ಎಂದು ಅರ್ಚಕರೊಬ್ಬರು ಹೇಳಿದರು.

‘ಇನ್ನು ‘ಖಾಸಗಿ’ ದೇವಸ್ಥಾನಗಳ ಕಥೆ ಇನ್ನೊಂದು ರೀತಿ. ಕೆಲವೊಂದು ದೇವಸ್ಥಾನಗಳಲ್ಲಿ ಕಾಣಿಕೆ ಅರ್ಚಕರಿಗೆ ಸೇರುತ್ತದೆ; ಮತ್ತೆ ಕೆಲವೊಂದರಲ್ಲಿ ಆಡಳಿತ ಮಂಡಳಿಗಳಿಗೆ ಸೇರುತ್ತದೆ. ಹೀಗಾಗಿ ಅಲ್ಲಿಯೂ ಹಲವರು ಕೇವಲ ಅರ್ಚಕ ವೃತ್ತಿಯಿಂದಲೇ ಬದುಕುತ್ತೇವೆ ಎನ್ನುವಂಥ ವಾತಾವರಣದಲ್ಲಿ ಇಲ್ಲ; ಅವರೂ ಪೌರೋಹಿತ್ಯದ ದಾರಿಯಲ್ಲಿ ನಡೆಯಬೇಕಾಗುತ್ತದೆ’ ಎಂದೂ ವಿವರಿಸಿದರು.

ಪೂಜೆಯಲ್ಲಿ ನಿರತರು

ಹಲವು ಸಂಘ ಸಂಸ್ಥೆಗಳು ಕಷ್ಟದಲ್ಲಿರುವ ಪುರೋಹಿತ/ಅರ್ಚಕರಿಗೆ ಸಹಾಯ ಒದಗಿಸಲು ಮುಂದಾಗಿವೆ. ಕೆಲವರು ತಮ್ಮ ವೃತ್ತಿಬಾಂಧವರ ಸಹಾಯಕ್ಕೆ ಸ್ಪಂದಿಸುತ್ತಿದ್ದಾರೆ.

‘ದೇವರನ್ನು ನಂಬಿದವರು ನಾವು; ನಮ್ಮ ಸುಖ–ದುಃಖಗಳು ಅವನ ವಶ’ ಎಂಬ ನಂಬಿಕೆಯಲ್ಲಿ ಸಾವಿರಾರು ಪುರೋಹಿತರು ತಮ್ಮ ಪೂಜೆ–ಅನುಷ್ಠಾನಗಳನ್ನು ಪಾಲಿಸುತ್ತಿದ್ದಾರೆ. ಕೊರೊನಾ ಸಂಕಟದಿಂದ ಜಗತ್ತು ಬಿಡುಗಡೆಯನ್ನು ಪಡೆಯಬೇಕೆಂಬ ಲೋಕಕಲ್ಯಾಣದ ಅಪೇಕ್ಷೆಯಿಂದ ಹಲವರು ಪುರೋಹಿತರು ವೇದಪಾರಾಯಣ, ದೇವತಾ ಪೂಜೆಗಳಲ್ಲಿ ನಿರತರಾಗಿದ್ದಾರೆ’ ಎಂದು ಅರ್ಚಕರೊಬ್ಬರು ಮಾಹಿತಿ ನೀಡಿದರು.

ಹೂವು–ಹಣ್ಣು ಮಾರುವವರಿಗೂ ಸಂಕಷ್ಟ

ದೇವಸ್ಥಾನಗಳು, ಧಾರ್ಮಿಕ ಚಟುವಟಿಕೆಗಳು ಕೇವಲ ಪುರೋಹಿತರ ಅಥವಾ ಅರ್ಚಕರ ಜೀವನೋಪಾಯಕ್ಕಷ್ಟೆ ಒದಗುತ್ತಿರುವ ವೃತ್ತಿಗಳಲ್ಲ; ಅವು ಆ ಸಮುದಾಯವನ್ನೂ ಮೀರಿ ಲಕ್ಷಾಂತರ ಜನರ ಜೀವನಕ್ಕೂ ದಾರಿಗಳು ಎನ್ನುವುದನ್ನು ಮರೆಯುವಂತಿಲ್ಲ. ಉದಾಹರಣೆಗೆ, ದೇವಾಲಯಗಳ ಮುಂದೆ ಹೂವು–ಹಣ್ಣನ್ನು ಮಾರಿಯೇ ನೂರಾರು ಕುಟುಂಬಗಳು ಅನ್ನವನ್ನು ಸಂಪಾದಿಸಿಕೊಳ್ಳುತ್ತಿವೆ. ತೀರ್ಥಕ್ಷೇತ್ರಗಳು ನೂರಾರು ರೀತಿಯಲ್ಲಿ ಎಷ್ಟೋ ಸಾವಿರ ಕುಟುಂಬಗಳನ್ನು ಪೋಷಿಸುತ್ತಿವೆ. ದೇಶದ ಅರ್ಥವ್ಯವಸ್ಥೆಯ ಸೂತ್ರದಲ್ಲಿ ಧಾರ್ಮಿಕ ಚಟುವಟಿಕಗಳೂ ಒಂದು ಗಟ್ಟಿಯಾದ ಕೊಂಡಿಯಾಗಿದ್ದು, ಉಳಿದ ಆರ್ಥಿಕ ಚಟುವಟಿಕೆಗಳಂತೆ ಈ ವಲಯವೂ ಈಗ ಸಂಕಷ್ಟ ಅನುಭವಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT