ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಸ್ವರೂಪ ಬದಲಿಸಿಕೊಂಡ ಕೊರೊನಾ ವೈರಾಣು

Last Updated 21 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""

ಕೋವಿಡ್‌ಗೆ ಕಾರಣವಾಗುವ ಕೊರೊನಾ ವೈರಸ್‌ನ ನೂತನ ಸ್ವರೂಪವು (ವೈರಸ್‌ ಸ್ಟ್ರೇನ್‌) ಬ್ರಿಟನ್‌ನ ಹಲವೆಡೆ ಪತ್ತೆಯಾಗಿದೆ. ಯಾವುದೇ ವೈರಸ್‌ ಒಂದೇ ಸ್ವರೂಪದಲ್ಲಿ ಉಳಿಯುವುದಿಲ್ಲ. ಹರಡುತ್ತಾ ಹೋದಂತೆ, ವೈರಸ್‌ನ ಭೌತಿಕ ರಚನೆ ಮತ್ತು ಕಾರ್ಯವಿಧಾನದಲ್ಲಿ ಬದಲಾವಣೆ ಯಾಗುತ್ತದೆ. ಕೋವಿಡ್‌ಗೆ ಕಾರಣವಾಗುವ ಕೊರೊನಾ ವೈರಸ್‌ ಸಹ ಇದಕ್ಕೆ ಹೊರತಲ್ಲ.

ಏನಿದು ಹೊಸ ಸ್ವರೂಪ?
ಕೋವಿಡ್‌ಗೆ ಕಾರಣವಾಗುವ ಕೊರೊನಾ ವೈರಸ್‌ನ ನೂತನ ಸ್ವರೂಪವು (ವೈರಸ್‌ ಸ್ಟ್ರೇನ್‌) ಬ್ರಿಟನ್‌ನ ಹಲವೆಡೆ ಪತ್ತೆಯಾಗಿದೆ. ಯಾವುದೇ ವೈರಸ್‌ ಒಂದೇ ಸ್ವರೂಪದಲ್ಲಿ ಉಳಿಯುವುದಿಲ್ಲ. ಹರಡುತ್ತಾ ಹೋದಂತೆ, ವೈರಸ್‌ನ ಭೌತಿಕ ರಚನೆ ಮತ್ತು ಕಾರ್ಯವಿಧಾನದಲ್ಲಿ ಬದಲಾವಣೆ ಯಾಗುತ್ತದೆ. ಕೋವಿಡ್‌ಗೆ ಕಾರಣವಾಗುವ ಕೊರೊನಾ ವೈರಸ್‌ ಸಹ ಇದಕ್ಕೆ ಹೊರತಲ್ಲ.

ಬ್ರಿಟನ್‌ನಲ್ಲಿ ಈಗ ಪತ್ತೆಯಾಗಿರುವ ಸ್ವರೂಪಕ್ಕೆ ಬಿ.1.1.7 ಎಂದು ಹೆಸರಿಡಲಾಗಿದೆ. ಕೊರೊನಾ ವೈರಸ್‌ನ ಹಲವು ಸ್ವರೂಪಗಳು ಈಗಾಗಲೇ ಪತ್ತೆ ಯಾಗಿವೆ. ಅವುಗಳ ರಚನೆ ಮತ್ತು ಕಾರ್ಯವಿಧಾನದಲ್ಲಿ ಗಣನೀಯ ಪ್ರಮಾಣದ ವ್ಯತ್ಯಾಸವಿರಲಿಲ್ಲ. ಆದರೆ ಬಿ.1.1.7 ಸ್ವರೂಪವು ಕೊರೊನಾ ವೈರಸ್‌ನಿಂದಲೇ ವಿಕಾಸವಾಗಿದ್ದರೂ, ಅದರ ರಚನೆ ಮತ್ತು ಕಾರ್ಯವಿಧಾನದಲ್ಲಿ ವ್ಯಾಪಕ ಬದಲಾವಣೆಗಳನ್ನು ಗುರುತಿಸಲಾಗಿದೆ.

* ಮೂಲ ಕೊರೊನಾ ವೈರಸ್‌ಗಿಂತಲೂ ಬಿ.1.1.7 ಮೂಲಕ ಕೋವಿಡ್‌ ಹರಡುವ ಸಾಧ್ಯತೆ ಶೇ 70ರಷ್ಟು ಹೆಚ್ಚು
* ಬಿ.1.1.7 ಕೊರೊನಾವೈರಸ್‌ ಹೊರಕವಚದ ಮೇಲಿದ್ದ ಮುಳ್ಳು ಚಾಚಿಕೆಗಳ (ಸ್ಪೈಕ್‌ ಪ್ರೊಟೀನ್‌) ಸಂಖ್ಯೆಯು, ಮೂಲ ಕೊರೊನಾ ವೈರಸ್‌ನ ಹೊರ ಕವಚದ ಮೇಲೆ ಇರುವ ಚಾಚಿಕೆಗಳಿಗಿಂತ ಹೆಚ್ಚು. ಹೀಗಾಗಿಯೇ ಮನುಷ್ಯನ ಜೀವಕೋಶಗಳ ಒಳಗೆ ಇವು ಸುಲಭವಾಗಿ ಪ್ರವೇಶಿಸಬಲ್ಲವು ಎಂಬುದನ್ನು ಗುರುತಿಸಲಾಗಿದೆ.
* ಮೂಲ ಕೊರೊನಾ ವೈರಸ್‌ ಮತ್ತು ಅದರಿಂದಲೇ ವಿಕಾಸ ವಾಗಿರುವ ಬಿ.1.1.7 ಕೊರೊನಾ ವೈರಸ್‌ನ ನಡುವೆ 23 ವ್ಯತ್ಯಾಸಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ಎಲ್ಲೆಲ್ಲಿ ಹರಡಿದೆ?
ಬ್ರಿಟನ್‌ನ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಬಿ.1.1.7 ಕೊರೊನಾವೈರಸ್‌ ಪತ್ತೆಯಾಗಿದೆ. ಬ್ರಿಟನ್‌ನ ನಗರ ಪ್ರದೇಶಗಳಲ್ಲೂ ಇದು ಕಾಣಿಸಿಕೊಂಡಿದೆ. ಇದು ಕ್ಷಿಪ್ರವಾಗಿ ಹರಡುವ ಶಕ್ತಿ ಹೊಂದಿರುವುದರಿಂದ, ಬ್ರಿಟನ್‌ನಲ್ಲಿ ಎಷ್ಟು ಜನರಿಗೆ ಹರಡಿರಬಹುದು ಎಂಬುದನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ. ಈ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಿಟನ್‌ ಸರ್ಕಾರವು ದೇಶದ ಹಲವೆಡೆ ಲಾಕ್‌ಡೌನ್‌ ಅನ್ನು ಹೇರಿದೆ. ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ಹೊರತುಪಡಿಸಿ ಬೇರೆಲ್ಲಾ ಕಾರ್ಯಚಟುವಟಿಕೆ ಮತ್ತು ವಹಿವಾಟುಗಳಿಗೆ ಈ ಲಾಕ್‌ಡೌನ್ ಅನ್ವಯವಾಗುತ್ತದೆ. 'ಈ ಸೋಂಕು ತಗಲುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮಾತ್ರವೇ ಲಾಕ್‌ಡೌನ್ ಹೇರಲಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 31ರಷ್ಟು ಜನರು ಈ ಪ್ರದೇಶಗಳಲ್ಲಿ ಇದ್ದಾರೆ' ಎಂದು ಬ್ರಿಟನ್ ಸರ್ಕಾರ ಹೇಳಿದೆ.

ಡೆನ್ಮಾರ್ಕ್‌ನಲ್ಲಿ ಈಗಾಗಲೇ 12 ಜನರಲ್ಲಿ ಬಿ.1.1.7 ಕೊರೊನಾವೈರಸ್‌ ಪತ್ತೆಯಾಗಿದೆ. ಆಸ್ಟ್ರಿಯಾ ಮತ್ತು ಸ್ಪೇನ್‌ನಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ. ಬ್ರಿಟನ್‌ನಿಂದ ದೂರವಿರುವ ಆಸ್ಟ್ರೇಲಿಯಾದಲ್ಲೂ ಒಂದು ಪ್ರಕರಣ ಪತ್ತೆಯಾಗಿದೆ.

ಈಗ ನಡೆಸುತ್ತಿರುವ ಆರ್‌ಟಿ-ಪಿಸಿಆರ್‌ ಪರೀಕ್ಷೆಯಯು ಕೊರೊನಾವೈರಸ್‌ನ ಹಲವು ಸ್ವರೂಪಗಳನ್ನು ಪತ್ತೆಮಾಡುವ ಸಾಮರ್ಥ್ಯ ಹೊಂದಿದೆ. ಬಿ.1.1.7 ಕೊರೊನಾವೈರಸ್‌ನ ರಚನೆಯ ವಿವರಗಳನ್ನು ಬ್ರಿಟನ್, ವಿಶ್ವ ಆರೋಗ್ಯ ಸಂಸ್ಥೆಯ ಜತೆ ಹಂಚಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ವಿವರಗಳನ್ನು ಎಲ್ಲಾ ರಾಷ್ಟ್ರಗಳ ಜತೆ ಹಂಚಿಕೊಂಡಿದೆ. ಇನ್ನು ಮುಂದೆ ನಡೆಸಲಾಗುವ ಆರ್‌ಟಿ-ಪಿಸಿಆರ್ ಪರೀಕ್ಷೆಗಳಲ್ಲಿ ಬಿ.1.1.7 ಕೊರೊನಾವೈರಸ್‌ ಇದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ. ಹೀಗಾಗಿ ಈ ಸೋಂಕು ತಗುಲಿರುವವರ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಅಪಾಯವಿದೆ.

ಬಿ.1.1.7 ಅಪಾಯಕಾರಿಯೇ?
ಬಿ.1.1.7 ಎಷ್ಟು ಅಪಾಯಕಾರಿ ಎಂಬುದನ್ನು ಈಗಲೇ ಹೇಳಲಾಗದು. ಇದನ್ನು ಪತ್ತೆ ಮಾಡಲು ಹಲವು ಅಧ್ಯಯನಗಳನ್ನು ನಡೆಸಲಾಗುತ್ತದೆ. ಆ ಅಧ್ಯಯನಗಳ ವರದಿ ಬಂದ ನಂತರ ಇದು ಎಷ್ಟು ಅಪಾಯಕಾರಿ ಎಂಬುದು ಗೊತ್ತಾಗುತ್ತದೆ. ಹಾಗೆಂದು ಬಿ.1.1.7 ಕೊರೊನಾವೈರಸ್‌ ಅನ್ನು ಕಡೆಗಣಿಸುವ ಹಾಗಿಲ್ಲ ಎಂದು ಬ್ರಿಟನ್‌ನ ಆರೋಗ್ಯ ಸಚಿವಾಲಯವು ಹೇಳಿದೆ. ವಿಶ್ವದ ಅನೇಕ ವಿಜ್ಞಾನಿಗಳೂ ಇದೇ ಮಾತು ಹೇಳಿದ್ದಾರೆ.

ಮೂಲ ಕೊರೊನಾವೈರಸ್‌ಗಿಂತಲೂ ರೋಗ ಹರಡುವ ಸಾಧ್ಯತೆ ಈ ವೈರಸ್‌ನಲ್ಲಿ ಹೆಚ್ಚು ಎಂಬುದಷ್ಟೇ ಪತ್ತೆಯಾಗಿದೆ. ಮೂಲ ಕೊರೊನಾವೈರಸ್‌ನ ಜತೆಯಲ್ಲಿಯೇ ಇದು ಹರಡುತ್ತದೆ. ಮನುಷ್ಯನ ದೇಹವನ್ನು ಪ್ರವೇಶಿಸುವ ವಿಧಾನದಲ್ಲಿ ವ್ಯತ್ಯಾಸವಿದೆ ಎಂಬುದಷ್ಟೇ ಪತ್ತೆಯಾಗಿದೆ. ಆದರೆ ಮೂಲ ಕೊರೊನಾವೈರಸ್‌ ಉಂಟುಮಾಡುತ್ತಿದ್ದ ಆರೋಗ್ಯದ ಸಮಸ್ಯೆಯನ್ನಷ್ಟೇ ಬಿ.1.1.7 ಕೊರೊನಾವೈರಸ್‌ ಉಂಟು ಮಾಡುತ್ತದೆಯೇ ಅಥವಾ ಬೇರೆ ಸ್ವರೂಪದ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡುತ್ತದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಇದು ತಿಳಿದ ನಂತರವಷ್ಟೇ ಬಿ.1.1.7 ಕೊರೊನಾವೈರಸ್‌ ಎಷ್ಟು ಅಪಾಯಕಾರಿ ಎಂಬುದನ್ನು ನಿರ್ಧರಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೋವಿಡ್‌ ಲಸಿಕೆಯಿಂದ ನಿಯಂತ್ರಣ ಸಾಧ್ಯವೇ?
ಕೊರೊನಾವೈರಸ್‌ ಉಂಟುಮಾಡುವ ಕೋವಿಡ್‌ಗೆ ಈಗಾಗಲೇ ಹಲವು ರಾಷ್ಟ್ರಗಳು ಲಸಿಕೆಯನ್ನು ಅಭಿವೃದ್ಧಿಪಡಿಸಿವೆ. ಈಗಾಗಲೇ ಹಲವು ರಾಷ್ಟ್ರಗಳಲ್ಲಿ ತುರ್ತು ಸಂದರ್ಭದಲ್ಲಿ ಈ ಲಸಿಕೆಗಳನ್ನು ಬಳಸಲಾಗುತ್ತಿದೆ. ಆದರೆ, ಅವೇ ಲಸಿಕೆಗಳಿಂದ ಬಿ.1.1.7 ಕೊರೊನಾವೈರಸ್‌ ಹರಡುವುದನ್ನು ತಡೆಯಲು ಸಾಧ್ಯವೇ ಎಂಬುದು ಇನ್ನೂ ಪತ್ತೆಯಾಗಿಲ್ಲ. ಬಿ.1.1.7 ಕೊರೊನಾವೈರಸ್‌ನ ಬಗ್ಗೆ ಸಂಪೂರ್ಣ ಮಾಹಿತಿ ಪತ್ತೆಮಾಡಿದ ನಂತರವಷ್ಟೇ ಈಗಾಗಲೇ ಅಭಿವೃದ್ಧಿಪಡಿಸಿರುವ ಲಸಿಕೆಗಳನ್ನು, ಇದರ ವಿರುದ್ಧವೂ ಬಳಸಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ.ಈಗ ಇರುವ ಲಸಿಕೆಗಳಿಂದ ಬಿ.1.1.7 ಕೊರೊನಾವೈರಸ್‌ ನಿಯಂತ್ರಣ ಸಾಧ್ಯವಿಲ್ಲ ಎನ್ನುವುದಾದರೆ, ಮತ್ತೆ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮೂಲ ಕೊರೊನಾವೈರಸ್‌ ಮತ್ತು ಬಿ.1.1.7 ಕೊರೊನಾವೈರಸ್‌ ಒಟ್ಟಿಗೇ ಇರುವ ಶಕ್ತಿ ಹೊಂದಿವೆ. ಹೀಗಾಗಿ ಕೋವಿಡ್‌ಗಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಅಗತ್ಯವಿರುವವರಿಗೆ ನೀಡುವ ಕಾರ್ಯಕ್ರಮವು ಮುಂದುವರಿಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎಚ್ಚರಿಕೆಗಳೇನು?
ಕೋವಿಡ್‌ ಹರಡದಂತೆ ಕೈಗೊಳ್ಳುತ್ತಿರುವ ಕ್ರಮಗಳನ್ನೇ ಬಿ.1.1.7 ಹರಡುವುದನ್ನು ತಡೆಯಲು ಅನುಸರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಯೂರೋಪ್‌ನ ಹಲವು ರಾಷ್ಟ್ರಗಳು ಈಗಾಗಲೇ ಕೆಲವೆಡೆ ಲಾಕ್‌ಡೌನ್ ಜಾರಿ ಮಾಡಿವೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮತ್ತಷ್ಟು ಕಠಿಣ ಲಾಕ್‌ಡೌನ್ ಜಾರಿ ಮಾಡುವುದಾಗಿ ಹೇಳಿವೆ.

ಯೂರೋಪ್‌ನ ಹಲವು ರಾಷ್ಟ್ರಗಳು ಬ್ರಿಟನ್‌ನಿಂದ ಬರುವ ವಿಮಾನಗಳನ್ನು ರದ್ದುಪಡಿಸಿವೆ. ಬ್ರಿಟನ್‌ಗೆ ಹೋಗುವ ವಿಮಾನಗಳನ್ನೂ ರದ್ದುಪಡಿಸಿವೆ. ಡೆನ್ಮಾರ್ಕ್, ಸ್ಪೇನ್‌, ಆಸ್ಟ್ರಿಯಾ, ಜರ್ಮನಿ, ಫ್ರಾನ್ಸ್‌, ಐರ್ಲೆಂಡ್‌ ಬ್ರಿಟನ್‌ಗೆ ವಿಮಾನ ಸಂಚಾರವನ್ನು ರದ್ದುಮಾಡಿವೆ. ಯೂರೋಪ್‌ನ ರಾಷ್ಟ್ರಗಳಿಂದ ಬ್ರಿಟನ್‌ಗೆ ಹಡಗು ಸೇವೆಯನ್ನೂ ರದ್ದುಮಾಡಲಾಗಿದೆ.

'ಬಿ.1.1.7 ಕ್ಷಿಪ್ರವಾಗಿ ಹರಡುವ ಶಕ್ತಿ ಹೊಂದಿರುವ ಕಾರಣ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ' ಎಂದು ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿದೆ.

ಕೊರೊನಾ ಭೀತಿಗೆ ಕುಸಿದ ಷೇರು ಮಾರುಕಟ್ಟೆ
ಹೊಸ ಸ್ವರೂಪದ ಕೊರೊನಾ ವೈರಾಣು ಭಾರತದ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಭೀತಿಯ ವಾತಾವರಣ ಸೃಷ್ಟಿಸಿತು. ವರ್ತಕರು, ಹೂಡಿಕೆದಾರರು ಷೇರುಗಳ ಭಾರಿ ಪ್ರಮಾಣದ ಮಾರಾಟದಲ್ಲಿ ತೊಡಗಿದ ಪರಿಣಾಮವಾಗಿ ಬಿಎಸ್‌ಇ ಸೆನ್ಸೆಕ್ಸ್‌ ಒಟ್ಟು 1,407 ಅಂಶಗಳ ಕುಸಿತ ದಾಖಲಿಸಿತು.

45,553 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿದ ಸೆನ್ಸೆಕ್ಸ್, ಒಂದೇ ದಿನದಲ್ಲಿ ಶೇಕಡ 3ರಷ್ಟು ಕುಸಿತ ಕಂಡಂತಾಯಿತು. ನಿಫ್ಟಿ ಸೂಚ್ಯಂಕವು 432 ಅಂಶಗಳಷ್ಟು ಕುಸಿತ ದಾಖಲಿಸಿತು, 13,328 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಮುಂಬೈ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಬಹುತೇಕ ಎಲ್ಲ ಕಂಪನಿಗಳ ಷೇರುಗಳ ಮೌಲ್ಯ ಕುಸಿಯಿತು. ಒಎನ್‌ಜಿಸಿ ಷೇರುಗಳ ಮೌಲ್ಯದಲ್ಲಿ ಶೇಕಡ 9ರಷ್ಟು ಇಳಿಕೆಯಾಯಿತು. ಇಂಡಸ್‌ಇಂಡ್‌ ಬ್ಯಾಂಕ್‌, ಮಹೀಂದ್ರ ಆ್ಯಂಡ್ ಮಹೀಂದ್ರ, ಎಸ್‌ಬಿಐ, ಐಟಿಸಿ, ಎಕ್ಸಿಸ್ ಬ್ಯಾಂಕ್ ಮತ್ತು ಪವರ್‌ ಗ್ರಿಡ್ ಕಂಪನಿ ಷೇರುಗಳ ಮೌಲ್ಯದಲ್ಲಿ ಗರಿಷ್ಠ ಶೇಕಡ 7ರಷ್ಟು ಇಳಿಕೆ ಆಯಿತು.

‘ಹೊಸ ಸ್ವರೂಪದ ಕೊರೊನಾ ವೈರಾಣು ಬ್ರಿಟನ್ನಿನಲ್ಲಿ ಪತ್ತೆಯಾಗಿರುವುದು ಹಾಗೂ ಕೋವಿಡ್–19ಕ್ಕೆ ಅಭಿವೃದ್ಧಿಪಡಿಸಲಾಗಿರುವ ಲಸಿಕೆ ಎಷ್ಟು ಪರಿಣಾಮಕಾರಿ ಎಂಬ ಅನುಮಾನ ಮೂಡಿರುವುದು ಹೂಡಿಕೆದಾರರ ವಿಶ್ವಾಸವನ್ನು ವಿಶ್ವದಾದ್ಯಂತ ಕುಂದಿಸಿದೆ. ಸೆನ್ಸೆಕ್ಸ್‌ ಏರುಗತಿಯಲ್ಲಿ ಇದ್ದುದರಿಂದ ಸೋಮವಾರ ಲಾಭ ಗಳಿಕೆಯ ವಹಿವಾಟು ಕೂಡ ನಡೆಯಿತು. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಗಳಲ್ಲಿ ಭಾರಿ ಕುಸಿತ ಕಂಡುಬಂತು’ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಬಿನೋದ್ ಮೋದಿ ಹೇಳಿದರು.

ಹೂಡಿಕೆದಾರರಿಗೆ ₹ 6.59 ಲಕ್ಷ ಕೋಟಿ ನಷ್ಟ
ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರ ಒಟ್ಟು ₹ 6.59 ಲಕ್ಷ ಕೋಟಿ ಮೌಲ್ಯದ ಸಂಪತ್ತು ಕರಗಿದೆ. ‘ಹೊಸ ಸ್ವರೂಪದ ಕೊರೊನಾ ವೈರಾಣು ಪತ್ತೆಯಾಗಿದ್ದರಿಂದಾಗಿ ಸೋಮವಾರ ಷೇರುಪೇಟೆಯಲ್ಲಿ ಒಂದರ್ಥದಲ್ಲಿ ರಕ್ತಪಾತವೇ ನಡೆದುಹೋಯಿತು. ವಿವಿಧ ದೇಶಗಳ ನಡುವೆ ಪ್ರಯಾಣ ನಿರ್ಬಂಧ ಜಾರಿಯಾಗಿರುವುದರಿಂದಾಗಿ ಯುರೋಪಿನ ಷೇರು ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು. ಇದರ ಪರಿಣಾಮ ಭಾರತದ ಷೇರು ಮಾರುಕಟ್ಟೆಗಳ ಮೇಲೆಯೂ ಆಯಿತು’ ಎಂದು ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾದಿಯಾ ಹೇಳಿದ್ದಾರೆ.

‘ಬ್ರೆಕ್ಸಿಟ್‌ ವಿಚಾರವಾಗಿ ಇರುವ ಕೆಲವು ಅನಿಶ್ಚಿತತೆಗಳು ಕೂಡ ಹೂಡಿಕೆದಾರರ ವಿಶ್ವಾಸ ಕುಂದಲು ಕಾರಣವಾಗಿವೆ’ ಎಂದು ಅವರು ಹೇಳಿದ್ದಾರೆ. ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಗರಿಷ್ಠ ಶೇಕಡ 4.57ರಷ್ಟು ಕುಸಿತ ಕಂಡವು.

ಕಚ್ಚಾ ತೈಲ ಬೆಲೆ ಕುಸಿತ
ಬ್ರಿಟನ್ನಿನಲ್ಲಿ ಕೊರೊನಾ ವೈರಾಣುವಿನ ಹೊಸ ಬಗೆಯು ಪತ್ತೆಯಾಗಿರುವ ಕಾರಣ, ತೈಲ ಬೇಡಿಕೆಯಲ್ಲಿ ತ್ವರಿತ ಚೇತರಿಕೆ ಇರುವುದಿಲ್ಲ ಎಂಬ ಆತಂಕದಿಂದಾಗಿ ಸೋಮವಾರ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡ 3ರಷ್ಟಕ್ಕಿಂತ ಹೆಚ್ಚಿನ ಕುಸಿತ ಕಂಡುಬಂತು. ಹೊಸ ಬಗೆಯ ಕೊರೊನಾ ವೈರಾಣು ಪತ್ತೆಯಾದ ನಂತರ ಬ್ರಿಟಿನ್ನಿನ ಬಹುತೇಕ ಕಡೆ ವಹಿವಾಟುಗಳು ಸ್ಥಗಿತಗೊಂಡಿವೆ. ಯುರೋಪ್‌ ಖಂಡದಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 1.74 ಅಮೆರಿಕನ್‌ ಡಾಲರ್‌ನಷ್ಟು ಇಳಿಕೆ ಆಯಿತು. ಶುಕ್ರವಾರದ ವಹಿವಾಟಿನಲ್ಲಿ ಶೇಕಡ 1.5ರಷ್ಟು ಬೆಲೆ ಏರಿಕೆ ಕಂಡಿದ್ದ ಬ್ರೆಂಟ್ ಕಚ್ಚಾ ತೈಲವು, ಸೋಮವಾರ ಶೇಕಡ 3.3ರಷ್ಟು ಕುಸಿತ ದಾಖಲಿಸಿತು. ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌ ಕಚ್ಚಾ ತೈಲದ ಬೆಲೆಯಲ್ಲಿ 1.66 ಡಾಲರ್‌ ಇಳಿಕೆ ಆಯಿತು.

ಕೋವಿಡ್‌–19 ಸಾಂಕ್ರಾಮಿಕಕ್ಕೆ ಲಸಿಕೆ ಲಭ್ಯವಾಗುತ್ತಿರುವುದು ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಹೊಸ ಭರವಸೆ ಮೂಡಿಸಿತ್ತು. ಕಚ್ಚಾ ತೈಲದ ದರವು ಏಳು ವಾರಗಳಿಂದ ಏರುಗತಿಯಲ್ಲಿ ಇತ್ತು. ‘ಆದರೆ, ಕೊರೊನಾ ವೈರಾಣುವಿನ ಹೊಸ ಬಗೆಯೊಂದು ಕಾಣಿಸಿಕೊಂಡ ಸಂಗತಿಯು ಹೂಡಿಕೆದಾರರ ಆಸೆಗಳನ್ನು ಹುಸಿಗೊಳಿಸಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 50 ಡಾಲರ್‌ಗಿಂತ ಕಡಿಮೆ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ. ಹಾಗೆಯೇ ಡಬ್ಲ್ಯುಟಿಐ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 45 ಡಾಲರ್‌ಗಿಂತ ಕಡಿಮೆ ಆಗಬಹುದು’ ಎಂದು ಅವರು ಅಂದಾಜಿಸಿದ್ದಾರೆ.

ಆಧಾರ: ಎಎಫ್‌ಪಿ, ಎಪಿ, ರಾಯಿಟರ್ಸ್, ವಿಶ್ವ ಆರೋಗ್ಯ ಸಂಸ್ಥೆ, ಬ್ರಿಟನ್‌ನ ಆರೋಗ್ಯ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT