ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಹೇಗಿದೆ ಓಮೈಕ್ರಾನ್‌ ಸ್ಥಿತಿ, ಇತ್ತೀಚಿನ ಅಧ್ಯಯನಗಳು ಹೇಳುವುದೇನು?

Last Updated 21 ಡಿಸೆಂಬರ್ 2021, 5:31 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಈಗ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ 26ಕ್ಕೆ ಮೊದಲು ಪತ್ತೆಯಾದ ಈ ರೂಪಾಂತರ ಈಗ ವಿಶ್ವದ 90 ರಾಷ್ಟ್ರಗಳಿಗೆ ವ್ಯಾಪಿಸಿದೆ. ಈಗಾಗಲೇ ಜಾಗತಿಕವಾಗಿ ಜನರನ್ನು ಹಿಂಡಿ ಹಿಪ್ಪೆ ಮಾಡಿರುವ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರಗಳಷ್ಟು ಗಂಭೀರ ಅಲ್ಲ ಎಂದು ಹೇಳಲಾಗಿದೆಯಾದರೂ ಓಮೈಕ್ರಾನ್ ಅನ್ನು ನಿರ್ಲಕ್ಷಿಸುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ. ಡೆಲ್ಟಾಗಿಂತಲೂ ಹಲವು ಪಟ್ಟು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಹೊಸ ತಳಿಯ ಬಗ್ಗೆ ಈಗಷ್ಟೇ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ.

ಕಾಳ್ಗಿಚ್ಚಿನಂತೆ ವ್ಯಾಪಿಸಿದ ಓಮೈಕ್ರಾನ್

ಕೊರೊನಾ ವೈರಸ್‌ನ ಹೊಸ ರೂಪಾಂತರ ಪತ್ತೆಯಾಗಿದೆ ಎಂದು ನವೆಂಬರ್ ಅಂತ್ಯದ ವೇಳೆಗೆ ದಕ್ಷಿಣ ಆಫ್ರಿಕಾ ವಿಜ್ಞಾನಿಗಳು ಜಗತ್ತಿಗೆ ಮಾಹಿತಿ ನೀಡಿದ್ದರು. ಇದಾದ ಬೆನ್ನಲ್ಲೇ ಹಲವು ರಾಷ್ಟ್ರಗಳು ದಕ್ಷಿಣ ಆಫ್ರಿಕಾ ಪ್ರಯಾಣಕ್ಕೆ ನಿರ್ಬಂಧ ಹೇರಿದವು. ಆದರೆ ಅದಾಗಲೇ ಓಮೈಕ್ರಾನ್ ರೂಪಾಂತರವು ಬ್ರಿಟನ್, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಗೆ ವ್ಯಾಪಿಸಿತ್ತು. ಭಾರತವೂ ಹೊಸ ರೂಪಾಂತರ ಹರಡದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಪ್ರಯೋಜನವಾಗಲಿಲ್ಲ. ಒಟ್ಟಾರೆಯಾಗಿ ಓಮೈಕ್ರಾನ್ ಜಗತ್ತಿನ 90 ರಾಷ್ಟ್ರಗಳಿಗೆ ಈಗಾಗಲೇ ವ್ಯಾಪಿಸಿದೆ.

ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ಸಾವಿರಾರು ಮಂದಿ ಪ್ರತಿ ದಿನ ಹೊಸ ರೂಪಾಂತರ ತಳಿಯ ಸೋಂಕಿಗೆ ಒಳಗಾಗುತ್ತಿದ್ದಾರೆ. ಅಮೆರಿಕದಲ್ಲಿ ಕಳೆದ ವಾರ ವರದಿಯಾದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇ 73ರಷ್ಟು ಪಾಲು ಓಮೈಕ್ರಾನ್‌ನದ್ದಾಗಿದೆ.

ಬ್ರಿಟನ್ ಸರ್ಕಾರ ಮತ್ತೆ ಲಾಕ್‌ಡೌನ್‌ ಹೇರುವ ಬಗ್ಗೆ ಚಿಂತನೆ ನಡೆಸಿದೆ. ಅಲ್ಲಿ ಓಮೈಕ್ರಾನ್‌ ಸೋಂಕಿನ 12,133 ಪ್ರಕರಣಗಳು ಸೋಮವಾರ ದೃಢಪಟ್ಟಿದ್ದವು. ಇದು ಆ ದೇಶದಲ್ಲಿ ಒಂದು ದಿನ ಪತ್ತೆಯಾದ ಓಮೈಕ್ರಾನ್‌ ಗರಿಷ್ಠ ಪ್ರಕರಣಗಳಾಗಿವೆ.

ಇಸ್ರೇಲ್‌ನಲ್ಲಿ ಓಮೈಕ್ರಾನ್‌ ರೂಪಾಂತರವು ಕೋವಿಡ್‌ ಐದನೇ ಅಲೆಗೆ ಕಾರಣವಾಗುತ್ತಿದೆ ಎಂದು ಅಲ್ಲಿನ ಪ್ರಧಾನಿ ನಫ್ತಾಲಿ ಬೆನೆಟ್‌ ಹೇಳಿದ್ದಾರೆ. ಸೋಂಕು ಹರಡುವಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದೂ ಅವರು ಹೇಳಿದ್ದಾರೆ.

ಭಾರತದಲ್ಲಿಯೂ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ ಮಂಗಳವಾರ ಬೆಳಿಗ್ಗೆ ವೇಳೆಗೆ (ಡಿಸೆಂಬರ್ 21) 200 ತಲುಪಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇದೇ ವೇಳೆಗೆ ದಕ್ಷಿಣ ಆಫ್ರಿಕಾ, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಓಮೈಕ್ರಾನ್‌ನಿಂದ ಸಾವು ಸಂಭವಿಸಿದ ಬಗ್ಗೆಯೂ ವರದಿಯಾಗಿವೆ.

ಓಮೈಕ್ರಾನ್‌ನಿಂದ ಅಪಾಯ ಕಡಿಮೆಯೇ?

ಈ ಹಿಂದಿನ ರೂಪಾಂತರ ತಳಿಗಳಾದ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ಗೆ ಹೋಲಿಸಿದರೆ ಓಮೈಕ್ರಾನ್‌ನಿಂದ ಅಷ್ಟೇನೂ ಅಪಾಯವಿಲ್ಲ. ಆದರೆ ಹರಡುವ ಸಾಮರ್ಥ್ಯ ಹೆಚ್ಚಿದೆ ಎಂದು ದಕ್ಷಿಣ ಆಫ್ರಿಕಾ ವಿಜ್ಞಾನಿಗಳು ಮೊದಲಿಗೆ ತಿಳಿಸಿದ್ದರು. ಆದರೆ, ಓಮೈಕ್ರಾನ್‌ ರೂಪಾಂತರ ತಳಿಯಿಂದ ತಗುಲಿದ ಸೋಂಕಿನ ತೀವ್ರತೆಯು ಕಡಿಮೆ ಇರುತ್ತದೆ ಎಂಬುದನ್ನು ಸಾಬೀತು ಮಾಡಲು ಯಾವುದೇ ಪುರಾವೆಗಳು ಇಲ್ಲ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್ ನಡೆಸಿದ ಅಧ್ಯಯನ ವರದಿ ಹೇಳಿದೆ.

ಡೆಲ್ಟಾ ತಳಿಯಿಂದ ಉಂಟಾಗುವ ಮರುಸೋಂಕಿನ ಪ್ರಮಾಣಕ್ಕಿಂತ, ಓಮೈಕ್ರಾನ್‌ ತಳಿಯ ಮರುಸೋಂಕು ಪ್ರಮಾಣ 5.4 ಪಟ್ಟು ಹೆಚ್ಚು. ಓಮೈಕ್ರಾನ್‌ ಸೋಂಕಿನ ತೀವ್ರತೆ ಎಷ್ಟಿರಲಿದೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಬ್ರಿಟನ್‌ನ ಅಧ್ಯಯನ ವರದಿ ತಿಳಿಸಿದೆ.

ಈಗಾಗಲೇ ಕೋವಿಡ್ ತಗುಲಿದವರಿಗೆ, ಲಸಿಕೆ ಪಡೆದವರಿಗೆ ಸಿಗಲಿದೆಯಾ ರಕ್ಷಣೆ?

ಕೋವಿಡ್–19 ವಿರುದ್ಧ ಲಸಿಕೆ ಪಡೆದವರಿಗೂ ಓಮೈಕ್ರಾನ್‌ ತಗುಲಿರುವ ಹಲವು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಲಸಿಕೆಯಿಂದ ಸಂಪೂರ್ಣ ರಕ್ಷಣೆ ದೊರೆಯಬಹುದು ಎಂದು ಹೇಳಲಾಗದು. ಆದರೆ, ಸೋಂಕಿನ ತೀವ್ರತೆ ಹಾಗೂ ಆಸ್ಪತ್ರೆಗೆ ದಾಖಲಾಗುವುದನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.

ಓಮೈಕ್ರಾನ್ ರೂಪಾಂತರಕ್ಕೆ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಇದೆ ಎಂಬುದು ತಿಳಿದುಬಂದಿದೆ. ಆದರೆ, ಈ ಕುರಿತು ಹೆಚ್ಚಿನ ಅಧ್ಯಯನ ಇನ್ನಷ್ಟೇ ನಡೆಯಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಪಡೆದವರು ಮತ್ತು ಈಗಾಗಲೇ ಸೋಂಕಿತರಾಗಿ ಚೇತರಿಸಿಕೊಂಡವರಿಗೂ ಓಮೈಕ್ರಾನ್‌ ಸೋಂಕು ತಗಲುವ ಸಾಧ್ಯತೆ ಇದೆ. ಆದರೆ ಇಂಥ ವ್ಯಕ್ತಿಗಳು ಕೋವಿಡ್ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವುದರಿಂದ ಅಪಾಯದ ಸಾಧ್ಯತೆ ತುಸು ಕಡಿಮೆಯಾಗಬಹುದು ಎಂದು ಚೀನಾದ ರಾಷ್ಟ್ರೀಯ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆಯ ಸಂಶೊಧಕ ಯೂಚುನ್ ವಾಂಗ್ ಹೇಳಿದ್ದಾರೆ.

ಮತ್ತೊಂದೆಡೆ, ಈ ಹಿಂದೆ ಸೋಂಕಿಗೆ ಒಳಗಾಗಿದ್ದವರಿಗೆ ಮತ್ತು ಲಸಿಕೆಯ ಎರಡೂ ಡೋಸ್‌ ಪಡೆದುಕೊಂಡಿದ್ದವರಿಗೆ ಓಮೈಕ್ರಾನ್‌ನಿಂದ ರಕ್ಷಣೆ ಸಿಗುವ ಸಾಧ್ಯತೆ ಶೇ 19ರಷ್ಟು ಮಾತ್ರ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್ ಅಧ್ಯಯನ ವರದಿ ತಿಳಿಸಿದೆ.

ಲಸಿಕೆಯ ಬೂಸ್ಟರ್ ಡೋಸ್ ಪ್ರಯೋಜನಕಾರಿಯೇ?

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಓಮೈಕ್ರಾನ್ ಪರೀಕ್ಷೆಗಾಗಿ ವ್ಯಕ್ತಿಯೊಬ್ಬರಿಂದ ಮಾದರಿ ಸಂಗ್ರಹಿಸಲಾಯಿತು – ರಾಯಿಟರ್ಸ್ ಚಿತ್ರ
ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಓಮೈಕ್ರಾನ್ ಪರೀಕ್ಷೆಗಾಗಿ ವ್ಯಕ್ತಿಯೊಬ್ಬರಿಂದ ಮಾದರಿ ಸಂಗ್ರಹಿಸಲಾಯಿತು – ರಾಯಿಟರ್ಸ್ ಚಿತ್ರ

ಓಮೈಕ್ರಾನ್ ಹರಡುವಿಕೆ ತೀವ್ರಗೊಂಡ ಬೆನ್ನಲ್ಲೇ ಬ್ರಿಟನ್‌ ಸೇರಿದಂತೆ ಕೆಲವು ದೇಶಗಳು ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಪ್ರಯತ್ನ ಹೆಚ್ಚಿಸಿವೆ. ಆದರೆ ಓಮೈಕ್ರಾನ್ ವಿರುದ್ಧ ಬೂಸ್ಟರ್ ಡೋಸ್‌ ನೀಡಿಕೆ ಪರಿಣಾಮಕಾರಿಯೇ ಎಂಬ ಬಗ್ಗೆ ಈಗಷ್ಟೇ ಅಧ್ಯಯನಗಳು ನಡೆಯುತ್ತಿವೆ.

ಲಸಿಕೆಯ ಬೂಸ್ಟರ್ ಪಡೆದವರಲ್ಲಿಯೂ ಓಮೈಕ್ರಾನ್ ದೃಢಪಟ್ಟ ಕೆಲವು ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ಡಿಸೆಂಬರ್ 10ರಂದು ಸಿಂಗಪುರ ವಿಮಾನ ನಿಲ್ದಾಣದಲ್ಲಿ ಇಂಥ ಎರಡು ಪ್ರಕರಣಗಳು ವರದಿಯಾಗಿದ್ದವು.

ಸ್ಪುಟ್ನಿಕ್–ವಿ ಲಸಿಕೆ ಪರಿಣಾಮಕಾರಿಯೇ?

ಓಮೈಕ್ರಾನ್ ವಿರುದ್ಧ ‘ಸ್ಪುಟ್ನಿಕ್–ವಿ’ ಲಸಿಕೆ ಪರಿಣಾಮಕಾರಿ. ‘ಸ್ಪುಟ್ನಿಕ್–ವಿ’ ಲಸಿಕೆಯು ಓಮೈಕ್ರಾನ್ ತಟಸ್ಥಗೊಳಿಸಬಲ್ಲ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ‘ಸ್ಪುಟ್ನಿಕ್ ಲೈಟ್’ ಬೂಸ್ಟರ್ ಡೋಸ್ ನೀಡುವ ಮೂಲಕ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಎಂದು ರಷ್ಯಾದ ನೇರ ಹೂಡಿಕೆ ನಿಧಿ ಇತ್ತೀಚೆಗೆ ಹೇಳಿತ್ತು. ಆದರೆ ಈ ಕುರಿತು ಜಾಗತಿಕ ಸಮುದಾಯವಾಗಲೀ ಡಬ್ಲ್ಯುಎಚ್‌ಒ ಆಗಲೀ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ಭಾರತದ ತಜ್ಞರು ಏನೆನ್ನುತಾರೆ?

ಈಗಾಗಲೇ ಕೋವಿಡ್ ವಿರುದ್ಧ ನೀಡಲಾಗುತ್ತಿರುವ ಲಸಿಕೆಗಳಲ್ಲಿ ಮಾರ್ಪಾಡು ಮಾಡಿ ಹೊಸ ರೂಪಾಂತರ ತಳಿಗಳ ವಿರುದ್ಧ ಕೆಲಸ ಮಾಡುವಂತೆ ಮಾಡಬಹುದು ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ಹೇಳಿದ್ದಾರೆ.

ಓಮೈಕ್ರಾನ್‌ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಕಡೆಗಣಿಸಿದರೆ, ಅದು ಮತ್ತಷ್ಟು ವೇಗವಾಗಿ ಹರಡುವ ಅಪಾಯವಿದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT