ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಅಗಲ| ಕೋವಿಡ್‌ ಕಾಲದಲ್ಲಿ ಆರೋಗ್ಯ ವಿಮೆ

Last Updated 1 ಆಗಸ್ಟ್ 2020, 6:05 IST
ಅಕ್ಷರ ಗಾತ್ರ

ಒಬ್ಬರು ಗಂಭಿರ ಕಾಯಿಲೆಗೆ ತುತ್ತಾದರೆ ಸಾಕು, ಇಡೀ ಕುಟುಂಬದ ಆರ್ಥಿಕ ಸ್ಥಿತಿ ಏರುಪೇರಾಗಿಬಿಡುತ್ತದೆ. ಅದೆಷ್ಟೋ ವರ್ಷಗಳ ಕಾಲ ದುಡಿದು ಸಂಪಾದಿಸಿ, ಸಂಗ್ರಹಿಸಿಟ್ಟದ್ದೆಲ್ಲ ಬರಿದಾಗಿ, ಇಡೀ ಕುಟುಂಬವು ಹಣಕಾಸಿನ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕುವುದು ಅಪರೂಪ ಏನಲ್ಲ. ಭಾರತದ ಮಧ್ಯಮ, ಕೆಳಮಧ್ಯಮ ಮತ್ತು ಬಡ ಕುಟುಂಬಗಳ ಸ್ಥಿತಿ ಇದು.

ಆರೋಗ್ಯ ವಿಮೆ ಮಾಡಿಸಿ ಇಂತಹ ಸ್ಥಿತಿಗೆ ಒಳಗಾಗದಂತೆ ನೋಡಿಕೊಳ್ಳುವ ಅವಕಾಶ ಇದೆ. ಆದರೆ, ಈ ಬಗ್ಗೆ ಜನರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಿಲ್ಲ. ಆದ್ದರಿಂದ ಜನರು ಈಗಲೂ ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ‘ಕೋವಿಡ್‌ನಿಂದ ಜಗತ್ತೇ ಅಪಾಯಕ್ಕೆ ಒಳಗಾಗಿರುವ ಇಂದಿನ ಸಂದರ್ಭದಲ್ಲಿ, ಆರೋಗ್ಯ ವಿಮೆಯ ಅಗತ್ಯದ ಬಗ್ಗೆ ಕೆಲವರಾದರೂ ಮಾತನಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ’ ಎಂದು ವಿಮಾ ಕಂಪನಿಗಳವರು ಸ್ವಲ್ಪ ಸಮಾಧಾನಪಡುತ್ತಿದ್ದಾರೆ.

ನಮ್ಮ ದೇಶದ ಕೌಟುಂಬಿಕ ವ್ಯವಸ್ಥೆ, ಆರ್ಥಿಕ ಸ್ಥಿತಿಗತಿ, ಆರೋಗ್ಯ ಕ್ಷೇತ್ರದ ಸೌಲಭ್ಯ ಹಾಗೂ ತಗಲುವ ವೆಚ್ಚಗಳನ್ನು ಗಮನಿಸಿದರೆ, ಇಲ್ಲಿ ಆರೋಗ್ಯ ವಿಮೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಯಾರೂ ಅಸಡ್ಡೆ ತೋರಲೇಬಾರದಿತ್ತು. ಆದರೆ, ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಆರೋಗ್ಯ ವಿಮೆ ಹೊಂದಿದವರ ಪ್ರಮಾಣ ನಮ್ಮಲ್ಲಿ ಶೇ 28ರಿಂದ 30ರ ಆಸುಪಾಸಿನಲ್ಲೇ ಇದೆ. ವಿಮೆ ಹೊಂದಿದವರಲ್ಲೂ ಹೆಚ್ಚಿನವರು ತಮ್ಮ ಉದ್ಯೋಗದಾತ ಕಂಪನಿ ನೀಡಿರುವ ಗುಂಪು ಆರೋಗ್ಯ ವಿಮೆಯನ್ನು ಅವಲಂಬಿಸಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಆರೋಗ್ಯ ವಿಮೆಯ ವಿಚಾರದಲ್ಲಿ ಭಾರತದಲ್ಲಿ ಜಾಗೃತಿ ಆಂದೋಲನವನ್ನು ಇನ್ನಷ್ಟು ಜೋರಾಗಿ ನಡೆಸಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ. ಆರೋಗ್ಯ ವಿಮೆಯನ್ನು ಕಡ್ಡಾಯಗೊಳಿಸಬೇಕು ಎಂಬ ಒತ್ತಾಯವೂ ಕೆಲವು ವರ್ಗಗಳಿಂದ ಬಂದಿದೆ.

ಪ್ರತಿಯೊಬ್ಬರೂ ಯಾಕೆ ಆರೋಗ್ಯ ವಿಮೆ ಹೊಂದಬೇಕು ಎಂಬುದಕ್ಕೆ ವಿಮಾ ಕಂಪನಿಗಳವರು ಪ್ರಮುಖವಾಗಿ ಐದು ಕಾರಣಗಳನ್ನು ಕೊಡುತ್ತಾರೆ.

1.ನಮ್ಮ ಜೀವನಶೈಲಿ ಬದಲಾಗಿದೆ ಎಂಬುದು ಮೊದಲ ಮತ್ತು ಪ್ರಮುಖ ಕಾರಣವಾಗಿದೆ. ಈಚಿನ ದಿನಗಳಲ್ಲಿ ನಾವು ಹೆಚ್ಚು ಒತ್ತಡ ಅನುಭವಿಸುತ್ತಿದ್ದೇವೆ. ಅಗತ್ಯಗಳ ಈಡೇರಿಕೆಗಾಗಿ ಬಿಡುವಿಲ್ಲದೆ ದುಡಿಯುತ್ತಿದ್ದೇವೆ. ನಮ್ಮ ಆಹಾರ ಶೈಲಿ ಬದಲಾಗಿದೆ. ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಇವೆಲ್ಲವೂ ನಮ್ಮನ್ನು ಗಂಭೀರ ಕಾಯಿಲೆಗಳ ಸನಿಹಕ್ಕೆ ಕರೆದೊಯ್ಯುತ್ತಿವೆ. ರಕ್ತದೊತ್ತಡ, ಮಧುಮೇಹ, ಹೃದಯಾಘಾತ ಮುಂತಾದ ಕಾಯಿಲೆಗಳು ಸಾಮಾನ್ಯ ಎಂಬಂತಾಗಿವೆ. ಒಂದು ಗಂಭೀರ ಕಾಯಿಲೆ ಅಂಟಿಕೊಂಡರೂ ಸಾಕು, ಊಟ ನಿದ್ದೆ ಬಿಟ್ಟು ಸಂಪಾದಿಸಿದ್ದರಲ್ಲಿ ದೊಡ್ಡ ಪಾಲನ್ನು (ಕೆಲವೊಮ್ಮೆ ಎಲ್ಲವನ್ನೂ) ಆಸ್ಪತ್ರೆಗೆ ಕೊಡುವ ಸಂದರ್ಭ ಬರುತ್ತದೆ.

2. ಚಿಕಿತ್ಸಾ ವೆಚ್ಚಗಳು ಈಚಿನ ದಿನಗಳಲ್ಲಿ ವಿಪರೀತ ದುಬಾರಿಯಾಗುತ್ತಿವೆ. ಬೇರೆ ದೇಶಗಳವರಿಗೆ ಭಾರತದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆಗಳು ಲಭಿಸಬಹುದು. ಆದರೆ ಆ ಕಡಿಮೆ ವೆಚ್ಚ ಕೂಡ ಭಾರತೀಯರಿಗೆ ದುಬಾರಿಯೇ ಆಗಿದೆ.

3. ಗಂಭೀರ ಕಾಯಿಲೆ ಬಂದಾಗ ಚಿಕಿತ್ಸಾ ವೆಚ್ಚವೇ ಅನೇಕಬಾರಿ ಮನೆಯವರನ್ನು ಕಂಗಾಲಾಗಿಸುತ್ತದೆ. ವಿಮೆಯ ಬಲ ಇದ್ದರೆ ಚಿಕಿತ್ಸಾ ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಬೀಳುವುದಿಲ್ಲ. ಕಾರು, ಮನೆ ಮುಂತಾದವುಗಳಿಗೆ ವಿಮೆ ಮಾಡಿಸುವ ನಾವು ಬಹುತೇಕ ಸಂದರ್ಭದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತೇವೆ ಎಂಬುದು ವಾಸ್ತವ.

4. ಭವಿಷ್ಯಕ್ಕಾಗಿ ಇರಲಿ ಎಂದು ಅಲ್ಲಿ–ಇಲ್ಲಿ ಒಂದಷ್ಟು ಹೂಡಿಕೆಯನ್ನು ಹಲವರು ಮಾಡಿರುತ್ತಾರೆ. ಒಂದೆರಡು ವಿಮೆಗಳನ್ನೂ ಮಾಡಿಸಿರುತ್ತಾರೆ. ಆದರೆ, ಆರೋಗ್ಯ ವಿಮೆಯನ್ನು ಮರೆತಿರುತ್ತಾರೆ. ಆರ್ಥಿಕವಾಗಿ ಸುಭದ್ರವಾದ ಜೀವನ ನಡೆಸಬೇಕಾದರೆ ಆರೋಗ್ಯ ವಿಮೆ ಮಾಡಿಸುವುದು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮಾಡಿಟ್ಟ ಉಳಿತಾಯವೆಲ್ಲಾ ಆಸ್ಪತ್ರೆ ಬಿಲ್‌
ಕಟ್ಟುವುದರಲ್ಲೇ ಕರಗಿಹೋಗಬಹುದು.

5. ಕಾಯಿಲೆ ಯಾವ ಸಂದರ್ಭದಲ್ಲಿ ಬೇಕಾದರೂ ದಾಳಿ ಮಾಡಬಹುದು. ಆರೋಗ್ಯ ವಿಮೆ ಇದ್ದರೆ, ಕೈಯಲ್ಲಿ ಕಾಸೇ ಇಲ್ಲದಿದ್ದರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಕ್ಯಾಶ್‌ಲೆಸ್‌ ಸೌಲಭ್ಯದಿಂದ ಸಕಾಲದಲ್ಲಿ ಚಿಕಿತ್ಸೆ ಪಡೆಯಬಹುದು.

ಏನೇನು ಲಾಭಗಳಿವೆ?
* ಬಹುತೇಕ ಎಲ್ಲಾ ಕಾಯಿಲೆಗಳಿಗೂ ಈಗ ವಿಮೆ ಲಭ್ಯ ಇದೆ.
*ಕೈಯಲ್ಲಿ ಹಣವಿಲ್ಲದಿದ್ದರೂ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
*ಮನೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್‌ಗೆ ತಗಲುವ ವೆಚ್ಚವನ್ನೂ ಕೆಲವು ವಿಮೆಗಳು ಭರಿಸುತ್ತವೆ.
*ಆಸ್ಪತ್ರೆಯಿಂದ ಮನೆಗೆ ಮರಳಿದ ನಂತರ ಕೆಲವು ದಿನಗಳ ಕಾಲ ತಗಲುವ ವೆಚ್ಚಕ್ಕೂ ವಿಮೆ ಅನ್ವಯವಾಗುತ್ತದೆ.
*ಹಣಕಾಸಿನ ಇತರ ಕೆಲವು ತೊಡಕುಗಳಿಂದ ಆರೋಗ್ಯ ವಿಮೆ ಪಾರು ಮಾಡಬಲ್ಲದು.
*ಗಂಭೀರ ಕಾಯಿಲೆಗೆ ತುತ್ತಾದರೆ ರೋಗಿ ಅಥವಾ ಅವರ ಕುಟುಂಬದವರು ಒಂದೇ ಕಂತಿನಲ್ಲಿ ದೊಡ್ಡ ಮೊತ್ತವನ್ನು ಪಡೆಯಬಹುದು (ಪಾಲಿಸಿ ಖರೀದಿಸುವಾಗ ಈ ಸೌಲಭ್ಯ ಆಯ್ಕೆ ಮಾಡಿಕೊಂಡಿರಬೇಕು)
*ಕೆಲವು ವಿಮೆಗಳು ಜಗತ್ತಿನ ಯಾವ ದೇಶದಲ್ಲಿದ್ದರೂ ಚಿಕಿತ್ಸಾ ವೆಚ್ಚವನ್ನು ಭರಿಸುತ್ತವೆ.
*ಈಗಾಗಲೇ ಇರುವ ಆರೋಗ್ಯ ವಿಮೆಯನ್ನು ವಿಸ್ತರಿಸಲು, ರೈಡರ್‌ಗಳನ್ನು ಸೇರಿಸಲು ಅವಕಾಶ ಇರುತ್ತದೆ‌.
* ಸೌಲಭ್ಯಗಳು, ಆಯ್ಕೆಗಳು ಈಗ ವಿಪುಲವಾಗಿವೆ. ನಮ್ಮ ಅಗತ್ಯ ಹಾಗೂ ಸಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳಬೇಕು.

ಅನಕ್ಷರತೆ ಮತ್ತು ಜಾಗೃತಿ
ಈಚಿನ ದಿನಗಳಲ್ಲಿ ಭಾರತದಲ್ಲಿ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ಆರೋಗ್ಯ ವಿಮಾ ಕ್ಷೇತ್ರವೂ ಒಂದಾಗಿದ್ದರೂ, ಅನಕ್ಷರತೆ ಹಾಗೂ ಮಾಹಿತಿಯ ಕೊರತೆ ಭಾರತದಲ್ಲಿ ಈ ಕ್ಷೇತ್ರಕ್ಕೆ ತೊಡಕಾಗಿದೆ. ದೇಶದ ಜಿಡಿಪಿಯಲ್ಲಿ ವಿಮೆಯ ಕೊಡುಗೆ ಹಾಗೂ ಸಂಗ್ರಹವಾದ ಪ್ರೀಮಿಯಂ ಮೊತ್ತ ಮತ್ತು ಜನಸಂಖ್ಯೆಯ ಅನುಪಾತವನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ನಮ್ಮಲ್ಲಿ ದೇಶದ ಜಿಡಿಪಿಗೆ ವಿಮಾ ಕ್ಷೇತ್ರದ ಕೊಡುಗೆ ಕೇವಲ ಶೇ 3.69ರಷ್ಟಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ಅಮೆರಿಕ, ಬ್ರಿಟನ್‌ ಮುಂತಾದ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಪ್ರೀಮಿಯಂ ಹಾಗೂ ಜನಸಂಖ್ಯೆ ಅನುಪಾತದಲ್ಲೂ ಭಾರಿ ವ್ಯತ್ಯಾಸವಿದೆ ಎಂಬುದನ್ನು ಎಲ್ಲಾ ವರದಿಗಳು ಸ್ಪಷ್ಟಪಡಿಸುತ್ತವೆ. ಆ ಕಾರಣಕ್ಕಾಗಿಯೇ ಜಾಗೃತಿ ಕಾರ್ಯಕ್ರಮಗಳ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಉದ್ಯಮ ವಲಯ ಅಭಿಪ್ರಾಯಪಡುತ್ತದೆ.

ವಿಮೆ ಖರೀದಿಗೆ ಆಸಕ್ತಿ ಏರಿಕೆ
ಕೋವಿಡ್‌–19ನ ನಂತರ ದೇಶದಲ್ಲಿ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಹೂಡಿಕೆ ಬಗ್ಗೆ ಒಲವು ಏರಿಕೆಯಾಗಿದೆ ಎಂದು ಮ್ಯಾಕ್ಸ್‌ ಲೈಫ್‌ ಇನ್ಶುರೆನ್ಸ್‌ ಲಿಮಿಟೆಡ್ ನಡೆಸಿದ ಸಮೀಕ್ಷೆ ಹೇಳಿದೆ. ಕೋವಿಡ್‌ಪೂರ್ವದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ವಿಮೆ ಮಾಡಿಸುವ ಬಗ್ಗೆ ಒಲವು ತೋರಿದ್ದ ಜನರಿಗಿಂತಲೂ ಶೇ 10ರಷ್ಟು ಹೆಚ್ಚು ಜನರು ವಿಮೆ ಮಾಡಿಸಿಕೊಳ್ಳಲು ಕೋವಿಡ್ ಅವಧಿಯಲ್ಲಿ ಒಲವು ತೋರಿದ್ದಾರೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

100ರಲ್ಲಿ 37- ಫೆಬ್ರುವರಿ 2020ರಲ್ಲಿ ಜೀವ ವಿಮೆ/ಆರೋಗ್ಯ ವಿಮೆ ಮಾಡಿಸುವ ಬಗ್ಗೆ ಆಸಕ್ತಿ ತೋರಿಸಿದ್ದವರು
100ರಲ್ಲಿ 47-2020ರ ಜುಲೈನಲ್ಲಿ ಜೀವ ವಿಮೆ/ಆರೋಗ್ಯ ವಿಮೆ ಮಾಡಿಸುವ ಬಗ್ಗೆ ಆಸಕ್ತಿ ತೋರಿಸಿದವರ ಸಂಖ್ಯೆ

ವಿಮೆ/ಹೂಡಿಕೆಗೆ ಕಾರಣಗಳು
ಕಾರಣ;ಫೆಬ್ರುವರಿ 2020;ಜುಲೈ 2020
ಉದ್ಯಮ/ಉದ್ಯೋಗ ಭದ್ರತೆ ಇಲ್ಲ ಎಂದವರು;56 ಮಂದಿ;66 ಮಂದಿ
ದುಡಿಯುವವರು ಸತ್ತರೆ ಕುಟುಂಬಕ್ಕೆ ಆರ್ಥಿಕ ಭದ್ರತೆ;56 ಮಂದಿ;66 ಮಂದಿ
ದಿನಪ್ರತಿ ವೈದ್ಯಕೀಯ/ಔಷಧ ವೆಚ್ಚ ಏರಿಕೆಯಾಗುತ್ತಿದೆ;58 ಮಂದಿ;65 ಮಂದಿ
ಗಂಭೀರ ಆರೋಗ್ಯದ ಸಮಸ್ಯೆ ಎದುರಾದರೆ ಹಣದ ಅವಶ್ಯಕತೆ;57 ಮಂದಿ;64 ಮಂದಿ

ಕೋವಿಡ್‌ ಎದುರಿಸಲು ಆರ್ಥಿಕ ಸಿದ್ಧತೆ
25 % ಕೋವಿಡ್‌ ಕವರ್ ಪಾಲಿಸಿ ಅಥವಾ ಜೀವ ವಿಮೆ ಪಾಲಿಸಿ ಖರೀದಿಸಿವರು
39 % ಹೂಡಿಕೆಗಳು ಮತ್ತು ಇತರೆ ಉಳಿತಾಯಗಳು
34 % ಏನನ್ನೂ ಮಾಡದವರು

ಆರೋಗ್ಯ ವಿಮೆ ಪಾಲಿಸಿ ಖರೀದಿಯಲ್ಲಿ ಇಳಿಕೆ
ಕೋವಿಡ್‌ ಕಾಲದಲ್ಲಿ ಆರೋಗ್ಯ ವಿಮೆ ನವೀಕರಣ ಮಾಡುವವರು ಮತ್ತು ಹೊಸದಾಗಿ ಪಾಲಿಸಿ ಖರೀದಿಸುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ಅವಧಿಯಲ್ಲಿ ಇಡೀ ಆರೋಗ್ಯ ವಿಮೆ ಉದ್ಯಮವು ನಕರಾತ್ಮಕ ಪ್ರಗತಿ ಸಾಧಿಸಿದೆ ಹಲವು ವಿಮಾ ಕಂಪನಿಗಳು ಹೇಳಿವೆ.

ಕೋವಿಡ್ ಕವರ್ ಪಾಲಿಸಿ ಜಾರಿಗೆ ಐಆರ್‌ಡಿಐ ಮಾರ್ಗಸೂಚಿ ಹೊರಡಿಸಿದ ನಂತರ ಆರೋಗ್ಯ ವಿಮೆ ಪಾಲಿಸಿ ಖರೀದಿಯಲ್ಲಿ ಪ್ರಗತಿ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರಗತಿ ಕಾಣಿಸಲಿಲ್ಲ ಎಂದು ಹಲವು ಕಂಪನಿಗಳು ಹೇಳಿವೆ.

ಕೋವಿಡ್‌ ಲಾಕ್‌ಡೌನ್‌ನ ಕಾರಣ ದೇಶದಲ್ಲಿ ಆರ್ಥಿಕ ಚಟುವಟಿಕೆಗಳೂ ಸ್ಥಗಿತಗೊಂಡಿದ್ದವು. ಜನರ ಬಳಿ ಹಣ ಉಳಿದಿಲ್ಲ. ಹೀಗಾಗಿ ವಿಮೆ ಖರೀದಿಯಲ್ಲಿ ಇಳಿಕೆಯಾಗಿದೆ ಎಂದು ಸಮೀಕ್ಷಾ ವರದಿಗಳು ಹೇಳಿವೆ.

3 % ಕೋವಿಡ್‌ ಅವಧಿಯಲ್ಲಿ ಆರೋಗ್ಯ ವಿಮೆ ವಲಯದಲ್ಲಿ ಆಗಿರುವ ಪ್ರಗತಿ
ಆಧಾರ: ಮ್ಯಾಕ್ಸ್‌ ಲೈಫ್‌ ಇನ್ಸುರೆನ್ಸ್ ಲಿಮಿಟೆಡ್, ಬಜಾಜ್ ಅಲಯನ್ಸ್‌

ವಿಮೆ ಖರೀದಿಗೆ ಮುನ್ನ ಗಮನಿಸಬೇಕಾದ ಅಂಶಗಳು
- ವಿಮೆ ಕೊಳ್ಳುವಾಗ ವೃತ್ತಿ, ವೈದ್ಯಕೀಯ ಸ್ಥಿತಿಗತಿಗಳು, ಅವಲಂಬಿತರ ಸಂಖ್ಯೆ, ಹಣಕಾಸಿನ ಅನುಕೂಲಗಳೇನು ಇತ್ಯಾದಿ ಪ್ರಮುಖ ಅಂಶಗಳನ್ನು ಗಮನಿಸಬೇಕು.
- ನೀವು ವಿಮೆ ಖರೀದಿಸಲು ಬಯಸಿದ್ದರೆ ಎಷ್ಟು ಮೊತ್ತ ಪಾವತಿಸಲು ಸಮರ್ಥರಾಗಿದ್ದೀರಿ ಎಂಬ ಬಗ್ಗೆ ನಿಮ್ಮಲ್ಲಿ ಸ್ಪಷ್ಟತೆ ಇರಬೇಕು.
-ವಿಮೆ ಮೊತ್ತ (ಕವರೇಜ್) ಎಷ್ಟಿರಬೇಕು ಎಂದು ನಿರ್ಧರಿಸಿ. ಅದರ ಮೇಲೆ ಪ್ರೀಮಿಯಂ ನಿರ್ಧಾರವಾಗುತ್ತದೆ.
- ಎಂತಹ ವಿಮೆ ಖರೀದಿಸಲು ಇಚ್ಚಿಸಿದ್ದೀರಿ ಎಂಬ ಸ್ಪಷ್ಟ ಕಲ್ಪನೆ ಇರಬೇಕು. ವೈಯಕ್ತಿಕ ಪಾಲಿಸಿಯೇ, ಕುಟುಂಬದ ಎಷ್ಟು ಸದಸ್ಯರಿಗೆ ವಿಮಾ ರಕ್ಷಣೆ ನೀಡಲು ಬಯಸಿದ್ದೀರಿ ಎಂದು ಮೊದಲೇ ನಿಶ್ಚಯಿಸಿರಬೇಕು.
-ಸದ್ಯ ಇರುವ ಕಾಯಿಲೆಗಳನ್ನೂ ಒಳಗೊಳ್ಳುವ ವಿಮೆ ಖರೀದಿಸುವುದು ಸೂಕ್ತ. ವಿಮೆ ಕ್ಲೇಮ್‌ಗೆ ಕಾಯುವ ಅವಧಿ (ವೇಯ್ಟಿಂಗ್ ಪೀರಿಯಡ್) ಕಡಿಮೆ ಇದ್ದಷ್ಟೂ ನಿಮಗೆ ಲಾಭ. ಇದು ಗಮನದಲ್ಲಿರಲಿ.
- ಕೆಲವು ಕಂಪನಿಗಳು ಆಂಬುಲೆನ್ಸ್, ಕೊಠಡಿಯ ಬಾಡಿಗೆ, ಕೆಲವು ಉಪಕರಣಗಳಿಗೆ ಕ್ಲೇಮ್ ನೀಡುವುದಿಲ್ಲ. ಯಾವೆಲ್ಲ ಕ್ಲೇಮ್‌ನಿಂದ ಹೊರಗಿವೆ ಎಂಬುದು ಸಬ್‌ ಕ್ಲಾಸ್‌ನಲ್ಲಿ ನಮೂದಾಗಿರುತ್ತದೆ. ಇದನ್ನು ಓದಿಕೊಳ್ಳಬೇಕು.
- ವೈಯಕ್ತಿಕ ಪಾಲಿಸಿಗಿಂತ ಕುಟುಂಬದ ಹೆಚ್ಚು ಸದಸ್ಯರನ್ನು ವಿಮೆಗೆ ಒಳಪಡಿಸಿದರೆ ರಿಯಾಯಿತಿ ನೀಡಲಾಗುತ್ತದೆ. ಹೆಚ್ಚು ರಿಯಾಯಿತಿ ಹಾಗೂ ಹೆಚ್ಚು ಕವರೇಜ್ ಸಿಗುವ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ
-ಜೀವನಪೂರ್ತಿ ನವೀಕರಣ ಸೌಲಭ್ಯ ಇರುವಪಾಲಿಸಿಗಳನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಪ್ರೀತಿಪಾತ್ರರಿಗೆ ದೀರ್ಘಕಾಲದವರೆಗೆ ವಿಮೆಯ ರಕ್ಷಣೆ ಸಿಗುತ್ತದೆ. ಮುಂದೆ ಎದುರಾಗಬಹದಾದ ಅನಿಶ್ಚಿತ ಅಪಾಯಗಳನ್ನು ಇದು ತಡೆಯುತ್ತದೆ
- ನೆಟ್‌ವರ್ಕ್ ಆಸ್ಪತ್ರೆಗಳ ಮಾಹಿತಿಯನ್ನು ಗ್ರಹಿಸಬೇಕು. ನೀವಿರುವ ಜಾಗದ ಸಮೀಪದಲ್ಲಿ ಯಾವ ಆಸ್ಪತ್ರೆಗಳಲ್ಲಿ ವಿಮಾ ಸೌಲಭ್ಯವಿದೆ ಎಂಬುದನ್ನು ಖಚಿತಪಡಿಸಿಕೊಂಡು ಆ ಕಂಪನಿಯ ವಿಮೆ ಖರೀದಿಸುವುದು ಒಳಿತು
-ನೀವು ಖರೀದಿ ಮಾಡಲು ಇಚ್ಛಿಸಿರುವ ವಿಮಾ ಕಂಪನಿಯ ಸೆಟ್ಲ್‌ಮೆಂಟ್ ರೇಷಿಯೊ ಎಷ್ಟಿದೆ ಎಂದು ತಿಳಿದುಕೊಳ್ಳಿ. ಇದರಿಂದ ನಿಮ್ಮ ಕ್ಲೇಮ್ ಅವಧಿಯಲ್ಲಿ ಹೆಚ್ಚಿನ ನೆರವು ಸಿಗುತ್ತದೆ.
- ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಅಥವಾ ಮರುಪಾವತಿ ಯಾವ ರೀತಿಯಲ್ಲಿದೆ, ಕಂಪನಿ ತಕ್ಷಣ ಸ್ಪಂದಿಸುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ
- ಕೆಲ ನಿರ್ದಿಷ್ಟ ಮೊತ್ತದವರೆಗೆ ವಿಮೆ ಪ್ರೀಮಿಯಂ ತೆರಿಗೆಯಿಂದ ಮುಕ್ತವಾಗಿರುತ್ತದೆ. ಫಲಾನುಭವಿಗಳು ಪಡೆಯುವ ಕ್ಲೇಮ್ ಮೊತ್ತ ಕೂಡ ತೆರಿಗೆ ರಹಿತವಾಗಿರುತ್ತದೆ. ಆದರೆ ಇದು ಪಾಲಿಸಿಯಿಂದ ಪಾಲಿಸಿಗೆ ಭಿನ್ನವಾಗಿರುತ್ತದೆ ಎಂಬುದು ನೆನಪಿರಲಿ
- ನೀವು ಕಚೇರಿಯ ಗುಂಪು ವಿಮೆ ಅಥವಾ ಕಾರ್ಪೊರೇಟ್ ವಿಮೆಗೆ ಒಳಪಟ್ಟಿದ್ದರೂ ನಿಮ್ಮ ಕುಟುಂಬದ ಹಿತದೃಷ್ಟಿಯಿಂದ ಪ್ರತ್ಯೇಕ ವಿಮೆ ಕೊಳ್ಳುವುದು ಸರಿಯಾದ ನಿರ್ಧಾರ. ಕೋವಿಡ್ ಪಿಡುಗಿನ ಈ ಸಂದಿಗ್ಧ ಸಮಯದಲ್ಲಿ ಉದ್ಯೋಗ ನಷ್ಟ ಸಂಭವಿಸುವ ಸಾಧ್ಯತೆಯಿರುತ್ತದೆ
- ಹತ್ತಾರು ಕಂಪನಿಗಳ ವಿಮೆಗಳು ಲಭ್ಯವಿದ್ದು, ನಿಮ್ಮ ಅಗತ್ಯಕ್ಕೆ ಸರಿಹೊಂದುವ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳಿ. ಅನಗತ್ಯವಾಗಿ ಹೆಚ್ಚು ಪ್ರೀಮಿಯಂ ಪಾವತಿಸುವ ‍ಪಾಲಿಸಿಗಳ ಬಗ್ಗೆ ಎಚ್ಚರವಿರಲಿ
- ನೀವು ವಿಮೆ ಖರೀದಿಸುವ ಮುನ್ನ ಪಾಲಿಸಿಯ ದಾಖಲಾತಿಗಳನ್ನು ತಪ್ಪದೆ ಓದಬೇಕು. ವಿಮೆಯ ಪ್ರಯೋಜನ ಮತ್ತು ಪರಿಣಾಮಗಳ ಬಗ್ಗೆ ಚೆನ್ನಾಗಿ ಅರಿತಿರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT