ಗುರುವಾರ , ಅಕ್ಟೋಬರ್ 29, 2020
21 °C

ಸೈಬರ್‌ ಅಪರಾಧ ಅಂಕುಶವಿಲ್ಲದ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ವರದಿ ಪ್ರಕಾರ, 2019ರಲ್ಲಿ ಸೈಬರ್‌ ಅಪರಾಧ ಪ್ರಕರಣಗಳ ಹೆಚ್ಚಳದ ಪ್ರಮಾಣ ಶೇ 63.5ರಷ್ಟು. ಇಂತಹ ಅಪರಾಧ ಪ್ರಕರಣಗಳು ಕರ್ನಾಟಕದಲ್ಲಿಯೇ ಅತಿ ಹೆಚ್ಚು ನಡೆಯುತ್ತಿವೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಅಸ್ಸಾಂ ರಾಜ್ಯಗಳು ಇವೆ.

2018ರಲ್ಲಿ ಬಾಕಿಯಿದ್ದ 32,099 ಪ್ರಕರಣ ಸೇರಿದಂತೆ, 2019ರಲ್ಲಿ ದೇಶದಲ್ಲಿ ಒಟ್ಟು 76,669 ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸಿದ್ದಾರೆ. ಈ ಪೈಕಿ 23,752 ಪ್ರಕರಣಗಳು ಇತ್ಯರ್ಥವಾಗಿದ್ದು, 52,917 ಪ್ರಕರಣಗಳು (ಶೇ 69) ಬಾಕಿ ಉಳಿದಿವೆ. ಮೂರು ರಾಜ್ಯಗಳಿಂದಲೇ ಶೇ 61.41ರಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಕರ್ನಾಟಕ ಒಂದರಲ್ಲೇ 20,016 ಪ್ರಕರಣಗಳು ಇವೆ. 18,638 ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿಲ್ಲ. ಕೋರ್ಟ್‌ ವಿಚಾರಣೆಗೆ ಹೋಗಿದ್ದ 817 ಪ್ರಕರಣಗಳಲ್ಲಿ ಕೇವಲ 35 ಪೂರ್ಣಗೊಂಡಿವೆ. 781 ಪ್ರಕರಣಗಳು ವಿವಿಧ ಹಂತಗಳಲ್ಲಿ ಬಾಕಿ ಉಳಿದುಕೊಂಡಿವೆ. 

ಕರ್ನಾಟಕ: ನಾಲ್ಕು ವರ್ಷದಲ್ಲಿ 11 ಪಟ್ಟು ಏರಿಕೆ

2016ರ ಅಂಕಿ–ಅಂಶಗಳಿಗೆ ಹೋಲಿಸಿದರೆ (1,011) ಕರ್ನಾಟಕದಲ್ಲಿ 2019ರಲ್ಲಿ ದಾಖಲಾದ ಪ್ರಕರಣಗಳು 11 ಪಟ್ಟು ಏರಿಕೆ ಕಂಡಿವೆ. ಸೈಬರ್ ಅಪರಾಧ ಪ್ರಕರಣಗಳಲ್ಲಿ 2019ರಲ್ಲಿ ಕರ್ನಾಟಕವು ಉತ್ತರ ಪ್ರದೆೇಶವನ್ನು ಹಿಂದೆ ತಳ್ಳಿ, ಅತಿ ಹೆಚ್ಚು ಪ್ರಕರಣಗಳಿರುವ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ. ಅಪರಾಧಿಗಳಗೆ ಶಿಕ್ಷೆ ಕೊಡಿಸುವ ವಿಚಾರದಲ್ಲಿ ರಾಜ್ಯ ಎಡವಿರುವುದೂ ಕಂಡುಬಂದಿದೆ. ರಾಜ್ಯದಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಪ್ರಮಾಣ ಶೇ 95.6ರಷ್ಟಿದೆ. ದೋಷಾರೋಪ ಪಟ್ಟಿ ಸಲ್ಲಿಕೆ ದರ ಶೇ 8.1ಮಾತ್ರ. ಮಹಿಳೆ ವಿರುದ್ಧದ ಸೈಬರ್ ಅಪರಾಧಗಳಲ್ಲೂ ರಾಜ್ಯ ಮೊದಲ ಸ್ಥಾನದಲ್ಲಿದೆ.

ಉತ್ತರ ಪ್ರದೇಶದ ಗಮನಾರ್ಹ ಪ್ರಗತಿ: ಪತಿಬಾರಿ ಎಲ್ಲ ರೀತಿಯ ಅಪರಾಧ ಪರಿಕರಣಗಳಿಂದ ಸುದ್ದಿಯಾಗುತ್ತಿರುವ ಉತ್ತರ ಪ್ರದೇಶ ಮಾತ್ರ ಈ ಬಾರಿ ಗಮನಾರ್ಹ ಸಾಧನೆ ಮಾಡಿದೆ. ಸೈಬರ್ ಕ್ರೈಂ ಪ್ರಕರಣಗಳನ್ನು ನಿಭಾಯಿಸುವಲ್ಲಿ ಕರ್ನಾಟಕ, ಮಹಾರಾಷ್ಟ್ರಗಳನ್ನು ಹಿಂದಿಕ್ಕಿದೆ. ರಾಷ್ಟ್ರೀಯ ಸರಾಸರಿಯನ್ನೂ ಮೀರಿದೆ. 

ಕರ್ನಾಟಕದಲ್ಲಿ 2019ರಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳಲ್ಲಿ ಬಹುಪಾಲು, ‘ಐಡೆಂಟಿಟಿ ಥೆಫ್ಟ್‌’ ಸ್ವರೂಪದ ಕೃತ್ಯಗಳಿಗೆ ಸಂಬಂಧಿಸಿದ್ದಾಗಿವೆ. ಐಡೆಂಟಿಟಿ ಥೆಫ್ಟ್‌ ಎಂದರೆ, ‘ಮತ್ತೊಬ್ಬರ ಗುರುತಿಗೆ ಸಂಬಂಧಿಸಿದ ದತ್ತಾಂಶಗಳನ್ನು ಕಳವು ಮಾಡುವುದು ಮತ್ತು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವುದು’. 

2016ಲ್ಲಿ ದೇಶದಲ್ಲಿ ದಾಖಲಾಗಿದ್ದ ಸೈಬರ್ ಅಪರಾಧ ಪ್ರಕರಣಗಳಲ್ಲಿ ‘ಐಡೆಂಟಿಟಿ ಥೆಫ್ಟ್‌’ ಎಂಬ ವರ್ಗೀಕರಣ ಇರಲಿಲ್ಲ. ಕರ್ನಾಟಕದಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲೂ ಇಂತಹ ವರ್ಗೀಕರಣ ಇರಲಿಲ್ಲ. 2017ರ ಎನ್‌ಸಿಆರ್‌ಬಿ ವರದಿಯಲ್ಲಿ ಐಡೆಂಟಿಟಿ ಥೆಫ್ಟ್ ಎಂಬ ವರ್ಗವನ್ನು ಸೇರಿಸಲಾಗಿದೆ. ದೇಶದಲ್ಲಿ ದಾಖಲಾಗುವ ಒಟ್ಟು ಐಡೆಂಟಿಟಿ ಥೆಫ್ಟ್ ಪ್ರಕರಣಗಳಲ್ಲಿ ಕರ್ನಾಟಕದಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆಯೇ ಹೆಚ್ಚು.

2017ರಲ್ಲಿ ರಾಜ್ಯದಲ್ಲಿ 2,200ಕ್ಕೂ ಹೆಚ್ಚು ಐಡೆಂಟಿಟಿ ಥೆಫ್ಟ್ ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 5,100ನ್ನು ದಾಟಿದೆ. 2019ರಲ್ಲಿ 10,000ದ ಗಡಿಯನ್ನು ದಾಟಿದೆ. ಪ್ರತಿ ವರ್ಷ ದುಪ್ಪಟ್ಟು ಪ್ರಮಾಣದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಒಟ್ಟಾರೆ ರಾಜ್ಯದಲ್ಲಿ ದಾಖಲಾಗುತ್ತಿರುವ ಸೈಬರ್ ಅಪರಾಧ ಪ್ರಕರಣಗಳಲ್ಲಿ, ಇತ್ಯರ್ಥವಾಗುವ ಪ್ರಕರಣಗಳ ಪ್ರಮಾಣ ತೀರಾ ಕಡಿಮೆ ಇದೆ. ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ (21,033) ಐಡೆಂಟಿಟಿ ಥೆಫ್ಟ್‌ ಪ್ರಕರಣಗಳ ಪಾಲು ಶೇ 85ರಷ್ಟು ಇದೆ. ನಮ್ಮ ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ ದಾಖಲಾಗಿರುವ ಐಡೆಂಟಿಟಿ ಥೆಫ್ಟ್ ಪ್ರಕರಣಗಳಲ್ಲಿ, ಎಷ್ಟು ಇತ್ಯರ್ಥವಾಗಿವೆ ಎಂಬುದರ ಸಮಗ್ರ ಮಾಹಿತಿ ಲಭ್ಯವಿಲ್ಲ.

ನಾಲ್ಕು ಸ್ವರೂಪದ ಕೃತ್ಯ

ವ್ಯಕ್ತಿಯೊಬ್ಬರ ಗುರುತಿನ ವಿವರ, ಅವರ ಬ್ಯಾಂಕಿಂಗ್ ಮಾಹಿತಿಯ ವಿವರಗಳನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದನ್ನು ‘ಐಡೆಂಟಿಟಿ ಕಳವು’ ಪ್ರಕರಣದ ಅಡಿ ದಾಖಲಿಸಲಾಗುತ್ತದೆ. ಭಾರತದಲ್ಲಿ ನಾಲ್ಕು ಸ್ವರೂಪದ ಐಡೆಂಟಿಟಿ ಕಳವು ಪ್ರಕರಣಗಳನ್ನು ಗುರುತಿಸಲಾಗಿದೆ

1. ಆರ್ಥಿಕ ಐಡೆಂಟಿಟಿ ಕಳವು: ವ್ಯಕ್ತಿಯೊಬ್ಬರ ಬ್ಯಾಂಕಿಂಗ್ ವಿವರಗಳನ್ನು ಪಡೆದುಕೊಂಡು, ಅವರ ಖಾತೆಯಲ್ಲಿರುವ ಹಣವನ್ನು ಬಳಸಿಕೊಳ್ಳುವುದನ್ನು ಆರ್ಥಿಕ ಐಡೆಂಟಿಟಿ ಕಳವು ಎನ್ನಲಾಗುತ್ತದೆ. ಹೀಗೆ ಕಳವು ಮಾಡಲಾದ ಹಣವನ್ನು, ಕದ್ದವರು ನಗದೀಕರಿಸಿಕೊಳ್ಳುವುದಿಲ್ಲ. ಬದಲಿಗೆ ಆ ಹಣವನ್ನು ಬಳಸಿಕೊಂಡು ಸರಕು ಮತ್ತು ಸೇವೆಗಳನ್ನು ಖರೀದಿಸಲಾಗುತ್ತದೆ

2. ವ್ಯಕ್ತಿಯೊಬ್ಬರ ಆನ್‌ಲೈನ್‌ ಗುರುತನ್ನು (ಪ್ರೊಫೈಲ್‌) ಬಳಸಿಕೊಂಡು, ಬೇರೊಬ್ಬ ವ್ಯಕ್ತಿ ಅಪರಾಧ ಕೃತ್ಯಗಳನ್ನು ಎಸಗುವುದನ್ನು ‘ಐಡೆಂಟಿಟಿ ದುರ್ಬಳಕೆ’ ಎಂದು ಕರೆಯಲಾಗುತ್ತದೆ. ಇಂತಹ ಪ್ರಕರಣಗಳ ಸಂದರ್ಭದಲ್ಲಿ ಅಪರಾಧಿಯು ಎಸಗಿದ ಕೃತ್ಯಕ್ಕೆ, ನಿಜವಾದ ವ್ಯಕ್ತಿ ತನಿಖೆಯನ್ನು ಎದುರಿಸಬೇಕಾಗುತ್ತದೆ. ಮಾದಕ ವಸ್ತು ಕಳ್ಳಸಾಗಣೆ, ಆನ್‌ಲೈನ್ ವಂಚನೆ ಮತ್ತು ಡಾರ್ಕ್‌ವೆಬ್ ವಹಿವಾಟುಗಳಿಗೆ ಇಂತಹ ಗುರುತುಗಳನ್ನು ಬಳಸಿಕೊಳ್ಳಲಾಗುತ್ತದೆ

3. ಐಡೆಂಟಿಟಿ ಕ್ಲೋನಿಂಗ್: ಒಬ್ಬ ವ್ಯಕ್ತಿಯ ಪ್ರೊಫೈಲ್ ಅನ್ನು ಬೇರೊಬ್ಬ ವ್ಯಕ್ತಿಯು ಬಳಸಿಕೊಳ್ಳುವುದನ್ನು ಐಡೆಂಟಿಟಿ ಕ್ಲೋನಿಂಗ್ ಎನ್ನಲಾಗುತ್ತದೆ. ಮಾಹಿತಿಯನ್ನು ಕದ್ದಿರುವ ವ್ಯಕ್ತಿಯು, ಆನ್‌ಲೈನ್‌ನಲ್ಲಿ ತಾನೇ ನೈಜವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಾನೆ. ಆ ಮೂಲಕ ವಂಚನೆ ಎಸಗುತ್ತಾನೆ

4. ವಾಣಿಜ್ಯ ಐಡೆಂಟಿಟಿ ಕಳವು: ಯಾವುದೋ ಒಂದು ವಾಣಿಜ್ಯ ಸಂಸ್ಥೆಯ ಪ್ರೊಫೈಲ್ ಅನ್ನು ಬಳಸಿಕೊಂಡು ನಡೆಸುವ ವ್ಯವಹಾರ/ವಹಿವಾಟುಗಳನ್ನು ವಾಣಿಜ್ಯ ಐಡೆಂಟಿಟಿ ಕಳವು ಎಂದು ಗುರುತಿಸಲಾಗುತ್ತದೆ

ಆಧಾರ: 2016, 2017, 2018, 2019ನೇ ಸಾಲಿನ ಭಾರತದಲ್ಲಿ ಅಪರಾಧ ವರದಿಗಳು (ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ-ಎನ್‌ಸಿಆರ್‌ಬಿ)

ವರದಿ: ಜಯಸಿಂಹ ಆರ್., ಅಮೃತ್ ಕಿರಣ್ ಬಿ.ಎಂ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು