ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಗೋಹತ್ಯೆ ನಿಷೇಧ ಜಾರಿಯಾದರೆ

Last Updated 11 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""

ದೆೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಲವು ದಶಕಗಳಿಂದ ಗೋಹತ್ಯೆ ನಿಷೇಧ ಕಾನೂನುಗಳು ಅಸ್ತಿತ್ವದಲ್ಲಿವೆ. 1950ರ ದಶಕದಲ್ಲೇ ಕೆಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಕರ್ನಾಟಕದಲ್ಲಿ 1964ರಲ್ಲಿ ಈ ಕಾನೂನು ಜಾರಿ ಮಾಡಲಾಗಿತ್ತು. ಈಗ ಗೋಹತ್ಯೆ ನಿಷೇಧವನ್ನು ಇನ್ನಷ್ಟು ಕಠಿಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ರೈತರು ಏನಂತಾರೆ

ರಾಜ್ಯದಲ್ಲಿನ ಬಿಜೆಪಿ ಸರ್ಕಾರ ತನಗೆ ಬೇಕಾದಂತೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ರೂಪಿಸಿಕೊಂಡಿದೆ. ಈ ಕಾಯ್ದೆಯಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ವಯಸ್ಸಿನ ಗೋವುಗಳನ್ನು ವಧೆ ಮಾಡುವುದು ತಪ್ಪು. ಆದರೆ, ಮುದಿ ಗೋವುಗಳನ್ನು (ಸಾಯುವ ಹಂತದಲ್ಲಿರುವ) ವಧೆ ಮಾಡುವುದರಲ್ಲಿ ತಪ್ಪೇನು ಇಲ್ಲ. ವಯಸ್ಸಾಗಿರುವ ಗೋವುಗಳನ್ನು ಸಾಕಿ ಸಲಹುವುದು ಕಷ್ಟ.ಬಿಜೆಪಿಯವರು ಜನರನ್ನು ದಾರಿತಪ್ಪಿಸುವ ಕಾಯ್ದೆಗಳನ್ನೇ ರೂಪಿಸುತ್ತಾರೆ. ಇದು ಮತ ಬ್ಯಾಂಕ್‌ಗಾಗಿ ಜನರಲ್ಲಿ ಭಾವನಾತ್ಮಕ ಅಂಶಗಳನ್ನು ಬಿತ್ತುವ ತಂತ್ರ ಅಷ್ಟೆ.

- ಎಂ.ಮಹೇಶ್‌,ಉಪಾಧ್ಯಕ್ಷ, ರಾಜ್ಯ ರೈತ ಸಂಘ–ಹಸಿರು ಸೇನೆ, ಅಜ್ಜಂಪುರ

***

ಕರಾವಳಿಯ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿರುವ ಗೋವುಗಳ ಕಳ್ಳತನ ತಡೆಗೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಅವಶ್ಯ. ಕಾನೂನು ಜಾರಿಯಿಂದ ಗೋವುಗಳ ಕಳ್ಳತನ ಪ್ರಮಾಣ ಕಡಿಮೆ ಆಗುವ ಮೂಲಕ ಕೃಷಿಕನಿಗೆ ಅನುಕೂಲವಾಗಲಿದೆ. ಗೋಹತ್ಯೆ ತಡೆಗೆ ಕಾನೂನು ಜಾರಿಯೊಂದೇ ಪರಿಹಾರವಲ್ಲ. ಕೃಷಿಕನ ಮನಸ್ಥಿತಿಯೂ ಬದಲಾಗಬೇಕು. ಕೇವಲ ವಾಣಿಜ್ಯ ದೃಷ್ಟಿಯಿಂದ ನೋಡದೆ, ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಗೋವಿನ ಸಗಣಿ ಹಾಗೂ ಗೋಮೂತ್ರ ಬಳಸಿಕೊಂಡರೆ ಲಾಭವಿದೆ.

- ಸತ್ಯನಾರಾಯಣ ಉಡುಪ,ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ

***

ಗೋ ಹತ್ಯೆ ನಿಷೇಧ ಮಾಡುತ್ತಿರುವುದರ ಬಗ್ಗೆ ನಮ್ಮ ತಕರಾರು ಏನಿಲ್ಲ. ದೇಸಿ ಗೋ ತಳಿಗಳನ್ನು ಉಳಿಸುವ ಅಗತ್ಯವಿದೆ.ಆದರೆ, ಹಸು, ಎತ್ತು ಸೇರಿದಂತೆ ಇತರೆ ಜಾನುವಾರುಗಳ ಮಾರಾಟಕ್ಕೆ ರೈತರಿಗೆ ತೊಂದರೆ ಕೊಡಬಾರದು. ಪ್ರಾಯವಾಗಿರುವ ಅಥವಾ ಶಕ್ತಿ ಕುಂದಿರುವ ಹಸು ಅಥವಾ ಎತ್ತುಗಳನ್ನು ಇಟ್ಟುಕೊಂಡು ನಾವು ಏನು ಮಾಡುವುದು? ಗೋ ಶಾಲೆ ಮಾಡಿ ಸಾಕುವುದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಸರ್ಕಾರ ಅಥವಾ ಸಂಘ–ಸಂಸ್ಥೆಗಳು ನಡೆಸುವ ಗೋಶಾಲೆಗಳಿಗೆ ಹಸುಗಳನ್ನು ಉಚಿತವಾಗಿ ಕೊಡಲು ಆಗದು. ನಮಗೆ ದುಡ್ಡು ಕೊಡಬೇಕು.

- ಹೊನ್ನೂರು ಪ್ರಕಾಶ್‌,ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ, ಚಾಮರಾಜನಗರ

***

ಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ. ಉಪಯೋಗಕ್ಕೆ ಬಾರದ ಜಾನುವಾರುಗಳಿಗೆ ಮೇವು ಒದಗಿಸುವುದು ರೈತರಿಗೆ ಬಲುದೊಡ್ಡ ಹೊರೆ. ಇದರ ಬಗ್ಗೆ ರೈತರೊಂದಿಗೆ ಸುದೀರ್ಘವಾದ ಚರ್ಚೆಯ ಅಗತ್ಯ ಇತ್ತು. ಯಾವುದೋ ಗೋಪ್ಯ ಉದ್ದೇಶ ಈಡೇರಿಸಲು ಸರ್ಕಾರ ಕಾಯ್ದೆ ಜಾರಿಗೊಳಿಸಲು ಮುಂದಾದಂತಿದೆ.ಸರ್ಕಾರ ವೃದ್ಧಾಶ್ರಮಗಳನ್ನು ನಿರ್ವಹಣೆ ಮಾಡುವ ರೀತಿಯಲ್ಲಿ ಗೋಶಾಲೆಗಳನ್ನೂ ನಿರ್ವಹಣೆ ಮಾಡಬೇಕಾಗುತ್ತದೆ. ವಯಸ್ಸಾದರಾಸುಗಳನ್ನು ಖರೀದಿ ಮಾಡಿ ಅಲ್ಲಿಗೆ ಕಳುಹಿಸಬಹುದು. ಇದರಿಂದ ಉಂಟಾಗುವ ಹೊರೆಯನ್ನು ಸರ್ಕಾರವೇ ಹೊರಬೇಕು. ಆಹಾರ ಚಕ್ರದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮವನ್ನೂ ಸರ್ಕಾರವೇ ಪರಿಹರಿಸಬೇಕು.

- ಸುನಂದಾ ಜಯರಾಂ,ರೈತ ಹಿತರಕ್ಷಣಾ ಸಮಿತಿ ನಾಯಕಿ, ಮಂಡ್ಯ

***

ಗೋಹತ್ಯೆ ನಿಷೇಧದಿಂದ ಬಹಳ ಅನುಕೂಲವಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ದನಕರುಗಳು ಇದ್ದರೆ ಆರೋಗ್ಯಕ್ಕೆ ಒಳ್ಳೆಯದು. ದನಗಳ ಸೆಗಣಿ ಮೇಲೆ ಕೈಯಾಡಿಸುತ್ತಾ ಇದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಎಷ್ಟೋ ರೈತರು ಹೈನುಗಾರಿಕೆಯನ್ನೇ ಅವಲಂಬಿಸಿದ್ದು, ಗೋಹತ್ಯೆ ನಿಷೇಧದಿಂದ ಹೆಚ್ಚಿನ ಹಸುಗಳನ್ನು ಸಾಕುವ ಮೂಲಕ ಹೈನುಗಾರಿಕೆ ಇನ್ನಷ್ಟು ವೃದ್ಧಿಯಾಗಲಿದೆ. ಗೊಡ್ಡು (ವಯಸ್ಸಾದ) ಹಸುಗಳ ಜೊತೆಗೆ ಚೆನ್ನಾಗಿರುವ ಹಸುಗಳನ್ನು ಕಸಾಯಿಖಾನೆಗೆ ದೂಡುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ದನಗಳು ಕಡಿಮೆಯಾಗುತ್ತಿವೆ. ದನಕರುಗಳ ಪೋಷಣೆಗೆ ಮುಂಜಾನೆಯಿಂದಲೇ ಜಾಗೃತಗೊಳ್ಳುವ ರೈತರು ಇವುಗಳು ಇಲ್ಲದಿದ್ದರೆ ಸೋಮಾರಿಗಳಾಗುತ್ತಾರೆ.

- ಎಂ.ಕೆ.ಆಂಜನೇಯ,ರೈತ, ಹಾಲಿವಾಣ, ಹರಿಹರ ತಾಲ್ಲೂಕು

***

ಕಾನೂನು ಮಾಡುವವರು ದನ ಸಾಕುವುದಿಲ್ಲ. ದೇಶದಲ್ಲಿ ಅತಿ ಹೆಚ್ಚು ರಾಸುಗಳನ್ನು ಸಾಕುವವರು ರೈತರು. ದೊಡ್ಡ ಸಂಖ್ಯೆಯಲ್ಲಿ ಸಾಕುವ ರೈತರು ಅನುಪಯುಕ್ತ ರಾಸುಗಳನ್ನು ಮಾರಾಟ ಮಾಡುವುದು ಸಹಜ ಪ್ರಕ್ರಿಯೆ. ಹೊಸ ಕಾನೂನು ಜಾರಿಯಾದರೆ ಅಧಿಕಾರಿಗಳ ಬಳಿಗೆ ಅಲೆದಾಡಿ ಪ್ರಮಾಣಪತ್ರ ಪಡೆಯುವಷ್ಟು ವ್ಯವದಾನ ರೈತರಿಗೆ ಇರುವುದಿಲ್ಲ.ಸರ್ಕಾರ ಪ್ರತಿ ಪಂಚಾಯಿತಿ ಮಟ್ಟದಲ್ಲೂ ಅನುಪಯುಕ್ತ ಗೋವುಗಳ ಪಾಲನಾ ಕೇಂದ್ರ ತೆರೆಯಬೇಕು. ಇಲ್ಲವೇ ಅಂತಹ ರಾಸುಗಳ ಪಾಲನೆ, ಪೋಷಣೆಗೆ ಅಗತ್ಯ ಹಣವನ್ನು ಪ್ರತಿ ತಿಂಗಳು ರೈತರ ಖಾತೆಗಳಿಗೆ ಜಮೆ ಮಾಡಬೇಕು.

- ಕೆ.ಟಿ. ಗಂಗಾಧರ್,ಹಿರಿಯ ರೈತ ಮುಖಂಡರು,ಶಿವಮೊಗ್ಗ

***

ಪ್ರಾಣಿಗಳಿಗೆ ಪರ್ಯಾಯ ಆಹಾರ

- ಡಿ.ಬಿ.ನಾಗರಾಜ

ಗೋಹತ್ಯೆ ನಿಷೇಧ ಮಸೂದೆಯ ಬಗ್ಗೆ ಬಿರುಸಿನ ಚರ್ಚೆಯ ನಡುವೆಯೇ ರಾಜ್ಯದಲ್ಲಿರುವ 10 ಮೃಗಾಲಯಗಳಲ್ಲೂ ಮಾಂಸಾಹಾರಿ ಪ್ರಾಣಿಗಳಿಗೆ ಪರ್ಯಾಯ ಆಹಾರ ನೀಡಲು ಮೃಗಾಲಯ ಪ್ರಾಧಿಕಾರ ಮುಂದಾಗಿದೆ.

‘ರಾಜ್ಯದ ಮೃಗಾಲಯದಲ್ಲಿನ ಹುಲಿ, ಸಿಂಹ, ಚಿರತೆಗಳಿಗೆ ನಿತ್ಯವೂ 1200 ಕೆ.ಜಿ. ದನದ ಮಾಂಸವನ್ನು ಆಹಾರವನ್ನಾಗಿ ನೀಡಲಾಗುತ್ತಿತ್ತು. 1 ಕೆ.ಜಿ. ಮಾಂಸವನ್ನು ₹ 160ರ ದರದಲ್ಲಿ ಖರೀದಿಸುತ್ತಿದ್ದೆವು. ಇದೀಗ ಗೋಹತ್ಯೆ ನಿಷೇಧ ಮಸೂದೆ ಮಂಡನೆಯಾಗಿದೆ. ಆದರೆ ನಮಗೆ ಸರ್ಕಾರದಿಂದ ಯಾವೊಂದು ಮಾರ್ಗಸೂಚಿಯೂ ಬಂದಿಲ್ಲ. ಆದರೂ ಪರ್ಯಾಯ ಆಹಾರ ಬಳಕೆಗೆ ಚಾಲನೆ ನೀಡಿದ್ದೇವೆ’ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.

‘ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾಗುತ್ತಿದ್ದಂತೆಯೇ ಮೃಗಾಲಯದ ಅಧಿಕಾರಿಗಳ ಜೊತೆ ಚರ್ಚಿಸಿರುವೆ. ಮಸೂದೆ ಕಾಯ್ದೆಯಾದರೆ ದನದ ಮಾಂಸ ಸಿಗುವುದು ಕಷ್ಟವಾಗಲಿದೆ. ಇದು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದು ಎಂದು ಈಗಿನಿಂದಲೇ ಒಂದು ಹೊತ್ತು ಕುರಿ, ಮೇಕೆ, ಕೋಳಿ ಮಾಂಸ ಪೂರೈಸಲು ಹೇಳಿರುವೆ’ ಎಂದು ಅವರು ಹೇಳಿದರು.

‘ಮಾರುಕಟ್ಟೆಯಲ್ಲಿ ಕುರಿ, ಮೇಕೆ, ಕೋಳಿ ಮಾಂಸದ ಬೆಲೆ ತುಂಬಾ ದುಬಾರಿಯಿದೆ. ಪ್ರಾಧಿಕಾರದಿಂದ ಪ್ರಾಣಿಗಳಿಗೆ ಆಹಾರವಾಗಿ ನೀಡುವುದು ಕಷ್ಟವಾಗಲಿದೆ. ಈಗಾಗಲೇ ಕೋವಿಡ್‌ನಿಂದಾಗಿ, ಪ್ರವಾಸಿಗರಿಲ್ಲದೇ ಮೃಗಾಲಯಗಳು ನಷ್ಟ ಅನುಭವಿಸುತ್ತಿವೆ. ನಿರ್ವಹಣೆಯೇ ಕಷ್ಟಕರವಾಗಿದೆ. ಕಾಯ್ದೆ ಜಾರಿಯಾಗಿ, ನಮಗೆ ಮಾರ್ಗಸೂಚಿಯ ಆದೇಶ ಬರುತ್ತಿದ್ದಂತೆಯೇ, ಸರ್ಕಾರಕ್ಕೆ ಖರ್ಚು–ವೆಚ್ಚದ ಪ್ರಸ್ತಾವ ಸಲ್ಲಿಸಿ, ಹೆಚ್ಚುವರಿ ವೆಚ್ಚವನ್ನು ಭರಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ’ ಎಂದು ಮಹದೇವಸ್ವಾಮಿ ತಿಳಿಸಿದರು.

ಹೆಚ್ಚಲಿರುವ ಆರ್ಥಿಕ ಹೊರೆ

‘ಗೋಹತ್ಯೆ ನಿಷೇಧ ಕಾಯ್ದೆ, ಮೃಗಾಲಯದಲ್ಲಿನ ಮಾಂಸಾಹಾರಿ ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರಲ್ಲ. ಆದರೆ ಮೃಗಾಲಯದ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ’ ಎನ್ನುತ್ತಾರೆ ವನ್ಯಪ್ರಾಣಿ ತಜ್ಞ ಡಾ.ಡಿ.ಎನ್.ನಾಗರಾಜು.

‘ಕುರಿಯ ಮಾಂಸದಲ್ಲಿ ಶೇ 13ರಷ್ಟು ಕೊಬ್ಬಿನ ಅಂಶ ಇರುತ್ತದೆ. ಇದನ್ನು ಸತತವಾಗಿ ದೀರ್ಘಕಾಲ ಸೇವಿಸುವ ಪ್ರಾಣಿಯ ದೇಹ, ರಕ್ತದಲ್ಲೂ ಕೊಬ್ಬಿನ ಪ್ರಮಾಣ ಹೆಚ್ಚಲಿದೆ. ಆ ಪ್ರಾಣಿ ಸ್ಥೂಲಕಾಯ ಹೊಂದಲಿದೆ. ಆಗ ಸಹಜವಾಗಿಯೇ ಹೃದಯದ ರಕ್ತ ಪಂಪ್ ಮಾಡುವ ಪ್ರಕ್ರಿಯೆಗೆ ತೊಂದರೆಯಾಗಲಿದೆ. ಇದು ಹೃದಯಾಘಾತಕ್ಕೂ ಕಾರಣವಾಗಲಿದೆ. ಇದೇ ರೀತಿ ಕಿಡ್ನಿಯ ಸುತ್ತಲೂ ಕೊಬ್ಬಿನ ಅಂಶ ಶೇಖರಣೆಗೊಂಡು, ಕಿಡ್ನಿಗಳು ಸುಗಮವಾಗಿ ಕಾರ್ಯ ನಿರ್ವಹಿಸಲು ಅಡ್ಡಿಯಾಗಲಿದೆ. ಇನ್ನಿತರ ಸಮಸ್ಯೆಗಳು ದೀರ್ಘ ಕಾಲದಲ್ಲಿ ಗೋಚರಿಸಬಲ್ಲವು’ ಎಂದು ನಾಗರಾಜು ಮಾಹಿತಿ ನೀಡಿದರು.

‘ಕಾಡಿನಿಂದ ಬಂಧಿಯಾಗಿ ನಾಡಿಗೆ ಬಂದ ಮಾಂಸಾಹಾರಿ ಪ್ರಾಣಿಗಳು, ಮೃಗಾಲಯದಲ್ಲೇ ಹುಟ್ಟಿ ಬೆಳೆದ ಪ್ರಾಣಿಗಳು ಆಯಾ ಪರಿಸರಕ್ಕೆ ಹೊಂದಿಕೊಂಡಿರುತ್ತವೆ. ಆಹಾರ ಪದ್ಧತಿ ಬದಲಾದರೂ ಕೆಲವೇ ದಿನಗಳಲ್ಲಿ ಹೊಂದಿಕೊಳ್ಳಲಿವೆ. ವೈದ್ಯರ ಅನುಮತಿಯೊಂದಿಗೆ 13 ವರ್ಷ ವಯಸ್ಸಾದ ಆರೋಗ್ಯವಂತ ದನವನ್ನು ಮಾಂಸಕ್ಕಾಗಿ ಬಳಸಬಹುದು ಎಂಬುದು ಈಗಿನ ಕಾಯ್ದೆಯಲ್ಲೇ ಇರುವುದರಿಂದ ಅಷ್ಟೇನು ಸಮಸ್ಯೆ ಕಾಡದು’ ಎಂದು ಅವರು ಹೇಳಿದರು.

***

ಮತ್ತಷ್ಟು ದುಬಾರಿಯಾಗಲಿದೆ ಕೋಳಿ, ಕುರಿ ಮಾಂಸ

-ವಿಜಯಕುಮಾರ್ ಎಸ್.ಕೆ.

ಬೆಂಗಳೂರು: ಗೋಹತ್ಯೆ ನಿಷೇಧವಾದರೆ ಕುರಿ ಮತ್ತು ಕೋಳಿ ಮಾಂಸದ ಬೆಲೆ ಇನ್ನಷ್ಟು ದುಬಾರಿಯಾಗುವುದರಿಂದ ಬಡವರು ಮಾಂಸಾಹಾರದಿಂದಲೇ ದೂರ ಇರಬೇಕಾದ ‌ಸ್ಥಿತಿ ಎದುರಾಗುವ ಸಂಭವ ಇದೆ. ದನದ ಮಾಂಸ ಸೇವನೆ ಹಲವು ಸಮುದಾಯಗಳ ಆಹಾರ ಪದ್ಧತಿ. ಇನ್ನೂ ಹಲವರಿಗೆ ಅದೊಂದು ಉದ್ಯಮ ಮತ್ತು ಉದ್ಯೋಗ. ಗೋಹತ್ಯೆ ನಿಷೇಧ ಕಾಯ್ದೆಯಾಗಿ ಜಾರಿಗೆ ಬಂದರೆ ಲಕ್ಷಾಂತರ ಮಂದಿ ನಿರುದ್ಯೋಗದ ಸಮಸ್ಯೆ ಎದುರಿಸಲಿದ್ದಾರೆ.

‘ಮಾಂಸೋದ್ಯಮ ಎಂದ ಕೂಡಲೇ ಅದು ಮಾಂಸಹಾರಿಗಳಿಗೆ ಅಥವಾ ಒಂದು ಸಮುದಾಯಕ್ಕೆ ಸಂಬಂಧಿಸಿದ ವಿಷಯ ಎನ್ನಬೇಕಿಲ್ಲ. ಏಕೆಂದರೆ ಚರ್ಮೋದ್ಯಮ ಮತ್ತು ಮಾಂಸೋದ್ಯಮ ಒಂದನ್ನೊಂದು ಅವಲಂಬಿಸಿವೆ. ಗೋಹತ್ಯೆ ನಿಷೇಧವಾದರೆ ಚರ್ಮೋದ್ಯಮದ ಮೇಲೆ ಅದರ ಪರಿಣಾಮ ಉಂಟಾಗಲಿದೆ. ಬಹುಮುಖ್ಯವಾಗಿ ರೈತರು ತೊಂದರೆ ಅನುಭವಿಸಿಲಿದ್ದಾರೆ’ ಎಂದು ಶಿವಾಜಿನಗರದ ಇಕ್ಬಾಲ್ ಹೇಳಿದರು.

‘ಕೋಳಿ, ಕುರಿ ಮತ್ತು ಮೀನು ಮಾಂಸದ ದರ ಈಗಲೇ ಗಗನ ಮುಟ್ಟಿದೆ. ಗೋಹತ್ಯೆ ನಿಷೇಧವಾದರೆ ಆ ಹೊರೆಯೂ ಈ ಎರಡೂ ರೀತಿಯ ಮಾಂಸಗಳ ಮೇಲೆ ಬೀಳಲಿದೆ. ಪರಿಣಾಮ ಕೋಳಿ ಮತ್ತು ಕುರಿ ಮಾಂಸದ ದರ ಹೆಚ್ಚಾಗಲಿದೆ. ಕುರಿ ಮಾಂಸ ಸದ್ಯ ಕೆ.ಜಿಗೆ ₹900 ಮುಟ್ಟಿದೆ. ಮುಂದೆ ಅದು ಇನ್ನೆಷ್ಟು ಎತ್ತರಕ್ಕೆ ಏರಲಿದೆ ಎಂಬುದನ್ನು ಊಹಿಸಲು ಆಗುವುದಿಲ್ಲ’ ಎಂದು ಹೇಳಿದರು.

‍‘ನಿಷೇಧವು ಮುಖ್ಯವಾಗಿ ರೈತರ ಮೇಲೆ ಪರಿಣಾಮ ಬೀರಲಿದೆ. ಉಳುಮೆಗೆ ಶಕ್ತವಲ್ಲದ ಜಾನುವಾರುಗಳನ್ನು ಅವರು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣಕ್ಕೆ ಮತ್ತಷ್ಟು ಸೇರಿಕೊಂಡು ಬೇರೆ ಜಾನುವಾರುಗಳನ್ನು ಖರೀದಿಸಿ ಜೀವನ ಸಾಗಿಸುತ್ತಿದ್ದರು. ರೈತರು ಕಸಾಯಿಖಾನೆಗೆ ಮಾರಾಟ ಮಾಡುವುದು ಮತ್ತು ಕಸಾಯಿಖಾನೆಗೆ ಖರೀದಿ ಮಾಡುವುದೆರಡೂ ಕಾನೂನಿನ ಉಲ್ಲಂಘನೆಯಾಗಲಿದೆ. ಆಗ, ಉಳುಮೆಗೆ ಯೋಗ್ಯವಲ್ಲದ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದೇರೈತರು ನಷ್ಟಕ್ಕೆ ಸಿಲುಕುತ್ತಾರೆ. ಈ ಬಗ್ಗೆ ಸರ್ಕಾರ ಯೋಚಿಸಬೇಕಿತ್ತು’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

‘ಚರ್ಮೋದ್ಯಮದ ವಿಷಯಕ್ಕೆ ಬಂದರೆ ರಾಜ್ಯದಲ್ಲಿ ಚರ್ಮ ಹದ ಮಾಡುವ ಒಂದೇ ಒಂದು ಘಟಕವೂ ಇಲ್ಲ. ಚಪ್ಪಲಿ, ಬ್ಯಾಗ್, ಶೂ, ಬೆಲ್ಟ್ ಹಾಗೂ ಇತರೆ ಚರ್ಮ ಆಧಾರಿತ ಉತ್ಪನ್ನಗಳ ತಯಾರಿಕೆಗೆ ಸಂಸ್ಕರಿಸಿದ ಚರ್ಮವನ್ನು ತಮಿಳುನಾಡಿನಿಂದ ತರಿಸಿಕೊಳ್ಳಲಾಗುತ್ತಿದೆ. ಈ ಹಿಂದೆ ಚರ್ಮ ಹದ ಮಾಡುವ 14 ಘಟಕಗಳು ಬೆಂಗಳೂರಿನಲ್ಲಿ ಇದ್ದವು. ಈಗ ಎಲ್ಲವೂ ಬಂದ್ ಆಗಿವೆ. ಆದರೆ, ಸಂಸ್ಕರಣೆಗೂ ಮುನ್ನವೇ ಚೆನ್ನೈಗೆ ಕಚ್ಚಾ ಚರ್ಮವನ್ನು ಕಳುಹಿಸಲಾಗುತ್ತದೆ. ಅಲ್ಲಿ ಹದವಾಗಿ ಉತ್ಪನ್ನಗಳ ತಯಾರಿಕೆಗೆ ಮತ್ತೆ ರಾಜ್ಯಕ್ಕೆ ಬರುತ್ತದೆ. ರಾಜ್ಯದಿಂದ ಹೋಗುವ ಕಚ್ಚಾ ಚರ್ಮದ ಪ್ರಮಾಣಕಡಿಮೆಯಾದಂತೆ ಹದ ಮಾಡಿದ ಚರ್ಮದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಲಿಡ್ಕರ್ ನಿಗಮದ ಅಧಿಕಾರಿಗಳು ಹೇಳುತ್ತಾರೆ.

***

ಎಮ್ಮೆಯ ಮಾಂಸ ಮಾತ್ರ ರಫ್ತು

ಭಾರತದಲ್ಲಿ ಗೋಮಾಂಸ ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಭಾರತದಿಂದ ಈಗ ಎಮ್ಮೆ ಮತ್ತು ಕೋಣದ ಮಾಂಸವನ್ನು ಮಾತ್ರ ರಫ್ತು ಮಾಡಲಾಗುತ್ತದೆ. ವಾಣಿಜ್ಯ ಸಚಿವಾಲಯವು ತನ್ನ ದಾಖಲೆಗಳಲ್ಲಿ ಇದನ್ನು ಎಮ್ಮೆಯ ಮಾಂಸ ಎಂದೇ ನಮೂದಿಸಿದೆ. ಆದರೆ ವಿದೇಶಗಳ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದನ್ನು ‘ಬೀಫ್‌’ ಎಂದೇ ಕರೆಯಲಾಗುತ್ತದೆ.

ಭಾರತದಲ್ಲಿ ಎಮ್ಮೆಯ ಮಾಂಸವನ್ನು ಹೆಚ್ಚು ರಫ್ತು ಮಾಡುವ ರಾಜ್ಯಗಳಲ್ಲಿ ಉತ್ತರ ಪ್ರದೇಶವು ಮೊದಲ ಸ್ಥಾನದಲ್ಲಿದೆ. ಯೋಗಿ ಆದಿತ್ಯನಾಥ ಅವರ ನೇತೃತ್ವದ ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಎಮ್ಮೆಯ ಮಾಂಸದ ಉತ್ಪಾದನೆ ಇಳಿಕೆಯಾಗಿದೆ. ಆದರೂ, ಹೆಚ್ಚು ಮಾಂಸ ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಈಗಲೂ ಮೊದಲ ಸ್ಥಾನದಲ್ಲಿಯೇ ಇದೆ.

ವಿಶ್ವದಾದ್ಯಂತ ಹೆಚ್ಚು ‘ಬೀಫ್’ (ಎಮ್ಮೆಯ ಮಾಂಸವನ್ನೂ ಒಳಗೊಂಡು) ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಭಾರತವಿದೆ. ಭಾರತದಲ್ಲಿ ಉತ್ಪಾದನೆಯಾಗುವ ಎಮ್ಮೆಯ ಮಾಂಸದಲ್ಲಿ ಬಹುಪಾಲು ರಫ್ತಾಗುತ್ತದೆ. ಸ್ಥಳೀಯವಾಗಿ ಎಮ್ಮೆಯ ಮಾಂಸದ ಬಳಕೆಯ ಪ್ರಮಾಣ ಕಡಿಮೆ ಇದೆ.

ಗೋಹತ್ಯೆ ನಿಷೇಧವಿರುವ ರಾಜ್ಯಗಳು

ಕಾಶ್ಮೀರ, ಹಿಮಾಚಲಪ್ರದೇಶ, ಪಂಜಾಬ್‌, ಹರಿಯಾಣ, ಉತ್ತರಾಖಂಡ, ಉತ್ತರಪ್ರದೇಶ, ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸಗಡ, ದೆಹಲಿ ಹಾಗೂ ಚಂಡೀಗಡ

*ಭಾಗಶಃ ನಿಷೇಧ (ಅಗತ್ಯ ಪ್ರಮಾಣಪತ್ರ ಪಡೆದು ಕೋಣ, ಎತ್ತುಗಳ ಹತ್ಯೆಗೆ ಅವಕಾಶ ಕಲ್ಪಸಿದವು). ಬಿಹಾರ, ಜಾರ್ಖಂಡ್‌, ಒರಿಸ್ಸಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಗೋವಾ, ದಿಯು ಮತ್ತು ದಾಮನ್‌, ದಾದ್ರಾ ಮತ್ತು ನಗರ್‌ಹವೇಲಿ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌

* ನಿಷೇಧವಿಲ್ಲದ ರಾಜ್ಯಗಳು (ಕೆಲವೆಡೆ ‘ವಧೆಗೆ ಯೋಗ್ಯ’ ಎಂಬ ಪ್ರಮಾಣಪತ್ರ ಕಡ್ಡಾಯ). ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರ, ಮೇಘಾಲಯ, ಮಿಜೊರಾಂ, ನಾಗಾಲ್ಯಾಂಡ್‌, ತ್ರಿಪುರಾ, ಸಿಕ್ಕಿಂ ಹಾಗೂ ಲಕ್ಷದ್ವೀಪ.

ಆಧಾರ:ವಾಣಿಜ್ಯ ಸಚಿವಾಲಯ,ಡಿಜಿಸಿಐಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT