ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಆಗಲ: ವಕೀಲರ ರಕ್ಷಣಾ ಕಾಯ್ದೆಗೆ ಆಗ್ರಹ; ಸರಿಯೆಷ್ಟು, ತಪ್ಪೆಷ್ಟು?

Last Updated 15 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ವಕೀಲ ವೃತ್ತಿಯು ವರ್ಷದ 365 ದಿನವೂ ದೈಹಿಕ ಹಾಗೂ ಮಾನಸಿಕ ಶ್ರಮವನ್ನು ಬೇಡುವ ವೃತ್ತಿ. ವಕೀಲನಾದವನು ಕೆಲವೊಮ್ಮೆ ಬಿಡಿಗಾಸೂ ಇಲ್ಲದ ಬಡವನಿಂದ ಹಿಡಿದು, ಅವನಂತಹ 100 ಜನರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಸಾಮರ್ಥ್ಯವುಳ್ಳ ಧನಿಕನನ್ನೂ ಹಾಗೂ ಸಮಾಜವು ಅಪರಾಧಿ ಎಂದು ನೋಡುವ ವ್ಯಕ್ತಿಯನ್ನೂ ರಕ್ಷಿಸಲು ಸೆಣೆಸಾಡುವ ಒಂದು ಪವಿತ್ರ ವೃತ್ತಿ. ಕೆಲವೊಮ್ಮೆ ತನ್ನ ಕಕ್ಷಿದಾರನನ್ನು ರಕ್ಷಿಸುವ ಭರದಲ್ಲಿ ತಾನೇ ಇತರರ ಕೋಪಕ್ಕೆ ಗುರಿಯಾಗುವ ಪ್ರಸಂಗಗಳೂ ಉಂಟು. ವಕೀಲರಾದವರು ತಮ್ಮ ವೃತ್ತಿಯ ಮೂಲಕ ದೇಶದಲ್ಲಿ ನ್ಯಾಯದಾನದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ವಕೀಲರ ಮೇಲೆ ಇತ್ತೀಚೆಗೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಕೀಲರು ತಮ್ಮ ರಕ್ಷಣೆಗಾಗಿ ಕಾನೂನಿನ ಕದ ತಟ್ಟುವಂತಹ ಪರಿಸ್ಥಿತಿ ಎದುರಾಗಿದೆ.

ವಕೀಲರ ಮೇಲೆ ನಡೆಯುವ ಯಾವುದೇ ದೌರ್ಜನ್ಯ ಅವರಿಗೆ ಮಾತ್ರ ಸೀಮಿತಗೊಳ್ಳದೇ, ಅವರ ಕುಟುಂಬ ಹಾಗೂ ಸಹೋದ್ಯೋಗಿಗಳಿಗೂ ತಟ್ಟುತ್ತದೆ. ಇಂತಹ ಬೆಳವಣಿಗೆಗಳ ಅಡಿಯಲ್ಲಿ ಹೊಸದಾಗಿ ಕಾನೂನು ಪದವಿಯನ್ನು ಪಡೆದು ವೃತ್ತಿಗೆ ಪದಾರ್ಪಣೆ ಮಾಡುವ ಯುವ ವಕೀಲರಿಗೆ ವೃತ್ತಿಯ ಬಗ್ಗೆ ಭಯ ಹಾಗೂ ಅಭದ್ರತೆ ಕಾಡುವ ಜೊತೆಗೆ, ವೃತ್ತಿಯಿಂದ ಹಿಂದೆ ಸರಿಯುವಂತಹ ವಾತಾವರಣ ಸೃಷ್ಟಿಯಾಗುವ ಸಂಭವವೂ ಉಂಟು. ಪರಿಣಾಮವಾಗಿ ನಮ್ಮ ನ್ಯಾಯದಾನದ ವ್ಯವಸ್ಥೆ ಪ್ರತಿಭಾವಂತ ವಕೀಲರನ್ನು ಪಡೆಯುವುದರಿಂದ ವಂಚಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘ ಮತ್ತು ರಾಜ್ಯ ವಕೀಲರ ಪರಿಷತ್‌ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಜೋರು ದನಿ ಎತ್ತಿವೆ.

ಕ್ಯೂಬಾದ ಹವಾನಾದಲ್ಲಿ 1990ರ ಆಗಸ್ಟ್ 27ರಿಂದ ಸೆಪ್ಟೆಂಬರ್ 7ರವರೆಗೆ ನಡೆದ ವಿಶ್ವಸಂಸ್ಥೆಯ 8ನೇ ಮಹಾ ಅಧಿವೇಶನ, ‘ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧಿಗಳನ್ನು ಹೇಗೆ ನಡೆಸಿಕೊಳ್ಳಬೇಕು’ ಎಂಬ ವಿಷಯದ ಕುರಿತು ವಿಸ್ತೃತ ಚರ್ಚೆ ನಡೆಸಿತ್ತು. ಭಾರತವೂ ಪಾಲ್ಗೊಂಡಿದ್ದ ಈ ಕಾಂಗ್ರೆಸ್‌ನಲ್ಲಿ 'ವಕೀಲರ ಪಾತ್ರದ ಮೂಲಭೂತ ತತ್ವಗಳು' ಅಂಗೀಕರಿಸಲ್ಪಟ್ಟವು. ಸಾರ್ವಜನಿಕರಿಗೆ ನ್ಯಾಯಯುತ ರಕ್ಷಣೆ ನೀಡಬೇಕಾದ ಮತ್ತು ಅಂತಹ ರಕ್ಷಣೆಗಳ ಕ್ರಮವನ್ನು ಖಾತ್ರಿಪಡಿಸುವಲ್ಲಿ ಪೊಲೀಸರು ಮತ್ತು ವಕೀಲರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹಾಗಾಗಿ, ಇವರ ರಕ್ಷಣೆಯೂ ಅಷ್ಟೇ ಮುಖ್ಯ ಎಂಬ ಹಿನ್ನೆಲೆಯಲ್ಲಿ ವಕೀಲರ ರಕ್ಷಣಾ ಕಾಯ್ದೆಯ ಆಶಯ ಆವಿರ್ಭವಿಸಿತು. ವಕೀಲರ ರಕ್ಷಣಾ ಕಾಯ್ದೆಯ ಮುಖ್ಯ ಗುರಿ ವಕೀಲರ ಸುರಕ್ಷತೆ ಮತ್ತು ಅವರ ಕರ್ತವ್ಯಗಳನ್ನು ನಿರ್ವಹಿಸುವ ವೇಳೆಯಲ್ಲಿ ಅವರ ಸಾಮರ್ಥ್ಯಕ್ಕೆ ಎದುರಾಗುವ ಅಡೆತಡೆಗಳನ್ನು ನಿವಾರಿಸುವುದು.

2021ರ ಜುಲೈ 2ರಂದು, ಭಾರತೀಯ ವಕೀಲರ ಪರಿಷತ್‌, ವಕೀಲರ ರಕ್ಷಣಾ ಮಸೂದೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ. ವಕೀಲರು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಪ್ರತಿಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಮಸೂದೆಯನ್ನು ರೂಪಿಸಲು ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಈ ನಿಟ್ಟನಲ್ಲಿ ರಾಜ್ಯದಲ್ಲೂ ಹಿರಿಯ ವಕೀಲ ಉದಯ ಹೊಳ್ಳ, ಸಿ.ಎಚ್‌.ಹನುಮಂತರಾಯ, ಎ.ಎಸ್.ಪೊನ್ನಣ್ಣ ಮತ್ತು ಡಿ.ಆರ್.ರವಿಶಂಕರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ವಕೀಲರ ರಕ್ಷಣಾ ಕಾಯ್ದೆಯ ಕರಡು ಪ್ರತಿ ಸಿದ್ಧಪಡಿಸಲಾಗಿದೆ.

ಮಸೂದೆಯ ಬಗ್ಗೆ ಎಷ್ಟೇ ಆಳವಾಗಿ ಚಿಂತಿಸಿದರೂ ಬಹಳಷ್ಟು ಜನ ವಕೀಲರ ನೈತಿಕ ಮೌಲ್ಯಗಳು ದುರ್ಬಲವಾಗುತ್ತಿರುವ ಬಗ್ಗೆಯೂ ಅಷ್ಟೇ ಕಳವಳಕಾರಿ ಸಂಗತಿಗಳಿವೆ. ಈ ಕುರಿತು ಹೆಸರು ಹೇಳಲು ಬಯಸದ ವಕೀಲರೊಬ್ಬರು; ‘ಇಂದು ವಕೀಲರ ಸಂಖ್ಯೆ ಸಹಜವಾಗಿಯೇ ಜಾಸ್ತಿಯಾಗಿದೆ. ಪ್ರಕರಣಗಳ ವೈವಿಧ್ಯತೆ, ಅಪರಾಧಗಳ ಪರಿಧಿಯೂ ಊಹೆಗೆ ನಿಲುಕಲಾರದಷ್ಟು ವಿಸ್ತರಣೆಗೊಂಡಿದೆ. ವಕೀಲರು ತಮ್ಮ ನೈತಿಕ ಬದ್ಧತೆ ಉಳಿಸಿಕೊಳ್ಳುವಲ್ಲಿ ಸೋಲುತ್ತಿದ್ದಾರೆ. ಬೇಗನೇ ಶ್ರೀಮಂತರಾಗುವ ಉಮ್ಮೀದಿನಲ್ಲಿ ಅಡ್ಡಹಾದಿ ಹಿಡಿಯುತ್ತಿದ್ದಾರೆ. ದಾಖಲೆಗಳನ್ನು ತಿದ್ದುವ, ತಮ್ಮ ಬಳಿ ಬಂದ ಕಕ್ಷಿದಾರರಿಗೆ ಮೋಸ ಮಾಡುವ, ಕೌಟುಂಬಿಕ ಪ್ರಕರಣಗಳಲ್ಲಿ ನೊಂದ ಮಹಿಳೆಯರಿಂದ ಶುಲ್ಕ ಪಡೆಯದೇ ಅವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಇಲ್ಲವೇ ಕಾನೂನು ಬಾಹಿರವಾಗಿ ಅವರನ್ನು ಶೋಷಿಸುವ ಪ್ರವೃತ್ತಿ ಹೆಚ್ಚುತ್ತಿವೆ. ರಿಯಲ್‌ ಎಸ್ಟೇಟ್‌ ವ್ಯವಹಾರಗಳಲ್ಲಿ ಎಷ್ಟೋ ವಕೀಲರು ಪೊಲೀಸರ ಜೊತೆ ಶಾಮೀಲಾಗಿ ಇವರೇ ಡೀಲ್‌ ಮಾಸ್ಟರ್‌ಗಳಾಗುತ್ತಿದ್ದಾರೆ. ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ಸತ್ಯವಂತರಿಗೆ ಮೋಸ ಮಾಡುವ ದುಷ್ಕೃತ್ಯಗಳು ನಡೆಯುತ್ತಿವೆ. ಪರಿಣಾಮವಾಗಿಯೇ ಅವರ ಮೇಲೆ ಹಲ್ಲೆ, ದಾಳಿಯಂತಹ ಘಟನೆಗಳು ನಡೆಯುತ್ತಿವೆ. ರಕ್ಷಣೆ ಕೇಳುವ ಮೊದಲು ನೈತಿಕವಾಗಿ ಸತ್ಯದ ಮಾರ್ಗದಲ್ಲಿ ನಡೆದರೆ ಯಾರಿಗೆ ಯಾರೂ ಹೆದರಬೇಕಿಲ್ಲ’ ಎಂಬ ಅವರ ಮಾತಿನಲ್ಲಿ ಸತ್ಯವಿಲ್ಲದೇ ಇಲ್ಲ.

‘ನ್ಯಾಯಾಧೀಶರನ್ನೂ ಬಿಟ್ಟಿಲ್ಲ...!’

ವಕೀಲರು ಕರ್ತವ್ಯ ನಿರ್ವಹಣೆಯ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಪ್ರತಿ ಕಕ್ಷಿದಾರರಿಂದಲ್ಲದೆ ಅವರಿಂದ ದುಷ್ಪ್ರೇರಣೆ ಪಡೆದ ಕೇಡಿಗಳಿಂದಲೂ ಪ್ರಾಣ ಹಾನಿಗೆ ಒಳಾಗಿರುವುದುಂಟು. ಇದು ನ್ಯಾಯಾಧೀಶರನ್ನೂ ತಟ್ಟಿರುವುದಿದೆ.

ಬೆಂಗಳೂರಿಗೆ ಸೀಮಿತಗೊಳಿಸಿಕೊಂಡಾಗ ಕ್ರಿಮಿನಲ್ ವಕೀಲ ಬೇಲೂರು ಶ್ರೀನಿವಾಸ ಅಯ್ಯಂಗಾರ್ ಮತ್ತು ಅವರ ಕುಟುಂಬದ ಇತರೆ ಆರು ಮಂದಿ ಹತರಾದದ್ದು, ಚೀಫ್ ಜಸ್ಟೀಸ್ ರಾವ್‌ ಬಹದ್ದೂರ್ ಮೇದಪ್ಪನವರ ಮೇಲೆ ಕ್ರಿಮಿನಲ್ ವಕೀಲ ಎಲ್.ಎಸ್. ರಾಜು ನಡೆಸಿದ ಕೊಲೆ ಯತ್ನ, ಸರ್.ಎಂ. ವಿಶ್ವೇಶ್ವರಯ್ಯನವರ ವಕೀಲ ಸಹೋದರ ಕೃಷ್ಣಮೂರ್ತಿಯವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸಿದ ಖ್ಯಾತ ವಕೀಲ ವೆಂಕಟರಂಗ ಐಯ್ಯಂಗಾರ್, ಕೇರಳ ರಾಜ್ಯದಿಂದ ವಕೀಲಿಕಿಗೆ ಬಂದು ಕೊಲೆಯಾದ ರಶೀದ್... ಮುಂತಾದ ಪ್ರಕರಣಗಳ ಒಳಸುಳಿಗಳನ್ನು ಕಂಡಾಗ ವಕೀಲನ ಸುತ್ತ ಅನೇಕ ಗಂಡಾಂತರಕಾರಿ ಸೂಕ್ಷ್ಮಗಳು ಸದಾ ಗಿರಕಿ ಹೊಡೆಯುವುದು ಹೊರಹೊಮ್ಮುತ್ತವೆ.

ಮನುಷ್ಯ-ಸಮಾಜ- ಕಾನೂನು ಇವುಗಳ ಸಂಬಂಧ ನೇರವಾದುದ್ದಲ್ಲ, ಸಂಕೀರ್ಣವಾದದ್ದು. ಅನೇಕ ಒಳನೆಲೆಗಳಿಂದ ಕೂಡಿದ್ದು. ಪ್ರತೀಕಾರಗಳೇ ಮೇಳೈಸುವುವು. ಆದ್ದರಿಂದ, ಇಂತಹ ಕಾನೂನು ಅವಶ್ಯ ಅನಿವಾರ್ಯ.

- ಸಿ. ಎಚ್. ಹನುಮಂತರಾಯ,ಕರಡು ಸಮಿತಿ ಸದಸ್ಯ, ವಕೀಲ

‘ಕಾನೂನು ಸಚಿವರ ನಿಲುವು ಅಸಾಂವಿಧಾನಿಕ’

ಬಹಳಷ್ಟು ವಕೀಲರು, ಅನೇಕ ಕ್ರಿಮಿನಲ್‌ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿರುತ್ತಾರೆ, ದಂಡ ವಿಧಿಸುವಂತೆ ನೋಡಿಕೊಂಡಿರುತ್ತಾರೆ. ಕೌಟುಂಬಿಕ ಸಮಸ್ಯೆಗಳಲ್ಲಂತೂ ವ್ಯಾಜ್ಯಕರ್ತರಲ್ಲಿ ಬಹಳಷ್ಟು ದ್ವೇಷ ಮಡುಗಟ್ಟಿರುತ್ತದೆ. ಇದಕ್ಕೆ ಕೆಲವೊಮ್ಮೆ ವಕೀಲರೂ ಈಡಾಗುವುದುಂಟು.ವಕೀಲರ ವೃತ್ತಿಯುಬೇರೆಲ್ಲಾ ವೃತ್ತಿಗಳಿಗಿಂತ ಭಿನ್ನವಾದ ಅಪಾಯಗಳನ್ನು ಒಳಗೊಂಡಿರುವ ಕ್ಷೇತ್ರ. ವಕೀಲರು ಅನೂಹ್ಯ ಅಪಾಯಗಳಿಗೆ ತುತ್ತಾಗದೆ ರಕ್ಷಣೆ ಪಡೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ವಕೀಲರೇ ಎಸಗುವ ಅಪರಾಧಗಳಿಂದ ರಕ್ಷಣೆ ಕೊಡಲು ಆಗುವುದಿಲ್ಲ.

ಉದ್ದೇಶಿತ ಕರಡು ಮಸೂದೆ ಸೂಕ್ತವಾದಂತಹ ರಕ್ಷಣೆಗಳನ್ನು ನೀಡುವಲ್ಲಿ ಅತ್ಯಂತ ಸಮತೂಕದಿಂದ ಕೂಡಿದೆ. ಈ ಮಸೂದೆಯ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಗಂಭೀರ ಚರ್ಚೆ ನಡೆಸಬೇಕು. ಇದರ ಸಾಧಕ–ಬಾಧಕಗಳನ್ನು ಪರಾಮರ್ಶಿಸಬೇಕು. ಆದರೆ ಕಾನೂನು ಮಂತ್ರಿ ಜೆ.ಸಿ.ಮಾಧುಸ್ವಾಮಿ ಇಂತಹ ಚರ್ಚೆಗೇ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿರುವುದನ್ನು ಒಪ್ಪಲು ಆಗುವುದಿಲ್ಲ. ಇದು ಅಸಾಂವಿಧಾನಿಕ ನಿಲುವು.

ಕರಡು ಮಸೂದೆ ಶಾಸನಸಭೆಯಲ್ಲಿ ಮಂಡನೆಯಾಗಲಿ. ಅದರಲ್ಲಿ ವಕೀಲರಿಗೆ ಎಷ್ಟರಮಟ್ಟಿಗೆ ರಕ್ಷಣೆ ಕೊಡಬೇಕು ಎಂಬುದನ್ನು ಶಾಸನಕರ್ತರು ಚರ್ಚೆಯ ಮುಖಾಂತರ ತೀರ್ಮಾನಿಸಲಿ.

- ಎ.ಎಸ್‌.ಪೊನ್ನಣ್ಣ,ಕರಡು ಸಮಿತಿ ಸದಸ್ಯ, ಹಿರಿಯ ವಕೀಲ

‘ಹೋರಾಟ ಫಲಪ್ರದವಾಗಲಿ’

ಸಿವಿಲ್ ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗೆ ಪೊಲೀಸ್ ಠಾಣೆಗಳಲ್ಲೇ ಬಗೆಹರಿಸುವ ಮೂಲಕ ವಕೀಲರಿಗೆ ಪ್ರಕರಣ ನಡೆಸಿದ್ದಕ್ಕೆ ಶುಲ್ಕವನ್ನೇ ನೀಡದೆ ಕಕ್ಷಿದಾರರು ಕಡೆಗಣಿಸುತ್ತಿದ್ದರು. ಇದರಿಂದ ವಕೀಲರಿಗೆ ತಾವು ನಿರ್ವಹಿಸುವ ಕೆಲಸಕ್ಕೆ ತಕ್ಕ ಗೌರವವೂ ಸಿಗದೆ ಎದುರು ಕಕ್ಷಿದಾರರಿಂದಲೂ ಪೊಲೀಸರಿಂದಲೂ ಶೋಷಣೆಗೀಡಾಗುತ್ತಿದ್ದರು. ವಕೀಲರು ಇದನ್ನು ಪ್ರಶ್ನಿಸಿದಾಗ ಅವರ ಮೇಲೆ ಎದುರು ಕಕ್ಷಿದಾರರು ಹಲ್ಲೆ ನಡೆಸಿದ ಕೆಲವೊಮ್ಮೆ ಕೊಲೆಗಳನ್ನೇ ಮಾಡಿದ ಘಟನೆಗಳು ಸಂಘದ ಗಮನಕ್ಕೆ ಬರುತ್ತಿದ್ದವು. ವಕೀಲರು ನಿರ್ಭೀತಿಯಿಂದ ತಮ್ಮ ವೃತ್ತಿ ನಿರ್ವಹಿಸುವುದು ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿತ್ತು. ವಕೀಲರ ಮೇಲೆ ನಡೆಯುತ್ತಿದ್ದ ಈ ದೌರ್ಜನ್ಯವನ್ನು ಖಂಡಿಸಿ ರಾಜ್ಯಾದ್ಯಂತ ವಕೀಲರ ಪ್ರತಿಭಟನೆ ಮಾಡಲಾಯಿತು ಮತ್ತು ವಕೀಲರ ಮೇಲಿನ ದೌರ್ಜನ್ಯ ತಡೆಯಲು ಹಿರಿಯ ವಕೀಲರ ನೇತೃತ್ವದಲ್ಲಿ ಸಮಿತಿ ರಚಿಸಿ ವಕೀಲರ ರಕ್ಷಣಾ ಕಾಯ್ದೆ ರಚನೆಗೆ ಚಾಲನೆ ನೀಡಲಾಗಿತ್ತು.

ಅಂದು ಕಾನೂನು ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಸಂಘದ ವತಿಯಿಂದ ನೀಡಲಾದ ಮನವಿಗೆ ಸ್ಪಂದಿಸಿ ಕಾಯ್ದೆ ಜಾರಿಗೆ ತರುವ ಬಗ್ಗೆ ಆಶ್ವಾಸನೆ ನೀಡಿದ್ದರು. ಅಷ್ಟರಲ್ಲಿ ಬೆಂಗಳೂರು ವಕೀಲರ ಸಂಘದ ಚುನಾವಣೆ ಘೋಷಣೆಯಾಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾದರು. ಕಾನೂನು ಸಚಿವರು ಬದಲಾವಣೆಯಾದರು. ನಮ್ಮ ಬೇಡಿಕೆ ಹಾಗೆ ನನೆಗುದಿಗೆ ಬಿತ್ತು.ಈಗ ಈ ನಿಟ್ಟಿನಲ್ಲಿ ಪುನಃ ಒತ್ತಡ ಹೆಚ್ಚಾಗಿದೆ. ಈಗಲಾದರೂ ಸರ್ಕಾರ ವಕೀಲರ ರಕ್ಷಣಾ ಕಾಯ್ದೆ ಕರಡನ್ನು ಪರಿಶೀಲಿಸಿ ಜಾರಿಗೊಳಿಸುವ ಇಚ್ಛಾಶಕ್ತಿ ತೋರಲಿ.

- ಎ.ಪಿ. ರಂಗನಾಥ,ಮಾಜಿ ಅಧ್ಯಕ್ಷ, ಬೆಂಗಳೂರು ವಕೀಲರ ಸಂಘ

‘ವಕೀಲರಿಗೂ ಕುಟುಂಬಗಳಿವೆ’

ವಕೀಲರು ತಮ್ಮನ್ನು ನಂಬಿಕೊಂಡು ಬಂದ ಕಕ್ಷಿದಾರರನ್ನು ರಕ್ಷಿಸುವ ಪ್ರಯತ್ನದಲ್ಲಿ ತಿಳಿದೊ ತಿಳಿಯದೆಯೊ ಕೆಟ್ಟ ಮತ್ತು ದುರುದ್ದೇಶಪೂರಿತ ದಾಳಿಗಳಿಗೆ ತುತ್ತಾಗುವುದು ಹೊಸದೇನಲ್ಲ. ಕಕ್ಷಿದಾರರ ಹಿತರಕ್ಷಣೆ ಮಾಡುವಾಗ ಎದುರಾಗುವ ಸಂಕಟಗಳಲ್ಲಿ ಅವರು ತಮ್ಮನ್ನೂ ರಕ್ಷಿಸಿಕೊಳ್ಳುವ ಅಗತ್ಯವನ್ನು ಮನಗಾಣುವುದೇ ಇಲ್ಲ. ನ್ಯಾಯಾಂಗದ ಪ್ರಾಣವಾಯು ಎಂದೇ ಪರಿಗಣಿಸಲಾಗುವ ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೆ ತರಬೇಕೆಂದು ಕೇಳುತ್ತಿರುವುದು ನಿಜವಾಗಿಯೂ ದುಃಖಕರ. ಆದರೆ, ಅದು ಅತ್ಯಂತ ಅನಿವಾರ್ಯ. ವಕೀಲರು ನ್ಯಾಯಾಂಗ ವ್ಯವಸ್ಥೆಯ ಬುನಾದಿಯಾಗಿದ್ದು, ಅವರಿಗೂ ಸಮಾಜದ ಇತರೆ ಸ್ತರದ ವ್ಯಕಿಗಳಂತೆ ಕುಟುಂಬವಿದ್ದು, ಅಪ್ರಸ್ತುತ ದಾಳಿಗಳಿಗೆ ತುತ್ತಾದರೆ ಅಂತಹ ಕುಟುಂಬದ ಸಾಮಾಜಿಕ ಭದ್ರತೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ.

- ಲಕ್ಷ್ಮಿ ಅಯ್ಯಂಗಾರ್, ಹಿರಿಯ ವಕೀಲರು, ಹೈಕೋರ್ಟ್‌

‘ಹೋರಾಟಕ್ಕೆ ಹಿಂಜರಿಯುವುದಿಲ್ಲ’

ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಈಗಾಗಲೇ ಭರವಸೆಯನ್ನೇನೋ ನೀಡಿದ್ದಾರೆ ನಿಜ. ಆದರೆ, ಈ ನಿಟ್ಟಿನಲ್ಲಿ ಅವರು ಹಿಂದೆ ಸರಿಯಬಾರದು. ಇದೇ 19ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶದಲ್ಲಿ ವಕೀಲರ ಸುರಕ್ಷತಾ ಕಾಯ್ದೆಯ ಮಸೂದೆ ಮಂಡನೆಯಾಗಿ ಅಂಗೀಕಾರವಾಗಬೇಕು. ಇಲ್ಲವಾದಲ್ಲಿ ವಕೀಲರು ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಿದ್ದಾರೆ.

- ವಿವೇಕ ರೆಡ್ಡಿ,ಅಧ್ಯಕ್ಷರು, ಬೆಂಗಳೂರು ವಕೀಲರ ಸಂಘ

‘ವಕೀಲರಿಗೂ ಕುಟುಂಬಗಳಿವೆ’

ವಕೀಲರು ತಮ್ಮನ್ನು ನಂಬಿಕೊಂಡು ಬಂದ ಕಕ್ಷಿದಾರರನ್ನು ರಕ್ಷಿಸುವ ಪ್ರಯತ್ನದಲ್ಲಿ ತಿಳಿದೊ ತಿಳಿಯದೆಯೊ ಕೆಟ್ಟ ಮತ್ತು ದುರುದ್ದೇಶಪೂರಿತ ದಾಳಿಗಳಿಗೆ ತುತ್ತಾಗುವುದು ಹೊಸದೇನಲ್ಲ. ಕಕ್ಷಿದಾರರ ಹಿತರಕ್ಷಣೆ ಮಾಡುವಾಗ ಎದುರಾಗುವ ಸಂಕಟಗಳಲ್ಲಿ ಅವರು ತಮ್ಮನ್ನೂ ರಕ್ಷಿಸಿಕೊಳ್ಳುವ ಅಗತ್ಯವನ್ನು ಮನಗಾಣುವುದೇ ಇಲ್ಲ. ನ್ಯಾಯಾಂಗದ ಪ್ರಾಣವಾಯು ಎಂದೇ ಪರಿಗಣಿಸಲಾಗುವ ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೆ ತರಬೇಕೆಂದು ಕೇಳುತ್ತಿರುವುದು ನಿಜವಾಗಿಯೂ ದುಃಖಕರ. ಆದರೆ, ಅದು ಅತ್ಯಂತ ಅನಿವಾರ್ಯ. ವಕೀಲರು ನ್ಯಾಯಾಂಗ ವ್ಯವಸ್ಥೆಯ ಬುನಾದಿಯಾಗಿದ್ದು, ಅವರಿಗೂ ಸಮಾಜದ ಇತರೆ ಸ್ತರದ ವ್ಯಕಿಗಳಂತೆ ಕುಟುಂಬವಿದ್ದು, ಅಪ್ರಸ್ತುತ ದಾಳಿಗಳಿಗೆ ತುತ್ತಾದರೆ ಅಂತಹ ಕುಟುಂಬದ ಸಾಮಾಜಿಕ ಭದ್ರತೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ.

- ಲಕ್ಷ್ಮಿ ಅಯ್ಯಂಗಾರ್,ಹಿರಿಯ ವಕೀಲರು, ಹೈಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT