ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಗೋಲ್‌ ಅಧಿಕಾರ ಹಸ್ತಾಂತರದ ಪ್ರತೀಕವೇ?

Published 27 ಮೇ 2023, 0:26 IST
Last Updated 27 ಮೇ 2023, 0:26 IST
ಅಕ್ಷರ ಗಾತ್ರ

ನೂತನ ಸಂಸತ್ ಭವನದಲ್ಲಿ ಸ್ಪೀಕರ್‌ ಪೀಠದ ಬಳಿ ‘ಸೆಂಗೋಲ್‌’ (ರಾಜದಂಡ) ಅನ್ನು ಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಸೆಂಗೋಲ್‌ ಕುರಿತು ಕೇಂದ್ರ ಸರ್ಕಾರವು ನೀಡುತ್ತಿರುವ ವಿವರಗಳು ಸುಳ್ಳು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. 

ಸೆಂಗೋಲ್‌ ಅನ್ನು ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಈಚೆಗೆ ಹೇಳಿತ್ತು. ಚೆನ್ನೈನಲ್ಲಿ ನಡೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೆಂಗೋಲ್‌ ಬಗ್ಗೆ ಮಾಹಿತಿ ನೀಡಿದ್ದರು. ತಮಿಳುನಾಡಿನ ಶೈವ ಪರಂಪರೆಯ ಅಧೀನಾಮ್‌ ಮಠದ ಸ್ವಾಮೀಜಿಗಳು ಸೆಂಗೋಲ್‌ ಅನ್ನು ಭಾರತದ ಕೊನೆಯ ವೈಸ್‌ರಾಯ್ ಲಾರ್ಡ್‌ ಮೌಂಟ್‌ಬ್ಯಾಟನ್‌ಗೆ ನೀಡಿದ್ದರು. ಆನಂತರ ಅದನ್ನು ವಾಪಸ್‌ ಪಡೆದು, ನೆಹರೂಗೆ ನೀಡಲಾಗಿತ್ತು ಎಂದು ಹೇಳಿದ್ದರು.

‘ಇದಕ್ಕೆ ಪುರಾವೆ ಇದೆಯೇ?’ ಎಂದು ಅಲ್ಲಿದ್ದ ಪತ್ರಕರ್ತರು ನಿರ್ಮಲಾ ಅವರನ್ನು ಪ್ರಶ್ನಿಸಿದ್ದರು. ಉತ್ತರ ನೀಡಿದ್ದ ಸಚಿವೆ, ‘ನಿಮಗೆ ನೀಡುವ ಪ್ರಕಟಣೆಯಲ್ಲೇ ಸಾಕಷ್ಟು ಪುರಾವೆಗಳು’ ಇವೆ ಎಂದು ಹೇಳಿದ್ದರು. ಸೆಂಗೋಲ್‌ ಕುರಿತ ಮಾಹಿತಿ ನೀಡಲು ರೂಪಿಸಲಾಗಿರುವ ಜಾಲತಾಣದಲ್ಲೂ ಇದೇ ಪುರಾವೆಗಳನ್ನು ಒದಗಿಸಲಾಗಿದೆ.

ಈ ಜಾಲತಾಣದಲ್ಲಿ, ‘ಸೆಂಗೋಲ್‌ ಅನ್ನು ಮೊದಲು ಮೌಂಟ್‌ಬ್ಯಾಟನ್‌ಗೆ ನೀಡಲಾಗಿತ್ತು. ಅವರಿಂದ ಅದನ್ನು ವಾಪಸ್‌ ಪಡೆದು, ಗಂಗಾಜಲದಲ್ಲಿ ಶುದ್ಧೀಕರಿಸಲಾಗಿತ್ತು. ಆನಂತರ ಅದನ್ನು ನೆಹರೂ ಅವರಿಗೆ ಹಸ್ತಾಂತರಿಸಲಾಗಿತ್ತು. ಸೆಂಗೋಲ್‌ ಅನ್ನು ನೆಹರೂ ಅವರಿಗೆ ನೀಡಲು ಸ್ವಾಮೀಜಿಗಳ ನಿಯೋಗವು ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿತ್ತು. ಇದನ್ನು ದೇಶ ಮತ್ತು ವಿದೇಶಗಳ ಮಾಧ್ಯಮಗಳೂ ವರದಿ ಮಾಡಿವೆ’ ಎಂದು ಜಾಲತಾಣದಲ್ಲಿ ವಿವರಿಸಲಾಗಿದೆ. ಆದರೆ ಜಾಲತಾಣದಲ್ಲಿ ಉಲ್ಲೇಖಿಸಲಾಗಿರುವ ಯಾವ ಮಾಧ್ಯಮ ವರದಿಯಲ್ಲೂ, ಜಾಲತಾಣದಲ್ಲಿ ನೀಡಿರುವ ಮಾಹಿತಿ ಇಲ್ಲ.

1947ರ ಆಗಸ್ಟ್‌ 25ರ ಸಂಚಿಕೆಯ ಟೈಮ್‌ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಲೇಖನದ ಪುಟವನ್ನು ಜಾಲತಾಣದಲ್ಲಿ ನೀಡಲಾಗಿದೆ. ಇಂಡಿಯನ್‌ ಎಕ್ಸ್‌ಪ್ರೆಸ್‌, ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದ್ದವು ಎಂದು ಹೇಳಲಾಗಿರುವ ಒಂದೊಂದು ಪ್ಯಾರಾವನ್ನು ಜಾಲತಾಣದಲ್ಲಿ ನೀಡಲಾಗಿದೆ. ಜತೆಗೆ, ಡಾ.ಬಿ.ಆರ್‌.ಅಂಬೇಡ್ಕರ್ ಅವರ ಬರಹದ ಆಯ್ದ ಭಾಗವನ್ನು ಮತ್ತು ಇತರ ಲೇಖಕರ ಪುಸ್ತಕಗಳನ್ನು ಜಾಲತಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ವರದಿ ಮತ್ತು ಪುಸ್ತಕಗಳಲ್ಲಿ ಸೆಂಗೋಲ್‌ ಅನ್ನು ನೆಹರೂ ಅವರಿಗೆ ನೀಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆಯಷ್ಟೆ.

‘ಸೆಂಗೋಲ್‌ ಅನ್ನು ಮೌಂಟ್‌ ಬ್ಯಾಟನ್‌ಗೆ ನೀಡಿ, ವಾಪಸ್‌ ಪಡೆಯಲಾಗಿತ್ತು. ಆನಂತರ ಗಂಗಾಜಲದಿಂದ ಶುದ್ಧೀಕರಿಸಿ, ನೆಹರೂ ಅವರಿಗೆ ಹಸ್ತಾಂತರಿಸಲಾಗಿತ್ತು’ ಎಂದು ಈ ವರದಿಗಳು ಮತ್ತು ಪುಸ್ತಕಗಳಲ್ಲಿ ಇಲ್ಲ.

ಸೆಂಗೋಲ್‌ ಅನ್ನು ನೆಹರೂ ಅವರಿಗೆ ನೀಡಲು ಸ್ವಾಮೀಜಿಗಳ ನಿಯೋಗವು ವಿಶೇಷ ವಿಮಾನದಲ್ಲಿ ತೆರಳಿತ್ತು ಎಂಬ ಸರ್ಕಾರದ ಪ್ರತಿಪಾದನೆಗೆ ವ್ಯತಿರಿಕ್ತವಾದ ವರದಿ ಮತ್ತು ಚಿತ್ರಗಳು ಲಭ್ಯವಿವೆ. ಸ್ವಾಮೀಜಿಗಳ ನಿಯೋಗವು ಸೆಂಗೋಲ್‌ ಹಿಡಿದು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿಂತಿರುವ ಚಿತ್ರವು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಆಧಾರ: ಕೇಂದ್ರ ಸರ್ಕಾರದ ‘ಸೆಂಗೋಲ್‌1947ಐಜಿಎನ್‌ಸಿಎ.ಐಎನ್‌’, ಪಿಟಿಐ, ದಿ ಹಿಂದೂ

ಪುರಾವೆಗೆ ‘ವಾಟ್ಸ್‌ಆ್ಯಪ್‌ ಹಿಸ್ಟರಿ’ ಉಲ್ಲೇಖ

‘ಸೆಂಗೋಲ್‌ ಅನ್ನು ಮೌಂಟ್‌ಬ್ಯಾಟನ್‌ಗೆ ನೀಡಿ ವಾಪಸ್‌ ಪಡೆಯಲಾಗಿತ್ತು. ಅದನ್ನು ಗಂಗಾಜಲದಲ್ಲಿ ಶುದ್ಧೀಕರಿಸಿ ನೆಹರೂ ಅವರಿಗೆ ನೀಡಲಾಗಿತ್ತು’ ಎಂಬುದಕ್ಕೆ ಪುರಾವೆಯಾಗಿ ಕೇಂದ್ರ ಸರ್ಕಾರವು ‘ವಾಟ್ಸ್‌ಆ್ಯಪ್‌ ಹಿಸ್ಟರಿ’ ಎಂಬ ಬ್ಲಾಗ್‌‍ಪೋಸ್ಟ್‌ ಬರಹವನ್ನು ಪುರಾವೆಯಾಗಿ ನೀಡಿದೆ. ತಮಿಳು ಲೇಖಕ ಜಯಮೋಹನ್‌ ಈ ಬರಹವನ್ನು ಬರೆದಿದ್ದಾರೆ. ‘ವಾಟ್ಸ್‌ಆ್ಯಪ್‌ನಲ್ಲಿ ಬಂದ ಫಾರ್ವಾರ್ಡ್‌ ಸಂದೇಶಗಳು ಪುರಾವೆಗಳನ್ನು ಬಳಸಿಕೊಂಡು ಇದನ್ನು ಬರೆದಿದ್ದೇನೆ. ಈವರೆಗೆ ಈ ಇತಿಹಾಸವನ್ನು ಮುಚ್ಚಿಡಲಾಗಿತ್ತು’ ಎಂದು ಅವರು ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT