ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಮತ್ತೊಂದು ಪರೀಕ್ಷಾ ಅವಾಂತರ ದೇಶದಲ್ಲಿ ಸದ್ದು ಮಾಡುತ್ತಿದೆ. 12ನೇ ತರಗತಿಯ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಂಕಗಳ ವ್ಯತ್ಯಾಸ ಸೇರಿದಂತೆ ಹಲವು ಲೋಪಗಳು ನಡೆದಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಿಬಿಎಸ್ಇ ಪೂರ್ವಸಿದ್ಧತೆಯೇ ಇಲ್ಲದೇ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಡಿಜಟಲ್ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿಕೊಂಡದ್ದು, ವಿವಾದಿತ ಸಂಸ್ಥೆಗೆ ಅದರ ಗುತ್ತಿಗೆ ನೀಡಿದ್ದೇ ಇದಕ್ಕೆಲ್ಲ ಕಾರಣ ಎನ್ನುವ ಆರೋಪಗಳು ಕೇಳಿಬಂದಿವೆ....

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್ಇ) 12ನೇ ತರಗತಿಯ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಈ ಬಾರಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು. ಅದರಿಂದ ಮೌಲ್ಯಮಾಪನದಲ್ಲಿ ಸಾಮಾನ್ಯವಾಗಿ ಆಗುವಂತಹ ತಪ್ಪುಗಳು ಕಡಿಮೆಯಾಗುತ್ತವೆ ಮತ್ತು ಕ್ಷಿಪ್ರವಾಗಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತದೆ ಎನ್ನುವುದು ಸಿಬಿಎಸ್ಇ ಪ್ರತಿಪಾದನೆಯಾಗಿತ್ತು. ಆದರೆ, ಭರವಸೆ ನೀಡಿದಂತೆ ನಡೆದುಕೊಳ್ಳುವಲ್ಲಿ ಸಿಬಿಎಸ್ಇ ವಿಫಲವಾಗಿದೆ. ಡಿಜಿಟಲ್ ಮೌಲ್ಯಮಾಪನದ ಭಾಗವಾದ ಆನ್ಸ್ಕ್ರೀನ್ ಮ್ಯಾಪಿಂಗ್ನಿಂದ (ಒಎಸ್ಎಂ) ಕೋಟ್ಯಂತರ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ವ್ಯತ್ಯಾಸವುಂಟಾಗಿದ್ದು, ಸಿಬಿಎಸ್ಇ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ.

ಕಳೆದ ವರ್ಷ ಶೇ 88.39 ಮಂದಿ ಉತ್ತೀರ್ಣರಾಗಿದ್ದರೆ, ಈ ವರ್ಷ (2026) ಈ ಪ್ರಮಾಣವು ಶೇ 85.29ಕ್ಕೆ ಕುಸಿದಿದೆ. ಶೇ 90ಕ್ಕಿಂತ ಹೆಚ್ಚು ಅಂಕ ಪಡೆದವರ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಆತಂಕಗೊಂಡ ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಉತ್ತರ ಪತ್ರಿಕೆಗಳ ನಕಲು ಪ್ರತಿಗಳಿಗಾಗಿ ಮನವಿ ಸಲ್ಲಿಸಲು ಮುಗಿಬಿದ್ದಿದ್ದರಿಂದ ವೆಬ್ಸೈಟ್ ಸ್ಥಗಿತಗೊಂಡಿತ್ತು. ಮೇ 19ರಂದು 4 ಲಕ್ಷ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ನಕಲು (ಸ್ಕ್ಯಾನ್ ಕಾಪಿ) ಪಡೆಯಲು ಅರ್ಜಿ ಸಲ್ಲಿಸಿದ್ದರು. 11 ಲಕ್ಷ ವಿದ್ಯಾರ್ಥಿಗಳು ಭೌತಿಕ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ಉತ್ತರ ಪತ್ರಿಕೆಗಳನ್ನು ಪಡೆದು ಪರಿಶೀಲಿಸತೊಡಗಿದಾಗ ಸಿಬಿಎಸ್ಇಯ ಒಂದೊಂದೇ ಲೋಪ ಹೊರಬರತೊಡಗಿದವು. ಬಹುತೇಕರ ಉತ್ತರ ಪತ್ರಿಕೆಗಳನ್ನು ಸರಿಯಾಗಿ ಸ್ಕ್ಯಾನ್ ಕೂಡ ಮಾಡಿರಲಿಲ್ಲ; ಕೆಲವು ಪುಟಗಳನ್ನು ಬಿಟ್ಟುಬಿಟ್ಟಿದ್ದರು. ಕೆಲವು ಉತ್ತರಗಳನ್ನು ಮೌಲ್ಯಮಾಪನ (ಮಾರ್ಕ್) ಮಾಡಿರಲೇ ಇಲ್ಲ. ಯಾರದೋ ಅಂಕಗಳನ್ನು ಮತ್ಯಾರಿಗೋ ನಮೂದಿಸಲಾಗಿದೆ. ಉತ್ತರ ಪತ್ರಿಕೆಗಳ ನಕಲಿಗೆ ಅರ್ಜಿ ಸಲ್ಲಿಸಿದ ಹಲವು ವಿದ್ಯಾರ್ಥಿಗಳಿಗೆ ಬೇರೊಬ್ಬರ ಉತ್ತರ ಪತ್ರಿಕೆಗಳನ್ನು ನೀಡಲಾಗಿದೆ.

ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ದೇಶದಲ್ಲಿ ಹಲವೆಡೆ ಚಾಲ್ತಿಯಲ್ಲಿದೆ. ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸುವ ಪರೀಕ್ಷೆಗಳಲ್ಲಿ ಈ ಪದ್ಧತಿ ಅನುಸರಿಸಲಾಗುತ್ತಿದೆ. ಆದರೆ, ಇಲ್ಲೆಲ್ಲ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಜತೆಗೆ, ಸೂಕ್ತ ಮೂಲಸೌಕರ್ಯ ಕಲ್ಪಿಸಿ ನಂತರ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, 12ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು.

ತಜ್ಞರು ಹೇಳುವ ಪ್ರಕಾರ, ಸೂಕ್ತ ಪೂರ್ವತಯಾರಿ ಇಲ್ಲದೆಯೇ ಸಿಬಿಎಸ್ಇ ಇಡೀ ದೇಶದ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನಕ್ಕೆ ಒಳಪಡಿಸಿದ್ದೇ ಈ ಅವಾಂತರಕ್ಕೆ ಕಾರಣ. ವಾಸ್ತವವಾಗಿ, ಡಿಜಿಟಲ್ ಮೌಲ್ಯಮಾಪನವನ್ನು ಸಣ್ಣ ಮಟ್ಟದಲ್ಲಿ ಅಳವಡಿಸಿಕೊಂಡು, ಅದರ ಅನುಭವದ ಆಧಾರದಲ್ಲಿ ಮುಂದುವರಿಯಬೇಕು ಎಂದು 2025ರ ಜೂನ್ನಲ್ಲಿ ಸಿಬಿಎಸ್ಇ ಆಡಳಿತ ಮಂಡಳಿ ಸಲಹೆ ನೀಡಿತ್ತು. ಆದರೆ, ಆ ಸಲಹೆಯನ್ನು ನಿರ್ಲಕ್ಷಿಸಿ, ತರಾತುರಿಯಲ್ಲಿ ಡಿಜಿಟಲ್ ಮೌಲ್ಯಮಾಪನ ಅಳವಡಿಸಿಕೊಂಡದ್ದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ.

ಈ ಬಾರಿ 12ನೇ ತರಗತಿಯ ಮೊದಲ ದಿನದ ಪರೀಕ್ಷೆ ನಡೆದದ್ದು ಫೆಬ್ರುವರಿ 17ರಂದು. ಅದಕ್ಕೆ ಕೇವಲ 10 ದಿನದ ಮುಂಚೆಯಷ್ಟೇ ಸಿಬಿಎಸ್ಇ ಒಎಸ್ಎಂ ಅಳವಡಿಕೆ ಬಗ್ಗೆ ಅಧ್ಯಾಪಕರಿಗೆ ಮಾಹಿತಿ ನೀಡಿತ್ತು. ಅಧ್ಯಾಪಕರಿಗೆ ವ್ಯವಸ್ಥೆ ಬಗ್ಗೆ ಅರಿತುಕೊಳ್ಳಲು ಇನ್ನೂ ಹೆಚ್ಚು ಸಮಯ ಬೇಕಿತ್ತು ಎನ್ನುವುದು ಹಲವರ ಅಭಿಪ್ರಾಯ. ಈ ಬಾರಿಯ 12ನೇ ತರಗತಿ ಪರೀಕ್ಷೆಗಳನ್ನು 17 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಅಂದರೆ, 98 ಲಕ್ಷ ಉತ್ತರ ಪತ್ರಿಕೆಗಳು (ಬುಕ್ಲೆಟ್ಸ್) ಮತ್ತು 40 ಕೋಟಿ ಪುಟಗಳು. ನಿಗದಿತ ಅವಧಿಯಲ್ಲಿ ಇಷ್ಟು ಬೃಹತ್ ಸಂಖ್ಯೆಯ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ, ಅವುಗಳನ್ನು ಮೌಲ್ಯಮಾಪನಕ್ಕೆ ಅಣಿಗೊಳಿಸುವುದು ಸವಾಲಿನ ಕೆಲಸ. ಅದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನೇ ಸಿಬಿಎಸ್ಇ ಕಲ್ಪಿಸಿರಲಿಲ್ಲ ಎನ್ನಲಾಗುತ್ತಿದೆ. ಈ ರೀತಿ ಮನಸೋಇಚ್ಛೆ ವರ್ತಿಸಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸಿಬಿಎಸ್ಇ ಚೆಲ್ಲಾಟವಾಡಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿವೆ.

ಹಲವು ವಿದ್ಯಾರ್ಥಿಗಳು ತಮಗೆ ಆದ ಅನ್ಯಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಪತ್ರಿಕೆಗಳ ಸಮೇತ ಉಲ್ಲೇಖಿಸುತ್ತಿದ್ದಾರೆ. ಜನರು ಸಿಬಿಎಸ್ಇ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಇದು ಕಾರಣವಾಗಿದೆ. ಸಿಬಿಎಸ್ಇ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯುವ ಶುಲ್ಕದಲ್ಲಿ ಹಲವು ಬಾರಿ ಬದಲಾವಣೆ ಮಾಡಿದೆ. ಜತೆಗೆ, ಅದರ ಗಡುವನ್ನೂ ವಿಸ್ತರಿಸಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಫಲಿತಾಂಶದಲ್ಲಿ ಕೆಲವು ವ್ಯತ್ಯಾಸಗಳಾಗಿರುವುದನ್ನು ಒಪ್ಪಿಕೊಂಡಿದ್ದು, ಅದರ ಹೊಣೆಯನ್ನು ತಾವೇ ಹೊರುವುದಾಗಿ ಹೇಳಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದೂ ಭರವಸೆ ನೀಡಿದ್ದಾರೆ. ದೇಶದ ಪ್ರಮುಖ ಪರೀಕ್ಷೆಗಳಲ್ಲಿ ಒಂದರ ನಂತರ ಒಂದು ಹಗರಣ ಹೊರಬೀಳುತ್ತಿವೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ ಈ ಹಗರಣ ನಡೆದಿದ್ದು, ಇವುಗಳಿಗೆ ಧರ್ಮೇಂದ್ರ ಪ್ರಧಾನ್ ಅವರೇ ಕಾರಣ, ಅವರು ರಾಜೀನಾಮೆ ನೀಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

ಏನಿದು ಒಎಸ್ಎಂ?

‘ಆನ್ ಸ್ಕ್ರೀನ್ ಮಾರ್ಕಿಂಗ್’ ಎಂಬುದರ ಸಂಕ್ಷಿಪ್ತ ರೂಪ ಒಎಸ್ಎಂ. ಉತ್ತರ ಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ಮೌಲ್ಯಮಾಪನ ಮಾಡುವ ವ್ಯವಸ್ಥೆ ಇದು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ, ಕಂಪ್ಯೂಟರ್ ಪರದೆಯ ಮೇಲೆ ಉತ್ತರ ಪತ್ರಿಕೆಯ ಪ್ರತಿ ಪುಟವನ್ನೂ ಪ್ರದರ್ಶಿಸಿ, ಶಿಕ್ಷಕರು ಉತ್ತರಗಳನ್ನು ಓದಿ ಮೌಲ್ಯಮಾಪನ ಮಾಡುವ ವ್ಯವಸ್ಥೆ.

‘ಇಲ್ಲಿಯವರೆಗೂ ಚಾಲ್ತಿಯಲ್ಲಿದ್ದ ಸಾಂಪ್ರದಾಯಿಕ ಉತ್ತರ ಮೌಲ್ಯಮಾಪನ ವ್ಯವಸ್ಥೆಗೂ ಹೊಸ ವ್ಯವಸ್ಥೆಗೂ ವ್ಯತ್ಯಾಸವಿಲ್ಲ. ಸಾಂಪ್ರದಾಯಿಕ ಪದ್ಧತಿಯಲ್ಲಿ ಶಿಕ್ಷಕರು ಉತ್ತರ ಪತ್ರಿಕೆಗಳನ್ನು ಕೈಯಲ್ಲಿ ಹಿಡಿದು, ಉತ್ತರಗಳನ್ನು ಓದಿ ಪೆನ್ನಿನಲ್ಲಿ ಅಂಕಗಳನ್ನು ಹಾಕಿದರೆ, ಡಿಜಿಟಲ್ ವ್ಯವಸ್ಥೆಯಲ್ಲಿ ಪರದೆಯ ಮೇಲೆ ಕಾಣುವ ಉತ್ತರಗಳನ್ನು ಓದಿ ಮೌಸ್ ಹಿಡಿದು ಅಂಕಗಳನ್ನು ನೀಡುತ್ತಾರೆ’ ಎಂದು ಸಿಬಿಎಸ್ಇ ಹೇಳಿದೆ.

ದತ್ತಾಂಶ ಸೋರಿಕೆ?

12ನೇ ತರಗತಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ದತ್ತಾಂಶ ಸೋರಿಕೆಯ ಆರೋಪವೂ ವ್ಯಕ್ತವಾಗಿದೆ. ನಿಸರ್ಗ ಅಧಿಕಾರಿ ಎನ್ನುವ ವಿದ್ಯಾರ್ಥಿಯು ತನ್ನನ್ನು ‘ನೈತಿಕ ಹ್ಯಾಕರ್’ ಎಂದು ಕರೆದುಕೊಂಡಿದ್ದು, ತಾನು ಮಾಸ್ಟರ್ ಪಾಸ್ವರ್ಡ್ ಅನ್ನು ಭೇದಿಸಿ, ಪರೀಕ್ಷಾ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದಾಗಿ ಪ್ರತಿಪಾದಿಸಿದ್ದಾನೆ. ಈ ಮೂಲಕ ವಿದ್ಯಾರ್ಥಿಗಳ ದಾಖಲೆಗಳು, ಉತ್ತರ ಪತ್ರಿಕೆಗಳು, ಮೌಲ್ಯಮಾಪಕರ ಖಾತೆಗಳಿಗೆ ಪ್ರವೇಶ ಪಡೆದಿದ್ದಾಗಿ ತಿಳಿಸಿದ್ದಾನೆ. ಪೋರ್ಟಲ್ನ ರಕ್ಷಣಾ ವ್ಯವಸ್ಥೆಯಲ್ಲಿ ಸುರಕ್ಷತೆಯ ಲೋಪ ಇದೆ ಎಂದಿರುವ ನಿಸರ್ಗ ಅಧಿಕಾರಿ, ಈ ರೀತಿ ಹ್ಯಾಕ್ ಮಾಡಿ ಉತ್ತರ ಪತ್ರಿಕೆ, ಅಂಕಗಳನ್ನು ಬದಲಾಯಿಸಬಹುದಾಗಿದೆ, ಫೋನ್ ನಂಬರ್, ಬ್ಯಾಂಕ್ ಖಾತೆಗಳನ್ನು ತಿಳಿಯಬಹುದಾಗಿದೆ ಎಂದು ಹೇಳಿದ್ದಾನೆ. ಆದರೆ, ಅದು ಪ್ರಯೋಗಾರ್ಥವಾಗಿ ರೂಪಿಸಿದ್ದ ವೆಬ್ಸೈಟ್ ಎಂದು ಸಿಬಿಎಸ್ಇ ಸಮಜಾಯಿಷಿ ನೀಡಿದೆ.

ವಿದ್ಯಾರ್ಥಿಗಳಿಂದ ಬಯಲು

ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿದ್ದ ಲೋಪಗಳನ್ನು ಬಯಲಿಗೆಳೆದಿದ್ದೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು. ಮೇ 13 ರಂದು ಸಿಬಿಎಸ್ಐ 12ನೇ ತರಗತಿ ಫಲಿತಾಂಶ ಪ್ರಕಟವಾಗಿತ್ತು. ಉತ್ತಮ ಅಂಕ ನಿರೀಕ್ಷೆ ಮಾಡಿದ್ದ ಹಲವು ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬಂದಿದ್ದವು. ಮರುಮೌಲ್ಯಮಾಪನ ನಡೆಸಲು ಮತ್ತು ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳ ಪ್ರತಿಗಳಿಗಾಗಿ ಆನ್ಲೈನ್ ಅರ್ಜಿ ಸಲ್ಲಿಸಿದ್ದರು. ಸಿಬಿಎಸ್ಇ ಉತ್ತರ ಪ್ರತಿಗಳ ಡಿಜಿಟಲ್ ಪ್ರತಿಗಳನ್ನು ಕಳುಹಿಸಿದಾಗ ವಿದ್ಯಾರ್ಥಿಗಳಿಗೆ ಅಚ್ಚರಿ ಕಾದಿತ್ತು. ಕೆಲವರ ಉತ್ತರ ಪತ್ರಿಕೆಗಳೇ ಬದಲಾಗಿದ್ದವು.

ವೇದಾಂತ್ ಎಂಬ ವಿದ್ಯಾರ್ಥಿ ಮೇ 23ರಂದು ‘ಎಕ್ಸ್’ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ‘ಭೌತವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕಗಳು ಬಂದಿದ್ದರಿಂದ, ನನ್ನ ಉತ್ತರ ಪತ್ರಿಕೆಗಳ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದೆ. ಪ್ರತಿಗಳು ಸಿಕ್ಕಿದಾಗ ನನಗೆ ಆಘಾತವಾಗಿತ್ತು. ಸಿಬಿಎಸ್ಐ ಅಪ್ಲೋಡ್ ಮಾಡಿರುವ ಗಣಿತವಿಜ್ಞಾನದ ಉತ್ತರ ಪತ್ರಿಕೆಗಳು ನನ್ನದಲ್ಲ’ ಎಂದು ಅವರು ಹೇಳಿದ್ದರು.

ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳು ಮಸುಕಾಗಿರುವುದು, ಮೂಲ ಉತ್ತರ ಪತ್ರಿಕೆಗಳಿಗೂ ಅದರ ಸ್ಕ್ಯಾನ್ ಮಾಡಿದ ಪ್ರತಿಗಳಿಗೂ ಹೊಂದಾಣಿಕೆ ಇಲ್ಲದಿರುವುದು ಸೇರಿದಂತೆ ಹಲವು ಲೋಪಗಳು ಆಗಿರುವುದು ಬಯಲಾಗಿದೆ. ಇಂತಹ ಕನಿಷ್ಠ 20 ಪ್ರಕರಣಗಳು ವರದಿಯಾಗಿವೆ.

ವಿವಾದಿತ ಕಂಪನಿಗೆ ಟೆಂಡರ್

ಸಿಬಿಎಸ್ಇಗೆ ಈ ಒಎಸ್ಎಂ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಟ್ಟಿದ್ದು ಹೈದರಾಬಾದ್ನ ಕೋಎಂಪ್ಟ್ ಎಜು ಟೆಕ್ ಪ್ರೈ ಲಿ. ಎಂಬ ಕಂಪನಿ. ಇದರ ಮೊದಲ ಹೆಸರು ಗ್ಲೋಬರೇನಾ ಟೆಕ್ನಾಲಜೀಸ್. ತೆಲಂಗಾಣದಲ್ಲಿ 2019ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ವಿವಾದದಲ್ಲಿ ಈ ಕಂಪನಿಯ ಹೆಸರು ತಳಕುಹಾಕಿಕೊಂಡಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಫಲಿತಾಂಶದಲ್ಲಿ ಹಲವು ಲೋಪಗಳು ಕಂಡು ಬಂದಿದ್ದವು. 23 ವಿದ್ಯಾರ್ಥಿಗಳು ಆಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದೇ ಕಂಪನಿ ಈಗ ಹೆಸರು ಬದಲಿಸಿಕೊಂಡಿದ್ದು, ಸಿಬಿಎಸ್ಇ ಅದಕ್ಕೆ ಒಎಸ್ಎಂ ಅಭಿವೃದ್ಧಿಪಡಿಸುವ ಟೆಂಡರ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಮುಖಂಡರು ಕೇಂದ್ರ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿದ್ದಾರೆ.

ಕಂಪನಿಯ ಹೆಸರು ಬದಲಿಸಿರುವುದನ್ನು ಅದರ ಸಿಇಒ ವಿಎಸ್ಎನ್ ರಾಜು ಒಪ್ಪಿಕೊಂಡಿದ್ದಾರೆ. ಬ್ರ್ಯಾಂಡಿಂಗ್ ಉದ್ದೇಶಕ್ಕಾಗಿ ಹೆಸರು ಬದಲಿಸಿರುವುದಾಗಿ ಕಂಪನಿ ಹೇಳಿದೆ.

ಈ ಕಂಪನಿಗೆ 2025ರ ಡಿಸೆಂಬರ್ 5ರಂದು ಒಎಸ್ಎಂ ಅಭಿವೃದ್ಧಿ ಪಡಿಸುವ ಟೆಂಡರ್ ಅನ್ನು ಸಿಬಿಎಸ್ಇ ನೀಡಿತ್ತು. ಆದರೆ, ಈ ವರ್ಷ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಅಳವಡಿಸಿಕೊಳ್ಳುವುದಾಗಿ 2026ರ ಫೆ. 9ರಂದು ಘೋಷಿಸಿತ್ತು.

ಈ ಕಂಪನಿಗೆ ಟೆಂಡರ್ ನೀಡುವುದಕ್ಕಾಗಿ ಸಿಬಿಎಸ್ಇ ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಿದೆ ಎಂಬ ಆರೋಪವೂ ವ್ಯಕ್ತವಾಗಿದೆ. ಸಾರ್ಥಕ್ ಸಿಧಾಂತ್ ಎಂಬ ವಿದ್ಯಾರ್ಥಿ ಈ ಬಗ್ಗೆ ವಿಸ್ತೃತ ಲೇಖನವನ್ನು ತನ್ನ ಬ್ಲಾಗ್ನಲ್ಲಿ ಬರೆದುಕೊಂಡಿದ್ದು, ಅದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಆರೋಪಗಳನ್ನು ಸಿಬಿಎಸ್ಇ ಅಲ್ಲಗಳೆದಿದ್ದು, ನಿಯಮಗಳ ಪ್ರಕಾರ ಕಡಿಮೆ ಮೊತ್ತ ಬಿಡ್ ಮಾಡಿದ ಕಂಪನಿಗೆ ಟೆಂಡರ್ ನೀಡಲಾಗಿದೆ ಎಂದು ಹೇಳಿದೆ.

ಕಂಪನಿಯ ಮೇಲೆ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಅದರ ಸಿಇಒ ರಾಜು, ‘ಇಡೀ ವ್ಯವಸ್ಥೆಯಲ್ಲಿ ದೋಷ ಇಲ್ಲ. ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡುವಾಗ ಮಾತ್ರ ಲೋಪವಾಗಿದೆ’ ಎಂದು ಹೇಳಿದ್ದಾರೆ.

ಈ ಕಂಪನಿಯೊಂದಿಗೆ ಇನ್ಫೊಸಿಸ್ ಸಹ ಸಂಸ್ಥಾಪಕ, ಉದ್ಯಮಿ ಮೋಹನ್ದಾಸ್ ಪೈ ಅವರಿಗೆ ನಂಟು ಇದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ತಳ್ಳಿಹಾಕಿರುವ ಅವರು, ತಮಗೂ ಕೊಎಮ್ಟ್ ಎಜು ಟೆಕ್ ಕಂಪನಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಜಾರಿಯಲ್ಲಿದೆ ವ್ಯವಸ್ಥೆ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2016ರಿಂದ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2011ರಿಂದ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ಮಾಡಿಸುತ್ತಿವೆ.

ರಾಜೀವ್ ಗಾಂಧಿ ವಿವಿಯು ವೈದ್ಯಕೀಯ, ದಂತವೈದ್ಯಕೀಯ, ಅಲೈಡ್ಹೆಲ್ತ್ ಸೈನ್ಸಸ್, ಅರೆ ವೈದ್ಯಕೀಯ ಡಿಪ್ಲೊಮಾ ಕೋರ್ಸ್ಗಳಿಗೆ ನಡೆಸುವ ಎಲ್ಲ ಪರೀಕ್ಷೆಗಳಲ್ಲೂ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಂಡಿದೆ. 2016ರಲ್ಲಿ ಅತ್ಯಂತ ಕಡಿಮೆ ಇದ್ದ ಕೋರ್ಸ್ಗಳ ಸುಮಾರು 5 ಲಕ್ಷ ಬುಕ್ಲೆಟ್ಗಳನ್ನು ಡಿಜಿಟಲ್ ಮೌಲ್ಯಮಾಪನ ಮಾಡಲಾಗಿತ್ತು. ಹಲವು ಸುಧಾರಣಾ ಕ್ರಮಗಳ ಮೂಲಕ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದ್ದು, ಪ್ರಸ್ತುತ ಎಲ್ಲ ಕೋರ್ಸ್ಗಳ 25 ಲಕ್ಷಕ್ಕೂ ಹೆಚ್ಚು ಉತ್ತರಪತ್ರಿಕೆಗಳ ಬುಕ್ಲೆಟ್ಗಳನ್ನು ಡಿಜಿಟಲ್ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ.

‘ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಪರೀಕ್ಷೆ ನಡೆದ ಅರ್ಧ ಗಂಟೆಯ ಒಳಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಉತ್ತರಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಮೌಲ್ಯಮಾಪಕರು ಮುಖಚರ್ಯೆ ನೀಡಿದ ನಂತರವೇ ಮೌಲ್ಯಮಾಪನಕ್ಕೆ ವ್ಯವಸ್ಥೆ ತೆರೆದುಕೊಳ್ಳುತ್ತದೆ. ವಂಚನೆಗೆ ಅವಕಾಶವೇ ಇರುವುದಿಲ್ಲ’ ಎಂದು ವಿವಿ ಕುಲಪತಿ ಡಾ.ಬಿ.ಸಿ.ಭಗವಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಟಿಯು ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ಮಾಡಿ ಕಂಪ್ಯೂಟರ್ ಮೂಲಕ ಮೌಲ್ಯಮಾಪನ ಮಾಡುವ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು 15 ವರ್ಷಗಳ ಹಿಂದೆಯೇ ಅಳವಡಿಸಿಕೊಂಡಿದೆ. ಪ್ರತಿ ಸೆಮಿಸ್ಟರ್ಗೆ 2 ಲಕ್ಷ ಬುಕ್ಲೆಟ್ಗಳನ್ನು ಈ ವಿಧಾನದಲ್ಲಿ ಮೌಲ್ಯಮಾಪನ ಮಾಡಲಾಗುತ್ತಿದೆ. ಈ ತಂತ್ರಜ್ಞಾನದಿಂದಾಗಿ ಪರೀಕ್ಷಾ ಫಲಿತಾಂಶಗಳು ವೇಗವಾಗಿ ಪ್ರಕಟಗೊಳ್ಳುತ್ತಿವೆ.

ಆಧಾರ: ಪಿಟಿಐ, ಸಿಬಿಎಸ್ಇ ವೆಬ್ಸೈಟ್, ಬಿಬಿಸಿ, ‘ಎಕ್ಸ್’ ಪೋಸ್ಟ್ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.