ಅಮೆರಿಕ–ಇಸ್ರೇಲ್ ಜೊತೆಯಾಗಿ ಇರಾನ್ ವಿರುದ್ಧ ಸಾರಿರುವ ಯುದ್ಧದಿಂದಾಗಿ ಭಾರತದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪೂರೈಕೆ ವ್ಯವಸ್ಥೆಯಲ್ಲಿ ಗೊಂದಲ ಮೂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆಯಿಂದ ಹಲವು ಹೋಟೆಲ್‌ಗಳು ಬಂದ್ ಆಗಿವೆ. ರಸಗೊಬ್ಬರ ತಯಾರಿಕಾ ಘಟಕಗಳು ಸ್ಥಗಿತಗೊಂಡಿವೆ. ಸ್ಮಶಾನಗಳಲ್ಲಿ ಶವದಹನಕ್ಕೂ ಅಡ್ಡಿಯುಂಟಾಗಿದೆ. ಭಾರತವು ಎಲ್‌ಪಿಜಿ ಮತ್ತು ಎನ್‌ಎನ್‌ಜಿಗಾಗಿ ಪಶ್ಚಿಮ ಏಷ್ಯಾ ರಾಷ್ಟ್ರಗಳನ್ನೇ ಹೆಚ್ಚಾಗಿ ಅವಲಂಬಿಸಿರುವುದು ಮತ್ತು ಅದರ ದಾಸ್ತಾನಿಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಭಾರತಕ್ಕೆ ಸಂಕಷ್ಟ ತಂದೊಡ್ಡಿದೆ. ಎರಡು ವಾರಗಳಿಂದ ನಡೆಯುತ್ತಿರುವ ಯುದ್ಧವು ಇಂಧನ ಭದ್ರತೆ ವಿಚಾರದಲ್ಲಿ ಭಾರತದ ದೌರ್ಬಲ್ಯವನ್ನು ಬಹಿರಂಗಪಡಿಸಿದೆ. ದೇಶದ ಆರ್ಥಿಕತೆಗೂ ಇದರಿಂದ ಪೆಟ್ಟು ಬೀಳುವ ಸಂಭವ ಇದೆ. ಕೇಂದ್ರ ಸರ್ಕಾರವು ಪರ್ಯಾಯ ಇಂಧನಗಳ ಬಗ್ಗೆ ಯೋಚಿಸುವ ಸಮಯ ಇದಾಗಿದೆ.