ಕರ್ನಾಟಕ ಸರ್ಕಾರದ ಉಚಿತ ವಿದ್ಯುತ್ ಯೋಜನೆ ಈಗ ಚರ್ಚೆಯಲ್ಲಿದೆ. ಕೆಲವರು ಈ ಯೋಜನೆಯನ್ನು ಸ್ವಾಗತಿಸಿದ್ದರೆ, ಕೆಲವರು ವಿರೋಧಿಸುತ್ತಿದ್ದಾರೆ. ಮನೆ ಬಳಕೆ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲಲ್ಲ. ಇನ್ನೂ ನಾಲ್ಕು ರಾಜ್ಯಗಳಲ್ಲಿ ಮತ್ತು ದೆಹಲಿಯಲ್ಲಿ ಇಂತಹ ಯೋಜನೆ ಈಗಾಗಲೇ ಜಾರಿಯಲ್ಲಿದೆ
ಮನೆ ಬಳಕೆ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುವಂತಹ ಪರಿಕಲ್ಪನೆಯನ್ನು ದೇಶದಲ್ಲಿ ಮೊದಲು ಪ್ರತಿಪಾದಿಸಿದ್ದು ಎಎಪಿ. ದೆಹಲಿಯಲ್ಲಿ 2013ರಲ್ಲಿ ಸರ್ಕಾರ ರಚಿಸಿದ್ದಾಗಲೇ ಅಂತಹ ಯೋಜನೆಯನ್ನು ಎಎಪಿ ಘೋಷಿಸಿತ್ತು. ಆದರೆ, ಸರ್ಕಾರ ಪತನವಾದ ಕಾರಣ ಯೋಜನೆಯೂ ಸ್ಥಗಿತವಾಗಿತ್ತು. ನಂತರ ಸರ್ಕಾರ ರಚಿಸಿದಾಗ ಆ ಯೋಜನೆಯನ್ನು ಎಎಪಿ ಜಾರಿಗೆ ತಂದಿತು ಮತ್ತು ಈವರೆಗೆ ಆ ಯೋಜನೆಯಲ್ಲಿ ಹಲವು ಬದಲಾವಣೆ ತಂದಿದೆ. ಆದರೆ, ಉಚಿತ ವಿದ್ಯುತ್ ಕೊಡುಗೆ ಎನ್ನುವುದು ಈಗ ಚುನಾವಣಾ ವಿಷಯವಾಗಿದೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ತಿಂಗಳಿಗೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದು ಘೋಷಿಸಿದ್ದ ಎಎಪಿ, ಸರ್ಕಾರ ರಚನೆ ನಂತರ ಅದನ್ನು ಜಾರಿಗೆ ತಂದಿತು. ಛತ್ತೀಸಗಡದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಸರ್ಕಾರ 2019ರಿಂದಲೇ ಅಂತಹ ಯೋಜನೆಯನ್ನು ಆರಂಭಿಸಿದೆ. ಉಚಿತ ಕೊಡುಗೆಗಳನ್ನು ವಿರೋಧಿಸುವ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿ ಇದ್ದಾಗ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೆ ತಂದಿತ್ತು. ಅಲ್ಲಿನ ಇಂದಿನ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಮುಂದುವರಿಸಿದೆ.
ಉಚಿತ ವಿದ್ಯುತ್ ‘ಗ್ಯಾರೆಂಟಿ’ ನೀಡಿದ್ದ ಕಾಂಗ್ರೆಸ್, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರ, ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದೆ. ರಾಜಸ್ಥಾನ ಸರ್ಕಾರ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದೆ. ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್, ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ಯೋಜನೆ ಜಾರಿಗೆ ತರುತ್ತೇವೆ ಎಂದು ಭರವಸೆ ಕೊಟ್ಟಿದೆ.
ದೆಹಲಿ, ಛತ್ತೀಸಗಡ ಮತ್ತು ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಯೋಜನೆ ಜಾರಿಯಲ್ಲಿದೆ. ಉಚಿತ ವಿದ್ಯುತ್ ಯೋಜನೆಯ ವೆಚ್ಚವನ್ನು ಸರ್ಕಾರಗಳೇ ಭರಿಸುತ್ತಿವೆ. ಆದರೆ, ಯೋಜನೆಯಿಂದ ಆಗಿರುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳೇನು ಎಂಬುದರ ಬಗ್ಗೆ ಎಲ್ಲಿಯೂ ಅಧ್ಯಯನ ನಡೆದಿಲ್ಲ. ಪಂಜಾಬ್‌ನಲ್ಲಿ ಈ ಯೋಜನೆಯ ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ವರದಿಯಷ್ಟೇ ಲಭ್ಯವಿದೆ. ಇದರಿಂದ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.
ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಫಲಾನುಭವಿಗಳಿಗೆ ಆಗುತ್ತಿರುವ ಪ್ರಯೋಜನವೇನು? ಉಚಿತ ವಿದ್ಯುತ್ ನೀಡಿದ್ದರಿಂದ ವಿದ್ಯುತ್ ಬಳಕೆಯಲ್ಲಿ ಏರಿಕೆಯಾಗಿದೆಯೇ? ಇದರಿಂದ ರಾಜ್ಯ ಸರ್ಕಾರಗಳಿಗೆ ಮತ್ತಷ್ಟು ಹೊರೆಯಾಗುತ್ತಿದೆಯೇ? ಅಂತಹ ಹೊರೆಯನ್ನು ತಗ್ಗಿಸಲು ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಂಡಿವೆಯೇ ಎಂಬುದರ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ. ಈ ಹೊರೆಯನ್ನು ಭರಿಸಲು ರಾಜ್ಯ ಸರ್ಕಾರಗಳು ಮಾಡಿಕೊಂಡಿರುವ ವ್ಯವಸ್ಥೆ ಏನು ಎಂಬುದರ ಮಾಹಿತಿಯೂ ಲಭ್ಯವಿಲ್ಲ. ಆದರೆ, ಇಂತಹ ಹೊರೆಯನ್ನು ತಗ್ಗಿಸುವ ಸಲುವಾಗಿ ದೆಹಲಿ ಸರ್ಕಾರ ಮಾತ್ರ ಉಚಿತ ವಿದ್ಯುತ್ ಯೋಜನೆಯ ಷರತ್ತುಗಳನ್ನು ಕಠಿಣಗೊಳಿಸುತ್ತಾ ಬಂದಿದೆ.
ಆಧಾರ: ಆಯಾ ರಾಜ್ಯ ಸರ್ಕಾರಗಳ ರಾಜ್ಯಪತ್ರಗಳು, ಅಧಿಸೂಚನೆಗಳು, ಪಿಟಿಐ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.