ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲದಲ್ಲಿ ಜುಲೈ 30ರ ನಸುಕಿನಲ್ಲಿ ಸಂಭವಿಸಿದ ಭಾರಿ ಭೂಕುಸಿತಕ್ಕೆ ದಿನದ ಅವಧಿಯಲ್ಲಿ ಸುರಿದ ಭಾರಿ ಮಳೆ ಕಾರಣ. ಅಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರ ಹಿಂದೆ ಹವಾಮಾನ ಬದಲಾವಣೆ ಇದೆ. ಮಾನವ ಹಸ್ತಕ್ಷೇಪದಿಂದ ನಡೆಯುತ್ತಿರುವ ಈ ವಿದ್ಯಮಾನದಿಂದಾಗಿ ಜುಲೈ 29ರಂದು ವಯನಾಡ್‌ನಲ್ಲಿ ಮಳೆಯ ತೀವ್ರತೆ ಶೇ 10ರಷ್ಟು ಹೆಚ್ಚಾಗಿತ್ತು ಎಂದು ಅಂತರರಾಷ್ಟ್ರೀಯ ತಜ್ಞರ ತಂಡವೊಂದು ಪ್ರತಿಪಾದಿಸಿದೆ.
ವಯನಾಡ್ ದುರಂತದ ಬಗ್ಗೆ ಅಧ್ಯಯನ ನಡೆಸಿರುವ ವರ್ಲ್ಡ್ ವೆದರ್ ಆಟ್ರಿಬ್ಯೂಷನ್‌ನ (ಡಬ್ಲ್ಯುಡಬ್ಲ್ಯುಎ) ತಜ್ಞರು, ‘ಸಡಿಲ ಮತ್ತು ಬಹುಬೇಗ ಸವೆಯುವ ಗುಣಲಕ್ಷಣಗಳ ಮಣ್ಣನ್ನು ಹೊಂದಿರುವ, ಬೆಟ್ಟಗುಡ್ಡಗಳಿಂದ ಆವೃತವಾದ ಜಿಲ್ಲೆಯಲ್ಲಿ ಆ ದಿನ 14 ಸೆಂ.ಮೀ ಮಳೆಯಾಗಿತ್ತು’ ಎಂದು ಹೇಳಿದ್ದಾರೆ.
ಭಾರತದ ಆರು ಮಂದಿ ಸೇರಿದಂತೆ ಸ್ವೀಡನ್, ಬ್ರಿಟನ್‌ನ 10 ಮಂದಿ ತಜ್ಞರು, ಭಾರತೀಯ ಹವಾಮಾನ ಇಲಾಖೆಯ ಮಳೆ ಪ್ರಮಾಣದ ದತ್ತಾಂಶಗಳನ್ನು ವಿವಿಧ ಮಾದರಿಗಳಲ್ಲಿ ವಿಶ್ಲೇಷಿಸಿ ವರದಿಯನ್ನು ಸಿದ್ಧಪಡಿಸಿದ್ದಾರೆ. ಕೇರಳದಲ್ಲಿ ಈ ಹಿಂದೆ ಸಂಭವಿಸಿದ್ದ ನೆರೆ (1924, 2018), ಭೂಕುಸಿತಕ್ಕೆ (2019) ಸಂಬಂಧಿಸಿದ ಅಧ್ಯಯನ ವರದಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಈ ಅಧ್ಯಯನ ವರದಿಯಲ್ಲಿ ಅವುಗಳನ್ನು
ಉಲ್ಲೇಖಿಸಿದ್ದಾರೆ.
ವಯನಾಡ್‌ನ ಭೌಗೋಳಿಕ ಪ್ರದೇಶ, ಅಲ್ಲಿನ ವಾತಾವರಣ, ಮಳೆಯ ಪ್ರಮಾಣ, ಭೂಬಳಕೆ, ಭೂ ಮೇಲ್ಮೈ ಸ್ವರೂಪದಲ್ಲಿ ಆಗಿರುವ ಬದಲಾವಣೆ, ಭೂಕುಸಿತ ಅಪಾಯವನ್ನು ಎಚ್ಚರಿಸುವ ವ್ಯವಸ್ಥೆಯ ಕೊರತೆ ಸೇರಿದಂತೆ ಹಲವು ವಿಚಾರಗಳನ್ನು ತಜ್ಞರು ಪ್ರಸ್ತಾಪಿಸಿದ್ದಾರೆ.
ಕೈಗಾರಿಕೀಕರಣ ಆರಂಭದ ಅವಧಿಗೆ ಹೋಲಿಸಿದರೆ ಈಗ ವಾತಾವರಣದ ತಾಪಮಾನ 1.3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಹೀಗಿರುವಾಗ ಇಷ್ಟು ದೊಡ್ಡ ಪ್ರಮಾಣದ ದುರ್ಘಟನೆಯು ಪ್ರತಿ 50 ವರ್ಷಗಳಿಗೊಮ್ಮೆ ಉಂಟಾಗಬಹುದು. ಕೇರಳದಲ್ಲಿ 2019 ಮತ್ತು 1924ರ ಬಳಿಕ ಒಂದು ದಿನದಲ್ಲಿ ಅತಿ ಹೆಚ್ಚು ಮಳೆ ಸುರಿದ ಮೂರನೇ ಪ್ರಕರಣ ಇದು. ಆ ಎರಡು ವರ್ಷ 24 ಗಂಟೆಗಳ ಅವಧಿಯಲ್ಲಿ ಈ ಬಾರಿಗಿಂತ ಹೆಚ್ಚು ಮಳೆ ಬಿದ್ದಿತ್ತು. 2018ರ ಪ್ರವಾಹದ ಸಂದರ್ಭದಲ್ಲೂ ಒಂದು ದಿನದಲ್ಲಿ ಈ ಸಲದಂತೆ ಮಳೆಯಾಗಿರಲಿಲ್ಲ.
ಒಂದು ದಿನದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು 45 ವರ್ಷಗಳಲ್ಲಿ ಶೇ 17ರಷ್ಟು ಜಾಸ್ತಿಯಾಗಿದೆ. ಈ ಅವಧಿಯಲ್ಲಿ ವಾತಾವರಣವು 0.85 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಾಗಿದೆ
ಭವಿಷ್ಯದಲ್ಲಿ ವಾತಾವರಣದ ಉಷ್ಣತೆಯು ಕೈಗಾರಿಕೀಕರಣಕ್ಕೂ ಮೊದಲು ಇದ್ದುದಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಸ್ತಿಯಾದರೆ, ಒಂದೇ ದಿನ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಂದರ್ಭಗಳು ಇನ್ನಷ್ಟು ಹೆಚ್ಚಾಗಲಿವೆ. ಇಂತಹ ಸಂದರ್ಭದಲ್ಲಿ ಮಳೆಯ ತೀವ್ರತೆ ಶೇ 4ರಷ್ಟು ಜಾಸ್ತಿಯಾಗಬಹುದು
ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಮತ್ತು ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಸಮರ್ಪಕವಾಗಿ ನೀಡುತ್ತಿದೆ. ಆದರೆ, ಆ ಮಾಹಿತಿಗಳು ರಾಜ್ಯ ಮಟ್ಟಕ್ಕೆ ಸೀಮಿತವಾಗಿದೆ. ಹೀಗಾಗಿ, ಮಳೆಯಿಂದಾಗಿ ಸ್ಥಳೀಯವಾಗಿ ಯಾವ ಪ್ರದೇಶದ ಮೇಲೆ ಪರಿಣಾಮವಾಗಲಿದೆ ಮತ್ತು ಎಲ್ಲೆಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತಿದೆ. ಭೂಕುಸಿತ ಮುನ್ಸೂಚನಾ ವ್ಯವಸ್ಥೆ ದುಬಾರಿಯಾಗಿದ್ದು, ಅದರ ಅನುಷ್ಠಾನವೂ ಕಷ್ಟ. ಆದರೆ, ವ್ಯವಸ್ಥೆ ಜಾರಿಗೆ ತಂದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ ಭೂಕುಸಿತ ಸಾಧ್ಯತೆ ಇರುವ ಪ್ರದೇಶದಲ್ಲಿ ಜನರು ವಾಸಿಸುವುದಕ್ಕೆ ಹಾಗೂ ಆಸ್ತಿ ಹೊಂದುವುದಕ್ಕೆ ನಿಯಂತ್ರಣ ಹೇರುವುದರಿಂದ ಸಾವು ನೋವು, ಆಸ್ತಿ ಹಾನಿಯನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು
ವಯನಾಡ್‌ನಲ್ಲಿ ಭೂ ಬಳಕೆ ಮತ್ತು ಭೂ ಮೇಲ್ಮೈನ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳಿಗೂ ಭೂಕುಸಿತಕ್ಕೂ ಸಂಬಂಧ ಇರುವುದರ ಬಗ್ಗೆ ಈಗ ನಡೆದಿರುವ ಸೀಮಿತ ಅಧ್ಯಯನಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಆದರೆ, ಕ್ವಾರಿಗಳ ಕಾರ್ಯಾಚರಣೆ, ಶೇ 62ರಷ್ಟು ಆಗಿರುವ ಅರಣ್ಯ ನಾಶವು ಭಾರಿ ಮಳೆಯಾದ ಸಂದರ್ಭದಲ್ಲಿ ಗುಡ್ಡದ ಇಳಿಜಾರು ಕುಸಿಯುವ ಅಪಾಯವನ್ನು ಹೆಚ್ಚಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ
ಹವಾಮಾನ ಬದಲಾವಣೆಯಿಂದಾಗಿ ಆಗುತ್ತಿರುವ ಭಾರಿ ಮಳೆಯು ಭವಿಷ್ಯದಲ್ಲಿ ಇನ್ನಷ್ಟು ಭೂಕುಸಿತಗಳಿಗೆ ಕಾರಣವಾಗುವ ಅಪಾಯ ಇದೆ. ಹೀಗಾಗಿ ಕುಸಿತದ ಅಪಾಯ ಇರುವ ಇಳಿಜಾರುಗಳಲ್ಲಿ ಗಿಡ ಮರಗಳನ್ನು ನೆಟ್ಟು ಪೋಷಿಸುವುದು, ರಕ್ಷಿತಾರಣ್ಯಗಳ ಸಂರಕ್ಷಣೆ, ಭೂಕುಸಿತ ಮುನ್ಸೂಚನಾ ವ್ಯವಸ್ಥೆ ಅಭಿವೃದ್ಧಿ ಸಮರ್ಪಕ ನೀರು ಹರಿಯುವ ವ್ಯವಸ್ಥೆ ರೂಪಿಸುವುದು, ಮಣ್ಣು ಕುಸಿಯುವ ಸಾಧ್ಯತೆ ಇರುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.