ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಭವ ಮಂಟಪ: ಮೀಸಲಾತಿಯ ಕ್ರಮಬದ್ಧ ವಿಕೇಂದ್ರೀಕರಣ

–ಸಂತೋಷ್ ಕೋಡಿಹಳ್ಳಿ
Published : 24 ಸೆಪ್ಟೆಂಬರ್ 2024, 19:08 IST
Last Updated : 24 ಸೆಪ್ಟೆಂಬರ್ 2024, 19:08 IST
ಫಾಲೋ ಮಾಡಿ
Comments

ಶೋಷಿತರೊಳಗಿನ ಶೋಷಿತರಿಗೆ, ಅಸ್ಪೃಶ್ಯರೆಂಬ ಹಣೆಪಟ್ಟಿ ಹೊತ್ತವರೊಳಗಿನ ಅಸ್ಪೃಶ್ಯರಿಗೆ; ಪರಿಶಿಷ್ಟರಿಂದಲೇ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಶೋಷಣೆಗೀಡಾಗುತ್ತಾ ಅಗೋಚರ ಅಸ್ಪೃಶ್ಯತೆಗೆ ಒಳಗಾದವರ ಅಭ್ಯುದಯಕ್ಕಾಗಿ ವರ್ಗೀಕರಣ ಮಾಡಿ ನೀಡಲಾಗುವ ಮೀಸಲಾತಿಯನ್ನು ಒಳಮೀಸಲಾತಿಯೆಂದು ಸ್ಥೂಲವಾಗಿ ಅರ್ಥೈಸಿಕೊಳ್ಳಬಹುದು. ಸಾವಿರಾರು ಜಾತಿಗಳನ್ನು ಕೇಂದ್ರೀಕರಿಸಿ ಒಟ್ಟುಗೂಡಿಸಿರುವ ಮೀಸಲಾತಿಯನ್ನು ಕ್ರಮಬದ್ಧವಾಗಿ ವಿಕೇಂದ್ರೀಕರಿಸುವ ಸಾಂವಿಧಾನಿಕ ತತ್ವ ಮತ್ತು ಆಶಯವೇ ಒಳಮೀಸಲಾತಿ. 

1950ರಿಂದಲೂ ಪರಿಶಿಷ್ಟ ಜಾತಿಗಳ 1,241 ಗುಂಪುಗಳು, ಪರಿಶಿಷ್ಟ ವರ್ಗಗಳ 705 ಗುಂಪುಗಳಿಗೆ ಕೊಡಮಾಡಲಾಗಿರುವ ಪರಿಶಿಷ್ಟರ ಮೀಸಲಾತಿಯು ಕೇಂದ್ರೀಕೃತ ಸ್ಥಿತಿಯಲ್ಲಿಯೇ ಉಳಿದುಹೋಗಿದೆ. ಕೇಂದ್ರೀಕೃತ ಮೀಸಲಾತಿಯನ್ನು ಕೆಲವೇ ಕೆಲವು ಉಪಜಾತಿಗಳು ಎಂಟು ದಶಕಗಳಿಂದ ಮುಫತ್ತಾಗಿ ದಕ್ಕಿಸಿಕೊಂಡು ಎಲ್ಲ ರಂಗಗಳಲ್ಲಿಯೂ ಮೇಲೆ ಬಂದಿವೆ.  

ಸ್ವಾತಂತ್ರ್ಯಪೂರ್ವದಲ್ಲಿ ರಾಜಪ್ರಭುತ್ವ ಹಾಗೂ ಬ್ರಿಟಿಷ್ ಪ್ರಭುತ್ವಗಳಿಗೆ ನಿಕಟವಾಗಿದ್ದ ಹಾಗೂ ಸ್ವಾತಂತ್ರ್ಯ ನಂತರದ ಸರ್ಕಾರಗಳಿಗೂ ಹತ್ತಿರವಾಗಿದ್ದ ಉಪಜಾತಿಗಳಲ್ಲಿನ ಮೊದಲೆರಡು ತಲೆಮಾರುಗಳು ಮೀಸಲಾತಿ ಸವಲತ್ತನ್ನು ಪಡೆದು ಮುಖ್ಯವಾಹಿನಿಯಲ್ಲಿ ಭದ್ರವಾಗಿ ಹೆಜ್ಜೆಯೂರಿವೆ. ಅಸಮಾನತೆಯ ಕೂಪವಾದ ಜಾತಿ ವ್ಯವಸ್ಥೆಯ ಶ್ರೇಣಿಗಳಲ್ಲಿ ಸಾಮಾಜಿಕ-ಸಾಂಸ್ಕೃತಿಕ ಕೀಳರಿಮೆಗಳನ್ನು ತಕ್ಕಮಟ್ಟಿಗೆ ಗೆದ್ದು ತಮ್ಮನ್ನು ಮೇಲುಸ್ತರದಲ್ಲಿಟ್ಟುಕೊಂಡು ಉಳಿದ ಶೋಷಿತರಿಂದ ಎಲ್ಲ ಬಗೆಯ ಅಂತರ ಕಾಯ್ದುಕೊಂಡಿವೆ. ವಿಪರ್ಯಾಸವೆಂದರೆ, ಮೇಲಿನ ಎಲ್ಲ ಅಂಶಗಳಿಗೆ ತದ್ವಿರುದ್ಧವಾಗಿ ದೇಶದಾದ್ಯಂತ ಉಳಿದುಹೋಗಿರುವ ನೂರಾರು ಮೀಸಲಾತಿವಂಚಿತ ಉಪಜಾತಿಗಳನ್ನು ಕನಿಷ್ಠ ಮಟ್ಟದ ಮೀಸಲಾತಿ ಸೌಲಭ್ಯಗಳನ್ನು ದಕ್ಕಿಸಿಕೊಳ್ಳಲಾಗದೆ ಹೈರಾಣಾಗಿ ಶೋಚನೀಯ ಸ್ಥಿತಿಗೆ ತಳ್ಳಲಾಗಿದೆ.

ಮೀಸಲಾತಿಯ ಪಾಲಿನಲ್ಲಿ ಏಕಸ್ವಾಮ್ಯದ ಸವಲತ್ತು ಹೊಂದಿರುವ ಪರಿಶಿಷ್ಟರು ಮತ್ತು ಮೀಸಲಾತಿ ವಂಚಿತ ಪರಿಶಿಷ್ಟರ ನಡುವೆ ಅದನ್ನು ಹಂಚಬೇಕಿರುವ ಆಡಳಿತಾತ್ಮಕ ಒತ್ತಾಸೆ ಮತ್ತು ನೈತಿಕ ಕರ್ತವ್ಯ ಸರ್ಕಾರಗಳದ್ದಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನಿಂದ ಒಳಮೀಸಲಾತಿಯ ಬೇಡಿಕೆಯನ್ನು ಸಾಂವಿಧಾನಿಕ ಹಕ್ಕನ್ನಾಗಿ ಪರಿಗಣಿಸಬೇಕಾದ ಸನ್ನಿವೇಶ ಈಗ ಉದ್ಭವವಾಗಿದೆ.  ಸುಪ್ರೀಂ ಕೋರ್ಟ್‌ ನೀಡಿರುವ ಐತಿಹಾಸಿಕ ತೀರ್ಪು ಒಳಮೀಸಲಾತಿ ವಿರುದ್ಧ ಈವರೆಗೆ ಚಾಲ್ತಿಯಲ್ಲಿದ್ದ ಬಗೆ ಬಗೆಯ ಒಳ ಆಟಗಳಿಗೆ ಪೂರ್ಣವಿರಾಮ ಇಟ್ಟಿದೆ

ಮೀಸಲಾತಿಯ ಪಾಲಿನಲ್ಲಿ ಏಕಸ್ವಾಮ್ಯದ ಸವಲತ್ತು ಹೊಂದಿರುವ ಪರಿಶಿಷ್ಟರು ಮತ್ತು ಮೀಸಲಾತಿವಂಚಿತ ಪರಿಶಿಷ್ಟರ ನಡುವೆ ಅದನ್ನು ಹಂಚಬೇಕಿರುವ ಆಡಳಿತಾತ್ಮಕ ಒತ್ತಾಸೆ ಮತ್ತು ನೈತಿಕ ಕರ್ತವ್ಯ ಸರ್ಕಾರಗಳದ್ದಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನಿಂದ ಒಳಮೀಸಲಾತಿಯ ಬೇಡಿಕೆಯನ್ನು ಸಾಂವಿಧಾನಿಕ ಹಕ್ಕನ್ನಾಗಿ ಪರಿಗಣಿಸಬೇಕಾದ ಸನ್ನಿವೇಶ ಈಗ ಉದ್ಭವವಾಗಿದೆ. ಆಗಸ್ಟ್ 1ರಂದು ಸುಪ್ರೀಂ ಕೋರ್ಟ್‌ ನೀಡಿರುವ ಐತಿಹಾಸಿಕ ತೀರ್ಪು ಒಳಮೀಸಲಾತಿ ವಿರುದ್ಧ ಈವರೆಗೆ ಚಾಲ್ತಿಯಲ್ಲಿದ್ದ ಬಗೆ ಬಗೆಯ ಒಳ ಆಟಗಳಿಗೆ ಪೂರ್ಣವಿರಾಮ ಇಟ್ಟಿದೆ.

ಒಳಮೀಸಲಿನ ಇತಿಹಾಸ: 1975ರಲ್ಲಿ ಪಂಜಾಬ್ ಹಾಗೂ ಹರಿಯಾಣದಲ್ಲಿ ಬಾಲ್ಮೀಕಿಗಳಿಗೆ ಆನಂತರ ಮಜಬಿ ಸಿಖ್ಖರಿಗೆ ಮೊದಲ ಬಾರಿಗೆ ಪರಿಶಿಷ್ಟರಲ್ಲಿ ಒಳಮೀಸಲು ಕಲ್ಪಿಸಲಾಗಿತ್ತು. ಈ ರಾಜ್ಯಗಳ ಒಳಮೀಸಲು ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದು 1994ರಲ್ಲಿ ಅವಿಭಜಿತ ಆಂಧ್ರ ಪ್ರದೇಶದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್‌ಪಿಎಸ್‌) ಜನ್ಮ ತಳೆಯಿತು. ಆನಂತರ ಮಾದಿಗ ದಂಡೋರ ಹಾಗೂ ಎಂಆರ್‌ಎಚ್‌ಎಸ್ ಎಂಬ ಪ್ರಮುಖ ಸಂಘಟನೆಗಳ ಮೂಲಕ ಒಳಮೀಸಲು ಚಳವಳಿ ಕರ್ನಾಟಕಕ್ಕೂ ವಿಸ್ತರಿಸಿತು. ತಮಿಳುನಾಡಿನಲ್ಲಿ ಅರುಂಧತಿಯಾರರು (ಸಕ್ಕಲೀಯರ್) ಸಹ ವಿವಿಧ ಸಂಘಟನೆಗಳ ಅಡಿಯಲ್ಲಿ ಹೋರಾಟ ಆರಂಭಿಸಿದರು. ಆಂಧ್ರ ಪ್ರದೇಶದಲ್ಲಿ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ಹುಟ್ಟಿಕೊಂಡ ಒಳಮೀಸಲು ಚಳವಳಿಯ ಕಾವು ಕೆಲವೇ ವರ್ಷಗಳಲ್ಲಿ ನೆರೆಯ ಕರ್ನಾಟಕ, ತಮಿಳುನಾಡಿಗೂ ತೀವ್ರವಾಗಿ ವ್ಯಾಪಿಸಿತು.

ರಾಮಚಂದ್ರರಾಜು ಆಯೋಗದ ಶಿಫಾರಸುಗಳ ಆಧಾರದಲ್ಲಿ ಉಪವರ್ಗೀಕರಣ ಮಾಡುವ ಮೂಲಕ ದೇಶದಲ್ಲಿ ಒಳಮೀಸಲು ಜಾರಿಗೆ ತಂದ ಮೂರನೇ ರಾಜ್ಯವೆಂಬ ಹೆಗ್ಗಳಿಕೆ ಆಂಧ್ರ ಪ್ರದೇಶದ್ದಾಯಿತು. ತಮಿಳುನಾಡಿನಲ್ಲಿ ಹೋರಾಟಗಳು ಕಾವೇರಿದಂತೆ 2009ರಲ್ಲಿ ಅರುಂಧತಿಯಾರರಿಗೆ ಪ್ರತ್ಯೇಕ ಮೀಸಲು ಕಲ್ಪಿಸುವ ಕಾಯ್ದೆಯನ್ನು ಎಂ.ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರ ಜಾರಿಗೆ ತಂದಿತು. ಕರ್ನಾಟಕದಲ್ಲಿ ಮಾತ್ರ ಸದಾಶಿವ ಆಯೋಗದ ಶಿಫಾರಸುಗಳು ದೂಳು ಹಿಡಿಯಲಾರಂಭಿಸಿದರೆ, ಉತ್ತರ ಪ್ರದೇಶದ ಹುಕುಂ ಸಿಂಗ್ ವರದಿಯ ಶಿಫಾರಸುಗಳ ಅನುಷ್ಠಾನ ಸಂಪೂರ್ಣ ನನೆಗುದಿಗೆ ಬಿದ್ದಿತು.

ಯಾರ ಮಧ್ಯೆ ಕದನ?: ಉತ್ತರ ಭಾರತದ ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಬಿಹಾರದಲ್ಲಿ ಚಮಾರ್ ಛತ್ರಿಯಡಿ ಬರುವ ವಿವಿಧ ಉಪಜಾತಿಗಳು ಹಾಗೂ ಪಾಸ್ವಾನ್‌ ಸಮುದಾಯಗಳು ಒಳಮೀಸಲಾತಿಯನ್ನು ಪ್ರಬಲವಾಗಿ ವಿರೋಧಿಸಿವೆ. ಬಾಲ್ಮೀಕಿ-ಮಜಬಿ ಸಿಖ್ಖರು ಒಳಮೀಸಲಿಗಾಗಿ ಹೋರಾಟ ನಡೆಸಿದ್ದಾರೆ. ಪಾಸಿ, ಮುಸಾಹರ್‌ಗಳು ಸ್ಥಳೀಯ ರಾಜಕೀಯ ಕಾರಣಕ್ಕೆ ಒಳಮೀಸಲನ್ನು ಬಯಸಿದರೂ ತಟಸ್ಥರಾಗಿದ್ದಾರೆ. 

ಮಹಾರಾಷ್ಟ್ರದಲ್ಲಿ ಮಹರ್, ಚಾರ್ವಾಕರ್, ಧೋರ್‌ಗಳು ಮೀಸಲಾತಿ ವರ್ಗೀಕರಣ ವಿರೋಧಿಸಿದರೆ ಉಳಿದ ಮಾಂಗ್ (ಮಾತಂಗ್) ಉಪಜಾತಿಗಳು ಅದಕ್ಕಾಗಿ ಹೋರಾಡುತ್ತಾ ಬಂದಿವೆ. ಆಂಧ್ರಪ್ರದೇಶ–ತೆಲಂಗಾಣಗಳಲ್ಲಿ ಮಾಲ ಸಮುದಾಯ ಒಳಮೀಸಲಾತಿ ವಿರೋಧಿಸಿದರೆ, ಮಾದಿಗರು ಇಡೀ ದಕ್ಷಿಣ ಭಾರತದಲ್ಲಿಯೇ ಐತಿಹಾಸಿಕ ಒಳಮೀಸಲಾತಿ ಜನಚಳವಳಿ ಮುನ್ನಡೆಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಸ್ಪೃಶ್ಯರಾದ ಲಂಬಾಣಿ, ಭೋವಿ, ಕೊರಚ, ಕೊರಮ, ಛಲವಾದಿ ಜಾತಿಗಳು ಒಳಮೀಸಲಾತಿಯನ್ನು ವಿರೋಧಿಸುತ್ತಿವೆ. 

ತಮಿಳುನಾಡಿನಲ್ಲಿ ಪರೈಯರ್ ಮತ್ತು ಪಲ್ಲರ್‌ ಸಮುದಾಯಗಳು ಇದನ್ನು ವಿರೋಧಿಸಿದರೆ, ಎಡಪಂಥೀಯ ಪಕ್ಷ–ಸಂಘಟನೆಗಳ ಬಲದೊಂದಿಗೆ ಅರುಂಧತಿಯಾರರು ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ. ಒಳಮೀಸಲು ವಿರೋಧಿಸುವ ಚಮಾರ್‌ಗಳು (ಬಹುಜನ ಸಮಾಜ ಪಕ್ಷ), ಪಾಸ್ವಾನ್‌ಗಳು (ಎಲ್‌ಜೆಪಿ), ಮಹರ್‌ಗಳು (ಪ್ರಕಾಶ್ ಅಂಬೇಡ್ಕರ್‌ ನೇತೃತ್ವದ ವಂಚಿತ್ ಬಹುಜನ್ ಅಘಾಡಿ ಪಕ್ಷ ಹಾಗೂ ಆರ್‌ಪಿಐ ಪಕ್ಷ), ಪರೈಯರ್‌ಗಳು (ವಿದುತಲೈ ಚಿರುತೈಗಳ್ ಕಚ್ಚಿ- ವಿಸಿಕೆ) ಪಕ್ಷ ಸ್ಥಾಪಿಸಿ ಅಧಿಕಾರ ರಾಜಕಾರಣದಲ್ಲಿ ಪಾರಮ್ಯ ಮೆರೆದಿದ್ದಾರೆ.

ಆಂಧ್ರದ ಮಾಲ ಮತ್ತು ಕರ್ನಾಟಕದ ಛಲವಾದಿ ಸಮುದಾಯಗಳು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಲಾಗಾಯ್ತಿನಿಂದಲೂ ನಿಯಂತ್ರಿಸುವ ತಂತ್ರಗಾರಿಕೆ ಮೈಗೂಡಿಸಿಕೊಂಡಿವೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಒಳಮೀಸಲಾತಿಗಾಗಿ ಹೋರಾಡುವ ಬಾಲ್ಮೀಕಿ-ಮಜಬಿ ಸಿಖ್ಖರು, ಮಾತಂಗ್, ಮಾದಿಗ, ಅರುಂಧತಿಯಾರರು ಯಾವ ಪರ್ಯಾಯ ರಾಜಕೀಯ ಶಕ್ತಿಯೂ ಆಗದೆ ಕೇವಲ ವಿವಿಧ ಪಕ್ಷಗಳ ಮತಬ್ಯಾಂಕ್‌ಗಳಾಗಿ ಆಳುವ ಸರ್ಕಾರಗಳ ಮರ್ಜಿಯಲ್ಲಿ ಉಳಿದಿದ್ದಾರೆ. 

ಕಾನೂನು ಹೋರಾಟ: 1975ರಿಂದ 2004ರವರೆಗೆ ಪಂಜಾಬ್, ಹರಿಯಾಣಗಳಲ್ಲಿ ಒಳಮೀಸಲಾತಿ ಅಬಾಧಿತವಾಗಿತ್ತು. ಆಂಧ್ರದಲ್ಲಿ 90ರ ದಶಕದ ಕೊನೆಗೆ ಒಳಮೀಸಲಾತಿ ಕಲ್ಪಿಸಿದ ನಂತರ ಮಾಲ-ಮಾದಿಗ ಉಪಜಾತಿಗಳ ನಡುವೆ ಕಾನೂನು ಸಮರ ಆರಂಭವಾಯಿತು. ಮಾಲ ಸಮುದಾಯ ಆಂಧ್ರ ಹೈಕೋರ್ಟ್‌ನ ಕದ ಬಡಿಯಿತು. ಹೈಕೋರ್ಟ್ ಉಪವರ್ಗೀಕರಣವನ್ನು ಮಾನ್ಯ ಮಾಡಿತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. 2004ರಲ್ಲಿ ಇ.ವಿ.ಚಿನ್ನಯ್ಯ ವಿರುದ್ಧ ಆಂಧ್ರಪ್ರದೇಶ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ನೇತೃತ್ವದ  ಸಂವಿಧಾನ ಪೀಠವು ಒಳಮೀಸಲಾತಿಯನ್ನು ಅಸಿಂಧುಗೊಳಿಸಿ ತೀರ್ಪು ನೀಡಿತು. ಅದರಿಂದಾಗಿ ದೇಶದಲ್ಲಿ ಒಳಮೀಸಲಾತಿ ಹೋರಾಟಕ್ಕೆ ಭಾರಿ ಹಿನ್ನಡೆಯಾಯಿತು.

ಪಟ್ಟುಬಿಡದ ಪಂಜಾಬ್ ಸರ್ಕಾರ

2006ರಲ್ಲಿ ಕಾಯ್ದೆ ಮೂಲಕ ಪರಿಶಿಷ್ಟ ಜಾತಿಗಳು ಹಾಗೂ ಹಿಂದುಳಿದವರಿಗೆ ಉದ್ಯೋಗಗಳಲ್ಲಿ ಒಳಮೀಸಲಾತಿಯನ್ನು ಮರುಜಾರಿಗೆ ತಂದಿತು. ಇದು ನಾಲ್ಕು ವರ್ಷ ಚಾಲ್ತಿಯಲ್ಲಿತ್ತು. ಕಾಯ್ದೆ ವಿರೋಧಿಸಿ ದವೀಂದರ್ ಸಿಂಗ್ ಎಂಬವರು ಪಂಜಾಬ್ ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ಕಾಯ್ದೆಯನ್ನು ರದ್ದುಗೊಳಿತು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಸುಪ್ರೀಂ ಕೋರ್ಟ್‌ನಲ್ಲಿ ದವೀಂದರ್ ಸಿಂಗ್ ಮತ್ತು  ಪಂಜಾಬ್ ಸರ್ಕಾರದ ಪ್ರಕರಣ ಎಂದೇ ಹೆಸರಾದ ಪ್ರಕರಣವನ್ನು 2014ರಲ್ಲಿ ಮೂರರಿಂದ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಯಿತು. 2020ರಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರ ಪೀಠ ಒಳಮೀಸಲು ವರ್ಗೀಕರಣದ ಪರವಾಗಿ ನಿಲುವು ತಳೆಯಿತು. ಈ ಹಿಂದಿನ ತೀರ್ಪು ನೀಡಿದ್ದು ಕೂಡ ಐವರು ನ್ಯಾಯಮೂರ್ತಿಗಳ ಪೀಠವಾಗಿದ್ದರಿಂದ ಐದಕ್ಕಿಂತ ಹೆಚ್ಚು ನ್ಯಾಯಮೂರ್ತಿಗಳ ಪೀಠದ ಅಗತ್ಯವಿದೆಯೆಂದು ಹೇಳಿತು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು 6:1 ಅನುಪಾತದ ಬಹುಮತದೊಂದಿಗೆ ಎಸ್‌ಸಿ, ಎಸ್‌ಟಿ ಜಾತಿಗಳ ಉಪವರ್ಗೀಕರಣವನ್ನು ಮಾನ್ಯ ಮಾಡಿತು; ಎಸ್‌ಸಿ, ಎಸ್‌ಟಿ ಏಕರೂಪದ ಗುಂಪಲ್ಲ ಎಂದು ಹೇಳಿ ಸಂವಿಧಾನದ 341ನೇ ಪರಿಚ್ಛೇದದ ಚರ್ಚೆಯ ಅವಶ್ಯಕತೆಯನ್ನು ಇಲ್ಲವಾಗಿಸಿದ ಕೋರ್ಟ್, ತನ್ನ ಸುದೀರ್ಘ ವಿಶ್ಲೇಷಣೆಯ ತೀರ್ಪಿನಲ್ಲಿ ಮೀಸಲಾತಿ ವಂಚಿತರ ಹಾಗೂ ಮೀಸಲಾತಿ ಹಂಚಿಕೆಯ ನಿಖರ ದತ್ತಾಂಶಗಳೊಂದಿಗೆ ರಾಜ್ಯಗಳು ಪರಿಣಾಮಕಾರಿ ಪ್ರಾತಿನಿಧ್ಯವನ್ನು ಕಲ್ಪಿಸಲು ಮುಂದಾಗಬೇಕು ಎಂಬುದನ್ನು ಒತ್ತಿ ಹೇಳಿದೆ. 

ಒಳಮೀಸಲಾತಿ ಕುರಿತಾಗಿ ಈ ಮೊದಲು ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ತಳೆದಿದ್ದ ಜಾಣ ಮೌನ ಹಾಗೂ ಹಾಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರದ ನಿಷ್ಕಾಳಜಿ ಒಟ್ಟೊಟ್ಟಿಗೆ ಜಾಹೀರಾಗಿವೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿಯೇ ಒಳಮೀಸಲಾತಿಯ ಭರವಸೆ ನೀಡಿತ್ತು. ಸುಪ್ರೀಂ ತೀರ್ಪಿನ ನಂತರ ಸರ್ಕಾರ ಈಗ ಹೈಕಮಾಂಡ್‌ನ ಇಶಾರೆಗೆ ಕಾದು ಕುಳಿತಿದೆ.

‘ಸರ್ಕಾರ ಕೊಟ್ಟ ಮಾತಿನಂತೆ ನಡೆಯಲಿ’

ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರ ಗಳಿಗಿದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಚಾರಿತ್ರಿಕವಾಗಿದೆ. ಇದರಿಂದ ಮೀಸಲಾತಿಯ ಒಳಗೆ ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಭರವಸೆ ಸಿಕ್ಕಂತಾಗಿದೆ. ಆದರೆ, ಒಳಮೀಸಲಾತಿ ಯನ್ನು ಜಾರಿ ಮಾಡುವ ವಾಗ್ದಾನ ಮಾಡಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ತರುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಖಂಡನಾರ್ಹ. ಒಳಮೀಸಲಾತಿ ಎನ್ನುವುದು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹಂಚಿಕೊಳ್ಳುವಂತಹ ಸಂವಿಧಾನ ಬದ್ಧವಾದ ನೀತಿಯಾಗಿದೆ. ಒಳಮೀಸಲಾತಿ ಜಾರಿಗಾಗಿ ಕಳೆದ ಮೂರು ದಶಕಗಳಿಂದ ಸತತವಾಗಿ ಹೋರಾಟಗಳನ್ನು ಮಾಡಲಾಗಿದೆ. ನ್ಯಾ. ಸದಾಶಿವ ಆಯೋಗದ ವರದಿ,ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಮತ್ತು ಕಾಂತರಾಜು ಅವರು ನೀಡಿದ್ದ ವರದಿಯ ದತ್ತಾಂಶ ಆಧರಿಸಿ ಸುಗ್ರೀವಾಜ್ಙೆ ಮೂಲಕ ಒಳಮೀಸಲಾತಿ ಯನ್ನು ಜಾರಿಗೆ ತರುವ ದಿಸೆಯಲ್ಲಿ ಸರ್ಕಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು. ಒಳಮೀಸಲಾತಿಯು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವೂ ಆಗಿತ್ತು. ಸಂವಿಧಾನ ರಕ್ಷಣೆ, ಪ್ರಜಾಪ್ರಭುತ್ವದ ರಕ್ಷಣೆಗೆ ನಮ್ಮ ಬದ್ಧತೆ ಎನ್ನುವ ಕಾಂಗ್ರೆಸ್ ಸರ್ಕಾರ, ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ.
ಬಸವರಾಜ್ ಕೌತಾಳ್, ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಧಾನ ಸಂಚಾಲಕ

ಒಳಮೀಸಲಾತಿ ಭಿಕ್ಷೆ ಅಲ್ಲ, ಹಕ್ಕು

ಒಳಮೀಸಲಾತಿ ಜಾರಿ ಇವತ್ತಿನ ತುರ್ತು. ಶತಮಾನಗಳಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅವಕಾಶಗಳಿಂದ ವಂಚಿತವಾದ ಸಮುದಾಯಗಳ ಘನತೆಯ ಬದುಕಿಗಾಗಿ ಇದು ಜರೂರಾಗಿ ಆಗಬೇಕಿದೆ. ಒಳಮೀಸಲಾತಿ ಪರವಾಗಿ ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಕೆನೆಪದರದ ವಿಚಾರವನ್ನು ಮುಂದು ಮಾಡಿ ಉಪವರ್ಗೀಕರಣ ಆಗದಂತೆ ಮಾಡುವ ಷಡ್ಯಂತ್ರವೂ ನಡೆದಿದೆ. ಸಿದ್ದರಾಮಯ್ಯನವರ ಸರ್ಕಾರ ಕೂಡಲೇ ಒಳಮೀಸಲಾತಿಯನ್ನು ಜಾರಿ ಮಾಡಿ ತಾನು ದೀನ ದಲಿತರ ಪರವಾಗಿದ್ದೇನೆ ಎಂದು ಸಾಬೀತುಪಡಿಸಲಿ. ಇದನ್ನು ವಿರೋಧಿಸುವವರು ಕೊನೆಗೆ ಮೀಸಲಾತಿಯ ಹಾಗೂ ತಳಸಮುದಾಯಗಳ ವಿರೋಧಿಗಳೇ ಆಗುತ್ತಾರೆ.
ಅಶ್ವಿನಿ ಮದನಕರ, ವಕೀಲರು ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ

* ಲೇಖಕ– ಒಳ ಮೀಸಲಾತಿ ಪರ ಹೋರಾಟದಲ್ಲಿ ಸಕ್ರಿಯವಾಗಿರುವ ಸಾಮಾಜಿಕ ಮತ್ತು ರಾಜಕೀಯ ವಿಶ್ಲೇಷಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT