ಕೇರಳಂನಲ್ಲಿ ಅಧಿಕಾರವು ಸಿಪಿಎಂ ನೇತೃತ್ವದ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಪ್ರತಿ ಐದು ವರ್ಷಕ್ಕೊಮ್ಮೆ ಬದಲಾವಣೆಯಾಗುತ್ತಿತ್ತು. 2021ರಲ್ಲಿ ಎಲ್ಡಿಎಫ್ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವುದರೊಂದಿಗೆ ಈ ಪರಂಪರೆಯನ್ನು ತುಂಡರಿಸಿತ್ತು. 2016ರಲ್ಲಿ ಗಳಿಸಿದ್ದಕ್ಕಿಂತಲೂ (91) ಹೆಚ್ಚು ಸ್ಥಾನ ಪಡೆದು (99) ಅಚ್ಚರಿ ಮೂಡಿಸಿತ್ತು. ಇದೇ ಆಧಾರದಲ್ಲಿ ಈ ಬಾರಿಯೂ ಗೆಲುವು ತನ್ನದೇ, ತಾವು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದೇ ಪ್ರತಿಪಾದಿಸಿದ್ದ ಎಲ್ಡಿಎಫ್, ‘ನಾವಲ್ಲದೇ ಇನ್ಯಾರು’ ಎನ್ನುವುದನ್ನೇ ಚುನಾವಣಾ ಘೋಷಣೆಯನ್ನಾಗಿ ಮಾಡಿಕೊಂಡಿತ್ತು.

ಆದರೆ, ಜನ ಸಿಪಿಎಂ ನೇತೃತ್ವದ ಎಲ್ಡಿಎಫ್ ಅನ್ನು ತಿರಸ್ಕರಿಸಿದ್ದು, 35 ಸ್ಥಾನಗಳಿಗೆ (ಸಿಪಿಎಂಗೆ 25 ಸ್ಥಾನ) ಸೀಮಿತಗೊಳಿಸಿದ್ದಾರೆ. ನಾಲ್ಕು ದಶಕಗಳಲ್ಲಿಯೇ ಇದು ಎಲ್ಡಿಎಫ್ ಮತ್ತು ಸಿಪಿಎಂನ ಅತಿ ಕಡಿಮೆ ಸಂಖ್ಯೆಯಾಗಿದೆ. ಅದಕ್ಕೆ ವಿರುದ್ಧವಾಗಿ ಯುಡಿಎಫ್ ದಾಖಲೆಯ 102 ಸ್ಥಾನಗಳೊಂದಿಗೆ ಭಾರಿ ಗೆಲುವು ಸಾಧಿಸಿದೆ.

ಕಾಂಗ್ರೆಸ್ಗೆ ನವೋತ್ಸಾಹ

ಕಾಂಗ್ರೆಸ್, ದೇಶದ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿತ್ತು. ಆದರೆ, ಈ ಬಾರಿಯ ಫಲಿತಾಂಶವು ಕಾಂಗ್ರೆಸ್ಗೆ ನವೋತ್ಸಾಹ ತುಂಬಿದೆ. 2011ರಲ್ಲಿ 38, 2016ರಲ್ಲಿ 22 ಸ್ಥಾನ ಗಳಿಸಿದ್ದ ಕಾಂಗ್ರೆಸ್ 2021ರಲ್ಲಿ 21 ಸ್ಥಾನಗಳಿಗೆ ಕುಸಿದಿತ್ತು. ಈ ಬಾರಿ ತನ್ನ ಪೂರ್ವದ ವೈಭವಕ್ಕೆ ಮರಳಿರುವ ‘ಕೈ’ ಪಾಳಯ, 63 ಸ್ಥಾನಗಳನ್ನು ಗಳಿಸಿದೆ.

ಮುಸ್ಲಿಮರು ಹೆಚ್ಚಿರುವ ರಾಜ್ಯದ ಉತ್ತರ ಭಾಗ (ಮಲಬಾರ್) ಮತ್ತು ಕ್ರೈಸ್ತರು ನಿರ್ಣಾಯಕವಾಗಿರುವ ಕೇಂದ್ರ ಭಾಗಗಳಲ್ಲಿ ಕಾಂಗ್ರೆಸ್ನ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಚುನಾವಣಾ ವಿಶ್ಲೇಷಕರು ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ. ಅವುಗಳ ಜತೆಗೆ ಹಿಂದೂ ಮತದಾರರೇ ನಿರ್ಣಾಯಕವಾಗಿರುವ ಇತರೆ ಪ್ರಾಂತಗಳಲ್ಲೂ ಪಕ್ಷವು ಉತ್ತಮ ಸಾಧನೆ ತೋರಿದೆ.

ಮುಸ್ಲಿಂ ಲೀಗ್ ಬಲವರ್ಧನೆ

ಯುಡಿಎಫ್ನ ಎರಡನೇ ಅತಿದೊಡ್ಡ ಪಕ್ಷವಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಹೊರಹೊಮ್ಮಿದ್ದು, ಸ್ಪರ್ಧಿಸಿದ್ದ 27 ಕ್ಷೇತ್ರಗಳ ಪೈಕಿ 22ರಲ್ಲಿ ಗೆಲುವು ಸಾಧಿಸಿದೆ. ಕೇರಳಂನಲ್ಲಿ ಹೆಚ್ಚು ಅಂತರದ ಗೆಲುವು ಅಪರೂಪ. ಆದರೆ, ಈ ಬಾರಿ ಪಕ್ಷದ ಐವರು ಅಭ್ಯರ್ಥಿಗಳು 50 ಸಾವಿರಕ್ಕಿಂತ ಹೆಚ್ಚಿನ ಅಂತರದಲ್ಲಿ ಗೆದ್ದಿದ್ದಾರೆ. ಈ ಬಾರಿ ಅತಿ ಹೆಚ್ಚಿನ ಅಂತರದಲ್ಲಿ ಗೆಲುವು ಪಡೆದ ಪಿ.ಕೆ.ಕುಂಙಾಲಿ ಕುಟ್ಟಿ (85,327) ಐಯುಎಂಎಲ್ನ ಮಲಪ್ಪುರಂ ಅಭ್ಯರ್ಥಿ.

‘ನಿಜವಾದ ಕೇರಳ ಸ್ಟೋರಿ’

ಕೇರಳಂ ಹಲವು ಕ್ಷೇತ್ರಗಳಲ್ಲಿನ ಫಲಿತಾಂಶವು ಜಾತಿ, ಧರ್ಮದ ಕಾರಣಕ್ಕೆ ಗಮನಾರ್ಹವಾಗಿದೆ. ಮುಸ್ಲಿಂ ಮತದಾರರು ಬಹುಸಂಖ್ಯಾತರಾಗಿರುವ ತವನೂರ್ ಕ್ಷೇತ್ರದಲ್ಲಿ ಕ್ರೈಸ್ತ ಧರ್ಮದ ವಿ.ಎಸ್.ಜಾಯ್ ಗೆಲುವು ಸಾಧಿಸಿದ್ದರೆ, ಮುಸ್ಲಿಂ ಮತದಾರ ಬಾಹುಳ್ಯದ ಮತ್ತೊಂದು ಕ್ಷೇತ್ರವಾದ ತ್ರಿಕರಿಪುರದಿಂದ ಹಿಂದೂ ಧರ್ಮದ ಸಂದೀಪ್ ವಾರಿಯರ್ ಚುನಾಯಿತರಾಗಿದ್ದಾರೆ. ಹಿಂದೂ ಮತದಾರರು ನಿರ್ಣಾಯಕವಾಗಿರುವ ಕಲಮಶ್ಯೇರಿಯಲ್ಲಿ ವಿ.ಇ.ಅಬ್ದುಲ್ ಗಫೂರ್ ಗೆದ್ದಿದ್ದರೆ, ಕ್ರೈಸ್ತರು ಹೆಚ್ಚಿರುವ ಕೊಚ್ಚಿಯಿಂದ ಮುಸ್ಲಿಂ ಅಭ್ಯರ್ಥಿಯಾದ ಮುಹಮ್ಮದ್ ಶಿಯಾಸ್ ಚುನಾಯಿತರಾಗಿದ್ದಾರೆ.

ಇದನ್ನು ಉದಾಹರಿಸಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ‘ಮತದಾರರು ಅಭ್ಯರ್ಥಿಗಳನ್ನು ಅವರ ರಾಜಕೀಯ ಸಿದ್ಧಾಂತ, ಅವರು ಮೂಡಿಸಿರುವ ನಿರೀಕ್ಷೆಗಳ ಆಧಾರದಲ್ಲಿ ಗೆಲ್ಲಿಸಿದ್ದಾರೆಯೇ ಹೊರತು ಅವರ ಜಾತಿ, ಧರ್ಮ ಆಧಾರದಲ್ಲಿ ಅಲ್ಲ. ಭಾರತವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಹೊರಟವರಿಗೆ ಇದು ಕಪಾಳಮೋಕ್ಷವಾಗಿದೆ. ಈ ನಾಲ್ಕು ಮಂದಿಯೂ ಯುಡಿಎಫ್ ಅಭ್ಯರ್ಥಿಗಳಾಗಿರುವುದು ಆಕಸ್ಮಿಕವಲ್ಲ. ಇದೇ ನಿಜವಾದ ಕೇರಳ ಸ್ಟೋರಿ’ ಎಂದಿದ್ದಾರೆ.

ಎಡಪಕ್ಷಗಳ ಆಡಳಿತ ಅಂತ್ಯ

ಕೇರಳಂನಲ್ಲಿ ಸಿಪಿಎಂ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದು 1957ರಲ್ಲಿ. ಪ್ರಜಾತಾಂತ್ರಿಕ ದೇಶದಲ್ಲಿ ಚುನಾವಣೆ ಮೂಲಕ ಆರಿಸಿಬಂದ ಜಗತ್ತಿನ ಮೊದಲ ಕಮ್ಯುನಿಸ್ಟ್ ಸರ್ಕಾರ ಅದಾಗಿತ್ತು. ಮುಖ್ಯಮಂತ್ರಿಯಾಗಿದ್ದ ಇಎಂಎಸ್ ನಂಬೂದಿರಿಪಾಡ್, ಭೂಸುಧಾರಣೆ ಮತ್ತು ಶೈಕ್ಷಣಿಕೆ ಸುಧಾರಣೆಗಳನ್ನು ತರಲು ಮುಂದಾದರು. ಕಾಂಗ್ರೆಸ್ ಅದನ್ನು ತೀವ್ರವಾಗಿ ವಿರೋಧಿಸಿತು; ಚರ್ಚ್ಗಳೂ ಪ್ರತಿಭಟನೆಗೆ ಕೈಜೋಡಿಸಿದವು. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಜವಾಹರಲಾಲ್ ನೆಹರೂ ಸರ್ಕಾರವು ಕೇರಳದ ಸಿಪಿಎಂ ಸರ್ಕಾರವನ್ನು ವಜಾಗೊಳಿಸಿತ್ತು.

ನಂತರದ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷವು ಹಲವು ಗುಂಪುಗಳಾಗಿ ಒಡೆಯಿತು. ಆದರೂ 1977ರಿಂದ ಎಡಪಕ್ಷಗಳು ಒಂದಿಲ್ಲೊಂದು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದವು. 1977ರಿಂದ 2011ರವರೆಗೆ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಸರ್ಕಾರವಿತ್ತು. ತ್ರಿಪುರಾದಲ್ಲಿ 1993ರಿಂದ 2018ರವರೆಗೆ ಎಡಪಕ್ಷಗಳು ಆಡಳಿತ ನಡೆಸಿದವು. ಕೇರಳಂನಲ್ಲಿ ಯುಡಿಎಫ್ಗೆ ಪರ್ಯಾಯವೆಂಬಂತೆ ಎಲ್ಡಿಎಫ್ ಅಧಿಕಾರ ಹಿಡಿಯುತ್ತಿತ್ತು.

ಆದರೆ, ದೇಶದಲ್ಲಿ ನಿಧಾನಕ್ಕೆ ಎಡಪಕ್ಷಗಳ ಪ್ರಾಬಲ್ಯ ಕಡಿಮೆಯಾಗುತ್ತಾ ಬಂದಿತು. ಇದುವರೆಗೆ ಕೇರಳದಲ್ಲಿ ಅಧಿಕಾರದಲ್ಲಿದ್ದ ಎಲ್ಡಿಎಫ್ ಸರ್ಕಾರವು ಕಮ್ಯುನಿಸ್ಟ್ ಪಕ್ಷದ ನೇತೃತ್ವ ಇದ್ದ ದೇಶದ ಏಕೈಕ ಸರ್ಕಾರವಾಗಿತ್ತು. ಈಗ ಅದರ ಸೋಲಿನೊಂದಿಗೆ ದೇಶದಲ್ಲಿ ಎಡಪಕ್ಷಗಳ ಆಡಳಿತವು ಅಂತ್ಯಗೊಂಡಿದೆ.

ಗಟ್ಟಿಯಾಗುತ್ತಿದೆಯೇ ಬಿಜೆಪಿ ಬೇರು?

2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶ್ಶೂರು ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ, ನಂತರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಧಾನಿ ತಿರುವನಂತಪುರದಲ್ಲಿ ಉತ್ತಮ ಸಾಧನೆ ತೋರಿ ಮೊದಲ ಬಾರಿಗೆ ಅಲ್ಲಿನ ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿಯನ್ನೂ ಹಿಡಿದಿತ್ತು. ಹಾಗಾಗಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಕೂಡ ಎಲ್ಡಿಎಫ್ ಮತ್ತು ಯುಡಿಎಫ್ಗೆ ಪ್ರಬಲ ಪೈಪೋಟಿ ನೀಡಬಹುದು ಎಂಬ ನಿರೀಕ್ಷೆ ಇತ್ತು. ರಾಜಕೀಯ ಪಂಡಿತರ ಈ ಲೆಕ್ಕಾಚಾರ ಹುಸಿಯಾಗಿದೆ. ಆದರೆ, ಮೂರು ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಬಿಜೆಪಿ ಯಶಸ್ವಿಯಾಗಿದೆ. ಇದಕ್ಕೂ ಮೊದಲು 2016ರ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಜಯಿಸಿತ್ತು. 2021ರಲ್ಲಿ ಅದರ ಸಾಧನೆ ಶೂನ್ಯಕ್ಕೆ ಇಳಿದಿತ್ತು.

ಹೆಚ್ಚಿದ ಮತಗಳಿಕೆ: ಎಲ್ಡಿಎಫ್ ಮತ್ತು ಯುಡಿಎಫ್ ಪ್ರಾಬಲ್ಯದ ಕೇರಳದಲ್ಲಿ ಪಕ್ಷವನ್ನು ಸಂಘಟಿಸಲು ಬಿಜೆಪಿ ದಶಕಗಳಿಂದ ಪ್ರಯತ್ನಿಸುತ್ತಿದೆ. ನಾಲ್ಕೈದು ವಿಧಾನಸಭೆಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಬಿಜೆಪಿಯ ಉಪಸ್ಥಿತಿ ವಿಸ್ತಾರವಾಗುತ್ತಿರುವುದು ಕಾಣಿಸುತ್ತಿದೆ.

2011ರ ಚುನಾವಣೆಯಲ್ಲಿ ಅದು 138 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ,ಶೇ 6.03ರಷ್ಟು ಮತಗಳನ್ನು ಗಳಿಸಲು ಮಾತ್ರ ಶಕ್ತವಾಗಿತ್ತು. 2016ರ ಚುನಾವಣೆಯಲ್ಲಿ 98 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಶೇ 10.53ರಷ್ಟು ಮತಗಳಿಸಿತ್ತಲ್ಲದೆ, ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು. 2021ರ ಚುನಾವಣೆಯಲ್ಲಿ 115 ಕ್ಷೇತ್ರಗಳಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿತ್ತು. ಗೆಲುವು ಪಡೆಯಲು ಸಫಲವಾಗದಿದ್ದರೂ, ಅದರ ಮತಗಳಿಕೆ ಪ್ರಮಾಣ ಶೇ 11.3ಕ್ಕೆ ಏರಿಕೆ ಕಂಡಿತ್ತು. ಈ ಬಾರಿ 98 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಬಿಜೆಪಿಯ ಮತಗಳಿಕೆ ಪ್ರಮಾಣ ಇನ್ನೂ ಹೆಚ್ಚಳವಾಗಿ, ಶೇ 11.42ಕ್ಕೆ ತಲುಪಿದೆ. ಅಲ್ಲದೇ ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲು ಯಶಸ್ವಿಯಾಗಿದೆ. ಗೆಲುವು ಸಾಧಿಸಿರುವ ನೇಮಂ, ಕಳಕ್ಕೂಟಂ ಮತ್ತು ಚಾತ್ತನೂರ್ ಕ್ಷೇತ್ರಗಳಲ್ಲಿ ಅದು ಕ್ರಮವಾಗಿ ಶೇ 40.75, ಶೇ 35.39 ಮತ್ತು ಶೇ 38.04ರಷ್ಟು ಮತಗಳನ್ನು ಗಳಿಸಿದೆ. ಈ ಬಾರಿ ಆರು ಕ್ಷೇತ್ರಗಳಲ್ಲಿ (ಕಾಸರಗೋಡು, ಮಂಜೇಶ್ವರ, ತಿರುವಲ್ಲ, ಪಾಲಕ್ಕಾಡ್, ಮಲಂಬುಳ ಮತ್ತು ಅಟ್ಟಿಂಗಲ್) ಬಿಜೆಪಿ ಅಭ್ಯರ್ಥಿಗಳು ಎರಡನೇ ಸ್ಥಾನದಲ್ಲಿದ್ದಾರೆ.

ಲೋಕಸಭೆಯಲ್ಲಿ ಗೆಲುವು ಸಿಕ್ಕಿದ್ದ ತ್ರಿಶ್ಶೂರಿನಲ್ಲಿ ಉತ್ತಮ ಸಾಧನೆ ತೋರಲು ಬಿಜೆಪಿ ವಿಫಲವಾಗಿದೆ. ಅದರ ಅಭ್ಯರ್ಥಿ (ಪದ್ಮಜಾ ವೇಣುಗೋಪಾಲ್ ಮೂರನೇ ಸ್ಥಾನಗಳಿಸಿದ್ದಾರೆ) ದೊಡ್ಡ ಅಂತರದಿಂದಲೇ ಸೋತಿದ್ದಾರೆ.

ಪುದುಚೆರಿ: ಹೆಚ್ಚಿದ ಎನ್ಡಿಎ ಬಲ, ಬಿಜೆಪಿಗೆ ನಷ್ಟ

30 ಸದಸ್ಯ ಬಲದ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯಲ್ಲಿ ಎಐಎನ್ಆರ್ಸಿ (ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ) ನೇತೃತ್ವದ ಎನ್ಡಿಎ ಕೂಟವು ಕಳೆದ ಸಲಕ್ಕಿಂತಲೂ (16) ಎರಡು ಸ್ಥಾನಗಳನ್ನು ಹೆಚ್ಚು ಗಳಿಸಿ (18) ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ.

ಎಐಎನ್ಆರ್ಸಿಯು ಕಳೆದ ಬಾರಿಗಿಂತ (10) ಎರಡು ಹೆಚ್ಚು ಸ್ಥಾನಗಳಲ್ಲಿ ಈ ಬಾರಿ ಜಯಗಳಿಸಿದೆ. 2021ರ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಯು ಈ ಸಲ ಎರಡು ಕ್ಷೇತ್ರಗಳನ್ನು ಕಳೆದುಕೊಂಡಿದೆ.

ತಮ್ಮ ಸರಳ ನಡೆ ನುಡಿಯ ಮೂಲಕ ‘ಜನರ ಮುಖ್ಯಮಂತ್ರಿ’ ಎಂದು ಕರೆಸಿಕೊಳ್ಳುವ ಎನ್.ರಂಗಸ್ವಾಮಿ ಅವರು ಐದನೇ ಬಾರಿಗೆ ಪುದುಚೆರಿಯ ಮುಖ್ಯಮಂತ್ರಿ ಗಾದಿ ಏರಲು ಸಜ್ಜಾಗಿದ್ದಾರೆ.

ನಡೆಯದ ಟಿವಿಕೆ ಅಚ್ಚರಿ: ನೆರೆಯ ತಮಿಳುನಾಡಿನಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿರುವ ನಟ ವಿಜಯ್ ನೇತೃತ್ವದ ಟಿವಿಕೆಗೆ ಪುದುಚೆರಿಯಲ್ಲಿ ಇತರ ಪಕ್ಷಗಳಿಗೆ ದೊಡ್ಡ ಪೆಟ್ಟು ನೀಡಲು ಸಾಧ್ಯವಾಗಿಲ್ಲ. ಎಲ್ಲ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಗಿದ್ದು ಎರಡು ಸ್ಥಾನಗಳಲ್ಲಿ ಮಾತ್ರ.

ಕಾಂಗ್ರೆಸ್ ವೈಫಲ್ಯ: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಡಿಎಂಕೆ ಒಳಗೊಂಡ ಇಂಡಿಯಾ ಕೂಟದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿತ್ತು. ಮೈತ್ರಿ ಪಕ್ಷಗಳು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಅದು ಕಣಕ್ಕಿಳಿಸಿದ್ದವು. ಒಟ್ಟು 22 ಕ್ಷೇತ್ರಗಳಲ್ಲಿ ಅದು ಸ್ಪರ್ಧಿಸಿದ್ದು, ಗೆಲುವು ದಕ್ಕಿದ್ದು ಒಂದರಲ್ಲಿ ಮಾತ್ರ. ಕಳೆದ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಅದು ಜಯಗಳಿಸಿತ್ತು. ಡಿಎಂಕೆಯು ಈ ಬಾರಿ ಐದು ಸ್ಥಾನಗಳಲ್ಲಿ ಗೆದ್ದಿದೆ. 2021ಕ್ಕೆ ಹೋಲಿಸಿದರೆ ಅದು ಒಂದು ಕ್ಷೇತ್ರವನ್ನು ಕಳೆದುಕೊಂಡಿದೆ.

ಈವರೆಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ 70 ವರ್ಷದ ಎನ್.ರಂಗಸ್ವಾಮಿ ಅವರ ಜನ ಕಲ್ಯಾಣ ಕಾರ್ಯಕ್ರಮಗಳು (ಹಿರಿಯ ನಾಗರಿಕರಿಗೆ ₹2,500–₹4,000 ಮಾಸಾಶನ, ಮಹಿಳೆಯರಿಗೆ ಮಾಸಿಕ ₹2,500 ನಗದು ಇತ್ಯಾದಿ) ಅವರ ಸರಳ ವ್ಯಕ್ತಿತ್ವ ಈ ಚುನಾವಣೆಯಲ್ಲೂ ಅವರ ಕೈ ಹಿಡಿದಿವೆ.

ಆಧಾರ: ಪಿಟಿಐ, ಚುನಾವಣಾ ಆಯೋಗದ ದತ್ತಾಂಶಗಳು, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.