ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ವಿದ್ಯಮಾನ | ಒಂದು ಭಾಷೆ, ಒಂದು ಧರ್ಮ ಹೇರಿಕೆಗೆ ನಲುಗುತ್ತಿದೆ ಮ್ಯಾನ್ಮಾರ್

Last Updated 13 ಏಪ್ರಿಲ್ 2023, 6:22 IST
ಅಕ್ಷರ ಗಾತ್ರ

ದೇಶದ ಎಲ್ಲಾ ಜನಾಂಗಗಳ ಮೇಲೂ ಒಂದೇ ಧರ್ಮ ಮತ್ತು ಭಾಷೆಯನ್ನು ಹೇರಲು ಹೊರಟ ಸೇನಾಡಳಿತದ ವಿರುದ್ಧ ಮ್ಯಾನ್ಮಾರ್‌ನ ಎಲ್ಲಾ ಜನರು ತಿರುಗಿಬಿದ್ದಿದ್ದಾರೆ. ಈ ಹೇರಿಕೆ ಮತ್ತು ಸೇನಾಡಳಿತ ಎರಡನ್ನೂ ಕಿತ್ತೊಗೆಯಬೇಕು ಎಂಬ ಧ್ಯೇಯದೊಂದಿಗೆ ‘ಪೀಪಲ್ಸ್‌ ಡಿಫೆನ್ಸ್‌ ಫೋರ್ಸ್‌’ ಎಂಬ ಪಡೆಯನ್ನು ಕಟ್ಟಿದ್ದಾರೆ. ಮ್ಯಾನ್ಮಾರ್‌ನ ಸೇನಾಡಳಿತವು ಈ ಹೋರಾಟವನ್ನು ಸಶಸ್ತ್ರ ಕಾರ್ಯಾಚರಣೆಯ ಮೂಲಕ ಎದುರಿಸಲು ಮುಂದಾಗಿದೆ. ಎರಡು ವರ್ಷಗಳಲ್ಲಿ ಇಂತಹ ಕಾರ್ಯಾಚರಣೆಗೆ 3,000ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ.

***

ವಾಯವ್ಯ ಮ್ಯಾನ್ಮಾರ್‌ನ ಹಳ್ಳಿಯೊಂದರಲ್ಲಿ ಮಂಗಳವಾರ ನಡೆಯುತ್ತಿದ್ದ ಸಭೆಯ ಮೇಲೆ ಅಲ್ಲಿನ ಸೇನೆಯೇ ವಾಯುದಾಳಿ ನಡೆಸಿದೆ. ಆ ದಾಳಿಯಲ್ಲಿ 30 ಮಕ್ಕಳೂ ಸೇರಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸೇನೆಯ ಈ ಕ್ರಮಕ್ಕೆ ವಿಶ್ವಸಂಸ್ಥೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಆಕ್ಷೇಪ ವ್ಯಕ್ತಪಡಿಸಿವೆ. ‘ಇದು ದೇಶವಿರೋಧಿ ಚಟುವಟಿಕೆಯ ಸಲುವಾಗಿ ನಡೆಯುತ್ತಿದ್ದ ಸಭೆ’ ಎಂದು ದಾಳಿಯನ್ನು ಮ್ಯಾನ್ಮಾರ್‌ ಸೇನೆ ಸಮರ್ಥಿಸಿಕೊಂಡಿದೆ. ಆದರೆ, ಈ ವರ್ಷದ ಆರಂಭದಿಂದ ಈವರೆಗೆ 300ಕ್ಕೂ ಹೆಚ್ಚು ನಾಗರಿಕರು ಸೇನೆಯ ದಾಳಿಗೆ ಬಲಿಯಾಗಿದ್ದಾರೆ ಮತ್ತು ಒಂದು ವರ್ಷದಲ್ಲಿ 30,000ಕ್ಕೂ ಹೆಚ್ಚು ಜನರು ಮ್ಯಾನ್ಮಾರ್‌ ತೊರೆದಿದ್ದಾರೆ ಎಂಬ ಮಾಹಿತಿ ದಿ ವಾಷಿಂಗ್ಟನ್‌ ಪೋಸ್ಟ್‌ ತನ್ನ ವರದಿಯಲ್ಲಿದೆ. ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಮ್ಯಾನ್ಮಾರ್‌ನಲ್ಲಿ ಆಂತರಿಕ ಕಲಹ ತೀವ್ರ ಸ್ವರೂಪ ಪಡೆದಿದೆ ಎಂಬುದನ್ನು ಈ ಎಲ್ಲಾ ಬೆಳವಣಿಗೆಗಳು ಹೇಳುತ್ತವೆ.

ಮ್ಯಾನ್ಮಾರ್‌ನಲ್ಲಿನ ಆಂತರಿಕ ಕಲಹ ಇಂದಿನದ್ದಲ್ಲ. ಆಂತರಿಕ ಕಲಹಗಳ ಇತಿಹಾಸ 18ನೇ ಶತಮಾನದವರೆಗೂ ಹೋಗುತ್ತದೆ. ಚೀನಾವು ಬ್ರಿಟನ್‌ನ ಆಳ್ವಿಕೆಯಲ್ಲಿ ಇದ್ದಾಗ, ಅಫೀಮು ಬೆಳೆಯಲು ವಾಯವ್ಯ ಮತ್ತು ಈಶಾನ್ಯ ಮ್ಯಾನ್ಮಾರ್‌ಗ ಗುಡ್ಡಗಾಡು ಪ್ರದೇಶಗಳನ್ನು ಬಳಸಿಕೊಳ್ಳಲಾಗಿತ್ತು. ಚೀನಾವನ್ನು ಬ್ರಿಟನ್‌ ತೊರೆದ ನಂತರ 19ನೇ ಶತಮಾನದಲ್ಲಿ ಸ್ಥಳೀಯ ‘ಅಫೀಮು ದೊರೆ’ಗಳ ಮಧ್ಯೆ ನಡೆದ ಕಲಹಗಳು ರಕ್ತಪಾತಕ್ಕೆ ಕಾರಣವಾಗಿದ್ದವು.

ಮ್ಯಾನ್ಮಾರ್‌ ಹಲವು ಧರ್ಮಾಚರಣೆ ಇರುವ ಮತ್ತು ಭಿನ್ನ ಜನಾಂಗೀಯ ಗುಂಪುಗಳ ಇರುವ ದೇಶ. ವಾಯವ್ಯದಲ್ಲಿ ಚಿನ್‌ ಜನಾಂಗದ ಪ್ರಾಬಲ್ಯವಿದ್ದರೆ, ಬ್ರಿಟಿಷ್ ವಸಾಹತುವಿನ ಕಾರಣದಿಂದಾಗಿ ಈಶಾನ್ಯದಲ್ಲಿ ಕ್ರೈಸ್ತ ಧರ್ಮೀಯರ ಪ್ರಾಬಲ್ಯವಿದೆ. ಇನ್ನು ನೈರುತ್ಯದಲ್ಲಿ ರೋಹಿಂಗ್ಯಾ ಮುಸ್ಲಿಮರ ಪ್ರಾಬಲ್ಯವಿದೆ. ಆಗ್ನೇಯ ಮ್ಯಾನ್ಮಾರ್‌ನಲ್ಲಿ ಬಾಮರ್ ಮತ್ತು ಕಾರೆನ್‌ ಜನಾಂಗೀಯ ಗುಂಪುಗಳ ಪ್ರಾಬಲ್ಯವಿದೆ. ಬ್ರಿಟಿಷ್‌ ಆಳ್ವಿಕೆಯಲ್ಲಿ ಈ ಎಲ್ಲಾ ಜನಾಂಗೀಯ ಗುಂಪುಗಳ ಮಧ್ಯೆ ಸಂಘರ್ಷ ಇದ್ದೇ ಇತ್ತು. ಈ ಗುಂಪುಗಳು ಪರಸ್ಪರ ವಿರುದ್ಧ ಮತ್ತು ಬ್ರಿಟಿಷ್‌ ಸೇನೆಯ ವಿರುದ್ಧವೂ ಹೋರಾಡುತ್ತಿದ್ದವು. 1948ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಮ್ಯಾನ್ಮಾರ್‌ನಲ್ಲಿ ಸರ್ಕಾರ ರಚನೆಯಾಯಿತು. ದೇಶದ ಅತ್ಯಂತ ದೊಡ್ಡ ಜನಾಂಗೀಯ ಗುಂಪಾದ ಬಾಮರ್‌ ಜನರೇ ಈ ಸರ್ಕಾರದಲ್ಲಿ ತುಂಬಿದ್ದರು. ಬಾಮರ್ ಜನರು ಬೌದ್ಧ ಧರ್ಮದ ಅನುಯಾಯಿಗಳು ಮತ್ತು ಅವರ ಭಾಷೆ ಬರ್ಮಾಸ್‌. ಸ್ವಾತಂತ್ರ್ಯದ ನಂತರ ಬಾಮರ್ ಜನರು ಬೇರೆಲ್ಲಾ ಜನಾಂಗೀಯ ಗುಂಪುಗಳ ಮೇಲೆ ಬೌದ್ಧ ಧರ್ಮ ಮತ್ತು ಬರ್ಮಾಸ್‌ ಭಾಷೆಯನ್ನು ಹೇರಲು ಆರಂಭಿಸಿದರು. ಇದನ್ನು ವಿರೋಧಿಸಿ ದೇಶದ ಆರೂ ಪ್ರಾಂತ್ಯಗಳಲ್ಲಿ ಸಶಸ್ತ್ರ ಹೋರಾಟಗಳು ನಡೆದವು. ಅದನ್ನೇ ನೆಪವನ್ನಾಗಿ ಇರಿಸಿಕೊಂಡು ಬಾಮರ್‌ ಜನರು 1962ರಲ್ಲಿ ಸೇನಾಡಳಿತವನ್ನು ಜಾರಿಗೆ ತಂದರು. 2011ರವರೆಗೆ ಅಸ್ತಿತ್ವದಲ್ಲಿ ಇದ್ದ ಸೇನಾಡಳಿತದ ಉದ್ದಕ್ಕೂ ಆಂತರಿಕ ಸಂಘರ್ಷ ಇದ್ದೇ ಇತ್ತು.

2015ರಲ್ಲಿ ಮತ್ತೆ ಪ್ರಜಾಪ್ರಭುತ್ವ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆ ಸರ್ಕಾರವೂ ಬಹುಸಂಖ್ಯಾತ ಬಾಮರ್ ಜನರದ್ದೇ ಆಗಿತ್ತು. ಈ ಸರ್ಕಾರದ ಅವಧಿಯಲ್ಲಿ ಆಂತರಿಕ ಕಲಹಗಳು ನಿಯಂತ್ರಣಕ್ಕೆ ಬಂದವು. ಆದರೆ, ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರಗಟ್ಟಲು ಸರ್ಕಾರವೇ ಬೆಂಬಲ ಘೋಷಿಸಿತು. 2017ರಿಂದ 2021ರ ಮಧ್ಯೆ 20 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ ತೊರೆದರು. ಆದರೆ, ಈ ಸರ್ಕಾರಿ ಪ್ರಾಯೋಜಿತ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ ಲಭ್ಯವಿಲ್ಲ. ಇದರ ಬೆನ್ನಲ್ಲೇ ಆಂತರಿಕ ಕಲಹ ಮತ್ತು ಭ್ರಷ್ಟಾಚಾರದ ಕಾರಣವೊಡ್ಡಿ ಸೇನೆಯು, ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿತು. ಸೇನಾಡಳಿತವನ್ನು ಮರುಸ್ಥಾಪಿಸಿತು.

ಸೇನಾಡಳಿತ ಮರುಜಾರಿಯಾದ ನಂತರ ಎಲ್ಲಾ ಜನಾಂಗೀಯ ಗುಂಪುಗಳ ಮೇಲೆ ಬೌದ್ಧ ಧರ್ಮ ಮತ್ತು ಬರ್ಮಾಸ್‌ ಭಾಷೆಯನ್ನು ಪಟ್ಟು ಹಿಡಿದು ಹೇರಲಾಗುತ್ತಿದೆ. ಸೇನೆಯ ಈ ನೀತಿಯ ವಿರುದ್ಧ ಬೇರೆಲ್ಲಾ ಜನಾಂಗೀಯ ಗುಂಪುಗಳು ಹೋರಾಟಕ್ಕೆ ಇಳಿದಿವೆ. ಚಿನ್‌ ಜನರು, ಕ್ರೈಸ್ತ ಧರ್ಮೀಯರು, ರೋಹಿಂಗ್ಯಾ ಮುಸ್ಲಿಮರು, ಕಾರೆನ್‌ ಜನರು ಸೇನೆ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಇಳಿದಿದ್ದಾರೆ. ಈ ಎಲ್ಲಾ ಜನಾಂಗಗಳ ಜನರ ಬೆಂಬಲ ಪಡೆದಿರುವ ‘ಪೀಪಲ್ಸ್‌ ಡಿಫೆನ್ಸ್‌ ಫೋರ್ಸ್‌ –ಪಿಡಿಎಫ್‌’ ಎಂಬ ಪಡೆಯನ್ನು ಸ್ಥಾಪಿಸಲಾಗಿದೆ. ‘ಸೇನಾಡಳಿತವನ್ನು ಕಿತ್ತೊಗೆಯುವುದು ಮತ್ತು ಎಲ್ಲರ ಮೇಲೆ ಬೌದ್ಧಧರ್ಮ ಮತ್ತು ಬರ್ಮಾಸ್‌ ಭಾಷೆ ಹೇರಿಕೆಯನ್ನು ನಿಲ್ಲಿಸುವುದು ನಮ್ಮ ಆದ್ಯ ಗುರಿ’ ಎಂದು ಪಿಡಿಎಫ್‌ ಹೇಳಿಕೊಂಡಿದೆ. ಸೇನಾ ಚಟುವಟಿಕೆಗಳಿಗೆ ತಡೆ ಒಡ್ಡುವ ಕೆಲಸವನ್ನು ಪಿಡಿಎಫ್ ಮಾಡುತ್ತಿದೆ. ಪ್ರತಿಯಾಗಿ ಪಿಡಿಎಫ್‌ನ ನೆಲೆಗಳು ಮತ್ತು ಅದಕ್ಕೆ ಬೆಂಬಲ ಘೋಷಿಸುವ ಗ್ರಾಮಗಳ ಮೇಲೆ ಸೇನೆ ದಾಳಿ ನಡೆಸುತ್ತಲೇ ಇದೆ. 2021ರ ಡಿಸೆಂಬರ್‌ನಿಂದ ಈವರೆಗೆ ಸೇನೆ ಈ ರೀತಿ ನಡೆಸಿದ ದಾಳಿಗಳಿಗೆ 3,200 ನಾಗರಿಕರು ಬಲಿಯಾಗಿದ್ದಾರೆ.

ವಾಯವ್ಯ ಪ್ರಾಂತ್ಯ
ಈ ಪ್ರಾಂತ್ಯದಲ್ಲಿ ಚಿನ್‌ ಜನಾಂಗದ ಜನರೇ ಬಹುಸಂಖ್ಯಾತರು. ಚಿನ್‌, ಸಗಾಯಿಂಗ್, ಕಾಲೆ ಮತ್ತು ಮೊನ್‌ಯ್ವಾ ರಾಜ್ಯಗಳು ಈ ಪ್ರಾಂತ್ಯದಲ್ಲಿವೆ. ಬುಡಕಟ್ಟು ಸಂಸ್ಕೃತಿಯ ಈ ಜನರದ್ದು ಚಿನ್‌ ಧರ್ಮ ಮತ್ತು ಚಿನ್‌ ಭಾಷೆ. ಬಾಮರ್ ಜನರ ಬೌದ್ಧ ಧರ್ಮ ಮತ್ತು ಬರ್ಮಾಸ್‌ ಭಾಷೆ ಹೇರಿಕೆಯ ವಿರುದ್ಧ ಈ ಜನರು ‘ಚಿನ್‌ ನ್ಯಾಷನಲಿಸ್ಟ್‌ ಫ್ರಂಟ್‌ (ಸಿಎನ್‌ಎಫ್‌)’ ಎಂಬ ಪಡೆಯನ್ನು ಕಟ್ಟಿಕೊಂಡು ಹೋರಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಸರ್ಕಾರದ ಸಂದರ್ಭದಲ್ಲಿ ಸಿಎನ್‌ಎಫ್‌ ತಟಸ್ಥವಾಗಿತ್ತು. 2021ರ ಸೇನಾ ದಂಗೆಯ ನಂತರ ಮತ್ತೆ ಹೋರಾಟಕ್ಕೆ ಇಳಿದಿದೆ. ಈಗ ‍ಪಿಡಿಎಫ್‌ ಸೇನೆಗೆ ಬೆಂಬಲ ನೀಡಿದೆ. ಪಿಡಿಎಫ್‌ಗೆ ಬೆಂಬಲ ನೀಡಿದ ಕಾರಣಕ್ಕೆ ಸೇನೆಯು ಚಿನ್‌ ಜನರ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದೆ. ಸೇನೆಯು ಈ ಪ್ರಾಂತ್ಯದಲ್ಲಿ ಹಲವು ಹಳ್ಳಿಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಿದೆ. ಜನರಿಗೆ ಬೇರೆಡೆಯಿಂದ ಆಹಾರ, ವೈದ್ಯಕೀಯ, ಆರ್ಥಿಕ ನೆರವು ಬರುವುದನ್ನು ಸೇನೆ ಸಂಪೂರ್ಣವಾಗಿ ತಡೆ ಹಿಡಿದಿದೆ ಎಂದು ದಿ ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. ಮಂಗಳವಾರ ಸೇನೆಯು ದಾಳಿ ನಡೆಸಿದ ಗ್ರಾಮವು ಇದೇ ಪ್ರಾಂತ್ಯದ ಸಗಾಯಿಂಗ್ ರಾಜ್ಯದಲ್ಲಿದೆ. 2021ರಿಂದ ಈ ಒಂದು ಪ್ರಾಂತ್ಯದಲ್ಲೇ 20,000ಕ್ಕೂ ಹೆಚ್ಚು ಜನರು ನೆಲೆ ಕಳೆದುಕೊಂಡಿದ್ದಾರೆ.

ರಖೀನೆ ಪ್ರಾಂತ್ಯ
ರೋಹಿಂಗ್ಯಾ ಮುಸ್ಲಿಮರು ಬಹುಸಂಖ್ಯಾತರಾಗಿರುವ ಪ್ರಾಂತ್ಯವಿದು. ಸೇನೆ ಮತ್ತು ಪ್ರಜಾಪ್ರಭುತ್ವ ಸರ್ಕಾರಗಳೆರಡೂ ಈ ಜನರನ್ನು ಮ್ಯಾನ್ಮಾರ್‌ನಿಂದ ಹೊರಗಟ್ಟುವ ಕಾರ್ಯಸೂಚಿಯನ್ನು ಹೊಂದಿದ್ದವು. ಸೇನಾಡಳಿತದ ಅವಧಿಯಲ್ಲೇ ಈ ಜನರನ್ನು ಗುಳೆ ಎಬ್ಬಿಸಿ, ಶಿಬಿರಗಳಲ್ಲಿ ಕೂಡಿ ಹಾಕಲಾಗುತ್ತಿತ್ತು. ಆ ಜನರು ಅಲ್ಲಿಯೇ ದುಡಿದು, ಪಡಿತರ ಪಡೆದುಕೊಂಡು ಬದುಕಬೇಕಿತ್ತು. 2012ರ ವೇಳೆಯಲ್ಲೇ ಇಂತಹ ಶಿಬಿರಗಳಲ್ಲಿ 1.3 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರಿದ್ದರು. 2015ರಲ್ಲಿ ಪ್ರಜಾಪ್ರಭುತ್ವ ಸರ್ಕಾರ ಬಂದ ನಂತರ, ರೋಹಿಂಗ್ಯಾ ಮುಸ್ಲಿಮರ ಮೇಲಿನ ದಾಳಿ ಹೆಚ್ಚಾಯಿತು. ಒಂದೆಡೆ ಸೇನೆ, ಮತ್ತೊಂದೆಡೆ ಬಾಮರ್ ಜನಾಂಗದ ಜನರು ರೋಹಿಂಗ್ಯಾ ಮುಸ್ಲಿಮರ ಮನೆಗಳನ್ನು ಸುಟ್ಟರು. 2017ರ ವೇಳೆಗೆ ಇಂತಹ ದಾಳಿಗಳು ತೀವ್ರ ಸ್ವರೂಪ ಪಡೆದಿತ್ತು. ಆ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಮ್ಯಾನ್ಮಾರ್‌ ತೊರೆದರು. ಪಕ್ಕದ ಬಾಂಗ್ಲಾದೇಶ, ಭಾರತಕ್ಕೆ ಗುಳೆ ಹೋದರು. ಈಗ ಸೇನಾಡಳಿತದ ವಿರುದ್ಧ ರೋಹಿಂಗ್ಯಾ ಮುಸ್ಲಿಮರು ಒಟ್ಟಾಗಿದ್ದಾರೆ. ಪಿಡಿಎಫ್‌ ಸೇನೆಯ ಜತೆ ಸೇರಿ, ಸೇನೆಯ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಇಳಿದಿದ್ದಾರೆ.

ಈಶಾನ್ಯ ಪ್ರಾಂತ್ಯ
ಕಚಿನ್‌ ಮತ್ತು ಶಾನ್‌ ರಾಜ್ಯಗಳು ಈ ಪ್ರಾಂತ್ಯದಲ್ಲಿವೆ. ಕಚಿನ್‌, ಶಾನ್‌ ಮತ್ತು ತಾಂಗ್‌ ಇಲ್ಲಿನ ಪ್ರಮುಖ ಜನಾಂಗೀಯ ಗುಂಪುಗಳು. ಈ ಗುಂಪುಗಳು ತಮ್ಮದೇ ಆದ ಭಾಷೆ ಮತ್ತು ಧರ್ಮವನ್ನು ಅನುಸರಿಸುತ್ತವೆ. ಕ್ರೈಸ್ತ ಧರ್ಮದ ಪ್ರಭಾವವಿರುವ ಈ ಪ್ರಾಂತ್ಯದಲ್ಲಿ ಬೌದ್ಧ ಧರ್ಮದ ಹೇರಿಕೆಗೆ ಸಣ್ಣಮಟ್ಟದ ವಿರೋಧವಿತ್ತು. ಆದರೆ, 2021ರ ಸೇನಾ ದಂಗೆಗೂ ಮುನ್ನ ಯಾವುದೇ ರೀತಿಯ ಸಶಸ್ತ್ರ ಹೋರಾಟವಿರಲಿಲ್ಲ. ದಂಗೆಯ ನಂತರ ಸೇನಾಡಳಿತವು ಬೌದ್ಧ ಧರ್ಮ ಮತ್ತು ಬರ್ಮಾಸ್‌ ಭಾಷೆ ಹೇರಿಕೆಗೆ ಒತ್ತು ನೀಡಿದ್ದರಿಂದ ಇಲ್ಲಿನ ಜನರು ಸಶಸ್ತ್ರ ಹೋರಾಟಕ್ಕೆ ಇಳಿದರು. ಈ ಮೂರೂ ಜನಾಂಗಗಳ ಜನರು ಕಚಿನ್‌ ಇಂಡಿಪೆಂಡೆಂಡ್‌ ಆರ್ಘನೈಸೇಷನ್‌ ಹೆಸರಿನಲ್ಲಿ ಒಟ್ಟಾಗಿದ್ದಾರೆ. ಪಿಡಿಎಫ್‌ ಜತೆಗೆ ಕೈಜೋಡಿಸಿದ್ದಾರೆ.

ಆಗ್ನೇಯ ಪ್ರಾಂತ್ಯ
ಈ ಪ್ರಾಂತ್ಯದಲ್ಲಿ ಬಾಮರ್ ಮತ್ತು ಕಾರೆನ್‌ ಜನಾಂಗದ ಜನರ ಪ್ರಾಬಲ್ಯವಿದೆ. ಆದರೆ, ಎರಡೂ ಜನಾಂಗಗಳ ಧರ್ಮ ಮತ್ತು ಭಾಷೆ ಬೇರೆ. ಬಹುಸಂಖ್ಯಾತರಾದ ಬಾಮರ್ ಜನರು ತಮ್ಮ ಬೌದ್ಧ ಧರ್ಮ ಮತ್ತು ಬರ್ಮಾಸ್‌ ಭಾಷೆಯನ್ನು ಕಾರೆನ್‌ ಜನರ ಮೇಲೆ ಹೇರಲು ಯತ್ನಿಸುತ್ತಿದ್ದಾರೆ. ಈ ಎರಡೂ ಜನಾಂಗೀಯ ಗುಂಪುಗಳ ನಡುವಣ ಸಂಘರ್ಷ 70 ವರ್ಷಕ್ಕಿಂತ ಹಳೆಯದು. ಆರ್ಥಿಕವಾಗಿ ದುರ್ಬಲವಾದ ಕಾರೆನ್‌ ಜನರ ಮೇಲೆ ಸೇನಾಡಳಿತದ ದಬ್ಬಾಳಿಕೆ ಹೆಚ್ಚಾಗಿದೆ. 2021ರ ದಂಗೆಯ ನಂತರ ಈ ಜನರನ್ನು, ಹೊರಗಟ್ಟುವ ಕಾರ್ಯಸೂಚಿಯನ್ನು ಸೇನೆ ಜಾರಿಗೆ ತಂದಿದೆ. ಈ ಅವಧಿಯಲ್ಲಿ 10,000ಕ್ಕೂ ಹೆಚ್ಚು ಕಾರೆನ್‌ ಜನರು ಥಾಯ್ಲೆಂಡ್‌ಗೆ ಓಡಿ ಹೋಗಿದ್ದಾರೆ. ಪಿಡಿಎಫ್‌ ಈ ಪ್ರಾಂತ್ಯದಲ್ಲೂ ಸಕ್ರಿಯವಾಗಿದ್ದು, ಸೇನಾಡಳಿತದ ವಿರುದ್ಧ ಹೋರಾಟವನ್ನು ಸಂಘಟಿಸುತ್ತಿದೆ.

ಮಧ್ಯ ಮತ್ತು ದಕ್ಷಿಣ ಪ್ರಾಂತ್ಯಗಳು
ಈ ಎರಡೂ ಪ್ರಾಂತ್ಯಗಳಲ್ಲಿ ಬಾಮರ್ ಜನರದ್ದೇ ಪ್ರಾಬಲ್ಯ. ಬೇರೆ ಜನಾಂಗೀಯ ಗುಂಪುಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಲ್ಪಸಂಖ್ಯಾತರು. ವಸಾಹತುಪೂರ್ವ ‘ಬರ್ಮಾ’ದಲ್ಲಿ ಈ ಪ್ರಾಂತ್ಯಗಳು ಆಡಳಿತ ಕೇಂದ್ರವಾಗಿದ್ದವು. ಈಚಿನವರೆಗೂ ಇಲ್ಲಿ ಸಂಘರ್ಷ ಇರಲೇ ಇಲ್ಲ. ಹೀಗಾಗಿಯೇ ಈ ಪ್ರದೇಶವನ್ನು ‘ಡ್ರೈ ಝೋನ್‌’ ಎಂದು ಕರೆಯಲಾಗುತ್ತಿತ್ತು. ಆದರೆ ಒಂದು ದಶಕದಿಂದ ಈಚೆಗೆ ಇಲ್ಲಿಯೂ ಸಂಘರ್ಷ ಆರಂಭವಾಗಿದೆ. ಈ ಪ್ರದೇಶದಲ್ಲಿ ರೈತ ಸಮುದಾಯದ್ದು ಬಹುಸಂಖ್ಯೆ. ಸರ್ಕಾರವು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪರಮಾಧಿಕಾರ ಹೊಂದಿದೆ. ಇದು ಇಲ್ಲಿನ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ಸೇನಾಡಳಿತದ ವಿರುದ್ಧ ಎಲ್ಲಾ ಪ್ರಾಂತ್ಯಗಳ ಜನಾಂಗೀಯ ಗುಂಪುಗಳನ್ನು ಒಗ್ಗೂಡಿಸಿರುವ ಪಿಡಿಎಫ್‌ ಜನ್ಮತಳೆದದ್ದು ಇದೇ ಪ್ರಾಂತ್ಯಗಳಲ್ಲಿ.

ನಾಗರಿಕರ ಮೇಲೆ ದಾಳಿ
ಯಾಂಗೂನ್ (ಎಎಫ್‌ಪಿ/ರಾಯಿಟರ್ಸ್):
ಮ್ಯಾನ್ಮಾರ್‌ನ ಸೇನಾಡಳಿತ ಸರ್ಕಾರವು ತನ್ನದೇ ದೇಶದ ಗ್ರಾಮದ ಮೇಲೆ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ವಾಯವ್ಯ ಮ್ಯಾನ್ಮಾರ್‌ನ ಸಗಾಯಿಂಗ್ ರಾಜ್ಯದ ಕನ್ಬಾಲು ಟೌನ್‌ಶಿಪ್ ಸಮೀಪದ ಪಝಿಗಿ ಎಂಬ ಹಳ್ಳಿಯ ಮೇಲೆ ಸೇನಾ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ಮಂಗಳವಾರ ಬಾಂಬ್ ದಾಳಿ ನಡೆಸಿವೆ. ಮೃತರಲ್ಲಿ 30ಕ್ಕೂ ಹೆಚ್ಚು ಮಕ್ಕಳು ಸೇರಿವೆ ಎಂದು ಹೇಳಲಾಗಿದೆ. ಸೇನಾ ಕಾರ್ಯಾಚರಣೆಯನ್ನು ಮ್ಯಾನ್ಮಾರ್ ಸರ್ಕಾರವು ಬುಧವಾರ ಖಚಿತಪಡಿಸಿದೆ.

ದೇಶದ ಸೇನೆ ನೇತೃತ್ವದ ಸರ್ಕಾರದ ವಿರೋಧಿಗಳ ಗುಂಪಿನ ಕಾರ್ಯಕ್ರಮವನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. 2021ರಲ್ಲಿ ಸೇನಾ ದಂಗೆ ನಡೆಸಿ ಅಧಿಕಾರಕ್ಕೆ ಬಂದ ಮ್ಯಾನ್ಮಾರ್ ಸೇನಾಡಳಿತವನ್ನು ಎದುರು ಹಾಕಿಕೊಂಡಿರುವ ಸ್ಥಳೀಯ ಜನಾಂಗೀಯ ಸಶಸ್ತ್ರ ಗುಂಪಿನ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ಪಝಿಗಿ ಎಂಬ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಕ್ಕಳು ವೇದಿಕೆ ಮೇಲೆ ನೃತ್ಯ ಪ್ರದರ್ಶಿಸುತ್ತಿದ್ದ ಸಮಯದಲ್ಲಿ ಬಾಂಬ್ ದಾಳಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಾಂಬ್ ದಾಳಿಯ ಪರಿಣಾಮದಿಂದ, ಮೃತದೇಹಗಳು ಇಡೀ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವವರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಎಷ್ಟು ಎಂಬುದು ಖಚಿತಗೊಂಡಿಲ್ಲ.

15 ಲಕ್ಷ: 2021ರ ಸೇನಾ ದಂಗೆಯ ಬಳಿಕ ನೆಲೆ ಕಳೆದುಕೊಂಡ ಜನರ ಸಂಖ್ಯೆ
10 ಲಕ್ಷ: ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿರುವ/ಆಶ್ರಯ ಬಯಸಿರುವ ಮ್ಯಾನ್ಮಾರ್ ನಿರಾಶ್ರಿತರ ಸಂಖ್ಯೆ
_____________________________________________________________________

ಆಧಾರ: ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್ ಸ್ಟ್ರಾಟೆಜಿಕ್‌ ಸ್ಟಡೀಸ್‌ ಅಧ್ಯಯನ ವರದಿಗಳು, ದಿ ವಾಷಿಂಗ್ಟನ್‌ ಪೋಸ್ಟ್‌, ದಿ ನ್ಯೂಯಾರ್ಕ್‌ ಟೈಮ್ಸ್‌, ರಾಯಿಟರ್ಸ್‌, ಬಿಬಿಸಿ, ಅಮ್ನೆಸ್ಟಿ ಇಂಟರ್‌ನ್ಯಾಷನಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT