ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ ಅಗಲ | ರೈಲ್ವೆ ಸುರಕ್ಷೆಗೆ ಅಲಕ್ಷ್ಯ, ಅನುದಾನ ಬರ
ಆಳ ಅಗಲ | ರೈಲ್ವೆ ಸುರಕ್ಷೆಗೆ ಅಲಕ್ಷ್ಯ, ಅನುದಾನ ಬರ
Published 7 ಜೂನ್ 2023, 1:38 IST
Last Updated 7 ಜೂನ್ 2023, 1:38 IST
ಅಕ್ಷರ ಗಾತ್ರ
ರೈಲು ಪ್ರಯಾಣದಲ್ಲಿ ಸಂಭವಿಸುವ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ನಮ್ಮಲ್ಲಿ ಸೂಕ್ತ ವ್ಯವಸ್ಥೆಗಳಿದ್ದರೂ, ಅದನ್ನು ಸಮರೋಪಾದಿಯಲ್ಲಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂಬುದರತ್ತ ಮಹಾಲೇಖಪಾಲರ (ಸಿಎಜಿ) ವರದಿ ಬೊಟ್ಟು ಮಾಡಿ ತೋರಿಸಿದೆ. ಜತೆಗೆ ರೈಲ್ವೆ ಸುರಕ್ಷೆ ಮತ್ತು ಭದ್ರತೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ವರದಿಯೂ ಇದೇ ಮಾತನ್ನು ಹೇಳಿದೆ.

ದೇಶದಲ್ಲಿ ಸಂಭವಿಸಿದ ಬಹುತೇಕ ರೈಲು ಅಪಘಾತಗಳಿಗೆ ಕಾರಣ ಸಿಗ್ನಲಿಂಗ್‌ ವ್ಯವಸ್ಥೆ ಮತ್ತು ಚಾಲಕನಿಂದಾದ ಲೋಪ ಎನ್ನುತ್ತದೆ ಸಂಸದೀಯ ಸ್ಥಾಯಿ ಸಮಿತಿಯ ವರದಿ. ‘ಈ ವಿಚಾರದಲ್ಲಿ ರೈಲು ಚಾಲಕರನ್ನೂ ದೂರುವ ಹಾಗಿಲ್ಲ. ದೇಶದಲ್ಲಿನ ಪ್ರತಿ ರೈಲು ಮಾರ್ಗದಲ್ಲೂ ಕಿ.ಮೀ.ಗೆ ಒಂದರಂತೆ ಸಿಗ್ನಲ್‌ಗಳಿವೆ. ಚಾಲಕರು ಆ ಎಲ್ಲಾ ಸಿಗ್ನಲ್‌ಗಳನ್ನು ಬರಿಗಣ್ಣಿನಿಂದಲೇ ನೋಡಿ, ನಿರ್ಧಾರ ತೆಗೆದುಕೊಳ್ಳಬೇಕು. ಇದು ಬಹಳ ತ್ರಾಸದಾಯಕ ಕೆಲಸ. ಈ ಕಾರಣದಿಂದಲೇ ಸಿಗ್ನಲ್‌ಗಳನ್ನು ಸರಿಯಾಗಿ ಗುರುತಿಸುವಲ್ಲಿ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಲೋಪವಾಗುತ್ತದೆ. ಇದನ್ನು ತಪ್ಪಿಸುವ ವ್ಯವಸ್ಥೆ ಆಗಬೇಕು’ ಎಂದು ಸಮಿತಿಯು 2016–17ನೇ ಸಾಲಿನಲ್ಲಿ ಸಲ್ಲಿಸಿದ್ದ ವರದಿಯಲ್ಲಿ ಶಿಫಾರಸು ಮಾಡಿತ್ತು.

ಸಿಗ್ನಲ್‌ ಗುರುತಿಸಲು ಮತ್ತು ಅದಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಸ್ವಯಂಚಾಲಿತ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಯೋಜನೆಗೆ 2012ರಲ್ಲಿ ಯುಪಿಎ–2 ಸರ್ಕಾರ ಚಾಲನೆ ನೀಡಿತ್ತು. ಸಿಗ್ನಲ್‌ ನೀಡುವ ಮತ್ತು ಅದಕ್ಕೆ ತಕ್ಕಂತೆ ರೈಲು ಚಲಿಸದಿದ್ದರೆ ಸ್ವಯಂಚಾಲಿತವಾಗಿ ಬ್ರೇಕ್‌ ಹಾಕುವ ಕೆಲಸವನ್ನು ಈ ವ್ಯವಸ್ಥೆ ಮಾಡಬೇಕಿತ್ತು. ವಿದೇಶಗಳಲ್ಲಿ ಈ ವ್ಯವಸ್ಥೆ ಲಭ್ಯವಿದ್ದರೂ ಸಂಪೂರ್ಣ ದೇಶೀಯವಾಗಿ ಇದನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿತ್ತು. ರೈಲ್ವೆ ಇಲಾಖೆಯ ‘ರಿಸರ್ಚ್‌ ಡಿಸೈನ್ಸ್‌ ಅಂಡ್ ಸ್ಟಾಂಡರ್ಡ್ಸ್‌ ಆರ್ಗನೈಸೇಷನ್‌’ ಇದನ್ನು ಅಭಿವೃದ್ಧಿಪಡಿಸಿತ್ತು. ಸಂಪೂರ್ಣ ದೇಶೀಯವಾದ ಈ ವ್ಯವಸ್ಥೆಗೆ ‘ಕವಚ’ ಎಂದು ಹೆಸರಿಡಲಾಗಿತ್ತು. ಕವಚ ವ್ಯವಸ್ಥೆಯ ಮೊದಲ ಪ್ರಾತ್ಯಕ್ಷಿಕೆಯನ್ನು 2016ರಲ್ಲಿ ನೀಡಲಾಗಿತ್ತು. ಆದರೆ, ಈ ವ್ಯವಸ್ಥೆ ಬಳಕೆಗೆ ಸಿದ್ಧವಾಗಿದೆ ಎಂದು ಘೋಷಿಸಿದ್ದು 2022ರ ಮಾರ್ಚ್‌ನಲ್ಲಿ. ಆನಂತರವಷ್ಟೇ ಈ ವ್ಯವಸ್ಥೆ ಬಳಕೆಗೆ ಚಾಲನೆ ನೀಡಲಾಯಿತು.

ದೇಶದಲ್ಲಿ ಒಟ್ಟು 68,103 ಕಿ.ಮೀ. ಉದ್ದದಷ್ಟು ರೈಲುಮಾರ್ಗವಿದ್ದು, ಅದರಲ್ಲಿ 35,736 ಕಿ.ಮೀ. ಉದ್ದದಷ್ಟು ರೈಲು ಮಾರ್ಗಕ್ಕೆ ಕವಚ ವ್ಯವಸ್ಥೆ ಅಳವಡಿಸಲು 2022–23ರ ಬಜೆಟ್‌ನಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಆದರೆ 2022–23ರ ಬಜೆಟ್‌ನಲ್ಲಿ 2,000 ಕಿ.ಮೀ.ನಷ್ಟು ಉದ್ದದ ಮಾರ್ಗಕ್ಕೆ ಕವಚ ವ್ಯವಸ್ಥೆ ಅಳವಡಿಸಲಾಗುವುದು ಎಂದು ಹೇಳಲಾಗಿದೆ. ಇದನ್ನು ಅನುಷ್ಠಾನಕ್ಕೆ ತರುವುದು ಹೇಗೆ ಮತ್ತು ಇದಕ್ಕಾಗಿ ಎಷ್ಟು ಹಣ ಮೀಸಲಿರಿಸಲಾಗಿದೆ ಎಂಬುದರ ಮಾಹಿತಿ ಮತ್ತು ಕಾರ್ಯ ಯೋಜನೆ ಲಭ್ಯವಿಲ್ಲ.

ಕೇಂದ್ರ ರೈಲ್ವೆ ಸಚಿವರು ಈಚೆಗೆ ನೀಡಿರುವ ಮಾಹಿತಿ ಪ್ರಕಾರ ಕವಚ ವ್ಯವಸ್ಥೆ ಅಳವಡಿಕೆಗೆ 6,000 ಕಿ.ಮೀ. ಉದ್ದದಷ್ಟು ಮಾರ್ಗದಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಈ ಸರ್ವೇ ಕಾರ್ಯ ಪೂರ್ಣಗೊಳ್ಳುವುದು ಯಾವಾಗ ಎಂಬುದರ ಮಾಹಿತಿ ಲಭ್ಯವಿಲ್ಲ. ಜತೆಗೆ, 2,951 ಕಿ.ಮೀ.ನಷ್ಟು ಉದ್ದದ ಮಾರ್ಗಕ್ಕೆ ಕವಚ ಅಳವಡಿಸಲು ಟೆಂಡರ್‌ ಕಾರ್ಯ ಪೂರ್ಣಗೊಂಡಿದೆ. 2024ರ ವೇಳೆಗೆ ಅಳವಡಿಕೆ ಕಾರ್ಯ ಪೂರ್ಣಗೊಳ್ಳಬೇಕು ಎಂದು ಸರ್ಕಾರ ಹೇಳಿದೆ. ಆದರೆ, ಈ ಕಾಮಗಾರಿಗಳ ಪ್ರಗತಿಯ ವರದಿ ಲಭ್ಯವಿಲ್ಲ.

‘ಸಿಗ್ನಲ್‌ ನೀಡುವ ಮತ್ತು ಸಿಗ್ನಲ್‌ ಮೀರುವ ಸಮಸ್ಯೆಗಳಿಂದಲೇ ಹೆಚ್ಚಿನ ಅಪಘಾತ ಸಂಭವಿಸುತ್ತದೆ. ಇದನ್ನು ತಪ್ಪಿಸುವ ಕೆಲಸವನ್ನು ರೈಲ್ವೆ ಇಲಾಖೆ ಮಾಡಬೇಕಿತ್ತು. ಈ ಎಲ್ಲಾ ಅಪಘಾತಗಳ ಸಂದರ್ಭದಲ್ಲಿ ಇಲಾಖೆಯು ಕೇವಲ ತನಿಖಾ ವರದಿ ಪಡೆದುಕೊಳ್ಳುತ್ತದೆ. ಆದರೆ, ಅಪಘಾತವನ್ನು ತಪ್ಪಿಸಲು ಯಾವ ಕ್ರಮವನ್ನೂ ಇಲಾಖೆ ತೆಗೆದುಕೊಳ್ಳುತ್ತಿಲ್ಲ. ಈ ದಿಸೆಯಲ್ಲಿ ರೈಲ್ವೆ ಇಲಾಖೆಯು ತೆಗೆದುಕೊಳ್ಳುತ್ತಿರುವ ಕ್ರಮ ಸಾಲದು ಎಂದು ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

  • 68,103 ಕಿ.ಮೀ./ ದೇಶದಲ್ಲಿರುವ ರೈಲು ಮಾರ್ಗಗಳ ಒಟ್ಟು ಉದ್ದ

  • 35,736 ಕಿ.ಮೀ./ ಕವಚ ವ್ಯವಸ್ಥೆ ಅಳವಡಿಕೆಗೆ ತಾತ್ವಿಕ ಮಂಜೂರಾತಿ ಪಡೆದಿರುವ ಮಾರ್ಗದ ಒಟ್ಟು ಉದ್ದ

  • 6,000 ಕಿ.ಮೀ./ ಕವಚ ವ್ಯವಸ್ಥೆ ಅಳವಡಿಕೆಗೆ ಸರ್ವೇ ಕಾರ್ಯ ಆರಂಭಿಸಲಾಗಿರುವ ಮಾರ್ಗಗಳ ಒಟ್ಟು ಉದ್ದ

  • 2,951 ಕಿ.ಮೀ./ ಕವಚ ವ್ಯವಸ್ಥೆ ಅಳವಡಿಕೆಗೆ ಗುತ್ತಿಗೆ ನೀಡಿಕೆ ಪೂರ್ಣಗೊಂಡಿರುವ ಮಾರ್ಗಗಳ ಒಟ್ಟು ಉದ್ದ

  • 1,445 ಕಿ.ಮೀ./ ಕವಚ ವ್ಯವಸ್ಥೆ ಅಳವಡಿಕೆ ಕಾರ್ಯ ಪೂರ್ಣಗೊಂಡಿರುವ ಮಾರ್ಗಗಳ ಉದ್ದ

  • ದೇಶದಲ್ಲಿ 68,103 ಕಿ.ಮೀ. ಉದ್ದದಷ್ಟು ರೈಲು ಮಾರ್ಗವಿದ್ದು, ಇದರಲ್ಲಿ 1,445 ಕಿ.ಮೀ. ಉದ್ದದಷ್ಟು ಮಾರ್ಗದಲ್ಲಷ್ಟೇ ಕವಚ ವ್ಯವಸ್ಥೆ ಅಳವಡಿಸಲಾಗಿದೆ

ಕವಚ ಇದ್ದಿದ್ದರೆ...
ರೈಲು ಚಾಲಕರು ಸಿಗ್ನಲ್‌ ಪಾಲಿಸುವಲ್ಲಿ ವಿಫಲವಾದಾಗ ಮತ್ತು ಎರಡು ರೈಲುಗಳು ಒಂದೇ ಲೇನ್‌ ಅನ್ನು ಪ್ರವೇಶಿಸಿದಾಗ ‘ಕವಚ’ ವ್ಯವಸ್ಥೆಯು ಸ್ವಯಂಚಾಲಿತವಾಗಿ ಬ್ರೇಕ್‌ ಹಾಕಿಕೊಳ್ಳುತ್ತದೆ. ಬಾಲೇಶ್ವರದ ಬಹನಾಗಾ ಬಜಾರ್‌ ರೈಲು ನಿಲ್ದಾಣದ ಬಳಿ ಈಚೆಗಷ್ಟೇ ನಡೆದ ಅಪಘಾತದಲ್ಲಿ ಕೋರೊಮಂಡಲ್‌ ಎಕ್ಸ್‌ಪ್ರೆಸ್‌ ರೈಲು, ಸರಕು ಸಾಗಣೆ ರೈಲು ಇದ್ದ ಲೇನ್‌ ಅನ್ನು ಪ್ರವೇಶಿಸಿತ್ತು. ಈ ಮಾರ್ಗದಲ್ಲಿ ಮತ್ತು ಈ ರೈಲುಗಳಲ್ಲಿ ಕವಚ ವ್ಯವಸ್ಥೆ ಇದ್ದಿದ್ದರೆ, ಈ ಅಪಘಾತವನ್ನು ತಪ್ಪಿಸಬಹುದಾಗಿತ್ತು ಎಂಬುದು ತಜ್ಞರ ವಿಶ್ಲೇಷಣೆ. ಕೋರೊಮಂಡಲ್‌ ಎಕ್ಸ್‌‍ಪ್ರೆಸ್‌ ರೈಲಿನಲ್ಲಿ ಕವಚ ವ್ಯವಸ್ಥೆ ಇದ್ದಿದ್ದರೆ ಅದು ಸರಕು ಸಾಗಣೆ ರೈಲು ಇದ್ದ ಲೇನ್‌ ಅನ್ನು ಪ್ರವೇಶಿಸಿದ ಕೂಡಲೇ ಕವಚ ವ್ಯವಸ್ಥೆಯು ಸ್ವಯಂಚಾಲಿತವಾಗಿ ಬ್ರೇಕ್‌ ಹಾಕಿಕೊಳ್ಳುತ್ತಿತ್ತು. ಇನ್ನು ಹೌರಾ–ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲೂ ಕವಚ ವ್ಯವಸ್ಥೆ ಇದ್ದಿದ್ದರೆ, ಅದು ಚಲಿಸುತ್ತಿದ್ದ ಲೇನ್‌ನಲ್ಲಿ ಕೋರೊಮಂಡಲ್‌ ರೈಲಿನ ಬೋಗಿಗಳು ಬಿದ್ದಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್‌ ಹಾಕಿಕೊಳ್ಳುತ್ತಿತ್ತು ಎಂಬುದು ತಜ್ಞರ ವಿಶ್ಲೇಷಣೆ.

ಸಿಎಜಿ ಶಿಫಾರಸುಗಳು

  • ಸುರಕ್ಷತಾ ಕ್ರಮಗಳಲ್ಲಿ ಆದ್ಯತೆ ಅಲ್ಲದ ಕಾರ್ಯಗಳಿಗೆ ರೈಲ್ವೆಯು ವಿನಿಯೋಗಿಸುತ್ತಿರುವ ಹಣದ ಪ್ರಮಾಣವು ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ. ಇದನ್ನು ತಪ್ಪಿಸಬೇಕು. ಆದ್ಯತೆಯ ಕಾರ್ಯಗಳಿಗೆ ಹಣವನ್ನು ತೆಗೆದಿರಿಸಬೇಕು. ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶದ ನಿಧಿಯನ್ನು ಅಗತ್ಯ ಕಾರ್ಯಗಳಿಗಷ್ಟೇ ವೆಚ್ಚ ಮಾಡಬೇಕು

  • ಹಳಿ ನಿರ್ವಹಣೆ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸ್ಥಾಯಿ ಸಮಿತಿ ನೀಡಿರುವ ಶಿಫಾರಸುಗಳನ್ನು ರೈಲ್ವೆ ಇಲಾಖೆಯು ಕಡೆಗಣಿಸಿದೆ. ಆ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು

  • ರೈಲು ಸುರಕ್ಷತೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ವಿಸ್ತೃತವಾದ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು ಮತ್ತು ಅದನ್ನು ಅನುಷ್ಠಾನಕ್ಕೆ ತರಬೇಕು

ಹಳಿ ನವೀಕರಣಕ್ಕೆ ಹಣವಿಲ್ಲ
ರೈಲ್ವೆ ಸುರಕ್ಷೆಯಲ್ಲಿ ಹಳಿಗಳ ನವೀಕರಣವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಪ್ರತಿ ವರ್ಷ 4,500 ಕಿ.ಮೀ ಉದ್ದದಷ್ಟು ಹಳಿಗಳನ್ನು ನವೀಕರಣ ಮಾಡಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಯು ನೀಡಿದ್ದ ‘ರೈಲ್ವೆ ಸುರಕ್ಷೆ ಮತ್ತು ಭದ್ರತೆ’ ವರದಿಯಲ್ಲಿ ಹೇಳಿತ್ತು. ಆದರೆ, ಈ ಪ್ರಮಾಣದ ಗುರಿಯನ್ನು ಹಾಕಿಕೊಳ್ಳುವಲ್ಲಿ ರೈಲ್ವೆ ಇಲಾಖೆ ಸೋತಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ. ಅನುದಾನದ ಕೊರತೆ ಕಾರಣದಿಂದಲೇ ವಿವಿಧ ರೈಲ್ವೆ ವಿಭಾಗಗಳು ಹಳಿಗಳ ನವೀಕರಣ ಕಾಮಗಾರಿಯನ್ನು ಅಗತ್ಯ ಪ್ರಮಾಣದಲ್ಲಿ ನಡೆಸಿಲ್ಲ ಎಂದೂ ಸಿಎಜಿ ಹೇಳಿದೆ. ಸ್ಥಾಯಿ ಸಮಿತಿಯ ವರದಿಯ ಕುರಿತು ಇಲಾಖೆಯು ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲೂ ಇದೇ ಅಂಶವನ್ನುಉಲ್ಲೇಖಿಸಲಾಗಿದೆ.

‘ಕನಿಷ್ಠ 4,500 ಕಿ.ಮೀ ಉದ್ದದಷ್ಟು ಹಳಿಗಳನ್ನು ಪ್ರತಿ ವರ್ಷ ನವೀಕರಣ ಮಾಡಬೇಕು. ಜೊತೆಗೆ, ವಿವಿಧ ವಲಯಗಳು ತಮಗೆ ಸಿಗುವ ಅನುದಾನದ ಪ್ರಮಾಣವನ್ನು ನೋಡಿಕೊಂಡು, ಈ ಗುರಿಯನ್ನು ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬಹುದು’ ಎಂದು ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಹೇಳಿತ್ತು. ಆದರೆ, ವಿವಿಧ ವಲಯಗಳು ಈ ಕನಿಷ್ಠ ಗುರಿಯನ್ನೂ ಹಾಕಿಕೊಳ್ಳುವುದರಲ್ಲಿ ಸೋತಿವೆ.

ಹೆಚ್ಚೆಂದರೆ ವಾರ್ಷಿಕವಾಗಿ 2,723.89 ಕಿ.ಮೀನಷ್ಟು ಗುರಿಯನ್ನು ಮಾತ್ರ ಹಾಕಿಕೊಳ್ಳುವಲ್ಲಿ ವಿವಿಧ ವಲಯಗಳು ಶಕ್ತವಾಗಿವೆ. ಇದು ಕನಿಷ್ಠ 4,500 ಕಿ.ಮೀ ಗುರಿಯ ಆಸುಪಾಸಿನಲ್ಲೂ ಬರುವುದಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ. ರೈಲ್ವೆಯ ವಿವಿಧ ವಲಯಗಳು ಕಳೆದ ಕೆಲವು ವರ್ಷಗಳಿಂದ ವಾರ್ಷಿಕವಾಗಿ ಹಾಕಿಕೊಂಡ ಹಳಿ ನವೀಕರಣದ ಗುರಿಯಗಳ ಬಗ್ಗೆ ಸಿಎಜಿ ಅಸಮಾಧಾನ ವ್ಯಕ್ತಪಡಿಸಿದೆ. ಈ ಕಾರಣದಿಂದ ದೇಶದಾದ್ಯಂತ ತೀವ್ರಗತಿಯಲ್ಲಿ ಆಗಬೇಕಿದ್ದ ಹಳಿ ನವೀಕರಣದಲ್ಲಿ ಹಿಂದೆ ಬಿದ್ದಂತಾಗಿದೆ.

ವಿವಿಧ ವಲಯಗಳು ಅಗತ್ಯ ಇರುವಷ್ಟಾದರೂ ಗುರಿ ಹಾಕಿಕೊಳ್ಳಬೇಕು ಮತ್ತು ಆ ಗುರಿಯನ್ನು ಸಾಧಿಸಬೇಕು ಎಂದು ಸಿಎಜಿ ಹೇಳಿದೆ. ರೈಲ್ವೆಯ ನಾಲ್ಕು ವಲಯಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರೈಲು ಹಳಿ ತಪ್ಪಿ 70 ಅವಘಡಗಳು ಸಂಭವಿಸಿವೆ. ಇದರಲ್ಲಿ 16 ಅವಘಡಗಳು ಹಳಿ ನವೀಕರಣ ಮಾಡದ ಕಾರಣಕ್ಕಾಗಿಯೇ ಸಂಭವಿಸಿವೆ ಎಂದು ಸಿಎಜಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT