ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಕ್ರೀಡಾ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ: ಆಂತರಿಕ ದೂರು ಸಮಿತಿಗಳೇ ಇಲ್ಲ
ಆಳ–ಅಗಲ | ಕ್ರೀಡಾ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ: ಆಂತರಿಕ ದೂರು ಸಮಿತಿಗಳೇ ಇಲ್ಲ
ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ
Published 29 ಮೇ 2023, 21:53 IST
Last Updated 29 ಮೇ 2023, 21:53 IST
ಅಕ್ಷರ ಗಾತ್ರ
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಕ್ರೀಡಾ ಸಂಸ್ಥೆಗಳನ್ನೂ ಕೆಲಸದ ಸ್ಥಳ ಎಂದೇ ಪರಿಗಣಿಸಲಾಗುತ್ತದೆ. ಹೀಗಿರುವಾಗ ಕ್ರೀಡಾ ಸಂಸ್ಥೆಗಳಲ್ಲೂ ಲೈಂಗಿಕ ದೌರ್ಜನ್ಯ ತಡೆಗೆ ಆಂತರಿಕ ದೂರು ಸಮಿತಿ ರಚಿಸಬೇಕಿರುವುದು ಕಡ್ಡಾಯ. ಆದರೆ, ಭಾರತೀಯ ಕುಸ್ತಿ ಫೆಡರೇಷನ್‌ನಲ್ಲಿ ಅಂತಹ ಸಮಿತಿಯೇ ಇಲ್ಲ

ತಿಂಗಳುಗಳಿಂದ ನಡೆಯುತ್ತಿರುವ ಮಹಿಳಾ ಕುಸ್ತಿಪಟುಗಳ ಹೋರಾಟವು ಗಂಭೀರವಾದ ಹಲವಾರು ವಿಷಯಗಳನ್ನು ಸಾಮಾನ್ಯ ಜನರ ಮುಂದಿಟ್ಟಿದೆ. ಈ ಪ್ರತಿಭಟನೆಯು ಹಲವು ಸ್ತರದ ಚರ್ಚೆಗಳನ್ನು ಹುಟ್ಟುಹಾಕಿದೆ. ದೇಶಕ್ಕಾಗಿ ಪದಕ ಗೆದ್ದವರೂ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡುತ್ತಿರುವುದು ಕ್ರೀಡಾ ಕ್ಷೇತ್ರದಲ್ಲಿನ ಹಲವು ನ್ಯೂನತೆಗಳತ್ತ ಬೊಟ್ಟು ಮಾಡಿದೆ. 

ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷರಾಗಿದ್ದವರ ವಿರುದ್ಧ ಕುಸ್ತಿಪಟುಗಳು ಮಾಡಿರುವ, ಲೈಂಗಿಕ ದೌರ್ಜನ್ಯದ ಆರೋಪವು ಗಂಭೀರವಾದದು. ಈ ಆರೋಪ ಮತ್ತು ದೂರು ನೀಡಿದ ಪ್ರಕ್ರಿಯೆಗಳ ಬಗ್ಗೆಯೇ ಹಲವು ಆಕ್ಷೇಪಗಳು ವ್ಯಕ್ತವಾಗಿವೆ. ಆದರೆ, ಸ್ಥಾಪಿತ ಕಾನೂನಿನ ಪ್ರಕಾರ ದೂರು ನೀಡುವ ಮತ್ತು ಅದನ್ನು ಪರಿಹರಿಸುವ ವ್ಯವಸ್ಥೆಯೇ ಕುಸ್ತಿ ಫೆಡರೇಷನ್‌ನಲ್ಲಿ ಇಲ್ಲ ಎಂಬುದನ್ನು ಈ ಹೋರಾಟವು ಬಹಿರಂಗಪಡಿಸಿದೆ. ನಮ್ಮಲ್ಲಿ ಈಗಾಗಲೇ ಇರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನುಗಳು ಕ್ರೀಡಾಕ್ಷೇತ್ರದಲ್ಲಿ ಎಷ್ಟರಮಟ್ಟಿಗೆ ಜಾರಿಯಾಗಿವೆ ಎನ್ನುವುದನ್ನೂ ಈ ಹೋರಾಟ ಬಿಚ್ಚಿಟ್ಟಿದೆ.

ದೆಹಲಿಯ ನಿರ್ಭಯ ಪ್ರಕರಣದ ನಂತರ ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಕುರಿತು ಸಮಾಜ ಹೆಚ್ಚು ಸೂಕ್ಷ್ಮವೂ ಜಾಗೃತವೂ ಆಗಿದೆ. ಕೆಲಸದ ಸ್ಥಳಗಳಲ್ಲಿಯೂ ಮಹಿಳೆಯರು ಹೆಚ್ಚು ಸುರಕ್ಷಿತವಾಗಿ ಇರಲು 2013ರಲ್ಲಿ ‘ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ’ಯನ್ನು ಅನುಷ್ಠಾನಗೊಳಿಸಲಾಗಿದೆ. ಪ್ರತಿ ಸಂಸ್ಥೆಯಲ್ಲೂ ಆಂತರಿಕ ದೂರು ಸಮಿತಿ ಇರಬೇಕು ಎನ್ನುವುದು ಈ ಕಾಯ್ದೆಯ ಬಹು ಮುಖ್ಯವಾದ ಅಂಶ. ಆದರೆ, ಇದು ಇಂದಿಗೂ ಹಲವು ಸಂಸ್ಥೆಗಳಲ್ಲಿ ಇಲ್ಲ. ಈ ಅಪವಾದಕ್ಕೆ ಕ್ರೀಡಾ ಕ್ಷೇತ್ರವೂ ಹೊರತಲ್ಲ. ದೇಶದಲ್ಲಿರುವ ಹಲವು ಕ್ರೀಡಾ ಸಂಸ್ಥೆಗಳಲ್ಲಿ ಇಂತಹ ಸಮಿತಿಗಳೇ ಇಲ್ಲ. ಕುಸ್ತಿಪಟುಗಳ ಹೋರಾಟ ಆರಂಭವಾದ ನಂತರವಷ್ಟೇ ಕೆಲವಾರು ಕ್ರೀಡಾ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲಾಗಿದೆ.

ಕುಸ್ತಿಪಟುಗಳ ಹೋರಾಟದ ನಂತರ, ಅವರು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಕ್ರೀಡಾ ಸಚಿವಾಲಯವು ತಜ್ಞರ ಸಮಿತಿ ರಚಿಸಿತ್ತು. ಸಮಿತಿಯ ವರದಿಯು ಹಲವು ವಿಚಾರಗಳನ್ನು ಮುಂದಿಟ್ಟಿದ್ದರೂ, ಲೈಂಗಿಕ ದೌರ್ಜನ್ಯ ತಡೆಗಾಗಿ ‘ಆಂತರಿಕ ದೂರು ಸಮಿತಿ’ಯನ್ನು ಕುಸ್ತಿ ಫೆಡರೇಷನ್‌ ಹೊಂದಿಲ್ಲ ಎಂಬುದನ್ನು ನಿಚ್ಚಳವಾಗಿ ಹೇಳಿತ್ತು. ಇದುವರೆಗೂ ಕುಸ್ತಿ ಫೆಡರೇಷನ್‌ನಲ್ಲಿ ಆಂತರಿಕ ದೂರು ಸಮಿತಿ ರಚನೆಯಾಗಿಲ್ಲ.

ಆದರೆ ಫೆಡರೇಷನ್‌ನಲ್ಲಿ ‘ನೈತಿಕ ಸಮಿತಿ’ ಎಂಬ ಸಮಿತಿಯೊಂದಿದೆ. ಲೈಂಗಿಕ ದೌರ್ಜನ್ಯ ಕುರಿತ ದೂರುಗಳ ನಿರ್ವಹಣೆಯ ಜವಾಬ್ದಾರಿಯನ್ನೂ ಅದೇ ಸಮಿತಿಗೆ ವಹಿಸಲಾಗಿದೆ. ಲೈಂಗಿಕ ದೌರ್ಜನ್ಯ ತಡೆಗಾಗಿ ಪ್ರತ್ಯೇಕವಾದ ‘ಆಂತರಿಕ ದೂರು ಸಮಿತಿ’ ಇಲ್ಲ. ಅಂತಹ ಸಮಿತಿ ಇಲ್ಲದಿರುವುದೂ ಈ ಪ್ರಕರಣದಲ್ಲಿ ದೊಡ್ಡ ಹಿನ್ನಡೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಾಯ್ದೆ ಹೇಳುವುದೇನು?

ಕೆಲಸದ ಸ್ಥಳ: ಕಾಯ್ದೆಯ 2ನೇ ಸೆಕ್ಷನ್‌ನಲ್ಲಿ ಕೆಲಸದ ಸ್ಥಳ ಅಂದರೆ ಏನು ಎಂಬುದನ್ನು ವ್ಯಾಖ್ಯಾನಿಸಲಾಗಿದೆ.

ಸರ್ಕಾರದ ಯಾವುದೇ ಇಲಾಖೆ, ಸಂಸ್ಥೆ, ಕಚೇರಿ, ಸರ್ಕಾರದ ಅಧೀನ ಸಂಸ್ಥೆಗಳು, ನೇರವಾಗಿ ಅಥವಾ ಪರೋಕ್ಷವಾಗಿ ಸರ್ಕಾರದಿಂದ ಹಣಕಾಸಿನ ನೆರವು ಪಡೆಯುವ ಸಂಸ್ಥೆ, ನಿಗಮ ಮಂಡಳಿ, ಸಹಕಾರ ಸಂಸ್ಥೆ, ಖಾಸಗಿ ಕ್ಷೇತ್ರದ ಸಂಸ್ಥೆಗಳು, ಎನ್‌ಜಿಒಗಳು, ಶಿಕ್ಷಣ ಸಂಸ್ಥೆಗಳು, ಮನರಂಜನಾ ಕ್ಷೇತ್ರ, ಕಾರ್ಖಾನೆಗಳು, ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌ ಮುಂತಾದವುಗಳು ಕೆಲಸದ ಸ್ಥಳಗಳು ಎಂದು ಕಾಯ್ದೆಯಲ್ಲಿ ವಿವರಿಸಲಾಗಿದೆ. ಇದರೊಂದಿಗೆ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸದ ಸ್ಥಳಗಳ ಬಗ್ಗೆಯೂ ಕಾಯ್ದೆಯಲ್ಲಿ ಉಲ್ಲೇಖವಿದೆ. ಯಾವುದೇ ಕ್ರೀಡಾ ಸಂಸ್ಥೆ, ಕ್ರೀಡಾಂಗಣ, ಕ್ರೀಡಾ ಸಂಕೀರ್ಣ ಅಥವಾ ಸ್ಪರ್ಧೆ ಅಥವಾ ಕ್ರೀಡಾಕೂಟ ನಡೆಯುವ ಸ್ಥಳ, ವಸತಿಯುಕ್ತ ಕ್ರೀಡಾ ತರಬೇತಿ ಕೇಂದ್ರಗಳು ಹೀಗೆ ಈ ಎಲ್ಲವೂ ಕೆಲಸದ ಸ್ಥಳಗಳು ಎಂದು ವ್ಯಾಖ್ಯಾನಿಸಲಾಗಿದೆ. 

ಯಾರು ಈ ಮಾಲೀಕ/ಉದ್ಯೋಗದಾತ: ಮೇಲೆ ಹೇಳಿದ ಕೆಲಸದ ಸ್ಥಳಗಳ ಮುಖ್ಯಸ್ಥನೇ ಮಾಲೀಕ. ಮಾಲೀಕ ಅಲ್ಲದಿದ್ದರೆ, ಆ ಕೆಲಸದ ಸ್ಥಳದ ಜವಾಬ್ದಾರಿ ಹೊತ್ತಿರುವವನು, ನಿರ್ವಹಿಸುವವನು, ಮೇಲ್ವಿಚಾರಣೆ ನಡೆಸುವವನು, ಇಡೀ ಸ್ಥಳವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡವನು– ಕಾಯ್ದೆಯಲ್ಲಿ ಈ ರೀತಿಯಾಗಿ ಮಾಲೀಕನನ್ನು ವಿವರಿಸಲಾಗಿದೆ.

ಮಹಿಳೆಯರಿಗೆ ಇದೆ ಹಲವು ತೊಡಕು
‘ಹೆಣ್ಣುಮಗಳೊಬ್ಬಳು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡುತ್ತಾಳೆ ಅಂತಾದರೆ ಅದರ ಹಿಂದೆ ಹಲವು ವರ್ಷಗಳ ಹೋರಾಟ ಇರುತ್ತದೆ. ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಬೇಕು ಅಂತಾದರೆ ಹೆಣ್ಣುಮಕ್ಕಳಿಗೆ ಬಹಳ ತೊಂದರೆ ತೊಡಕುಗಳಿವೆ. ಕ್ರೀಡೆಯಲ್ಲಿ ಭಾಗವಹಿಸುವ ಹೆಣ್ಣುಮಕ್ಕಳ ಬಗ್ಗೆ ಹಲವು ಮೌಢ್ಯವನ್ನೂ ಬಿತ್ತಲಾಗುತ್ತದೆ’ ಎನ್ನುತ್ತಾರೆ ವೇಟ್‌ಲಿಫ್ಟರ್‌ ಆಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಪುಷ್ಪಾ ರಮೇಶ್‌. ‘ಹೆಣ್ಣುಮಕ್ಕಳು ಮೊದಲಿಗೆ ಮನೆಯವರನ್ನು ಒಪ್ಪಿಸಬೇಕು. ನಂತರ ಸಮಾಜವನ್ನು ಒಪ್ಪಿಸಬೇಕು. ಹೇಗೊ ಈ ಎಲ್ಲ ತೊಡಕುಗಳನ್ನು ದಾಟಿದ ಮೇಲೆ ಮದುವೆ ಆಗುವ ವಯಸ್ಸಿನಲ್ಲಿ ಮದುವೆಯಾದ ಮೇಲೆ ಕ್ರೀಡೆಯನ್ನು ಬಿಟ್ಟುಬಿಡುವ ಹೆಣ್ಣುಮಕ್ಕಳ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ’ ಎಂದರು. ‘ನನ್ನದು ಭಾರ ಎತ್ತುವ ಕ್ರೀಡೆ. ಹೆಣ್ಣುಮಕ್ಕಳಿಗೆಲ್ಲ ಈ ಕ್ರೀಡೆ ಬೇಡ ಎಂದು ನನಗೆ ಹೇಳಿದವರೇ ಹೆಚ್ಚು. ‘ವ್ಯಾಯಾಮ ಕಸರತ್ತು ಮಾಡುವುದರಿಂದ ದಪ್ಪ ಆಗಿಬಿಡುತ್ತೀಯಾ. ಹೆಣ್ಣುಮಕ್ಕಳು ಬಳುಕುವಂತೆ ಇರಬೇಕು. ಭಾರ ಎತ್ತುವುದರಿಂದ ದೇಹದ ಮೂಳೆ ಸಣ್ಣದಾಗುತ್ತದೆ. ಋತುಚಕ್ರದ ಸಮಯದಲ್ಲಿ ಭಾರ ಎತ್ತುವುದರಿಂದ ಗರ್ಭಕೋಶದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬೆಲ್ಲಾ ಮಾತುಗಳನ್ನು ಕೇಳಬೇಕು’ ಎನ್ನುತ್ತಾರೆ ಪುಷ್ಪಾ. ‘ಮದುವೆ ಆದ ಮೇಲಂತೂ ಮಹಿಳೆಯೊಬ್ಬಳು ಕ್ರೀಡೆಯಲ್ಲಿ ಮುಂದುವರಿಯುವುದು ಕಷ್ಟಸಾಧ್ಯವೇ ಸರಿ. ಆಟವಾಡುವಾಗ ತುಂಡು ತುಂಡು ಬಟ್ಟೆ ತೊಡಬೇಕು. ನಮ್ಮ ಮನೆ ಮಕ್ಕಳು ಹೀಗೆಲ್ಲಾ ಮೈ ತೋರಿಸುವುದು ಸರಿಯಲ್ಲ. ದೂರದ ಊರುಗಳಿಗೆ ಹೋಗಬೇಕಾಗುತ್ತದೆ. ಆದ್ದರಿಂದ ಕ್ರೀಡೆಯನ್ನು ಬಿಟ್ಟುಬಿಡು ಎನ್ನುವ ಕುಟುಂಬಗಳೂ ಇವೆ. ಈ ಎಲ್ಲ ಕಾರಣಗಳಿಂದಲೇ ಹೆಣ್ಣುಮಕ್ಕಳು ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸುವುದು ಕಡಿಮೆ. ಶಾಲಾ–ಕಾಲೇಜು ಮಟ್ಟಕ್ಕೇ ತಮ್ಮ ಆಸಕ್ತಿಯನ್ನು ತೊರೆದು ಬಿಡುತ್ತಾರೆ’ ಎನ್ನುತ್ತಾರೆ ಪುಷ್ಪಾ. ಪುಷ್ಪಾ ಅವರು ಅಂತರರಾಷ್ಟ್ರೀಯ ಕ್ರೀಡಾಪಟು ಆಗಿದ್ದಾರೆ. ಹಲವು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ. 2004ರಲ್ಲಿ ನಡೆದ ಏಷಿಯನ್‌ ವೇಟ್‌ಲಿಫ್ಟಿಂಗ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ. ಈಗ ಅವರು ಸಾಗರದಲ್ಲಿ ಹಲವರಿಗೆ ತರಬೇತಿ ನೀಡುತ್ತಿದ್ದಾರೆ.
ಲೈಂಗಿಕ ದೌರ್ಜನ್ಯದ ಪ್ರಕರಣಗಳು ಕೇವಲ ಕ್ರೀಡಾಕ್ಷೇತ್ರದಲ್ಲಿ ಮಾತ್ರ ಆಗುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆಯಾಗಿದೆ. ಅದೇನೇ ಇದ್ದರು ಕ್ರೀಡಾಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾನೂನಿನ ಕುರಿತು ಅಸಡ್ಡೆ ಇರುವುದು ಸತ್ಯ. ಕೆಲವು ದೂರುಗಳಿಗೆ ಕಠಿಣ ಶಿಕ್ಷೆಯಾಗದೇ ಇದ್ದದ್ದೂ ಇದೆ. ಈ ಮನಃಸ್ಥಿತಿ ಬದಲಾಗಬೇಕು. ಎಲ್ಲ ಫೆಡರೇಷನ್‌ಗಳು ಆಂತರಿಕ ದೂರು ಸಮಿತಿಯನ್ನು ರಚಿಸಿಕೊಳ್ಳಬೇಕು. ಈ ಸಮಿತಿಯು ಸ್ವಾಯತ್ತವಾಗಿರಬೇಕು.
ಅಶ್ವಿನಿ ನಾಚಪ್ಪ ಅಂತರರಾಷ್ಟ್ರೀಯ ಅಥ್ಲೆಟ್‌
ಕ್ರಮ ತೆಗೆದುಕೊಳ್ಳದಿರುವುದು ಅಪಾಯಕಾರಿ
‘ಕುಸ್ತಿಪಟುಗಳ ಹೋರಾಟ ಮತ್ತು ಅವರು ಹೇಳುತ್ತಿರುವ ಹಲವು ವಿಷಯಗಳನ್ನು ಗಮನಿಸಿದರೆ ನಮಗೆ ಭಯವಾಗುತ್ತದೆ. ತಾನು ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ನನ್ನ ಮಗಳೇ ಬಯಸಿದ್ದಳು. ಅವಳ ಬಯಕೆಯನ್ನು ನಾವು ನಿರಾಕರಿಸಲಿಲ್ಲ; ಈಗಲೂ ನಿರಾಕರಿಸುವುದಿಲ್ಲ. ಆದರೆ ಹೆಣ್ಣುಮಕ್ಕಳಿಗೆ ಈ ಕ್ಷೇತ್ರದಲ್ಲಿ ಭದ್ರತೆ ಇಲ್ಲ ಎನ್ನುವುದು ಪೋಷಕರಾಗಿ ನಮ್ಮನ್ನು ಚಿಂತೆಗೆ ದೂಡಿದೆ’ ಎನ್ನುತ್ತಾರೆ ಹೈದರಾಬಾದ್‌ನ ಪ್ರತೀಕ ನಿಸರ್ಗ. ಪ್ರತೀಕ ಅವರ ಮಗಳು ಪ್ರಾಂಜಲ ಗೋ‍ಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. 15 ವರ್ಷದ ಒಳಗಿನ ವಿಭಾಗದಲ್ಲಿ ರಾಷ್ಟ್ರದಲ್ಲಿ ಐದನೇ ರ್‍ಯಾಂಕ್‌ನಲ್ಲಿದ್ದಾಳೆ. ‘ನಮ್ಮ ಹೆಣ್ಣುಮಕ್ಕಳು ಅತಿ ಕಿರಿಯ ವಯಸ್ಸಿನಲ್ಲಿಯೇ ಬೆಳಿಗ್ಗೆಯೇ ಎದ್ದು ತರಬೇತಿಗೆ ಹೋಗುತ್ತಾರೆ. ದಿನವಿಡೀ ಅಭ್ಯಾಸ ಮಾಡುತ್ತಾರೆ. ಇಷ್ಟೆಲ್ಲ ಕಷ್ಟಪಡುವುದಕ್ಕೆ ನಾವು ಪೋಷಕರು ನಿತ್ಯವೂ ಸಾಕ್ಷಿಯಾಗುತ್ತೇವೆ. ಹೀಗೆ ಕಷ್ಟಪಡುವ ನಮ್ಮ ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯದಂತಹ ಸಮಸ್ಯೆಗಳು ಎದುರಾಗುತ್ತವೆ ಮತ್ತು ಸರ್ಕಾರ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಹೆಚ್ಚು ಅಪಾಯಕಾರಿ ಎನ್ನುವುದು ನನ್ನ ಅಭಿಪ್ರಾಯ’ ಎಂದರು. ಈ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಹಲವು ‍ಪೋಷಕರನ್ನು ಸಂಪರ್ಕಿಸಲಾಯಿತು. ಆದರೆ ‘ನಮ್ಮ ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತದೆ’ ಎಂದು ಹೇಳಿದ ಹಲವರು ಅಭಿಪ್ರಾಯ ನೀಡಲು ನಿರಾಕರಿಸಿದರು.

ಕುಸ್ತಿ ಫೆಡರೇಷನ್‌ನಲ್ಲಿ ಯಾವ ಸಮಿತಿ ಇದೆ?

ಇದಾಗಲೇ ಹೇಳಿದ ಹಾಗೆ ಕುಸ್ತಿ ಫೆಡರೇಷನ್‌ನಲ್ಲಿ ಆಂತರಿಕ ದೂರು ಸಮಿತಿ ಎನ್ನುವ ಯಾವ ಸಮಿತಿಯೂ ಇಲ್ಲ. ಇಲ್ಲಿ ಇರುವುದು ‘ನೈತಿಕ ಸಮಿತಿ’. ಕ್ರೀಡಾಪಟುಗಳ ನೈತಿಕ ನಡಾವಳಿಗಳು ನ್ಯಾಯಯುತವಾಗಿ ಆಟವಾಡುವುದು ಉದ್ದೀಪನ ಮದ್ದು ಸೇವನೆ ಮ್ಯಾಚ್‌ ಫಿಕ್ಸಿಂಗ್‌ ತಪ್ಪು ವಯಸ್ಸಿನ ಉಲ್ಲೇಖ ಮತ್ತು ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಈ ಸಮಿತಿಯನ್ನು ರಚಿಸಲಾಗಿದೆ ಎಂದು ಫೆಡರೇಷನ್‌ ಹೇಳಿಕೊಂಡಿದೆ. ಆಂತರಿಕ ದೂರು ಸಮಿತಿಯನ್ನು ರಚನೆ ಮಾಡದ ಕಾರಣಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಫೆಡರೇಷನ್‌ಗೆ ಮೇ 11ರಂದು ನೋಟಿಸ್‌ ನೀಡಿದೆ.

ಈ ಸಮಿತಿಯಲ್ಲಿ ಇರುವವರು ಯಾರು? ಕಾಯ್ದೆಯಲ್ಲಿ ಹೇಳಿದ ರೀತಿಯಲ್ಲಿ ಈ ಸಮಿತಿಯ ರಚನೆ ನಡೆದಿಲ್ಲ. ಬಹಳ ಮುಖ್ಯವಾಗಿ ಕಾಯ್ದೆಯಲ್ಲಿ ಹೇಳಿದ ಹಾಗೆ ಇರುವ ಸಮಿತಿ ಕೂಡ ಇದಲ್ಲ. ಸಾಕ್ಷಿ ಮಲಿಕ್‌ ಕೂಡ ಈ ಸಮಿತಿಯ ಸದಸ್ಯೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

* ಅಧ್ಯಕ್ಷ: ವಿ.ಎನ್‌. ಪ್ರಸೂದ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ

* ಸಂಚಾಲಕ: ಜೈ ಪ್ರಕಾಶ್‌ ಫೆಡರೇಷನ್‌ನ ಸಂಚಾಲಕ

* ಸದಸ್ಯರು: ವಿಶಾಲ್‌ ಸಿಂಗ್‌ ಕಾರ್ಯಕಾರಿ ಸದಸ್ಯ

ದೆಬೆಂದರ್‌ ಕುಮಾರ್‌ ಸಾಹೋ ಫೆಡರೇಷನ್‌ನ ಕಾರ್ಯಕಾರಿ ಸದಸ್ಯ

ಸಾಕ್ಷಿ ಮಲಿಕ್‌ ಅರ್ಜುನ/ಧ್ಯಾನ್‌ಚಂದ್‌ ಖೇಲ್‌ ಪ್ರಶಸ್ತಿ ವಿಜೇತೆ

ಆಂತರಿಕ ದೂರು ಸಮಿತಿ: ಎಲ್ಲ ಕೆಲಸದ ಸ್ಥಳಗಳಲ್ಲೂ ಆಂತರಿಕ ದೂರು ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಜೊತೆಗೆ ಈ ಸಮಿತಿಯಲ್ಲಿ ಯಾರ್‍ಯಾರು ಇರಬೇಕು ಎಂದೂ ವಿವರಿಸಲಾಗಿದೆ.

* ಕೆಲಸದ ಸ್ಥಳದಲ್ಲಿ ಇರುವ ಎಲ್ಲರಿಗಿಂತ ಹಿರಿಯರಾದ ಮಹಿಳಾ ಉದ್ಯೋಗಿಯು ಈ ಸಮಿತಿಯ ಅಧ್ಯಕ್ಷರಾಗಿರಬೇಕು. ಒಂದು ವೇಳೆ ಹಿರಿಯರು ಇಲ್ಲದಿದ್ದರೆ ಬೇರೆ ಆಡಳಿತ ಕಚೇರಿಯಲ್ಲಿರುವ ಹಿರಿಯ ಮಹಿಳೆಯನ್ನು ನೇಮಕ ಮಾಡಬೇಕು

* ಲೈಂಗಿಕ ದೌರ್ಜನ್ಯದ ಕುರಿತು ಹೆಚ್ಚು ಕೆಲಸ ಮಾಡಿರುವ ಯಾವುದಾದರು ಎನ್‌ಜಿಒದಲ್ಲಿ ಕೆಲಸ ಮಾಡಿದ ಅನುಭವ ಇರುವ ಮಹಿಳೆಯೂ ಈ ಸಮಿತಿಯಲ್ಲಿರಬೇಕು. ಜೊತೆಗೆ ಕಾನೂನು ತಜ್ಞರಾದ ಒಬ್ಬರು ಇರಬೇಕು .

* ಸಮಿತಿಯ ಒಟ್ಟು ಸದಸ್ಯರಲ್ಲಿ ಅರ್ಧದಷ್ಟು ಜನ ಮಹಿಳೆಯರೇ ಇರಬೇಕು

ಲೈಂಗಿಕ ದೌರ್ಜನ್ಯವೆಂದರೆ...

ಲೈಂಗಿಕ ದೌರ್ಜನ್ಯಕ್ಕೆ ವಿಸ್ತೃತವಾದ ವ್ಯಾಖ್ಯೆ ಇದೆ. 2013ರಲ್ಲಿ ಜಾರಿಗೆ ತರಲಾದ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ’ಯಲ್ಲಿ ಲೈಂಗಿಕ ದೌರ್ಜನ್ಯ ಎಂದರೇನು ಮತ್ತು ಯಾವೆಲ್ಲ ನಡವಳಿಕೆಗಳು ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ವಿವರಿಸಲಾಗಿದೆ.

ಕೆಲವು ಸ್ವರೂಪದ ಮಾತು, ನೋಟ, ನಡೆಗಳೂ ಈ ವ್ಯಾಪ್ತಿಗೆ ಬರುತ್ತವೆ. ಆದರೆ ಅಂತಹ ಕೃತ್ಯಗಳಿಗೆ ಸಾಕ್ಷ್ಯಗಳನ್ನು ಸಂಗ್ರಹ ಕಷ್ಟಸಾಧ್ಯ. ಹೀಗಾಗಿ, ಅಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವುದೇ ಇಲ್ಲ. ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಗೊತ್ತಿದ್ದರೂ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳು ಖುಲಾಸೆಯಾದ ಹಲವು ಪ್ರಕರಣಗಳಿವೆ. ಅಂತಹ ಪ್ರಕರಣಗಳನ್ನೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ದಾಖಲಿಸುತ್ತದೆ. 

‘ಕೆಲಸದ ಸ್ಥಳದಲ್ಲಿ ಮಹಿಳೆಗೆ ಸ್ವೀಕಾರಾರ್ಹವಲ್ಲದ ನಡೆಗಳನ್ನು ಲೈಂಗಿಕ ದೌರ್ಜನ್ಯ ಎನ್ನಲಾಗುತ್ತದೆ’ ಎಂದು ಈ ಕಾಯ್ದೆಯ 2 (ಎನ್‌) ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಅಂತಹ ಕೆಲವು ನಡೆಗಳು ಇಂತಿವೆ

1. ಒತ್ತಾಯದ ಸ್ಪರ್ಶ

2. ಲೈಂಗಿಕ ಕ್ರಿಯೆಗಾಗಿ ಒತ್ತಾಯ ಮಾಡುವುದು

3. ಲೈಂಗಿಕತೆ ಕುರಿತ ಅಸಭ್ಯ ಮಾತುಗಳು

4. ನೀಲಿಚಿತ್ರಗಳನ್ನು ತೋರಿಸುವುದು

5. ಲೈಂಗಿಕತೆ ಮತ್ತು ಲೈಂಗಿಕ ಕ್ರಿಯೆ ಉದ್ದೇಶದ ಯಾವುದೇ ನಡೆಗಳು ಮತ್ತು ಮಾತುಗಳು

ಯಾವೆಲ್ಲಾ ನಡೆಗಳು ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಹೊರತಂದಿರುವ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ’ಯ ಕೈಪಿಡಿ’ಯಲ್ಲಿ ವಿವರಿಸಲಾಗಿದೆ.

* ಕೆಲಸದ ಸ್ಥಳದಲ್ಲಿ ಮಹಿಳೆಯರ ಎದುರಲ್ಲಿ, ಅವರಿಗೆ ಕೇಳುವಂತೆ ಲೈಂಗಿಕತೆ ಕುರಿತಂತೆ ಮಾತನಾಡುವುದು ಅಥವಾ ಲೈಂಗಿಕತೆ ಕುರಿತು ಅವರಿಗೆ ಸಲಹೆ ನೀಡುವುದು

* ಮಹಿಳೆಯರ ದೇಹ ಮತ್ತು ವಸ್ತ್ರದ ಬಗ್ಗೆ ಪದೇ ಪದೇ ತುಚ್ಛವಾಗಿ ಮಾತನಾಡುವುದು

* ಅಸಭ್ಯವಾದ ಮತ್ತು ಆಕ್ರಮಣಕಾರಿಯಾದ ಮಾತುಗಳನ್ನು ಆಡುವುದು

* ಮಹಿಳೆಯ ಲೈಂಗಿಕ ಬದುಕಿನ ಬಗ್ಗೆ ಮಾತನಾಡುವುದು, ಪ್ರಶ್ನೆ ಕೇಳುವುದು ಮತ್ತು ಸಲಹೆ ನೀಡುವುದು

* ಲೈಂಗಿಕತೆಯನ್ನು ಪ್ರಚೋದಿಸುವಂತಹ ಚಿತ್ರಗಳು, ಪೋಸ್ಟರ್‌ಗಳು, ಬರಹಗಳು, ಸಂದೇಶಗಳು, ಎಂಎಂಎಸ್‌ಗಳನ್ನು ಕಳುಹಿಸುವುದು. ವಾಟ್ಸ್‌ಆ್ಯಪ್‌ ಅಥವಾ ಇ–ಮೇಲ್‌ ಮಾಡುವುದು

* ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯ ಮಾಡುವುದು, ಆಮಿಷ ಒಡ್ಡುವುದು ಮತ್ತು ಬೆದರಿಕೆ ಒಡ್ಡುವುದು

* ಇಂತಹ ಕೃತ್ಯಗಳನ್ನು ಬಹಿರಂಗ ಮಾಡಬಾರದುಎಂದು ಒತ್ತಾಯ ಹೇರುವುದು ಮತ್ತು ಬೆದರಿಕೆ ಹಾಕುವುದು

* ಸ್ಪರ್ಶಿಸುವುದು, ಗಿಲ್ಲುವುದು, ಕೈಹಿಡಿದುಕೊಳ್ಳುವುದು, ತಬ್ಬಿಕೊಳ್ಳುವುದು, ಮುತ್ತಿಕ್ಕುವುದು (ಇವು ಲೈಂಗಿಕ ಕಿರುಕುಳದ ವ್ಯಾಪ್ತಿಗೂ ಬರುತ್ತವೆ)

* ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ತೀರಾ ಹತ್ತಿರದಲ್ಲಿ ಕೂರುವುದು, ಅನಗತ್ಯವಾಗಿ ದೇಹವನ್ನು ಸ್ಪರ್ಶಿಸಿಕೊಂಡು ಓಡಾಡುವುದು

* ಕೆಲಸದ ಸ್ಥಳದಲ್ಲಿ ಮಹಿಳೆಯರನ್ನು ಹಿಂಬಾಲಿಸುವುದು

* ‘ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಆಕೆ ನನ್ನನ್ನು ಕೇಳಿದಳು’ ಎಂಬರ್ಥದ ಸುಳ್ಳು ಮಾತುಗಳನ್ನು ಹೇಳುವುದು

* ಮಹಿಳೆಯ ಖಾಸಗಿ ಬದುಕು ಮತ್ತು ಲೈಂಗಿಕತೆ ಬಗ್ಗೆ ವದಂತಿ ಹರಡುವುದು

‘ಇಂತಹ ಕೃತ್ಯಗಳು ಒಮ್ಮೆ ನಡೆದಿರಬಹುದು ಅಥವಾ ಪದೇ ಪದೇ ನಡೆದಿರಬಹುದು. ಪ್ರತಿ ಕೃತ್ಯವನ್ನೂ ಪ್ರತ್ಯೇಕ ಕೃತ್ಯ ಎಂದೇ ಪರಿಗಣಿಸಬೇಕಾಗುತ್ತದೆ’ ಎಂದು ಈ ಕೈಪಿಡಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT