ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ-ಸುದ್ದಿ | ‘ಸ್ಮಾರ್ಟ್‌ ಸಿಟಿ’ ಪ್ರಗತಿಗೆ ಕೇಂದ್ರವೇ ಅಡ್ಡಗಾಲು

Published 25 ಮೇ 2023, 23:52 IST
Last Updated 25 ಮೇ 2023, 23:52 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಸ್ಮಾರ್ಟ್‌ ಸಿಟಿ ಅಭಿಯಾನ’ ಸಹ ಒಂದು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಮಾನ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನವಾಗಬೇಕು. ರಾಜ್ಯ ಸರ್ಕಾರಗಳು ಯೋಜನೆಯ ಅನುದಾನದ ವೆಚ್ಚವನ್ನೂ ಮೀರಿ, ಕಾಮಗಾರಿಗಳನ್ನು ನಡೆಸಿವೆ. ಆದರೆ, ಕೇಂದ್ರ ಸರ್ಕಾರವು ತಾನು ಕೊಡಬೇಕಿದ್ದಷ್ಟು ಅನುದಾನವನ್ನು ನೀಡಿಯೇ ಇಲ್ಲ

ದೇಶದ ಆಯ್ದ ನೂರು ನಗರಗಳನ್ನು 2016ರಲ್ಲಿ ‘ಸ್ಮಾರ್ಟ್‌ ಸಿಟಿ’ ಎಂದು ಘೋಷಿಸಲಾಗಿತ್ತು. ನಂತರದ ಐದು ವರ್ಷಗಳಲ್ಲಿ ಈ ನಗರಗಳನ್ನು ಸ್ಮಾರ್ಟ್‌ ಆಗಿಸುವ ಹತ್ತಾರು ಕಾಮಗಾರಿಗಳನ್ನು, ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರವು ಹೇಳಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚಿನ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿತ್ತು. ಆದರೆ, ಯೋಜನೆ ಘೋಷಣೆಯಾಗಿ ಎಂಟು ವರ್ಷಗಳಾದರೂ ಯಾವೊಂದು ನಗರದಲ್ಲೂ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. 2021ಕ್ಕೆ ಪೂರ್ಣಗೊಳ್ಳಬೇಕಿದ್ದ ಯೋಜನೆಯನ್ನು, ಈಗಾಗಲೇ ಎರಡು ಬಾರಿ ವಿಸ್ತರಿಸಲಾಗಿದೆ.

2016ರಲ್ಲಿ ಯೋಜನೆಯನ್ನು ಘೋಷಿಸಿದಾಗ ನಂತರದ ಐದು ವರ್ಷಗಳಲ್ಲಿ, ಪ್ರತಿ ನಗರಕ್ಕೆ ಪ್ರತಿ ವರ್ಷ ₹100 ಕೋಟಿ ಅನುದಾನ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರವು ಘೋಷಿಸಿತ್ತು. ಈ ಪ್ರಕಾರ ಪ್ರತಿ ನಗರಕ್ಕೆ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ₹500 ಕೋಟಿ ಅನುದಾನ ದೊರೆಯಬೇಕಿತ್ತು. ಈ ಲೆಕ್ಕಾಚಾರದಂತೆ, 2020–21ನೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರವು ಒಟ್ಟು ₹50,000 ಕೋಟಿ ನೀಡಬೇಕಿತ್ತು. ₹48,000 ಕೋಟಿ ನೀಡುವುದಾಗಿ ಸರ್ಕಾರವು ಘೋಷಣೆ ಮಾಡಿತ್ತು. ಆದರೆ, ಸ್ಮಾರ್ಟ್‌ ಸಿಟಿ ಯೋಜನೆ ಆರಂಭವಾಗಿ ಎಂಟು ವರ್ಷ ಕಳೆದರೂ ಕೇಂದ್ರ ಸರ್ಕಾರವು ಈವರೆಗೆ ಬಿಡುಗಡೆ ಮಾಡಿರುವ ಅನುದಾನವು ಬಿಡುಗಡೆ ಮಾಡಬೇಕಿದ್ದ ಮೊತ್ತದ ಅರ್ಧದಷ್ಟೂ ಆಗಿಲ್ಲ. 

ಅನುದಾನ ಬಿಡುಗಡೆಯಾಗದೇ ಇರುವುದು ಈ ಯೋಜನೆ ಕುಂಟುತ್ತಾ ಸಾಗಲು ಪ್ರಮುಖ ಕಾರಣ ಎಂದು ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯೋಜನೆ ಆರಂಭಿಸಿದಾಗ 2020–21ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಬೇಕು ಎಂದು ಗಡುವು ಹಾಕಿಕೊಳ್ಳಲಾಗಿತ್ತು. ಆದರೆ, ಅದು ಸಾಧ್ಯವಾಗದಿದ್ದ ಕಾರಣ, ಯೋಜನೆಯನ್ನು ಎರಡು ವರ್ಷ ವಿಸ್ತರಿಸಲಾಗಿತ್ತು. ಆ ಪ್ರಕಾರ 2023ರ ಏಪ್ರಿಲ್‌ ಅಂತ್ಯದ ವೇಳೆಗೆ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆ ಗಡುವಿನ ಒಳಗೂ ಯೋಜನೆ ಪೂರ್ಣಗೊಳ್ಳದ ಕಾರಣ, ಈಗ 2024ರ ಏಪ್ರಿಲ್‌ವರೆಗೂ ಯೋಜನೆಯನ್ನು ಎರಡನೇ ಬಾರಿಗೆ ವಿಸ್ತರಿಸಲಾಗಿದೆ.

7,821 ಈ ಯೋಜನೆ ಅಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಸಂಖ್ಯೆ

5,343 ಪೂರ್ಣಗೊಂಡಿರುವ ಕಾಮಗಾರಿಗಳ ಸಂಖ್ಯೆ

ಆಧಾರ: ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ವರದಿ, ಪಿಟಿಐ, ಸ್ಮಾರ್ಟ್‌ ಸಿಟಿ ಮಿಷನ್‌ನ ಡ್ಯಾಶ್‌ಬೋರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT