ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ| ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್ ದರ ಏರಿಕೆ:
ಸರ್ಕಾರವೇ ಸಮಸ್ಯೆಯ ಮೂಲ
ಆಳ–ಅಗಲ| ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್ ದರ ಏರಿಕೆ: ಸರ್ಕಾರವೇ ಸಮಸ್ಯೆಯ ಮೂಲ
Published 29 ಜೂನ್ 2023, 23:31 IST
Last Updated 29 ಜೂನ್ 2023, 23:31 IST
ಅಕ್ಷರ ಗಾತ್ರ

ಜಯಸಿಂಹ ಆರ್.

ದೇಶದ ಹಲವು ರಾಜ್ಯಗಳಲ್ಲಿ ವಿದ್ಯುತ್ ದರ ಏರಿಕೆಯಾಗಿದೆ. ವಿದ್ಯುತ್ ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಕಾರಣ, ವಿದ್ಯುತ್ ದರವನ್ನೂ ಏರಿಕೆ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಇದರಿಂದ ದೇಶದ ಹಲವು ವಿದ್ಯುತ್ ಸರಬರಾಜು ಕಂಪನಿಗಳು ‘ವಿದ್ಯುತ್ ಖರೀದಿ ಹೊಂದಾಣಿಕೆ ವೆಚ್ಚ’ವನ್ನು ಏರಿಕೆ ಮಾಡಿವೆ. ಪರಿಣಾಮವಾಗಿ ವಿದ್ಯುತ್ ದರ ಏರಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರದ ಕಲ್ಲಿದ್ದಲು ನೀತಿಯೇ ಇದಕ್ಕೆಲ್ಲಾ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಈಚೆಗಿನ ಮೂರು ಆರ್ಥಿಕ ವರ್ಷಗಳಲ್ಲೂ ದೇಶೀಯ ಕಲ್ಲಿದ್ದಲಿನ ಉತ್ಪಾದನೆ ಏರುಗತಿಯಲ್ಲೇ ಇದೆ. 2021–22ಕ್ಕೆ ಹೋಲಿಸಿದರೆ, 2022–23ರಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ 14.78ರಷ್ಟು ಏರಿಕೆಯಾಗಿದೆ. ಹೀಗಿದ್ದೂ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಸರ್ಕಾರವು ಉತ್ತೇಜನ ನೀಡುತ್ತಿದೆ.

ದೇಶದಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿದೆ. ಆಮದು ಕಲ್ಲಿದ್ದಲನ್ನು ಕಡ್ಡಾಯವಾಗಿ ಹೆಚ್ಚು ಬಳಸಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆಮದು ಕಲ್ಲಿದ್ದಲು ಬಳಸುತ್ತಿರುವ ಕಾರಣ ವಿದ್ಯುತ್ ದರವನ್ನೂ ಏರಿಸಬೇಕಾಗಿದೆ ಎಂದು ಸಂಬಂಧಿತ ಪ್ರಾಧಿಕಾರಗಳು ಹೇಳುತ್ತಿವೆ.

ದೇಶದಲ್ಲಿ ಹಲವು ಸಮಸ್ಯೆಗಳಿಂದಾಗಿ ಕಲ್ಲಿದ್ದಲಿನ ಕೊರತೆ ಉಂಟಾಗಿದೆ. ಆದರೆ, ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಕ್ರಮ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಒತ್ತು ನೀಡುತ್ತಿದೆ. ಜತೆಗೆ ಆಮದು ಕಲ್ಲಿದ್ದಲನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸರ್ಕಾರ ಆದೇಶಿಸಿದೆ. ಆಮದು ಕಲ್ಲಿದ್ದಲನ್ನು ಮಾತ್ರ ಬಳಸುವ ಸ್ಥಾವರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು ಎಂದೂ ಸರ್ಕಾರ ಸೂಚಿಸಿದೆ. ಇಂತಹ ಸ್ಥಾವರಗಳು ಪ್ರತಿ //ಯೂನಿಟ್‌ಗೆ ₹50// ದರದಲ್ಲಿ ವಿದ್ಯುತ್ ಮಾರಾಟ ಮಾಡಲೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಕಾರಣದಿಂದಲೇ ವಿದ್ಯುತ್‌ನ ದರ ಏರಿಕೆಯಾಗುತ್ತಿದೆ ಮತ್ತು ಗ್ರಾಹಕರಿಗೆ ಅದರ ಹೊರೆ ಬೀಳುತ್ತಿದೆ.

ಸರ್ಕಾರವು ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕಲ್ಲಿದ್ದಲು ಆಮದಿಗೆ ಒತ್ತು ನೀಡುತ್ತಿದೆ ಎಂಬುದು ವಿರೋಧ ಪಕ್ಷಗಳ ಆರೋಪ. ಸರ್ಕಾರವು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದಿಲ್ಲ. ಬದಲಿಗೆ ಉಷ್ಣ ವಿದ್ಯುತ್ ಸ್ಥಾವರ ಕಂಪನಿಗಳು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತವೆ. ವಿದೇಶಗಳಲ್ಲಿ ಕಲ್ಲಿದ್ದಲು ಗಣಿ ಹೊಂದಿರುವ ಕಂಪನಿಗಳೂ ದೇಶದಲ್ಲಿ ಕಲ್ಲಿದ್ದಲು ಮಾರಾಟ ಮಾಡುತ್ತವೆ. ಇಂಡೊನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಿಂದ ಅತಿಹೆಚ್ಚು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ‘ಭಾರತಕ್ಕಾಗಿ ಅತಿಹೆಚ್ಚು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದು ನಾವು. ಭಾರತಕ್ಕಾಗಿ ಇಂಡೊನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಿಂದ ಅತಿಹೆಚ್ಚು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದೂ ನಾವೇ’ ಎಂದು ಅದಾನಿ ಎಂಟರ್‌ಪ್ರೈಸಸ್‌ ಹೇಳಿಕೊಂಡಿದೆ. 

ದೇಶದಲ್ಲಿ ಕಲ್ಲಿದ್ದಲು ಗಣಿ ಹಂಚಿಕೆ, ಉತ್ಪಾದನೆಗೆ ಅನುಮತಿ ಮತ್ತು ಪೂರೈಕೆಗೆ ಅಗತ್ಯ ರೈಲುಗಳನ್ನು ಒದಗಿಸಿದರೆ ಸಮಸ್ಯೆ ಬಹುತೇಕ ಬಗೆಹರಿಯಲಿದೆ. ಆದರೆ ಸರ್ಕಾರವು ‘ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಿ’ ಎಂದು ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಸೂಚಿಸುತ್ತಿದೆ. 

ಗಣಿಗಳೂ ಇಲ್ಲ, ಕಲ್ಲಿದ್ದಲೂ ಇಲ್ಲ

ದೇಶದಲ್ಲಿ ಕಲ್ಲಿದ್ದಲು ಗಣಿಗಳು ಹಂಚಿಕೆಯಾಗದೇ ಇರುವುದು ಮತ್ತು ಗಣಿಗಳು ಕಾರ್ಯನಿರ್ವಹಿಸದೇ ಇರುವುದು ಕಲ್ಲಿದ್ದಲು ಕೊರತೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಆಮದು ಕಲ್ಲಿದ್ದಲಿನ ಮೇಲಿನ ಅವಲಂಬನೆ ಹೆಚ್ಚಾಗಿದ್ದು, ವಿದ್ಯುತ್ ಉತ್ಪಾದನಾ ವೆಚ್ಚ ಏರಿಕೆಗೆ ಕಾರಣವಾಗಿದೆ.

ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ 214 ಗಣಿಗಳ ಹಂಚಿಕೆಯನ್ನು 2014ರಲ್ಲಿ ಸುಪ್ರೀಂ ಕೋರ್ಟ್‌ ರದ್ದುಪಡಿಸಿತ್ತು. ಆನಂತರ ಕಾನೂನುಗಳಿಗೆ ತಿದ್ದುಪಡಿ ತರಲಾಯಿತು. ಕಲ್ಲಿದ್ದಲು ಗಣಿಗಳನ್ನು ಹೊಸದಾಗಿ ಹಂಚಿಕೆ ಮಾಡಲಾಯಿತು. ವಿವಿಧ ಕಾಯ್ದೆ ಮತ್ತು ಯೋಜನೆಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಈವರೆಗೆ 133 ಗಣಿಗಳನ್ನು ಹಂಚಿಕೆ ಮಾಡಿದೆ. ಆದರೆ ಇವುಗಳ ಪೈಕಿ ಕಾರ್ಯನಿರ್ವಹಿಸುತ್ತಿರುವ ಗಣಿಗಳ ಸಂಖ್ಯೆ 44 ಮಾತ್ರ. ಕಾರ್ಯನಿರ್ವಹಿಸುತ್ತಿರುವ ಗಣಿಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೇ ಕಲ್ಲಿದ್ದಲು ಕೊರತೆ ಉಂಟಾಗಿದೆ.

2015ರಿಂದ ಈವರೆಗೆ ಒಟ್ಟು 17 ಬಾರಿ ಕಲ್ಲಿದ್ದಲು ಗಣಿಗಳನ್ನು ಹಂಚಿಕೆ ಮಾಡಲು, ಹರಾಜು ನಡೆಸಲಾಗಿದೆ. ಆದರೆ, ಹರಾಜಿನಲ್ಲಿ ಹಂಚಿಕೆಯಾಗಿದ್ದು 109 ಗಣಿಗಳು ಮಾತ್ರ. ಗಣಿಗಳು ಲಭ್ಯವಿದ್ದರೂ, ಹರಾಜು ನೀತಿಯ ಕಾರಣಗಳಿಂದಾಗಿ ಹರಾಜಿನಲ್ಲಿ ಹೆಚ್ಚಿನ ಕಂಪನಿಗಳು ಭಾಗಿಯಾಗುತ್ತಿಲ್ಲ. ಗಣಿಗಳ ಹಂಚಿಕೆಯೂ ಆಗುತ್ತಿಲ್ಲ. ಕೆಲವು ಹರಾಜು ಪ್ರಕ್ರಿಯೆಗಳಲ್ಲಿ ಒಂದು ಗಣಿಯೂ ಹಂಚಿಕೆಯಾಗಿಲ್ಲ. ಸರ್ಕಾರವು 133 ಗಣಿಗಳನ್ನು ಹಂಚಿಕೆ ಮಾಡಿದ್ದರೂ, ಕಾರ್ಯನಿರ್ವಹಣೆಗೆ ಅನುಮತಿ ನೀಡಿರುವುದು 58 ಗಣಿಗಳಿಗೆ ಮಾತ್ರ. ಹಂಚಿಕೆಯಾಗಿರುವ 78 ಗಣಿಗಳಿಗೆ ಇನ್ನೂ ಅನುಮತಿ ದೊರೆತೇ ಇಲ್ಲ. ಹೀಗಾಗಿ ಅಲ್ಲಿ ಕಲ್ಲಿದ್ದಲು ಉತ್ಪಾದನೆ ನಡೆಯುತ್ತಿಲ್ಲ.

ಈ ಎಲ್ಲಾ ಕಾರಣಗಳಿಂದಾಗಿ ಕಲ್ಲಿದ್ದಲಿನ ಕೊರತೆ ತಲೆದೋರುತ್ತಿದೆ. ಪರಿಣಾಮವಾಗಿ ಆಮದು ಕಲ್ಲಿದ್ದಲಿನ ಮೊರೆ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಇದರಿಂದಾಗಿ ವಿದ್ಯುತ್ ದರ ಏರಿಕೆಯಾಗುತ್ತಿದೆ. ಹಂಚಿಕೆಯಾಗಿರುವ ಎಲ್ಲಾ ಗಣಿಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ದೊರೆತರೆ, ಕಲ್ಲಿದ್ದಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಅದರಿಂದ ಕಲ್ಲಿದ್ದಲಿನ ಕೊರತೆ ನೀಗುವುದಲ್ಲದೆ, ಆಮದು ಕಲ್ಲಿದ್ದಲಿನ ಅನಿವಾರ್ಯವೂ ಇಲ್ಲವಾಗಲಿದೆ.

ಆಮದು ಕಲ್ಲಿದ್ದಲು ಮಿಶ್ರಣ ಕಡ್ಡಾಯ

ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಏರಿಕೆಯಾಗಿದ್ದರೂ, ಆಮದು ಕಲ್ಲಿದ್ದಲನ್ನು ಕಡ್ಡಾಯವಾಗಿ ಬಳಸುವಂತೆ ಕೇಂದ್ರ ಸರ್ಕಾರವು ಆದೇಶಿಸಿದೆ. ವಿದ್ಯುತ್ ದರ ಏರಿಕೆಗೆ ಇದೇ ಕಾರಣ ಎನ್ನುತ್ತಿವೆ ವಿರೋಧ ಪಕ್ಷಗಳು.

ದೇಶದಲ್ಲಿ ಕಲ್ಲಿದ್ದಲು ಕೊರತೆಯಾಗಿದೆ. ಹೀಗಾಗಿ ದೇಶದ ಎಲ್ಲಾ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಳಸುವ ಕಲ್ಲಿದ್ದಲಿನಲ್ಲಿ ಶೇ 6ರಷ್ಟು ಆಮದು ಕಲ್ಲಿದ್ದಲನ್ನು ಕಡ್ಡಾಯವಾಗಿ ಮಿಶ್ರಣ ಮಾಡಬೇಕು ಎಂದು 2023ರ ಜನವರಿ 9ರಂದು ಕೇಂದ್ರ ಸರ್ಕಾರವು ಆದೇಶ ಹೊರಡಿಸಿತ್ತು. ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸಾಮಾನ್ಯವಾಗಿ ಜಿ–7 ದರ್ಜೆಯ ಕಲ್ಲಿದ್ದಲನ್ನು ಬಳಸಲಾಗುತ್ತದೆ. ಕೇಂದ್ರ ಇಂಧನ (ಪವರ್) ಸಚಿವಾಲಯದ ಸೂಚ್ಯಂಕದ ಪ್ರಕಾರ ಜಿ–7 ದರ್ಜೆಯ ಒಂದು ಟನ್‌ ಕಲ್ಲಿದ್ದಲಿನ ಬೆಲೆ ₹3,640. ಆದರೆ, ಆಮದು ಕಲ್ಲಿದ್ದಲಿನ ಬೆಲೆ ₹25,000ವನ್ನೂ ದಾಟುತ್ತದೆ ಎಂಬುದು ಎಎಪಿಯ ಆರೋಪ. ದೆಹಲಿಗೆ ಎನ್‌ಟಿಪಿಸಿಯಿಂದ ವಿದ್ಯುತ್ ಖರೀದಿಸಲಾಗುತ್ತದೆ. ಆಮದು ಕಲ್ಲಿದ್ದಲನ್ನು ಬಳಸಲೇಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿರುವ ಕಾರಣ, ಎನ್‌ಟಿಪಿಸಿ ಪ್ರತಿ ಟನ್‌ಗೆ ₹25,000ಕ್ಕೂ ಹೆಚ್ಚು ಪಾವತಿಸಿ ಆಮದು ಕಲ್ಲಿದ್ದಲನ್ನು ಖರೀದಿಸುತ್ತಿದೆ. ಈ ಕಾರಣದಿಂದಲೇ ವಿದ್ಯುತ್ ದರ ಏರಿಕೆಯಾಗಿದೆ ಎಂಬುದು ಎಎಪಿಯ ಪ್ರತಿಪಾದನೆ.

ಆಮದು ಕಲ್ಲಿದ್ದಲನ್ನು ಬಳಸಲೇಬೇಕು ಎಂದು ಆದೇಶಿಸಿರುವುದೇ ವಿದ್ಯುತ್‌ ದರ ಏರಿಕೆಗೆ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಸಾಗಣೆಗೆ ರೈಲುಗಳ ಕೊರತೆ

‘ದೇಶದಲ್ಲಿ ಕಲ್ಲಿದ್ದಲಿನ ಉತ್ಪಾದನೆ ಏರಿಕೆಯಾಗುತ್ತಲೇ ಇದೆ. ಆದರೆ, ಅವುಗಳ ಸಾಗಣೆಗೆ ಅಗತ್ಯವಿರುವಷ್ಟು ರೈಲುಗಳನ್ನು ಕೇಂದ್ರ ಸರ್ಕಾರವು ಒದಗಿಸುತ್ತಿಲ್ಲ. ಈ ಕಾರಣದಿಂದಲೇ ಗಣಿಗಳಲ್ಲಿ ಕಲ್ಲಿದ್ದಲು ಲಭ್ಯವಿದ್ದರೂ, ಅವು ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪೂರೈಕೆಯಾಗುತ್ತಿಲ್ಲ. ಬದಲಿಗೆ ಆಮದು ಕಲ್ಲಿದ್ದಲನ್ನು ಪೂರೈಸಲಾಗುತ್ತಿದೆ’ ಎಂದು ಎಎಪಿ ಆರೋಪಿಸಿದೆ.

ಕಲ್ಲಿದ್ದಲು ಪೂರೈಕೆಗೆ ನಿಗದಿಪಡಿಸಿದಷ್ಟು ರೈಲುಗಳನ್ನು ರೈಲ್ವೆ ಇಲಾಖೆ ಒದಗಿಸುತ್ತಿದೆ. ಆದರೆ, ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವಷ್ಟು ಕಲ್ಲಿದ್ದಲನ್ನು ಪೂರೈಸಲು ರೈಲುಗಳ ಕೊರತೆ ಇದೆ. ಹೆಚ್ಚುವರಿ ರೈಲುಗಳನ್ನು ರೈಲ್ವೆ ಇಲಾಖೆಯು ಒದಗಿಸುತ್ತಿಲ್ಲ. ಹೀಗಾಗಿ ಗಣಿಗಳಿಂದ ಕಲ್ಲಿದ್ದಲನ್ನು ಟ್ರಕ್‌ಗಳ ಮೂಲಕ ಸಾಗಿಸಲಾಗುತ್ತಿದೆ. ಟ್ರಕ್‌ಗಳ ಮೂಲಕ ಸಾಗಿಸಿದಾಗ ಸಾಗಣೆ ವೆಚ್ಚ ಏರಿಕೆಯಾಗುತ್ತದೆ. ಇದರಿಂದಲೂ ವಿದ್ಯುತ್ ಉತ್ಪಾದನಾ ವೆಚ್ಚ ಏರಿಕೆಯಾಗುತ್ತಿದೆ. ಪರಿಣಾಮವಾಗಿ ವಿದ್ಯುತ್ ದರವೂ ಏರಿಕೆಯಾಗುತ್ತಿದೆ.

ರೈಲುಗಳ ಕೊರತೆಯನ್ನು ಪರಿಹರಿಸಲು ಕೇಂದ್ರ ಸರ್ಕಾರವು ‘ರೈಲು–ಹಡಗು–ರೈಲು (ಆರ್‌ಎಸ್‌ಆರ್‌)’ ವಿಧಾನವನ್ನು ಜಾರಿಗೆ ತಂದಿತು. ಅಂದರೆ ಗಣಿಗಳಿಂದ ಕಲ್ಲಿದ್ದಲನ್ನು ಹತ್ತಿರದ ಬಂದರಿಗೆ ಸಾಗಿಸುವುದು ಮತ್ತು ಅಲ್ಲಿಂದ ಸ್ಥಾವರಕ್ಕೆ ಸಮೀಪವಿರುವ ಬಂದರಿಗೆ ಹಡಗಿನಲ್ಲಿ ಸಾಗಿಸುವುದು. ಆ ಬಂದರಿನಿಂದ ಸ್ಥಾವರಕ್ಕೆ ರೈಲಿನ ಮೂಲಕ ಕಲ್ಲಿದ್ದಲು ಸಾಗಿಸುವುದೇ ಈ ವಿಧಾನ. ಇದನ್ನು ಜಾರಿಗೆ ತಂದು ಹಲವು ತಿಂಗಳು ಕಳೆದಿದ್ದರೂ, ಯಾವ ವಿದ್ಯುತ್ ಉತ್ಪಾದನಾ ಕಂಪನಿಯೂ ಇದನ್ನೂ ಬಳಸಿಕೊಳ್ಳುತ್ತಿಲ್ಲ. ಏಕೆಂದರೆ, ಈ ವಿಧಾನದ ಮೂಲಕ ಸಾಗಿಸಿದ ಕಲ್ಲಿದ್ದಲಿನ ದರವು, ಆಮದು ಕಲ್ಲಿದ್ದಲಿನ ದರದಷ್ಟೇ ಆಗುತ್ತದೆ. ಹೀಗಾಗಿ ಇದು ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯವಿದೆ.

ಮಹಾನದಿ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಖರೀದಿಸಲು ಪಂಜಾಬ್‌ ಸರ್ಕಾರವು 2022ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಕೇಂದ್ರ ಸರ್ಕಾರವು ಆರ್‌ಎಸ್‌ಆರ್‌ ವಿಧಾನದ ಷರತ್ತು ಹಾಕಿತ್ತು. ಆ ಷರತ್ತಿನ ಪ್ರಕಾರ, ಒಡಿಶಾದ ಮಹಾನದಿ ಕಲ್ಲಿದ್ದಲು ಗಣಿಯಿಂದ ಪೂರ್ವ ಕರಾವಳಿಯ ಪಾರಾದೀಪ್‌ ಬಂದರಿಗೆ ರೈಲಿನಲ್ಲಿ ಕಲ್ಲಿದ್ದಲನ್ನು ಸಾಗಿಸಬೇಕಿತ್ತು. ಅಲ್ಲಿ ಕಲ್ಲಿದ್ದಲನ್ನು ರೈಲುಗಳಿಂದ ಹಡಗಿಗೆ ತುಂಬಿಸಬೇಕಿತ್ತು. ಹಡಗು ಬಂಗಾಳ ಕೊಲ್ಲಿ ಮತ್ತು ಹಿಂದೂಮಹಾಸಾಗರದ ಮೂಲಕ ಅರಬ್ಬಿ ಸಮುದ್ರವನ್ನು ಪ್ರವೇಶಿಸಿ, ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಬೇಕಿತ್ತು. ಅಲ್ಲಿಂದ ಮತ್ತೆ ರೈಲಿಗೆ ಕಲ್ಲಿದ್ದಲು ತುಂಬಿ, ಪಂಜಾಬ್‌ಗೆ ಸಾಗಿಸಬೇಕಿತ್ತು. ಈ ಷರತ್ತಿಗೆ ಪಂಜಾಬ್‌ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಷರತ್ತನ್ನು ಕೇಂದ್ರ ಸರ್ಕಾರ ಹಿಂಪಡೆಯಿತು.

ಆಧಾರ: ಕಲ್ಲಿದ್ದಲು ಸಚಿವಾಲಯದ ಕಲ್ಲಿದ್ದಲು ಉತ್ಪಾದನಾ ವರದಿ, ಕಲ್ಲಿದ್ದಲು ಆಮದು ವರದಿ, ಕಲ್ಲಿದ್ದಲು ಸಚಿವಾಲಯದ ವಾರ್ಷಿಕ ವರದಿಗಳು, ಕಲ್ಲಿದ್ದಲು ಗಣಿ ಹಂಚಿಕೆ ವರದಿಗಳು, ಪಿಟಿಐ, ಪಿಐಬಿ ಪ್ರಕಟಣೆಗಳು, ಅದಾನಿ ಎಂಟರ್‌ಪ್ರೈಸಸ್‌ ಜಾಲತಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT