‘ರಾಜಕಾರಣ ಮಾಡುವುದು ಸಿನಿಮಾ ಮಾಡಿದಷ್ಟು ಸುಲಭವಲ್ಲ’

ಹೀಗೆಂದು ಹೇಳಿದ್ದವರು ಕಮಲ ಹಾಸನ್. ಜಯಲಲಿತಾ ಅವರ ಸಾವಿನ ನಂತರದ ದಿನಗಳಲ್ಲಿ ರಾಜಕೀಯಕ್ಕೆ ಬಂದು, ಹೊಸ ಪಕ್ಷ (ಮಕ್ಕಳ ನೀಧಿ ಮಯ್ಯಂ) ಸ್ಥಾಪಿಸಿ, ಒಂದೂ ಸ್ಥಾನ ಗೆಲ್ಲಲಾಗದೇ ನಿರಾಶೆ ಅನುಭವಿಸಿದವರು ಕಮಲ ಹಾಸನ್. 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಅವರ ಪಕ್ಷ ಕೇವಲ ಶೇ 2.6 ಮತ ಪ್ರಮಾಣ ಗಳಿಸಿತ್ತು. ಇದೇ ರೀತಿ ರಾಜಕೀಯಕ್ಕೆ ಬರಬೇಕೆಂಬ ಆಸೆ ಇದ್ದರೂ, ಅದರ ಕಷ್ಟನಷ್ಟದ ಬಗ್ಗೆ ಆಲೋಚಿಸಿ ಕೊನೆಯ ಕ್ಷಣದಲ್ಲಿ ಚುನಾವಣಾ ರಾಜಕೀಯದಿಂದ ದೂರ ಸರಿದವರು ರಜನಿಕಾಂತ್.

ಸಿನಿಮಾ ರಂಗದಲ್ಲಿ ರಜನಿ–ಕಮಲ್ ಸಾಧಿಸಲು ಆಗದ್ದನ್ನು ಅವರಿಗಿಂತ ಕಿರಿಯರಾದ (51 ವರ್ಷ) ದಳಪತಿ ವಿಜಯ್ ಸಾಧಿಸಿದ್ದಾರೆ. ದ್ರಾವಿಡ ರಾಜಕಾರಣದ ಹೆಸರಿನಲ್ಲಿ ರಾಜ್ಯದಲ್ಲಿ ಪಾರಮ್ಯ ಸಾಧಿಸಿದ್ದ ಡಿಎಂಕೆ, ಎಐಎಡಿಎಂಕೆಯಂಥ ಪಕ್ಷಗಳನ್ನು, ಅವುಗಳ ನುರಿತ ನಾಯಕರನ್ನು ಮಣಿಸಿ, ತಮಿಳುನಾಡಿನ ಮುಖ್ಯಮಂತ್ರಿ ಗಾದಿ ಏರಲು ಸಜ್ಜಾಗಿದ್ದಾರೆ. ಸುಮಾರು ಆರು ದಶಕಗಳಿಂದ ತಮಿಳುನಾಡನ್ನು ಇವೆರಡೇ ಪಕ್ಷಗಳು ಆಳುತ್ತಿದ್ದವು. ಆ ಪರಂಪರೆಯನ್ನು ತುಂಡರಿಸಿರುವ ವಿಜಯ್, ಹೊಸ ಪಕ್ಷವನ್ನು ಸ್ಥಾಪಿಸಿ, ಅದನ್ನು ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿರುವುದು ಕಡಿಮೆ ಸಾಧನೆಯೇನಲ್ಲ.

ಕೇವಲ ಎರಡು ವರ್ಷಗಳ ಹಿಂದೆ (2024ರಲ್ಲಿ) ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷ ಸ್ಥಾಪಿಸಿ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 234 ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಅವರು, ತಮ್ಮ ಮೊದಲ ಪ್ರಯತ್ನದಲ್ಲೇ ಅಚ್ಚರಿಯ, ಅನಿರೀಕ್ಷಿತವಾದ ಗೆಲುವನ್ನು ದಕ್ಕಿಸಿಕೊಂಡಿದ್ದಾರೆ. ಇದು ಅಚ್ಚರಿದಾಯಕ ಗೆಲುವು ಎಂದು ಜನರಿಗೆ ಅನ್ನಿಸಿದರೂ, ಇದರ ಹಿಂದೆ ವಿಜಯ್ ಅವರ ಸುಮಾರು ಎರಡು ದಶಕಗಳ ಪ್ರಯತ್ನ, ಪರಿಶ್ರಮ ಇದೆ.

ತಂದೆ, ಸಿನಿಮಾ ನಿರ್ದೇಶಕ ಎಸ್.ಎ.ಚಂದ್ರಶೇಖರ್ ಅವರ ನೆರಳಿನಲ್ಲಿ ಬಾಲನಟನಾಗಿ ಅಡಿಯಿಟ್ಟ ವಿಜಯ್, ಚಿತ್ರರಂಗದಲ್ಲಿ ಬಹುಬೇಗ ಸ್ಟಾರ್ ಆದರು. ಕಮಲ ಹಾಸನ್, ರಜನಿಕಾಂತ್ ಅವರಂಥ ತಾರೆಗಳ ನಡುವೆ ತಮ್ಮದೇ ವಿಭಿನ್ನ ನಟನಾ ಶೈಲಿ ರೂಢಿಸಿಕೊಂಡರು. ಆತ್ಮವಿಶ್ವಾಸ, ಹಾಸ್ಯ ಇರುವ ವಿಶಿಷ್ಟ ಮ್ಯಾನರಿಸಂನಿಂದ ಬಹಳ ಬೇಗ ತಮಿಳು ಅಭಿಮಾನಿಗಳ ಪ್ರೀತಿ ಗಳಿಸಿ ‘ದಳಪತಿ’ ಎಂದು ಬಿರುದು ಗಳಿಸಿದರು. ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ನಂತರದ ದೊಡ್ಡ ತಾರೆ ಎನ್ನಿಸಿಕೊಂಡರು.

ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗೆ ಸಿನಿಮಾ ಜನಪ್ರಿಯತೆಯನ್ನೇ ಅಡಿಪಾಯ ಮಾಡಿಕೊಂಡ ವಿಜಯ್, 2009ರಲ್ಲಿ ‘ವಿಜಯ್ ಮಕ್ಕಳ್ ಇಯಕ್ಕಂ’ (ವಿಜಯ್ ಜನ ಚಳವಳಿ–ವಿಎಂಐ) ಎನ್ನುವ ಅಭಿಮಾನಿ ಸಂಘ ಸ್ಥಾಪಿಸಿದರು. ಅದರ 85 ಸಾವಿರ ಘಟಕಗಳು ರಾಜ್ಯದಾದ್ಯಂತ ಆರಂಭವಾದವು. ಅವುಗಳ ಮೂಲಕ ವಿಜಯ್ ಅವರು ನೆರೆ, ಬರ, ಆರ್ಥಿಕ ನೆರವು, ರಕ್ತದಾನ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿದರು. ಅವರ ಸಿನಿಮಾ ಕಾರ್ಯಕ್ರಮಗಳಲ್ಲಿ ರಾಜಕೀಯದ ಮಾತು–ಕತೆಗಳು ಕೇಳಿಬರತೊಡಗಿದವು. ‘ದಳಪತಿ’, ನಿರುದ್ಯೋಗ, ಬಡತನದಂಥ ಸಾಮಾಜಿಕ ಸಮಸ್ಯೆಗಳಿಂದ ಹಿಡಿದು ಜಿಎಸ್ಟಿ, ಪೌರತ್ವ ತಿದ್ದುಪಡಿ ಕಾಯ್ದೆಯಂಥ ರಾಷ್ಟ್ರೀಯ ವಿಚಾರಗಳನ್ನೂ ಟೀಕಿಸಿ, ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಿದ್ದರು. 2011ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಗೆ ಬೆಂಬಲ ನೀಡುವ ಮೂಲಕ ಅಭಿಮಾನ ಮತವಾಗಿ ಪರಿವರ್ತನೆಯಾಗುವುದೇ ಎನ್ನುವುದನ್ನು ತಮ್ಮದೇ ರೀತಿಯಲ್ಲಿ ಪರೀಕ್ಷಿಸಿದ್ದರು. 2021ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ 169 ವಾರ್ಡ್ಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವಿಎಂಐನ 115 ಮಂದಿ ಗೆಲುವು ಸಾಧಿಸಿದ್ದರು.

2024ರ ಫೆಬ್ರುವರಿಯಲ್ಲಿ ಟಿವಿಕೆ ಸ್ಥಾಪಿಸಲು ವಿಜಯ್ ಅವರಿಗೆ ಅಡಿಪಾಯ ಆಗಿದ್ದು ಈ ಗೆಲುವು. ಈಗಿನ ವಿಧಾನಸಭಾ ಚುನಾವಣೆ ಗೆಲುವು ಅವರಿಗೆ ದೊಡ್ಡ ಜವಾಬ್ದಾರಿ ಹೊರಿಸಿದೆ. ದ್ರಾವಿಡ ತಾತ್ವಿಕತೆ ಹಿನ್ನೆಲೆ ಇಲ್ಲದ, ಅಧಿಕಾರ ರಾಜಕಾರಣದ ಅನುಭವ ಇಲ್ಲದ ವಿಜಯ್ ಹೊಸ ಸವಾಲನ್ನು ಹೇಗೆ ಎದುರಿಸಲಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ.

‘ಸಿನಿಮಾ’ ಸಿ.ಎಂ.ಗಳು

ಸಿನಿಮಾದವರು ಮುಖ್ಯಮಂತ್ರಿ ಸ್ಥಾನಕ್ಕೇರುವುದು ದಕ್ಷಿಣ ಭಾರತದ ರಾಜಕಾರಣದಲ್ಲಿ ಕಂಡುಬರುವ ವೈಶಿಷ್ಟ್ಯ. ತಮಿಳುನಾಡು ರಾಜ್ಯ ಉದಯವಾದ ನಂತರ ಅದರ ಮೊದಲ ಮುಖ್ಯಮಂತ್ರಿಯಾಗಿ, ಭಾರತದಲ್ಲಿ ಪ್ರಾದೇಶಿಕ ಪಕ್ಷದ (ಡಿಎಂಕೆ) ರಾಜಕಾರಣದ ಶಕೆಯನ್ನು ಆರಂಭಿಸಿದ ಅಣ್ಣಾದೊರೈ ಕೂಡ ಸಿನಿಮಾದವರೇ. ಡಿಎಂಕೆಯಿಂದಲೇ ರಾಜಕಾರಣ ಆರಂಭಿಸಿ, ನಂತರ ಅದರಿಂದ ಹೊರಬಂದು ಎಐಎಡಿಎಂಕೆ ಸ್ಥಾಪಿಸಿ, 1977ರಿಂದ 1987ರವರೆಗೆ ಮುಖ್ಯಮಂತ್ರಿ ಆಗಿದ್ದವರು ಖ್ಯಾತ ನಟ ಎಂಜಿಆರ್.

ಸಿನಿಮಾ ಲೇಖಕರಾಗಿ ಜನಪ್ರಿಯತೆ ಗಳಿಸಿ, ನಂತರ ಡಿಎಂಕೆ ಮುಖಂಡರಾಗಿ, ಐದು ಬಾರಿ ಮುಖ್ಯಮಂತ್ರಿ ಆದವರು ಕರುಣಾನಿಧಿ. ಎಂಜಿಆರ್ ಉತ್ತರಾಧಿಕಾರಿಯಾಗಿ ರಾಜಕೀಯ ಪ್ರವೇಶಿಸಿ, ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದವರು ಜೆ.ಜಯಲಿಲಿತಾ.
ಎಂ.ಕೆ.ಸ್ಟಾಲಿನ್ ಕೂಡ ರಾಜಕೀಯಕ್ಕೆ ಬರುವ ಮುನ್ನ ನಟರಾಗಿದ್ದರು.

ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪಿಸಿ ಗಣನೀಯ ಸಾಧನೆ ಮಾಡಿದವರು ನಟ ವಿಜಯ್ಕಾಂತ್. ‘ಕ್ಯಾಪ್ಟನ್’ ಎಂದು ಕರೆಸಿಕೊಳ್ಳುತ್ತಿದ್ದ ಅವರು 2005ರಲ್ಲಿ ದೇಸೀಯ ಮೂರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸ್ಥಾಪಿಸಿ, 2011ರ ವಿಧಾನಸಭಾ ಚುನಾವಣೆಯಲ್ಲಿ 29 ಸ್ಥಾನ ಗೆದ್ದಿದ್ದರು. ವಿಜಯಕಾಂತ್ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಆಗಿದ್ದರು. ನಂತರದ ದಿನಗಳಲ್ಲಿ ಪಕ್ಷ ಹಂತಹಂತವಾಗಿ ತನ್ನ ಪ್ರಾಬಲ್ಯ ಕಳೆದುಕೊಂಡಿತು.

ಹೊಸ ಪಕ್ಷ ಕಟ್ಟಿ ಗದ್ದುಗೆ ಏರಿದವರು

ಹೊಸ ಪಕ್ಷ ಕಟ್ಟಿ ಚುನಾವಣೆ ಎದುರಿಸಿ ದಡ ಮುಟ್ಟುವುದು ಅತ್ಯಂತ ಅನಿಶ್ಚಿತವಾದ, ಕಷ್ಟಕರವಾದ, ಭಾರಿ ಸಂಪನ್ಮೂಲ, ಸಂಪರ್ಕ, ಜಾಣ್ಮೆ ಬೇಡುವ ಕೆಲಸ. ಚಿತ್ರರಂಗದಲ್ಲಿ ಪಡೆದ ಜನಪ್ರಿಯತೆ ಆಧಾರದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಗಾದಿಗೇರಿದ ಕರುಣಾನಿಧಿ, ಎಂಜಿಆರ್, ಜಯಲಲಿತಾ ಅವರೂ ಪಕ್ಷ ಸ್ಥಾಪನೆ ಮಾಡಿದವರಲ್ಲ. ದ್ರಾವಿಡ ಅಸ್ಮಿತೆಯ ಹೆಸರಿನಲ್ಲಿ ಸ್ಥಾಪನೆಯಾಗಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಮೂಲಕ ರಾಜಕೀಯ ಅಧಿಕಾರ ಅನುಭವಿಸಿದವರು.

ಹೊಸ ಪಕ್ಷ ಕಟ್ಟಿದ ಕೆಲವೇ ತಿಂಗಳಲ್ಲಿ ಮುಖ್ಯಮಂತ್ರಿ ಗಾದಿಗೇರಿದ ದಾಖಲೆ ನಿರ್ಮಿಸಿದವರು ತೆಲುಗು ನಟ ಎನ್ಟಿಆರ್. ತೆಲುಗರ ಸ್ವಾಭಿಮಾನದ ಹೆಸರಿನಲ್ಲಿ ತೆಲುಗು ದೇಶಂ ಪಕ್ಷ ಕಟ್ಟಿ (1983), ಕೇವಲ ಒಂಬತ್ತು ತಿಂಗಳಲ್ಲಿಯೇ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದವರು ಅವರು. ಅವರದೇ ಹಾದಿಯಲ್ಲಿ ಮೆಗಾಸ್ಟಾರ್ ಎಂದು ಹೆಸರಾದ ಚಿರಂಜೀವಿ ಅವರೂ ಪ್ರಜಾರಾಜ್ಯಂ ಪಕ್ಷ ಕಟ್ಟಿದರೂ, ಅವರಿಗೆ ಗೆಲ್ಲಲು ಸಾಧ್ಯವಾಗಿದ್ದು 18 ಸ್ಥಾನಗಳನ್ನು ಮಾತ್ರ. ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿದವರು. ವಿಶೇಷ ಎಂದರೆ, ಚಿರಂಜೀವಿ ಕೈಯಲ್ಲಿ ಆಗದೇ ಇದ್ದುದನ್ನು ಅವರ ತಮ್ಮ ಪವನ್ ಕಲ್ಯಾಣ್ ಸಾಧಿಸಿದ್ದಾರೆ. ಜನಸೇನಾ ಪಕ್ಷ ಸ್ಥಾಪಿಸಿ, ಸತತ ಸೋಲುಗಳನ್ನು ಕಂಡರೂ ರಾಜಕೀಯದಲ್ಲಿಯೇ ಉಳಿದಿರುವ ಅವರು ಪ್ರಸ್ತುತ ಆಂಧ್ರಪ್ರದೇಶದ ಎನ್ಡಿಎ ಸರ್ಕಾರದ ಭಾಗವಾಗಿದ್ದಾರೆ; ಉಪಮುಖ್ಯಮಂತ್ರಿಯೂ ಆಗಿದ್ದಾರೆ.

ಅಪ್ಪನ ವಿರುದ್ಧ ವಿಜಯ್ ದಾವೆ

ವಿಜಯ್ ಅವರ ತಂದೆ ಎಸ್.ಎ.ಚಂದ್ರಶೇಖರ್ ಮಗನ ಹೆಸರನ್ನು ಬಳಸಿಕೊಂಡು ‘ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಪಕ್ಷ ಸ್ಥಾಪನೆಗೆ ಸಿದ್ಧತೆ ನಡೆಸಿದ್ದರು. ಅದರ ಮಾಹಿತಿ ಪಡೆದ ವಿಜಯ್, 2021ರಲ್ಲಿ ಅಪ್ಪನ ವಿರುದ್ಧವೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ರಾಜಕೀಯ ಕಾರಣಕ್ಕಾಗಿ ತನ್ನ ಹೆಸರನ್ನು ಮತ್ತು ಅಭಿಮಾನಿ ಸಂಘಗಳನ್ನು ತನ್ನ ಪೋಷಕರು ಸೇರಿದಂತೆ ಯಾರೂ ಬಳಸಬಾರದು ಎಂದು ತಾಕೀತು ಮಾಡಿದ್ದರು. ಇದು ತಂದೆ–ಮಗನ ನಡುವೆ ಬಿರುಕು ಮೂಡಿಸಿತ್ತು. ಪ್ರಸ್ತುತ ಟಿವಿಕೆ ಮತ್ತು ವಿಜಯ್ ಅವರ ಗೆಲುವನ್ನು ಸ್ವಾಗತಿಸಿರುವ ಅವರ ತಂದೆ, ತಾವು ಮಗನೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಗೆಲುವಿನ ಹಿಂದೆ ಇರುವವರು

ಈ ಚುನಾವಣೆಯಲ್ಲಿ ಟಿವಿಕೆ ಗೆಲುವಿನಲ್ಲಿ ವಿಜಯ್ ಅವರ ತಾರಾ ವರ್ಚಸ್ಸು ಕೆಲಸ ಮಾಡಿದ್ದರೂ, ಪಕ್ಷದ ಚುನಾವಣಾ ತಂತ್ರಗಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಸಲಹೆಗಾರರ ಕೊಡುಗೆಯೂ ಸಾಕಷ್ಟಿದೆ. ವಿಜಯ್ ಅವರು ಪಕ್ಷ ಸ್ಥಾಪಿಸಿದ್ದ ಸಂದರ್ಭದಲ್ಲಿ ಚುನಾವಣಾ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್, ವಿಜಯ್ ಜೊತೆಗಿದ್ದರು. ಆಗ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಶಾಂತ್ ಕಿಶೋರ್ ಅವರು, 2026ರ ಚುನಾವಣೆಯಲ್ಲಿ ವಿಜಯ್ ಪಕ್ಷಕ್ಕೆ ಉತ್ತಮ ಸಾಧನೆ ಮಾಡುವ ಅವಕಾಶ ಇದೆ ಎಂದು ಹೇಳಿದ್ದರು. ಅವರ ಅಂದಿನ ಸಂದರ್ಶನದ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ಕಿಶೋರ್ ಅವರು ಟಿವಿಕೆಗೆ ಸಲಹೆಗಾರರು ಎಂದು ಹೇಳಲಾಗಿತ್ತು. ಆದರೆ, ಬಿಹಾರದಲ್ಲಿ ರಾಜಕೀಯ ಪಕ್ಷ ಹುಟ್ಟುಹಾಕಿದ್ದ ಕಿಶೋರ್ ಇದನ್ನು ನಿರಾಕರಿಸಿದ್ದರು.

ತಮಿಳುನಾಡಿನಲ್ಲಿ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ, ಪಕ್ಷದ ಗೆಲುವಿನ ಹಿಂದೆ ಕಪಿಲ್ ಸಾಹು ಮತ್ತು ಜಾನ್ ಆರೋಗ್ಯಸ್ವಾಮಿ ಅವರ ಹೆಸರು ಕೇಳಿ ಬರುತ್ತಿದೆ. ಇವರಿಬ್ಬರು ಚುನಾವಣಾ ತಂತ್ರಗಾರಿಕೆಯಲ್ಲಿ ಕೆಲಸ ಮಾಡಿದ್ದ ರು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಕಪಿಲ್ ಸಾಹು: ದೆಹಲಿಯ ಕಪಿಲ್ ಸಾಹು ಅವರು ಚುನಾವಣಾ ತಂತ್ರಗಾರಿಕೆಯ ಕನ್ಸಲ್ಟೆನ್ಸಿ ಸಂಸ್ಥೆ ಐ–ಪ್ಯಾಕ್ನಲ್ಲಿ ಕೆಲಸ ಮಾಡಿದ್ದವರು. ಎರಡು ವರ್ಷಗಳ ಹಿಂದೆ ಅವರು, 12 ಜನರೊಂದಿಗೆ ಸಂಸ್ಥೆಯನ್ನು ತೊರೆದು, ತಮ್ಮದೇ ಆದ ರಾಜಕೀಯ ಸಲಹಾ ಸಂಸ್ಥೆಯನ್ನು ಕಟ್ಟಿ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಚುನಾವಣೆಗಳಲ್ಲಿ ಗೆಲ್ಲಲು ತಂತ್ರಗಾರಿಕೆ ರೂಪಿಸುವುದರಲ್ಲಿ ತೊಡಗಿಕೊಂಡಿದ್ದಾರೆ. ವಿವಿಧ ಚುನಾವಣೆಗಳಲ್ಲಿ ಅವರು ಕಾಂಗ್ರೆಸ್, ಎಎಪಿ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಮುಂತಾದ ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡಿದ್ದಾರೆ. ಟಿವಿಕೆ ಪಕ್ಷವು ಯುವಜನರನ್ನು ಆಧರಿಸಿದ ಯೋಜನೆಗಳನ್ನು ರೂಪಿಸಲು, ಪಕ್ಷದತ್ತ ಯುವ ಮತದಾರರನ್ನು ಹೆಚ್ಚು ಹೆಚ್ಚು ಸೆಳೆಯುವಲ್ಲಿ, ಡಿಜಿಟಲ್ ವೇದಿಕೆಗಳಲ್ಲಿ ಪಕ್ಷದ ವಿಚಾರಗಳನ್ನು ಹಂಚಿಕೊಳ್ಳುವಲ್ಲಿ, ಅಭಿಪ್ರಾಯ ರೂಪಿಸುವುದರಲ್ಲಿ ಮತ್ತು ಕ್ಷೇತ್ರವಾರು ಮನೆ ಮನೆಗಳಿಗೆ ಪಕ್ಷವನ್ನು ಕೊಂಡು ಹೋಗುವಲ್ಲಿ ಕಪಿಲ್ ಸಾಹು ಅವರ ಸಲಹೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿವೆ ಎಂದು ಹೇಳಲಾಗುತ್ತಿದೆ.

ಜಾನ್ ಆರೋಗ್ಯಸ್ವಾಮಿ: ಆಂಧ್ರಪ್ರದೇಶದ ಜಾನ್ ಆರೋಗ್ಯಸ್ವಾಮಿ, ಬೆಳೆದಿದ್ದು, ಶಿಕ್ಷಣ ಪಡೆದಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಶಿಕ್ಷಣ ಮುಗಿಸಿದ ಬಳಿಕ ಅವರು ಹೊರಳಿದ್ದು, ಸಾರ್ವಜನಿಕ ಸಂಪರ್ಕ ಕ್ಷೇತ್ರಕ್ಕೆ. ಕೆಲವು ವರ್ಷ ಅಲ್ಲಿ ಕೆಲಸ ಮಾಡಿದ ನಂತರ ಚುನಾವಣಾ ಕ್ಷೇತ್ರ ಅವರನ್ನು ಆಕರ್ಷಿಸಿತು. 2021ರಲ್ಲಿ ಜೆಪಿಎಸಿಪರ್ಸೋನಾ ಎಂಬ ಚುನಾವಣಾ ಸಲಹಾ ಸಂಸ್ಥೆಯನ್ನು ಕಟ್ಟಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಮತ್ತು 2017ರ ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನಾ ಪರವಾಗಿ ಕೆಲಸ ಮಾಡಿದ್ದಾರೆ. ತಮಿಳುನಾಡಿನ ರಾಜಕೀಯವನ್ನು ಬಲ್ಲಂತಹ ಜಾನ್, ಟಿವಿಕೆಯ ಚುನಾವಣಾ ತಂತ್ರಗಾರಿಕೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎನ್ನಲಾಗುತ್ತಿದೆ.

ಟಿವಿಕೆ ಗೆಲುವಿಗೆ ಕಾರಣಗಳು

ವಿಜಯ್ ಅವರ ತಾರಾ ವರ್ಚಸ್ಸು

15 ವರ್ಷಗಳ ಹಿಂದಿನಿಂದಲೇ ಅಭಿಮಾನಿಗಳ ಸಂಘಗಳ ಮೂಲಕ ತಳಮಟ್ಟದಲ್ಲಿ ತಮ್ಮ ಬೆಂಬಲಿಗರ ಪಡೆಯನ್ನು ಕಟ್ಟುತ್ತಾ, ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿದ್ದು

ನವ ಮತದಾರರು ಸೇರಿದಂತೆ ಯುವ ಜನರು, ಮಹಿಳೆಯರನ್ನು ಗುರಿಯಾಗಿಸಿಕೊಂಡು ರಾಜಕೀಯ ತಂತ್ರ ಹೆಣೆದಿರುವುದು

ಕರ್ನಾಟಕ ಮಾದರಿಯ ಹಲವು ಗ್ಯಾರಂಟಿ ಘೋಷಣೆಗಳು

ಬಿಜೆಪಿ ಸೈದ್ಧಾಂತಿಕ ವೈರಿ, ಡಿಎಂಕೆ ರಾಜಕೀಯ ವೈರಿ ಎಂಬ ಘೋಷಣೆ

ಜಾತ್ಯತೀತ ಧೋರಣೆಯ ಅಡಿಯಲ್ಲಿ ಪ್ರಚಾರ

ಜಾತಿ, ಧರ್ಮ ಮೀರಿ ಎಲ್ಲ ವರ್ಗಗಳ ಬೆಂಬಲ ಮತವಾಗಿ ಪರಿವರ್ತನೆಯಾಗಿದ್ದು

ಡಿಎಂಕೆ ಸರ್ಕಾರ ಎದುರಿಸುತ್ತಿದ್ದ ಆಡಳಿತ ವಿರೋಧಿ ಅಲೆ

ಮುಂದಿರುವ ಸವಾಲುಗಳು

ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರ ಬೆಂಬಲ ಪಡೆಯುವುದು

ಆಡಳಿತದಲ್ಲಿನ ಅನನುಭವ. ಟಿವಿಕೆಯಲ್ಲಿ ರಾಜಕೀಯ ಮತ್ತು ಆಡಳಿತದಲ್ಲಿ ಹೆಚ್ಚು ಅನುಭವ ಇರುವವರ ಕೊರತೆ

ಪ್ರಣಾಳಿಕೆಯಲ್ಲಿ ಘೋಷಿಸಿದ ಭರವಸೆಗಳನ್ನು ಜಾರಿಗೆ ತರುವುದು

ಉಚಿತ ಕೊಡುಗೆಗಳ ನಂತರವೂ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳುವುದು

ಆಧಾರ: ಪಿಟಿಐ, ಬಿಬಿಸಿ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.