ಶನಿವಾರ, 30 ಸೆಪ್ಟೆಂಬರ್ 2023

ADVERTISEMENT
ಈ ಕ್ಷಣ :
ADVERTISEMENT
ಮಹಿಳಾ ಮತ: ಮಹಿಳಾ ಮೀಸಲಾತಿ ಜಾರಿಯಲ್ಲಿವೆ ಹತ್ತಾರು ತೊಡಕುಗಳು!
ಮಹಿಳಾ ಮತ: ಮಹಿಳಾ ಮೀಸಲಾತಿ ಜಾರಿಯಲ್ಲಿವೆ ಹತ್ತಾರು ತೊಡಕುಗಳು!
ಆಳ–ಅಗಲ: ಮಹಿಳಾ ಮೀಸಲಾತಿ ಜಾರಿಯಲ್ಲಿವೆ ಹತ್ತಾರು ತೊಡಕುಗಳು!
Published 19 ಸೆಪ್ಟೆಂಬರ್ 2023, 20:24 IST
Last Updated 19 ಸೆಪ್ಟೆಂಬರ್ 2023, 20:49 IST
ಅಕ್ಷರ ಗಾತ್ರ

ಭಾರತದ ಪ್ರಜಾಪ್ರಭುತ್ವ ಮತ್ತು ಮಹಿಳೆ ಎಂದು ಹುಡುಕುತ್ತಾ ಹೋದರೆ, ಈವರೆಗೆ ರಾಜಕಾರಣದಲ್ಲಿ ಹೆಸರು ಮಾಡಿದ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಎಷ್ಟು ಸೀಮಿತ ಎಂದರೆ, 542 (ಒಂದು ಸ್ಥಾನ ತೆರವಾಗಿದೆ) ಸದಸ್ಯರ ಬಲ ಇರುವ ಈಗಿನ ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ 78 ಮಾತ್ರ. ಈ ಹಿಂದೆ ಈ ಸಂಖ್ಯೆ ಇದಕ್ಕಿಂತಲೂ ಕಡಿಮೆಯೇ ಇತ್ತು. ದೇಶದ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಸಾಧ್ಯವಾಗಿದ್ದು ಮೀಸಲಾತಿ ಮೂಲಕ ಮಾತ್ರ. ಲೋಕಸಭೆ, ರಾಜ್ಯ ವಿಧಾನಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33.33ರಷ್ಟು ಮೀಸಲಾತಿ ನೀಡಬೇಕು ಎಂಬುದು ಹಲವು ದಶಕಗಳ ಬೇಡಿಕೆ. ಆದರೆ, ಈವರೆಗೆ ಪಂಚಾಯತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಷ್ಟೇ ಮಹಿಳೆಯರಿಗೆ ಮೀಸಲಾತಿ ದೊರೆತಿದೆ.

ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು 1989ರಲ್ಲಿ ರಾಜೀವ್ ಗಾಂಧಿ ಅವರ ಸರ್ಕಾರವು ರಾಜ್ಯಸಭೆಯಲ್ಲಿ ಮಂಡಿಸಿತ್ತು. ಆದರೆ, ಅದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. 1992–93ರಲ್ಲಿ ಪಿ.ವಿ.ನರಸಿಂಹರಾವ್ ಅವರ ಸರ್ಕಾರವು ಸಂವಿಧಾನಕ್ಕೆ ತರಲಾದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಪಂಚಾಯತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸಿತು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ದೊಡ್ಡಮಟ್ಟದ ಪ್ರಾತಿನಿಧ್ಯ ದೊರೆತದ್ದು ಆಗಲೇ. ಅದರ ಪರಿಣಾಮವಾಗಿ ಈಗ ದೇಶದ ಉದ್ದಗಲಕ್ಕೂ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಮಹಿಳಾ ಜನಪ್ರತಿನಿಧಿಗಳಿದ್ದಾರೆ.

ಮಹಿಳಾ ಮೀಸಲಾತಿ ಜಾರಿಯಲ್ಲಿವೆ ಹತ್ತಾರು ತೊಡಕುಗಳು!

ಮಹಿಳಾ ಮೀಸಲಾತಿ ಜಾರಿಯಲ್ಲಿವೆ ಹತ್ತಾರು ತೊಡಕುಗಳು!

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಬೇಕು ಎಂಬುದು ಇಂದಿನ ಬೇಡಿಕೆ ಅಲ್ಲ, ಇದೇ ಮೊದಲ ಪ್ರಯತ್ನವೂ ಅಲ್ಲ. ಮಹಾರಾಷ್ಟ್ರದ ಸಂಸದೆಯಾಗಿದ್ದ ಪ್ರಮೀಳಾ ದಂಡವತೆ ಅವರು 1996ರಲ್ಲಿ ಮಹಿಳಾ ಮೀಸಲಾತಿ ಖಾಸಗಿ ಮಸೂದೆಯನ್ನು ಮೊದಲ ಬಾರಿ ಮಂಡಿಸಿದ್ದರು. 1996ರಲ್ಲಿ, ಅಂದಿನ ಎಚ್‌.ಡಿ.ದೇವೇಗೌಡ ಅವರ ನೇತೃತ್ವದ ಸಂಯುಕ್ತರಂಗ ಸರ್ಕಾರವು ಅಂತಹ ಮಸೂದೆಯನ್ನು ಮೊದಲ ಬಾರಿ ಲೋಕಸಭೆಯಲ್ಲಿ ಮಂಡಿಸಿತ್ತು. ಮಸೂದೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಿ, ಸಮಿತಿ ವರದಿ ನೀಡಿತ್ತು. ಆದರೆ, ಆ ಲೋಕಸಭೆಯೇ ವಿಸರ್ಜನೆಯಾದ ಕಾರಣ ಮಸೂದೆಯೂ ಬಿದ್ದುಹೋಯಿತು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಂಥದ್ದೇ ಮಸೂದೆಯನ್ನು 1998ರಲ್ಲಿ, 1999, 2002 ಮತ್ತು 2003ರಲ್ಲಿ ಮಂಡಿಸಿತ್ತು. 2004ರಲ್ಲಿ ಯುಪಿಎ–1 ಸರ್ಕಾರ ಮತ್ತೆ ಮಸೂದೆಯನ್ನು ಮಂಡಿಸಿತ್ತು. ಐದು ಬಾರಿಯೂ ಮಸೂದೆಗೆ ಅನುಮೋದನೆ ಸಿಕ್ಕಿರಲಿಲ್ಲ.

2008ರ ಮೇನಲ್ಲಿ ಮನಮೋಹನ್‌ ಸಿಂಗ್ ನೇತೃತ್ವದ ಯುಪಿಎ–1 ಸರ್ಕಾರ ಮತ್ತೆ ಮಸೂದೆಯನ್ನು ಮಂಡಿಸಿತ್ತು. ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿತ್ತು. 2009ರ ಡಿಸೆಂಬರ್‌ನಲ್ಲಿ ಹಲವು ಬದಲಾವಣೆಗಳೊಂದಿಗೆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿತ್ತು. 2010ರ ಮಾರ್ಚ್‌ 10ರಂದು ಮಸೂದೆಗೆ ರಾಜ್ಯಸಭೆಯು ಅನುಮೋದನೆ ನೀಡಿತ್ತು. ಆದರೆ, ಮಸೂದೆಯಲ್ಲಿನ ಹಲವು ಅಂಶಗಳಿಗೆ ಯುಪಿಎ ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು ಮತ್ತು ಹಲವು ಬದಲಾವಣೆಗಳನ್ನು ಆಗ್ರಹಿಸಿದ್ದವು. ಈ ಕಾರಣದಿಂದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲೇ ಇಲ್ಲ. 2014ರಲ್ಲಿ ಲೋಕಸಭೆ ವಿಸರ್ಜನೆಯಾದ ಕಾರಣ ಆ ಮಸೂದೆಯೂ ಬಿದ್ದುಹೋಯಿತು.

2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ, ಮೀಸಲಾತಿಯನ್ನು ಜಾರಿಗೆ ತರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೋದಿ ಸರ್ಕಾರವು ಮಸೂದೆಯನ್ನು ಮಂಡಿಸಲೇ ಇಲ್ಲ. ಕಾಂಗ್ರೆಸ್‌ ಸೇರಿದಂತೆ ಹಲವು ವಿರೋಧ ಪಕ್ಷಗಳು, ಬಿಜೆಪಿಯ ಹಲವು ಮಿತ್ರಪಕ್ಷಗಳೂ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ ಎಂದು ಆಗ್ರಹಿಸಿದ್ದವು. ಆದರೆ ಮೋದಿ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದು 2023ರಲ್ಲಿ. ಆದರೆ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಎಂಬ ತಾಂತ್ರಿಕ ಪ್ರಕ್ರಿಯೆಗಳ ಕಾರಣದಿಂದ ಮಹಿಳಾ ಮೀಸಲಾತಿ ಜಾರಿಗೆ ಬರುವುದು 2029ರ ವೇಳೆಗೆ ಎಂದು ನಿರೀಕ್ಷಿಸಲಾಗಿದೆ, ಅದೂ ಉಭಯ ಸದನಗಳಲ್ಲಿ ಮಸೂದೆಗೆ ಅನುಮೋದನೆ ದೊರೆತರಷ್ಟೆ.

ಬೇಡಿಕೆ, ಮಸೂದೆಯ ನಡುವೆ ಅಜಗಜಾಂತರ!

543 ಸದಸ್ಯ ಬಲವಿರುವ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿರಿಸಬೇಕು ಮತ್ತು ಆ 33ರಷ್ಟು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳಮೀಸಲಾತಿ ನೀಡಬೇಕು ಎಂಬುದು ಆರ್‌ಜೆಡಿ, ಸಮಾಜವಾದಿ ಪಕ್ಷ, ಜೆಡಿಯು ಮತ್ತು ಬಹುಜನ ಸಮಾಜ ಪಕ್ಷಗಳ ಆಗ್ರಹವಾಗಿತ್ತು. ಬಿಜೆಪಿಯ ಉಮಾಭಾರತಿ ಸಹ ಇಂಥದ್ದೇ ಬೇಡಿಕೆ ಮುಂದಿಟ್ಟಿದ್ದರು. ತಮ್ಮ ಬೇಡಿಕೆಯನ್ನು ಪರಿಗಣಿಸದ ಕಾರಣಕ್ಕೇ ಆರ್‌ಜೆಡಿ, ಸಮಾಜವಾದಿ ಪಕ್ಷ, ಜೆಡಿಯು ಮತ್ತು ಬಿಎಸ್‌ಪಿ ಈ ಮಸೂದೆಯನ್ನು ವಿರೋಧಿಸಿದ್ದವು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಾಗಲೇ ನೀಡಲಾಗುತ್ತಿರುವ ಮೀಸಲಾತಿಯಲ್ಲಿ, ಮಹಿಳಾ ಮೀಸಲಾತಿಯ ಕಾರಣದಿಂದ ಯಾವುದೇ ಬದಲಾವಣೆಯಾಗಬಾರದು ಎಂಬುದು ಈ ಪಕ್ಷಗಳ ಮತ್ತೊಂದು ಪ್ರಮುಖ ಆಗ್ರಹವಾಗಿತ್ತು. ಮಸೂದೆಯ ಈಗಿನ ಸ್ವರೂಪದಲ್ಲಿ ಮೀಸಲಾತಿ ಜಾರಿಗೆ ತಂದರೆ, ಮಹಿಳಾ ಮೀಸಲಾತಿ ಪಡೆಯುವವರಲ್ಲಿ ಮುಂದುವರಿದ ಜಾತಿಗಳ ಮಹಿಳೆಯರೇ ತುಂಬಿಕೊಳ್ಳುತ್ತಾರೆ, ಇತರ ಸಮುದಾಯಗಳ ಮಹಿಳೆಯರಿಗೆ ಪ್ರಾತಿನಿಧ್ಯ ತಪ್ಪಿಹೋಗುತ್ತದೆ ಎಂಬುದು ಈ ಪಕ್ಷಗಳ ಕಳವಳವಾಗಿತ್ತು. ಈವರೆಗೆ ಮಂಡಿಸಲಾಗಿದ್ದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಈ ಸ್ವರೂಪದ ಅವಕಾಶಗಳು ಇಲ್ಲದೇ ಇದ್ದ ಕಾರಣದಿಂದಲೇ ಆ ಮಸೂದೆಗಳು ಅನುಮೋದನೆ ಪಡೆಯುವಲ್ಲಿ ವಿಫಲವಾಗಿದ್ದವು.

2008ರಲ್ಲಿ ಯುಪಿಎ ಸರ್ಕಾರ ಮಂಡಿಸಿದ್ದ ಮಸೂದೆಯಲ್ಲಿ ಇಂತಹ ಬೇಡಿಕೆಗಳನ್ನು ಪರಿಗಣಿಸಿರಲಿಲ್ಲ. ಬದಲಿಗೆ ಈಗಾಗಲೇ ಜಾರಿಯಲ್ಲಿರುವ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ ಒಟ್ಟು ಸ್ಥಾನಗಳಲ್ಲಿ ಅದೇ ಸಮುದಾಯದ ಮಹಿಳೆಯರಿಗೆ ಒಳಮೀಸಲಾತಿ ಕಲ್ಪಿಸಲಾಗಿತ್ತು ಮತ್ತು ಸಾಮಾನ್ಯ ಕ್ಷೇತ್ರಗಳಿಗೆ ಉಳಿದ ಒಟ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿತ್ತು. ಆ ಮಸೂದೆಯ ಒಳಗೆ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸಿರಲಿಲ್ಲ. ಈಗಿನ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೂ ಯಥಾವತ್‌ ಸ್ವರೂಪದಲ್ಲಿ ಮಹಿಳಾ ಮೀಸಲಾತಿಯನ್ನು ಈ ಮಸೂದೆಯಲ್ಲಿ ಸೇರಿಸಿದೆ.

Women Reservation Bill

Women Reservation Bill

ಆಧಾರ: ಸಂವಿಧಾನ (81ನೇ, 85ನೇ, 108ನೇ ಮತ್ತು 128ನೇ ತಿದ್ದುಪಡಿ) ಮಸೂದೆಗಳು, ಡಿಜಿಟಲ್‌ ಸಂಸತ್ತಿನ ಆರ್ಕೈವ್‌ಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT