1970ರ ದಶಕದ ಒಂದು ಬೆಳಿಗ್ಗೆ ಮೈಸೂರು ಸಮೀಪದ ಒಂದು ಪಟ್ಟಣ. ಮನೆಯೊಡತಿ ಲಕ್ಷ್ಮಮ್ಮ ಅಡುಗೆ ಕೋಣೆಯಲ್ಲಿ ಸೌದೆ ಒಲೆಯ ಮುಂದೆ ಕೂತು ಊದುಗೊಳವೆ ಊದುತ್ತ ಬೆಂಕಿ ಹೊತ್ತಿಸಲು ಪ್ರಯತ್ನಿಸುತ್ತಿದ್ದರು. ಮಕ್ಕಳಿಗೆ ಶಾಲೆಗೆ ತಡವಾಗುತ್ತಿತ್ತು. ಮತ್ತೊಂದೆಡೆ ಯಜಮಾನ ರಾಮಯ್ಯ ತನಗೆ ತಡವಾಗುತ್ತಿದೆ ಎಂದು ರೇಗುತ್ತಿದ್ದರು. ಆದರೆ ಸೌದೆ ಹಸಿಯಾಗಿದ್ದರಿಂದ ಬೆಂಕಿಗಿಂತ ಹೊಗೆಯೇ ಹೆಚ್ಚಾಗಿ ಬರುತ್ತಿತ್ತು. ಲಕ್ಷ್ಮಮ್ಮನ ಕಣ್ಣುಗಳು ಕೆಂಪಗಾಗಿ, ಊದಿಕೊಂಡಿದ್ದವು. ಒತ್ತಡ, ಹೊಗೆ ಎಲ್ಲವೂ ಕಣ್ಣೀರಾಗಿ ಸುರಿಯುತ್ತಿತ್ತು.

ಸೀಮೆಎಣ್ಣೆಯೂ ಖಾಲಿಯಾದ್ದರಿಂದ ಸೌದೆ ಒಲೆಯ ಮೊರೆಹೋಗಿದ್ದ ಸಂದರ್ಭದಲ್ಲೇ ಬಂದ ಪಕ್ಕದ ಮನೆಯ ತುಳಜಮ್ಮ ಒಂದು ಲೋಟ ಸಕ್ಕರೆ ಕೇಳುವ ನೆಪದಲ್ಲಿ, ಮಾರುಕಟ್ಟೆಗೆ ಬಂದಿರುವ ಹೊಸ ಸಂಗತಿಯೊಂದನ್ನು ಲಕ್ಷ್ಮಮ್ಮನಿಗೆ ವಿವರಿಸಿದರು. ಈ ಸೌದೆ ಒಲೆಯ ಗೋಳಿಗೊಂದು ಪರಿಹಾರ ಸಿಕ್ಕಿದೆ. ‘ಗ್ಯಾಸ್ ಸ್ಟೌ’ ಅಂತ ಏನೋ ಹೊಸತೊಂದು ಬಂದಿದೆಯಂತೆ ಎಂದು ವಿವರಿಸಿದರು.

‘ಗ್ಯಾಸಾ? ಅದು ಏನು?’ ಎಂಬುದು ಲಕ್ಷ್ಮಮ್ಮನ ಸಹಜ ಪ್ರಶ್ನೆಯಾಗಿತ್ತು.

ಲೋಹದ ಬಾಟಲಿಯಲ್ಲಿ ಗ್ಯಾಸ್ ಅಂತ ಕೊಡ್ತಾರಂತೆ. ಅದರಲ್ಲಿ ಬೆಂಕಿ ಮಾತ್ರ ಬರುತ್ತದೆ, ಹೊಗೆ ಬರಲ್ಲಾ ಎಂಬುದು ತುಳಜಮ್ಮನ ಉತ್ತರವಾದರೆ, ಅದು ಸಿಡಿದರೆ ಎಂದು ಒಳಗಿಂದ ಬಂದ ರಾಮಯ್ಯನ ಮರುಪ್ರಶ್ನೆಯಾಗಿತ್ತು. ಇದು ಕರ್ನಾಟಕದ ಒಂದು ಪಟ್ಟಣದ ಕಥೆ ಮಾತ್ರವಲ್ಲ, ಇಡೀ ಭಾರತದ ಸ್ಥಿತಿಯೂ ಹಾಗೇ ಇತ್ತು.

ಈಗ ಕೃತಕ ಬುದ್ಧಿಮತ್ತೆ ಕುರಿತು ಜಗತ್ತಿನಲ್ಲಿ ಎದ್ದಿರುವ ಕೌತುಕ, ಭಯವೇ 80ರ ದಶಕದಲ್ಲಿ ಗ್ಯಾಸ್ ಸಿಲಿಂಡರ್ ಕುರಿತಾಗಿತ್ತು. ಟಿ.ವಿ. ಅದಾಗಾಗಲೇ ಮನೆ ಸೇರಿದ್ದರಿಂದ. ಮನೆಯಲ್ಲೊಂದು ಸಿಲಿಂಡರ್ ಇದೆ ಎಂದರೆ ಅವರು ಸ್ಥಿತಿವಂತರು ಎಂಬ ಮನಸ್ಥಿತಿ ಜನರದ್ದಾಗಿತ್ತು. ಬೀದಿಯಲ್ಲೊಬ್ಬರ ಮನೆಯಲ್ಲಿದ್ದ ಸಿಲಿಂಡರ್ ಇದ್ದರೆ, ಅವರ ಮನೆಗೆ ಗ್ಯಾಸ್ ಸಿಲಿಂಡರ್ ಮನೆ ಎಂದೇ ಕರೆಯುವಷ್ಟರ ಮಟ್ಟಿಗೆ ವಿಶೇಷವಾಗಿದ್ದ ಎಲ್ಪಿಜಿ, ಮದುವೆಗೆ ಹೆಣ್ಣು ಕೊಡಬೇಕೆಂದರೂ ಮಾನದಂಡವಾಗಿತ್ತು.
.PHOTOS | LPG Shortage: ರಾಜ್ಯದ ಹಲವೆಡೆ ಎಲ್ಪಿಜಿ ಕೊರತೆ, ಸಂಕಷ್ಟ.LPG Shortage: 500ಕ್ಕೂ ಅಧಿಕ ಎಲ್ಪಿಜಿ ಸಿಲಿಂಡರ್ ಹೊಂದಿದ್ದ ಟ್ರಕ್ ಕಳ್ಳತನ !.
ಆರಂಭದ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ಮಾತ್ರ ಎಲ್ಪಿಜಿ ಸಿಲಿಂಡರ್ಗಳು ಲಭ್ಯವಿದ್ದವು. ಸರ್ಕಾರಿ ಸ್ವಾಮ್ಯದ ಅನಿಲ ಕಂಪನಿಗಳು ಹೊಸದಾಗಿ ಗ್ಯಾಸ್ ವಿತರಣೆ ಆರಂಭಿಸಿದ ಕಾಲವದು. ಗ್ಯಾಸ್ ಸಿಲಿಂಡರ್ ಬೇಕೆಂದರೆ ನೋಂದಣಿ, ಭದ್ರತಾ ಠೇವಣಿ ಇಡಬೇಕಾದ್ದು ಕಡ್ಡಾಯವಾದರೂ, ಜನರಲ್ಲಿ ಅದು ‘ಸಿಡಿಯುತ್ತದೆ’ ಎಂಬ ಭಯದೊಂದಿಗೆ ಅದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗಿತು. ಎಷ್ಟರ ಮಟ್ಟಿಗೆ ಎಂದರೆ, ಸಿಲಿಂಡರ್ಗಾಗಿ ಕಾಯದೇ, ನೀರಿನಂತೆಯೇ ಕೊಳವೆಯಲ್ಲೇ ಗ್ಯಾಸ್ ಸಿಗುವಷ್ಟು ಸರಳವಾಯಿತು. ಆದರೆ ಇರಾನ್ ಯುದ್ಧವು ಸಂಪೂರ್ಣವಾಗಿ ಮರೆತೇ ಹೋಗಿದ್ದ ಎಲ್ಪಿಜಿ ಸಿಲಿಂಡರ್ನ ಆರಂಭವನ್ನು ಮೆಲುಕುಹಾಕುವಂತೆ ಮಾಡಿದೆ.

‘ನಿಮ್ಮ ಹೆಸರನ್ನು ದಾಖಲಿಸಿದ್ದೇವೆ. ಸಿಲಿಂಡರ್ ಸಿಗಲು ಕೆಲ ತಿಂಗಳು ಕಾಯಬೇಕು’ ಹೀಗೊಂದು ಉತ್ತರ 80 ಹಾಗೂ 90ರ ದಶಕದಲ್ಲಿ ಸಾಮಾನ್ಯ ಎಂಬಂತಾಗಿತ್ತು. ಕೆಲವರಿಗೆ ವರ್ಷ ಕಳೆದು ಸಿಕ್ಕ ಉದಾಹರಣೆಗಳೂ ಇವೆ.

ಮನೆಯನ್ನು ಮೊದಲ ಬಾರಿ ಪ್ರವೇಶಿಸಿದ ಸಿಲಿಂಡರ್ಗೆ ಪೂಜೆ ಸಹಿತ ರಾಜಾತಿತ್ಯ. ಬೀದಿಯಲ್ಲೆಲ್ಲಾ ಅದೇ ಚರ್ಚೆ. ನೀಲಿ ಜ್ವಾಲೆಯ ಮೇಲೆ ಹಾಲಿಟ್ಟು ಉಕ್ಕಿಸಿದ ಶುಭಗಳಿಗೆಯನ್ನು ಇಂದಿಗೂ ಹಲವರು ನೆನಪಿಸಿಕೊಳ್ಳುತ್ತಾರೆ.

ಇಷ್ಟಕ್ಕೇ ಅಂದಿನ ಸಿಲಿಂಡರ್ ಪುರಾಣ ಮುಗಿಯಲಿಲ್ಲ. ಕುಟುಂಬಕ್ಕೊಂದೇ ಸಿಲಿಂಡರ್. ಅದು ಖಾಲಿಯಾದರೆ ಮರುಪೂರಣಗೊಂಡ ಸಿಲಿಂಡರ್ ಬರಲು ಹಲವು ದಿನಗಳೇ ಬೇಕು. ಇದಕ್ಕೆ ಪ್ರಭಾವಿಗಳ ಶಿಫಾರಸು ಕೂಡಾ ಅಗತ್ಯವಿದ್ದ ಕಾಲವದು.

1980ರ ಹೊತ್ತಿಗೆ ಮಹಾನಗರಗಳಲ್ಲಿ ‘ಒಂದು ಬಳಕೆಗೆ, ಮತ್ತೊಂದು ಕಾಯ್ದಿರಿಸಲು’ ಎಂಬ ಹೊಸ ವ್ಯವಸ್ಥೆಯೊಂದನ್ನು ಸರ್ಕಾರ ಜಾರಿಗೆ ತಂದಿತು. ಇದೇ ಹೊತ್ತಿಗೆ ದೂರವಾಣಿ ಮೂಲಕ ರೆಫಿಲ್ ಬುಕ್ಕಿಂಗ್ ಪಡೆಯುವ ವ್ಯವಸ್ಥೆಯೂ ಜಾರಿಗೆ ಬಂತು. ಹೀಗೆ ಜಾರಿಗೆ ಬಂದ ‘ಡಬಲ್ ಸಿಲಿಂಡರ್‘ ವ್ಯವಸ್ಥೆ ಇಂದಿಗೂ ಚಾಲ್ತಿಯಲ್ಲಿದೆ.

ನಗರ, ಪಟ್ಟಣದ ನಂತರ ಗ್ರಾಮಗಳ ಸರದಿ ಆರಂಭವಾಯಿತು. ಗ್ರಾಮ ಮಟ್ಟದಲ್ಲಿ ಸರ್ಕಾರ ಏಜೆನ್ಸಿಗಳನ್ನು ತೆರೆಯಿತು. ಬಡ ಕುಟುಂಬಗಳಿಗೂ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿತು. ಹೀಗೆ ನಿಧಾನವಾಗಿ ಎಲ್ಪಿಜಿ ಗ್ರಾಮ ಮಟ್ಟದಲ್ಲೂ ಸಾಮಾನ್ಯ ಎಂಬಂತಾಗುತ್ತಾ ಸಾಗಿತು.

ಬೆಂಗಳೂರಿನಲ್ಲಿ ನೆಲೆಸಿರುವ ಮಗನ ಮನೆಗೆ ರಾಮಯ್ಯ ಹಾಗೂ ಲಕ್ಷ್ಮಮ್ಮ ಇತ್ತೀಚೆಗೆ ಬಂದಿದ್ದರು. ತಮ್ಮ ಕಾಲದ ಸಿಲಿಂಡರ್ ಪುರಾಣದ ಚರ್ಚೆಯ ನಡುವೆ, ರಾಮಯ್ಯ ಅವರು ಸಿಲಿಂಡರ್ ಲಭ್ಯತೆ ಕುರಿತು ಕೇಳಿದರು. ಅದಕ್ಕೆ ನಕ್ಕ ಅವರ ಮೊಮ್ಮಗ ರಾಘವ, ‘ತಾತಾ, ಈಗ ನಮ್ಮನೆಗೆ ಪೈಪ್ ಮೂಲಕ ಗ್ಯಾಸ್ ಬರೋದು. ಇದನ್ನು ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಂತಾರೆ’ ಎಂದು ಹೇಳಿದ.

‘ನಮ್ಮ ಕಾಲದಲ್ಲಿ ಹೊಗೆ ತುಂಬಿದ ಅಡಿಗೆಮನೆ. ನಂತರ ಬಾಟಲಿಯ ಗ್ಯಾಸು. ಈಗ ಪೈಪಿನಲ್ಲಿ ಗ್ಯಾಸಾ!’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಭಾರತದಲ್ಲಿ ಎಲ್ಪಿಜಿ ಪರಿಚಯ ಹೀಗಿತ್ತು..

1980ರ ದಶಕದಲ್ಲಿ ಎಲ್ಪಿಜಿ ನಗರ ಪ್ರದೇಶ ಪ್ರವೇಶಿಸಿತು. ಆದರೆ 1960ರ ದಶಕದಲ್ಲೇ ಎಲ್ಪಿಜಿ ಭಾರತದಲ್ಲಿ ಪರಿಚಯಗೊಂಡಿತು. 1955ರಲ್ಲಿ ಬರ್ಮಾ ಶೆಲ್ ಎಂಬ ಸಂಸ್ಥೆಯು ಮೊದಲ ಬಾರಿಗೆ ಎಲ್ಪಿಜಿ ಅನ್ನು ಪರಿಚಯಿಸಿತು. 1965ರಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯು ಕೋಲ್ಕತ್ತಾದಲ್ಲಿ ‘ಇಂಡೇನ್‘ ಎಲ್ಪಿಜಿ ಬ್ರಾಂಡ್ ಅನ್ನು ಪ್ರಾರಂಭಿಸಿತು. ಆರಂಭದಲ್ಲಿ ಸುಮಾರು ಎರಡು ಸಾವಿರ ಮನೆಗಳಿಗೆ ಅನಿಲ ತುಂಬಿದ ಸಿಲಿಂಡರ್ ಅನ್ನು ಅದು ಪೂರೈಸಿತು.

ಆರಂಭದಲ್ಲಿ ಶ್ರೀಮಂತರು ಮತ್ತು ತಾರಾ ಹೋಟೆಲುಗಳು ಮಾತ್ರ ಇವುಗಳನ್ನು ಬಳಸುವ ಮೂಲಕ ಆಧುನಿಕ ನಗರ ಅಡುಗೆ ಇಂಧನವಾಗಿ ಇದನ್ನು ನೋಡಲಾಯಿತು. ಆ ಹಂತದಲ್ಲಿ ಭಾರತದ ಮನೆಗಳಲ್ಲಿ ಉರುವಲು, ಕಲ್ಲಿದ್ದಲು, ಸೀಮೆಎಣ್ಣೆ ಒಲೆಗಳು, ಹಸುವಿನ ಸಗಣಿಯ ಭೆರಣಿಯನ್ನು ಬಳಸಲಾಗುತ್ತಿತ್ತು.
.ಎಲ್ಪಿಜಿ ಕೊರತೆ: ಹೋಟೆಲ್ಗಳಿಗೆ ತಟ್ಟಿದ ಬಿಸಿ, ಸೌದೆಗೆ ಮೊರೆ .
ಎಲ್ಪಿಜಿ ಸಿಲಿಂಡರ್ ಪರಿಚಯಗೊಂಡರೂ ಆರಂಭಿಕ ಸವಾಲು ದೊಡ್ಡದಾಗಿತ್ತು. ಭಾರತದಲ್ಲಿ ಸೀಮಿತ ಪೂರೈಕೆಯ ಜಾಲ ಹೊಂದಿದ್ದ ಎಲ್ಪಿಜಿ ಉತ್ಪಾದನೆಯೂ ಬೃಹಾದಾಕಾರಕ್ಕೆ ಬೆಳೆದಿರಲಿಲ್ಲ. ಸಿಲಿಂಡರ್ಗಳನ್ನು ಬಾಟ್ಲಿಂಗ್ ಸ್ಥಾವರಗಳಿಂದ ನಗರಗಳಿಗೆ ಸಾಗಿಸಬೇಕಾಗಿತ್ತು. ಹೀಗಾಗಿ ಇವು ನಗರ ಕೇಂದ್ರಿತವಾಗಿದ್ದವು.

ಇಂಡಿಯನ್ ಆಯಿಲ್ (ಇಂಡೇನ್) ನಂತರದಲ್ಲಿ ಭಾರತ್ ಪೆಟ್ರೋಲಿಯಂ (ಭಾರತ್ ಗ್ಯಾಸ್), ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ ಗ್ಯಾಸ್) ಆರಂಭಗೊಂಡವು. ಹೀಗೆ ಹಂತಹಂತವಾಗಿ ಬಾಟಲ್ ಪ್ಲಾಂಟ್ಗಳು, ಶೇಖರಣಾ ಟರ್ಮಿನಲ್ಗಳು, ವಿತರಣಾ ಜಾಲ, ಸಬ್ಸಿಡಿ ವ್ಯವಸ್ಥೆ ಜಾರಿಗೊಂಡವು. ಗ್ಯಾಸ್ ವಿತರಕರೂ ಹೆಚ್ಚಾದರು. ಇದರ ಪರಿಣಾಮ ಸಿಲಿಂಡರ್ಗಾಗಿ ದಿನಗಟ್ಟಲೆ ಕಾಯಬೇಕಿದ್ದ ಪರಿಸ್ಥಿತಿ ಈಗ ಬದಲಾಗಿದೆ, ಬುಕ್ ಮಾಡಿದ ದಿನವೇ ಸಿಲಿಂಡರ್ ಲಭ್ಯವಾಗುವಂತೆ ಪೂರೈಕೆ ವ್ಯವಸ್ಥೆ ವಿಸ್ತಾರಗೊಂಡಿದೆ.

ಗ್ರಾಮೀಣ ಭಾಗಗಳಿಗೂ ಎಲ್ಪಿಜಿ ಪೂರೈಕೆಗೆ 2009ರಲ್ಲಿದ್ದ ಯುಪಿಎ ಸರ್ಕಾರವು ರಾಜೀವ್ ಗಾಂಧಿ ಗ್ರಾಮೀಣ ಎಲ್ಪಿಜಿ ವಿತರಣ್ ಯೋಜನೆ ಆರಂಭಿಸಿತು. 2016ರಲ್ಲಿ ಎನ್ಡಿಎ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಪಿಜಿ ವಿತರಕರನ್ನು ಸ್ಥಾಪಿಸಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂದು ಮರುಸ್ಥಾಪಿಸಿತು.

ಇದರೊಂದಿಗೆ 2 ಕೆ.ಜಿ., 5 ಕೆ.ಜಿ.ಯ ಸಿಲಿಂಡರ್ ಪರಿಚಯದೊಂದಿಗೆ ಸಣ್ಣ ಬಳಕೆದಾರರಿಗೂ ಪೋರ್ಟಬಲ್ ಮಿನಿ ಸಿಲಿಂಡರ್ಗಳನ್ನೂ ಇಂಧನ ಕಂಪನಿಗಳು ಪರಿಚಯಿಸಿವೆ. ಇತ್ತೀಚೆಗೆ ಪೈಪ್ಲೈನ್ ಅನಿಲವೂ ಪರಿಚಯಗೊಂಡಿದ್ದು, ಇದರಿಂದ ಮುಂಗಡ ಕಾಯ್ದಿರಿಸುವುದು, ಸಾರಿಗೆ ವೆಚ್ಚ, ಶೇಖರಣಾ ಸ್ಥಳ, ಸುರಕ್ಷತಾ ಕಾಳಜಿ ಅಗತ್ಯವಿರದು. ನಿರಂತರ ಪೂರೈಕೆ, ಬದಲಿ ಸಿಲಿಂಡರ್ನ ಅಗತ್ಯವಿಲ್ಲದ ಈ ವ್ಯವಸ್ಥೆಯು ಮೀಟರ್ ಆಧಾರಿತ ಬಿಲ್ಲಿಂಗ್ ಸೌಲಭ್ಯವನ್ನು ಹೊಂದಿದೆ. ಬಹುತೇಕ ನಗರಗಳಲ್ಲಿ ಈಗಾಗಲೇ ಕೊಳವೆ ಮೂಲಕ ಅನಿಲ ಪೂರೈಕೆ ಜಾಲ ಅನುಷ್ಠಾನಗೊಂಡಿದೆ.

ಭಾರತವು ಇಂದು 31 ಕೋಟಿಗೂ ಹೆಚ್ಚು ಎಲ್ಪಿಜಿ ಗ್ರಾಹಕರನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಎಲ್ಪಿಜಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಬಹುದೊಡ್ಡ ಪರಿಣಾಮವನ್ನು ಈಗ ಭಾರತವೂ ಎದುರಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.