ಗುರುವಾರ , ಮೇ 26, 2022
28 °C
ಇನ್ನೂ ರಚನೆಯಾಗದ ತಂಡ; ಅಬಕಾರಿ ಇಲಾಖೆ ನಿರುತ್ಸಾಹ

ಆಳ-ಅಗಲ: ಮನೆಬಾಗಿಲಿಗೆ ಮದಿರೆ ಬೇಕೆ?

ವಿಜಯ ಕುಮಾರ್ ಎಸ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಕಾರಣದಿಂದ ದೇಶದಾದ್ಯಂತ ಮದ್ಯದಂಗಡಿಗಳನ್ನು ಹಲವು ದಿನಗಳ ಕಾಲ ಮುಚ್ಚಿದ್ದರಿಂದ ಮದ್ಯಪ್ರಿಯರಿಗೆ ಕಷ್ಟವಾಗಿದ್ದಷ್ಟೇ ಅಲ್ಲ, ಸರ್ಕಾರಗಳ ಆದಾಯವೂ ಖೋತ ಆಗಿತ್ತು. ಕೋವಿಡ್‌ ನಿಯಮಗಳನ್ನು ಪಾಲಿಸುವುದರ ಜತೆಯಲ್ಲೇ ಸುಂಕದ ರೂಪದಲ್ಲಿ ಹಣ ಸಂಗ್ರಹಿಸುವ ಸಲುವಾಗಿ ಅನೇಕ ರಾಜ್ಯಗಳು ಆನ್‌ ಲೈನ್‌ನಲ್ಲಿ ಮದ್ಯಮಾರಾಟಕ್ಕೆ ಅನುಮತಿ ನೀಡಿದವು. ಮದ್ಯದ ಮೇಲೆ ‘ಕೋವಿಡ್‌ ಸೆಸ್‌’ಅನ್ನೂ ವಿಧಿಸಿದವು. ಆದರೆ, ಇದರ ಸಾಮಾಜಿಕ ಪರಿಣಾಮಗಳ ಬಗ್ಗೆ ಸ್ಪಷ್ಟತೆಯ ಕೊರತೆಯಿಂದ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಈಗಲೂ ಆನ್‌ಲೈನ್‌ ವ್ಯವಸ್ಥೆಯನ್ನು ಜಾರಿಮಾಡಿಲ್ಲ. ಆನ್‌ಲೈನ್‌ ಮದ್ಯ ಮಾರಾಟಕ್ಕೆ ಅನುಮತಿ ಬೇಕೆ ಬೇಡವೆ ಎಂಬ ಚರ್ಚೆಯೂ ಮುನ್ನೆಲೆಗೆ ಬಂದಿದೆ.

---

ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ವಿಷಯ ಕರ್ನಾಟಕದಲ್ಲಿ ಇನ್ನೂ ಪ್ರಸ್ತಾವನೆ ಹಂತದಲ್ಲೇ ಇದೆ. ಇದರ ಸಾಧಕ– ಬಾಧಕಗಳ ಕುರಿತು ಪರಿಶೀಲನೆ ನಡೆಸುತ್ತಿರುವ ರಾಜ್ಯ ಸರ್ಕಾರ, ಹೊರ ರಾಜ್ಯಗಳಲ್ಲಿನ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳ ಸಮಿತಿ ರಚಿಸುವತ್ತ ಮುಂದಡಿ ಇಟ್ಟಿದೆ.

‘ಆನ್‌ಲೈನ್ ವಹಿವಾಟು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಮದ್ಯ ಮಾರಾಟವನ್ನೂ ಆನ್‌ಲೈನ್‌ನಲ್ಲೇ ಮಾಡಲು ಸರ್ಕಾರ ಆಲೋಚನೆ ನಡೆಸಿದೆ. ಈ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳ ಸಮಿತಿ ರಚಿಸಲಾಗುತ್ತಿದೆ’ ಎಂದು ಅಬಕಾರಿ ಸಚಿವ ಎ‌ಚ್‌. ನಾಗೇಶ್ ಅವರು ಇತ್ತೀಚೆಗೆ ಹೇಳಿದ್ದರು.

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲದ ಮದ್ಯವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದರೆ ಸಮಾಜದ ಮೇಲೆ ದುಷ್ಪರಿಣಾಮ ಆಗುವುದೇ, ಅಬಾಕಾರಿ ಇಲಾಖೆಗೆ ಬರುತ್ತಿರುವ ವರಮಾನದ ಮೇಲೆ ಹೊಡೆತ ಬೀಳಬಹುದೇ ಎಂಬ ವಿಚಾರಗಳನ್ನು ಗಂಭೀರವಾಗಿ ಅವಲೋಕಿಸಲಾಗುತ್ತಿದೆ.

‘ಅಬಕಾರಿ ಸಚಿವರ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು. ಬಳಿಕ ತಂಡ ರಚನೆ ಮಾಡಿ ಅಧ್ಯಯನಕ್ಕೆ ಕಳುಹಿಸಲಾಗುವುದು. ಅಧ್ಯಯನ ವರದಿ ಆಧರಿಸಿ ಆನ್‌ಲೈನ್ ಮದ್ಯ ಮಾರಾಟ ಬೇಕೆ, ಬೇಡವೆ ಎಂಬುದನ್ನು ತೀರ್ಮಾನಿಸಲಾಗುವುದು’ ಎಂದು ಅಬಕಾರಿ ಆಯುಕ್ತ ಎಂ. ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮದ್ಯ ತಯಾರಿಕಾ ಕಂಪನಿಗಳಿಂದ ನೇರವಾಗಿ ನಡೆಯುತ್ತಿದ್ದ ವ್ಯಾಪಾರಕ್ಕೆ 2003ರ ನಂತರ ಕಡಿವಾಣ ಹಾಕಲಾಗಿದೆ. ಕರ್ನಾಟಕ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಸ್ಥಾಪಿಸಿ ಅದರ ಮೂಲಕವೇ ಮದ್ಯ ಮಾರಾಟ ನಡೆಸಲಾಗುತ್ತಿದೆ. ಮದ್ಯದ ಇಡೀ ವಹಿವಾಟು ಸರ್ಕಾರದ ಹಿಡಿತದಲ್ಲಿ ಇದೆ. ಪಾನೀಯ ನಿಗಮ ಸ್ಥಾಪನೆಯಾದ ಬಳಿಕ ಕಾಳಸಂತೆ, ನಕಲಿ ಮದ್ಯ ಮಾರಾಟ ಸಂಪೂರ್ಣ ಕಡಿಮೆಯಾಗಿದೆ. ಸುಂಕ ಸಂಗ್ರಹ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ’ ಎಂದು ಅಬಕಾರಿ ಅಧಿಕಾರಿಗಳು ಹೇಳುತ್ತಾರೆ.

‘ಆನ್‌ಲೈನ್‌ ಮದ್ಯ ಮಾರಾಟ ಆರಂಭವಾದರೆ ನಕಲಿ ಮದ್ಯ ಮಾರಾಟವಾಗುವ, ವಿದ್ಯಾರ್ಥಿಗಳು, ಮಕ್ಕಳು  ಸುಲಭವಾಗಿ ಮದ್ಯ ಖರೀದಿ ಮಾಡುವ ಸಾಧ್ಯತೆ ಇದೆ. ನಕಲಿ ಮದ್ಯ ಒಮ್ಮೆ ಮಾರುಕಟ್ಟೆಗೆ ನುಗ್ಗಿದರೆ ಜನರ ಆರೋಗ್ಯ ಹಾಳಾಗುವುದರ ಜತೆಗೆ ಅಬಕಾರಿ ಇಲಾಖೆಗೆ ಸುಂಕದ ರೂಪದಲ್ಲಿ ಬರುವ ವರಮಾನಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಾಗಿ ಆನ್‌ಲೈನ್ ಮದ್ಯ ಮಾರಾಟಕ್ಕೆ ಇಲಾಖೆ ಅಷ್ಟೇನೂ ಉತ್ಸುಕವಾಗಿಲ್ಲ’ ಎಂದು ಇಲಾಖೆ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು