ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಡೊನಾಲ್ಡ್ ಟ್ರಂಪ್ ನೆತ್ತಿ ಮೇಲೆ ವಾಗ್ದಂಡನೆ ಕತ್ತಿ

ಎರಡನೇ ವಾಗ್ದಂಡನೆಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರಾ ಅಮೆರಿಕ ಅಧ್ಯಕ್ಷ? ಸೆನೆಟ್‌ ಅಂಗಳದಲ್ಲಿದೆ ನಿರ್ಣಾಯಕ ಚೆಂಡು
Last Updated 14 ಜನವರಿ 2021, 19:31 IST
ಅಕ್ಷರ ಗಾತ್ರ

ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲಿಗೆ ಕೆಟ್ಟ ಸಮಯ. ಅಧ್ಯಕ್ಷ ಗಾದಿಗೆ ಎರಡನೇ ಬಾರಿ ಆಯ್ಕೆಯಾಗುವಲ್ಲಿ ಎಡವಿದ ಟ್ರಂಪ್, ಅಪಮಾನ ಅನುಭವಿಸಿದ್ದು ಈಗ ಇತಿಹಾಸ. ಆದರೆ ಇದೇ ಸಿಟ್ಟಿಗೆ,ಅವರ ಬೆಂಬಲಿಗರು ಅಮೆರಿಕ ಸಂಸತ್ತು ‘ಕ್ಯಾಪಿಟಲ್‌’ನಲ್ಲಿ ಕಳೆದ ವಾರವಷ್ಟೇ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಇಡೀ ಜಗತ್ತಿನ ಎದುರು ದೇಶದ ಮಾನ ಹರಾಜು ಹಾಕಿದ ವಿದ್ಯಮಾನ ಹಸಿರಾಗಿರುವಾಗಲೇ ಟ್ರಂಪ್ ನೆತ್ತಿ ಮೇಲೆ ವಾಗ್ದಂಡನೆಯ ಕತ್ತಿ ನೇತಾಡುತ್ತಿದೆ.

ಈ ಮಧ್ಯೆ, ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ತೆಗೆದುಹಾಕುವ 25ನೇ ತಿದ್ದುಪಡಿಯನ್ನು ಬಳಸುವುದಿಲ್ಲ ಎಂದಿದ್ದಾರೆ. ಹಾಗಾಗಿ, ಡೆಮಾಕ್ರಟಿಕ್‌‌ ಸಂಸದರು ವಾಗ್ದಂಡನೆಯ ಅಸ್ತ್ರ ಬಳಸಿದ್ದಾರೆ.

ಕೆಳಮನೆಯಲ್ಲಿ ವಾಗ್ದಂಡನೆ:ವಾಂಗ್ದಂಡನೆ ನಿಲುವಳಿಯನ್ನು ಸಂಸದರಾದ ಜೆಮಿ ರಸ್ಕಿನ್, ಡೇವಿಸಿ ಸಿಸಿಲಿನ್ ಮೊದಲಾದವರು ಅಮೆರಿಕ ಸಂಸತ್ತಿನ ಜನಪ್ರತಿನಿಧಿ ಸಭೆಯಲ್ಲಿ ಮಂಡಿಸಿದ್ದರು. ನಿಲುವಳಿಗೆ ಕೆಳಮನೆ ಒಪ್ಪಿಗೆ ನೀಡಿದೆ. ಇದೀಗ ವಾಗ್ದಂಡನೆ ನಿಲುವಳಿ ಚೆಂಡು ಸೆನೆಟ್ ಅಂಗಳದಲ್ಲಿದೆ.

ಸೆನೆಟ್ ಒಂದೊಮ್ಮೆ ನಿಲುವಳಿಗೆ ಒಪ್ಪಿಗೆ ನೀಡಿದರೆ ಟ್ರಂಪ್ ಅವರು ಶಿಕ್ಷೆಗೆ ಗುರಿಯಾಗಲಿದ್ದಾರೆ. ಆದರೆ, ಜನವರಿ 20ರಂದು ಟ್ರಂಪ್ ಅಧಿಕಾರದ ಅವಧಿ ಕೊನೆಗೊಳ್ಳುತ್ತಿದ್ದು, ಅಷ್ಟು ಬೇಗ ಪ್ರಕ್ರಿಯೆ ನಡೆಯುವುದು ಅನುಮಾನ ಎನ್ನಲಾಗಿದೆ. ಟ್ರಂಪ್ ತಮ್ಮ ಅವಧಿ ಮುಗಿಸಿ ಕೆಳಗಿಳಿದ ಮೇಲೆ ಸೆನೆಟ್ ಈ ಪ್ರಕ್ರಿಯೆಯನ್ನು ಮುಂದುವರಿಸಲಿದೆಯೇ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ಹಿಂದೆಯೂ ಹೀಗೆ ಆಗಿತ್ತು:ಅಧಿಕಾರದ ಅವಧಿಯಲ್ಲಿ ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂದು ಟ್ರಂಪ್‌ ಅವರು ಅಮೆರಿಕದ ಇತಿಹಾಸದಲ್ಲಿ ದಾಖಲಾಗಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಅವರು ತಮ್ಮ ವಿರುದ್ಧ ಸ್ಪರ್ಧಿಸಲು ಮುಂದಾಗಿದ್ದು ಟ್ರಂಪ್‌ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಬೈಡನ್‌ ಅವರನ್ನು ಸ್ಪರ್ಧೆಯಿಂದ ಹಿಂದಕ್ಕೆ ಸರಿಸಲು ಟ್ರಂಪ್‌ ಅವರು 2019ರಲ್ಲಿ ‘ಅಧಿಕಾರ ದುರುಪಯೋಗ’ ಮಾಡಿಕೊಂಡಿದ್ದರು.

ಬೈಡನ್ ಅವರ ಪುತ್ರ ಹಂಟರ್ ಅವರು ಉಕ್ರೇನ್ ದೇಶದ ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವ್ಯವಹಾರ ನಡೆಸಿದ ಆರೋಪ ಹೊರಿಸಿ ಹಂಟರ್ ಹಾಗೂ ಅವರ ತಂದೆ ಬೈಡನ್ ವಿರುದ್ಧ ಉಕ್ರೇನ್ ತನಿಖೆ ಆರಂಭಿಸಬೇಕು ಎಂದು ಟ್ರಂಪ್ ಅವರು ಆ ದೇಶದ ಅಧ್ಯಕ್ಷರನ್ನು ಒತ್ತಾಯಿಸಿದ್ದರು. ಉಕ್ರೇನ್ ಅಧ್ಯಕ್ಷರ ಜೊತೆ ಟ್ರಂಪ್ ನಡೆಸಿದ ದೂರವಾಣಿ ಸಂಭಾಷಣೆಯ ಬಗ್ಗೆ ಭ್ರಷ್ಟಾಚಾರವಿರೋಧಿ ಹೋರಾಟಗಾರರೊಬ್ಬರು ಮಾಹಿತಿ ನೀಡಿದ್ದರು. ತಮ್ಮ ರಾಜಕೀಯ ಸ್ವಾರ್ಥಕ್ಕೆ ಅಧ್ಯಕ್ಷ ಪದವಿಯನ್ನು ಬಳಸಿಕೊಂಡ ಆರೋಪದ ಮೇಲೆ ಅಂದು ವಾಗ್ದಂಡನೆ ನಿಲುವಳಿ ಮಂಡಿಸಲಾಗಿತ್ತು. ಆದರೆ ಸೆನೆಟ್‌ನಲ್ಲಿ ಅವರ ಪಕ್ಷದ ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ನಿಲುವಳಿಗೆ ಸೋಲಾಗಿತ್ತು.

ವಾಗ್ದಂಡನೆ ಎದುರಿಸಿದ ಮೂರನೇ ಅಧ್ಯಕ್ಷ:ಅಧ್ಯಕ್ಷರು ವಾಗ್ದಂಡನೆ ಮೂಲಕ ಅಧಿಕಾರ ಕಳೆದುಕೊಂಡಿರುವುದು ಅಮೆರಿಕ ಇತಿಹಾಸದಲ್ಲಿ ನಡೆದಿಲ್ಲ. 1868ರಲ್ಲಿ ಆ್ಯಂಡ್ರ್ಯೂ ಜಾನ್ಸನ್‌ ಹಾಗೂ 1998ರಲ್ಲಿ ಬಿಲ್‌ ಕ್ಲಿಂಟನ್‌ ಅವರು ವಾಗ್ದಂಡನೆಗೆ ಗುರಿಯಾಗಿದ್ದರು.

ಜಾನ್ಸನ್ ವಿರುದ್ಧ ವಾಗ್ದಂಡನೆ ಹೊರಿಸಿದರೂ, ಸೆನೆಟ್ ವಿಚಾರಣೆಯಲ್ಲಿ ಒಂದು ಮತದಿಂದ ಗೆದ್ದಿದ್ದರು. ಇದಾದ ಬಳಿಕ ಜಾನ್ಸನ್ ಮತ್ತೊಂದು ಅವಧಿಗೆ ಆಯ್ಕೆಯಾಗಲಿಲ್ಲ. ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತಮ್ಮ ಎರಡನೆ ಅಧ್ಯಕ್ಷ ಅವಧಿಯಲ್ಲಿ ವಾಗ್ದಂಡನೆ ಎದುರಿಸಿದ್ದರು. ಕ್ಲಿಂಟನ್ ವಿರುದ್ಧದ ನಿಲುವಳಿಗೆ ಸೋಲುಂಟಾಗಿತ್ತು.

1. ವಾಗ್ದಂಡನೆಗೆ ಕಾರಣವಾದ ಅಂಶಗಳು...

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ದೃಢೀಕರಣದ ದಿನ ‘ಕ್ಯಾಪಿಟಲ್’ ಕಟ್ಟಡದ ಮೇಲೆ ನಡೆದ ದಾಳಿಗೆ ಕುಮ್ಮಕ್ಕು ನೀಡಿದ್ದೇ, ಡೊನಾಲ್ಡ್ ಟ್ರಂಪ್ ವಿರುದ್ಧ ಎರಡನೇ ಬಾರಿ ವಾಗ್ದಂಡನೆ ನಿರ್ಣಯ ಬರಲು ಕಾರಣ.

‘ಚುನಾವಣೆ ಫಲಿತಾಂಶದ ಬಗ್ಗೆ ಪದೇ-ಪದೇ ಸುಳ್ಳು ಹೇಳಿಕೆ ನೀಡುವುದರ ಮೂಲಕ ಟ್ರಂಪ್ ಅವರು ತಮ್ಮ ಪಕ್ಷದ ಅನುಯಾಯಿಗಳು ಮತ್ತು ತಮ್ಮ ಬೆಂಬಲಿಗರ ಹಾದಿಯನ್ನು ತಪ್ಪಿಸಿದರು. ಫಲಿತಾಂಶ ಪ್ರಮಾಣೀಕರಣದ ದಿನವೂ ಟ್ರಂಪ್ ಅವರ ಬೆಂಬಲಿಗರು ಕ್ಯಾಪಿಟಲ್ ಹಿಲ್‌ನಲ್ಲಿ ಜಮಾಯಿಸಿದ್ದರು. ಟ್ರಂಪ್ ಅವರು ವಿಡಿಯೊ ಪೋಸ್ಟ್ ಮಾಡುವ ಮೂಲಕ ತಮ್ಮ ಬೆಂಬಲಿಗರನ್ನು ಕೆರಳಿಸಿದರು. ಇದರಿಂದಲೇ ಅವರ ಬೆಂಬಲಿಗರು, ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿದರು. ಇದು ಪ್ರಜಾಪ್ರಭುತ್ವದ ಆತ್ಮದ ಮೇಲೆ ನಡೆದ ದಾಳಿ. ದಾಳಿಯ ನಂತರ ಅವರು ಕ್ಯಾಪಿಟಲ್‌ನಿಂದ ಹೊರನಡೆಯುವಂತೆ ಕರೆ ನೀಡಿದರೇ ಹೊರತು, ದಾಳಿಯನ್ನು ಖಂಡಿಸಿರಲಿಲ್ಲ. ಇದು ವಾಗ್ದಂಡನೆಗೆ ಅರ್ಹವಾದ ಕ್ರಿಯೆ’ ಎಂದು ವಾಗ್ದಂಡನೆ ನಿರ್ಣಯದಲ್ಲಿ ವಿವರಿಸಲಾಗಿದೆ.

2. ಪ್ರಕ್ರಿಯೆ ಹೇಗೆ, ನಂತರವೇನು?

ವಾಗ್ದಂಡನೆ ನಿರ್ಣಯವನ್ನು ಅಮೆರಿಕ ಸಂಸತ್ತಿನ ಪ್ರತಿನಿಧಿಗಳ ಸಭೆ ಈಗಾಗಲೇ ಪಾಸು ಮಾಡಿದೆ. ವಾಗ್ದಂಡನೆ ಪರವಾಗಿ 232 ಮತಗಳು ಬಂದಿವೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದ ಹಲವು ಸದಸ್ಯರು ತಮ್ಮದೇ ಪಕ್ಷದ ಟ್ರಂಪ್ ವಿರುದ್ಧ ಮತ ಚಲಾಯಿಸಿದ್ಧಾರೆ. ವಿರುದ್ಧವಾಗಿ 197 ಮತಗಳು ಬಂದಿವೆ.

ವಾಗ್ದಂಡನೆ ನಿರ್ಣಯವನ್ನು ಅಮೆರಿಕದ ಸೆನೆಟ್‌ನಲ್ಲಿ ವಿಚಾರಣೆಗೆ ಎತ್ತಿಕೊಳ್ಳಲಾಗುತ್ತದೆ. ವಿಚಾರಣೆಯ ನಂತರ ವಾಗ್ದಂಡನೆ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ. ಸೆನೆಟ್‌ನಲ್ಲಿ 3ನೇ ಎರಡಷ್ಟು ಬಹುಮತ ಬಂದರೆ ಮಾತ್ರ ವಾಗ್ದಂಡನೆ ಜಾರಿಯಾಗುತ್ತದೆ. ಇಷ್ಟು ಬಹುಮತ ಬರಬೇಕೆಂದರೆ, ರಿಪಬ್ಲಿಕನ್ ಪಕ್ಷದ ಸದಸ್ಯರೂ ವಾಗ್ದಂಡನೆ ಪರ ಮತ ಚಲಾಯಿಸಬೇಕು.

ಈಗ ಸೆನೆಟ್‌ನಲ್ಲಿ 100 ಸದಸ್ಯರಿದ್ದಾರೆ. ಇದರಲ್ಲಿ ರಿಪಬ್ಲಿಕನ್ ಪಕ್ಷದ 50, ಡೆಮಾಕ್ರಟಿಕ್ ಪಕ್ಷದ 50 ಸದಸ್ಯರಿದ್ದಾರೆ. ಈ ವಾಗ್ದಂಡನೆ ನಿರ್ಣಯವು ಅನುಮೋದನೆಯಾಗಲು 67 ಮತಗಳ ಅವಶ್ಯಕತೆ ಇದೆ. ಅಂದರೆ ರಿಪಬ್ಲಿಕನ್ ಪಕ್ಷದ 17 ಸದಸ್ಯರು, ತಮ್ಮದೇ ಪಕ್ಷದ ನಾಯಕನಾದ ಟ್ರಂಪ್ ವಿರುದ್ಧವಾಗಿ ಮತ ಚಲಾಯಿಸಬೇಕಾಗುತ್ತದೆ. ಆದರೆ ಹೀಗೆ ಮತ ಚಲಾಯಿಸಲು ಸಿದ್ಧರಿದ್ಧೇವೆ ಎಂದು ರಿಪಬ್ಲಿಕನ್ ಪಕ್ಷದ 20 ಸದಸ್ಯರು ಈಗಾಗಲೇ ಬಹಿರಂಗವಾಗಿ ಹೇಳಿದ್ದಾರೆ.

ವಾಗ್ದಂಡನೆ ಅನುಮೋದನೆಯಾದರೆ, ಟ್ರಂಪ್ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯುವ ನಿರ್ಣಯವನ್ನೂ ಮಂಡಿಸಲು ಅವಕಾಶವಿದೆ. ಆ ನಿರ್ಣಯವೂ ಅನುಮೋದನೆಯಾದರೆ ಟ್ರಂಪ್ ಅವರನ್ನು ರಾಜಕೀಯದಿಂದ ನಿಷೇಧಿಸಲಾಗುತ್ತದೆ.

ಈ ಎಲ್ಲಾ ಪ್ರಕ್ರಿಯೆಯು ತಕ್ಷಣವೇ ನಡೆಯುವುದಿಲ್ಲ. ಜೋ ಬೈಡನ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದೆ. ಹೀಗಾಗಿ ಉಳಿದಿರುವ ಕೆಲವೇ ದಿನಗಳ ಅಧಿಕಾರದ ಅವಧಿಯಲ್ಲಿ ಟ್ರಂಪ್ ಅವರನ್ನು ಅಧ್ಯಕ್ಷನ ಸ್ಥಾನದಿಂದ ಪದಚ್ಯುತಗೊಳಿಸಲು ಸಾಧ್ಯವಿಲ್ಲ.

3. ಕಾನೂನು ಏನು ಹೇಳುತ್ತದೆ...

ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸರ್ಕಾರದ ಅಧಿಕಾರಿಗಳನ್ನು ವಾಗ್ದಂಡನೆಗೆ ಒಳಪಡಿಸುವ ಅಧಿಕಾರವನ್ನು ಅಮೆರಿಕದ ಸಂಸತ್ತಿನ ಪ್ರತಿನಿಧಿಗಳ ಸಭೆಗೆ ಅಮೆರಿಕದ ಸಂವಿಧಾನದ ಒಂದನೇ ವಿಧಿಯ 2ನೇ ಸೆಕ್ಷನ್‌ನ ನೀಡುತ್ತದೆ. ವಿಚಾರಣೆ ನಡೆಸದೆಯೇ ವಾಗ್ದಂಡನೆ ನೀಡುವ ಅಧಿಕಾರವನ್ನು ಪ್ರತಿನಿಧಿಗಳ ಸಭೆಗೆ ಈ ವಿಧಿ ನೀಡುತ್ತದೆ.

ಆದರೆ, ವಾಗ್ದಂಡನೆಯನ್ನು ಅಂತಿಮಗೊಳಿಸುವ ಅಧಿಕಾರ ಅಮೆರಿಕ ಸಂಸತ್ತಿನ ಸೆನೆಟ್‌ಗೆ ಇದೆ. ‘ವಿಚಾರಣೆ ನಡೆಸದೆ, ಸೆನೆಟ್‌ನ ಸದಸ್ಯರ ಮೂರನೇ ಒಂದರಷ್ಟು ಬಹುಮತವಿಲ್ಲದೆ ವಾಗ್ದಂಡನೆಗೆ ಗುರಿ ಮಾಡುವಂತಿಲ್ಲ’ ಎಂದು ಅಮೆರಿಕ ಸಂವಿಧಾನದ 1ನೇ ವಿಧಿಯ 3ನೇ ಸೆಕ್ಷನ್ ಹೇಳುತ್ತದೆ. ವಿಚಾರಣೆ ಇಲ್ಲದೆ ವಾಗ್ದಂಡನೆಗೆ ಗುರಿ ಮಾಡುವ ಅಪಾಯದಿಂದ ರಕ್ಷಣೆಯನ್ನು ಈ ವಿಧಿ ನೀಡುತ್ತದೆ.

(ಆಧಾರ: ಪಿಟಿಐ, ಬಿಬಿಸಿ, ಸಿಎನ್‌ಎನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT