ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮೋದಿ ಆಳ್ವಿಕೆಯ 8 ವರ್ಷಗಳು

Last Updated 29 ಮೇ 2022, 19:30 IST
ಅಕ್ಷರ ಗಾತ್ರ

ಪ್ರತಿಭಟನೆಯ ಬಿಸಿ, ವೈಫಲ್ಯ–ಭ್ರಷ್ಟಾಚಾರದ ಆರೋಪ

‌ನರೇಂದ್ರ ಮೋದಿ ಅವರ ಎಂಟು ವರ್ಷಗಳ ಆಳ್ವಿಕೆಯ ಅವಧಿಯಲ್ಲಿ ಹಲವು ವಿಚಾರಗಳ ಬಗ್ಗೆ ಟೀಕೆ, ಪ್ರತಿಭಟನೆ ಮತ್ತು ಪ್ರತಿರೋಧ ವ್ಯಕ್ತವಾಗಿದೆ. ತೀರಾ ಇತ್ತೀಚಿನದ್ದು ಎಂದರೆ, ಕೇಂದ್ರವು ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆದ ಪ್ರತಿಭಟನೆ. 2020ರ ಸೆಪ್ಟೆಂಬರ್‌ನಲ್ಲಿ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳಿಗೆ ಕಾರಣವಾಗಬಹುದಾದ ಮೂರು ಕಾಯ್ದೆಗಳನ್ನು ಸಂಸತ್ತು ಅಂಗೀಕರಿಸಿತ್ತು. ಅದಾಗಿ ಕೆಲವೇ ದಿನಗಳಲ್ಲಿ, ಪಂಜಾಬ್‌ ಮತ್ತು ಹರಿಯಾಣದ ರೈತರು 2020ರ ನವೆಂಬರ್‌ 25ರಂದು ‘ದೆಹಲಿ ಚಲೋ’ ನಡೆಸುವುದಾಗಿ ಘೋಷಿಸಿದರು. ಆದರೆ, ಅವರಿಗೆ ದೆಹಲಿಗೆ ಪ್ರವೇಶ ನಿರಾಕರಿಸಲಾಯಿತು. ರೈತರ ಮೇಲೆ ಲಾಠಿ, ಜಲಫಿರಂಗಿ, ಅಶ್ರುವಾಯು ಷೆಲ್‌ ಪ್ರಯೋಗ ಎಲ್ಲವೂ ನಡೆದವು. ಎಲ್ಲ ಅಡೆತಡೆಗಳನ್ನು ದಾಟಿ ರೈತರು ದೆಹಲಿ ಗಡಿ ತಲುಪಿದರು. ಹಲವು ಸುತ್ತಿನ ಮಾತುಕತೆ ನಡೆದರೂ ಸಮಸ್ಯೆ ಬಗೆಹರಿಯಲಿಲ್ಲ. ಕೊನೆಗೂ ಸರ್ಕಾರ ಮಣಿಯಬೇಕಾಯಿತು. ಸರ್ಕಾರವು 2021ರ ನವೆಂಬರ್‌ 19ರಂದು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಿತು. ಮೋದಿ ನೇತೃತ್ವದ ಸರ್ಕಾರಕ್ಕೆ ಎದುರಾದ ಅತಿ ದೊಡ್ಡ ಹಿನ್ನಡೆ ಇದು.

ಸಿಎಎ ವಿರೋಧಿ ಹೋರಾಟ: 2019ರ ಡಿಸೆಂಬರ್‌ನಲ್ಲಿ ಸಂಸತ್ತಿನ ಅಂಗೀಕಾರ ಪಡೆದ ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ), 2020ರ ಜನವರಿಯಲ್ಲಿ ಜಾರಿಗೆ ಬಂತು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ವಲಸೆ ಬಂದು ಭಾರತದಲ್ಲಿ ಆರು ವರ್ಷ ನೆಲೆಸಿದ ಹಿಂದೂ, ಸಿಖ್‌, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವುದು ಈ ಕಾಯ್ದೆಯ ಉದ್ದೇಶ. ಕಾಯ್ದೆಯು ಮುಸ್ಲಿಮರನ್ನು ತಾರತಮ್ಯದಿಂದ ನೋಡಿದೆ ಎಂಬ ಆರೋಪ ಕೇಳಿ ಬಂತು. ಈ ಕಾಯ್ದೆಯ ವಿರುದ್ಧ ದೇಶದಾದ್ಯಂತ ತೀವ್ರವಾದ ಪ್ರತಿಭಟನೆ ನಡೆಯಿತು. 2019ರ ಡಿಸೆಂಬರ್‌ನಲ್ಲಿ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ಶುರುವಾದ ಪ್ರತಿಭಟನೆಯು 2020ರ ಮಾರ್ಚ್‌ನಲ್ಲಿ ಕೋವಿಡ್‌ ತಡೆಗಾಗಿ ಲಾಕ್‌ಡೌನ್‌ ಹೇರುವವರೆಗೆ ನಡೆಯಿತು.

ರಫೇಲ್‌ ಪ್ರಕರಣ: ಫ್ರಾನ್ಸ್‌ನ ಡಾಸೋ ಕಂಪನಿಯಿಂದ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಎನ್‌ಡಿಎ ಸರ್ಕಾರದ ವಿರುದ್ಧ ಕೇಳಿ ಬಂದಿತ್ತು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಡಾಸೋ ಕಂಪನಿಯಿಂದ 126 ಯುದ್ಧ ವಿಮಾನ ಖರೀದಿಸುವ ಒಪ್ಪಂದ ಆಗಿತ್ತು. ಎನ್‌ಡಿಎ ಸರ್ಕಾರವು ಅದೇ ಮೊತ್ತಕ್ಕೆ ಕೇವಲ 36 ವಿಮಾನಗಳನ್ನು ಖರೀದಿಸಿದೆ. ಹಾಗಾಗಿ, ಈ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ವಿರೋಧ ಪಕ್ಷಗಳ ಆರೋಪವಾಗಿತ್ತು. ಭಾರತದ ಮಧ್ಯವರ್ತಿಗಳಿಗೆ ಡಾಸೋ ಕಂಪನಿಯು ಹಣ ನೀಡಿದೆ ಎಂಬ ವರದಿಗಳನ್ನು ಫ್ರಾನ್ಸ್‌ನ ಮೀಡಿಯಾಪಾರ್ಟ್‌ ಮಾಧ್ಯಮವು ಪ್ರಕಟಿಸಿತ್ತು.

ಕೋವಿಡ್‌ ಕರಾಳ ನೆನಪು: ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರವು ದಯನೀಯವಾಗಿ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಹಲವು ಬಾರಿ ಆರೋಪಿಸಿದ್ದವು. ಹಾಸಿಗೆ, ಔಷಧ, ಆಮ್ಲಜನಕ ಕೊರತೆ ದೇಶವು ತತ್ತರಿಸುವಂತೆ ಮಾಡಿತ್ತು. ಕೇಂದ್ರವು ಹೇರಿದ್ದ ಲಾಕ್‌ಡೌನ್‌ನಿಂದಾಗಿ ವಿವಿಧ ಸ್ಥಳಗಳಲ್ಲಿದ್ದ ವಲಸೆ ಕಾರ್ಮಿಕರು ಭಾರಿ ಸಂಕಷ್ಟಕ್ಕೆ ಒಳಗಾಗಿದ್ದರು. ಸಾವಿರಾರು ಮಂದಿ ನಡೆದೇ ಊರು ಸೇರಿದ್ದರು. ನೂರಾರು ಮಂದಿ ಸತ್ತಿದ್ದರು.

ನೋಟು ರದ್ದತಿ: ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ಕೇಂದ್ರವು 2016ರ ನವೆಂಬರ್‌ 8ರಂದು ಅಮಾನ್ಯ ಮಾಡಿದ್ದು ಅತಿ ಹೆಚ್ಚು ಚರ್ಚೆಗೊಳಗಾದ ನಿರ್ಧಾರ. ನೋಟು ರದ್ದಾದ ನಂತರದ ಹಣ ಪಡೆಯಲು ಎಟಿಎಂನಲ್ಲಿ ದಿನಗಟ್ಟಲೆ ಸಾಲು ನಿಂತಿದ್ದ ಹಲವು ಮಂದಿ ಮೃತಪಟ್ಟಿದ್ದರು. ನೋಟು ರದ್ದತಿಯಿಂದ ಆದ ಲಾಭವೇನು ಎಂಬುದನ್ನು ಸರ್ಕಾರವು ಈ ವರೆಗೂ ಬಹಿರಂಗಪಡಿಸಿಲ್ಲ.

ಗೂಢಚರ್ಯೆ: ಇಸ್ರೇಲ್‌ನ ಎನ್‌ಎಸ್‌ಒ ಕಂಪನಿಯು ತಯಾರಿಸುವ ಗೂಢಚರ್ಯೆ ತಂತ್ರಾಂಶವನ್ನು ಭಾರತದ ರಾಜಕಾರಣಿಗಳು, ನ್ಯಾಯಮೂರ್ತಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ಬಳಸಲಾಗಿದೆ ಎಂಬ ಆರೋಪವು 2021ರಲ್ಲಿ ಭಾರಿ ಸದ್ದು ಮಾಡಿತ್ತು.

ಸುಧಾರಿಸದ ಆರ್ಥಿಕ ಸ್ಥಿತಿ

ದೇಶದ ಆರ್ಥಿಕ ಸ್ಥಿತಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ವಿದೇಶಿ ವಿನಿಮಯ ಮೀಸಲು ಪ್ರಮಾಣ ಇತ್ತೀಚಿನ ದಿನಗಳಲ್ಲಿ ಕರಗಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಪ್ರಮಾಣವೂ ಕಡಿಮೆಯಾಗಿದೆ. ಇಂಧನ ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ದೇಶದಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣ ಏರಿಕೆಯಾಗುತ್ತಿದೆ. ಹಣದುಬ್ಬರವನ್ನು ಶೇ 6ಕ್ಕಿಂತ ಹೆಚ್ಚಿಗೆ ಆಗದಂತೆ ನೋಡಿಕೊಳ್ಳುವ ಗುರಿ ಈಡೇರಿಲ್ಲ. 2022ರ ಏಪ್ರಿಲ್‌ನಲ್ಲಿ ಶೇ 7.79ರಷ್ಟು ಹಣದುಬ್ಬರ ದಾಖಲಾಗಿದೆ.

ಇಂಧನ ದರವು ದೇಶದ ಜನರಿಗೆ ಹೊರೆಯೆನಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರಲ್ ಕಚ್ಚಾತೈಲದ ದರ 118 ಡಾಲರ್ ಇದ್ದು, ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ ₹101.92 ಇದೆ. 2014ರಲ್ಲಿ ಪ್ರತಿ ಬ್ಯಾರಲ್ ಕಚ್ಚಾತೈಲದ ದರ 106.85 ಡಾಲರ್ ಇತ್ತು. ಆಗ ದೇಶದ ಪೆಟ್ರೋಲ್ ಬೆಲೆ ಲೀಟರ್‌ಗೆ ₹74 ಇತ್ತು.

ಸರ್ಕಾರದ ಕೆಲ ಯೋಜನೆಗಳಲ್ಲಿ ಪ್ರಗತಿ

ಎನ್‌ಡಿಎ ಸರ್ಕಾರದ ಈ ಎಂಟು ವರ್ಷಗಳಲ್ಲಿ ಸರ್ಕಾರದ ಹಲವು ಯೋಜನೆಗಳು ಜನರನ್ನು ತಲುಪಿವೆ ಎಂದು ಸರ್ಕಾರ ಪ್ರತಿಪಾದಿಸಿದೆ. ಕೋವಿಡ್ ತಡೆ ಲಸಿಕೆ ಕಾರ್ಯಕ್ರಮದಲ್ಲಿ ಸರ್ಕಾರ ಪ್ರಗತಿ ಸಾಧಿಸಿದೆ. ಈವರೆಗೆ 193 ಕೋಟಿ ಡೋಸ್ ಲಸಿಕೆಗಳನ್ನು ಉಚಿತವಾಗಿ ನೀಡಲಾಗಿದೆ. ಒಟ್ಟು 88 ಕೋಟಿ ಜನರು ಲಸಿಕೆಯ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡಿದ್ದು ಲಸಿಕಾ ಅಭಿಯಾನ ಮುಂದುವರಿಯುತ್ತಿದೆ.

ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಜನಧನ್ ಯೋಜನೆಯೂ ಯಶಸ್ವಿಯಾಗಿದೆ ಎನ್ನಲಾಗಿದೆ. ಯೋಜನೆಯಡಿ 45.47 ಕೋಟಿ ಜನರು ಬ್ಯಾಂಕ್ ಖಾತೆ ತೆರೆದಿದ್ದಾರೆ. ಎಲ್ಲ ಖಾತೆಗಳಿಂದ ಈವರೆಗೆ ₹1.67 ಲಕ್ಷ ಕೋಟಿ ಠೇವಣಿ ಸಂಗ್ರಹವಾಗಿದೆ. ಯೋಜನೆಯ ಫಲಾನುಭವಿಗಳಿಗೆ 31 ಕೋಟಿ ರುಪೇ ಕಾರ್ಡ್‌ಗಳನ್ನು ವಿತರಿಸಲಾಗಿದೆ. ವಿದ್ಯುಚ್ಛಕ್ತಿ ಉಳಿತಾಯ ದಿಸೆಯಲ್ಲಿ ಜಾರಿಗೆ ತಂದ ಉಜಾಲ ಯೋಜನೆಯಡಿಯಲ್ಲಿ ಈವರೆಗೆ 36 ಕೋಟಿ ಎಲ್‌ಇಡಿ ಬಲ್ಬ್‌ಗಳನ್ನು ಜನರಿಗೆ ವಿತರಿಸಲಾಗಿದೆ. ಗ್ರಾಮೀಣ ಭಾರತದ ಮಹಿಳೆಯರಿಗಾಗಿ ಜಾರಿಗೊಳಿಸಲಾಗಿರುವ ಉಜ್ವಲ ಯೋಜನೆಯನ್ನು ಮುಂದುವರಿಸಲಾಗಿದ್ದು, 9 ಕೋಟಿ ಎಲ್‌ಜಿಪಿ ಸಿಲಿಂಡರ್ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶದಲ್ಲಿ 1.22 ಕೋಟಿ ಮನೆಗಳು, ಗ್ರಾಮೀಣ ಪ್ರದೇಶದಲ್ಲಿ 2.4 ಕೋಟಿ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಶೌಚಾಲಯ ನಿರ್ಮಾಣದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.

ವರ್ಚಸ್ಸು ಹೆಚ್ಚಿಸಿಕೊಳ್ಳದ ರೂಪಾಯಿ

ಅಮೆರಿಕ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿತದ ಹಾದಿ ಹಿಡಿದಿದೆ. ಪ್ರಸಕ್ತ ವರ್ಷ ಕುಸಿತದಲ್ಲಿ ರೂಪಾಯಿಯು ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. 2014ರಲ್ಲಿ ಎನ್‌ಡಿಎ ಸರ್ಕಾರ ಆಡಳಿತ ವಹಿಸಿಕೊಂಡಾಗ ಒಂದು ಅಮೆರಿಕನ್ ಡಾಲರ್‌ಗೆ ಭಾರತದ ₹60.99 ವಿನಿಮಯ ದರ ನೀಡಬೇಕಿತ್ತು. ಕರೆನ್ಸಿ ವಿನಿಮಯ ದರವನ್ನು ಕಡಿತಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತಾದರೂ ಅದು ಏರಿಕೆಯಾಗುತ್ತಲೇ ಸಾಗಿದೆ. 2022ರಲ್ಲಿ ಸರಾಸರಿ 75 ರೂಪಾಯಿಯನ್ನು ತಲುಪಿದ್ದು, ಪ್ರತಿಪಕ್ಷಗಳು ಸರ್ಕಾರದ ಆರ್ಥಿಕ ನೀತಿಯನ್ನು ತರಾಟೆಗೆ ತೆಗೆದುಕೊಂಡಿವೆ.

ನಿರುದ್ಯೋಗ ಸ್ಥಿತಿಗತಿ

ಭಾರತದಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳದ ಪ್ರವೃತ್ತಿ ಕಂಡುಬಂದಿದೆ ಎಂಬ ಅಂಶವನ್ನು ಸಿಎಂಐಇ ದತ್ತಾಂಶಗಳು ಉಲ್ಲೇಖಿಸಿವೆ. ಎನ್‌ಡಿಎ ಸರ್ಕಾರವು ಅಧಿಕಾರಕ್ಕೆ ಬರುವ ಪೂರ್ವದಲ್ಲಿ, 2014ರಲ್ಲಿ ದೇಶದ ನಿರುದ್ಯೋಗ ದರ ಶೇ 5.6ರಷ್ಟಿತ್ತು. 2016ರ ವೇಳೆಗೆ ಈ ಪ್ರಮಾಣ ಶೇ 8.9ಕ್ಕೆ ಏರಿಕೆಯಾಯಿತು. ನಂತರದ ವರ್ಷಗಳಲ್ಲಿ ಸ್ವಲ್ಪ ತಗ್ಗಿದರೂ, 2019ರಿಂದ ಏರಿಕೆಯಾಗುತ್ತಲೇ ಇದೆ. ಕೋವಿಡ್‌ ಬಾಧಿಸಿದ್ದ 2020ರಲ್ಲಿ ಅದು ಶೇ 23ರಷ್ಟಕ್ಕೆ ಹೆಚ್ಚಳ ಕಂಡಿತ್ತು.

ಆಧಾರ: ಸಿಎಂಐಇ, ಆರ್‌ಬಿಐ, ಎಕ್ಸ್‌ಚೇಂಜ್ ರೇಟ್ಸ್, ಎಚ್‌ಪಿಸಿಎಲ್, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT