ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಗೆ ಇಂದು ಮುಹೂರ್ತ: ಎಲ್ಲಿ ಹೇಗಿದೆ ಪರಿಸ್ಥಿತಿ?

Last Updated 14 ಅಕ್ಟೋಬರ್ 2022, 7:46 IST
ಅಕ್ಷರ ಗಾತ್ರ

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ದಿನಾಂಕ ಇಂದು ಪ್ರಕಟವಾಗಲಿದೆ.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಎರಡೂ ರಾಜ್ಯಗಳಲ್ಲಿ ರಾಜಕೀಯ ಬಿಸಿ ಏರಿದೆ. ಪ್ರಸ್ತುತ ಎರಡೂ ರಾಜ್ಯಗಳಲ್ಲೂ ಬಿಜೆಪಿ ಆಡಳಿತ ನಡೆಸುತ್ತಿದ್ದು, ಅಧಿಕಾರ ಉಳಿಸಿಕೊಳ್ಳುವುದು ಪ್ರತಿಷ್ಠೆಯಾಗಿದೆ.

ಈ ವರ್ಷದ ಆರಂಭದಲ್ಲಿ, ನಡೆದ ಐದು ರಾಜ್ಯಗಳ (ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ, ಪಂಜಾಬ್‌) ವಿಧಾನಸಭಾ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳನ್ನು ಗೆದ್ದಿರುವ ಬಿಜೆಪಿ, ಇಲ್ಲಿಯೂ ಗೆಲ್ಲುವ ಉಮೇದಿನಲ್ಲಿದೆ.

ಪಂಜಾಬ್‌ನಲ್ಲಿ ಅಭೂತಪೂರ್ವ ಜಯ ದಾಖಲಿಸಿ, ಅಚ್ಚರಿ ಮೂಡಿಸಿರುವ ಅರವಿಂದ ಕೇಜ್ರವಾಲ್‌ ಅವರ ಆಮ್‌ ಆದ್ಮಿ ಪಕ್ಷ ಈ ಬಾರಿ ಗುಜರಾತ್‌ ಮೇಲೆ ವಿಶೇಷ ಗಮನಹರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಬಿಜೆಪಿ ಸುಮಾರು 27 ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಭೂಪೇಂದ್ರ ಪಟೇಲ್ ಹಾಲಿ ಮುಖ್ಯಮಂತ್ರಿ. ಇತ್ತೀಚೆಗೆ ತವರಿಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ಮೋದಿ ₹14,600 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದಕ್ಕೂ ಹಿಂದೆ ಸೂರತ್‌, ಭಾವನಗರ, ಅಹಮದಾಬಾದ್ ನಗರಗಳಲ್ಲಿ ಸುಮಾರು ₹21 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದ್ದರು. ಇದೇ ಏಪ್ರಿಲ್‌ನಲ್ಲಿ ₹22 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದ್ದರು. ಜೂನ್‌ ತಿಂಗಳಲ್ಲಿ ವಡೋದರದಲ್ಲಿ ನಡೆದ ಗೌರವ ಅಭಿಯಾನದಲ್ಲಿ ಭಾಗಿಯಾಗಿದ್ದ ಪ್ರಧಾನಿ, ₹21 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.

ದೆಹಲಿ, ಪಂಜಾಬ್‌ಗಳಲ್ಲಿ ಭಾರಿ ಬಹುಮತಗಳೊಂದಿಗೆ ಗೆದ್ದು, ಗೋವಾದ ಚುನಾವಣೆಯಲ್ಲಿ ಗಣನೀಯ ಮತಗಳಿಕೆ ಮಾಡಿರುವ ಎಎಪಿ ಇನ್ನೊಂದು ರಾಜ್ಯದಲ್ಲಿ ಮಾನ್ಯತೆ ಗಳಿಸಿದರೂ, ರಾಷ್ಟ್ರೀಯ ಪಕ್ಷವಾಗುವ ಅವಕಾಶ ಹೊಂದಿದೆ. ಹೀಗಾಗಿ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷವು ಬಿರುಸಿನ ಪ್ರಚಾರ, ಸಮಾವೇಶ, ಟೌನ್‌ ಹಾಲ್‌ ಮೀಟಿಂಗ್‌ಗಳನ್ನು ನಡೆಸಿದ್ದು, ಆಕರ್ಷಕ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸಿದೆ.

ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಹಲವು ಬಾರಿ ಗುಜರಾತ್‌ ಪ್ರವಾಸ ಕೈಗೊಂಡಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌, ನಿರುದ್ಯೋಗಿ ಯುವಕ, ಯುವತಿಯರಿಗೆ ತಿಂಗಳಿಗೆ ₹3,000 ಭತ್ಯೆ ನೀಡುವುದಾಗಿ ಪ್ರಕಟಿಸಿದ್ದಾರೆ. ರಾಜ್ಯದ ಎಲ್ಲ ಮಹಿಳೆಯರಿಗೆ ₹1,000 ಸಹಾಯಧನ ನೀಡುವ ಘೋಷಣೆ ಮಾಡಿದ್ದಾರೆ. ರಾಜ್ಯದ ಪ್ರತೀ ಮನೆಗೆ 300 ಯೂನಿಟ್ ಉಚಿತ ವಿದ್ಯುತ್, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, 2021ರ ಡಿಸೆಂಬರ್‌ವರೆಗಿನ ವಿದ್ಯುತ್ ಬಾಕಿ ಮನ್ನಾ ಮಾಡುವುದಾಗಿ ಕೇಜ್ರಿವಾಲ್ ಭರವಸೆ ಕೊಟ್ಟಿದ್ದಾರೆ.

ಕಾಂಗ್ರೆಸ್‌ನಿಂದಲೂ ಮಹಾಪೂರ

ಉಚಿತ ಕೊಡುಗೆ ಘೋಷಿಸುವಲ್ಲಿ ಕಾಂಗ್ರೆಸ್ ಪಕ್ಷವೂ ಹಿಂದೆ ಬಿದ್ದಿಲ್ಲ. ರಾಜ್ಯದ ಪ್ರತೀ ನಿವಾಸಿಗೆ ₹10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಉಚಿತ ಔಷಧ ನೀಡುವ ವಾಗ್ದಾನ ಮಾಡಿದೆ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹4 ಲಕ್ಷ ಆರ್ಥಿಕ ನೆರವು, ರೈತರ ₹3 ಲಕ್ಷದವರೆಗಿನ ಬೆಳೆಸಾಲ ಮನ್ನಾ, ಹಾಲು ಉತ್ಪಾದಕರಿಗೆ ಲೀಟರ್‌ಗೆ ₹5 ಸಹಾಯಧನ ನೀಡುವುದಾಗಿ ಪಕ್ಷ ಪ್ರಕಟಿಸಿದೆ. ಮನೆಗಳಿಗೆ 300 ಯೂನಿಟ್ ವಿದ್ಯುತ್, ಹಾಗೂ ನಿರುದ್ಯೋಗ ಭತ್ಯೆ ನೀಡುವ ಎಎಪಿ ಭರವಸೆಗಳನ್ನು ಕಾಂಗ್ರೆಸ್ ಸಹ ನೀಡಿದೆ.

2017ರ ವಿಧಾನಸಭೆ ಚುನಾವಣೆಯಲ್ಲಿ 182 ಕ್ಷೇತ್ರಗಳ ಪೈಕಿ ಬಿಜೆಪಿ 99ರಲ್ಲಿ ಗೆದ್ದಿತ್ತು. ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್‌ 77ರಲ್ಲಿ ಜಯ ದಾಖಲಿಸಿತ್ತು.

ಮಹಿಳೆಯರ ಕುರಿತು ಹಾಗೂ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಎಎಪಿಯ ಗುಜರಾತ್ ಘಟಕದ ಸಂಚಾಲಕ ಗೋಪಾಲ್ ಇಟಾಲಿಯಾ ಅವರನ್ನು ಗುರುವಾರ ಮಧ್ಯಾಹ್ನ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಗುಜರಾತ್‌ನಲ್ಲಿ ರಾಜಕೀಯದ ಬಿಸಿ ಮತ್ತಷ್ಟು ಏರಿದೆ.

ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗಾಗಿ ಪ್ರಧಾನಿ ಮೋದಿಯವರು ಇತ್ತೀಚೆಗೆ ಹಿಮಾಚಲ ಪ್ರದೇಶಕ್ಕೆ ಹಲವಾರು ಬಾರಿ ಭೇಟಿಕೊಟ್ಟಿದ್ದಾರೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಭರವಸೆಯೊಂದಿಗೆ ಬಿಜೆಪಿಯು ’ಮಿಷನ್‌ ರಿಪೀಟ್‌’ ಪ್ರಚಾರ ಆಂದೋಲನ ಕೈಗೊಂಡಿದೆ. ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ ಇದೇ ರಾಜ್ಯದವರು.

ಹಿಮಾಚಲ ಪ್ರದೇಶವು 1993 ರಿಂದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಒಲವು ತೋರುತ್ತಾ ಬಂದಿರುವ ರಾಜ್ಯ. ಆದರೆ, ಪಕ್ಷದ ಹಿರಿಯ ನಾಯಕ ಆನಂದ್‌ ಶರ್ಮಾ ಅವರ ಭಿನ್ನಮತ, ಪಕ್ಷದ ಕಾರ್ಯಾಧ್ಯಕ್ಷ ಹರ್ಷ್‌ ಮಹಾಜನ್‌ ಅವರ ಬಿಜೆಪಿ ಸೇರ್ಪಡೆಯು ಕಾಂಗ್ರೆಸ್‌ಗೆ ಈ ಬಾರಿ ಹಿನ್ನಡೆ ಉಂಟು ಮಾಡಿದೆ ಎಂಬ ವಿಶ್ಲೇಷಣೆಗಳಿವೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ರಾಜ್ಯದಲ್ಲಿ ಪ್ರಚಾರ ಕೈಗೊಂಡಿದ್ದಾರೆ.

ಎಎಪಿ ರಾಜ್ಯದಲ್ಲಿ ಹಲವಾರು ಸಮಾವೇಶಗಳನ್ನು ನಡೆಸಿದೆ.

ಹಿಮಾಚಲ ಪ್ರದೇಶದಲ್ಲಿ ನಡೆದ 2017ರ ವಿಧಾನಸಭೆ ಚುನಾವಣೆಯಲ್ಲಿ, 68 ಕ್ಷೇತ್ರಗಳ ಪೈಕಿ ಬಿಜೆಪಿ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಕೇವಲ 21 ಸ್ಥಾನಗಳನ್ನು ಗಳಿಸಿತ್ತು. ಪ್ರಸ್ತುತ, ವಿಧಾನಸಭೆಯಲ್ಲಿ ಬಿಜೆಪಿ 45 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 22 ಮತ್ತು ಸಿಪಿಐಎಂ 1 ಶಾಸಕರನ್ನು ಹೊಂದಿದೆ.

ಸಮೀಕ್ಷೆಗಳು ಏನು ಹೇಳಿವೆ?

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆಗಳಿಗೆ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಸುಲಭವಾಗಿ ಅಧಿಕಾರ ಹಿಡಿಯಲಿದೆ ಎಂದು ಸಿ–ವೋಟರ್ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಈ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಮತ ಪ್ರಮಾಣ ಇನ್ನಷ್ಟು ಕುಸಿಯಲಿದ್ದು, ಎಎಪಿಯಿಂದ ದೊಡ್ಡ ಬದಲಾವಣೆ ಸಾಧ್ಯವಾಗುವುದಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ತನ್ನ ಸಂಖ್ಯಾ ಬಲವನ್ನು ಈಗಿರುವ 99ರಿಂದ 135–143ಕ್ಕೆ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ. ಈಗ 77 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ಬಲ 36–44ಕ್ಕೆ ಕುಸಿಯಲಿದೆ. ಎಎಪಿಯು ಗುಜರಾತ್‌ ಚುನಾವಣೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೂ, ಎರಡಕ್ಕಿಂತ ಹೆಚ್ಚು ಸ್ಥಾನ ಸಿಗುವುದಿಲ್ಲ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

68 ಸದಸ್ಯಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯು 37ರಿಂದ 45 ಸೀಟುಗಳನ್ನು ಪಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್‌ಗೆ 21–29 ಸ್ಥಾನ ಸಿಗಬಹುದು. ಎಎಪಿ ಒಂದೂ ಸ್ಥಾನ ಗಳಿಸದಿದ್ದರೂ, ಶೇ 9.5ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

58 ಸ್ಥಾನ ಸಿಗಲಿದೆ ಎಂದಿರುವ ಎಎಪಿ

ಗುಜರಾತ್ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷ 58 ಸ್ಥಾನಗಳನ್ನು ಗೆಲ್ಲಬಹುದು ಎಂದು ನಮ್ಮ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಎಎಪಿಯ ಗುಜರಾತ್‌ ಉಸ್ತುವಾರಿ ಡಾ. ಸಂದೀಪ್‌ ಪಾಠಕ್‌ ಏಪ್ರಿಲ್‌ನಲ್ಲಿ ಹೇಳಿದ್ದರು.

ಇವುಗಳನ್ನೂ ಓದಿ

ಗುಜರಾತ್‌, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕ ಇಂದು ಘೋಷಣೆ

ಆಳ–ಅಗಲ | ಗುಜರಾತ್ ವಿಧಾನಸಭಾ ಚುನಾವಣೆ: ಉಚಿತ ಕೊಡುಗೆಗಳ ಮೇಲಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT