ಸೋಮವಾರ, ಆಗಸ್ಟ್ 8, 2022
21 °C
ಉತ್ತರ ಪ್ರದೇಶ ವಿಧಾನಸಭೆ

ಆಳ–ಅಗಲ: ಚುನಾವಣೆ ಹೊಸ್ತಿಲಲ್ಲೂ ಪಕ್ಷಗಳು ದುರ್ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಜೆಪಿ ಹಾದಿ ಹೂವಿನದ್ದಲ್ಲ

ಉತ್ತರ ಪ್ರದೇಶ ವಿಧಾನಸಭೆಗೆ 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ, 403 ಸ್ಥಾನಗಳಲ್ಲಿ ಬಿಜೆಪಿ 312 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಚುನಾವಣೆಯನ್ನು ಎದುರಿಸುವಲ್ಲಿ ಬಿಜೆಪಿಯ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕ ಅಮಿತ್ ಶಾ ಮತ್ತು ಕೆಲವೇ ತಾರಾ ಪ್ರಚಾರಕರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ನೋಟುರದ್ದತಿಯ ನಂತರ ಬಿಜೆಪಿ ಎದುರಿಸಿದ ಮೊದಲ ಚುನಾವಣೆ ಅದಾಗಿತ್ತು. ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ಭಾರಿ ಆಕ್ರೋಶವಿದ್ದರೂ, ಮೋದಿ ಅವರ ಪ್ರಭಾವಳಿಯಲ್ಲೇ ಚುನಾವಣೆ ಎದುರಿಸಲಾಗಿತ್ತು ಮತ್ತು ಬಿಜೆಪಿ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಿತು. ಆದರೆ, 2017ರಲ್ಲಿ ಇದ್ದಷ್ಟು ಪ್ರಬಲವಾಗಿ ಬಿಜೆಪಿ ಉಳಿದಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ.

ಆವರೆಗೆ ಬಿಜೆಪಿಯ ಫೈರ್‌ಬ್ರ್ಯಾಂಡ್‌ ನಾಯಕರಾಗಿ ಗುರುತಿಸಿಕೊಂಡಿದ್ದ ಯೋಗಿ ಆದಿತ್ಯನಾಥ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದ್ದು ಆಶ್ಚರ್ಯಕರ ಬೆಳವಣಿಗೆಯಾಗಿತ್ತು. ಉಗ್ರ ಹಿಂದುತ್ವದ ಪ್ರತಿಪಾದಕರಾಗಿದ್ದ ಯೋಗಿ ಅವರ ನೀತಿಗಳಿಗೆ ಎಲ್ಲಿಲ್ಲದ ಮನ್ನಣೆ ದೊರೆಯಿತು. ಇದನ್ನು ಬೇರೆ ರಾಜ್ಯಗಳ ಚುನಾವಣೆಯಲ್ಲೂ ಬಳಸಿಕೊಳ್ಳಲು ಬಿಜೆಪಿ ಮುಂದಾಯಿತು. ಆನಂತರ ನಡೆದ 10ಕ್ಕೂ ಹೆಚ್ಚು ರಾಜ್ಯಗಳ ಚುನಾವಣೆಯಲ್ಲಿ ಯೋಗಿ ಅವರು ತಾರಾ ಪ್ರಚಾರಕರಾಗಿ ಪ್ರಚಾರ ನಡೆಸಿದ್ದಾರೆ. ಯೋಗಿ ಅವರು ಮೋದಿ ಅವರ ಉತ್ತರಾಧಿಕಾರಿ ಎನ್ನುವಷ್ಟರಮಟ್ಟಿಗೆ ಅವರ ಪ್ರಭಾವಳಿ ಹೆಚ್ಚಾಯಿತು.

ಯೋಗಿ ಅವರ ಆಡಳಿತದಲ್ಲಿನ ನ್ಯೂನತೆ, ಪಕ್ಷದ ಇತರ ನಾಯಕರ ಕಡೆಗಣನೆ, ಠಾಕೂರರನ್ನು ಓಲೈಸುವ ನೀತಿಗಳಿಂದಾಗಿ ಈ ಪ್ರಭಾವಳಿ ಮುಕ್ಕಾಗಿದೆ; ಕೋವಿಡ್‌ ಎರಡನೇ ಅಲೆ ನಿರ್ವಹಣೆಯಲ್ಲಿ ಯೋಗಿ ಅವರ ವೈಫಲ್ಯ ಬಹಿರಂಗವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಅಧಿಕಾರಕ್ಕೆ ಬಂದ ದಿನದಿಂದಲೂ ಯೋಗಿ ಅವರು ತಮ್ಮ ಆಪ್ತವಲಯದಲ್ಲಿ ಠಾಕೂರರಿಗೆ ಮಾತ್ರ ಪ್ರವೇಶ ನೀಡಿದ್ದಾರೆ. ಬೇರೆ ಸಮುದಾಯಕ್ಕೆ ಸೇರಿದ ಬಿಜೆಪಿ ಮತ್ತು ಎನ್‌ಡಿಎ ನಾಯಕರನ್ನು ಕಡೆಗಣಿಸಿದ್ದಾರೆ. ಅವರ ಪ್ರಭಾವಳಿ ಜೋರಾಗಿ ಇದ್ದ ಕಾರಣ, ಈ ಕಡೆಗಣನೆ ಮುನ್ನೆಲೆಗೆ ಬರಲಿಲ್ಲ. 
ಕಡೆಗಣನೆ ಕಾರಣಕ್ಕೇ ಬ್ರಾಹ್ಮಣರೂ ಬಿಜೆಪಿಯಿಂದ ದೂರ ಸರಿದಿದ್ದಾರೆ. ಇದರ ಪರಿಣಾಮವಾಗಿ ದಲಿತ ಸಮುದಾಯದ ಎನ್‌ಡಿಎ ಮಿತ್ರಪಕ್ಷಗಳಾದ ನಿಶಾದ್, ಅಪ್ನಾದಳ ಮತ್ತು ಎಸ್‌ಬಿಎಸ್‌ಪಿ ಬಿಜೆಪಿಯಿಂದ ದೂರಸರಿದಿವೆ. ಈ ಮೂಲಕ ದಲಿತರ ನಂಬಿಕೆಯನ್ನು ಬಿಜೆಪಿ ಕಳೆದುಕೊಂಡಿದೆ. ಇದು ಪಂಚಾಯಿತಿ ಚುನಾವಣೆಯಲ್ಲೂ ಪ್ರತಿಫಲಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಯೋಗಿ ಅವರು ತಮ್ಮ ಆಡಳಿತದ ಉದ್ದಕ್ಕೂ ಹಿಂದುತ್ವಕ್ಕೆ ಜೋತು ಬಿದ್ದಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ಹಿಂದುತ್ವ ಮತ್ತು ಅಭಿವೃದ್ಧಿಯ ಮಂತ್ರಕ್ಕೆ ಮಾರುಹೋಗಿ ಮತನೀಡಿದ್ದ ಸಮುದಾಯಗಳ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಯೋಗಿ ಅವರ ಸರ್ಕಾರ ವಿಫಲವಾಗಿದೆ. ಕೋವಿಡ್‌ ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಕೋವಿಡ್‌ ಪರಿಹಾರ ಯೋಜನೆಗಳೂ ಜನರನ್ನು ಸಮರ್ಪಕವಾಗಿ ತಲುಪಿಲ್ಲ. ಎರಡನೇ ಅಲೆ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿಯ ನಾಯಕರೇ ಆರೋಪಿಸಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆ ಮತ್ತು ಭರವಸೆಗಳನ್ನು ಈಡೇರಿಸದೇ ಇರುವ ಕಾರಣಕ್ಕೆ ಸರ್ಕಾರದ ಜನಪ್ರಿಯತೆ ಕುಗ್ಗಿದೆ. ಪಕ್ಷದ ಶಾಸಕರು ಮತ್ತು ಸಚಿವರು ಜನರ ಮುಂದೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ಉತ್ತರ ಪ್ರದೇಶದಲ್ಲಿ ಭಾರಿ ಆಂದೋಲನ ನಡೆಯುತ್ತಿದೆ. ಈ ಕಾಯ್ದೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತಿಭಟನೆ ಆರಂಭವಾಗಿದ್ದರೂ, ಇಂದಿಗೂ ಪ್ರತಿಭಟನೆಯ ಕಾವನ್ನು ಉಳಿಸಿಕೊಂಡು ಹೋರಾಟ ನಡೆಸುತ್ತಿರುವುದು ಉತ್ತರ ಪ್ರದೇಶದ ರೈತರು. ಈ ಚುನಾವಣೆಯಲ್ಲಿ ರೈತ ಸಮುದಾಯವು ಬಿಜೆಪಿ ವಿರೋಧಿಗಳಿಗೆ ಮತಹಾಕುವ ಸಾಧ್ಯತೆಯೇ ಹೆಚ್ಚು.  

ಈ ಎಲ್ಲಾ ಬೆಳವಣಿಗೆಗಳೂ ಬಿಜೆಪಿಯ ಬಲವನ್ನು ಕುಗ್ಗಿಸಿವೆ. ಹೀಗಾಗಿ, 2017ರಲ್ಲಿ ಹಿಂದುತ್ವ ಮತ್ತು ಅಭಿವೃದ್ಧಿಯ ಮಂತ್ರವನ್ನು ಪಠಿಸಿ ಚುನಾವಣೆ ಎದುರಿಸಿದ್ದ ಬಿಜೆಪಿಗೆ 2022ರ ಚುನಾವಣೆಯ ಹಾದಿ ಹೂವಿನದ್ದಲ್ಲ.

ವೈರತ್ವದ ಹಾದಿಗೆ ಮರಳಿದ ಎಸ್‌ಪಿ– ಬಿಎಸ್‌ಪಿ

ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಬಿಜೆಪಿಯ ಅಲೆಯು ರಾಜ್ಯದಲ್ಲಿ ತಮ್ಮ ಭವಿಷ್ಯಕ್ಕೆ ಮಾರಕವಾಗಬಹುದು ಎಂಬುದನ್ನು ಮನಗಂಡು ಕಳೆದ ಲೋಕಸಭಾ ಚುನಾವಣೆಯಲ್ಲಿ ಕೈಜೋಡಿಸಿದ್ದವು.

ಉತ್ತರ ಪ್ರದೇಶದ ರಾಜಕೀಯದಲ್ಲಿ ಅದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಬಿಜೆಪಿಯು ಇದನ್ನು ‘ಬುವಾ– ಭತೀಜಾ’ (ಅತ್ತೆ– ಸೋದರಳಿಯ) ಮೈತ್ರಿ ಎಂದು ಲೇವಡಿ ಮಾಡಿತು. ಅದೇನೇ ಇದ್ದರೂ ಮೈತ್ರಿಯಿಂದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಹೆಚ್ಚಿನ ಲಾಭವಾಗಲಿಲ್ಲ. ಸಂಖ್ಯೆಯ ದೃಷ್ಟಿಯಿಂದ ಸಮಾಜವಾದಿ ಪಕ್ಷಕ್ಕೆ ಸ್ವಲ್ಪ ಅನುಕೂಲವಾದಂತೆ ಕಂಡರೂ, ಬಿಎಸ್‌ಪಿಯಂತೂ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂತು.

2020ರಲ್ಲಿ ರಾಜ್ಯಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ಈ ಮೈತ್ರಿಯಲ್ಲಿ ಒಡಕು ಕಾಣಿಸಿತು. ಪರಿಣಾಮ, ಮಾಯಾವತಿ ಅವರು ತಮ್ಮ ಪಕ್ಷದಿಂದ ಏಳು ಮಂದಿ ಶಾಸಕರನ್ನು ಅಮಾನತುಗೊಳಿಸಿದರು. ಅಮಾನತು ಪರ್ವ ಆ ನಂತರವೂ ಮುಂದುವರಿಯಿತು. ಕಳೆದ 18 ತಿಂಗಳಲ್ಲಿ ಬಿಎಸ್‌ಪಿಯಿಂದ ಅಮಾನತುಗೊಂಡ ಶಾಸಕರ ಸಂಖ್ಯೆ 11ಕ್ಕೆ ತಲುಪಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ದುರ್ಬಲಗೊಂಡ ನಂತರ, ಬಹುಸಂಖ್ಯೆಯಲ್ಲಿರುವ ಯಾದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇಲ್ಲಿ ಎರಡೂ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುತ್ತಾ ಬಂದಿದ್ದಾರೆ. ಮುಸ್ಲಿಮರು ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ಅಧಿಕಾರ ಹಿಡಿಯಲು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮತಗಳು ಸಾಕಾಗುವುದಿಲ್ಲ ಎಂದಾಗ, ಮಾಯಾವತಿ ಅವರು ತಮ್ಮ ನೀತಿಯನ್ನು ಸ್ವಲ್ಪ ಸಡಿಲಿಸಿ, ಬ್ರಾಹ್ಮಣ ಸಮುದಾಯವನ್ನು ಓಲೈಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಹಾಗೂ ಹಿಂದುತ್ವದ ರಾಜಕಾರಣವು ಈ ಎರಡೂ ಪಕ್ಷಗಳನ್ನು ಕಂಗೆಡಿಸಿವೆ.

ಪಕ್ಷದೊಳಗಿನ ಅಂತಃಕಲಹ ಎರಡೂ ಪಕ್ಷಗಳ ಹಿನ್ನಡೆಗೆ  ಕಾರಣವಾಗಿದೆ. ಅಖಿಲೇಶ್‌ ಹಾಗೂ ಅವರ ತಂದೆ ಮುಲಾಯಂ ಸಿಂಗ್‌ ಯಾದವ್‌ ಅವರ ಮಧ್ಯೆಯೇ ಭಿನ್ನಾಭಿಪ್ರಾಯ ಸೃಷ್ಟಿಯಾದದ್ದು, ಮಾಯಾವತಿ ಅವರ ಸೂಚನೆಗಳನ್ನು ಅವರ ಪಕ್ಷದ ಶಾಸಕರೇ ಉಲ್ಲಂಘಿಸಿದ್ದು ಮುಂತಾದ ಬೆಳವಣಿಗೆಗಳು ನಡೆದಿವೆ.

ಮೈತ್ರಿ ಮುಂದುವರಿಸಿದರೆ ಪಕ್ಷಕ್ಕೆ ಇನ್ನಷ್ಟು ಹಾನಿಯಾಗಬಹುದೆಂದು ಭಾವಿಸಿರುವ ಮಾಯಾವತಿ, ಮುಂದಿನ ಚುನಾವಣೆಗಳಲ್ಲಿ ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ. ಪ್ರಸಕ್ತ, ಈ ಪಕ್ಷಗಳು ತಮ್ಮ ಮೂರು ದಶಕಗಳ ಹಿಂದಿನ ‘ಬದ್ಧ ವೈರತ್ವ’ದ ಸ್ಥಿತಿಗೆ ಮರಳಿವೆ.

ಈ ನಡುವೆ, 2020ರಲ್ಲಿ ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಹಲವು ಶಾಸಕರು ಅಖಿಲೇಶ್‌ ಯಾದವ್‌ ಅವರನ್ನು ಮಂಗಳವಾರ ಭೇಟಿಮಾಡಿರುವ ಸುದ್ದಿಯೂ ಹೊರಬಿದ್ದಿದೆ. ಅವರಲ್ಲಿ ಒಂದಿಬ್ಬರು, ‘ನಾವು ಎಸ್‌ಪಿ ಸೇರ್ಪಡೆಯಾಗಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ’ ಎಂದಿದ್ದಾರೆ. ಕೆಲವರು ಬಿಜೆಪಿ ಕಡೆಗೆ ವಾಲಿದ್ದಾರೆ.

ಈಚೆಗೆ ನಡೆದ ಪಂಚಾಯಿತಿ ಚುನಾವಣೆಗಳಲ್ಲೂ ಬಿಎಸ್‌ಪಿಯ ಸಾಧನೆ ಕಳಪೆಯಾಗಿತ್ತು. ಆದರೆ ಎಸ್‌ಪಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ತೋರಿದೆ. ಇದು ಎಸ್‌ಪಿ ನಾಯಕರಲ್ಲಿ ಹೊಸ ಉತ್ಸಾಹ ತುಂಬಿದೆ. ಬಿಎಸ್‌ಪಿಯು ಬೇರೆ ರಾಜ್ಯಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೂ ಎಲ್ಲೂ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ಆದ್ದರಿಂದ ಉತ್ತರ ಪ್ರದೇಶದಲ್ಲಿ ಮಾತ್ರ ನಮ್ಮ ಭವಿಷ್ಯ ಅಡಗಿದೆ ಎಂಬುದನ್ನು ಎರಡೂ ಪಕ್ಷಗಳು ಮನಗಾಣಬೇಕು ಎಂದು ವಿಶ್ಲೇಷಕರು ಹೇಳುತ್ತಾರೆ.

ರಾಜ್ಯದ ರಾಜಕೀಯ ಇತಿಹಾಸವನ್ನು ನೋಡಿದರೆ ಅಧಿಕಾರವು ಬದಲಾಗುತ್ತಾ ಬಂದಿರುವುದು ಕಾಣುತ್ತದೆ. ಆದ್ದರಿಂದ 2022ರಲ್ಲಿ ಬಿಜೆಪಿಯನ್ನು ನಾವು ಸೋಲಿಸಬಲ್ಲೆವು ಎಂಬ ವಿಶ್ವಾಸ ಎರಡೂ ಪಕ್ಷಗಳಲ್ಲಿ ಬಲವಾಗಿದ್ದಂತೆ ಕಾಣಿಸುತ್ತಿದೆ. ಆದರೆ, ಅದು ಅಷ್ಟು ಸುಲಭವಲ್ಲ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ಕಾಂಗ್ರೆಸ್‌ಗೆ ಪುಟಿದೇಳುವ ಆಸೆ

ಉತ್ತರ ಪ್ರದೇಶದಲ್ಲಿ ಈಗಾಗಲೇ ತನ್ನ ನೆಲೆಯನ್ನು ಕಳೆದುಕೊಂಡಿರುವ ಕಾಂಗ್ರೆಸ್, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಹಿಂದಿನ ಬಾರಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಕೇವಲ ಏಳು ಸ್ಥಾನಗಳಿಗೆ ಪಕ್ಷ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಹುಮ್ಮಸ್ಸಿನಿಂದ ಇದ್ದ ಪಕ್ಷಕ್ಕೆ ಆರಂಭದಲ್ಲೇ ಪೆಟ್ಟು ಬಿದ್ದಿದೆ. ಪಕ್ಷದ ಪ್ರಮುಖ ನಾಯಕ ಜಿತಿನ್ ಪ್ರಸಾದ ಅವರ ದಿಢೀರ್ ನಿರ್ಗಮನ ಪಕ್ಷಕ್ಕೆ ಹೊಡೆತ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ.

ಬಿಎಸ್‌ಪಿ, ಕಾಂಗ್ರೆಸ್ ಜೊತೆ ಈ ಬಾರಿ ಮೈತ್ರಿ ಇಲ್ಲ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಘೋಷಿಸಿದ್ದಾರೆ. ಹೀಗಾಗಿ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಪಕ್ಷ ಮುಂದಾಗುವ ಸಾಧ್ಯತೆ ಇದೆ. ಚಂದ್ರಶೇಖರ ಆಜಾದ್ ಅವರ ಭೀಮ್ ಆರ್ಮಿ ಪಕ್ಷ, ಆಜಾದ್ ಸಮಾಜ್ ಪಾರ್ಟಿ ಜೊತೆಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಇತ್ತೀಚೆಗೆ ಮುಕ್ತಾಯವಾದ ಉತ್ತರ ಪ್ರದೇಶ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶನ ಉತ್ತಮವಾಗಿದೆ. 270 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್, 571 ಕ್ಷೇತ್ರಗಳಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದರರ್ಥ ಉತ್ತರ ಪ್ರದೇಶದ ಜನರು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೇಲೆ ವಿಶ್ವಾಸ ಇರಿಸಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳೇ ಆಸರೆ

ಉತ್ತರ ಪ್ರದೇಶದ ಎಲ್ಲ ರಾಜಕೀಯ ಪಕ್ಷಗಳು ಈ ಬಾರಿ ಸ್ಥಳೀಯ ಪಕ್ಷಗಳ ಜೊತೆ ಮೈತ್ರಿಗೆ ಮನಸ್ಸು ಮಾಡಿವೆ. ಕಾಂಗ್ರೆಸ್ ಹಾಗೂ ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡು ಕೈಸುಟ್ಟುಕೊಂಡಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಕಟ್ಟಿರುವ ಪ್ರಗತಿಶೀಲ ಸಮಾಜವಾದಿ ಪಕ್ಷದ ಜೊತೆ ಮೈತ್ರಿಯ ಸುಳಿವು ನೀಡಿದ್ದಾರೆ.

ಬಿಜೆಪಿಯು ಕಳೆದ ಚುನಾವಣೆಯಲ್ಲಿ ಅನುಪ್ರಿಯಾ ಪಟೇಲ್ ನೇತೃತ್ವದ ಅಪ್ನಾ ದಳ ಹಾಗೂ ಓಂ ಪ್ರಕಾಶ್ ರಾಜ್‌ಭರ್ ಅವರ ಸುಹೆಲ್‌ದೇವ್‌ ಭಾರತೀಯ ಸಮಾಜ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿತ್ತು. ನಿಷಾದ ಪಕ್ಷದ ಡಾ. ಸಂಜಯ್ ನಿಷಾದ ಅವರು ಬಿಜೆಪಿ ಜತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. 

ಆಮ್ ಆದ್ಮಿ ಪಕ್ಷವು ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ 83 ಜಿಲ್ಲಾ ಪಂಚಾಯತ್, 300 ಗ್ರಾಮ ಪಂಚಾಯಿತಿ ಮತ್ತು 232 ವಲಯ ಅಭಿವೃದ್ಧಿ ಸಮಿತಿ ಸ್ಥಾನಗಳನ್ನು ಗೆದ್ದುಕೊಂಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು