ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಶ್ರೀಲಂಕಾದಲ್ಲಿ ಸಂಕಷ್ಟಗಳ ಸರಮಾಲೆ

Last Updated 7 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಶ್ರೀಲಂಕಾವು ತನ್ನ ಇತಿಹಾಸದಲ್ಲಿ ಈವರೆಗೆ ಕಾಣದೇ ಇದ್ದಂತಹ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ವಿದೇಶಗಳಿಂದ ಪೆಟ್ರೋಲ್‌, ಡೀಸೆಲ್ ಮತ್ತು ಎಲ್‌ಪಿಜಿ ಖರೀದಿಸಲಾಗಂತಹದ ಸ್ಥಿತಿಗೆದೇಶವು ತಲುಪಿದೆ. ವಿದೇಶಗಳಿಂದ ಈ ತೈಲೋತ್ಪನ್ನಗಳು ಬಾರದೇ ಇರುವ ಕಾರಣಕ್ಕೆ, ದೇಶದಾದ್ಯಂತ ಇಂಧನ ಕೊರತೆ ಉಂಟಾಗಿದೆ. ವಾಹನ ಮಾಲೀಕರು, ಟ್ಯಾಕ್ಸಿ, ಟ್ರಕ್‌ ಮತ್ತು ಆಟೊ ಚಾಲಕರು ತಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿದೆ. ಹೀಗೆ ನಿಂತರೂ ದೊರೆಯುವ ಇಂಧನ ಪ್ರಮಾಣ ಒಂದು ದಿನದ ಓಡಾಟಕ್ಕೂ ಸಾಲುವುದಿಲ್ಲ. ಏಕೆಂದರೆ ಪಡಿತರದ ರೀತಿಯಲ್ಲಿ ಇಂಧನವನ್ನು ನೀಡಲಾಗುತ್ತಿದೆ.

ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಖಾಲಿಯಾದ ಸಿಲಿಂಡರ್‌ ಅನ್ನು ಬದಲಿಸಿಕೊಳ್ಳಲು ದಿನಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಕೊರತೆ ತೀವ್ರವಾಗಿರುವ ಕಾರಣ ಈ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಗೃಹ ಬಳಕೆಯ ಪ್ರತಿ ಸಿಲಿಂಡರ್‌ನ ಬೆಲೆ 4,500–5,000 ಶ್ರೀಲಂಕಾ ರೂಪಾಯಿಗೆ ತಲುಪಿದೆ. ಇಷ್ಟು ದುಡ್ಡು ಕೊಟ್ಟು ಸಿಲಿಂಡರ್ ಖರೀದಿಸಲಾಗದ ಮಧ್ಯಮವರ್ಗ ಮತ್ತು ಬಡ ಜನರು ಮರಳಿ ಸೌದೆ ಒಲೆಗಳ ಮೊರೆ ಹೋಗಿದ್ದಾರೆ.

ಅತ್ಯಗತ್ಯದ ವಸ್ತುಗಳಲ್ಲಿ ಒಂದಾದ ಔಷಧಗಳನ್ನು ತಯಾರಿಸಿಕೊಳ್ಳುವ ವ್ಯವಸ್ಥೆ ಶ್ರೀಲಂಕಾದಲ್ಲಿ ಇಲ್ಲ. ಎಲ್ಲಾ ಸ್ವರೂಪದ ಔಷಧಗಳಿಗೆ ಶ್ರೀಲಂಕಾವು ಭಾರತ, ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳನ್ನು ಅವಲಂಬಿಸಿದೆ. ವಿದೇಶಿ ವಿನಿಮಯ ನಿಧಿ ಕರಗಿರುವ ಕಾರಣ ಔಷಧಗಳನ್ನು ಖರೀದಿಸಲು ಸಾಧ್ಯವಿಲ್ಲದೇ ಇರುವಂತಹ ಚಿಂತಾಜನಕ ಸ್ಥಿತಿಗೆ ದೇಶ ತಲುಪಿದೆ. ಪರಿಣಾಮವಾಗಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಏನೂ ಮಾಡಲಾಗದ ಸ್ಥಿತಿಯಲ್ಲಿರುವ ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಯೋಗವನ್ನೇ ಮಾಡದೆ ಜಾರಿಗೆ ತಂದ ಸಂಪೂರ್ಣ ಸಾವಯವ ಎಂಬ ನೂತನ ಕೃಷಿ ನೀತಿ, ದೇಶದ ಕೃಷಿ ವಲಯದ ಕತ್ತು ಹಿಸುಕಿದೆ. ದೇಶದ ಜನರ ಆಹಾರದ ಅಗತ್ಯವನ್ನು ಪೂರೈಸಲಾಗದಷ್ಟು ಕೃಷಿ ವಲಯ ದುರ್ಬಲವಾಗಿದೆ. ಆಹಾರ ಪದಾರ್ಥ
ಗಳಿಗಾಗಿ ವಿದೇಶಗಳತ್ತ ಕೈಚಾಚುವ ಸ್ಥಿತಿ ನಿರ್ಮಾಣವಾಗಿದೆ. ಹಣದುಬ್ಬರವು ಶೇ 17ಕ್ಕೂ ಹೆಚ್ಚು ಇರುವುದರಿಂದ ಜನರು ಆಹಾರ ಪದಾರ್ಥಗಳನ್ನು ಖರೀದಿಸಲಾಗಂತಹ ದಯನೀಯ ಸ್ಥಿತಿಗೆ ಬಂದಿದ್ದಾರೆ.

ಈ ಎಲ್ಲಾ ಸಂಕಷ್ಟಗಳಿಗೆ ಸರ್ಕಾರವೇ ಕಾರಣ ಎಂದು ಜನರು ಹೇಳುತ್ತಿದ್ದಾರೆ. ಅವರು ಬೀದಿಗಿಳಿದು ಪ್ರತಿಭಟಿ ಸುತ್ತಿದ್ದಾರೆ. ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಗೊಟಬಯ ಅವರು ಮಾತ್ರ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ.

ಸ್ವಾತಂತ್ರ್ಯಾನಂತರ ಚಹಾ ಮತ್ತು ಮಸಾಲೆ ಪದಾರ್ಥಗಳ ರಫ್ತಿನಿಂದಲೇ ಶ್ರೀಲಂಕನ್ನರು ದೇಶವನ್ನು ಕಟ್ಟಿದ್ದರು. ಗೊಟಬಯ ಅವರು ಅಧ್ಯಕ್ಷರಾದ ನಂತರ ಆರ್ಥಿಕತೆಯ ಆದ್ಯತೆ ಬದಲಾಯಿತು. ಕೆಲವೇ ವರ್ಷಗಳಲ್ಲಿ ಗೊಟಬಯ ಅವರ ಅಣ್ಣ ಮಹಿಂದ ರಾಜಪಕ್ಸೆ ಅವರು ಪ್ರಧಾನಿಯಾದರು. ಸೋದರರ ಈ ಸರ್ಕಾರವು ದೇಶದ ಆರ್ಥಿಕ ನೀತಿಯನ್ನು ಬದಲಿಸಿತು.

ಚಹಾ ಮತ್ತು ಮಸಾಲೆ ಪದಾರ್ಥಗಳ ರಫ್ತೇ ಪ್ರಧಾನ ಆದಾಯವಾಗಿದ್ದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದರು. ಪ್ರವಾಸಿಗರನ್ನು ಸೆಳೆಯಲು ಅಗತ್ಯವಿದ್ದ ಮೂಲಸೌಕರ್ಯಗಳ ನಿರ್ಮಾಣಕ್ಕೆ ಜಾಗತಿಕ ಹಣಕಾಸು ಸಂಸ್ಥೆಗಳಲ್ಲಿ ಭಾರಿ ಮೊತ್ತದ ಸಾಲ ತಂದರು. ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಮಧ್ಯೆ ಕೃಷಿ ನಲುಗಿತು. ದೇಶದ ಒಟ್ಟು ದೇಶೀಯ ಉತ್ಪನ್ನದಲ್ಲಿ ಕೃಷಿಯ ಪಾಲು ಕುಸಿಯಿತು. ಪ್ರವಾಸೋದ್ಯಮ ಬೆಳೆದರೂ, ಸಾಲ ತೀರಿಸುವಿಕೆ ಮತ್ತು ಮತ್ತಷ್ಟು ಮೂಲಸೌಕರ್ಯ ಅಭಿವೃದ್ಧಿಗೆ ಭಾರಿ ಹಣ ವ್ಯಯ ಮಾಡಲಾಯಿತು. ಸರ್ಕಾರದ ಆದಾಯ ಕುಸಿಯಿತು. ಸರ್ಕಾರದ ಖಜಾನೆ ಬರಿದಾಯಿತು. ಜಾಗತಿಕ ಹಣಕಾಸು ಸಂಸ್ಥೆಗಳು ಸಾಲ ನೀಡಲು ನಿರಾಕರಿಸಿದವು. ಹೀಗಾಗಿ ಶ್ರೀಲಂಕಾ ಸರ್ಕಾರವು ಸಹಾಯಕ್ಕಾಗಿ ವಿದೇಶಗಳತ್ತ ಕೈಚಾಚಿದೆ.

ಚೀನಾ ಸಾಲದ ಬಲೆಗೆ ಬಿದ್ದ ಲಂಕಾ

ಮಧ್ಯಮ ಆದಾಯದ ದೇಶಗಳಿಗೆ ಭರಪೂರ ಸಾಲ ನೀಡುವ ಹಾಗೂ ಅಲ್ಲಿ ಹೂಡಿಕೆ ಮಾಡುವ ಚೀನಾದ ತಂತ್ರಗಾರಿಕೆಯು ದ್ವೀಪರಾಷ್ಟ್ರ ಶ್ರೀಲಂಕಾವನ್ನು ಆರ್ಥಿಕ ದುಃಸ್ಥಿತಿಗೆ ತಳ್ಳುವಂತೆ ಮಾಡಿದೆ. 2009ರಲ್ಲಿ ಆಂತರಿಕ ಯುದ್ಧ ಕೊನೆಯಾದ ಬಳಿಕ ಶ್ರೀಲಂಕಾ ಸರ್ಕಾರವು ಚೀನಾ ಸೇರಿದಂತೆ ವಿವಿಧ ದೇಶಗಳಿಂದ ಆರ್ಥಿಕ ನೆರವು ಕೇಳಿತ್ತು. 2021ರ ಮಾಹಿತಿ ಪ್ರಕಾರ, ಶ್ರೀಲಂಕಾ ಈವರೆಗೆ ₹3.87 ಲಕ್ಷ ಕೋಟಿ (5,100 ಕೋಟಿ ಡಾಲರ್) ಸಾಲ ಮಾಡಿದೆ. ಈ ಸಾಲದಲ್ಲಿ ಚೀನಾದ ಪಾಲೇ ಶೇ 10ರಷ್ಟಿದೆ.

ಸಾಲ ಮರುಪಾವತಿ ಮಾಡುವ ಸಾಮರ್ಥ್ಯವಿಲ್ಲದ ದೇಶಗಳಿಗೆ ಹೆಚ್ಚಿನ ಸಾಲ ನೀಡುವುದು ಹಾಗೂ ಆ ದೇಶಗಳ ರಾಷ್ಟ್ರೀಯ ಸೊತ್ತುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಚೀನಾದ ಯತ್ನ ಇಲ್ಲಿಯೂ ಕೆಲಸ ಮಾಡಿದೆ. ದೇಶದ ಅತ್ಯಂತ ಪ್ರಮುಖ ಬಂದರು ಎನಿಸಿರುವ ‘ಹಂಬನ್‌ತೋಟ’ ಬಂದರು ಈಗ ಚೀನಾದ ತೆಕ್ಕೆಯಲ್ಲಿದೆ. ಈ ಬಂದರು ನಿರ್ಮಾಣಕ್ಕೆ ಚೀನಾ ಸುಮಾರು ₹9 ಸಾವಿರ ಕೋಟಿ (120 ಕೋಟಿ ಡಾಲರ್) ಹಣವನ್ನು ಸಾಲದ ರೂಪದಲ್ಲಿ ಹೂಡಿಕೆ ಮಾಡಿದೆ. ಸಾಲ ಮರುಪಾವತಿಗೆ ಪರದಾಡಿದ ಶ್ರೀಲಂಕಾ, 2017ರಲ್ಲಿ ಹಂಬನ್‌ತೋಟ ಬಂದರನ್ನು ಚೀನಾಕ್ಕೆ 99 ವರ್ಷಗಳ ಕಾಲ ಭೋಗ್ಯಕ್ಕೆ ನೀಡುವ ಒಪ್ಪಂದಕ್ಕೆ ಸಹಿ ಹಾಕಿತು. ಅಂತರರಾಷ್ಟ್ರೀಯ ಸಮುದ್ರಮಾರ್ಗದ ಸಮೀಪದಲ್ಲಿರುವ ಈ ಬಂದರಿನಲ್ಲಿ ಶೇ 70ರಷ್ಟು ಪಾಲು ಹೊಂದಿರುವ ಚೀನಾ, ಇಲ್ಲಿ ಬರುವ ಆದಾಯವನ್ನು ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಿದೆ.

ಮರುಪಾವತಿ ಸಾಧ್ಯವಾಗದ ಕಾರಣ, ಸಾಲವನ್ನು ಮರು ಹೊಂದಾಣಿಕೆ ಮಾಡುವಂತೆ ಶ್ರೀಲಂಕಾ ಮಾಡಿದ್ದ ಮನವಿಯನ್ನು ಚೀನಾ ತಿರಸ್ಕರಿಸಿದೆ. ಹೊಸದಾಗಿ ₹7,500 ಕೋಟಿ (100 ಕೋಟಿ ಡಾಲರ್) ಸಾಲ ನೀಡುವಂತೆ ಶ್ರೀಲಂಕಾ ಮಾಡಿರುವ ಮನವಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಶ್ರೀಲಂಕಾದಲ್ಲಿರುವ ಚೀನಾದ ರಾಯಭಾರಿ ಹೇಳಿದ್ದಾರೆ. ಸಾಲ ಮರುಹೊಂದಾಣಿಕೆಗೆ ಸಿದ್ಧವಿಲ್ಲದ ಚೀನಾ, ಹೊಸ ಸಾಲ ನೀಡಲು ಮುಂದಾಗಿದೆ. ಇದು ದೇಶವನ್ನು ಸಾಲದಕೂಪಕ್ಕೆ ತಳ್ಳುವ ಯತ್ನ ಎಂದು ವಿಶ್ಲೇಷಿಸಲಾಗಿದೆ.ಶ್ರೀಲಂಕಾ ತಾನು ಗಳಿಸಿದ ಎಲ್ಲ ಆದಾಯವನ್ನು ವಿದೇಶಗಳಿಂದ ಮಾಡಿದ್ದ ಸಾಲ ಮರುಪಾವತಿಗೆ ಬಳಕೆ ಮಾಡಿದ್ದರಿಂದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ.

ಸಾವಯವ ನೀತಿಯ ವೈಫಲ್ಯ

‘ಶ್ರೀಲಂಕಾವನ್ನು ಜಗತ್ತಿನ ಮೊದಲ ಸಾವಯವ ದೇಶವನ್ನಾಗಿ ಮಾಡುತ್ತೇನೆ’ ಎಂಬುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗೊಟಬಯ ರಾಜಪಕ್ಸ ಅವರು ಚುನಾವಣೆಯಲ್ಲಿ ಗೆದ್ದ ಬಳಿಕ ಆ ದಿಸೆಯಲ್ಲಿ ಕ್ರಮ ಕೈಗೊಂಡರು. ಚುನಾವಣೆ ನಡೆದು ಕೆಲವು ತಿಂಗಳು ಕಳೆಯುವ ಹೊತ್ತಿಗೆ ಕೋವಿಡ್ ಕಾಲಿಟ್ಟಿತು. ಆದರೆ ಗೊಟಬಯ ಅವರು ತಮ್ಮ ದೇಶವನ್ನು ಸಾವಯವ ದೇಶವನ್ನಾಗಿ ಮಾಡುವ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ. ದೇಶದ ಸಂಕಷ್ಟದ ಸ್ಥಿತಿಗೆ ಗೊಟಬಯ ಅವರ ಸಾವಯವ ನೀತಿಯೂ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಸುಮಾರು 20 ಲಕ್ಷ ರೈತರು ಇರುವ ಶ್ರೀಲಂಕಾದಲ್ಲಿ ರಾಸಾಯನಿಕ ರಸಗೊಬ್ಬರಗಳ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿದ್ದರಿಂದ ಮೂರನೇ ಒಂದು ಭಾಗದಷ್ಟು ಕೃಷಿ ಜಮೀನು ಬರಡಾಯಿತು. ದೇಶಕ್ಕೆ ಅಗತ್ಯಕ್ಕೆ ತಕ್ಕಷ್ಟು ಅಕ್ಕಿಯನ್ನು ಪೂರೈಸುತ್ತಿದ್ದ ಅಕ್ಕಿ ಉದ್ಯಮವು, ರಸಗೊಬ್ಬರಗಳ ಮೇಲೆ ನಿಷೇಧ ಹೇರಿ ಆರು ತಿಂಗಳು ಕಳೆಯುವಷ್ಟರಲ್ಲಿ ಶೇ 20ರಷ್ಟು ಕುಸಿತ ದಾಖಲಿಸಿತು. ಉತ್ಪಾದನೆ ಕುಗ್ಗಿದ್ದರಿಂದ, ಸರ್ಕಾರವು ಅನಿವಾರ್ಯ ವಾಗಿ ಸುಮಾರು ₹3 ಸಾವಿರ ಕೋಟಿ ಮೌಲ್ಯದ ಅಕ್ಕಿಯನ್ನು ವಿದೇಶಗಳಿಂದ ಆಮದು ಮಾಡಿಕೊಂಡಿತು. ದೇಶದಲ್ಲಿ ಅಕ್ಕಿ ದರ ಶೇ 50ರಷ್ಟು ಹೆಚ್ಚಾಗಿ, ಜನರು ಅಕ್ಕಿ ಖರೀದಿಸಲು ಪರದಾಡಿದರು.ಬರಪೀಡಿತ ಹಾಗೂ ಬೆಳೆ ವೈಫಲ್ಯ ಎದುರಿಸಿದ ರೈತರ ಜಮೀನುಗಳಿಗೆ ಪರಿಹಾರವಾಗಿಸರ್ಕಾರವು ₹1,500 ಕೋಟಿ ಪಾವತಿಸುತ್ತಿದೆ. ನಷ್ಟ ಅನುಭವಿಸಿದ ಭತ್ತ ಬೆಳೆಗಾರರು ಹಾಗೂ ಆಹಾರ ಸಹಾಯಧನಕ್ಕಾಗಿ ಸರ್ಕಾರವು ಸುಮಾರು₹1,110 ಕೋಟಿ ಪಾವತಿಸುತ್ತಿದೆ. ಕೃಷಿ ಪ್ರಧಾನ ದೇಶವಾಗಿದ್ದ ಶ್ರೀಲಂಕಾವು ಸಾವಯವ ನೀತಿ, ಬೆಳೆ ವೈಫಲ್ಯ, ಪರಿಹಾರ ಮೊದಲಾದ ಕಾರಣಗಳಿಂದ ನೆಲ ಕಚ್ಚುವ ಹಂತಕ್ಕೆ ತಲುಪಿದೆ.

ತೆರಿಗೆ ಕಡಿತದ ಬರೆ!

ದೇಶದ ತೆರಿಗೆ ಸಂಗ್ರಹ ನೀತಿಯನ್ನು ಬದಲಿಸಿದ್ದು ಶ್ರೀಲಂಕಾದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ನೀಡಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ರೀತಿಯ ತೆರಿಗೆಗಳ ದರವನ್ನು ಕಡಿತ ಮಾಡಿತು ಮತ್ತು ಕೆಲವು ತೆರಿಗೆಗಳನ್ನು ರದ್ದು ಮಾಡಿತು. ಸಾವಿರಾರು ಕೋಟಿ ಬಂಡವಾಳದ ರೂಪದಲ್ಲಿ ಚೀನಾ ನೀಡಿದ್ದ ಸಾಲದ ಋಣವನ್ನು ತೀರಿಸುವ ಸಲುವಾಗಿ, ಚೀನಾದಿಂದ ಆಮದಾಗುವ ವಸ್ತುಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಯಿತು.

ಕಡಿಮೆ ಬೆಲೆಗೆ ಬಂದು ಬಿದ್ದ ಚೀನಾದ ವಸ್ತುಗಳು, ದೇಶೀಯ ಉದ್ಯಮಗಳ ಕತ್ತು ಹಿಸುಕಿದವು. ಈ ಪರಿಸ್ಥಿತಿ ಅರ್ಥವಾಗುವಷ್ಟರಲ್ಲಿ ದೇಶದ ತೆರಿಗೆ ಆದಾಯ ಸಂಪೂರ್ಣ ಕುಸಿದು ಹೋಗಿತ್ತು. ಜತೆಗೆ ಹಣದುಬ್ಬರವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಹಣದುಬ್ಬರವನ್ನು ನಿಯಂತ್ರಿಸುವ ಮತ್ತು ಜನರಲ್ಲಿ ಹಣ ಉಳಿಯಲಿ ಎಂಬ ಉದ್ದೇಶದಿಂದ ಸರ್ಕಾರವು ಮತ್ತೆ ತೆರಿಗೆ ಕಡಿತ ಮಾಡಿತು. ಇದು ವ್ಯತಿರಿಕ್ತ ಪರಿಣಾಮ ಬೀರಿತು. ಸರ್ಕಾರದ ತೆರಿಗೆ ಆದಾಯ ಖೋತಾ ಆಯಿತು. ವಿದೇಶಿ ವಿನಿಮಯ ನಿಧಿ ಕರಗಿತು. ಅಗತ್ಯ ವಸ್ತುಗಳ ಕೊರತೆಯಿಂದಾಗಿ ಅವುಗಳ ಬೆಲೆ ಏರಿಕೆಯಾಯಿತು. ಪರಿಣಾಮವಾಗಿ ಜನರ ಬಳಿಯೂ ಹಣ ಉಳಿಯಲಿಲ್ಲ. ಸರ್ಕಾರವೂ ದಿವಾಳಿಯಾಯಿತು.

ಬಾಂಬ್ ದಾಳಿಯ ಪರಿಣಾಮ

ರಾಜಕೀಯ ಅಸ್ಥಿರತೆ, ಸಾಲ, ವಿದೇಶಿ ಹೂಡಿಕೆ, ನಿರುದ್ಯೋಗ ಮೊದಲಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದ ಶ್ರೀಲಂಕಾದ ಆರ್ಥಿಕತೆಗೆ ಕೊಡಲಿ ಏಟು ನೀಡಿದ್ದು 2018ರಲ್ಲಿ ನಡೆದ ಆತ್ಮಾಹುತಿ ದಾಳಿ. ಈಸ್ಟರ್ ಹಬ್ಬದಂದು ನಡೆದ ಈ ದುರಂತದಲ್ಲಿ ಸುಮಾರು 250 ಜನರು ಮೃತಪಟ್ಟಿದ್ದರು.ಚೀನಾ, ಭಾರತ, ಅಮೆರಿಕ ಸೇರಿದಂತೆ ವಿದೇಶಗಳ 45 ಪ್ರವಾಸಿಗರೂ ಘಟನೆಯಲ್ಲಿ ಮೃತಪಟ್ಟಿದ್ದರು. ಚರ್ಚ್‌ಗಳು ಹಾಗೂ ಪಂಚತಾರಾ ಹೋಟೆಲ್‌ಗಳಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು.ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಬಾಂಬ್ ಸ್ಫೋಟದ ಭೀತಿಯಿಂದ ಶೇ 70ರಷ್ಟು ಕುಸಿಯಿತು. ಹೋಟೆಲ್ ಹಾಗೂ ಸಾರಿಗೆ ಉದ್ಯಮಗಳನ್ನು ನೆಚ್ಚಿಕೊಂಡಿದ್ದ ಜನರು ಅಕ್ಷರಶಃ ಬೀದಿಗೆ ಬಿದ್ದರು. ವಿದೇಶಿ ನೇರ ಬಂಡವಾಳ ಹೂಡಿಕೆಯೂ ಕಡಿಮೆಯಾಯಿತು.

ಲಂಕೆಗೆ ಬೆಂಕಿ ಹಚ್ಚಿದ ಕೋವಿಡ್

2019ರಲ್ಲಿ ಜಗತ್ತಿಗೆ ಕಾಲಿಟ್ಟ ಕೊರೊನಾ ವೈರಸ್ ಶ್ರೀಲಂಕಾದಲ್ಲೂ ತನ್ನ ಪ್ರತಾಪ ತೋರಿಸಿತು. ಪುಟ್ಟ ರಾಷ್ಟ್ರದಲ್ಲಿ ಸಾಂಕ್ರಾಮಿಕದ ತೀವ್ರತೆಯನ್ನು ಸಮರ್ಥವಾಗಿ ಎದುರಿಸುವಷ್ಟು ಆರೋಗ್ಯ ಮೂಲಸೌಕರ್ಯಗಳು ಇರಲಿಲ್ಲ. ವಿಶ್ವಬ್ಯಾಂಕ್ ವರದಿ ಪ್ರಕಾರ, ಕೋವಿಡ್ ಬಳಿಕ ದೇಶದಲ್ಲಿ 5 ಲಕ್ಷ ಜನರು ಬಡತನಕ್ಕೆ ಒಳಗಾಗಿದ್ದಾರೆ. ಕೋವಿಡ್ ಕಾರಣದಿಂದ ಜನರು ಕೆಲಸ ಕಳೆದುಕೊಂಡರು. ಉದ್ಯಮಗಳು ನೆಲಕಚ್ಚಿದ್ದರಿಂದ ನಿರುದ್ಯೋಗ ತೀವ್ರವಾಗಿ ಕಾಡಿತು.

ಪ್ರವಾಸೋದ್ಯಮದ ಹೊಡೆತ:ದ್ವೀಪರಾಷ್ಟ್ರ ನೆಚ್ಚಿಕೊಂಡಿರುವ ಪ್ರವಾಸೋದ್ಯಮವು ಕೋವಿಡ್‌ನಿಂದ ತೀವ್ರ ಆಘಾತ ಎದುರಿಸಿತು. 2018ರಲ್ಲಿ ದೇಶಕ್ಕೆ 5 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು ಈವರೆಗಿನ ದಾಖಲೆ. ಸಾಂಕ್ರಾಮಿಕಕ್ಕೂ ಮುನ್ನ ಶ್ರೀಲಂಕಾ ಪ್ರವಾಸೋದ್ಯಮವು ಸುಮಾರು ₹37 ಸಾವಿರ ಕೋಟಿ ವಿದೇಶಿ ವಿನಿಮಯ ಗಳಿಕೆ ದಾಖಲಿಸಿತ್ತು. ಆದರೆ, ಕೋವಿಡ್ ಕಾರಣ ಪ್ರವಾಸಿಗರ ಸಂಖ್ಯೆ ಕುಸಿಯಿತು. ತನ್ಮೂಲಕ, ಶ್ರೀಲಂಕಾದ ವಿದೇಶಿ ವಿನಿಮಯ ಗಳಿಕೆ ನಿಂತುಹೋಯಿತು.

(ಆಧಾರ: ಎಎಫ್‌ಪಿ, ಎಪಿ, ರಾಯಿಟರ್ಸ್‌, ಬಿಬಿಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT