ಶನಿವಾರ, ಮೇ 30, 2020
27 °C

Explainer | ದೇವರಿಗಿಲ್ಲ ಭಕ್ತರ ದರ್ಶನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದ ಪ್ರಮುಖ ದೇವಸ್ಥಾನಗಳೆಲ್ಲ ಈಗ ಭಣಗುಡುತ್ತಿವೆ. ಮಧ್ಯರಾತ್ರಿಯಾದರೂ ಕರಗದ ಭಕ್ತರ ಸಾಲುಗಳಿಗೆ ಸದಾ ತೆರೆದಿರುತ್ತಿದ್ದ ಅವುಗಳ ಬಾಗಿಲುಗಳು ಈಗ ನಿತ್ಯದ ಪೂಜೆಗೆ ಮಾತ್ರ ತೆರೆಯುತ್ತಿವೆ. ವಿಶೇಷ ಉತ್ಸವ, ಪೂಜೆಗಳನ್ನೆಲ್ಲ ರದ್ದುಪಡಿಸಲಾಗಿದೆ. ಕೊರೊನಾ ಸಂಕಷ್ಟ ವ್ಯಾಪಿಸಿದ ಬಳಿಕ ಬದಲಾಗಿರುವ ಅಂತಹ ಕೆಲವು ದೇವಸ್ಥಾನಗಳ ಈಗಿನ ಚಿತ್ರಣ ಇಲ್ಲಿದೆ...

ಭಣಗುಡುತ್ತಿದೆ ಸ್ವರ್ಣ ಮಂದಿರ

ಸಿಖ್ಖರ ಪವಿತ್ರ ಕ್ಷೇತ್ರವಾದ ಅಮೃತಸರದ ಸ್ವರ್ಣ ಮಂದಿರ (ಗೋಲ್ಡನ್‌ ಟೆಂಪಲ್‌) ಗುರುದ್ವಾರವು, ದಿಗ್ಬಂಧನದ ಪರಿಣಾಮವಾಗಿ ಭಕ್ತರಿಲ್ಲದೆ ಭಣಗುಡುತ್ತಿದೆ. ಏಪ್ರಿಲ್ ಎರಡನೇ ವಾರದಲ್ಲಿ ಬೈಸಾಕಿ ಹಬ್ಬದ ಸಲುವಾಗಿ ಇಲ್ಲಿ ನಡೆಯಲಿದ್ದ ವಿಶೇಷ ಪೂಜೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳಬೇಕಿತ್ತು. ದಿಗ್ಬಂಧನ ಇರುವ ಕಾರಣ, ವಿಶೇಷ ಪೂಜೆಯನ್ನಷ್ಟೇ ನಡೆಸಲಾಗಿದೆ. ಈ ಗುರುದ್ವಾರಕ್ಕೆ ಸಿಖ್ಖರು, ಹಿಂದೂಗಳು ಮತ್ತು ಮುಸ್ಲಿಂ ಪ್ರವಾಸಿಗರು ಭೇಟಿ ನೀಡುತ್ತಾರೆ. ಜಗತ್ತಿನಲ್ಲೇ ಪ್ರತಿದಿನ ಅತಿಹೆಚ್ಚು ಜನರು ಭೇಟಿ ನೀಡುವ ಗುರುದ್ವಾರವಿದು. ಆದರೆ, ಈಗ ಅದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಹೀಗಾಗಿ ಸದಾ ಗಿಜಿಗಿಡುತ್ತಿದ್ದ ಸ್ವರ್ಣ ಮಂದಿರ ಗುರುದ್ವಾರವು ನಿರ್ಜನವಾಗಿದೆ. ಈ ಮಂದಿರಕ್ಕೆ ಪ್ರತಿದಿನ ಭೇಟಿ ನೀಡುತ್ತಿದ್ದ ಭಕ್ತರ ಸರಾಸರಿ ಸಂಖ್ಯೆ 1 ಲಕ್ಷ.

ಆರಂಭವಾಗಿಲ್ಲ ಕೇದಾರನಾಥ ಯಾತ್ರೆ

ಪ್ರತಿವರ್ಷ ಏಪ್ರಿಲ್ ಕೊನೆಯ ವಾರದಲ್ಲಿ ಚಾರ್‌ಧಾಮ್ ಯಾತ್ರೆ ಆರಂಭವಾಗುತ್ತದೆ. ಚಾರ್‌ಧಾಮ್ ಅಥವಾ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿಮೊದಲು ತೆರೆಯುವುದು ಕೇದಾರನಾಥ. ಹಿಮಮುಸುಕಿದ ಪರ್ವತಗಳ ಕಣಿವೆಯಲ್ಲಿ ಇರುವ ಈ ದೇವಾಲಯವು ಬರುವ ಏಪ್ರಿಲ್ 29ಕ್ಕೆ ಬಾಗಿಲು ತೆರೆಯಬೇಕಿತ್ತು. ದೇವಾಲಯ ಮಂಡಳಿಯ ನೌಕರರು ಏಪ್ರಿಲ್ 5ರಿಂದಲೇ ಕೆಲಸ ಆರಂಭಿಸಬೇಕಿತ್ತು. ಕೇದಾರನಾಥ ಯಾತ್ರೆಯ ಹಾದಿಯನ್ನು ಸಜ್ಜುಗೊಳಿಸಬೇಕಿತ್ತು. ವೃದ್ಧ ಭಕ್ತರನ್ನು ಕರೆದೊಯ್ಯುವ ಡೋಲಿ ಮತ್ತು ಕುದುರೆಗಳ ವ್ಯವಸ್ಥೆ ಮಾಡಬೇಕಿತ್ತು. ದೇವಾಲಯದ ಸಮೀಪ ವಸತಿ ಗೃಹಗಳು, ಸ್ನಾನಗೃಹ ಮತ್ತು ಶೌಚಾಲಯಗಳನ್ನು ಸಜ್ಜುಗೊಳಿಸಬೇಕಿತ್ತು. ಆದರೆ, ಲೌಕ್‌ಡೌನ್ ಪರಿಣಾಮವಾಗಿ ಈ ಯಾವ ಕೆಲಸಗಳೂ ಆಗಿಲ್ಲ. ಹೀಗಾಗಿ ಲಾಕ್‌ಡೌನ್ ಮುಗಿದ ಬಳಿಕ ದೇವಾಲಯ ಯಾವಾಗ ಬಾಗಿಲು ತೆಗೆಯುವುದು ಎಂಬುದು ಅನಿಶ್ಚಿತವಾಗಿದೆ.

ವೈಷ್ಣೋದೇವಿ ಯಾತ್ರೆ ಮೊಟಕು

ದೇಶದ ಅತ್ಯಂತ ಪ್ರಮುಖ ದೇವಸ್ಥಾನಗಳಲ್ಲಿ ಒಂದೆನಿಸಿದ ಜಮ್ಮು–ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಾಲಯದ ಯಾತ್ರೆಗೂ ಈಗ ನಿರ್ಬಂಧ ವಿಧಿಸಲಾಗಿದೆ. ದೇವಸ್ಥಾನಕ್ಕೆ ಹೋಗುವ ಎಲ್ಲ ದಾರಿಗಳನ್ನು ಬಂದ್‌ ಮಾಡಲಾಗಿದ್ದು, ನಿತ್ಯದ ವಿಧಿಗಳಷ್ಟೆ ನಡೆಯುತ್ತಿವೆ. ಭಕ್ತರಿಗೂ ವೈಷ್ಣೋದೇವಿ ದರ್ಶನಕ್ಕೆ ಅವಕಾಶವಿಲ್ಲ. ಲಾಕ್‌ಡೌನ್‌ಗೆ ಮುಂಚೆ ಈ ದೇವಸ್ಥಾನದಲ್ಲಿ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಭಕ್ತರನ್ನು ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಿದ ಬಳಿಕ ಒಳಗೆ ಬಿಡಲಾಗುತ್ತಿತ್ತು. ಆದರೆ, ದೇಶದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು, ಯಾತ್ರೆಗೆ ನಿರ್ಬಂಧ ವಿಧಿಸಿದ ಕಾರಣ ವೈಷ್ಣೋದೇವಿ ದರ್ಶನ ಪಡೆಯಲಾಗದೆ ವಾಪಸ್‌ ಹೋಗಬೇಕಾಗಿದೆ.

ರಾಜ್ಯದಲ್ಲೂ ಇಲ್ಲ ಉತ್ಸವ

ರಾಜ್ಯದ ಪ್ರಮುಖ ದೇವಾಲಯಗಳೂ ಕೊರೊನಾ ಕಾರಣದಿಂದ ಬಿಕೋ ಎನ್ನುತ್ತಿವೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಧರ್ಮಸ್ಥಳ, ಉಡುಪಿ, ಕೊಲ್ಲೂರು, ಮುರಡೇಶ್ವರ, ಗೋಕರ್ಣ, ಕಟೀಲು, ಸುಬ್ರಹ್ಮಣ್ಯ, ಸಿಗಂದೂರು, ಶೃಂಗೇರಿ, ಮೈಸೂರಿನ ಚಾಮುಂಡಿಬೆಟ್ಟ, ನಂಜನಗೂಡು, ಹೊರನಾಡು, ಶಿರಸಿ, ಬಾದಾಮಿ ಬನಶಂಕರಿ ದೇವಾಲಯಗಳು ಭಕ್ತರಿಲ್ಲದೆ, ಉತ್ಸವಗಳಿಲ್ಲದೆ ನಿತ್ಯದ ಪೂಜೆಗೆ ಮಾತ್ರ ಸೀಮಿತವಾಗಿವೆ.

ತಿರುಮಲ: ಇಲ್ಲ ಉತ್ಸವದ ಕಳೆ

ಆಂಧ್ರಪ್ರದೇಶದ ತಿರುಮಲದ ವೆಂಕಟೇಶ್ವರನ ದರ್ಶನಕ್ಕಾಗಿ ಈ ಹಿಂದೆ ಭಕ್ತರು ಸಾಮಾನ್ಯ ಸರದಿಯಲ್ಲಿ ದಿನಗಟ್ಟಲೆ ಕಾಯಬೇಕಿತ್ತು. ಜೇನುಗೂಡಿಗೆ ನೊಣಗಳು ಮುತ್ತಿಕ್ಕುವಂತೆ ಭಕ್ತರು ಹಗಲು–ರಾತ್ರಿ ಎನ್ನದೆ ತಿಮ್ಮಪ್ಪನ ದರ್ಶನಕ್ಕೆ ಮುಗಿ ಬೀಳುತ್ತಿದ್ದರು. ಆದರೆ, ಕೊರೊನಾ ವೈರಸ್‌ ಕಾರಣದಿಂದ ಮಾರ್ಚ್‌ 20ರಿಂದಲೇ ಭಕ್ತರಿಗೆ ತಿಮ್ಮಪ್ಪನ ದರ್ಶನ ಬಂದ್‌ ಆಗಿದೆ. ಯುಗಾದಿ ಉತ್ಸವ, ಬ್ರಹ್ಮೋತ್ಸವ, ಕಲ್ಯಾಣೋತ್ಸವಗಳು ಸದ್ದಿಲ್ಲದೆ ಮುಗಿದಿವೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ ಹಿಂದೆಂದಿಗೂ ಇಷ್ಟೊಂದು ದಿನ ಭಕ್ತರಿಗೆ ಬಾಗಿಲು ಮುಚ್ಚಿದ ಉದಾಹರಣೆ ಇಲ್ಲವಂತೆ. ತಿರುಪತಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದ್ದು, ತಿರುಪತಿಯಿಂದ ತಿರುಮಲಕ್ಕೆ ಹೋಗುವ ಬೆಟ್ಟದ ಮಾರ್ಗವನ್ನೂ ಸೀಲ್‌ಡೌನ್‌ ಮಾಡಲಾಗಿದೆ. ಈ ದೇವಸ್ಥಾನಕ್ಕೆ ಪ್ರತಿದಿನ ಭೇಟಿ ನೀಡುತ್ತಿದ್ದ ಭಕ್ತರ ಸರಾಸರಿ ಸಂಖ್ಯೆ 78,000.

ಕಾಶಿಯಲ್ಲಿ ಕಾರಿಡಾರ್ ಕಾಮಗಾರಿ

ಶಿವನ ಅತ್ಯಂತ ಪವಿತ್ರ ಕ್ಷೇತ್ರವೆಂದು ಭಾವಿಸಲಾದ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೂ ಲಾಕ್‌ಡೌನ್ ಬಿಸಿ ಮುಟ್ಟಿದೆ. ಕಾಶಿನ ಸಣ್ಣ ಗಲ್ಲಿಗಳನ್ನು ಹಾದು, ಈ ದೇವಾಲಯವನ್ನು ಮುಟ್ಟಬೇಕಿದೆ. ಹೀಗಾಗಿ ಪ್ರತಿದಿನ ಇಲ್ಲಿಗೆ ಭೇಟಿ ನೀಡಬಹುದಾದ ಭಕ್ತರ ಸಂಖ್ಯೆಯೂ ಸೀಮಿತ. ತಡರಾತ್ರಿ 2.50ಕ್ಕೆ ಮೊದಲ ಆರತಿ ಆರಂಭವಾಗುತ್ತದೆ. ಕೊನೆಯ ಮತ್ತು ಐದನೆಯ ಆರತಿ ರಾತ್ರಿ 11ಕ್ಕೆ ಕೊನೆಯಾಗುತ್ತದೆ. ಪ್ರತಿನಿತ್ಯ ಐದೂ ಆರತಿಗಳ ವೇಳೆ ದೇವಾಲಯಕ್ಕೆ ಭೇಟಿ ನೀಡುವವರ ಗರಿಷ್ಠ ಸಂಖ್ಯೆ 3,000 ಮಾತ್ರ. ಸಣ್ಣ ಗಲ್ಲಿಗಳನ್ನು ಹಾದು ಹೋಗಬೇಕಿರುವ ಕಾರಣ, 3,000 ಮಂದಿ ದರ್ಶನ ಪಡೆಯಲೂ ಉದ್ದದ ಸಾಲುಗಳಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಕೊರೊನಾವೈರಸ್ ದಿಗ್ಬಂಧನ ಸಲುವಾಗಿ ದೇವಾಲಯಕ್ಕೆ ಭಕ್ತರ ಭೇಟಿ ನಿಲ್ಲಿಸಲಾಗಿದೆ. ದೇವಾಲಯದದಲ್ಲಿ ಪೂಜೆಯಷ್ಟೇ ನಡೆಯುತ್ತಿದೆ.
ಕಾಶಿ ವಿಶ್ವನಾಥ ದೇವಾಲಯ ಕಾರಿಡಾರ್ ಕಾಮಗಾರಿ ಸಹ ಲಾಕ್‌ಡೌನ್ ಸಲುವಾಗಿ ಸ್ಥಗಿತಗೊಂಡಿತ್ತು. ಆದರೆ, ಇದೇ ವಾರದಲ್ಲಿ ಕಾಮಗಾರಿ ಮತ್ತೆ ಆರಂಭಿಸಲು ಸಿದ್ಧತೆ ನಡೆದಿದೆ. ಈ ದೇವಸ್ಥಾನಕ್ಕೆ ಪ್ರತಿದಿನ ಭೇಟಿ ನೀಡುತ್ತಿದ್ದ ಭಕ್ತರ ಸರಾಸರಿ ಸಂಖ್ಯೆ 3000.

ದರ್ಗಾದಲ್ಲಿ ಸೂಫಿ ಸಂಗೀತದ ಸುಳಿವಿಲ್ಲ

ರಾಜಸ್ಥಾನದ ಅಜ್ಮೀರ್‌ನ ಸೂಫಿ ಸಂತ ಮೊಯಿನುದ್ದೀನ್‌ ಚಿಸ್ತಿ ದರ್ಗಾ ಸಹ ಮುಚ್ಚಿದೆ. ನಿತ್ಯದ ಕೆಲವು ವಿಧಿಗಳನ್ನು ಬಿಟ್ಟರೆ, ಅಲ್ಲಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುಸ್ಲಿಮರು ಮಾತ್ರವಲ್ಲದೆ ಸಿಖ್ಖರು ಮತ್ತು ಹಿಂದೂಗಳು ಈ ದರ್ಗಾಕ್ಕೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವುದು ರೂಢಿ. ಚಾದರ್‌, ಪುಷ್ಪ ಸಮರ್ಪಣೆಗೆ ಜನ ನಿತ್ಯ ಸಾಲುಗಟ್ಟಿ ನಿಲ್ಲುತ್ತಿದ್ದ ಈ ದರ್ಗಾ ಈಗ ಭಣಗುಡುತ್ತಿದೆ. ಸದಾ ಅಲೆ, ಅಲೆಯಾಗಿ ತೇಲಿ ಬರುತ್ತಿದ್ದ ಸೂಫಿ ಸಂಗೀತದ ಸುಳಿವೂ ಅಲ್ಲಿಲ್ಲ.

ವೃಂದಾವನದಲ್ಲಿ ಕೇಳದ ಕೃಷ್ಣಲೀಲಾ

ಉತ್ತರ ಪ್ರದೇಶದ ಮಥುರಾ ಸಮೀಪವಿರುವ ವೃಂದಾವನವು ಶ್ರೀ ಕೃಷ್ಣನ ಬಾಲ್ಯದ ದಿನಗಳು ಕಳೆದ ಪವಿತ್ರ ಕ್ಷೇತ್ರ. ಕೃಷ್ಣ ಜನ್ಮ ತಳೆದ ಮಥುರಾದ ಕಂಸನ ಅರಮನೆಯ ಸೆರೆಮನೆ, ವೃಂದಾವನದ ನೂರಾರು ದೇವಾಲಯಗಳು ಮತ್ತು ಗೋವರ್ಧನ ಗಿರಿಯಲ್ಲಿ ವರ್ಷಪೂರ್ತಿ ಸಾವಿರಾರು ಭಕ್ತರು ನೆರೆದಿರುತ್ತಾರೆ. ವೃಂದಾವನದ ಮೂರಡಿ ಅಗಲದ ಗಲ್ಲಿಗಳನ್ನು ಹಾದು, ಹಲವು ದೇವಾಲಯಗಳನ್ನು
ಮುಟ್ಟಬೇಕಿದೆ. ಇಡೀ ವೃಂದಾವನ ಮತ್ತು ಗೋವರ್ಧನವನ್ನು ನಡೆದು ಪ್ರದಕ್ಷಿಣೆ ಬರುವವರಿದ್ದಾರೆ. ವೃಂದಾವನದ ವಿಧವೆಯವರು ಪ್ರದಕ್ಷಣೆಯ ಪಥದಲ್ಲಿ ಕೃಷ್ಣಲೀಲೆಗಳನ್ನು ಭಜಿಸುತ್ತಾರೆ. ಅಲ್ಲಲ್ಲಿ ದಾಸೋಹವೂ ನಡೆಯುತ್ತಿರುತ್ತದೆ. ಲಾಕ್‌ಡೌನ್ ಪರಿಣಾಮವಾಗಿ ಇವೆಲ್ಲವೂ ಸ್ಥಗಿತವಾಗಿದೆ. ಅಂತರ ಕಾಯ್ದುಕೊಳ್ಳುವಿಕೆ ಸಲುವಾಗಿ ವೃಂದಾವನದ ಇಕ್ಕಟ್ಟಿನ ಗಲ್ಲಿಗಳಲ್ಲಿ ಕೆಲವನ್ನು ಸೀಲ್ ಮಾಡಲಾಗಿದೆ. ಮಥುರಾ ಮತ್ತು ಗೋವರ್ಧನದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು