ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಉತ್ತರ ಭಾರತದಲ್ಲಿ ನವರಾತ್ರಿ ಅವಧಿಯಲ್ಲಿ ಮಾಂಸದಂಗಡಿ ಬಂದ್‌ಗೆ ಆಗ್ರಹ

Last Updated 6 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

‘ನವರಾತ್ರಿ ಸಂದರ್ಭದಲ್ಲಿ ದಕ್ಷಿಣ ದೆಹಲಿಯಲ್ಲಿ ಮಾಂಸದ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡಬಾರದು. ನವರಾತ್ರಿ ಸಂದರ್ಭದಲ್ಲಿ ದೇವಾಲಯಕ್ಕೆ ಹೋಗುವಾಗ, ಮಾಂಸವನ್ನು ನೋಡಿದರೆ ಮತ್ತು ಅದರ ವಾಸನೆಯನ್ನು ಗ್ರಾಹಿಸಿದರೆ ಹಲವರ ಧಾರ್ಮಿಕ ಭಾವನೆಗಳಿಗೆ ನೋವಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಬೇಕು’ ಎಂದು ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯ ಬಿಜೆಪಿ ಮೇಯರ್ ಮುಖೇಶ್ ಸೂರ್ಯಾನ್‌ ಅವರು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಬರೆದ ಪತ್ರವು ಈಗ ಚರ್ಚೆಗೆ ಕಾರಣವಾಗಿದೆ. ಪೂರ್ವ ದೆಹಲಿ ಮಹಾನಗರ ಪಾಲಿಕೆಯ ಬಿಜೆಪಿ ಮೇಯರ್‌ ಸಹ ಇಂಥದ್ದೇ ಪತ್ರ ಬರೆದಿದ್ದಾರೆ. ಇದು ದೇಶದ ಜನರ ಆಹಾರದ ಹಕ್ಕಿನ ಉಲ್ಲಂಘನೆ ಎಂದು ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳ ನಾಯಕರು ಪ್ರತಿಪಾದಿಸಿದ್ದಾರೆ.

‘ನವರಾತ್ರಿ ಸಂದರ್ಭದಲ್ಲಿ ಹಿಂದೂಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನೂ ಸೇವಿಸುವುದಿಲ್ಲ. ಮದ್ಯವನ್ನೂ ಸೇವಿಸುವುದಿಲ್ಲ. ಇವೆಲ್ಲಾ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತವೆ’ ಎಂದೂ ಸೂರ್ಯಾನ್‌ ಅವರುಆಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರ ಪತ್ರದಲ್ಲಿನ ಎಲ್ಲಾ ಅಂಶಗಳೂ ಚರ್ಚೆಗೆ ಗ್ರಾಸವಾಗಿವೆ.ಸೂರ್ಯಾನ್ ಪತ್ರ ಬರೆದ ನಂತರ ದೆಹಲಿಯ ಮಾಂಸದ ಅಂಗಡಿಗಳ ಮಾಲೀಕರು, ಅಂಗಡಿಗಳನ್ನು ತೆರೆಯುವ ಗೋಜಿಗೆ ಹೋಗಿಲ್ಲ. ಈ ಬಗ್ಗೆ ಅಧಿಕೃತ ಆದೇಶ ಬರದೇ ಇದ್ದರೂ, ಪಾಲಿಕೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬಹುದು ಎಂಬ ಭಯದಲ್ಲಿ ಅಂಗಡಿಗಳನ್ನು ಮುಚ್ಚಿದ್ದಾರೆ.

ಸೂರ್ಯಾನ್ ಅವರು ಸೋಮವಾರವೇ ಈ ಪತ್ರ ಬರೆದಿದ್ದರೂ, ಅದು ಹೆಚ್ಚು ಚರ್ಚೆಗೆ ಗುರಿಯಾಗಿದ್ದು ಬುಧವಾರ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಪ್ರತಿಕ್ರಿಯಿಸಿದ ನಂತರ. ಮಹುವಾ ಅವರು, ‘ನಾನೂ ದಕ್ಷಿಣ ದೆಹಲಿಯ ನಿವಾಸಿ. ನಾನು ಬಯಸಿದಾಗ ಮಾಂಸ ತಿನ್ನುವ ಮತ್ತು ಅಂಗಡಿಯಾತ ಅಂಗಡಿ ನಡೆಸುವ ಹಕ್ಕನ್ನು ಸಂವಿಧಾನ ನೀಡಿದೆ. ಇಲ್ಲಿಗೆ ಪೂರ್ಣ ವಿರಾಮ’ ಎಂದು ಟ್ವೀಟ್ ಮಾಡಿದ್ದರು.

ಮಹುವಾ ಅವರ ಟ್ವೀಟ್‌ನ ನಂತರ ಹಲವರು, ಮಾಂಸಾಹಾರ ನಮ್ಮ ಹಕ್ಕು. ಅದನ್ನು ನವರಾತ್ರಿ ಸಂದರ್ಭದಲ್ಲೂ ನಿಷೇಧಿಸುವಂತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ. ಇನ್ನು ಕೆಲವರು, ‘ಹಿಂದೂಗಳಲ್ಲಿ ಹಲವರು ಮಾಂಸಾಹಾರ ಸೇವಿಸಿದರೂ ನವರಾತ್ರಿ ಸಂದರ್ಭದಲ್ಲಿ ಸಸ್ಯಾಹಾರ ಮಾತ್ರ ಸೇವಿಸುತ್ತಾರೆ. ಹೀಗಾಗಿ ಮಾಂಸ ಮಾರಾಟವನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಇದರ ಮಧ್ಯೆಯೇ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರು, ‘ದೆಹಲಿ ಮೇಯರ್‌ಗಳ ನಿರ್ಧಾರ ಸರಿಯಾಗಿದೆ. ದೆಹಲಿಗೆ ಮಾತ್ರವಲ್ಲ, ನವರಾತ್ರಿ ಸಂದರ್ಭದಲ್ಲಿ ಇಡೀ ದೇಶದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸಬೇಕು’ ಎಂದು ಕರೆ ನೀಡಿದ್ದರು.

ಅಲ್ಲಲ್ಲಿ ಕೆಲವರ ಕೂಗು

lಉತ್ತರ ಪ್ರದೇಶದ ಗಾಜಿಯಾಬಾದ್ ನಗರಾಡಳಿತವು ನವರಾತ್ರಿ ಅಂಗವಾಗಿ ಏ.2ರಿಂದ ಏ.10ರವರೆಗೆ ಮಾಂಸ ಮಾರಾಟ ನಿಷೇಧಿಸಿ ಶುಕ್ರವಾರ ಆದೇಶಿಸಿತ್ತು. ಇದನ್ನು ಪಾಲಿಸಲಾಗುತ್ತದೆಯೇ ಎಂದು ತಪಾಸಣೆ ನಡೆಸಲು ಆರು ತಂಡಗಳನ್ನೂ ರಚಿಸಿತ್ತು. ಇದು ಪ್ರತಿವರ್ಷದಂತೆ ಹೊರಡಿಸುವ ಆದೇಶವಾಗಿದ್ದು, ನವರಾತ್ರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಮೇಯರ್ ಸ್ಪಷ್ಟಪಡಿಸಿದ್ದರು. ಜಿಲ್ಲೆಯ ಐದು ವಲಯಗಳಲ್ಲಿರುವ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಕಾರಣ ನೀಡಿದ್ದರು.

lನಗರ ಪಂಚಾಯಿತಿಯಾಗಿ ಕಳೆದ ವರ್ಷ ಬಡ್ತಿ ಪಡೆದಿರುವ ಮಹಾರಾಷ್ಟ್ರದ ದೇಹು ನಗರ ಪಂಚಾಯಿತಿಯು ಹಸಿ ಮಾಂಸ, ಬೇಯಿಸಿದ ಮಾಂಸ ಮತ್ತು ಮೀನು ಮಾರಾಟದ ಮೇಲೆ ಮೂರು ದಿನಗಳ ಹಿಂದೆ ನಿರ್ಬಂಧ ಹೇರಿದೆ. ಈ ಆದೇಶ ಶುಕ್ರವಾರದಿಂದ ಜಾರಿಗೆ ಬರಲಿದೆ. ಪಂಚಾಯಿತಿ ಆಡಳಿತ ಅವಧಿ ಮುಕ್ತಾಯವಾಗುವವರೆಗೂ ಈ ಆದೇಶ ಜಾರಿಯಲ್ಲಿರಲಿದೆ ಎಂದು ನಗರ ಪಂಚಾಯಿತಿ ಸಿಇಒ ಪ್ರಶಾಂತ್ ಜಾಧವ್ ಹೇಳಿದ್ದರು.

lಮಧ್ಯ ಪ್ರದೇಶದ ಗದ್ವಾರ್‌ನಲ್ಲಿ ಬಜರಂಗದಳ ಕಾರ್ಯಕರ್ತರು ನವರಾತ್ರಿ ವೇಳೆ ಮಾಂಸದಂಗಡಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಇತ್ತೀಚೆಗೆ ಮೆರವಣಿಗೆ ನಡೆಸಿದ್ದರು. ಒಂದು ವೇಳೆ ಸರ್ಕಾರವು ಈ ನಿರ್ಧಾರ ತೆಗೆದುಕೊಳ್ಳದಿದ್ದರೆ, ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ಖಾಲಿ ಮಾಡಿಸುತ್ತೇವೆ ಎಂದು ಕಾರ್ಯಕರ್ತರು ಬೆದರಿಕೆ ಹಾಕಿದ್ದರು.

lಉತ್ತರ ಪ್ರದೇಶದ ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದಕುಮಾರ್ ಗುರ್ಜಾರ್ ಅವರು ‘ಕ್ಷೇತ್ರದಲ್ಲಿ ಒಂದೇ ಒಂದು ಮಾಂಸದಂಗಡಿ ಕಾಣಿಸುವಂತಿಲ್ಲ’ ಎಂದು ಇದೇಮಾರ್ಚ್‌ನಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ‘ಲೋನಿಯಲ್ಲಿ ರಾಮರಾಜ್ಯವಿದೆ. ಈ ರಾಮರಾಜ್ಯದಲ್ಲಿ ಮಾಂಸ ಮಾರಾಟ ಮಾಡಬಾರದು. ಅದರ ಬದಲು ಹಾಲು, ತುಪ್ಪ ಸೇವಿಸಿ. ನಿಮ್ಮ ಬಳಿ ಹಸು ಇಲ್ಲದಿದ್ದರೆ ನಾನು ಕಳುಹಿಸಿಕೊಡುತ್ತೇನೆ’ ಎಂದು ಜನರನ್ನು ಉದ್ದೇಶಿಸಿ ಹೇಳಿದ್ದರು.

l2021ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶ ಹಾಗೂ ಹರಿಯಾಣದಲ್ಲಿ ಸಂಯುಕ್ತ ಹಿಂದೂ ಸಂಘರ್ಷ ಸಮಿತಿಯಂತಹ ಬಲಪಂಥೀಯ ಗುಂಪುಗಳು ಮಾಂಸ ಮಾರಾಟಕ್ಕೆ ನಿಷೇಧ ಹೇರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಕೆಲವು ಕಾರ್ಯಕರ್ತರು ಮಾಂಸದಂಗಡಿಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ಮುಚ್ಚಿಸಿದ್ದರು. ಗುರುಗ್ರಾಮ ಉಪಆಯುಕ್ತರಿಗೆ ಪತ್ರ ಬರೆದಿದ್ದ ಸಂಘರ್ಷ ಸಮಿತಿಯು, ನವರಾತ್ರಿಯ ವೇಳೆ ಮಾಂಸಾಹಾರ ಮಾರಾಟದ ಅಂಗಡಿಗಳನ್ನು ಬಂದ್ ಮಾಡಲು ಆದೇಶಿಸುವಂತೆ ಕೋರಿತ್ತು. ಪರವಾನಗಿ ಇಲ್ಲದೆ ನಡೆಸಲಾಗುತ್ತಿರುವ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸುವಂತೆಯೂ ಆಗ್ರಹಿಸಿತ್ತು.

lಸಾರ್ವಜನಿಕವಾಗಿ ಕಾಣುವಂತೆ ಮಾಂಸದ ಖಾದ್ಯಗಳನ್ನು ಇಡುವುದರ ಮೇಲೆ ನಿರ್ಬಂಧ ವಿಧಿಸುವಂತೆ ಎಸ್‌ಡಿಎಂಸಿ ಮಂಡಿಸಿದ್ದ ಪ್ರಸ್ತಾವವನ್ನು 2017ರ ನವೆಂಬರ್‌ನಲ್ಲಿ, ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ಮುಖ್ಯಸ್ಥೆಯಾಗಿದ್ದ ಬಿಜೆಪಿಯ ಶಿಖಾ ರಾಯ್ ಅನುಮೋದಿಸಿದ್ದರು. ‘ಸ್ವಚ್ಛತೆಯನ್ನು ಕಾಪಾಡುವುದು ಮುಖ್ಯ. ಎಲ್ಲರೂ ಮಾಂಸಾಹಾರಿಗಳು ಆಗಿರುವುದಿಲ್ಲ. ಶಾಖಾಹಾರಿಗಳ ಭಾವನೆಗಳನ್ನು ಗೌರವಿಸಬೇಕು’ ಎಂದು ಅವರು ಪ್ರತಿಪಾದಿಸಿದ್ದರು. ಟಿ.ವಿ ಚರ್ಚೆಗಳಲ್ಲೂ ಭಾಗವಹಿಸಿದ್ದ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಸುದ್ದಿಯಾಗಿದ್ದರು.

lದೆಹಲಿಯ ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಉಣಬಡಿಸಲಾಗುತ್ತಿರುವ ಮಾಂಸದ ಖಾದ್ಯಗಳನ್ನು ‘ಹಲಾಲ್’ ಮಾದರಿಯಲ್ಲಿ ಕತ್ತರಿಸಲಾಗಿದೆಯೇ ಅಥವಾ ‘ಜಟ್ಕಾ’ ಮಾದರಿಯಲ್ಲಿ ಕತ್ತರಿಸಲಾಗಿದೆಯೇ ಎಂಬುದನ್ನು ಫಲಕಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು ಎಂದು 2018ರ ಆಗಸ್ಟ್‌ನಲ್ಲಿ, ಪೂರ್ವ ದೆಹಲಿ ಮಹಾನಗರ ಪಾಲಿಕೆ ನಿಯಮ ಹೊರಡಿಸಿತ್ತು. ನಂತರದ ವರ್ಷಗಳಲ್ಲಿ ಈ ನಿಯಮವನ್ನು ದಕ್ಷಿಣ ಹಾಗೂ ಉತ್ತರ ಮಹಾನಗರ ಪಾಲಿಕೆಗಳೂ ಜಾರಿಗೊಳಿಸಿದವು.

ಶೇ 71ಕ್ಕೂ ಹೆಚ್ಚು ಜನರು ಮಾಂಸಾಹಾರಿಗಳು

ದೇಶದ ಶೇ 71ಕ್ಕೂ ಹೆಚ್ಚು ಜನರು ಮಾಂಸಾಹಾರ ಸೇವಿಸುತ್ತಾರೆ ಎನ್ನುತ್ತದೆ ಕೇಂದ್ರ ಸರ್ಕಾರದ ‘ಸ್ಯಾಂಪಲ್‌ ರೆಜಿಸ್ಟ್ರೇಷನ್ ಸಿಸ್ಟಂ ಬೇಸ್‌ಲೈನ್‌ ಸಮೀಕ್ಷೆ–2014’ರ ವರದಿ. ದೇಶದಲ್ಲಿ ಸಸ್ಯಾಹಾರ ಮಾತ್ರ ಸೇವಿಸುವವರ ಪ್ರಮಾಣ ಶೇ 30ಕ್ಕಿಂತಲೂ ಕಡಿಮೆ ಇದೆ ಎಂದು ಈ ವರದಿಯ ದತ್ತಾಂಶಗಳು ಹೇಳುತ್ತವೆ. ದಕ್ಷಿಣ ಮತ್ತು ಪೂರ್ವ ದೆಹಲಿಯಲ್ಲಿ ಚೈತ್ರ ನವರಾತ್ರಿಯ ಸಂದರ್ಭದಲ್ಲಿ ಮಾಂಸದ ಅಂಗಡಿಗಳ ಬಾಗಿಲು ಮುಚ್ಚುವಂತೆ ಅಲ್ಲಿನ ಮೇಯರ್‌ಗಳು ಆದೇಶ ಹೊರಡಿಸಿದ ನಂತರ, ಈ ವರದಿಯ ದತ್ತಾಂಶಗಳು ಮತ್ತೆ ಚರ್ಚೆಗೆ ಬಂದಿವೆ. ಬಹುಸಂಖ್ಯಾತ ಮಾಂಸಾಹಾರಿಗಳು ಏನನ್ನು ತಿನ್ನಬೇಕು ಎಂಬುದನ್ನು ಅಲ್ಪಸಂಖ್ಯಾತರಾದ ಸಸ್ಯಾಹಾರಿಗಳು ನಿರ್ಧರಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಈ ವರದಿಯನ್ನು ಬಿಡುಗಡೆ ಮಾಡಿತ್ತು. ಬಿಜೆಪಿ ಸರ್ಕಾರದ್ದೇ ವರದಿಯ ಸತ್ಯಾಸತ್ಯತೆಯನ್ನು, ಬಿಜೆಪಿಯ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ‘ನೀನು ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ ಎಂಬುದನ್ನು ಯಾರೂ ಪ್ರಶ್ನಿಸಿಯೇ ಇಲ್ಲ. ಹೀಗಿದ್ದಾಗ ನಾನು ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ ಎಂಬುದನ್ನು ಯಾರು ಹೇಗೆ ನಿರ್ಧರಿಸಿದರು’ ಎಂದು ಬಿಜೆಪಿಯ ಹಲವು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಮಾಂಸಾಹಾರಿಗಳ ಸಂಖ್ಯೆ ಏರುತ್ತಿದೆ ಎಂಬ ಸುದ್ದಿ ನಿಜವೇ?

‘ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಇದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ (ಎನ್‌ಎಫ್‌ಎಚ್‌ಎಸ್) ವರದಿಗಳು ದೃಢಪಡಿಸಿವೆ’ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ‘ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆ ಶೇ 70ರಷ್ಟಿತ್ತು. ಆದರೆ, 2015–16ರ ವೇಳೆಗೆ ಈ ಪ್ರಮಾಣ ಶೇ 78ಕ್ಕೆ ಏರಿಕೆಯಾಗಿದೆ. ಭಾರತವು ಮಾಂಸಾಹಾರಿಗಳ ದೇಶವಾಗಿ ಬದಲಾಗುತ್ತಿದೆ’ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿರುವ ಮಾಂಸಾಹಾರಿಗಳು ಹಾಗೂ ಶಾಖಾಹಾರಿಗಳ ಸಂಖ್ಯೆಯನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿ ನೀಡುವುದಿಲ್ಲ. ಮಹಿಳೆಯರು ಹಾಗೂ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ದತ್ತಾಂಶಗಳು, ಸ್ಥೂಲಕಾಯ, ರಕ್ತಹೀನತೆ, ಹೆರಿಗೆ ಹಾಗೂ ಹೆರಿಗೆ ನಂತರದ ಸೌಲಭ್ಯಗಳು, ಲಸಿಕೆ ಮೊದಲಾದ 131 ಅಂಶಗಳ ಬಗ್ಗೆ ವರದಿ ಬೆಳಕು ಚೆಲ್ಲುತ್ತದೆಯೇ ವಿನಾ,ಮಾಂಸಾಹಾರಿಗಳು ಹಾಗೂ ಶಾಖಾಹಾರಿಗಳ ವಿವರ ಉಲ್ಲೇಖ ಮಾಡುವುದಿಲ್ಲ.

(ಆಧಾರ: ಪಿಟಿಐ, ಟ್ವಿಟರ್‌, ಸ್ಯಾಂಪಲ್‌ ರೆಜಿಸ್ಟ್ರೇಷನ್ ಸಿಸ್ಟಂ ಬೇಸ್‌ಲೈನ್‌ ಸಮೀಕ್ಷೆ–2014’ರ ವರದಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT