ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ಏನಿದು ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ ಯೋಜನೆ? ಇಲ್ಲಿದೆ ಮಾಹಿತಿ

Last Updated 13 ಡಿಸೆಂಬರ್ 2021, 12:13 IST
ಅಕ್ಷರ ಗಾತ್ರ

ವಾರಾಣಸಿಯ ಕೇಂದ್ರ ಭಾಗದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಕಾಶಿ ವಿಶ್ವನಾಥ ಕಾರಿಡಾರ್‌ನ ಮೊದಲನೇ ಹಂತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಡಿ.13) ಉದ್ಘಾಟಿಸಿದರು.

ಪ್ರಧಾನಮಂತ್ರಿಯವರ ಕನಸಿನ ಯೋಜನೆ ಎಂದು ಹೇಳಲಾದ ಈ ಕಾರಿಡಾರ್ 5,000 ಹೆಕ್ಟೇರ್ ಪ್ರದೇಶದಲ್ಲಿ ತಲೆ ಎತ್ತಲಿದೆ. ಮೊದಲ ಹಂತದ ಯೋಜನೆಯು 5 ಲಕ್ಷ ಚದರ ಅಡಿಗಳಲ್ಲಿ ರೂಪುಗೊಂಡಿದೆ. ಜನಸಂದಣಿ, ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದು, ದೇವಾಲಯದ ಸಂಕೀರ್ಣವನ್ನು ಅಭಿವೃದ್ಧಿಗೊಳಿಸುವುದು, ಈ ಮೂಲಕ ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬುವುದು ಈ ಯೋಜನೆಯ ಮುಖ್ಯ ಅಂಶ.

ಆಧ್ಯಾತ್ಮಿಕ ಕೇಂದ್ರದ ‘ಗತ ವೈಭವ’ವನ್ನು ಮರುಸ್ಥಾಪಿಸುವ ಉದ್ದೇಶದಿಂದ 2019 ರ ಮಾರ್ಚ್‌ನಲ್ಲಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಪ್ರಧಾನಿ ಪ್ರತಿನಿಧಿಸುವ ವಾರಾಣಸಿ ಸಂಸತ್‌ ಕ್ಷೇತ್ರದ ಈ ಯೋಜನೆಯ ಒಟ್ಟು ವೆಚ್ಚ ₹800 ಕೋಟಿಯಾಗಿದೆ.

ಪ್ರಧಾನಿ ಮೋದಿ ಅವರು ಸೋಮವಾರ ಉದ್ಘಾಟಿಸಿದ ಯೋಜನೆಯ ಮೊದಲ ಹಂತದ ವೆಚ್ಚ ₹399 ಕೋಟಿ ಆಗಿದೆ. ‘ಯೋಜನೆಯಿಂದ ಕಾಶಿಯ ಘನತೆ ಹೆಚ್ಚಲಿದೆ. ಮಾತ್ರವಲ್ಲದೆ ವಾರಣಾಸಿಯ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಯೋಜನೆಯ ನಂತರ ಪ್ರವಾಸೋದ್ಯಮ ಕ್ಷೇತ್ರವು ಗಮನಾರ್ಹವಾಗಿ ಬೆಳವಣಿಗೆ ಹೊಂದಲಿದೆ,’ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಸಚಿವ ನೀಲಕಂಠ ತಿವಾರಿ ಹೇಳಿದ್ದಾರೆ.

ವಿಶಾಲ ವ್ಯವಸ್ಥೆ

ವಾರಾಣಸಿಗೆ ಈ ಹಿಂದೆ ಭೇಟಿ ನೀಡಿದ ಎಲ್ಲರಿಗೆ ಅಲ್ಲಿನ ಇಕ್ಕಟ್ಟಾದ ರಸ್ತೆಗಳ ಕೆಟ್ಟ ಅನುಭವವಾಗಿದೆ. ಆದರೆ ಪ್ರಸ್ತುತ ಯೋಜನೆಯು ವಾರಾಣಸಿಯು ಯಾತ್ರಿಕರಿಗೆ, ಪ್ರವಾಸಿಗರಿಗೆ ಆರಾಮದಾಯಕ ಅನುಭವ ನೀಡಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಕಾಶಿ ವಿಶ್ವನಾಥ ದೇವಸ್ಥಾನದ ಬಳಿ 50 ಅಡಿಯ ಕಾರಿಡಾರ್ ನಿರ್ಮಾಣವಾಗಲಿದೆ. ಗಂಗಾ ನದಿಯ ಎರಡು ಘಾಟ್‌ಗಳಿಗೆ ಇದು ಸಂಪರ್ಕ ಕಲ್ಪಿಸಲಿದೆ. ಲಲಿತಾ ಘಾಟ್‌ನಿಂದ ನದಿಯನ್ನು ಹಾದು ದೇವಾಲಯದ ಆವರಣಲ್ಲಿರುವ ಮಂದಿರ್‌ ಚೌಕ್‌ಗೆ ಈ ಕಾರಿಡಾರ್‌ ಸಂಪರ್ಕಗೊಳ್ಳಲಿದೆ. ಹೀಗಾಗಿ ದೇವಾಲಯದ ಪ್ರದೇಶವೇ ಪರಿವರ್ತನೆಗೊಳ್ಳುತ್ತದೆ. ಯಾತ್ರಾರ್ಥಿಗಳು ಇನ್ನು ಮುಂದೆ ಇಕ್ಕಟ್ಟಾದ, ಜನ ಸಂದಣಿಯ ಸಾಲುಗಳ ಮೂಲಕ ನಡೆಯಬೇಕಾಗಿಲ್ಲ. 50 ಅಡಿ ಕಾರಿಡಾರ್‌ ಮೂಲಕ ನೇರವಾಗಿ ದೇವಾಲಯವನ್ನು ತಲು‍ಪಬಹುದು.

ಪ್ರಧಾನಿ ಮೋದಿಯವರ ಕನಸಿನ ಯೋಜನೆಯನ್ನು ಒಟ್ಟು 5000 ಹೆಕ್ಟೇರ್ ಪ್ರದೇಶದಲ್ಲಿ ರೂಪಿಸಲಾಗಿದೆ. ಯಾತ್ರಾರ್ಥಿಗಳಿಗೆ ಅನುಕೂಲಕ್ಕೆ ಪ್ರದೇಶದ ಜನದಟ್ಟಣೆಯನ್ನು ಕಡಿಮೆ ಮಾಡಲು ಈ ಯೋಜನೆಯ ಮೂಲಕ ಪ್ರಯತ್ನಿಸಲಾಗಿದೆ. ದೇವಾಲಯದ ಈ ಹಿಂದಿನ ಆವರಣವು ಕೇವಲ 3,000 ಚದರ ಅಡಿಗಳಿಗೆ ಸೀಮಿತವಾಗಿತ್ತು. ಆದರೆ ಈಗ ಅದು ವಿಶಾಲಗೊಂಡಿದೆ.

ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಲಭ್ಯ ಕೇಂದ್ರ, ವೇದ ಕೇಂದ್ರ, ಮುಮುಕ್ಷು ಭವನ, ಭೋಗಶಾಲಾ, ನಗರ ವಸ್ತುಸಂಗ್ರಹಾಲಯ, ವೀಕ್ಷಣಾ ಗ್ಯಾಲರಿ, ಆಹಾರ ಸ್ಥಳ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿರುವ 25 ಕಟ್ಟಡಗಳನ್ನು ಈ ಯೋಜನೆ ಒಳಗೊಂಡಿದೆ. ಇವುಗಳನ್ನು ಮೋದಿ ಅವರು ಸೋಮವಾರ ಉದ್ಘಾಟಿಸಿದ್ದಾರೆ.

ಈ ಯೋಜನೆಗಾಗಿ ಕಾಶಿ ವಿಶ್ವನಾಥ ದೇವಸ್ಥಾನದ ಸುತ್ತಲಿನ 300 ಕ್ಕೂ ಹೆಚ್ಚು ಆಸ್ತಿಗಳನ್ನು ಖರೀದಿ ಮಾಡಲಾಗಿದೆ. ಅಥವಾ, ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ. ಈ ವೇಳೆ ವಸತಿ ವಂಚಿತರಾದ 1,400 ಅಂಗಡಿ ಮಾಲೀಕರು, ಬಾಡಿಗೆದಾರರು ಮತ್ತು ಮನೆ ಮಾಲೀಕರಿಗೆ ಸೌಹಾರ್ದಯುತವಾಗಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಪಾರಂಪರಿಕ ಕಟ್ಟಡಗಳ ಮರುಸ್ಥಾಪನೆ

ಉದ್ದೇಶಿತ ಕಾರಿಡಾರ್‌ಗೆ ಅಡ್ಡಿಪಡಿಸುವ ನಿರ್ಮಿತಿಗಳನ್ನು ಒಡೆದು, ತೆರವು ಮಾಡುವಾಗ ಅಸ್ತಿತ್ವದಲ್ಲಿರುವ ಪಾರಂಪರಿಕ ರಚನೆಗಳಿಗೆ ತೊಂದರೆಯಾಗಬಾರದು ಎಂದು ಪ್ರಧಾನಿ ಸೂಚನೆ ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಟ್ಟಡಗಳನ್ನು ಕೆಡವುವ ಸಮಯದಲ್ಲಿ, ಗಂಗೇಶ್ವರ ಮಹಾದೇವ ದೇವಾಲಯ, ಮನೋಕಾಮೇಶ್ವರ ಮಹಾದೇವ ದೇವಾಲಯ, ಜೌವಿನಾಯಕ ದೇವಾಲಯ ಮತ್ತು ಶ್ರೀ ಕುಂಭ ಮಹಾದೇವ ದೇವಾಲಯದಂತಹ ಹುದುಗಿಹೋಗಿದ್ದ 40ಕ್ಕೂ ಹೆಚ್ಚು ದೇವಾಲಯಗಳನ್ನು ಪತ್ತೆ ಮಾಡಲಾಗಿತ್ತು. ಈ ಪ್ರತಿಯೊಂದು ದೇವಾಲಯಕ್ಕೂ ಕೆಲವು ಶತಮಾನಗಳ ಇತಿಹಾಸವಿದೆ. ಉತ್ಖನನದ ವೇಳೆ ಸಿಕ್ಕ ವಸ್ತುಗಳನ್ನು ದೆಹಲಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಅವುಗಳ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಗ್ಯಾಲರಿಯನ್ನು ಮಾಡಲಾಗಿದೆ.

ವಾರಣಾಸಿಯ ಪಾರಂಪರಿಕ ತಾಣಗಳು ಮತ್ತು ನಗರದ 84 ಘಾಟ್‌ಗಳ ಸಾಂಸ್ಕೃತಿಕ ಪ್ರಾಮುಖ್ಯತೆಯ ಕುರಿತು ಮಾಹಿತಿ ನೀಡಲು ‘ಸ್ಮಾರ್ಟ್ ಸೂಚನಾ ಫಲಕಗಳನ್ನು’ ಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT