ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಭಾರತ ಬಂದ್: ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ

Last Updated 8 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ದೇಶದ ಹಲವೆಡೆ ಬೆಂಬಲ ವ್ಯಕ್ತವಾಗಿದೆ. ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳೂ ಪ್ರತಿಭಟನೆ ನಡೆಸಿ ಬಂದ್ ಅನ್ನು ಬೆಂಬಲಿಸಿವೆ. ರಾಜಸ್ಥಾನ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆದಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಸಾಧಾರಣ ಮಟ್ಟದ ಪ್ರತಿಭಟನೆ ನಡೆದಿದೆ. ಬಿಜೆಪಿ ಸರ್ಕಾರ ಇರುವ ಕರ್ನಾಟಕ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ರೈತ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿವೆ

ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ

ಮಹಾರಾಷ್ಟ್ರ: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಎನ್‌ಸಿಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಕಾರ್ಯಕರ್ತರು ಇಲ್ಲಿ ರಸ್ತೆ ಮತ್ತು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ರೈತರ ಪ್ರತಿಭಟನೆಗೆ ಆಡಳಿತಾರೂಢ ಶಿವಸೇನಾ ಬೆಂಬಲ ಘೋಷಿಸಿತ್ತು. ಮುಂಬೈನಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಛತ್ತೀಸಗಡ: ಛತ್ತೀಸಗಡದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ರಾಯಪುರದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ರಾಜ್ಯದಾದ್ಯಂತ ರಸ್ತೆ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ನಾಯಕರು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಮೂರು ದಿನಗಳ ನಿರಂತರ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಎಡಪಕ್ಷಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.

ಜಮ್ಮು-ಕಾಶ್ಮೀರ: ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ಜಮ್ಮು-ಕಾಶ್ಮೀರದ ಹಣ್ಣು ಬೆಳೆಗಾರರ ಸಂಘವು ಬೆಂಬಲ ಘೋಷಿಸಿದೆ. ಹಣ್ಣು ಬೆಳೆಗಾರರು ಶ್ರೀನಗರ ಮತ್ತು ಜಮ್ಮುವಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ಪುದುಚೇರಿ: ಪುದುಚೇರಿಯಲ್ಲಿ ರೈತ ಸಂಘಟನೆಗಳು ಮೆರವಣಿಗೆ ನಡೆಸಿ, ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಮಳೆಯ ನಡುವೆಯೂ ಮೆರವಣಿಗೆ ನಡೆಸಿದ್ದಾರೆ.

ದೆಹಲಿ: ದೆಹಲಿಯ ಹಲವೆಡೆ ಕಾಂಗ್ರೆಸ್‌ ಮತ್ತು ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹಲವೆಡೆ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಇನ್ನೂ ಹಲವೆಡೆ ವ್ಯಾಪಾರಿಗಳು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ತೆಲಂಗಾಣ: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್‌ ಪಕ್ಷವು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಮಗಳು ಮತ್ತು ಪಕ್ಷದ ನಾಯಕಿ ಕೆ.ಕವಿತಾ ಅವರು ಪಕ್ಷದ ಕಾರ್ಯಕರ್ತರ ಜತೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌, ಸಮಾಜವಾದಿ ಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದವು. ಎರಡೂ ಪಕ್ಷಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಸಾವಿರಾರು ರೈತರು ದೆಹಲಿ-ಗಾಜಿಯಾಬಾದ್‌ ಗಡಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಪಂಜಾಬ್: ಪಂಜಾಬ್‌ನ ಎಲ್ಲೆಡೆ ಮಂಗಳವಾರ ಭಾರಿ ಪ್ರತಿಭಟನೆ ನಡೆದಿದೆ. ರಾಜ್ಯದಾದ್ಯಂತ ನಗರ-ಪಟ್ಟಣ ಪ್ರದೇಶಗಳಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ರಾಜ್ಯದ ಪೆಟ್ರೋಲ್ ಬಂಕ್ ಮಾಲೀಕರು ಪ್ರತಿಭಟನೆಗೆ ಬೆಂಬಲ ಸೂಚಿಸಿ, ಎಲ್ಲಾ ಬಂಕ್‌ಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಿದ್ದಾರೆ.

ಹರಿಯಾಣದಲ್ಲಿ ಪರ–ವಿರೋಧ

ಹರಿಯಾಣದಲ್ಲಿ ಭಾರತ ಬಂದ್ ಅನ್ನು ಬೆಂಬಲಿಸಿ ಪ್ರತಿಭಟನೆ ನಡೆದಿದೆ. ಮಂಗಳವಾರವೂ ರಾಜ್ಯದಿಂದ ನೂರಾರು ರೈತರು ದೆಹಲಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಹಲವೆಡೆ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಲಾಗಿದೆ. ಇದರ ಮಧ್ಯೆಯೇ ಇನ್ನೂ ಕೆಲವು ರೈತ ಸಂಘಟನೆಗಳು ಭಾರತ ಬಂದ್ ಅನ್ನು ವಿರೋಧಿಸಿ ಪ್ರತಿಭಟನೆ ನಡೆಸಿವೆ. ನೂತನ ಕೃಷಿ ಸುಧಾರಣಾ ಕಾಯ್ದೆಗಳನ್ನು ರದ್ದು ಮಾಡಬಾರದು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿವೆ.

ಜಾರ್ಖಂಡ್‌: ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರು, ಎಡಪಕ್ಷಗಳ ಕಾರ್ಯಕರ್ತರು, ಹಲವು ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ಬೈಕ್‌ ಮೆರವಣಿಗೆ ನಡೆಸಿದ್ದಾರೆ.

ಆಂಧ್ರಪ್ರದೇಶ: ಆಂಧ್ರಪ್ರದೇಶ ಸರ್ಕಾರವು ಬಂದ್‌ಗೆ ಬೆಂಬಲ ಸೂಚಿಸಿತ್ತು. ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರವನ್ನು ಸರ್ಕಾರವೇ ರದ್ದುಪಡಿಸಿತ್ತು. ಆಡಳಿತ ಪಕ್ಷದ ಕಾರ್ಯಕರ್ತರು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.

ತಮಿಳುನಾಡು: ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಂಘಟನೆಗಳು ಭಾರತ ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿವೆ. ಹಲವು ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದಾರೆ. ಕೆಲವೆಡೆ ರೈತ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿವೆ. ಡಿಎಂಕೆ ನೇತೃತ್ವದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ.

ಕೇರಳ: ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಆಡಳಿತಾರೂಢ ಎಲ್‌ಡಿಎಫ್ ಮೈತ್ರಿಕೂಟದಲ್ಲಿರುವ ಪಕ್ಷಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ ಮೈತ್ರಿಪಕ್ಷಗಳೂ ಪ್ರತಿಭಟನೆ ನಡೆಸಿವೆ.

ರಾಜಸ್ಥಾನ: ರಾಜಸ್ಥಾನದಲ್ಲಿ ರೈತ ಸಂಘಟನೆಗಳು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿ ಸಂಘಟನೆಗಳೂ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿವೆ. ಜೈಪುರದಲ್ಲಿ ಪ್ರತಿಭಟನೆ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

* ಮಧ್ಯಪ್ರದೇಶದ ಅಲ್ಲಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ, ರೈತ ಸಂಘಟನೆಗಳಿಂದ ಪ್ರತಿಭಟನೆ

* ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ರೈತ ಸಂಘಟನೆಗಳಿಂದ ಶಾಂತಿಯುತ ಪ್ರತಿಭಟನೆ

* ಅರುಣಾಚಲ ಪ್ರದೇಶದಲ್ಲಿ ಯಾವುದೇ ಪ್ರತಿಭಟನೆ ನಡೆದಿಲ್ಲ. ಅಸ್ಸಾಂನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ

* ಒಡಿಶಾದ ಹಲವೆಡೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಗೋವಾದಲ್ಲಿ ಯಾವುದೇ ರೀತಿಯ ಪ್ರತಿಭಟನೆ ನಡೆದ ಬಗ್ಗೆ ವರದಿಯಾಗಿಲ್ಲ

* ಹಿಮಾಚಲ ಪ್ರದೇಶ, ಉತ್ತರಾಖಂಡದ ರೈತರು ಮತ್ತು ರೈತ ಸಂಘಟನೆಗಳು ಈಗಾಗಲೇ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ರಾಜ್ಯಗಳಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ

ನಿತೀಶ್ ವಿರುದ್ಧ ಪ್ರತಿಭಟನೆ

ಬಿಹಾರ: ಬಿಹಾರದಲ್ಲಿ ಆರ್‌ಜೆಡಿ, ಕಾಂಗ್ರೆಸ್‌ ಮತ್ತು ಎಡಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ಹಲವೆಡೆ ರೈತ ಸಂಘಟನೆಗಳು ರೈಲು ತಡೆದು ಪ್ರತಿಭಟನೆ ನಡೆಸಿದವು. 2006ರಲ್ಲಿ ನಿತೀಶ್‌ ಕುಮಾರ್ ಅವರ ಸರ್ಕಾರವು ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡಿತ್ತು. ‘ನಮ್ಮ ಸರ್ಕಾರ ಕೈಗೊಂಡಿದ್ದಂತಹ ಕ್ರಮವು ಪ್ರಗತಿಪರವಾದದು. ಪ್ರತಿಭಟನಾ ನಿರತ ರೈತರ ಪರವಾಗಿ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುತ್ತೇನೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದರು. ಇದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 14 ವರ್ಷಗಳ ಹಿಂದೆ ಎಪಿಎಂಸಿ ಕಾಯ್ದೆ ರದ್ದುಪಡಿಸಿದ್ದ ಕ್ರಮದ ವಿರುದ್ಧವೂ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರಗಳನ್ನು ಮುಂದಿರಿಸಿಕೊಂಡು ಆರ್‌ಜೆಡಿ ಮತ್ತು ಕಾಂಗ್ರೆಸ್‌ ರೈತರ ಪ್ರತಿಭಟನೆಯನ್ನು ಸಂಘಟಿಸುತ್ತಿವೆ.

ಬಂದ್‌ಗೆ ರಾಜ್ಯದಲ್ಲೂ ಬೆಂಬಲ

ಬೆಂಗಳೂರು: ಭಾರತ್ ಬಂದ್ ಬೆಂಬಲಿಸಿ ರಾಜ್ಯದಾದ್ಯಂತ ರೈತರು ಪ್ರತಿಭಟನೆಯ ಧ್ವನಿ ಮೊಳಗಿಸಿದರು.
ಬೆಂಗಳೂರಿನ ಟೌನ್‌ಹಾಲ್ ಬಳಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಇನ್ನೊಂದೆಡೆ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೌರ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಗೆ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಸಾಥ್ ನೀಡಿದ್ದವು. ವಾಟಾಳ್‌ ನಾಗರಾಜ್ ಕೂಡ ಕನ್ನಡ ಸಂಘಟನೆಗಳ ಜತೆಗೂಡಿ ಪ್ರತ್ಯೇಕ ಹೋರಾಟ ನಡೆಸಿದರು.

ಬಂದ್ ಬೆಂಬಲಿಸಿ ರಾಜ್ಯದೆಲ್ಲೆಡೆ ರೈತರು ರಸ್ತೆಗಿಳಿದು ಹೋರಾಟ ನಡೆಸಿದರು. ಕೆಲ ಜಿಲ್ಲೆಗಳಲ್ಲಿ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದರೆ, ಕೆಲವೆಡೆ ಭಾಗಶಃ ಬೆಂಬಲ ದೊರೆತಿತ್ತು. ಧರಣಿ, ರಸ್ತೆ ತಡೆ ರೀತಿಯ ಹೋರಾಟಗಳು ರಾಜ್ಯದಾದ್ಯಂತ ನಡೆದವು.

ಕಲಬುರ್ಗಿ, ರಾಯಚೂರಿನಲ್ಲಿ ಉತ್ತಮ

ಕಲ್ಯಾಣ ಕರ್ನಾಟಕದ ಕಲಬುರ್ಗಿ, ರಾಯಚೂರುಗಳಲ್ಲಿ ಉತ್ತಮ ಸ್ಪಂದನೆ ದೊರೆತರೆ, ಉಳಿದ ಜಿಲ್ಲೆಗಳಲ್ಲಿ ಮೆರವಣಿಗೆಗೆ ಸೀಮಿತವಾಗಿತ್ತು. ಬಹುತೇಕ ಮಳಿಗೆಗಳು ಮಧ್ಯಾಹ್ನದವರೆಗೆ ಬಂದ್‌ ಆಗಿದ್ದವು. ಮುನ್ನೆಚ್ಚರಿಕೆಯಾಗಿ ಅಂತರರಾಜ್ಯ ಹಾಗೂ ನಗರ ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಧ್ಯಾಹ್ನದವರೆಗೆ ಆಟೊಗಳ ಸಂಚಾರವೂ ವಿರಳವಾಗಿತ್ತು.

ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತ್ತದಿಂದ ಸೂಪರ್‌ ಮಾರ್ಕೆಟ್‌ವರೆಗೆ ನಡೆದ ಮೆರವಣಿಗೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್, ಕಾಂಗ್ರೆಸ್‌ ಮುಖಂಡ ಡಾ.ಶರಣ‍ಪ್ರಕಾಶ ಪಾಟೀಲ ಸೇರಿದಂತೆ ಕಾಂಗ್ರೆಸ್, ಜೆಡಿಎಸ್‌, ಎಸ್‌ಯುಸಿಐ ಕಮ್ಯುನಿಸ್ಟ್, ಸಿಪಿಎಂ, ಸಿಪಿಐ ಕಾರ್ಯಕರ್ತರು ಭಾಗವಹಿಸಿದ್ದರು.

ಬೀದರ್‌, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು. ವಾಹನ ಸಂಚಾರ, ಜನಜೀವನ ಎಂದಿನಂತಿತ್ತು.

ಬಂದ್‌ ಕರೆಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಅಂಗಡಿಗಳು ಸ್ವಯಂಪ್ರೇರಿತವಾಗಿ ಬಂದ್‌ ಆಗಿದ್ದವು. ಎಪಿಎಂಸಿಯಲ್ಲಿ ಮಾತ್ರ ವರ್ತಕರು ಅಂಗಡಿಗಳನ್ನು ತೆರೆದಿದ್ದರು. ಚಿತ್ರದುರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಶಿವಮೊಗ್ಗದಲ್ಲಿ ಭಾಗಶಃ ಬಂದ್‌ ಆಗಿದೆ. ಕೆಲವೆಡೆ ವ್ಯಾಪಾರ ವಹಿವಾಟು ಎಂದಿನಂತೆ ಇದ್ದವು. ವಾಹನಗಳ ಓಡಾಟಕ್ಕೂ ತಡೆ ಇರಲಿಲ್ಲ.

ಹುಬ್ಬಳ್ಳಿ: ಪ್ರತಿಭಟನೆಗೆ ಸೀಮಿತ

ಬಂದ್‌ ಉತ್ತರ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು. ಬಹುತೇಕ ಕಡೆ ನೀರಸವಾಗಿದ್ದರೆ, ಧಾರವಾಡ, ಬಳ್ಳಾರಿ ನಗರ, ಸಂಡೂರು ಹಾಗೂ ಹೊಸಪೇಟೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ.

ಹುಬ್ಬಳ್ಳಿ– ಧಾರವಾಡದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ಹಾಗೂ ಬಿಆರ್‌ಟಿಎಸ್‌ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಅಂಗಡಿಗಳು ಬಾಗಿಲು ಹಾಕಿದ್ದವು. ಜನಸಂಚಾರ ವಿರಳವಾಗಿತ್ತು.

ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮೆಕ್ಕೆಜೋಳಕ್ಕೆ ಬೆಂಕಿ ಹಚ್ಚುವ ಮೂಲಕ ರೈತರು ಪ್ರತಿಭಟಿಸಿದರು. ರಾಣೆಬೆನ್ನೂರಿನಲ್ಲಿ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ವಿಜಯಪುರದಲ್ಲಿ ರಸ್ತೆ ತಡೆ ನಡೆಸಿದರು. ಬಾಗಲಕೋಟೆಯ ಮುಧೋಳದಲ್ಲಿ ಮೂರು ತಾಸು ರಸ್ತೆ ತಡೆ ನಡೆಸಿದರು. ಬೆಳಗಾವಿ– ರಾಯಚೂರು ರಾಜ್ಯ ಹೆದ್ದಾರಿ ತಡೆ ನಡೆಯಿತು. ಬೆಳಗಾವಿ, ಗದಗ ಹಾಗೂ ಕಾರವಾರದಲ್ಲಿ ಬಂದ್‌ ಇರಲಿಲ್ಲ.

ಮೈಸೂರು ಭಾಗದಲ್ಲಿ ನೀರಸ

ಮೈಸೂರು ನಗರದ ಪ್ರಮುಖ ರಸ್ತೆಗಳು ಹಾಗೂ ಎಪಿಎಂಸಿ ಅಂಗಡಿಗಳು ಮುಚ್ಚಿದ್ದವು. ಉಳಿದೆಡೆ ಜನಜೀವನ ಎಂದಿನಂದಿತ್ತು. ಜಿಲ್ಲೆಯ ಉಳಿದ ಭಾಗಗಳಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹೊರತುಪಡಿಸಿ ಉಳಿದಂತೆ ಕೊಡಗು ಜಿಲ್ಲೆಯಲ್ಲಿ ನೀರಸ ಪ್ರಕ್ರಿಯೆ ವ್ಯಕ್ತವಾಯಿತು. ಬಸ್ ಸಂಚಾರ ಎಂದಿನಂತೆಯೇ ಇತ್ತು.
ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿಗಳು ಮುಚ್ಚಿದ್ದವು. ಬಸ್‌ ಸಂಚಾರ ಇರಲಿಲ್ಲ. ಬ್ಯಾಂಕುಗಳು ಕಾರ್ಯನಿರ್ವಹಿಸಲಿಲ್ಲ. ಜಿಲ್ಲೆಯ ಉಳಿದೆಡೆ ಜನಜೀವನ ಎಂದಿನಂತೆ ಇತ್ತು.
ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು. ಬಸ್‌, ಆಟೊ, ವಾಹನ ಸಂಚಾರ ಎಂದಿನಂತೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT