ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಸ್ತ್ರೀಶಕ್ತಿಗೆ 26 ದೇಶಗಳ ಚುಕ್ಕಾಣಿ

Last Updated 31 ಮೇ 2022, 19:30 IST
ಅಕ್ಷರ ಗಾತ್ರ

2030ರ ಹೊತ್ತಿಗೆ ಸಾಧಿಸಬೇಕಾದ ಸುಸ್ಥಿರ ಅಭಿವೃದ್ಧಿ ಗುರಿಗಳು ಸಾಕಾರಗೊಳ್ಳಬೇಕಾದರೆ ರಾಜಕೀಯ ಮತ್ತು ಸಾರ್ವಜನಿಕ ಜೀವನದ ನಾಯಕತ್ವದಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಬೇಕು. ಆದರೆ, ಜಾಗತಿಕ ಮಟ್ಟದ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಬಹಳ ಕಡಿಮೆ. ರಾಜಕೀಯದಲ್ಲಿ ಸಮಾನ ಪ್ರಾತಿನಿಧ್ಯ ಇನ್ನೂ ಬಹಳ ದೂರವಿದೆ ಎಂದು ವಿಶ್ವಸಂಸ್ಥೆಯು ಹೇಳಿದೆ. ಜಗತ್ತಿನ 26 ದೇಶಗಳ ಅಧ್ಯಕ್ಷ ಅಥವಾ ಪ್ರಧಾನಿ ಹುದ್ದೆಯಲ್ಲಿ ಈಗ ಮಹಿಳೆಯರು ಇದ್ದಾರೆ. ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂಡಾ ಆರ್ಡೆನ್‌, ಜರ್ಮನಿಯ ಛಾನ್ಸೆಲರ್‌ ಆಗಿದ್ದ ಅಂಜೆಲಾ ಮರ್ಕೆಲ್‌ ಮುಂತಾದವರು ತಮ್ಮ ವಿಶಿಷ್ಟ ನಾಯಕತ್ವ ಶೈಲಿಯಿಂದಾಗಿ ಛಾಪು ಮೂಡಿಸಿದವರು. ಮಹಿಳಾ ನಾಯಕತ್ವವು ಹೆಚ್ಚಳವಾದರೆ, ಈ ಜಗತ್ತು ಇನ್ನಷ್ಟು ಉತ್ತಮವಾಗಬಹುದು ಎಂಬ ಭರವಸೆಗೆ ಅವರು ಕಾರಣರಾಗಿದ್ದಾರೆ‌

ಶೇಖ್‌ ಹಸೀನಾ

ಬಾಂಗ್ಲಾದೇಶದ ಪ್ರಧಾನಿಯಾಗಿ ಶೇಖ್‌ ಹಸೀನಾ ಅವರು 1996ರಲ್ಲಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡರು. 2001ರಲ್ಲಿ ನಡೆದ ಚುನಾವಣೆಯಲ್ಲಿ ಹಸೀನಾ ಅವರ ಬಾಂಗ್ಲಾದೇಶ ಅವಾಮಿ ಲೀಗ್‌ ಪಕ್ಷಕ್ಕೆ ಬಹುಮತ ಬರಲಿಲ್ಲ. 2008ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಹಸೀನಾ ಅವರ ಪಕ್ಷ ಗೆದ್ದಿತು. 2009ರ ಜನವರಿಯಲ್ಲಿ ಎರಡನೇ ಅವಧಿಗೆ ಹಸೀನಾ ಅಧಿಕಾರ ವಹಿಸಿಕೊಂಡರು. ಬಾಂಗ್ಲಾದೇಶದಲ್ಲಿ ಅತಿ ದೀರ್ಘ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದ್ದು. ಮೂಲಭೂತವಾದ ಮತ್ತು ಭಯೋತ್ಪಾದನೆಯ ವಿರುದ್ಧ ಅತ್ಯಂತ ದೃಢ ನಿಲುವನ್ನು ಅವರು ತೆಗೆದುಕೊಂಡಿದ್ದಾರೆ.

ಮೆಟೆ ಫ್ರೆಡ್ರಿಕ್‌ಸನ್‌

ಡೆನ್ಮಾರ್ಕ್‌ನ ಪ್ರಧಾನಿಯಾಗಿ ಮೆಟೆ ಫ್ರೆಡ್ರಿಕ್‌ಸನ್‌ ಅವರು 2019ರ ಜೂನ್‌ನಲ್ಲಿ ಅಧಿಕಾರ ವಹಿಸಿಕೊಂಡರು. ಈ ದೇಶದ ಪ್ರಧಾನಿ ಹುದ್ದೆಗೇರಿದ ಎರಡನೇ ಮಹಿಳೆ ಇವರು. ಮೆಟೆ ಅವರು ಡೆನ್ಮಾರ್ಕ್‌ನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಸೋಷಿಯಲ್‌ ಡೆಮಾಕ್ರಟ್ಸ್ ಪಕ್ಷದ ಯುವ ವಿಭಾಗಕ್ಕೆ 15ನೇ ವರ್ಷದಲ್ಲಿ ಸೇರ್ಪಡೆಯಾದರು. 2001ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಸಂಸತ್ತಿಗೆ ಆಯ್ಕೆಯಾದರು. 2011ರಲ್ಲಿ ಅವರು ಮೊದಲ ಬಾರಿಗೆ ಸಚಿವೆಯಾದರು. 2015ರ ಚುನಾವಣೆಯಲ್ಲಿ ಅವರ ಪಕ್ಷವು ಅಲ್ಪ ಅಂತರದಿಂದ ಸೋತಿತು. ಆಗ ಮೆಟೆ ಅವರು ವಿರೋಧ ಪಕ್ಷದ ನಾಯಕಿಯಾದರು.

ಜೆಸಿಂಡಾ ಆರ್ಡೆನ್‌

ನ್ಯೂಜಿಲೆಂಡ್‌ನ ಪ್ರಧಾನಿಯಾಗಿ 2017ರಲ್ಲಿ ಅಧಿಕಾರ ವಹಿಸಿಕೊಂಡಾಗ ಜೆಸಿಂಡಾ ಆರ್ಡೆನ್‌ಗೆ 37 ವರ್ಷ ವಯಸ್ಸು. ಆ ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಅವರು. ಜತೆಗೆ, ದೇಶವೊಂದರ ಮುಖ್ಯಸ್ಥೆಯಾದ ಅತ್ಯಂತ ಕಡಿಮೆ ವಯಸ್ಸಿನ ಮಹಿಳೆ. ಪರಿಣಾಮಕಾರಿಯಾದ ನಾಯಕತ್ವ ಗುಣವನ್ನು ಪ್ರದರ್ಶಿಸಿದ ಜೆಸಿಂಡಾ ಅವರು, ಕೋವಿಡ್‌ ಸಾಂಕ್ರಾಮಿಕದ ನಿರ್ವಹಣೆಯಿಂದಾಗಿ ಜಗತ್ತಿನ ಗಮನ ಸೆಳೆದರು. ಅಮೆರಿಕ, ಬ್ರಿಟನ್‌ನಂತಹ ದೇಶಗಳು ಕೋವಿಡ್‌ನಿಂದ ಹೈರಾಣಾದರೆ, ‍ಪುಟ್ಟ ದೇಶ ನ್ಯೂಜಿಲೆಂಡ್‌ ಕೋವಿಡ್‌ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿತು.

ವಿದ್ಯಾ ದೇವಿ ಭಂಡಾರಿ

ನೇಪಾಳದ ಎರಡನೇ ಅಧ್ಯಕ್ಷೆಯಾಗಿ ವಿದ್ಯಾ ದೇವಿ ಭಂಡಾರಿ ಅವರು 2015ರಲ್ಲಿ ಚುನಾಯಿತರಾದರು. 2018ರಲ್ಲಿ ಪುನರಾಯ್ಕೆಗೊಂಡರು. ನೇಪಾಳದ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರವೇನೂ ಇಲ್ಲ. ಆದರೆ, ಭಂಡಾರಿ ಅವರು ತಮ್ಮ ಗಾಢವಾದ ರಾಜಕೀಯ ಅನುಭವದಿಂದಾಗಿ ರಾಜಕೀಯ ಪಕ್ಷಗಳ ಮೇಲೆ ಪ್ರಭಾವ ಬೀರುವಂತಹ ವ್ಯಕ್ತಿತ್ವ ಹೊಂದಿದ್ದಾರೆ. ಸಂಸತ್ತಿನಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸುವ ಕಾಯ್ದೆಯ ಹಿಂದೆ ಭಂಡಾರಿ ಅವರ ಶ್ರಮ ಇದೆ.

ಹಲೀಮಾ ಯಾಕೂಬ್‌

ಸಿಂಗಪುರದ 8ನೇ ಮತ್ತು ಮೊದಲ ಮಹಿಳಾ ಅಧ್ಯಕ್ಷೆಯಾಗಿ ಹಲೀಮಾ ಯಾಕೂಬ್‌ ಅವರು 2017ರಲ್ಲಿ ಆಯ್ಕೆಯಾದರು. ಮಲೇಷ್ಯಾ ಮೂಲದ ಜನಾಂಗೀಯ ಗುಂಪಿಗೆ ಸೇರಿದವರೇ ಅಧ್ಯಕ್ಷರಾಗಬೇಕು ಎಂದು ಸರ್ಕಾರವು ನಿಯಮ ಬದಲಾಯಿಸಿದ್ದು ಹಲೀಮಾ ಅವರ ಆಯ್ಕೆಯನ್ನು ಸುಲಭವಾಗಿಸಿತು. ಈ ನಿಯಮ ಬದಲಾವಣೆ ಬಗ್ಗೆ ಟೀಕೆಯೂ ವ್ಯಕ್ತವಾಗಿದೆ. ಇವರ ತಂದೆ ಭಾರತ ಮೂಲದವರು. ಹಲೀಮಾಗೆ 8 ವರ್ಷವಿದ್ದಾಗಲೇ ಅವರು ಮೃತಪಟ್ಟರು. ಹೀಗಾಗಿ, ಹಲೀಮಾ ಅವರ ಬಾಲ್ಯ ಕಷ್ಟಕರವಾಗಿತ್ತು.

ನಜ್ಲಾ ಬುಡೇನ್ ರೊಮದಾನಿ

ಟ್ಯುನಿಷಿಯಾ ದೇಶದ ಪ್ರಧಾನಿ ಹುದ್ದೆಗೆ ಅಚ್ಚರಿಯಾಗಿ ಆಯ್ಕೆಯಾಗಿದ್ದು, ಪ್ರಾಧ್ಯಾಪಕಿ ನಜ್ಲಾ ಬುಡೇನ್ ರೊಮದಾನಿ. ಇವರು ಟ್ಯುನಿಷಿಯಾದ ಮೊದಲ ಮಹಿಳಾ ಪ್ರಧಾನಿಯಷ್ಟೇ ಅಲ್ಲದೆ ಅರಬ್ ದೇಶಗಳಲ್ಲಿ ದೇಶದ ಚುಕ್ಕಾಣಿ ಹಿಡಿದ ಮೊದಲ ಮಹಿಳೆಯೂ ಆಗಿದ್ದಾರೆ. ವಿಶ್ವಬ್ಯಾಂಕ್‌ನಲ್ಲಿ ಕೆಲಸ ಮಾಡಿದ ಅನುಭವ ಬಿಟ್ಟರೆ, ರಾಜಕೀಯ ಅವರಿಗೆ ಹೊಸತು. ಅಧ್ಯಕ್ಷ ಕೇಸ್ ಸೇದ್ ಅವರು ಸರ್ಕಾರವನ್ನು ಕಿತ್ತುಹಾಕಿ ಬುಡೇನ್ ಅವರನ್ನು ನೇಮಿಸಿದರು. ಕೊರೊನಾ ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸುವುದು ಹಾಗೂ ದೇಶದ ಆರ್ಥಿಕತೆಯನ್ನು ಮೇಲೆತ್ತುವ ದೊಡ್ಡ ಜವಾಬ್ದಾರಿಗಳನ್ನು ಬುಡೇನ್ ಅವರು ಆಯ್ಕೆಯಾದಾಗ ಅವರ ಮುಂದಿದ್ದವು.

ಕತೆರಿನಾ ಸಕೆಲಾರಪೂಲೊ

62 ವರ್ಷದಕತೆರಿನಾ ಸಕೆಲಾರಪೂಲೊ ಅವರು 2020ರಲ್ಲಿ ಗ್ರೀಸ್‌ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೇಮಕವಾದರು. ಈ ಹುದ್ದಗೆ ಏರುವ ಮುನ್ನ ನ್ಯಾಯಾಧೀಶರಾಗಿದ್ದ ಕತೆರಿನಾ ಅವರು ತಮ್ಮ ಪ್ರಗತಿಪರ ಚಿಂತನೆಗಳಿಂದ ಹೆಸರಾಗಿದ್ದರು. ಮಾನವ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕೆಲಸ ಮಾಡಿದ್ದಾರೆ. ಕತೆರಿನಾ ಅವರು ಸಂಸತ್‌ನಲ್ಲಿ 300ರ ಪೈಕಿ 261 ಮತಗಳನ್ನು ಪಡೆದರು. ಈ ಗೆಲುವಿನ ಮೂಲಕ ಭವಿಷ್ಯದ ಅವಕಾಶಗಳು ತೆರೆದವು ಎಂಬುದಾಗಿ ಗ್ರೀಸ್ ಪ್ರಧಾನಿ ಕ್ರಿಯಾಕೊಸ್ ಅವರು ಬಣ್ಣಿಸಿದ್ದರು.

ಸಹಾಲೆ ವರ್ಕ್ ಜಹೌಡಿ

2018ರಲ್ಲಿ ಇಥಿಯೋಪಿಯಾದ ಮೊದಲ ಅಧ್ಯಕ್ಷೆಯಾಗಿಸಹಾಲೆ ವರ್ಕ್ ಜಹೌಡಿ ಚುನಾಯಿತರಾದರು. ರಾಜತಾಂತ್ರಿಕ ಅಧಿಕಾರಿಯಾಗಿದ್ದ ಅವರು, ಈ ಹುದ್ದೆಗೂ ಮುನ್ನ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಇವರ ಆಯ್ಕೆಯಿಂದ ದೇಶದಲ್ಲಿ ಲಿಂಗ ಸಮಾನತೆಯ ಹಾದಿ ತೆರದುಕೊಂಡಿತು ಎಂದು ವಿಶ್ಲೇಶಿಸಲಾಗಿದೆ. ಮಹಿಳೆಯರ ದನಿಯಾಗುವುದಾಗಿ ಅವರು ತಮ್ಮ ಮೊದಲ ಭಾಷಣದಲ್ಲಿ ವಾಗ್ದಾನ ನೀಡಿದ್ದರು.

ಅನಾ ಬ್ರನಬಿಕ್

ಅನಾ ಬ್ರನಬಿಕ್ ಅವರು ಸರ್ಬಿಯಾದ ಅಧ್ಯಕ್ಷೆಯಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಬ್ರಿಟನ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ 2002ರಲ್ಲಿ ಸರ್ಬಿಯಾಕ್ಕೆ ವಾಪಸಾದ ಅವರು ಸ್ಥಳೀಯಾಡಳಿತಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿದರು. 2016ರಲ್ಲಿ ಸಚಿವರಾಗಿ ನೇಮಕವಾದರು. ಅವರು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬುದು ಬಹಿರಂಗವಾಗಿತ್ತು. ಅವರೇ ಅದನ್ನು ಹೇಳಿಕೊಂಡಿದ್ದರು.

ಸಾಯಿ ಇಂಗ್ ವೆನ್

ಚೀನಾವನ್ನು ಎದುರುಹಾಕಿಕೊಂಡು ಎರಡನೇ ಅವಧಿಗೆ ತೈವಾನ್ ಅಧ್ಯಕ್ಷೆಯಾಗಿ ಆಯ್ಕೆಯಾದ ದಿಟ್ಟ ಮಹಿಳೆ ಸಾಯಿ ಇಂಗ್ ವೆನ್. ತೈವಾನ್ ಮೇಲೆ ಕಣ್ಣಿಟ್ಟಿರುವ ಚೀನಾವನ್ನು ಎದುರಿಸುತ್ತಲೇ ಒಂದು ಅವಧಿ ಪೂರ್ಣಗೊಳಿಸಿದ ಅವರು, ದೇಶದ ಸಾರ್ವಭೌಮತೆಯಲ್ಲಿ ಯಾರೂ ಮೂಗು ತೂರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಛಲ ಅವರಲ್ಲಿದೆ. ‘ಸ್ವತಂತ್ರ ಪ್ರಜಾಪ್ರಭುತ್ವವಾದ ಜೀವನವನ್ನು ನಾವು ಎಷ್ಟು ಇಷ್ಟಪಡುತ್ತೇವೆ ಎಂಬುದನ್ನು ತೈವಾನ್ ದೇಶವು ಜಗತ್ತಿಗೆ ತೋರಿಸುತ್ತಿದೆ’ ಎಂದು ಅವರು ಹೇಳುತ್ತಾರೆ.

ಅಮೆರಿಕದ ಅವಕಾಶ

ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ದೇಶವಾದ ಅಮೆರಿಕದ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಈವರೆಗೆ ಆಯ್ಕೆ ಆಗಿಲ್ಲ. ಆದರೆ, ಅಂತಹುದೊಂದು ಅವಕಾಶ ಈಗ ತೆರೆದುಕೊಂಡಿದೆ. ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಅಮೆರಿಕದ ಉಪಾಧ್ಯಕ್ಷರಾಗಿ 2021ರಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಏರಿದ ಮೊದಲ ಮಹಿಳೆ ಇವರು. 2024ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿ ಇತಿಹಾಸ ಸೃಷ್ಟಿಸುವ ಅವಕಾಶ ಅಮೆರಿಕನ್ನರ ಮುಂದೆ ಇದೆ.

ಅಮೆರಿಕದ ಅವಕಾಶ
ಜಗತ್ತಿನ ಅತ್ಯಂತ ಹಳೆ ಪ್ರಜಾಪ್ರಭುತ್ವದ ದೇಶವಾದ ಅಮೆರಿಕದ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಈವರೆಗೆ ಆಯ್ಕೆ ಆಗಿಲ್ಲ. ಆದರೆ, ಅಂತಹುದ್ದೊಂದು ಅವಕಾಶ ಈಗ ತೆರೆದುಕೊಮಡಿದೆ. ಭಾರತ ಮೂಲದ ಅಮೆರಿಕದ ಉಪಾಧ್ಯಕ್ಷರಾಗಿ 2021ರಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಏರಿದ ಮೊದಲ ಮಹಿಳೆ ಇವರು. 2024ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿ ಇತಿಹಾಸ ಸೃಷ್ಟಿಸುವ ಅವಕಾಶ ಅಮೆರಿಕನ್ನರ ಮುಮದೆ ಇದೆ.
ಆಧಾರ: ವರ್ಲ್ಡ್‌ ಪಾಪ್ಯುಲೇಶನ್‌ ರಿವ್ಯೂ, ಕೊಲಂಬಿಯಾ ಯುನಿವರ್ಸಿಟಿ ವರ್ಲ್ಡ್‌ ಲೀಡರ್ಸ್‌ ಫೋರಂ, ಕೌನ್ಸಿಲ್‌ ಆಫ್‌ ವಿಮೆನ್‌ ವರ್ಲ್ಡ್‌ ಲೀಡರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT