ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಸಿನಿಮಾ ಸಂಸ್ಕೃತಿ...ಅಸ್ಮಿತೆಯ ಛಾಪು

Last Updated 6 ಜನವರಿ 2023, 19:45 IST
ಅಕ್ಷರ ಗಾತ್ರ

ಸಿನಿಮಾ ಕ್ಷೇತ್ರವನ್ನು ಮನೋರಂಜನೆಯ ದೃಷ್ಟಿಯಿಂದ ಅಷ್ಟೇ ನೋಡದೆ, ಅದನ್ನು ಒಂದು ಸಾಂಸ್ಕೃತಿಕ ವಿದ್ಯಮಾನವಾಗಿ ‘ಪ್ರಜಾವಾಣಿ’ ಮೊದಲಿನಿಂದಲೂ ಪರಿಭಾವಿಸುತ್ತಾ ಬಂದಿದೆ. ಭಾಷಾತೀತವಾಗಿ ಚಲನಚಿತ್ರ ರಂಗದ ಆಗುಹೋಗುಗಳನ್ನು ದಾಖಲಿಸುತ್ತಾ, ನಿಷ್ಪಕ್ಷಪಾತವಾದ ವಿಮರ್ಶೆ–ವಿಶ್ಲೇಷಣೆಗಳಿಂದ ಘನತೆಯನ್ನು ಕಾಪಾಡಿಕೊಂಡು ಬಂದಿದೆ.

ಚಲನಚಿತ್ರೋದ್ಯಮದ ನಾಡಿಮಿಡಿತಗಳನ್ನು ಸೂಕ್ಷ್ಮವಾಗಿ ಕೇಳಿಸುತ್ತಾ, ಅಲ್ಲಿನ ಪಲ್ಲಟಗಳನ್ನು ಹೊಣೆಗಾರಿಕೆಯಿಂದ ದಾಟಿಸುತ್ತಾ ಬಂದಿರುವ ‘ಪ್ರಜಾವಾಣಿ’, ಅದನ್ನು ಯಃಕಶ್ಚಿತ್ ಮನೋರಂಜನೆಯ ಮಾಧ್ಯಮ ಎಂದು ಯಾವತ್ತೂ ಭಾವಿಸಿಯೇ ಇಲ್ಲ. ಬದಲಾಗಿ, ಸಾಂಸ್ಕೃತಿಕ ದೃಷ್ಟಿಯಲ್ಲಿಯೇ ಸಿನಿಮಾಗಳನ್ನು ಬಗೆದು ನೋಡುವಂತಹ ಗಾಂಭೀರ್ಯವನ್ನು ಕಾಪಾಡಿಕೊಂಡು ಬಂದಿದೆ.

ಪತ್ರಿಕೆಯು ಎಪ್ಪತ್ತೈದು ವರ್ಷಗಳ ತನ್ನ ಪಯಣದಲ್ಲಿ ಚಿತ್ರರಂಗದ ಆಗುಹೋಗುಗಳನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ದಾಖಲಿಸುತ್ತಾ ಬಂದಿರುವುದಕ್ಕೆ ಅಸಂಖ್ಯ ಉದಾಹರಣೆಗಳು ಸಿಗುತ್ತವೆ. ಉದ್ಯಮವಾಗಿ ಸಿನಿಮಾ ಬೆಳೆದ ಬಗೆ, ಚಳವಳಿಗಳಲ್ಲಿ ಚಿತ್ರರಂಗದವರ ಪಾತ್ರ, ಮದ್ರಾಸ್‌ನಲ್ಲಿ ಕನ್ನಡ ಚಿತ್ರರಂಗ ನೆಲೆಗೊಂಡಿದ್ದಾಗ ನಡೆಯುತ್ತಿದ್ದ ಚಟುವಟಿಕೆಗಳ ದಾಖಲಾತಿ, ಸಿನಿಮಾದ ದಿಗ್ಗಜರಿಗೆ ಸಮ್ಮಾನ–ಗೌರವಗಳು ಪ್ರಾಪ್ತಿಯಾದ ಸಂದರ್ಭಗಳ ಬರಹಗಳು, ಅಗಲಿದವರಿಗೆ ಅಕ್ಷರ ನಮನ ಸಲ್ಲಿಕೆ... ಈ ಎಲ್ಲ ವಿಷಯಗಳಲ್ಲೂ ಪತ್ರಿಕೆಯು ಜವಾಬ್ದಾರಿಯುತವಾದ ಹಾಗೂ ಗಂಭೀರವಾದ ಧೋರಣೆಯನ್ನು ರೂಢಿಸಿಕೊಂಡು ಬಂದಿದೆ. ಯಾವುದೇ ಮುಲಾಜಿಗೆ ಒಳಗಾಗದ ಚಲನಚಿತ್ರ ವಿಮರ್ಶೆ ಹಾಗೂ ತಲಸ್ಪರ್ಶಿ ವಿಶ್ಲೇಷಣೆಗಳು ಪತ್ರಿಕೆಯ ಈ ನಿಲುವನ್ನು ಕಾಲಾಂತರದಲ್ಲಿ ಇನ್ನಷ್ಟು ಗಟ್ಟಿಗೊಳಿಸಿದೆ.

‘ಪ್ರಜಾವಾಣಿ’ ಮೊದಲಿನಿಂದಲೂ ಚಲನಚಿತ್ರರಂಗದ ಸುದ್ದಿಯನ್ನು ಭಾಷಾತೀತವಾಗಿ ದಾಖಲಿಸುತ್ತಾ ಬಂದಿದೆ. ಹಿಂದಿ ಚಿತ್ರರಂಗವಷ್ಟೆ ಅಲ್ಲದೆ, ಅಂತರರಾಷ್ಟ್ರೀಯ ಸಿನಿಮೋತ್ಸವಗಳಿಗೆ ಸಂಬಂಧಿಸಿದ ಸುದ್ದಿಗಳಿಗೂ 1950ರ ದಶಕದಿಂದಲೇ ಆದ್ಯತೆ ನೀಡಿದೆ.

ಬೋಲ್ಡ್‌ ಅಂಡ್ ಬ್ಯೂಟಿಫುಲ್

1985ರಿಂದಲೇ ನಾಯಕಿಯರ ‘ಗ್ಲಾಮರಸ್’ ಹಾಗೂ ‘ಬೋಲ್ಡ್’ ಸಿನಿಮಾ ಪೋಸ್ಟರ್‌ಗಳನ್ನು ಪುರವಣಿ ಪ್ರಕಟಿಸಿತು. ಆ ವರ್ಷದ ಸಂಚಿಕೆಯೊಂದರ ಒಂದೇ ಪುಟದಲ್ಲಿ ‘ಎರಡು ದಂಡೆಯ ಮೇಲೆ’ ಸಿನಿಮಾದ ಜಯಮಾಲಿನಿ ಹಾಗೂ ‘ಮನ ಗೆದ್ದ ಮಗ’ ಸಿನಿಮಾದ ಅನುರಾಧಾ ಫೋಟೊಗಳು ಪ್ರಕಟವಾಗಿದ್ದವು. ಈ ಇಬ್ಬರೂ ನಟಿಯರು ತಮ್ಮ ಕ್ಯಾಬರೆ ನೃತ್ಯದ ಮೂಲಕವೇ ಆಗ ಚಿತ್ರ ರಸಿಕರನ್ನು ಹಿಡಿದಿಟ್ಟಿದ್ದವರು.

ಬಾಲಿವುಡ್ ನಟಿ ಮಂದಾಕಿನಿ. ‘ಸೌಂದರ್ಯ ಪ್ರದರ್ಶನ ಅಶ್ಲೀಲವಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ವಿಸ್ತೃತವಾದ ಸಂದರ್ಶನ ಆಗ ಮುದ್ರಿತವಾಗಿತ್ತು. ಅದನ್ನು ಮುಂಬೈನ ವರದಿಗಾರರು ಬರೆದಿದ್ದರು.

1954ರಲ್ಲಿ ಭಾರತದ ಸಿನಿಮಾರಂಗ ದವರ ನಿಯೋಗವು ಸೋವಿಯತ್ ರಷ್ಯಾಗೆ ಭೇಟಿ ನೀಡಿತ್ತು.

ವಿಜಯ್‌ ಭಟ್, ಸಲೀಲ್‌ ಚೌಧರಿ, ರಾಜ್‌ಕಪೂರ್‌, ನರ್ಗೀಸ್‌, ಬಿಮಲ್‌ರಾಯ್‌, ಬಲರಾಜ್‌ ಸಹಾನಿ, ನಿರೂಪಾರಾಯ್, ಬಲರಾಜ್‌ ಸಹಾನಿ, ಹೃಷಿಕೇಶ್ ಮುಖರ್ಜಿ ತರಹದ ಘಟಾನುಘಟಿಗಳಿದ್ದ ನಿಯೋಗ ಅದು. ಅಲ್ಲಿಗೆ ಭೇಟಿ ನೀಡಿದ ಎಲ್ಲರ ಸಂಕ್ಷಿಪ್ತ ಅನುಭವವನ್ನು ಒಂದು ಪ್ಯಾಕೇಜ್‌ ರೂಪದಲ್ಲಿ ‍‘ಪ್ರಜಾವಾಣಿ’ ದಾಖಲಿಸಿತ್ತು. ದೇಶದ ವಿವಿಧ ನಗರಗಳಲ್ಲಿ ಚಿತ್ರೋತ್ಸವ, ಸಿನಿಮೋತ್ಸವಗಳು ಪ್ರಾರಂಭವಾದಾಗಲೂ ಪತ್ರಿಕೆ ಅದನ್ನು ಮುಖ್ಯವಾದ ವಿದ್ಯಮಾನವೆಂದೇ ಪರಿಗಣಿಸಿ, ವರದಿಗಾರರನ್ನು ಕಳುಹಿಸಿ, ಬರೆಯಿಸಿ, ಪ್ರಕಟಿಸಿತು. ಕೆಲವು ಪ್ರಮುಖ ಸುದ್ದಿಗಳಂತೂ ಮುಖಪುಟದಲ್ಲಿಯೇ ಸ್ಥಳಾವಕಾಶ ಪಡೆದಿದ್ದವು. ಗೋವಾದಲ್ಲಿ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಶುರುವಾದಾಗ, ಅದು ನಡೆಯುವ ಹತ್ತೂ ದಿನ ವರದಿಗಾರರನ್ನು ಕಳುಹಿಸಿದ ಉದಾಹರಣೆಗಳೂ ಇವೆ. ಸಿನಿಮಾ–ಸಂಸ್ಕೃತಿ ಹಾಗೂ ವಿಶ್ವ ಸಿನಿಮಾಗಳ ಕುರಿತ ಬರಹಗಳನ್ನು ಸ್ವಾನುಭವದಿಂದ ಬರೆಯುವ ವರದಿಗಾರಿಕೆಗೆ ಅದು ಸದವಕಾಶವೇ ಆಗಿತ್ತು.

ಸಿನಿಮಾಗಳಲ್ಲಿ ಮಹಿಳೆಯರ ಅಭಿನಯ ಹಾಗೂ ಅವರನ್ನು ಈ ಮಾಧ್ಯಮದ ಕಥಾವಸ್ತು ಒಳಗೊಳ್ಳುತ್ತಿರುವ ಬಗೆ ಎರಡೂ ವಿಷಯಗಳನ್ನು ಆಧರಿಸಿದ, ಚಿತ್ರೋದ್ಯಮದ ಗಣ್ಯರ ಅಭಿಪ್ರಾಯ ಸಂಗ್ರಹದ ಪ್ಯಾಕೇಜ್ ಕೂಡ ಪ್ರಕಟವಾಗಿತ್ತು. ‘ಮಹಿಳೆ–ಪ್ರದರ್ಶನ: ಪ್ರಪಂಚದ ಪ್ರಮುಖರ ದೃಷ್ಟಿ’ ಎಂಬ ಶೀರ್ಷಿಕೆಯ ಆ ಪ್ಯಾಕೇಜ್‌ನಲ್ಲಿ ಗುಲ್ಶನ್‌ ನಂದಾ, ಅನಿಲ್‌ ಕಪೂರ್‌, ರೋಹಿಣಿ ಹಟ್ಟಂಗಡಿ, ಶರ್ಮಿಳಾ ಟ್ಯಾಗೋರ್, ವಿಜಯ್‌ ತೆಂಡೂಲ್ಕರ್‌, ವಿಮಲಾ ಪಾಟೀಲ್, ಶಮ್ಮಿ ಕಪೂರ್‌, ಸ್ಮಿತಾ ಪಾಟೀಲ್‌, ಉತ್ಪಲ್‌ ದತ್‌, ಜಾಕಿ ಶ್ರಾಫ್‌ ಮೊದಲಾದವರ ಅಭಿಪ್ರಾಯಗಳಿದ್ದವು.

ಭಾರತೀಯ ಚಿತ್ರರಂಗದಲ್ಲೇ ಕರ್ನಾಟಕದ ಹೊಸ ಅಲೆಯ ಸಿನಿಮಾಗಳು ಸದ್ದು ಮಾಡತೊಡಗಿದ್ದು 1970ರ ದಶಕದ ಕೊನೆಯಲ್ಲಿ. ‘ಸಂಸ್ಕಾರ’, ‘ಘಟಶ್ರಾದ್ಧ’ ತರಹದ ಸಿನಿಮಾಗಳು ಆ ಸಂದರ್ಭದಲ್ಲಿ ಗಳಿಸಿದ್ದ ಜನಮೆಚ್ಚುಗೆ ಉಲ್ಲೇಖನೀಯ. ಇಂತಹ ಕಾಲಘಟ್ಟದಲ್ಲಿನ ಪಲ್ಲಟಗಳ ಸುದ್ದಿಗಳಿಗೂ ಪತ್ರಿಕೆಯಲ್ಲಿ ಮಹತ್ವ ದೊರೆತಿದೆ. ಗಿರೀಶ ಕಾರ್ನಾಡರ ‘ಆಡಾಡತಾ ಆಯುಷ್ಯ’ ಆತ್ಮಕಥೆಯ ಕೆಲವು ಅಧ್ಯಾಯಗಳು ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟವಾಗಿದ್ದವು. ಅವುಗಳಲ್ಲಿ ‘ಸಂಸ್ಕಾರ’ ಸಿನಿಮಾ ಆದ ಬಗೆಯ ಅಧ್ಯಾಯ ಕೂಡ ಮುಖ್ಯವಾದುದು.

ಈ ಸಹಸ್ರಮಾನದ ಪಲ್ಲಟ

ಹೊಸ ಸಹಸ್ರಮಾನದಲ್ಲಿ ಸಹ ‘ಪ್ರಜಾವಾಣಿ’ ಸಿನಿಮಾ ಚಟುವಟಿಕೆ, ಗಾಸಿಪ್, ಸುದ್ದಿ ಎಲ್ಲಕ್ಕೂ ಸ್ಥಳಾವಕಾಶವನ್ನು ವಿಫುಲವಾಗಿಯೇ ಒದಗಿಸಿತು. ಆ ಕಾಲಘಟ್ಟದಲ್ಲಿ ಕಿರುತೆರೆ ಧಾರಾವಾಹಿಗಳು ಜನಪ್ರಿಯವಾಗತೊಡಗಿದ್ದೇ, ಸಿನಿಮಾ ರಂಜನೆಯ ಒಂದು ಪುಟವನ್ನು ಕಿರುತೆರೆಗೆ ಸಂಬಂಧಿಸಿದ ಬರಹಗಳಿಗಾಗಿಯೇ ಮೀಸಲಿಟ್ಟಿತು. ಅದರಲ್ಲಿ ಕಿರುತೆರೆಯ ನಟ-ನಟಿಯರಲ್ಲದೆ, ನಿರ್ದೇಶಕರ ಸಂದರ್ಶನಗಳೂ ಪ್ರಕಟಗೊಂಡವು. ಛಾಪು ಮೂಡಿಸುತ್ತಿದ್ದ ಧಾರಾವಾಹಿಗಳ ಕಟ್ಟುವಿಕೆಯ ಮೇಲೆ ಬೆಳಕು ಚೆಲ್ಲುವ ಇಂತಹ ಪರಿಕಲ್ಪನೆ ದಿನಪತ್ರಿಕೆಗಳ ಮಟ್ಟಿಗೆ ‘ಪ್ರಜಾವಾಣಿ’ಯದ್ದೇ ಮೊದಲ ಆಲೋಚನೆ.

ಸಿನಿಮಾಗೆಂದೇ ಪ್ರತ್ಯೇಕ ಪುರವಣಿ ಆರಂಭಗೊಂಡರೂ ‘ಪ್ರಜಾವಾಣಿ’ಯು ತನ್ನ ನಿತ್ಯದ ಪುಟಗಳಲ್ಲಿ ಹಾಗೂ ‘ಸಾಪ್ತಾಹಿಕ ಪುರವಣಿ’ಯಲ್ಲಿ ಚಿತ್ರೋದ್ಯಮದ ಬಗೆಗಿನ ವಿಶ್ಲೇಷಣೆ, ಗಾಸಿಪ್‌ಗಳಿಗೆ ಆಗೀಗ ಸ್ಥಳಾವಕಾಶ ಕಲ್ಪಿಸುತ್ತಲೇ ಬಂದಿದೆ. ‘ಸಿನಿಮಾ ರಂಜನೆ’ಯು ಹೊಸ ಸಹಸ್ರಮಾನದಲ್ಲಿ ‘ಸಿನಿಮಾ ಕಿರುತೆರೆ ರಂಜನೆ’ ಎಂದು ಮಾಸ್ಟ್‌ಹೆಡ್‌ ಬದಲಿಸಿ ಕೊಂಡಿದ್ದು, ಮನೋರಂಜನೆಯ ಪಲ್ಲಟಗಳಿಗೆ ಪತ್ರಿಕೆ ಕೊಡುತ್ತಾ ಬಂದಿರುವ ಆದ್ಯತೆಗೆ ಹಿಡಿದ ಕನ್ನಡಿ.

‘ಫಿಲ್ಮ್‌ ಡೈರಿ’, ‘ಗಾಳಿಮಾತು’, ‘ಕನಸು ಕನ್ನಡಿ’, ಬಾಲಿವುಡ್‌ ಸಾರವನ್ನು ಒಳಗೊಂಡಂತಹ ‘ಥಳುಕು ಬಳುಕು’ ಪತ್ರಿಕೆಯಲ್ಲಿ ಜನಮೆಚ್ಚುಗೆ ಪಡೆದಂತಹ ಅಂಕಣಗಳು. ‘ಥಳುಕು ಬಳುಕು’ ಸ್ಥಿರಶೀರ್ಷಿಕೆಯ ಬರಹಗಳು ‘ಸಾಪ್ತಾಹಿಕ ಪುರವಣಿ’ಯ ಕೊನೆಯ ಪುಟದಲ್ಲಿ ಹಲವು ಸಂಚಿಕೆಗಳಲ್ಲಿ ಪ್ರತಿ ಭಾನುವಾರ ಪ್ರಕಟವಾದವು. ಬೆಂಗಳೂರು, ಹುಬ್ಬಳ್ಳಿ–ಧಾರವಾಡ ಹಾಗೂ ಮೈಸೂರು ನಗರಗಳನ್ನು ಕೇಂದ್ರೀಕರಿಸಿಕೊಂಡ ‘ಮೆಟ್ರೊ’ ಪುರವಣಿಗಳೂ ಪತ್ರಿಕೆಯ ಹೊಸ ಸಹಸ್ರಮಾನದ ಕೊಡುಗೆಗಳು. ಅವುಗಳಲ್ಲಿಯೂ ಸಿನಿಮಾ ಚಟುವಟಿಕೆಗಳ ಹಾಗೂ ಚಿತ್ರರಂಗದವರನ್ನು ಒಳಗೊಂಡಂತಹ ಲವಲವಿಕೆಯ ಬರವಣಿಗೆಳು ಬೆಳಕು ಕಂಡವು.

1985ರಲ್ಲಿ ಸಿನಿಮಾ ರಂಜನೆ ಪುರವಣಿ ಪ್ರಾರಂಭವಾದ ನಂತರ ‘ನಾವು ನೋಡಿದ ಚಿತ್ರ’ ಎನ್ನುವ ಸ್ಥಿರ ಶೀರ್ಷಿಕೆಯಡಿ ಸಿನಿಮಾ ವಿಮರ್ಶೆಗಳನ್ನು ಪತ್ರಿಕೆ ಪ್ರಕಟಿಸುತ್ತಾ ಬಂದಿದೆ. ಈಗಲೂ ಇದೇ ಶೀರ್ಷಿಕೆಯಲ್ಲಿ ಚಲನಚಿತ್ರ ವಿಮರ್ಶೆಗಳು ಮೂಡಿಬರುತ್ತಿವೆ. ‘ಪ್ರಜಾವಾಣಿ’ಯ ಸಿನಿಮಾ ವಿಮರ್ಶೆಗಳು ಅಕಡೆಮಿಕ್‌ ವಲಯದಲ್ಲಿಯೂ ಅನೇಕರ ಮೆಚ್ಚುಗೆಗೆ ಕಾರಣವಾಗಲು ಅವುಗಳ ನಿಷ್ಪಕ್ಷಪಾತ ಧೋರಣೆಯೇ ಕಾರಣ.

ಪ್ರವಾಹ ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವುದು, ಗೋಕಾಕ್‌ ಚಳವಳಿ, ಕಾವೇರಿ ಹೋರಾಟ, ಹೊಗೇನಕಲ್ ವಿವಾದದ ಸಂದರ್ಭದ ಹೋರಾಟ, ಡಬ್ಬಿಂಗ್‌ ಕುರಿತ ಅಲೆಗಳ ಏರಿಳಿತ...ಇವೆಲ್ಲ ಸಾಂಸ್ಕೃತಿಕ
ಸಂದರ್ಭಗಳಲ್ಲಿ ಸಿನಿಮಾ ರಂಗದವರ ಕದಲಿಕೆಗಳಿಗೆ ಪತ್ರಿಕೆಯು ಕನ್ನಡಿಯಾಗಿದೆ. 2006ರ ನಂತರ ‘ಸಾಪ್ತಾಹಿಕ ಪುರವಣಿ’ಯ ಕೆಲವು ಸಂಚಿಕೆಗಳಲ್ಲಿ ಸಿನಿಮಾ ಸಮಕಾಲೀನ ವಿಷಯಗಳನ್ನು ಒಳಗೊಂಡ ಮಂಥನ–ವಿಶ್ಲೇಷಣೆ ಸ್ವರೂಪದ ಗಟ್ಟಿ ಬರಹಗಳು ಪ್ರಕಟಗೊಂಡವು.

ಡಿಜಿಟಲ್ ವೇದಿಕೆಗೆ ಪತ್ರಿಕೆ ಪ್ರವೇಶಿಸಿದ ಮೇಲೆ prajavani.net ವೆಬ್‌ಸೈಟ್‌ನಲ್ಲಿ ಸಿನಿಮಾ ಸುದ್ದಿಗಳು ಪುಂಖಾನುಪುಂಖವಾಗಿ ಪ್ರಕಟಗೊಳ್ಳುತ್ತಿವೆ. ವಿಡಿಯೊ ಸಾಧ್ಯತೆಗೂ ಸಂಸ್ಥೆ ತೆರೆದುಕೊಂಡಿದ್ದು, ಪತ್ರಿಕಾ ಬರಹ
ಗಳೊಟ್ಟಿಗೆ ಕ್ಯೂಆರ್‌ ಕೋಡ್‌ ಮೂಲಕ ಪ್ರಮುಖ ಸಿನಿಮಾ ಸುದ್ದಿಗಳ ವಿಡಿಯೊ ತುಣುಕುಗಳನ್ನೂ ಒದಗಿಸುತ್ತಿದೆ.

ಚಿತ್ರೋದ್ಯಮದ ಪರವಾದ ಪತ್ರಿಕೆ ಎನಿಸಿಕೊಳ್ಳದೆ, ಅದನ್ನು ಎಚ್ಚರಿಸುವ ಹಾಗೂ ವಿಶ್ವಾಸಾರ್ಹತೆಯ ಅಸ್ಮಿತೆಯ ಛಾಪನ್ನು ‘ಪ್ರಜಾವಾಣಿ’ ಕಾಲದುದ್ದಕ್ಕೂ ಮೂಡಿಸಿದೆ.

ಒಂದು ಪುಟದಿಂದ ಹಲವು ಪುಟಗಳಿಗೆ...

ಸಿನಿಮಾ ಸುದ್ದಿಗೆ ‘ಪ್ರಜಾವಾಣಿ’ಯ ‘ಸಾಪ್ತಾಹಿಕ ಪುರವಣಿ’ಯ ಪುಟವೊಂದರಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿತ್ತು. ‘ಸಾಪ್ತಾಹಿಕ ಪುರವಣಿ’ ಅಧಿಕೃತವಾಗಿ ಆರಂಭವಾದದ್ದು 1956ರಲ್ಲಿ. ಈ ಪುರವಣಿ ಪ್ರಾರಂಭವಾಗುವ ಮುಂಚೆ ದಿನಪತ್ರಿಕೆಯ ಪ್ರತಿ ಭಾನುವಾರದ ಸಂಚಿಕೆಯಲ್ಲಿಯೇ ಸಿನಿಮಾ ಸುದ್ದಿಗಳು ಪ್ರಕಟವಾಗಿದ್ದವು.

1951ರ ಮಾರ್ಚ್ 25ರ ಸಂಚಿಕೆಯ ನಾಲ್ಕನೇ ಪುಟದಲ್ಲಿ ನಟ, ನಿರ್ದೇಶಕ ಹಾಗೂ ಕಲಾಪ್ರೇಮಿ ಕಿಶೋರ್‌ ಸಾಹು ಅವರನ್ನು ಕುರಿತ ವ್ಯಕ್ತಿಚಿತ್ರವೊಂದು ಪ್ರಕಟವಾಗಿತ್ತು. ದೇವಿಕಾರಾಣಿ ಅವರ ಸಮಕಾಲೀನರಾದ ಕಿಶೋರ್, ನವತಾರೆಯರನ್ನು ಹುಟ್ಟುಹಾಕಿದ ಸಿನಿಮಾ ನಿರ್ಮಾತೃ. 22 ಸಿನಿಮಾಗಳಲ್ಲಿ ನಟನಾಗಿದ್ದೇ ಅಲ್ಲದೆ, 20 ಸಿನಿಮಾಗಳನ್ನು 1937ರಿಂದ 1980ರ ಅವಧಿಯಲ್ಲಿ ನಿರ್ದೇಶಿಸಿದ್ದ ದಿಗ್ಗಜ. ಕನ್ನಡ ಪತ್ರಿಕೆಯು ಹಿಂದಿ ಸಿನಿಮಾದ ಅಗ್ರಗಣ್ಯರ ವಿಷಯದಲ್ಲಿಯೂ ತೋರಿದ ಅಕ್ಷರ ಪ್ರೀತಿಗೆ ಇದು ಸಾಕ್ಷಿ.

ಸಿನಿಮಾದ ಸ್ಥಿರಶೀರ್ಷಿಕೆಗಳನ್ನು ಸಂಗ್ರಹಿಸಿ ಪ್ರಕಟಿಸುವುದೇ ಕಷ್ಟವಾಗಿದ್ದ 1950ರ ದಶಕದಲ್ಲಿ ‘ಪ್ರಜಾವಾಣಿ’ಯ ಪ್ರತಿನಿಧಿಗಳು ಮೈಸೂರಿಗೆ ಹೋಗಿ, ಅಲ್ಲಿಂದ ಕನ್ನಡ ಸಿನಿಮಾಗಳ ಮಾಹಿತಿ ಹಾಗೂ ಚಿತ್ರಗಳನ್ನು ಪಡೆದು, ತಂದು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದ್ದ ಸಂದರ್ಭವನ್ನು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ನೆನಪಿಸಿಕೊಳ್ಳುತ್ತಾರೆ.

1956ರ ಜೂನ್ 17ರ ‘ಸಾಪ್ತಾಹಿಕ ಪುರವಣಿ’ಯ 8ನೇ ಪುಟದಲ್ಲಿ ‘ಟಾಂಗಾವಾಲಿ’ ಹಿಂದಿ ಸಿನಿಮಾದ ವಿಮರ್ಶೆ ಪ್ರಕಟವಾಗಿತ್ತು. ನಿರೂಪಾರಾಯ್, ಬಲರಾಜ್ ಸಹಾನಿ ಜೋಡಿ ಇದ್ದ ಆ ಸಿನಿಮಾದ ವಿಮರ್ಶೆಗೆ ಪೂರಕವಾದ ಸ್ಥಿರಚಿತ್ರ ಇರಲಿಲ್ಲ. ಅದಕ್ಕೆ ಪ್ರಮುಖ ನಟ–ನಟಿಯರ ರೇಖಾಚಿತ್ರವನ್ನು ಬರೆಸಿ, ಸಿನಿಮಾ ವಿಮರ್ಶೆಯೊಟ್ಟಿಗೆ ಪ್ರಕಟಿಸಲಾಗಿತ್ತು. ಬೆಂಗಳೂರಿನಲ್ಲಿ ಯಾವ ಚಿತ್ರಮಂದಿರಲ್ಲಿ ಆ ಸಿನಿಮಾ ಎಂದು ತೆರೆಕಂಡಿತು ಎನ್ನುವ ಮಾಹಿತಿಯನ್ನು ಕೂಡ ವಿಮರ್ಶೆ ಒಳಗೊಂಡಿತ್ತು.

ಮದ್ರಾಸ್‌ನಲ್ಲಿ ದಕ್ಷಿಣ ಭಾರತದ ಸಿನಿಮಾ ಚಟುವಟಿಕೆ ನಡೆಯುತ್ತಿದ್ದ ಕಾಲಘಟ್ಟದಲ್ಲಿ ‘ಪ್ರಜಾವಾಣಿ’ಯು ತನ್ನ ಸಿನಿಮಾ ವರದಿಗಳಿಗೆ ಅಧಿಕೃತತೆ ದಕ್ಕಿಸಿಕೊಡಲೆಂದೇ ‘ಮದ್ರಾಸ್‌ ಚಿತ್ರವಾರ್ತೆ’ ಎಂಬ ಉಪಶೀರ್ಷಿಕೆಯಡಿ ಅಲ್ಲಿನ ಸುದ್ದಿ ಪ್ರಕಟಿಸಿತು. ‘ಪ್ರಜಾವಾಣಿ ಪ್ರತಿನಿಧಿಯಿಂದ’ ಎನ್ನುವ ಒಕ್ಕಣಿಕೆ ಕೂಡ ಸಿನಿಮಾ ಸುದ್ದಿಗೆ ಪತ್ರಿಕೆಯು ನೀಡಿದ್ದ ಮನ್ನಣೆಯನ್ನು ಬಿಂಬಿಸುತ್ತದೆ. ಕೆಲವು ನಿರ್ಮಾಣ ಸಂಸ್ಥೆಗಳವರು ಮದ್ರಾಸ್‌ಗೆ ವರದಿಗಾರರನ್ನು ಕರೆದುಕೊಂಡು ಹೋಗಿ, ಸಿನಿಮಾಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದುದೂ ಉಂಟು. ಒಂದು ಬದಿಯಲ್ಲಿ ‘ಮದ್ರಾಸ್‌ ಚಿತ್ರವಾರ್ತೆ’, ಇನ್ನೊಂದು ಬದಿಯಲ್ಲಿ ‘ಮುಂಬೈ ಚಿತ್ರವಾರ್ತೆ’ ಎನ್ನುವ ಸ್ಥಿರಶೀರ್ಷಿಕೆಗಳಡಿ ಚಲನಚಿತ್ರ ಚಟುವಟಿಕೆಯ ವರದಿಗಳು ಪ್ರಕಟವಾಗಿವೆ.

‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಸಿನಿಮಾ ರಂಜನೆ’ ಎನ್ನುವ ‘ಮಾಸ್ಟ್‌ ಹೆಡ್‌’ ಸಹಿತ ಪ್ರತ್ಯೇಕ ಸಿನಿಮಾ ಪುಟ ಮೊದಲು ಪ್ರಕಟವಾಗಿದ್ದು 1982, ಏಪ್ರಿಲ್‌ 8ರಂದು. 1985ರಲ್ಲಿ ಅದು ಪ್ರತ್ಯೇಕ ಪುರವಣಿಯ ಸ್ವರೂಪ ಪಡೆದುಕೊಂಡಿತು. ಪ್ರತಿ ಶುಕ್ರವಾರ ಸಿನಿಮಾಗೇ ಮೀಸಲಾದ ಎಂಟು, ಆರು, ನಾಲ್ಕು ಪುಟಗಳ ಪುರವಣಿಯನ್ನು ಪತ್ರಿಕೆ ನೀಡುತ್ತಾ ಬಂದಿತು.

ಸಿನಿಮಾ ಚಿತ್ರೀಕರಣದ ಚಟುವಟಿಕೆ, ಹೊಸದಾಗಿ ಸೆಟ್ಟೇರಿದ ಸಿನಿಮಾಗಳ ಮಾಹಿತಿ, ಗಾಸಿಪ್, ಸಂದರ್ಶನಗಳು, ‘ಚಿತ್ರದರ್ಶಿ’ ಹೆಸರಿನಲ್ಲಿ ಬಿಡುಗಡೆಯಾದ ಸಿನಿಮಾಗಳ ಮಾಹಿತಿ ಎಲ್ಲವೂ ಅದರಲ್ಲಿ ಇದ್ದವು. ಆಗಲೂ ಹಿಂದಿ ಹಾಗೂ ಬೇರೆ ಭಾಷೆಗಳ ಸಿನಿಮಾ ಸಂಬಂಧಿ ಸುದ್ದಿಗಳಿಗೂ ಜಾಗ ಮೀಸಲಿತ್ತು.

‘ಪ್ರಜಾವಾಣಿ’ ಹಾಗೂ ಕನ್ನಡ ಚಿತ್ರರಂಗ ಜೋಡೆತ್ತುಗಳಂತೆ. ಎರಡೂ ಒಂದನ್ನೊಂದು ಮೇಲೆತ್ತುತ್ತಾ ಬಂದಿವೆ. ‘ಪ್ರಜಾವಾಣಿ’ಯಲ್ಲಿ ಹಾಗೂ ಅದರ ನಿಯತಕಾಲಿಕಗಳಲ್ಲಿ ಯಾವುದಾದರೂ ನಟಿಯ ಫೋಟೊ ಪ್ರಕಟವಾದರೆ ಸಾಕು, ಅವಳು ಬದುಕು ಕಟ್ಟಿಕೊಳ್ಳುವುದು ನಿಶ್ಚಿತ ಎನ್ನುವ ಅಭಿಪ್ರಾಯವಿತ್ತು. ಅದು ನಿಜವೂ ಹೌದು. ಘನತೆಯನ್ನು ಇಷ್ಟು ಕಾಲವೂ ಕಾಪಾಡಿಕೊಂಡು ಬಂದಿರುವ ಪತ್ರಿಕೆಯಲ್ಲಿ ನನ್ನ ಬಗೆಗಿನ ವರದಿಗಳನ್ನೂ ಓದಿ ಎಷ್ಟೋ ಸಲ ಪುಳಕಗೊಂಡಿರುವೆ

-ಜಯಮಾಲಾ, ನಟಿ

ನನ್ನ ತಂದೆ ಶಂಕರ್‌ ಸಿಂಗ್ ಮಹಾತ್ಮ ಪಿಕ್ಚರ್ಸ್ ಮೂಲಕ ಸಿನಿಮಾಗಳನ್ನು ನಿರ್ಮಿಸಿದರು. ಆಗ ‘ಪ್ರಜಾವಾಣಿ’ ಪ್ರತಿನಿಧಿ ಮೈಸೂರಿಗೆ ಬಂದು ವರದಿ–ಚಿತ್ರಗಳನ್ನು ಪಡೆದುಕೊಂಡು ಹೋಗುತ್ತಿದ್ದರು. ನಮಗೆಲ್ಲ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದಾಗಲೆಲ್ಲ ಖುಷಿಯಾಗುತ್ತಿತ್ತು. ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಸಿನಿಮಾಗಳಿಗೆ ಸಬ್ಸಿಡಿ ನೀಡಬೇಕೆಂಬ ಸುದ್ದಿ ಹೊರಬಿತ್ತು. ಅದನ್ನು ‘ಪ್ರಜಾವಾಣಿ’ ಆದ್ಯತೆ ನೀಡಿ ಪ್ರಕಟಿಸಿದ್ದು ಇನ್ನೂ ನೆನಪಿದೆ. ನನ್ನ ಅಂಕಣ ‘ನೂರೊಂದು ನೆನಪು’ ಪತ್ರಿಕೆಯಲ್ಲಿ ಪ್ರಕಟವಾದಾಗಲೂ ಹರಿದುಬಂದ ಜನಮೆಚ್ಚುಗೆ ಮರೆಯಲಾಗದು

- ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು, ನಿರ್ದೇಶಕ

ನಾವೆಲ್ಲ ‘ಪ್ರಜಾವಾಣಿ’ಯ ಜತೆಗೇ ಬೆಳೆದೆವು. ಒಂದು ಫೋಟೊ, ವರದಿ ಪ್ರಕಟವಾದರೂ ನಮಗೆ ಖುಷಿಯಾಗುತ್ತಿತ್ತು. ಅದರಲ್ಲಿ ನನ್ನ ಹೆಸರನ್ನು ನೋಡಿ ಎಷ್ಟೋ ಜನರಿಗೆ ತೋರಿಸುತ್ತಿದ್ದೆ. ಪತ್ರಿಕೆಯ ಸುದ್ದಿ ಎಂದರೆ ನಮಗೆಲ್ಲ ಒಂಥರಾ ಸರ್ಟಿಫಿಕೇಟ್‌ ಇದ್ದಂತಿತ್ತು

- ಬಿ.ಎಸ್. ದ್ವಾರಕೀಶ್, ನಟ, ನಿರ್ದೇಶಕ

ಪ್ರಜಾವಾಣಿ’ಯಲ್ಲಿನ ಸಿನಿಮಾ ಬರವಣಿಗೆ ನಮ್ಮ ಪಾಲಿಗೆ ಮೌಲ್ಯ ವ್ಯವಸ್ಥೆಯಂತೆ. ಸಿನಿಮಾ ಪಠ್ಯವು ಸಾಂಸ್ಕೃತಿಕ ಶಕ್ತಿಯಾಗಿ ಅನಾವರಣಗೊಳ್ಳುತ್ತಿತ್ತು. ಅಲ್ಲಿ ಏನು ಬರೆದಿದ್ದಾರೆ ಎನ್ನುವ ತಹತಹ ಇರುತ್ತಿತ್ತು. ‘ಚಿನ್ನಾರಿಮುತ್ತ’, ‘ಸಂತ ಶಿಶುನಾಳ ಶರೀಫ’ ತರಹದ ಸಿನಿಮಾ ಮಾಡಿದಾಗ ಪತ್ರಿಕೆ ಬರೆದ ರೀತಿಯಿಂದ ಸಿಕ್ಕ ಮನ್ನಣೆ ನೆನಪಿನಲ್ಲಿದೆ

- ಟಿ.ಎಸ್. ನಾಗಾಭರಣ, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT