ಬುಧವಾರ, ಆಗಸ್ಟ್ 12, 2020
21 °C

ಆಳ- ಅಗಲ | ಕೋವಿಡ್‌ ವಿರುದ್ಧ ‘ಸಮೂಹ ಶಕ್ತಿ’ ಅಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

covid19

ಏನಿದು ಹರ್ಡ್‌ ಇಮ್ಯುನಿಟಿ?

‘ಸಮೂಹ ರೋಗ ನಿರೋಧಕ ಶಕ್ತಿ’ ಅಥವಾ ಹರ್ಡ್‌ ಇಮ್ಯುನಿಟಿ ಎಂದರೆ ಜನರು ಸೋಂಕು ರೋಗವೊಂದರ ವಿರುದ್ಧ ಬೆಳೆಸಿಕೊಂಡಿರುವ ಪ್ರತಿರೋಧ ಶಕ್ತಿ. ಸಾಮೂಹಿಕ ಲಸಿಕೆ ಕಾರ್ಯಕ್ರಮದ ಮೂಲಕ ಕೃತಕವಾಗಿ ಇದನ್ನು ಸಾಧ್ಯವಾಗಿಸಬಹುದು. ಜನರು ಸೋಂಕಿಗೆ ತೆರೆದುಕೊಂಡ ಬಳಿಕ ಅವರ ದೇಹದಲ್ಲಿ ಪ್ರತಿರೋಧ ಶಕ್ತಿ ಉತ್ಪಾದನೆಯಾಗುವುದು ನೈಸರ್ಗಿಕ ವಿಧಾನ. ಯಾವುದೇ ಒಂದು ವೈರಸ್‌ ವಿರುದ್ಧ ಸಮುದಾಯದ ಶೇ 80ರಷ್ಟು ಮಂದಿಯಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿ ಆಗಿದೆ ಎಂದಿಟ್ಟುಕೊಳ್ಳೋಣ. ಇಂಥ ಪ್ರದೇಶದಲ್ಲಿ ವೈರಸ್‌ ಕಾಣಿಸಿದರೂ, ಐದರಲ್ಲಿ ನಾಲ್ಕು ಮಂದಿ ಸೋಂಕಿನ ಅಪಾಯದಿಂದ ಮುಕ್ತರಾಗಿರುತ್ತಾರೆ. ಇಂಥ ಕಡೆ ವೈರಸ್‌ ವೇಗವಾಗಿ ಪಸರಿಸುವುದಿಲ್ಲ. ಹೀಗಾಗಿ, ಪ್ರತಿರೋಧ ಶಕ್ತಿ ವೃದ್ಧಿಯಾಗಿಲ್ಲದ ವ್ಯಕ್ತಿಗಳ ಬಳಿಗೆ ಸೋಂಕು ತಲುಪುವುದು ವಿಳಂಬವಾಗುತ್ತದೆ ಅಥವಾ ತಲುಪದೆಯೇ ಇರಬಹುದು. ಹೀಗೆ ಅಭಿವೃದ್ಧಿಯಾದ ಶಕ್ತಿಯು ಕೆಲವೊಮ್ಮೆ ಬೇರೆ ಕೆಲವು ವೈರಸ್‌ಗಳಿಂದಲೂ ರಕ್ಷಣೆ ಒದಗಿಸುವುದಿದೆ. ಉದಾಹರಣೆಗೆ, 1918ರಲ್ಲಿ ಮೊದಲಬಾರಿಗೆ ಇನ್‌ಫ್ಲುಯೆನ್ಜ ಜ್ವರಕ್ಕೆ ಒಳಗಾಗಿ ಚೇತರಿಸಿಕೊಂಡ ಅನೇಕರಲ್ಲಿ, ಎಚ್‌1ಎನ್‌1 ಸೋಂಕನ್ನು ತಡೆಯಬಲ್ಲಂಥ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿದ್ದು ಕಂಡುಬಂದಿತ್ತು.

ಪ‍್ರತಿರೋಧ ಶಕ್ತಿ ವೃದ್ಧಿ ಸರಳವಲ್ಲ...

ಆಪಾಯಕಾರಿ ರೋಗಗಳಿಂದ ಸಮುದಾಯವನ್ನು ರಕ್ಷಿಸಲು ಇರುವ ಪ್ರಮುಖ ಮಾರ್ಗವೆಂದರೆ, ಸಮೂಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದು. ಇದನ್ನು ಸಾಧಿಸುವುದು ಅಷ್ಟು ಸರಳವಲ್ಲ. ‘ದಡಾರ’ವನ್ನು ಅತ್ಯಂತ ಅಪಾಯಕಾರಿ ಅಂಟುರೋಗ ಎಂದು ಹಿಂದೆ ಪರಿಗಣಿಸಲಾಗಿತ್ತು. ಒಬ್ಬನಲ್ಲಿ ಈ ಸೋಂಕು ಕಾಣಿಸಿಕೊಂಡರೆ ಆತನಿಂದ  18 ಮಂದಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತಿತ್ತು. ಅಂದರೆ, ಈ ಸೋಂಕಿನಿಂದ ಮುಕ್ತವಾಗಬೇಕೆಂದರೆ ಸಮುದಾಯದ ಶೇ 95ರಷ್ಟು ಮಂದಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಬೇಕಾಗಿತ್ತು.

ದಡಾರಕ್ಕೆ ಹೋಲಿಸಿದರೆ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣ ಕಡಿಮೆ. ಒಬ್ಬ ಸೋಂಕಿತ ವ್ಯಕ್ತಿಯು ಅದನ್ನು ಇಬ್ಬರು ಅಥವಾ ಮೂವರಿಗೆ ಹರಡ ಬಲ್ಲ ಅಷ್ಟೇ. ಅಂದರೆ, ಸಮುದಾಯದ ಶೇ 60ರಷ್ಟು ಮಂದಿಯಲ್ಲಿ ರೋಗ ನಿರೋಧಕ ಶಕ್ತಿಯು ಅಭಿವೃದ್ಧಿ ಹೊಂದಿದರೆ ಈ ಸೋಂಕನ್ನು ನಿಯಂತ್ರಿಸಬಹುದಾಗಿದೆ.

ಸೋಂಕು ಹರಡಲು ಅವಕಾಶ ಕೊಡಬೇಕೇ?

ಸೋಂಕು ಪಸರಿಸಿದರೆ ಜನರಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ ಎಂಬ ಕಾರಣಕ್ಕೆ, ವೈರಸ್‌ನ ಪ್ರಸರಣಕ್ಕೆ ಮುಕ್ತವಾಗಿ ಅವಕಾಶ ನೀಡಬಹುದೇ? ಕೊರೊನಾ ವಿಚಾರದಲ್ಲಿ ಕೆಲವು ರಾಷ್ಟ್ರಗಳು ಆರಂಭದಲ್ಲಿ ಈ ಪ್ರಯೋಗ ಮಾಡಿದ್ದವು. ಆದರೆ, ಸಾವುನೋವಿನ ಸಂಖ್ಯೆ ತೀವ್ರವಾದಾಗ ಲಾಕ್‌ಡೌನ್‌ ಮುಂತಾದ ಕ್ರಮಗಳನ್ನು ಕೈಗೊಳ್ಳ ಬೇಕಾಯಿತು. ಇತರ ಕಾಯಿಲೆಗಳ ವಿಚಾರದಲ್ಲೂ ಅಷ್ಟೇ, ಸೋಂಕು ಹರಡುವಿಕೆಗೆ ಅವಕಾಶ ನೀಡಿದರೆ ಸಾವುನೋವಿನ ಸಂಖ್ಯೆ ಹೆಚ್ಚಾಗುವ ಅಪಾಯವಿರುತ್ತದೆ. ಅದಕ್ಕಾಗಿ ಲಸಿಕೆಗಳ ಮೂಲಕ ರೋಗನಿರೋಧಕ ಶಕ್ತಿ ಅಭಿವೃದ್ಧಿ
ಪಡಿಸುವ ಯೋಜನೆಗಳನ್ನು ರೂಪಿಸಲಾಗುತ್ತದೆ.

ಲಸಿಕೆಗಳಿದ್ದರೂ ಕೆಲವೊಮ್ಮೆ ದೀರ್ಘಾವಧಿಗೆ ಸಮುದಾಯದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಕೆಲವು ವೈರಸ್‌ಗಳ ವಂಶವಾಹಿಯಲ್ಲಿ ಕಾಲಾಂತರದಲ್ಲಿ ಬದಲಾವಣೆಗಳಾಗಿ ಹೊಸ ಭೌತಿಕ ಲಕ್ಷಣಗಳೊಂದಿಗೆ ಮಾನವನ ಪ್ರತಿರಕ್ಷಣಾ ಕೋಟೆಯನ್ನು ಭೇದಿಸಿ ದಾಳಿ ಮಾಡುತ್ತವೆ.

ಭಾರತದ ಸ್ಥಿತಿ ಏನು?

ರಾಷ್ಟ್ರ ಮಟ್ಟದಲ್ಲಿ ನೋಡಿದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಆದರೆ, ಕೆಲವು ಸ್ಥಳಗಳಲ್ಲಿ ಇಂತಹ ಶಕ್ತಿ ಅಭಿವೃದ್ಧಿಯಾಗಿದೆ ಎಂದು ಸೋಂಕುಶಾಸ್ತ್ರಜ್ಞ ಜಯಪ್ರಕಾಶ್‌ ಮುಳಿಯಿಲ್‌ ಹೇಳುತ್ತಾರೆ. ದೆಹಲಿಯಲ್ಲಿ ನಡೆಸಿದ ಸಮೀಕ್ಷೆಯನ್ನು ಅವರು ಅದಕ್ಕೆ ಉದಾಹರಣೆಯಾಗಿ ನೀಡುತ್ತಾರೆ. ಜನರ ದೇಹದಲ್ಲಿ ಕೊರೊನಾ ವೈರಾಣು ಪ್ರತಿಕಾಯ ಇದೆಯೇ ಎಂಬ ಸಮೀಕ್ಷೆಯನ್ನು ದೆಹಲಿಯಲ್ಲಿ ನಡೆಸಲಾಗಿತ್ತು. ಶೇ 23ರಷ್ಟು ಮಂದಿಯಲ್ಲಿ ಪ್ರತಿಕಾಯ ಇರುವುದು ಪತ್ತೆಯಾಗಿತ್ತು.  

ಅನುಕೂಲಗಳೇನು?

* ಸಮೂಹದಲ್ಲಿ ಶೇ 50ಕ್ಕೂ ಹೆಚ್ಚು ಮಂದಿಯಲ್ಲಿ ಯಾವುದೇ ಸೋಂಕಿನ ವಿರುದ್ಧದ ನಿರೋಧಕ ಶಕ್ತಿ ವೃದ್ಧಿಯಾದರೆ, ಆಗ ಆ ಸೋಂಕು ‘ಸಾಂಕ್ರಾಮಿಕ’ ಎಂಬ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ

* ಅಲ್ಲೊಂದು, ಇಲ್ಲೊಂದು ಸೋಂಕು ಪ್ರಕರಣಗಳು ಮಾತ್ರ ಪತ್ತೆಯಾಗುತ್ತವೆ

* ಆಸ್ಪತ್ರೆಗೆ ಜನರು ಧಾವಿಸುವುದಿಲ್ಲ. ವೈದ್ಯರು ಯಾವುದೇ ಆತಂಕವಿಲ್ಲದೆ ರೋಗಿಗಳನ್ನು ಪರೀಕ್ಷಿಸಬಹುದಾಗಿದೆ

* ಪ್ರತ್ಯೇಕವಾಸದಂತಹ ಕ್ರಮಗಳ ಅಗತ್ಯ ಇರುವುದಿಲ್ಲ

***

‘ಇನ್ನಷ್ಟು ಸಮಯ ಕಾಯಬೇಕು’

ಕೊರೊನಾ ಸೋಂಕಿನ ವಿರುದ್ಧ ಸಮುದಾಯದಲ್ಲಿ ಸ್ವಾಭಾವಿಕ ರೋಗನಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ವೃದ್ಧಿಸಲು ಇನ್ನಷ್ಟು ಸಮಯ ಕಾಯಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಸ್ಪಷ್ಟವಾಗಿ ಹೇಳಿದೆ.

ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಸಮುದಾಯದ ಹಂತದಲ್ಲಿ ಇನ್ನೂ ಬೆಳೆದಿಲ್ಲ. ಹೆಚ್ಚು, ಹೆಚ್ಚು ಜನರಿಗೆ ಸೋಂಕು ತಗುಲಿ ಅವರ ದೇಹದಲ್ಲಿ ಸೋಂಕು ತಡೆಗಟ್ಟುವ ಪ್ರತಿಕಾಯಗಳು (ಆ್ಯಂಟಿಬಾಡಿಸ್‌) ಬೆಳೆದರೆ ಹರ್ಡ್‌ ಇಮ್ಯುನಿಟಿ ತನ್ನಿಂದ ತಾನಾಗಿಯೇ ವೃದ್ಧಿಯಾಗುತ್ತದೆ ಎನ್ನುವುದು ಡಬ್ಲ್ಯುಎಚ್‌ಒ ವಾದ.

‘ಹರ್ಡ್‌ ಇಮ್ಯುನಿಟಿ ಬೆಳೆಯಲು ಜನ ಸಮುದಾಯದ ಶೇ 50 ರಿಂದ 60ರಷ್ಟು ಮಂದಿಯಲ್ಲಿ ರೋಗನಿರೋಧಶಕ್ತಿ ವೃದ್ಧಿಯಾಗಬೇಕು’ ಎನ್ನುತ್ತಾರೆ ವಿಶ್ವ ಆರೋಗ್ಯ ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್.

ಕೊರೊನಾ ಸೋಂಕಿತ ದೇಶಗಳಲ್ಲಿ ಇಲ್ಲಿವರೆಗೂ ನಡೆಸಿರುವ ಅಧ್ಯಯನದ ಪ್ರಕಾರ ಶೇ 5ರಿಂದ 10ರಷ್ಟು ಜನರ ದೇಹದಲ್ಲಿ ಪ್ರತಿಕಾಯಗಳು ಪತ್ತೆಯಾಗಿವೆ. ಕೆಲವು ಕಡೆ ಗರಿಷ್ಠ ಶೇ 20ರಷ್ಟು ಜನರ ದೇಹದಲ್ಲಿ ಪ್ರತಿಕಾಯಗಳು ಕಂಡಿವೆ.

ಸಮುದಾಯದ ಹಂತದಲ್ಲಿ ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿ ವೃದ್ಧಿಸಲು ಇನ್ನೂ ಹೆಚ್ಚು, ಹೆಚ್ಚು ಜನರಿಗೆ ಸೋಂಕು ತಗುಲಿ ಅವರು ಗುಣಮುಖರಾಗಬೇಕು. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಜನರು ಜೀವ ತೆರಬೇಕಾಗುತ್ತದೆ. 

ಆದ್ದರಿಂದ ‘ಹರ್ಡ್‌ ಇಮ್ಯುನಿಟಿ’ಗೆ ಕಾಯುವುದಕ್ಕಿಂತ, ವಿಜ್ಞಾನಿಗಳು ತ್ವರಿತಗತಿಯಲ್ಲಿ ಲಸಿಕೆ ಅಭಿವೃದ್ಧಿಪಡಿಸುವತ್ತ ಗಮನ ಹರಿಸುವುದು ಒಳ್ಳೆಯದು. ಅದರಿಂದ ಕೊರೊನಾ ಸೋಂಕು ಹೆಚ್ಚಳ ಮತ್ತು ಅದರಿಂದಾಗುವ ಸಾವಿನ ಪ್ರಮಾಣ ತಡೆಯಲು ಸಾಧ್ಯ ಎಂಬುದು ಡಬ್ಲ್ಯುಎಚ್‌ಒ ಅಭಿಮತ.

***
ಮುಂಬೈ ಕೊಳೆಗೇರಿಗಳಲ್ಲಿ ಅಧಿಕ

ದೆಹಲಿ ಹಾಗೂ ಮುಂಬೈನಲ್ಲಿ ಇತ್ತೀಚೆಗೆ ನಡೆಸಿದಸಮೀಕ್ಷೆಗಳಲ್ಲಿ ಸಮುದಾಯ ರೋಗನಿರೋಧಕ ಶಕ್ತಿ ಅಭಿವೃದ್ಧಿ ಆಗಿದೆ ಎಂಬ ಅಂಶ ಪತ್ತೆಯಾಗಿದೆ. ಜನರ ದೇಹದಲ್ಲಿ ಕೊರೊನಾ ವೈರಾಣುವಿಗೆ ಪ್ರತಿಕಾಯ (ಆ್ಯಂಟಿಬಾಡಿ) ಸೃಷ್ಟಿಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಸೆರೊ ಸರ್ವೇಯಲನ್ಸ್ ಸಮೀಕ್ಷೆ ನಡೆಸಲಾಗಿತ್ತು. ಮುಂಬೈ ಕೊಳೆಗೇರಿಯ ಶೇ 57ರಷ್ಟು ಜನರು ಸೋಂಕಿಗೆ ತೆರೆದುಕೊಂಡಿದ್ದರೂ, ಅವರು ಸಹಜ ಪ್ರಕ್ರಿಯೆಯಲ್ಲಿ ಗುಣಮುಖರಾಗಿದ್ದಾರೆ. ಕೊಳೆಗೇರಿಯೇತರ ಪ್ರದೇಶಗಳಲ್ಲಿ ಈ ಪ್ರಮಾಣ ಶೇ 16ರಷ್ಟು ಮಾತ್ರ ಎಂದು ಸಮೀಕ್ಷೆ ತಿಳಿಸಿದೆ.

***

ದೆಹಲಿ: ಶೇ 23 ಮಂದಿಯಲ್ಲಿ ಪ್ರತಿಕಾಯ ಪತ್ತೆ

ದೆಹಲಿಯಲ್ಲಿ ಮೊದಲ ಬಾರಿಗೆ ಸೆರೊ ಸಮೀಕ್ಷೆ ನಡೆಯಿತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 22.86 ಮಂದಿಯಲ್ಲಿ ಪ್ರತಿಕಾಯ ಇರುವುದು ಕಂಡುಬಂದಿತ್ತು. ಸೋಂಕಿಗೆ ತೆರೆದುಕೊಂಡ ಇವರೆಲ್ಲಾ ನೈಸರ್ಗಿಕವಾಗಿ ಗುಣಮುಖರಾಗಿದ್ದಾರೆ. 21,800 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಈ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೂನ್ 27ರಿಂದ ಜುಲೈ 10 ನಡುವಿನ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಆಗಸ್ಟ್ ಮೊದಲ ವಾರದಲ್ಲಿ ಎರಡನೇ ಹಂತದ ಸಮೀಕ್ಷೆ ನಡೆಸಲು ದೆಹಲಿ ಪಾಲಿಕೆ ಸಜ್ಜಾಗಿದೆ. ಆಗಸ್ಟ್ ಮಧ್ಯಭಾಗದಲ್ಲಿ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.

***

ಸೆರೋ ಸಮೀಕ್ಷೆ ಹೇಗಿರುತ್ತದೆ?

 * ಸಮೀಕ್ಷೆಗಾಗಿ 3–4 ಸದಸ್ಯರು ಇರುವ ನೂರಕ್ಕೂ ಹೆಚ್ಚು ಗುಂಪುಗಳನ್ನು ರಚಿಸಲಾಗುತ್ತದೆ

* ಪ್ರತಿಯೊಂದು ತಂಡದಲ್ಲಿ ಆಶಾ ಕಾರ್ಯಕರ್ತೆ, ಒಬ್ಬ ನರ್ಸ್, ರಕ್ತದ ಮಾದರಿ ಸಂಗ್ರಹಿಸುವವರು ಅಥವಾ ಲ್ಯಾಬ್ ಟೆಕ್ನಿಷಿಯನ್ ಇರುತ್ತಾರೆ

* ಪ್ರತಿ ತಂಡವು ಗೊತ್ತುಪಡಿಸಿದ ಮನೆಯ ವ್ಯಕ್ತಿಯಿಂದ ರಕ್ತದ ಮಾದರಿ ಸಂಗ್ರಹಿಸುತ್ತದೆ

*ವಯಸ್ಸು, ಲಿಂಗ ಹಾಗೂ ಪ್ರದೇಶವಾರು ಜನರನ್ನು ಗುರುತಿಸಿ ಮಾದರಿ ಸಂಗ್ರಹಿಸಲಾಗುತ್ತದೆ

* ಪ್ರತಿ ಜಿಲ್ಲೆಯ ಪ್ರತಿ ವಾರ್ಡ್‌ನಿಂದ ಇಂತಿಷ್ಟು ಮಾದರಿಗಳನ್ನು ಸಂಗ್ರಹಿಸುವ ಗುರಿ ಇರುತ್ತದೆ

* ವ್ಯಕ್ತಿಯೊಬ್ಬರ ದೇಹದ 3–5 ಎಂ.ಎಲ್ ರಕ್ತದ ಮಾದರಿ ಸಂಗ್ರಹ

* ಪ್ರತೀ ತಂಡವು ದಿನವೊಂದಕ್ಕೆ 25–40 ರಕ್ತದ ಮಾದರಿಗಳನ್ನು ಸಂಗ್ರಹಿಸುತ್ತದೆ

******

130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದ ಭಾರತದಂತಹ ದೇಶದಲ್ಲಿ ಸಮೂಹರೋಗನಿರೋಧಕ ಶಕ್ತಿ ವೃದ್ಧಿ ಸುಲಭದ ಮಾತಲ್ಲ. ಅದಕ್ಕಾಗಿ ನಾವು ಇನ್ನೂ ಸಾಕಷ್ಟು ಸಮಯ ಕಾಯಬೇಕಾಗುತ್ತದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಕೋವಿಡ್‌–19 ನಿರೋಧಕ ಲಸಿಕೆಯೊಂದೇ ನಮ್ಮ ಮುಂದಿರುವ ಆಯ್ಕೆ

– ರಾಜೇಶ್‌ ಭೂಷಣ್‌, ನಿಯೋಜಿತ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಸಚಿವಾಲಯ

***

ಹರ್ಡ್‌ ಇಮ್ಯುನಿಟಿಗಿಂತ, ಲಸಿಕೆಯೇ ಹೆಚ್ಚು ಸೂಕ್ತ

ಸೋಂಕಿನ ನಂತರ ಸ್ವಾಭಾವಿಕವಾಗಿ ಬರುವ ಹರ್ಡ್‌ ಇಮ್ಯುನಿಟಿಗಿಂತ ಲಸಿಕೆಯ ಮೂಲಕ ಗಳಿಸುವ ರೋಗನಿರೋಧಕ ಶಕ್ತಿಯೇ ಪರಿಣಾಮಕಾರಿಯಾಗಿರುತ್ತದೆ

ಪ್ರೊಫೆಸರ್‌ ಫ್ರಾಂಕ್‌ ಬೆಲ್‌, ನಾಟಿಂಗ್‌ಹ್ಯಾಮ್‌ ವಿಶ್ವವಿದ್ಯಾಲಯ

ಕೊರೊನಾ ಸೋಂಕಿನ ವಿರುದ್ಧ ಇದುವರೆಗೂ ಯಾವ ರಾಷ್ಟ್ರವೂ ಸಂಪೂರ್ಣ ‘ಹರ್ಡ್‌ ಇಮ್ಯುನಿಟಿ’ಯನ್ನು ಸಾಧಿಸಿಲ್ಲ. ಆದರೂ, ಲಸಿಕೆ, ಔಷಧಿಗಳ ನೆರವು ಇಲ್ಲದೆ ಸೋಂಕಿನ ವಿರುದ್ಧ ವಿಶ್ವದಾದ್ಯಂತ ನಡೆಯುತ್ತಿರುವ ಹೋರಾಟಗಳಿಗೆ ಹೆಚ್ಚಿನ ಮಹತ್ವ, ಒತ್ತು ನೀಡಬೇಕಾಗುತ್ತದೆ

ಥೋರ್ಪ್‌, ವಿಜ್ಞಾನ ಲೇಖಕ

ಯಾವುದೇ ಸೋಂಕಿನ ವಿರುದ್ಧ ಸಮುದಾಯವೊಂದು ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿ ಗಳಿಸುವುದು ಸುಲಭದ ಮಾತಲ್ಲ. ಒಟ್ಟುಜನಸಂಖ್ಯೆಯಲ್ಲಿ ಹೆಚ್ಚಿನ ಜನರು (ಕನಿಷ್ಠ ಶೇ1ರಷ್ಟು) ಸೋಂಕಿಗೆತುತ್ತಾಗಬೇಕಾಗುತ್ತದೆ ಇಲ್ಲವೇ ಸಾವನ್ನಪ್ಪಬೇಕಾಗುತ್ತದೆ

ಸ್ನೇಹಲ್‌ ಶೇಟ್ಕರ್‌, ಪ್ರಾಧ್ಯಾಪಕರು, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು