ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮತ: ಹಿಜಾಬ್‌ ಬೇಕು–ಬೇಡಗಳ ಹೋರಾಟ

Last Updated 30 ಅಕ್ಟೋಬರ್ 2022, 20:00 IST
ಅಕ್ಷರ ಗಾತ್ರ

ವಿವಿಧ ಕಾರಣಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಹೋರಾಟ ಮತ್ತು ಕರ್ನಾಟಕದಲ್ಲಿನ ಹಿಜಾಬ್ ವಿವಾದ ಒಂದೇ ಎಂದು ಅನ್ನಿಸಿದರೂ, ನಾವು ಅದನ್ನು ಬೇರೆ ಬೇರೆ ಆಗಿಯೇ ನೋಡಬೇಕು. ರಾಜಕೀಯ, ಧಾರ್ಮಿಕ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಎರಡನ್ನೂ ಭಿನ್ನ ಭಿನ್ನ ನೆಲೆಯಲ್ಲಿ ಗ್ರಹಿಸಬೇಕು. ‘ನೋಡಿ, ಅಲ್ಲಿನ ಮುಸ್ಲಿಂ ಯುವತಿಯರು ಹಿಜಾಬ್ ಬೇಡ ಎನ್ನುತ್ತಿದ್ದರೆ, ರಾಜ್ಯದ ವಿದ್ಯಾರ್ಥಿನಿಯರು ಬೇಕು ಅನ್ನುತ್ತಿದ್ದಾರೆ’ ಎಂದು ರಾಜ್ಯದ ವಿದ್ಯಾರ್ಥಿನಿಯರ ಬೇಡಿಕೆಯನ್ನು ಹಾಸ್ಯಾಸ್ಪದ ಮಾಡುವ ಪ್ರಯತ್ನವೂ ಸದ್ಯ ನಡೆಯುತ್ತಿದೆ.

‘ಓ ಜಗತ್ತೇ, ನನ್ನ ಮಾತು ಕೇಳು: ನನಗೆ ಕ್ರಾಂತಿ ಬೇಕು. ನಾನು ಸ್ವತಂತ್ರವಾಗಿ ಬದುಕಬೇಕು ಮತ್ತು ಇದಕ್ಕಾಗಿ ನಾನು ಸಾಯಲೂ ಸಿದ್ಧಳಿದ್ದೇನೆ. ಪ್ರಭುತ್ವದ ದಮನಕಾರಿ ಆಡಳಿತದಲ್ಲಿ ಪ್ರತಿ ನಿಮಿಷವೂ ಸಾಯುವ ಬದಲು, ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅವರ (ರಕ್ಷಣಾ ಪಡೆಗಳ) ಗುಂಡಿಗೆ ಬಲಿಯಾಗುತ್ತೇನೆ...’

ಇವು 17 ವರ್ಷದ ಇರಾನ್‌ನ ವಿದ್ಯಾರ್ಥಿನಿಯೊಬ್ಬಳ ಮಾತುಗಳು. ತಮ್ಮ ಶಾಲೆ–ಕಾಲೇಜುಗಳ ಕೊಠಡಿಗಳಿಂದ ಹೊರ ಬಂದ ನೂರಾರು ವಿದ್ಯಾರ್ಥಿಗಳು ಹಿಜಾಬ್ ವಿರೋಧಿ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗೆ ಭಾಗವಹಿಸಿದ ವಿದ್ಯಾರ್ಥಿಗಳನ್ನು ಇರಾನ್‌ನ ಸರ್ವಾಧಿಕಾರಿ ಆಡಳಿತವು ಮನೋರೋಗ ಚಿಕಿತ್ಸಾ ಕೇಂದ್ರಗಳಿಗೆ ಅಟ್ಟಿದೆ. ವಿದ್ಯಾರ್ಥಿ ಗಳನ್ನು ‘ಸರಿ’ ಮಾಡಲು ಮನೋರೋಗ ಚಿಕಿತ್ಸಾ ಕೇಂದ್ರ ಗಳಿಗೆ ಕಳುಹಿಸಲಾಗಿದೆ ಎಂದು ಇರಾನ್‌ನ ಶಿಕ್ಷಣ ಸಚಿವರು ಹೇಳಿದ್ದಾರೆ. ಹೀಗೆ ವಿದ್ಯಾರ್ಥಿಗಳು ‘ಸರಿ’ ಆಗಿದ್ದಾರೆ ಎಂದು ಅಲ್ಲಿನ ವೈದ್ಯರು ಹೇಳಿದ ಮೇಲೆಯೇ ಶಾಲಾ–ಕಾಲೇಜುಗಳನ್ನು ಪ್ರಾರಂಭಿಸುವುದಾಗಿಯೂಅವರು ಹೇಳಿದ್ದಾರೆ.

ಹಿಜಾಬ್ ಅನ್ನು ‘ಸರಿಯಾಗಿ’ ಧರಿಸಿಲ್ಲ ಎನ್ನುವ ಕಾರಣಕ್ಕೆ ಇರಾನ್‌ನ ಖುರ್ದ್‌ ಪ್ರಾಂತ್ಯದ ಮಹ್ಸಾ ಅಮೀನಿ ಎಂಬ ಯುವತಿಯನ್ನು ಬಂಧಿಸಿದ್ದ ಪೊಲೀಸರು, ಆಕೆಗೆ ಚಿತ್ರಹಿಂಸೆ ನೀಡಿದ್ದರು ಎಂದು ವರದಿಯಾಗಿದೆ. ಮೂರು ದಿನಗಳ ಕಾಲ ಠಾಣೆಯಲ್ಲಿದ್ದ ಅಮೀನಿ ಮೃತಪಟ್ಟರು. ಆಕೆಯ ಸಾವಿಗೂ ನಮಗೂ ಸಂಬಂಧ ಇಲ್ಲ ಎಂದು ಸರ್ಕಾರವು ಈಗಲೂ ವಾದಿಸುತ್ತಿದೆ. ಆಕೆಯ ಸಾವಿಗೆ ಪೊಲೀಸರೇ ನೇರ ಕಾರಣ ಎಂದು ಕುಟುಂಬದವರು ಹೇಳುತ್ತಿದ್ದಾರೆ.

‘ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ಹಲವು ತಂತ್ರಗಳನ್ನು ಹೂಡಿದೆ. ಪ್ರತಿಭಟನಕಾರರ ಮೇಲೆ ಸೇನೆಯು ಬಲ ಪ್ರಯೋಗ ನಡೆಸುತ್ತಿದೆ. ಮಹಿಳಾ ಪ್ರತಿಭಟನಕಾರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ. ಇಂಥ ಸರ್ಕಾರಿ ಪ್ರಯೋಜಿತ ಹತ್ಯೆಗಳ ಸಂಖ್ಯೆ 253 ದಾಟಿದೆ. 34 ಮಕ್ಕಳನ್ನೂ ಹತ್ಯೆ ಮಾಡಲಾಗಿದೆ’ ಎಂದು ‘ಇರಾನ್ ಹ್ಯೂಮನ್ ರೈಟ್ಸ್‌’ ಸಂಸ್ಥೆ ಹೇಳಿದೆ.

ಅಂತರ್ಜಾಲದ ಮೇಲೆ ನಿರ್ಬಂಧ ಹೇರಲಾಗಿದೆ.ಸಾಮಾಜಿಕ ಜಾಲತಾಣವನ್ನು ಬಳಸಲು ಸಾಧ್ಯವಾಗದಂತೆಯೂ ಸರ್ಕಾರ ನಿರ್ಬಂಧ ಹೇರಿದೆ. ಇರಾನ್‌ ಮಹಿಳೆಯರ ಹೋರಾಟವನ್ನು ಬೆಂಬಲಿಸಿ ಅಮೆರಿಕ, ಯುರೋಪ್‌ನ ರಾಷ್ಟ್ರಗಳು ಸೇರಿ ಅನೇಕ ದೇಶಗಳ ನಾಗರಿಕರು ರ್‍ಯಾಲಿಗಳನ್ನು ನಡೆಸಿದ್ದಾರೆ. ಹಿಜಾಬ್‌ ವಿರೋಧಿ ಹೋರಾಟವನ್ನು ಬೆಂಬಲಿಸಿದ ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ಚಿತ್ರ ನಿರ್ದೇಶಕರು ಸೇರಿದಂತೆ ಹಲವರನ್ನು ಇರಾನ್‌ ಸರ್ಕಾರ ಬಂಧಿಸಿದೆ. ‘ಮಹಿಳೆ, ಬದುಕು, ಸ್ವಾತಂತ್ರ್ಯ’ ಎಂಬ ಮಹಿಳೆಯರ ಘೋಷಣೆ ಇಡೀ ಇರಾನ್‌ನಲ್ಲಿ ಅನುರಣಿಸುತ್ತಿದೆ. ಮಹಿಳೆಯರು ತಮ್ಮ ತಲೆಗೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸುವುದು ಜಗತ್ತಿನಾದ್ಯಂತ ಸಾಂಕೇತಿಕ ರೂಪ ಪಡೆದುಕೊಂಡಿದೆ.

1979ರಲ್ಲಿ ಇಸ್ಲಾಮಿಕ್‌ ಕ್ರಾಂತಿ ನಡೆಯುವುದಕ್ಕಿಂತಲೂ ಮೊದಲು ಇಲ್ಲಿ ಹಿಜಾಬ್‌ ಕಡ್ಡಾಯವೇನೂ ಆಗಿರಲಿಲ್ಲ. ಇಸ್ಲಾಮಿಕ್ ಕ್ರಾಂತಿಯ ನಂತರ ಮಹಿಳೆಯರ ಬದುಕು ಅಸಹನೀಯವಾಯಿತು. ತಮ್ಮದೇ ದೇಶದಲ್ಲಿ ಮೂರನೇ ದರ್ಜೆ ಪ್ರಜೆಗಳಾಗಿ, ಬಂಧಿಯಾಗಿ ಮಹಿಳೆಯರು ಬದುಕುತ್ತಿದ್ದಾರೆ. ಅಮೀನಿಯ ಹತ್ಯೆಯು ಅಲ್ಲಿನ ಮಹಿಳೆಯರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಮನುಷ್ಯನ ಘನತೆಗೆ ಬಿದ್ದ ಪೆಟ್ಟು ಹೋರಾಟದ ಕಿಚ್ಚನ್ನು ಹೆಚ್ಚಿಸಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಹಿಜಾಬ್ ಪ್ರತಿಭಟನೆ ಕೂಡ ಇದೇ ರೀತಿಯ ಘನತೆಯ ಪ್ರಶ್ನೆಯಾಗಿತ್ತು. ತಮ್ಮ ಉಡುಪಿನ ಭಾಗವೇ ಆಗಿದ್ದ ಹಿಜಾಬ್ ಅನ್ನು ನಡು ರಸ್ತೆಯಲ್ಲಿ ತೆಗೆಯಿರಿ ಎಂದು ಹೇಳಿದ್ದು ವಿದ್ಯಾರ್ಥಿನಿಯರ ಘನತೆಗೆ ಪೆಟ್ಟು ಕೊಟ್ಟಂತಾಗಿತ್ತು ಎನ್ನುವುದು ಹಲವರ ಅಭಿಪ್ರಾಯ. ಇರಾನ್‌ನಲ್ಲಿ ಹಿಜಾಬ್ ಬೇಡ ಹಾಗೂ ಕರ್ನಾಟಕದಲ್ಲಿ ಹಿಜಾಬ್ ಬೇಕು ಎನ್ನುವ ಕೂಗು ಹೋರಾಟದ ಸ್ವರೂಪ ಪಡೆದುಕೊಂಡಿತು. ಹೋರಾಟವು ತೀವ್ರ ಸ್ವರೂಪ ಪಡೆಯಲು ಅದು ಮಹಿಳೆಯರ ಘನತೆಗೆ ಪೆಟ್ಟು ಕೊಟ್ಟಿದ್ದೇ ಕಾರಣ ಎನ್ನಲಾಗುತ್ತಿದೆ.

ಭಾರತದಲ್ಲಿ ಹಿಂದುತ್ವವಾದ ಬಲಗೊಳ್ಳುತ್ತಿದೆ. ಇದರಿಂದಾಗಿ ಮುಸ್ಲಿಮರಲ್ಲಿ ಅಭದ್ರತೆ ಕಾಣಿಸಿಕೊಳ್ಳತೊಡಗಿದೆ. ತಮ್ಮ ಅಸ್ಮಿತೆಗಳನ್ನು ತೋರ್ಪಡಿಸದಿದ್ದರೆ ನಾವೆಲ್ಲಿ ಕಳೆದುಹೋಗುತ್ತೇವೆಯೋ ಎನ್ನುವ ಅಸ್ಮಿತೆಯ ಪ್ರಶ್ನೆ ಅವರನ್ನು ಕಾಡತೊಡಗಿದೆ. ಈ ಕಾರಣದಿಂದಲೂ ಹಿಜಾಬ್ ಬೇಕು ಎನ್ನುವ ನಿರ್ಧಾರಕ್ಕೆ ಬಂದಿರಬಹುದು ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇರಾನ್‌ನಲ್ಲಿ ಅಸ್ಮಿತೆಯ ಪ್ರಶ್ನೆ ಇಲ್ಲ. ಅದೊಂದು ಮುಸ್ಲಿಂ ದೇಶ. ಹಾಗಾಗಿ ಅಲ್ಲಿ ಹಿಜಾಬ್‌ ಹೇರಿಕೆಯು ಮಹಿಳೆಯರ ಸ್ವಾತಂತ್ರ್ಯದ ಪ್ರಶ್ನೆಯಾಗಿದೆ.

ವಿವಿಧ ಕಾರಣಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಹೋರಾಟ ಮತ್ತು ಕರ್ನಾಟಕದಲ್ಲಿನ ಹಿಜಾಬ್ ವಿವಾದ ಒಂದೇ ಎಂದು ಅನ್ನಿಸಿದರೂ, ನಾವು ಅದನ್ನು ಬೇರೆ ಬೇರೆ ಆಗಿಯೇ ನೋಡಬೇಕು. ರಾಜಕೀಯ, ಧಾರ್ಮಿಕ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಎರಡನ್ನೂ ಭಿನ್ನ ಭಿನ್ನ ನೆಲೆಯಲ್ಲಿ ಗ್ರಹಿಸಬೇಕು. ‘ನೋಡಿ, ಅಲ್ಲಿನ ಮುಸ್ಲಿಂ ಯುವತಿಯರು ಹಿಜಾಬ್ ಬೇಡ ಎನ್ನುತ್ತಿದ್ದರೆ, ರಾಜ್ಯದ ವಿದ್ಯಾರ್ಥಿನಿಯರು ಬೇಕು ಅನ್ನುತ್ತಿದ್ದಾರೆ’ ಎಂದು ರಾಜ್ಯದ ವಿದ್ಯಾರ್ಥಿನಿಯರ ಬೇಡಿಕೆಯನ್ನು ಹಾಸ್ಯಾಸ್ಪದ ಮಾಡುವ ಪ್ರಯತ್ನವೂ ಸದ್ಯ ನಡೆಯುತ್ತಿದೆ. ಹಾಗಾದರೆ, ಒಂದೇ ಧರ್ಮದ, ಬೇರೆ ಬೇರೆ ದೇಶದ ಈ ಹೆಣ್ಣುಮಕ್ಕಳ ಬೇಡಿಕೆಯನ್ನು ಯಾವ ರೀತಿ ಗ್ರಹಿಸಬೇಕು ಎನ್ನುವುದ ಕುರಿತು ಸಾಮಾಜಿಕ ಹೋರಾಟಗಾರ್ತಿ ಕೆ.ಎಸ್‌. ವಿಮಲಾ, ಕಥೆಗಾರ್ತಿ ಫಾತೀಮಾ ರಲಿಯಾ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಎ. ನಾರಾಯಣ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

‘ಆಯ್ಕೆ ಸ್ವಾತಂತ್ರ್ಯವೇ ಮುಖ್ಯ’

ಹಿಜಾಬ್ ಅನ್ನುವುದು ಧಾರ್ಮಿಕ ಆಚರಣೆ, ಸಂಪ್ರದಾಯ, ಹೇರಿಕೆ ಎಂದೆಲ್ಲಾ ನೋಡುವುದರ ಬದಲು ಅದನ್ನು ಶಿಕ್ಷಣದ ಹಕ್ಕನ್ನಾಗಿ ನೋಡಬೇಕು. ಶಿಕ್ಷಣದ ಹಕ್ಕು ಮತ್ತು ಆಯ್ಕೆ ಸ್ವಾತಂತ್ರ್ಯವೇ ಇಲ್ಲಿ ಮುಖ್ಯವಾಗಬೇಕಿತ್ತು ಎಂಬುದು ಕೆ.ಎಸ್‌. ವಿಮಲಾ ಅವರ ಅಭಿಪ್ರಾಯ.

‘ಹಿಜಾಬ್ ಹಾಕುವುದಿಲ್ಲ ಎಂದು ಹೆಣ್ಣುಮಕ್ಕಳು ಹೇಳಿದಾಗ ಅವರ ಶಿಕ್ಷಣದ ಹಕ್ಕನ್ನು ಪೋಷಕರು ಮೊಟಕುಗೊಳಿಸುತ್ತಾರೆ ಅಂತಾದರೆ ಅವರು ಹಿಜಾಬ್‌ ಹಾಕಿಕೊಳ್ಳಲಿ. ಶಿಕ್ಷಣದ ಅವಕಾಶ ಪಡೆದುಕೊಳ್ಳುವುದಕ್ಕಾಗಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಇಚ್ಛಿಸಿದರೆ, ಅದನ್ನು ಅವರ ಆಯ್ಕೆಯ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.

‘ಶಿಕ್ಷಣದ ಮೂಲಕ ಮುಸ್ಲಿಂ ಹೆಣ್ಣುಮಕ್ಕಳು ವಿಮೋಚನೆಯ ದಾರಿ ಹಿಡಿದು, ಬುರ್ಖಾ, ಹುಜಾಬ್‌ ಧರಿಸಬೇಕೋ, ಬೇಡವೋ ಎನ್ನುವ ನಿರ್ಧಾರವನ್ನು ಅವರೇ ಮಾಡುವಂತಾಗಬೇಕು. ನಾವು ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ವಿಮಲಾ ಪ್ರತಿಪಾದಿಸುತ್ತಾರೆ.

ಕರ್ನಾಟಕದಲ್ಲಿ ಆದ ಹಿಜಾಬ್‌ ವಿವಾದವು ಇಸ್ಲಾಂ ಮೂಲಭೂತವಾದಿಗಳಿಗೂ, ಹಿಂದುತ್ವವಾದಿಗಳಿಗೂ ಅನುಕೂಲವನ್ನೇ ಮಾಡಿಕೊಟ್ಟಿದೆ. ಒಬ್ಬರು ವಿವಾದ ಮಾಡಿದರು, ಇನ್ನೊಬ್ಬರು ಅದರಿಂದ ಲಾಭ ಪಡೆದರು. ಮುಸ್ಲಿಂ ಹೆಣ್ಣುಮಕ್ಕಳು ಸುಶಿಕ್ಷಿತರಾಗುವುದು ಹಿಂದುತ್ವವಾದಿಗಳಿಗೆ ಇಷ್ಟವಿಲ್ಲ. ಅಂತೆಯೇ, ಇಸ್ಲಾಂ ಮೂಲಭೂತವಾದಿಗಳಿಗೂ ಬೇಡ. ಇದರಿಂದ ಇಸ್ಲಾಂ ಮೂಲಭೂತವಾದಿಗಳ ಹಿಡಿತ ತಮ್ಮ ಸಮುದಾಯದ ಹೆಣ್ಣುಮಕ್ಕಳ ಮೇಲೆ ಹೆಚ್ಚಾಯಿತು. ಅಸ್ತಿತ್ವದ ಪ್ರಶ್ನೆ ಎದ್ದಾಗ, ಶಿಕ್ಷಣ ನನ್ನ ಅಧಿಕಾರ ಅನ್ನುವುದಕ್ಕಿಂದ ಹಿಜಾಬ್ ನನ್ನ ಹಕ್ಕು ಎನ್ನುವುದು ಅವರ ತಲೆಗೆ ಬಂತು’ ಎಂದು ವಿಮಲಾ ವಿಶ್ಲೇಷಿಸುತ್ತಾರೆ.

ಇರಾನ್‌ನಲ್ಲೂ ಹೆಣ್ಣುಮಕ್ಕಳು ನಮಗೆ ಈ ಹೇರಿಕೆ ಬೇಡ. ನಾವು ಹಿಜಾಬ್ ಧರಿಸುವುದಿಲ್ಲ ಎನ್ನುತ್ತಿದ್ದಾರೆ. ಒಬ್ಬ ಮಹಿಳೆಯ ಮೇಲಾದ ದೌರ್ಜನ್ಯದ ಕಾರಣದಿಂದಾಗಿ ಹಲವು ವರ್ಷಗಳಿಂದ ಅವರ ಒಳಗೆ ಇದ್ದ ಆಕ್ರೋಶವನ್ನು ಅವರು ಈಗ ಹೊರಹಾಕಿದ್ದಾರೆ. ಆದ್ದರಿಂದ, ಇರಾನ್‌ ಹಾಗೂ ಕರ್ನಾಟಕದ ಹಿಜಾಬ್‌ ವಿವಾದವನ್ನು ಹೆಣ್ಣಿನ ಅಥವಾ ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ನೋಡುವುದೇ ಸರಿಯಾದ ಕ್ರಮ ಎಂದು ವಿಮಲಾ ಹೇಳುತ್ತಾರೆ.

‘ಘನತೆಗೆ ಧಕ್ಕೆ’

ಕಾಲೇಜು ಗೇಟಿನ ಮುಂದೆ ನಿಲ್ಲಿಸಿ ಬುರ್ಖಾ ತೆಗೆಯಿರಿ, ಹಿಜಾಬ್ ತೆಗೆಯಿರಿ ಎಂದು ಹೇಳಿದ್ದು ಮುಸ್ಲಿಂ ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತಂದಿದೆ. ಇದನ್ನು ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ ಎಂಬುದನ್ನು ಫಾತೀಮಾ ರಲಿಯಾ ನೆನಪಿಸಿಕೊಳ್ಳುತ್ತಾರೆ.

ಮೊದಲಿನಿಂದಲೂ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುತ್ತಿದ್ದಾರೆ. ಅದು ಅವರ ಉಡುಪಿನ ಭಾಗವೇ ಆಗಿದೆ. ಹೀಗಿರುವಾಗಿ ನಡುರಸ್ತೆಯಲ್ಲಿ ನಿಲ್ಲಿಸಿ ಉಡುಪಿನ ಭಾಗವನ್ನು ಕಳಚಿ ಎಂದು ಒತ್ತಾಯಿಸಿರುವುದು ಹೆಣ್ಣುಮಕ್ಕಳಿಗೆ ಮಾಡಿರುವ ಅವಮಾನ.ಹಿಜಾಬ್ ಧರಿಸಬೇಕು ಎಂದು ಕುರಾನ್ ಹೇಳುತ್ತದೆ. ಪ್ರವಾದಿ ಅವರು ಹುಟ್ಟುವ ಮುಂಚೆಯೇ ಅರೇಬಿಯಾದಲ್ಲಿ ಈ ನಿಯಮವಿತ್ತು.ಇರಾನ್ ದೇಶದ ಜನ ಬಂಡಾಯ ಸ್ವಭಾವದವರು. ಅಲ್ಲಿ ಮೊದಲಿನಿಂದಲೂ ಉದಾರವಾದಿ ಸರ್ಕಾರ ಇತ್ತು. ಆದರೆ, 1979ರ ಇಸ್ಲಾಮಿಕ್ ಕ್ರಾಂತಿಯ ನಂತರವಷ್ಟೇ ಹೆಣ್ಣುಮಕ್ಕಳಿಗೆ ಎಲ್ಲಾ ವಿಷಯದಲ್ಲೂ ನಿರ್ಬಂಧ ಹೇರಲಾಯಿತು, ಹಿಜಾಬ್ ಕಡ್ಡಾಯ ಮಾಡಲಾಯಿತು ಎಂದು ರಲಿಯಾ ವಿಶ್ಲೇಷಿಸುತ್ತಾರೆ.

ಇರಾನಿನ ಹೆಣ್ಣುಮಕ್ಕಳ ಸಾಕ್ಷರತೆ ಪ್ರಮಾಣ ಬಹಳ ಹೆಚ್ಚಿದೆ. ಎಲ್ಲಾ ಹೆಣ್ಣುಮಕ್ಕಳು ಪ್ರಜ್ಞಾವಂತರಿದ್ದಾರೆ. ತಮ್ಮ ಬೇಕು, ಬೇಡಗಳ ಕುರಿತು ನಿರ್ಧಾರ ಕೈಗೊಳ್ಳುವ ಶಕ್ತಿ ಅವರಿಗದೆ. ಆದ್ದರಿಂದ ಅವರು ಹಿಜಾಬ್ ಬೇಡ ಎನ್ನುತ್ತಿದ್ದಾರೆ. ಅದನ್ನು ನಾವು ಬೆಂಬಲಿಸಬೇಕು.ಇರಾನಿನಂತೆ ನಮ್ಮ ಹೆಣ್ಣುಮಕ್ಕಳು ಕೂಡ ಪ್ರಜ್ಞಾವಂತರಿದ್ದಾರೆ. ಕಳೆದ 10 ವರ್ಷಗಳಿಂದ ಕರಾವಳಿಯಲ್ಲಿ ಮುಸ್ಲಿಂ ಸಾಕ್ಷರ ಹೆಣ್ಣುಮಕ್ಕಳ ಪ್ರಮಾಣ ಶೇ 85ರಷ್ಟಿತ್ತು. ಅದಕ್ಕೆ ಒಂದು ಕಾರಣ, ಹಿಜಾಬ್ ಧರಿಸಬಹುದು ಎನ್ನುವುದಾಗಿತ್ತು. ಹಿಜಾಬ್ ವಿವಾದದ ನಂತರ ಈ ಪ್ರಮಾಣ ಕಡಿಮೆಯಾಗಿದೆ ಎಂಬುದರತ್ತ ರಲಿಯಾ ಬೆಳಕು ಚೆಲ್ಲಿದ್ದಾರೆ.

‘ರಾಜ್ಯದಲ್ಲಿ ಹಿಜಾಬ್ ವಿವಾದ ನಡೆಯುತ್ತಿದ್ದಾಗ ನಮಗೆಲ್ಲಾ ಇದೊಂದು ಜನಾಂಗೀಯ ದ್ವೇಷದ ತರಹವೇ ಕಾಣುತ್ತಿತ್ತು. ಹಿಜಾಬ್ ಹಾಕಬೇಕು ಅನ್ನಿಸಿದರೆ, ಅದು ನನ್ನ ಸ್ವಾತಂತ್ರ್ಯ, ಹಾಕಬಾರದು ಅನ್ನುವುದು ಕೂಡ ನನ್ನದೇ ಸ್ವಾತಂತ್ರ್ಯ ಅದನ್ನು ಬೇರೆಯವರು ಹೇಗೆ ನಿರ್ಧರಿಸಲಿಕ್ಕೆ ಸಾಧ್ಯ’ ಎಂದು ರಲಿಯಾ ಪ್ರಶ್ನಿಸುತ್ತಾರೆ.

‘ಎರಡೂ ಕಡೆಯ ಹೆಣ್ಣು ಮಕ್ಕಳನ್ನು ಬೆಂಬಲಿಸಬೇಕು’

‘ಹಿಜಾಬ್ ಧರಿಸಲೇ ಬೇಕು ಎಂದು ನಾಳೆ ಕರ್ನಾಟಕದಲ್ಲಿ ಮುಸ್ಲಿಂ ಮೂಲಭೂತವಾದಿಗಳು ಹಟ ಮಾಡಿದರೆ, ಹೆಣ್ಣುಮಕ್ಕಳ ಮೇಲೆ ಹೇರಿಕೆ ಮಾಡಿದರೆ, ಒಂದು ವೇಳೆ ಹೆಣ್ಣಮಕ್ಕಳು ಇದನ್ನು ವಿರೋಧಿಸಿ ಬೀದಿಗಿಳಿದರೆ, ನಾವು ಖಂಡಿತ ಮುಸ್ಲಿಂ ಹೆಣ್ಣಮಕ್ಕಳ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ. ಈ ಕುರಿತು ಮೊದಲು ನಮಗೆ ಸ್ಪಷ್ಟತೆ ಬೇಕು. ಜೊತೆಗೆ ಈ ಕಾರಣಕ್ಕಾಗಿಯೇ ಇರಾನಿನಲ್ಲಿ ಹೆಣ್ಣುಮಕ್ಕಳು ನಡೆಸುತ್ತಿರುವ ತೀವ್ರ ಪ್ರತಿಭಟನೆಯನ್ನು ಕೂಡ ನಾವು ಬೆಂಬಲಿಸಬೇಕು’ ಎಂದು ಎ. ನಾರಾಯಣ ಅವರು ಹೇಳುತ್ತಾರೆ.

‘ಹಿಜಾಬ್ ಅನ್ನು ಸಮವಸ್ತ್ರಕ್ಕೆ ಹೋಲಿಸಿದ್ದರಿಂದ ಕರ್ನಾಟಕದಲ್ಲಿ ವಿವಾದವಾಯಿತು. ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸುವುದಿಲ್ಲ ಎಂದು ಎಲ್ಲೂ ಹೇಳಿರಲಿಲ್ಲ. ಹಿಜಾಬ್ ಅನ್ನುವುದು ಧಾರ್ಮಿಕ ಚಹರೆ. ಬೇರೆ ಬೇರೆ ಧರ್ಮದವರು ಅವರ ಧಾರ್ಮಿಕ ಚಹರೆಯನ್ನು ಪ್ರದರ್ಶಿಸುತ್ತಾರೆ. ಆದ್ದರಿಂದ ರಾಜ್ಯದಲ್ಲಿ ಹಿಜಾಬ್ ಹಾಕಬೇಡಿ ಅಂತ ಹೇರುವುದು, ಇರಾನಿನಲ್ಲಿ ಸಂಪ್ರದಾಯವಾದಿಗಳು ಹಿಜಾಬ್‌ ಬೇಕು ಅನ್ನುವುದು ಎರಡು ಕೂಡ ವ್ಯಕ್ತಿಯ ಆಯ್ಕೆ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ.

‘ಇಲ್ಲಿ ಹಲವಾರು ಸೂಕ್ಷ್ಮ ವಿಷಯಗಳಿವೆ. ಮೊದಲನೆಯದು, ಸಾಮಾಜಿಕ ಬದಲಾವಣೆಯು ನಿಧಾನವಾಗಿ ಘಟಿಸುವಂಥದ್ದು. ಬೆಳಗಾಗುವುದರಲ್ಲಿ ಬದಲಾವಣೆ ಸಾಧ್ಯವಿಲ್ಲ. ಬದಲಾವಣೆಯು ವ್ಯಕ್ತಿಯ ಅಂತರಂಗದಿಂದ ಆಗಬೇಕಾಗಿರುವುದು. ಹಿಜಾಬ್ ಧರಿಸುವುದು ಸಂಪ್ರದಾಯವಾದ. ಆದ್ದರಿಂದ ನಾವು ಅದರಿಂದ ಹೊರಬರಬೇಕು ಅಂತ ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ನಿಸಿದರೆ, ಅದು ಅವರ ಆಯ್ಕೆ. ಹಾಗೆಯೇ ಇಲ್ಲ, ನಮಗೆ ಇದು ಅಭ್ಯಾಸವಾಗಿದೆ. ನಾವು ಇದನ್ನು ಧರಿಸುತ್ತೇವೆ ಎಂದರೂ ಅದು ಅವರ ಆಯ್ಕೆ.

‘ಕರ್ನಾಟಕದಲ್ಲಿ ಹೀಗೆ ಹಿಜಾಬ್ ಅನ್ನು ಹಾಕಬೇಡಿ ಎನ್ನುವುದರ ಹಿಂದೆ ರಾಜಕೀಯ ಕಾರಣಗಳಿವೆ. ಧರ್ಮದ ಜೊತೆ ನೇರ ಸಂಪರ್ಕ ಇಟ್ಟುಕೊಂಡಿರುವ ಇರಾನ್ ಸರ್ಕಾರವು ಹಿಜಾಬ್‌ ಹೇರಿದ್ದರ ಹಿಂದೆಯೂ ಬೇರೆ ರೀತಿಯ ರಾಜಕೀಯ ಇದೆ. ಧರ್ಮ ಹೆಸರಿನಲ್ಲಿ ಅಧಿಕಾರ ಹಿಡಿಯಲಿಕ್ಕಾಗಿ ವ್ಯಕ್ತಿಗಳಿಗೆ ಆಯ್ಕೆ ಸ್ವಾತಂತ್ರ್ಯವನ್ನು ಕಸಿಯಲಾಯಿತು ಎನ್ನುವುದು ಎರಡೂ ಕಡೆಗೂ ಸಲ್ಲುವ ವಿಚಾರ’ ಎಂಬುದು ನಾರಾಯಣ ಅವರ ಪ್ರತಿಪಾದನೆ.

ಆಧಾರ: ಎಎಫ್‌ಪಿ, ರಾಯಿಟರ್ಸ್‌, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT