ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಇಂಗ್ಲಿಷ್‌ಗೆ ಹಿಂದಿ ಪರ್ಯಾಯವಲ್ಲ

ಅಧಿಕೃತ ಭಾಷೆಗಳ ಕಾಯ್ದೆ 1963
Last Updated 12 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

‘ದೇಶದ ಎಲ್ಲಾ ರಾಜ್ಯಗಳ ಜನರು ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನು ಬಳಸಿ. ಅಧಿಕೃತ ಭಾಷೆಯನ್ನು ಸರ್ಕಾರ ನಡೆಸುವ ಮಾಧ್ಯಮವನ್ನಾಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಚೆಗೆ ಹೇಳಿದ್ದರು. ಇದು ಹಿಂದಿಯೇತರ ಭಾಷಾ ರಾಜ್ಯಗಳ ಮೇಲೆ, ಹಿಂದಿಯನ್ನು ಹೇರಲು ಕೇಂದ್ರ ಸರ್ಕಾರವು ಮಾಡುತ್ತಿರುವ ಯತ್ನ ಎಂದು ಹಲವು ರಾಜ್ಯಗಳ ನಾಯಕರು ಮತ್ತು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಹಿಂದಿ ದೇಶದ ಅಧಿಕೃತ ಭಾಷೆ. ಕೇಂದ್ರ ಸರ್ಕಾರದ ಕಾರ್ಯನಿರ್ವಹಣೆಯು ಹಿಂದಿಯಲ್ಲಿ ನಡೆಯಬೇಕು ಎನ್ನುತ್ತದೆ ‘ಅಧಿಕೃತ ಭಾಷೆಗಳ ಕಾಯ್ದೆ–1963’. ಆದರೆ, ಹಿಂದಿಯ ಜತೆಯಲ್ಲಿ ಇಂಗ್ಲಿಷ್‌ ಅನ್ನೂ ಬಳಸಬೇಕು ಎಂದು ಇದೇ ಕಾಯ್ದೆ ಹೇಳುತ್ತದೆ. ಹಾಗಾಗಿ, ಇಂಗ್ಲಿಷ್‌ಗೆ ಹಿಂದಿ ಪರ್ಯಾಯವಾಗುವುದು ಸಾಧ್ಯವಿಲ್ಲ.

ಕೇಂದ್ರ ಸರ್ಕಾರವು ರಾಜ್ಯಸರ್ಕಾರಗಳ ಜತೆಗೆ ಸಂಪರ್ಕಕ್ಕೆ ಯಾವ ಭಾಷೆ ಬಳಸಬೇಕು ಎಂಬುದನ್ನು‘ಅಧಿಕೃತ ಭಾಷಾ ನಿಯಮಗಳು–1976’ ಸ್ಪಷ್ಟಪಡಿಸಿದೆ. ದೇಶದ ಎಲ್ಲಾ ರಾಜ್ಯಗಳನ್ನು ಮೂರು ಗುಂಪುಗಳಾಗಿ ಈ ನಿಯಮಗಳು ವಿಂಗಡಿಸುತ್ತವೆ. ಮೊದಲನೆಯದ್ದು ‘ಎ’ ವರ್ಗ. ಇದರಲ್ಲಿ ಹಿಂದಿ ಭಾಷಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿವೆ. ಎರಡನೆಯದ್ದು ‘ಬಿ’ ವರ್ಗ. ಇದರಲ್ಲಿ ಹಿಂದಿಯಿಂದ ಸ್ವಲ್ಪವೇ ಭಿನ್ನವಾದ, ಆದರೆ ಸ್ವತಂತ್ರ ಅಸ್ಮಿತೆ ಹೊಂದಿರುವ ಭಾಷಿಕ ರಾಜ್ಯಗಳನ್ನು ಸೇರಿಸಲಾಗಿದೆ. ಮೂರನೆಯದ್ದು ‘ಸಿ’ ವರ್ಗ. ಹಿಂದಿಯೇತರ ಭಾಷಿಕ ರಾಜ್ಯಗಳು ಈ ಗುಂಪಿನಲ್ಲಿವೆ.

1. ಕೇಂದ್ರ ಸರ್ಕಾರವು ‘ಎ’ ವರ್ಗದ ರಾಜ್ಯಗಳ ಜತೆಗೆ ಯಾವುದೇ ರೀತಿಯ ಸಂಪರ್ಕ/ಪತ್ರ ವ್ಯವಹಾರ ನಡೆಸುವಾಗ, ಆ ಪತ್ರವು ಹಿಂದಿಯಲ್ಲಿ ಇರಬೇಕು. ಒಂದು ವೇಳೆ ಇಂಗ್ಲಿಷ್‌ ಭಾಷೆಯಲ್ಲಿ ಪತ್ರ ನೀಡಿದರೆ ಅದರ ಜತೆಯಲ್ಲಿ ಹಿಂದಿ ಭಾಷಾಂತರವನ್ನೂ ನೀಡಬೇಕು.

2. ಕೇಂದ್ರ ಸರ್ಕಾರವು ‘ಬಿ’ ವರ್ಗದ ರಾಜ್ಯಗಳ ಜತೆಗೆ ಸಂಪರ್ಕ/ಪತ್ರ ವ್ಯವಹಾರ ನಡೆಸುವಾಗ, ಆ ಪತ್ರವು ಹಿಂದಿಯಲ್ಲಿ ಇರಬೇಕು. ಒಂದು ವೇಳೆ ಇಂಗ್ಲಿಷ್ ಭಾಷೆಯಲ್ಲಿ ಪತ್ರ ನೀಡಿದರೆ,ಅದರ ಜತೆಯಲ್ಲಿ ಹಿಂದಿ ಭಾಷಾಂತರವನ್ನೂ ನೀಡಬೇಕು.

ಯಾವುದೇ ಒಂದು ಕಚೇರಿಯಿಂದ ತಮಗೆ ಬರುವ ಪತ್ರ/ದಾಖಲೆ/ಸುತ್ತೋಲೆ/ಮತ್ತಿತರ ಪತ್ರ ವ್ಯವಹಾರಗಳು ತಾವು ಸೂಚಿಸಿದ ಭಾಷೆಯಲ್ಲೂ ಬರಬೇಕು ಎಂದು ಮನವಿ ಮಾಡಿಕೊಳ್ಳಲು ಈ ನಿಯಮಗಳಲ್ಲಿ ಅವಕಾಶವಿದೆ. ಹೀಗೆ ಮನವಿ ಮಾಡಿಕೊಂಡ ನಂತರ ಇಂಗ್ಲಿಷ್ ಮತ್ತು ಹಿಂದಿಯ ಜತೆಗೆ ಆ ರಾಜ್ಯವು ಕೇಳಿಕೊಂಡ ಭಾಷೆಯಲ್ಲೂ ಪತ್ರ ವ್ಯವಹಾರ ನಡೆಸಬೇಕಾಗುತ್ತದೆ.

3. ಕೇಂದ್ರ ಸರ್ಕಾರವು ‘ಸಿ ವರ್ಗದ ರಾಜ್ಯಗಳ ಜತೆಗೆ ಸಂಪರ್ಕ/ಪತ್ರ ವ್ಯವಹಾರ ನಡೆಸುವಾಗ, ಆ ಪತ್ರವು ಇಂಗ್ಲಿಷ್‌ ಭಾಷೆಯಲ್ಲಿ ಇರಬೇಕು ಎಂಬುದನ್ನು ಈ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಹಿಂದಿಯೇತರ ಭಾಷಿಕ ರಾಜ್ಯಗಳೆಲ್ಲವೂ ಸಿ ವರ್ಗದಲ್ಲಿವೆ. ಈ ವರ್ಗದಲ್ಲಿ 17 ರಾಜ್ಯಗಳು ಮತ್ತು ಹಲವು ಕೇಂದ್ರಾಡಳಿತ ಪ್ರದೇಶಗಳಿವೆ. ಈ ರಾಜ್ಯಗಳ ಜತೆ ಕೇಂದ್ರ ಸರ್ಕಾರವು ಇಂಗ್ಲಿಷ್‌ ಮೂಲಕ ಮಾತ್ರವೇ ಪತ್ರ ವ್ಯವಹಾರ ನಡೆಸಬೇಕು ಎಂದು ಅಧಿಕೃತ ಭಾಷಾ ನಿಯಮಗಳು–1976ರ 3 (3)ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಅಧಿಕೃತ ಭಾಷೆಯಾದ ಹಿಂದಿಯನ್ನೇ ಸರ್ಕಾರ ನಡೆಸುವ ಮಾಧ್ಯಮವನ್ನಾಗಿಸಬೇಕು ಎಂದು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಸರ್ಕಾರವು ಇದನ್ನು ಜಾರಿಗೆ ತಂದರೆ, ಈ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ.

ಮೂಲಹಿಂದಿ ಭಾಷಿಕರು 32 ಕೋಟಿ ಮಾತ್ರ

ದೇಶದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ 52.8 ಕೋಟಿಯಷ್ಟು ಎಂದು 2011ರ ಜನಗಣತಿಯ ಭಾಷಿಕ ವರದಿ ಹೇಳುತ್ತದೆ. ಇದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 43ರಷ್ಟು ಮಾತ್ರ. ಹಿಂದಿಯೇತರ ಭಾಷೆಗಳನ್ನಾಡುವ ಜನರ ಪ್ರಮಾಣ ಶೇ 57ರಷ್ಟಿದೆ. ಇವುಗಳಲ್ಲಿ ಬಹುತೇಕ ಭಾಷಿಕರು ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹಿಂದಿ ಮಾತನಾಡುವ52 ಕೋಟಿಯಲ್ಲಿ ಮೂಲಹಿಂದಿ ಮಾತನಾಡುವವರ ಸಂಖ್ಯೆ 32 ಕೋಟಿ ಮಾತ್ರ. ಇನ್ನು 20.8 ಕೋಟಿ ಜನರು ಹಿಂದಿಯ ಉಪಭಾಷೆಗಳು ಅಥವಾ ಸಂಪೂರ್ಣ ಸ್ವತಂತ್ರ ಭಾಷೆಗಳನ್ನಾಡುತ್ತಾರೆ. ಹಿಂದಿ ಭಾಷಿಕ ಗುಂಪಿನಲ್ಲಿಬೋಜಪುರಿ, ಗವಾರಿ, ಅವಧಿ, ಬಂಜಾರಿ, ಮಾರ್ವಾಡಿ, ಛತ್ತೀಸಗಡೀ, ವ್ರಜಭಾಷಾ, ಚಂಬೇಲಿ, ಮಾಲ್ವಿ, ಲೋದಿ, ರಾಜಸ್ಥಾನಿ, ಮೆವಾರಿ ಸೇರಿದಂತೆ57 ಪ್ರಮುಖ ಭಾಷೆಗಳಿವೆ. ಈ ಭಾಷೆಗಳಲ್ಲಿ ಎಲ್ಲವೂ ದೇವನಾಗರಿ ಲಿಪಿಯನ್ನು ಬಳಸುತ್ತವೆ.ಈ ಭಾಷೆಗಳನ್ನೂ ಹಿಂದಿ ಗುಂಪಿನಿಂದ ಹೊರಗಿಟ್ಟರೆ, ದೇಶದಲ್ಲಿ ಹಿಂದಿಯೇತರ ಭಾಷೆಗಳನ್ನಾಡುವ ಜನರ ಸಂಖ್ಯೆ 100 ಕೋಟಿ ದಾಟುತ್ತದೆ.

‘ಹಿಂದಿಯಲ್ಲಿ ಜ್ಞಾನ–ವಿಜ್ಞಾನ ಪರಿಭಾಷೆಯ ಕೊರತೆ’

ಆಡಳಿತದಲ್ಲಿ ಹಿಂದಿಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಶಸ್ತಿ ನೀಡುವ ಹೊಸ ಯೋಜನೆಯೊಂದನ್ನು2015ರ ಮಾರ್ಚ್‌ನಲ್ಲಿ ಶುರು ಮಾಡಿತ್ತು. ‘ರಾಜಭಾಷಾ ಗೌರವ ಪುರಸ್ಕಾರ ಯೋಜನೆ’ಯನ್ನು ಆರಂಭಿಸುವ ಬಗ್ಗೆ ಕೇಂದ್ರ ಗೃಹಸಚಿವಾಲಯದ ಅಡಿಯಲ್ಲಿ ಬರುವ ಅಧಿಕೃತ ಭಾಷಾ ಇಲಾಖೆಯು ಮಾರ್ಚ್ 25ರಂದು ಅಧಿಸೂಚನೆ (ನಂ.11034/48/2014–ಒಎಲ್) ಹೊರಡಿಸಿತ್ತು.ಹಿಂದಿ ಭಾಷೆಯಲ್ಲಿ ರಚಿಸಲಾದ ‘ಆಧುನಿಕ ಜ್ಞಾನ ಮತ್ತು ವಿಜ್ಞಾನ’ದ ವಿಷಯ ಆಧರಿಸಿದ ಪುಸ್ತಕಗಳನ್ನು ಈ ಪ್ರಶಸ್ತಿಗೆ ಪರಿಗಣಿಸುವ ಉದ್ದೇಶವನ್ನು ಸುತ್ತೋಲೆಯಲ್ಲಿ ವಿವರಿಸಲಾಗಿತ್ತು. ಭಾರತದ ನಾಗರಿಕರು ಬರೆದ ಹಾಗೂ ಹಿಂದಿಯಲ್ಲೇ ರಚನೆಯಾಗಿರುವ ಪುಸ್ತಕಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.

ಈ ಸುತ್ತೋಲೆಯಲ್ಲಿ ಪ್ರಶಸ್ತಿ ಸ್ಥಾಪನೆಯ ಉದ್ದೇಶವನ್ನು ಸರ್ಕಾರ ಸ್ಪಷ್ಟಪಡಿಸಿದೆ. ‘ಕೇಂದ್ರ ಸರ್ಕಾರದ ವಿವಿಧ ಕಚೇರಿಗಳು, ಬ್ಯಾಂಕ್‌ಗಳು ದೈನಂದಿನ ವ್ಯವಹಾರದಲ್ಲಿ ಪಾರಿಭಾಷಿಕ ಪದಗಳನ್ನು ಬಳಸಬೇಕಿದೆ. ಆದರೆ, ಹಿಂದಿ ಭಾಷೆಯಲ್ಲಿ ತಾಂತ್ರಿಕ ಪದಕೋಶದ ಕೊರತೆಯಿರುವುದರಿಂದ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ದೈನಂದಿನ ವ್ಯವಹಾರದಲ್ಲಿ ಹಿಂದಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ತೊಡಕು ಎದುರಾಗಿದೆ. ಜ್ಞಾನ, ವಿಜ್ಞಾನವನ್ನು ಕುರಿತ ಹಿಂದಿ ಭಾಷೆಯ ಪುಸ್ತಕಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿ ಭಾಷೆಯ ಬಳಕೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರದ ಉದ್ಯೋಗಿಗಳು ಸಹ ಹಿಂದಿ ಭಾಷೆಯ ತಾಂತ್ರಿಕ ಪರಿಭಾಷೆಯ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಹಿಂದಿ ಭಾಷೆಯಲ್ಲಿ ಜ್ಞಾನ ಅಥವಾ ವಿಜ್ಞಾನದ ಕುರಿತು ಪುಸಕ್ತಗಳು ಲಭ್ಯವಿಲ್ಲದೇ ಇರುವುದು ಈ ಸಮಸ್ಯೆಯ ಹಿಂದಿರುವ ಮೂಲ ಕಾರಣ. ಈ ವಿಷಯಗಳಲ್ಲಿ ಹಿಂದಿ ಭಾಷೆಯ ಪುಸ್ತಕಗಳ ಪ್ರಕಟಣೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಶಸ್ತಿ ಸ್ಥಾಪಿಸಲಾಗಿದೆ’ ಎಂದು ವಿವರಿಸಲಾಗಿದೆ.

ಇದರ ಅರ್ಥ, ಹಿಂದಿ ಭಾಷೆಯಲ್ಲಿ ಜ್ಞಾನ, ವಿಜ್ಞಾನ ಹಾಗೂ ತಾಂತ್ರಿಕ ಪರಿಭಾಷೆಯ ಕೊರತೆಯಿದ್ದು, ಇದನ್ನು ಸರಿದೂಗಿಸಲು ಪುಸ್ತಕಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲು ಕೇಂದ್ರ ಯತ್ನಿಸುತ್ತಿದೆ. ಹಿಂದಿ ಭಾಷೆಯಲ್ಲಿ ತಾಂತ್ರಿಕ ಪದಭಂಡಾರದ ಕೊರತೆ ಇದೆ ಎಂದು ಸರ್ಕಾರ ಒಪ್ಪಿಕೊಂಡಿದ್ದರೂ, ಅದರ ಬಳಕೆಯನ್ನು ಉತ್ತೇಜಿಸುತ್ತಿದೆ. ಕಚೇರಿಯ ದೈನಂದಿನ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ಹಿಂದಿಯನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದರೂ, ಅದನ್ನು ದೇಶದ ಎಲ್ಲ ರಾಜ್ಯಗಳು ಬಳಸಬೇಕು ಎಂದು ಬಯಸುತ್ತಿದೆ ಎಂಬುದಾಗಿ ಆರೋಪಿಸಲಾಗಿದೆ.

ಒಂಬತ್ತು ಸಂಪುಟಗಳಿಗೆ ರಾಷ್ಟ್ರಪತಿ ಅಂಕಿತ

ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಹಿಂದಿ ಭಾಷೆಯ ಬಳಕೆಯನ್ನು ಪರಿಶೀಲನೆ ನಡೆಸುವ ಮುಖ್ಯ ಉದ್ದೇಶಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ.ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯ ಸಂಸದೀಯ ರಾಜಭಾಷಾ ಸಮಿತಿಯು 20 ಲೋಕಸಭಾ ಸದಸ್ಯರು ಹಾಗೂ 10 ರಾಜ್ಯಸಭಾ ಸದಸ್ಯರನ್ನು ಒಳಗೊಂಡಿದೆ. ರಾಜಭಾಷೆಯ ಪ್ರಗತಿಯನ್ನು ಪರಿಶೀಲನೆ ಮಾಡಲು ಹಾಗೂ ಶಿಫಾರಸು ಮಾಡಲು ಮೂರು ಉಪ ಸಮಿತಿಗಳನ್ನೂ ರಚಿಸಲಾಗಿದೆ.

ರಾಜಭಾಷೆ ಉತ್ತೇಜನಕ್ಕೆ ಸಂಬಂಧಿಸಿದಂತೆ 882 ಗಣ್ಯರ ಜೊತೆ ಮೌಖಿಕ ಸಮಾಲೋಚನೆ ನಡೆಸಲಾಗಿದೆ. ಸಮಿತಿಯ ಶಿಫಾರಸುಗಳನ್ನು ಒಳಗೊಂಡ 10 ಸಂಪುಟಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಕಳುಹಿಸಲಾಗಿದೆ. ಈ ಪೈಕಿ 9 ಸಂಪುಟಗಳಿಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ ಎಂದು ಸಮಿತಿ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಗೃಹ ಸಚಿವ ಅಮಿತ್ ಶಾ ಅವರು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಬರ್ತೃಹರಿ ಮಹತಾಬ್ ಅವರು ಉಪಾಧ್ಯಕ್ಷರಾಗಿದ್ದಾರೆ. ರಾಮಚಂದರ್ ಜಾಂಗ್ರಾ, ರೀಟಾ ಬಹುಗುಣ ಜೋಷಿ ಹಾಗೂ ಚಿರಾಗ್ ಪಾಸ್ವಾನ್ ಅವರು ಮೂರು ಉಪಸಮಿತಿಗಳ ಮುಖ್ಯಸ್ಥರಾಗಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ಈರಣ್ಣ ಕಡಾಡಿ ಅವರು ಮೊದಲ ಉಪ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.

ಆಧಾರ: ಸಂವಿಧಾನದ 343ನೇ ವಿಧಿ, ಅಧಿಕೃತ ಭಾಷೆಗಳ ಕಾಯ್ದೆ–1963, ಅಧಿಕೃತ ಭಾಷಾ ನಿಯಮಗಳು–1976, ಮಾತೃಭಾಷಾ ದತ್ತಾಂಶ–2011, ಅಧಿಕೃತ ಭಾಷಾ ಸಂಸದೀಯ ಸಮಿತಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT