ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಕಣಿವೆಯಲ್ಲಿ ಮೊಳಗಿದ ಎಚ್ಚರಿಕೆ ಗಂಟೆ

ಭಾರತ–ಚೀನಾ ಗಡಿ ಸಂಘರ್ಷ
Last Updated 25 ಜೂನ್ 2020, 2:42 IST
ಅಕ್ಷರ ಗಾತ್ರ
ADVERTISEMENT
""

ಗಾಲ್ವನ್‌ ಕಣಿವೆಯಲ್ಲಿ ನಡೆದ ಸಂಘರ್ಷವು ದುರದೃಷ್ಟಕರ; ಅಷ್ಟೇ ಅಲ್ಲ, ಒಂದು ದೊಡ್ಡ ಎಚ್ಚರಿಕೆ ಗಂಟೆ. ಅತಿಕ್ರಮಣದಲ್ಲಿ ಪಳಗಿರುವ ಚೀನಾ ಈ ಹಿಂದೆಯೂ ಇಂತಹ ದುಸ್ಸಾಹಸಗಳನ್ನು ಮಾಡಿತ್ತು. ಲಾಗಾಯ್ತಿನಿಂದಲೂ ಎರಡು ಹೆಜ್ಜೆ ಮುನ್ನುಗ್ಗುವುದು, ಒಂದು ಹೆಜ್ಜೆಯಷ್ಟೇ ಹಿಂದೆ ಸರಿಯುವುದು ಅದರ ಸ್ವಭಾವ.

ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ತನ್ನೆಲ್ಲ ಗಡಿಠಾಣೆಗಳ ಸಂಪರ್ಕಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿಕೊಂಡಿದೆ ಚೀನಾ. ಇದೀಗ ಅದೇ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ ಭಾರತ ಕೂಡ ಗಡಿಯುದ್ದಕ್ಕೂ ಮೂಲಸೌಕರ್ಯಗಳ ಅಭಿವೃದ್ಧಿ ಚಟುವಟಿಕೆಗಳಲ್ಲಿ ನಿರತವಾಗಿದೆ. ಈ ಹಿಂದೆ ಭಾರತೀಯ ಸೇನೆಗೆ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ತಲುಪಲು ರಸ್ತೆಗಳೇ ಇರಲಿಲ್ಲ. ದೌಲತ್‌ ಬೇಗ್‌ ಓಲ್ಡಿ ವಾಯುನೆಲೆಯಿಂದ ಗಡಿಠಾಣೆಗಳನ್ನು ತಲುಪಲು ಬೇಕಾದ ವ್ಯವಸ್ಥೆಯನ್ನೂ ಭಾರತ ಮಾಡಿಕೊಳ್ಳುತ್ತಿದೆ.

ಚೀನಾಕ್ಕೆ ಗಡಿ ಸಮಸ್ಯೆ ಬಗೆಹರಿಯುವುದು ಬೇಕಿಲ್ಲ. ನೆರೆಮನೆಯ ಪ್ರಭಾವಿಯೊಂದಿಗೆ ಸಮಸ್ಯೆಯನ್ನು ಮಗ್ಗುಲ ಮುಳ್ಳಾಗಿ ಹಾಗೇ ನಿರ್ವಹಣೆ ಮಾಡಿಕೊಂಡು 2049ರ ವೇಳೆಗೆ (ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ ಉದಯವಾಗಿ ಆಗ 200 ವರ್ಷ) ಶ್ರೀಮಂತ ರಾಷ್ಟ್ರವಾಗಿ ಮೆರೆಯುವುದು ಅದರ ಆಶಯ. ಮಾತುಕತೆಗಳು ಅಷ್ಟುಬೇಗ ಫಲಪ್ರದ ಆಗುವುದಿಲ್ಲ ಎನ್ನುವುದನ್ನು ತುಂಬಾ ಮೊದಲೇ ಅರಿತ ಚೀನಾ, ಎಲ್‌ಎಸಿ ಉದ್ದಕ್ಕೂ –ಅದರಲ್ಲೂ ಟಿಬೆಟ್‌ ಮತ್ತು ಜಿನ್‌ಜಿಯಾಂಗ್‌ ಪ್ರದೇಶದ ಉದ್ದಕ್ಕೂ– ಮೂಲಸೌಕರ್ಯವನ್ನು ಅಗಾಧ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುತ್ತಲೇ ಬಂದಿದೆ.

ಉದಾಹರಣೆಗೆ ಟಿಬೆಟ್‌ ಪ್ರದೇಶವೊಂದರಲ್ಲೇ 2016–2020ರ ಅವಧಿಯಲ್ಲಿ ಈ ಉದ್ದೇಶಕ್ಕಾಗಿ 20.5 ಶತಕೋಟಿ ಡಾಲರ್‌ (₹ 1.53 ಲಕ್ಷ ಕೋಟಿ) ವ್ಯಯಿಸಿದೆ. ಆ ಪ್ರದೇಶದಲ್ಲಿ ರಸ್ತೆಯ ಜಾಲ 65 ಸಾವಿರ ಕಿ.ಮೀ.ಯಿಂದ 90 ಸಾವಿರ ಕಿ.ಮೀ.ಗೆ ಏರಿದೆ. ಈ ಜಾಲವು ರೈಲು ಮಾರ್ಗದೊಂದಿಗೂ ಸಂಪರ್ಕ ಹೊಂದಿದೆ.

ಹುತಾತ್ಮ ಯೋಧ ಸುನಿಲ್‌ ಕುಮಾರ್‌ ಅವರ ಪಾರ್ಥೀವ ಶರೀರಕ್ಕೆ ಅವರ ಪುತ್ರ ಆಯುಶ್‌ ಕುಮಾರ್‌ ಅವರಿಂದ ಅಂತಿಮ ನಮನ

ಗಡಿ ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಭಾರತ ಎಷ್ಟೊಂದು ‘ಕ್ಷಿಪ್ರಗತಿ’ಯಲ್ಲಿ ಹೊರಟಿತ್ತು ಎಂದರೆ ದರ್ಬುಕ್‌–ಶಯೊಕ್‌–ದೌಲತ್‌ ಬೇಗ್‌ ಓಲ್ಡಿ ಪ್ರದೇಶಗಳನ್ನು ಸಂಪರ್ಕಿಸುವ 255 ಕಿ.ಮೀ. ಉದ್ದದ ರಸ್ತೆಯನ್ನು ಪೂರ್ಣಗೊಳಿಸಲು 19 ವರ್ಷಗಳೇ ಬೇಕಾದವು (ಈ ರಸ್ತೆ ಯೋಜನೆಯ ಹಗರಣದ ಕುರಿತು ಇಲ್ಲಿ ಪ್ರಸ್ತಾಪಿಸುವುದಿಲ್ಲ). ಈ ರಸ್ತೆ ನಿರ್ಮಾಣದಿಂದಾಗಿ ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ನಡೆದಿರುವ ಚಟುವಟಿಕೆಗಳ ಮೇಲೆ ಕಣ್ಣು ಇಡುವುದು ಸಾಧ್ಯವಾಗಿದೆ.

ಗಡಿಯಲ್ಲಿ 3,300 ಕಿ.ಮೀ. ಉದ್ದದ ರಸ್ತೆ ಜಾಲ ನಿರ್ಮಿಸುವಂತಹ ಇಂತಹ 60 ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. 2019ರೊಳಗೆ ಈ ಎಲ್ಲ ಯೋಜನೆಗಳು ಪೂರ್ಣಗೊಳ್ಳಬೇಕಿದ್ದವು. ಆದರೆ, ಶೇ 75ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡ ಮಾಹಿತಿ ಇದೆ.

ಭಾರತದ ಕಡೆಯಿಂದ ಗಡಿಯಲ್ಲಿ ನಡೆದಿರುವ ಈ ಅಭಿವೃದ್ಧಿ ಚಟುವಟಿಕೆಗಳು ಚೀನಾ ಕಣ್ಣನ್ನು ಕೆಂಪಾಗಿಸಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಲು ಮುಖ್ಯ ಕಾರಣ. ತನ್ನ ಸೇನೆಗೆ ಆಗಿರುವ ಹಾನಿಯ ಕುರಿತು ಮಾಹಿತಿ ಹಂಚಿಕೊಳ್ಳಲು ಚೀನಾ ನಿರಾಕರಿಸಿದ್ದು, ಭಾರತೀಯ ಸೇನೆಯು ತಕ್ಕ ತಿರುಗೇಟು ನೀಡಿರುವುದಕ್ಕೆ ದ್ಯೋತಕ.

ಮೂಲಸೌಕರ್ಯದ ಕ್ಷಿಪ್ರಗತಿಯ ಅಭಿವೃದ್ಧಿ ಈ ಸಂಘರ್ಷವನ್ನು ತಂದಿಟ್ಟಿದ್ದರೂ ಭಾರತವು ಅಭಿವೃದ್ಧಿ ಚಟುವಟಿಕೆಗಳನ್ನು ಯೋಜಿಸಿದಂತೆ ಕೈಗೊಳ್ಳಲು ಮುಂದಾಗಬೇಕಿದೆ. ಹಾಗೆಯೇ ಗಡಿಯಲ್ಲಿ ಉದ್ಭವವಾಗುವ ಯಾವುದೇ ಸ್ಥಿತಿಯನ್ನು ಎದುರಿಸಲೂ ಸನ್ನದ್ಧವಾಗಬೇಕಿದೆ.

ಭಾರತವು ಹೆಚ್ಚು, ಹೆಚ್ಚಾಗಿ ಅಮೆರಿಕದ ಕಡೆಗೆ ವಾಲುತ್ತಿರುವುದು ಸಹ ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್‌–19 ಹರಡುವಿಕೆ ಕುರಿತು ತನಿಖೆ ನಡೆಸಲು ಭಾರತವು ಅಮೆರಿಕಕ್ಕೆ ಬೆಂಬಲ ನೀಡಿದ್ದನ್ನು ಇದೇ ಬೆಳಕಿನಲ್ಲಿ ನೋಡಬೇಕಿದೆ.

ಸಮಸ್ಯೆ ಬಗೆಹರಿಸಿಕೊಳ್ಳಲು ಜಂಟಿ ಕಾರ್ಯಪಡೆಗಳನ್ನೇನೋ ರಚಿಸಲಾಗಿದೆ. ವಿಶೇಷ ಪ್ರತಿನಿಧಿಗಳನ್ನೂ ನೇಮಕ ಮಾಡಲಾಗಿದೆ. ಆದರೆ, ಫಲಪ್ರದ ಮಾತುಕತೆ ಇನ್ನೂ ಸಾಧ್ಯವಾಗಿಲ್ಲ. 1960ರಲ್ಲಿ ಚೀನಾವು ಸಮಗ್ರ ಗಡಿ ಒಪ್ಪಂದದ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆದರೆ, ಅದಕ್ಕೆ ಒಪ್ಪದ ಭಾರತ, ಪ್ರತಿಯೊಂದು ಸೆಕ್ಟರ್‌ಗೆ ಅಲ್ಲಿನ ಸ್ಥಿತಿಗೆ ತಕ್ಕಂತೆ ಭಿನ್ನ ಪರಿಹಾರವನ್ನು ಬಯಸಿತ್ತು. ಭಾರತ–ಚೀನಾ ಗಡಿಯು ಮೂರು ಸೆಕ್ಟರ್‌ಗಳನ್ನು – ಪೂರ್ವ, ಮಧ್ಯ ಮತ್ತು ಪಶ್ಚಿಮ– ಹೊಂದಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌, ಚೀನಿ ಅಧಿಕಾರಿಗಳೊಂದಿಗೆ ಇದುವರೆಗೆ 23 ಸುತ್ತಿನ ಮಾತುಕತೆ ನಡೆಸಿದ್ದು, ಚರ್ಚೆ ಇನ್ನೂ ಅಪೂರ್ಣವಾಗಿದೆ. ತನ್ನ ಷರತ್ತುಗಳಿಗೆ ಅನುಗುಣವಾಗಿಯೇ ಪರಿಹಾರ ಹುಡುಕಬೇಕು ಎನ್ನುವುದು ಬೀಜಿಂಗ್‌ನ ಒತ್ತಾಯವಾಗಿದೆ.

ಇದುವರೆಗಿನ ಚರ್ಚೆಯ ಸ್ವರೂಪವನ್ನು ನೋಡಿದರೆ ಶಕ್ತಿಯ ಸಮತೋಲನವು ಚೀನಾ ಕಡೆಗೆ ವಾಲಿರುವುದು ಎದ್ದು ಕಾಣುವ ಅಂಶ. ಪ್ರತಿಸಲ ಮಾತುಕತೆಗೆ ಕುಳಿತಾಗಲೂ ಅದು ಹಲವು ಷರತ್ತುಗಳನ್ನು ಹಾಕುತ್ತಲೇ ಹೋಗುತ್ತಿದೆ. ಬಹುಪಾಲು ಸಂದರ್ಭದಲ್ಲಿ ಆ ಷರತ್ತುಗಳು ಭಾರತಕ್ಕೆ ಒಪ್ಪಿಗೆಯಾಗುವುದಿಲ್ಲ. ಗಡಿ ತಂಟೆಯನ್ನು ಪರಿಹರಿಸಿಕೊಳ್ಳುವ ವಿಷಯದಲ್ಲಿ ಚೀನಾ ಒಂದಿನಿತೂ ಬಾಗಲು ಸಿದ್ಧವಿಲ್ಲ. ಷರತ್ತುಗಳಿಲ್ಲದೆ ಆ ದೇಶವನ್ನು ಮಾತುಕತೆಗೆ ಕೂರುವಂತೆ ಮಾಡಬೇಕಾದ ಚಾಣಾಕ್ಷತೆಯನ್ನು ಭಾರತ ಮೆರೆಯಬೇಕಿದೆ.

ಬಿ.ಆರ್‌. ದೀಪಕ್‌

ಚೀನಾ ಮೇಲೆ ಅಂತಹ ಒತ್ತಡವನ್ನು ಹೇರಲು ಭಾರತ ಮೂಲಸೌಕರ್ಯ ಅಭಿವೃದ್ಧಿಯಂತಹ ಚಟುವಟಿಕೆಗಳ ವೇಗವನ್ನು ಹೆಚ್ಚಿಸಬೇಕಿದೆ. ಹಾಗೆಯೇ ಈ ಹಿಂದೆ ಒಪ್ಪಿಕೊಂಡ ಅಂಶಗಳ ಕಡೆಗೂ ಮರು ಅವಲೋಕನ ಮಾಡಬೇಕಿದೆ. ಚೀನಾದೊಂದಿಗೆ ವಿಶೇಷ ಪ್ರತಿನಿಧಿಯ ಮೂಲಕ ಮಾತುಕತೆ ಎಂಬ ಹಳೆಯ (1993–2013) ಪರಿಪಾಟವನ್ನು ಕೈಬಿಟ್ಟು, ರಾಜಕೀಯ, ಮಿಲಿಟರಿ ಮತ್ತು ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ಮಾತುಕತೆಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಿದೆ.

ಭಾರತ–ಚೀನಾ ನಡುವಿನ ರಾಜತಾಂತ್ರಿಕ ಸಂಬಂಧ ಶುರುವಾಗಿ ಈಗ ಏಳು ದಶಕ. 70ನೇ ವಾರ್ಷಿಕೋತ್ಸವವನ್ನು 70 ಕಾರ್ಯಕ್ರಮಗಳ ಮೂಲಕ ಆಚರಿಸಲು ಎರಡೂ ದೇಶಗಳು ನಿರ್ಧರಿಸಿವೆ. ದುರದೃಷ್ಟವಶಾತ್‌ ವಾರ್ಷಿಕೋತ್ಸವದ ಆಚರಣೆ ಈ ರೀತಿ ಋಣಾತ್ಮಕವಾಗಿ ಶುರುವಾಗಿದೆ.

ಲೇಖಕ: ಜೆಎನ್‌ಯುನ ಚೀನಾ ಮತ್ತು ಆಗ್ನೇಯ ಏಷ್ಯಾ ಅಧ್ಯಯನ ಕೇಂದ್ರದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT