ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ | ರಫ್ತಿಗಿಂತ ಆಮದು ಭಾರಿ ಏರಿಕೆ: ವ್ಯಾಪಾರ ಕೊರತೆ ಹೊರೆ

Last Updated 3 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ದೇಶದ ವಾರ್ಷಿಕ ರಫ್ತು ವಹಿವಾಟಿನಲ್ಲಿ ಹೊಸ ಮೈಲುಗಲ್ಲು ಸಾಧಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 23ರಂದು ಟ್ವೀಟ್ ಮಾಡಿದ್ದರು. 2021–22ನೇ ಸಾಲಿನ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ರಫ್ತು ವಹಿವಾಟಿನ ಮೊತ್ತವು 400 ಕೋಟಿ ಅಮೆರಿಕನ್ ಡಾಲರ್‌ನಷ್ಟಾಗಿದೆ (ಅಂದಾಜು ₹30.38 ಲಕ್ಷ ಕೋಟಿ) ಎಂದು ಮೋದಿ ಘೋಷಿಸಿದ್ದರು. ಈ ಅವಧಿಯಲ್ಲಿ ದೇಶದ ಆಮದು ಮೊತ್ತವು ಈವರೆಗಿನ ಗರಿಷ್ಠ ಮೊತ್ತವನ್ನು ತಲುಪಿದೆ. ವ್ಯಾಪಾರ ಕೊರತೆಯೂ ಈವರೆಗಿನ ಎರಡನೇ ಅತಿಗರಿಷ್ಠ ಮಟ್ಟವನ್ನು ತಲುಪಿದೆ. 2020–21ನೇ ಸಾಲಿಗೆ ಹೋಲಿಸಿದರೆ ವ್ಯಾಪಾರ ಕೊರತೆಯ ಮೊತ್ತವು ಶೇ 50ಕ್ಕೂ ಹೆಚ್ಚು ಪ್ರಮಾಣದಷ್ಟು ಏರಿಕೆಯಾಗಿದೆ.

ಮೋದಿ ಅವರು ಈ ಮಾಹಿತಿಯನ್ನು ಘೋಷಿಸುವಾಗ, ರಫ್ತಿಗೆ ಸಂಬಂಧಿಸಿದ ದತ್ತಾಂಶವನ್ನು ಮಾತ್ರ ಹೇಳಿದ್ದಾರೆ. ಆಮದು ಮತ್ತು ವ್ಯಾಪಾರ ಕೊರತೆಯೂ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿರುವುದರ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.2021–22ರಲ್ಲಿ ದೇಶದ ಆಮದು ವಹಿವಾಟಿನ ಮೊತ್ತವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಟ್ಟು ಆಮದು ಮೊತ್ತವು ಸಾರ್ವತ್ರಿಕ ದಾಖಲೆಯನ್ನು ಮುಟ್ಟಿದೆ. ಇದರ ಜತೆಯಲ್ಲಿ ಆಮದು ಮತ್ತು ರಫ್ತು ಮೊತ್ತದ ನಡುವಣ ವ್ಯತ್ಯಾಸ (ವ್ಯಾಪಾರ ಕೊರತೆ) ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ.

‘ರಫ್ತು ವಹಿವಾಟಿನಲ್ಲಿ ಆಗಿರುವ ಏರಿಕೆಯು, ದೇಶದ ಆರ್ಥಿಕ ಪ್ರಾಬಲ್ಯವನ್ನು ಸೂಚಿಸುತ್ತದೆ’ ಎಂದು ಮೋದಿ ಅವರು ಟ್ವೀಟ್ ಮಾಡಿದ್ದರು. ಆದರೆ, ದತ್ತಾಂಶಗಳ ಪ್ರಕಾರ ದೇಶದ ಜಾಗತಿಕ ವಾಣಿಜ್ಯ ವಹಿವಾಟು ಉತ್ತಮ ಸ್ಥಿತಿಯಲ್ಲಿ ಇಲ್ಲ.

ದೇಶವೊಂದರ ಜಾಗತಿಕ ವಾಣಿಜ್ಯ ವಹಿವಾಟು ಉತ್ತಮ ಸ್ಥಿತಿಯಲ್ಲಿ ಇದೆ ಎಂಬುದನ್ನು ಆಮದು ಮತ್ತು ರಫ್ತು ನಡುವಣ ವ್ಯತ್ಯಾಸವನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ. ರಫ್ತಿನ ಮೊತ್ತಕ್ಕಿಂತ ಆಮದು ಮೊತ್ತವು ಅಧಿಕವಾಗಿ ಇದ್ದರೆ, ಅದು ಉತ್ತಮ ಸ್ಥಿತಿ ಅಲ್ಲ ಎನ್ನಲಾಗುತ್ತದೆ. ರಫ್ತಿಗಿಂತ ಆಮದು ಮೊತ್ತವು ಕಡಿಮೆ ಇದ್ದರೆ, ಅದನ್ನು ಉತ್ತಮ ಸ್ಥಿತಿ ಎನ್ನಲಾಗುತ್ತದೆ. ಆದರೆ, 2021–22ನೇ ಸಾಲಿನ ಮೊದಲ 10 ತಿಂಗಳಲ್ಲಿ ದೇಶವು ರಫ್ತು ಮಾಡಿದ ಸರಕು ಮತ್ತು ಸೇವೆಗಳ ಮೊತ್ತಕ್ಕಿಂತ ಹೆಚ್ಚುವರಿಯಾಗಿ ₹11.52 ಲಕ್ಷ ಕೋಟಿಯಷ್ಟು ಸರಕು ಮತ್ತು ಸೇವೆಯನ್ನು ಆಮದು ಮಾಡಿಕೊಂಡಿದೆ. ಇದು ದೇಶದ ಈವರೆಗಿನ ಎರಡನೇ ಅತ್ಯಂತ ಗರಿಷ್ಠ ಮೊತ್ತದ ವ್ಯಾಪಾರ ಕೊರತೆಯಾಗಿದೆ.

* ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವರ್ಷದಲ್ಲಿ ದೇಶದ ಒಟ್ಟು ರಫ್ತಿನ ಮೊತ್ತವು ₹18.96 ಲಕ್ಷ ಕೋಟಿಯಷ್ಟಿತ್ತು. ನಂತರದ ವರ್ಷಗಳಲ್ಲಿ ಇದು ಭಾರಿ ಪ್ರಮಾಣದಲ್ಲಿ ಏರಿಳಿತ ಕಂಡಿದೆ. 2021–22ನೇ ಆರ್ಥಿಕ ವರ್ಷದ ಮೊದಲ ಹತ್ತು ತಿಂಗಳ ಅಂತ್ಯಕ್ಕೆ ಇದು ₹25.28 ಲಕ್ಷ ಕೋಟಿಗೆ ಏರಿಕೆಯಾಗಿದೆ

* 2014–15ನೇ ಸಾಲಿನಲ್ಲಿ ದೇಶದ ಒಟ್ಟು ಆಮದಿನ ಮೊತ್ತವು ₹27.37 ಲಕ್ಷ ಕೋಟಿಯಷ್ಟು ಇತ್ತು. ನಂತರದ ವರ್ಷಗಳಲ್ಲಿ ಇದು ಭಾರಿ ಏರಿಳಿತ ಕಂಡಿದೆ. 2021–22ನೇ ಸಾಲಿನ ಆರ್ಥಿಕ ವರ್ಷದ ಮೊದಲ ಹತ್ತು ತಿಂಗಳ ಅಂತ್ಯಕ್ಕೆ ಇದು ₹36.80 ಲಕ್ಷ ಕೋಟಿಗೆ ಏರಿಕೆಯಾಗಿದೆ

* ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಆಡಳಿತದ ಇಷ್ಟೂ ವರ್ಷಗಳಲ್ಲಿ ದೇಶದ ವ್ಯಾಪಾರ ಕೊರತೆಯು ಭಾರಿ ಪ್ರಮಾಣದ ಏರಿಳಿತಗಳನ್ನು ತಲುಪಿದೆ. 2014–15ನೇ ಸಾಲಿಗೆ ಹೋಲಿಸಿದರೆ, 2021–22ನೇ ಸಾಲಿನ ಮೊದಲ 10 ತಿಂಗಳ ಅಂತ್ಯದ ವೇಳೆಗೆ ವ್ಯಾಪಾರ ಕೊರತೆಯು ಶೇ 37.14ರಷ್ಟು ಏರಿಕೆಯಾಗಿದೆ. ಆದರೆ, 2020–21ನೇ ಸಾಲಿಗೆ ಹೋಲಿಸಿದರೆ, 2021–22ನೇ ಸಾಲಿನ ಮೊದಲ 10 ತಿಂಗಳ ಅಂತ್ಯದ ವೇಳೆಗೇ ವ್ಯಾಪಾರ ಕೊರತೆಯ ಮೊತ್ತವು ಶೇ 52.38ರಷ್ಟು ಏರಿಕೆಯಾಗಿದೆ. ಇದು ಈವರೆಗಿನ ಏರಿಕೆಯ ಗರಿಷ್ಠ ಪ್ರಮಾಣವಾಗಿದೆ

ಸಮತೋಲನವಿಲ್ಲದ ಬೆಳವಣಿಗೆ

ದೇಶದ ಜಾಗತಿಕ ವಾಣಿಜ್ಯ ವಹಿವಾಟಿನ ಬೆಳವಣಿಗೆಯಲ್ಲಿ ಯಾವುದೇ ಸ್ಥಿರತೆ ಇಲ್ಲ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ವಾಣಿಜ್ಯ ವಹಿವಾಟಿನ ಬೆಳವಣಿಗೆಯು ಡೋಲಾಯಮಾನವಾಗಿದೆ. ಕೆಲವು ವರ್ಷಗಳಲ್ಲಿ ರಫ್ತು ಮತ್ತು ಆಮದು ಎರಡೂ ಋಣಾತ್ಮಕ ಬೆಳವಣಿಗೆ ದಾಖಲಿಸಿವೆ. ಕೆಲವು ವರ್ಷದಲ್ಲಿ ಭಾರಿ ಪ್ರಮಾಣದ ಏರಿಕೆ ದಾಖಲಿಸಿವೆ. ಆದರೆ ಕೋವಿಡ್‌ ಕರಿಛಾಯೆಯಿಂದ ಹೊರಬಂದ ನಂತರದ ಆರ್ಥಿಕ ವರ್ಷವಾದ 2021–22ರಲ್ಲಿ ಭಾರಿ ಪ್ರಮಾಣದ ಏರಿಕೆ ದಾಖಲಾಗಿದೆ. ಆದರೆ ರಫ್ತಿನ ಏರಿಕೆ ಪ್ರಮಾಣ ಮತ್ತು ಆಮದಿನ ಏರಿಕೆ ಪ್ರಮಾಣದಲ್ಲಿ ಸಮತೋಲನವಿಲ್ಲ. ರಫ್ತು ಶೇ 48ರಷ್ಟು ಏರಿಕೆಯಾಗಿದ್ದರೆ, ಆಮದು ಶೇ 64ಕ್ಕಿಂತಲೂ ಹೆಚ್ಚಿನ ಪ್ರಮಾಣದ ಏರಿಕೆ ದಾಖಲಿಸಿದೆ.

ಉತ್ಪನ್ನಗಳು

* ದೇಶವು ಅತಿಹೆಚ್ಚು ಆಮದು ಮಾಡಿಕೊಳ್ಳುವ ಸರಕುಗಳಲ್ಲಿ ಮೊದಲ ಸ್ಥಾನ ಕಚ್ಚಾತೈಲಕ್ಕೆ ಇದೆ. ಕಚ್ಚಾತೈಲದ ಆಮದಿನ ಪ್ರಮಾಣವು ಒಟ್ಟು ಆಮದಿನ ಶೇ 20ರ ಆಸುಪಾಸಿನಲ್ಲಿ ಇದೆ. ದೇಶದ ಆಮದು ಮೊತ್ತ ಹೆಚ್ಚಾಗಲು ಕಚ್ಚಾತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಆಮದಿನಲ್ಲಿ ಆಗಿರುವ ಏರಿಕೆಯೇ ಪ್ರಮುಖ ಕಾರಣ. ಕಚ್ಚಾತೈಲದ ನಂತರದ ಸ್ಥಾನ ಚಿನ್ನಕ್ಕೆ ಇದೆ

* ದೇಶವು ರಫ್ತು ಮಾಡುವ ಸರಕುಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳದ್ದು ಸಿಂಹಪಾಲು. ನಂತರದ ಸ್ಥಾನಗಳಲ್ಲಿ ಚಿನ್ನ, ಕಬ್ಬಿಣದ ಅದಿರು ಮತ್ತು ಔಷಧಗಳಿಗೆ ಇದೆ

ದೇಶಗಳು

* ಭಾರತದ ಒಟ್ಟು ಆಮದಿನ ಪೂರೈಕೆದಾರರಲ್ಲಿ ಚೀನಾಕ್ಕೆ ಮೊದಲ ಸ್ಥಾನವಿದೆ. ಕಚ್ಚಾತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರತುಪಡಿಸಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳು, ಆಟೊಮೊಬೈಲ್ ಬಿಡಿಭಾಗಗಳು, ಬಟ್ಟೆ ಮತ್ತು ನೂಲು, ಪ್ಲಾಸ್ಟಿಕ್ ಉತ್ಪನ್ನಗಳು, ರಸಗೊಬ್ಬರಕ್ಕಾಗಿ ಭಾರತವು ಚೀನಾವನ್ನು ಅವಲಂಬಿಸಿದೆ

* ಭಾರತದಿಂದ ಹೆಚ್ಚು ರಫ್ತಾಗುವ ದೇಶಗಳಲ್ಲಿ ಅಮೆರಿಕವು ಮೊದಲ ಸಾಲಿನಲ್ಲಿದೆ. ಅಮೆರಿಕಕ್ಕೆ ಪ್ರತಿ ಆರ್ಥಿಕ ವರ್ಷದಲ್ಲಿ ಆಗುವ ರಫ್ತಿನಲ್ಲಿ ಸೇವೆಗಳದ್ದು ಸಿಂಹಪಾಲು, ನಂತರದ್ದು ಔಷಧಗಳದ್ದು

ಆಧಾರ: ವಾಣಿಜ್ಯ ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT