ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಎಚ್ಚರ ತಪ್ಪಿದ ಪ್ರಚಾರ; ಈಗ ಕೋವಿಡ್‌ ಅಬ್ಬರ

Last Updated 28 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೋವಿಡ್‌–19ರ ಎರಡನೇ ಅಲೆಯು ಜನರು ಮತ್ತು ಸರ್ಕಾರದ ಕೈಮೀರಿ ಹೋದಂತೆ ಕಾಣಿಸುತ್ತಿದೆ. ರಾಜ್ಯದಲ್ಲಿ ಲಾಕ್‌ಡೌನ್‌ ಮತ್ತೆ ಹೇರಿಕೆಯಾಗಿದೆ. ಕಳೆದೆರಡು ತಿಂಗಳಲ್ಲಿ ಸ್ವಲ್ಪ ಎಚ್ಚರ ವಹಿಸಿದ್ದರೆ ಪರಿಸ್ಥಿತಿ ಅಪಾಯಕಾರಿ ಮಟ್ಟ ತಲುಪುತ್ತಿರಲಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಕೋವಿಡ್‌ ತಡೆ ಮಾರ್ಗಸೂಚಿಗಳೆಲ್ಲವನ್ನೂ ಗಾಳಿಗೆ ತೂರಿ ರಾಜಕೀಯ, ಧಾರ್ಮಿಕ ನಾಯಕರು ಬೀದಿಗಿಳಿದದ್ದು ಕೋವಿಡ್‌ ಹರಡಲು ದೊಡ್ಡ ಮಟ್ಟದಲ್ಲಿ ಕಾರಣವಾಗಿದೆ. ಜಾತ್ರೆ,ಉರುಸ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಕೂಡ ಎಚ್ಚರ ತಪ್ಪಿದ್ದಕ್ಕೆ ಈಗ ಬೆಲೆ ತೆರಬೇಕಾಗಿದೆ

ಸಮಾವೇಶಗಳಿಂದ ಸಂಕಷ್ಟ
ಕೋವಿಡ್ ಮೊದಲನೇ ಅಲೆ ಜನವರಿ ವೇಳೆಗೆ ತನ್ನ ಪ್ರಭಾವ ತಗ್ಗಿಸಿಕೊಂಡಿತು. ಹೀಗಾಗಿ ಸರ್ಕಾರಕ್ಕೂ, ಜನರಿಗೂ ಕೋವಿಡ್ ಹೋಗಿಯೇಬಿಟ್ಟಿತು ಎಂಬ ಭಾವ ಬಂದಿದ್ದು ಸುಳ್ಳಲ್ಲ. ಏಳೆಂಟು ತಿಂಗಳ ಕಾಲ ಕೈಕಟ್ಟಿ ಕುಳಿತುಕೊಂಡಿದ್ದ ಜನರು, ಸಂಘಟನೆಗಳು, ಸಂಸ್ಥೆಗಳ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಜಾತಿ ಸಮುದಾಯಗಳು ಮೀಸಲಾತಿಗಾಗಿ ನಡೆಸಿದ ಎರಡು ಬೃಹತ್ ಹೋರಾಟಗಳು ಇದೇ ಅವಧಿಯಲ್ಲಿ ಜರುಗಿದವು.

2ಎ ಪ್ರವರ್ಗಕ್ಕೆ ಸೇರಿಸುವಂತೆ ಪಂಚಮಸಾಲಿ ಲಿಂಗಾಯತರು ದೊಡ್ಡ ದನಿ ಎತ್ತಿದರು. ಹರಿಹರ ಹಾಗೂ ಕೂಡಲಸಂಗಮದ ಪೀಠಾಧ್ಯಕ್ಷರು ತಮ್ಮ ಸಮುದಾಯದ ಜನರಿಗೆ ನ್ಯಾಯ ದೊರಕಿಸಿಕೊಡಲು ಬೀದಿಗಿಳಿದರು. ಸಮುದಾಯದ ವಿದ್ಯಾರ್ಥಿಗಳು ಹಾಗೂ ಯುವಜನರಿಗೆಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಸಿಗಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು. ಅವರ ಪಾದಯಾತ್ರೆಯು ಜನವರಿ 14ರಂದು ಕೂಡಲಸಂಗಮದಿಂದ ಆರಂಭಗೊಂಡು ಫೆಬ್ರುವರಿ 22ರಂದು ಬೆಂಗಳೂರು ತಲುಪಿತು. ಮಾರ್ಗದುದ್ದಕ್ಕೂ ದೊಡ್ಡ ಪಟ್ಟಣಗಳಲ್ಲಿ ಸಾವಿರಾರು ಜನರು ಪಾದಯಾತ್ರೆಯನ್ನು ಬರಮಾಡಿಕೊಂಡರು.

ಬೆಂಗಳೂರಿನಲ್ಲಿ ಕೊನೆಯ ದಿನ ಬೃಹತ್ ಸಮಾವೇಶ ನಡೆಯಿತು. ನಿಷೇಧಾಜ್ಞೆ ಇದ್ದರೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಸಮಾವೇಶ ಸ್ಥಳದಿಂದ ಹೊರಟ ಗುಂಪುಗಳನ್ನು ಕಾವೇರಿ ಜಂಕ್ಷನ್ ಬಳಿ ಪೊಲೀಸರು ತಡೆದರು. ಈ ವೇಳೆ ಜನರು ತಮ್ಮ ನಡುವೆ ಅಂತರ ಕಾಯ್ದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಮಾಸ್ಕ್ ಧರಿಸಿದ್ದವರು ಕೆಲವೇ ಜನ.

ಬಸವಕಲ್ಯಾಣದಲ್ಲಿ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರ ಮೆರವಣಿಗೆ
ಬಸವಕಲ್ಯಾಣದಲ್ಲಿ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರ ಮೆರವಣಿಗೆ

ಇನ್ನು ಕುರುಬ ಸಮುದಾಯದ ಮೀಸಲಾತಿ ಹೋರಾಟವು ಸಹ ಕೋವಿಡ್ ನಡುವೆಯೇ ಜರುಗಿತು. ತಮ್ಮನ್ನು ಎಸ್‌ಟಿ ಪ್ರವರ್ಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಕುರುಬ ಸಮುದಾಯದ ಸಾವಿರಾರು ಜನರು ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೀದಿಗಿಳಿದರು. ಜನವರಿ 15ರಿಂದ ಫೆಬ್ರುವರಿ 4ರ ವರೆಗೆ 340 ಕಿ.ಮೀ. ಪಾದಯಾತ್ರೆ ಕೈಗೊಳ್ಳಲಾಗಿತ್ತು. ಪಾದಯಾತ್ರೆಯುದ್ದಕ್ಕೂ ಜನರು ಅಲ್ಲಲ್ಲಿ ಸಮಾವೇಶಗೊಂಡು ಚರ್ಚಿಸುತ್ತಿದ್ದರು. ಬೆಂಗಳೂರು ತಲುಪಿದಾಗ, ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕೋವಿಡ್ ಮಾರ್ಗಸೂಚಿಗಳು ಅದಾಗಲೇ ತಮ್ಮ ಔಚಿತ್ಯ ಕಳೆದುಕೊಂಡಿದ್ದರಿಂದ ಲಕ್ಷಾಂತರ ಜನರು ಗುಂಪುಗುಂಪಾಗಿ ಬಂದು ಸಮಾವೇಶದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಈ ಎರಡೂ ಸಮಾವೇಶಗಳನ್ನು ಹೊರತಪಡಿಸಿ ರಾಜ್ಯದ ನಾನಾ ಕಡೆ ದಿನಂಪ್ರತಿ ಪ್ರತಿಭಟನೆಗಳು, ಹಕ್ಕೊತ್ತಾಯ ಮೆರವಣಿಗೆಗಳು, ಸಂಘಗಳ ಸಮಾವೇಶಗಳು, ಮದುವೆ ಸಮಾರಂಭಗಳು ನಡೆದವು.

ಜಾತ್ರೆಗಳಿಂದ ವೇಗೋತ್ಕರ್ಷ
ಕೋವಿಡ್ ಎರಡನೇ ಅಲೆಯು ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಏಪ್ರಿಲ್‌ ತಿಂಗಳು ಆರಂಭವಾಗುವ ಮುನ್ನ ಇದ್ದ ಪರಿಸ್ಥಿತಿ, ತಿಂಗಳು ಮುಗಿಯುವ ಹೊತ್ತಿಗೆ ಪೂರ್ತಿ ಬದಲಾಗಿದೆ. ಇದಕ್ಕೂ ಮುಂಚಿನ ಕೆಲ ತಿಂಗಳಲ್ಲಿ ಜನರು ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಜನವರಿಯಿಂದ ಏಪ್ರಿಲ್ ಆರಂಭದವರೆಗೂ ನಾಡಿನಾದ್ಯಂತ ನಡೆದ ಜಾತ್ರೆಗಳು, ರಥೋತ್ಸವಗಳು ಕೋವಿಡ್‌ ಪಿಡುಗು ಬಿಕ್ಕಟ್ಟಿನ ರೂಪ ತಾಳಲು ಕಾರಣ ಎನ್ನುತ್ತಾರೆ ತಜ್ಞರು.

ಬಳ್ಳಾರಿ ಜಿಲ್ಲೆಯಲ್ಲಿ ಮಾರ್ಚ್ 1ರಂದು ನಡೆದ ಮೈಲಾರ ಜಾತ್ರೆಯಲ್ಲಿ ಸುಮಾರು 2 ಲಕ್ಷ ಜನ ಸೇರಿದ್ದರು. ಮಾರ್ಚ್ 15ರಂದು ನಡೆದ ಕುರುವತ್ತಿ ಜಾತ್ರೆ, ಕೊಟ್ಟೂರಿನ ಕೊಟ್ಟೋರೇಶ್ವರ ರಥೋತ್ಸವದಲ್ಲಿ ಸಾವಿರಾರು ಮಂದಿ ಇದ್ದರು. ಮಾರ್ಚ್ 1ರಂದು ಜರುಗಿದ ಧಾರವಾಡ ಜಿಲ್ಲೆಯ ಗರಗ ಮಡಿವಾಳೇಶ್ವರ ಜಾತ್ರೆ, ಹುಬ್ಬಳ್ಳಿಯಲ್ಲಿ ಮಾರ್ಚ್ 12ರಂದು ನಡೆದ ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವವೂ ಸಹಸ್ರಾರು ಭಕ್ತರ ಸಂಗಮಕ್ಕೆ ಸಾಕ್ಷಿಯಾಗಿದ್ದವು.

ಬೆಳಗಾವಿ ಜಿಲ್ಲೆ ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಫೆ.26ರಂದು ಉಳುವಿ ಚನ್ನಬಸವೇಶ್ವರ ಜಾತ್ರೆ, ಬೈಲಹೊಂಗಲ ತಾಲ್ಲೂಕಿನ ನಯಾನಗರ ಗ್ರಾಮದಲ್ಲಿ ಮಾರ್ಚ್ 14ರಂದು ನಡೆದ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಅದ್ದೂರಿ ರಥೋತ್ಸವಗಳು ಜನಸ್ತೋಮಕ್ಕೆ ಕಾರಣವಾಗಿದ್ದವು. ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಸಿದ್ಧೇಶ್ವರ ಜಾತ್ರೆ ಅಂಗವಾಗಿಮಾರ್ಚ್‌15ರಂದು ಹಮ್ಮಿಕೊಂಡಿದ್ದ ಶೌರ್ಯ ಪ್ರದರ್ಶನ, ಚಿಕ್ಕೋಡಿ ತಾಲ್ಲೂಕಿನ ನೇಜ್ ಗ್ರಾಮದೇವರಾದ ಕಾಡಸಿದ್ದೇಶ್ವರ ಜಾತ್ರೆ ಪ್ರಯುಕ್ತ ಮಾರ್ಚ್‌ 21ರಂದು ನಡೆದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ, ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಮಾರ್ಚ್‌ 22ರಂದು ನಡೆದ ಅರಣ್ಯಸಿದ್ದೇಶ್ವರ ಜಾತ್ರೆ ಅಂಗವಾಗಿ ನಡೆದ ಪಲ್ಲಕ್ಕಿ ಮೇಲೆ ಭಂಡಾರ ಹಾರಿಸುವ ಕಾರ್ಯಕ್ರಮಗಳಲ್ಲಿ ಜನಸಾಗರವೇ ಸೇರಿತ್ತು.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯಸಿದ್ದೇಶ್ವರ ಜಾತ್ರೆ ಕೊನೆಯ ದಿನದಂದು (ಮಾರ್ಚ್‌ 22) ದೇವವಾಣಿ ಆಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯಸಿದ್ದೇಶ್ವರ ಜಾತ್ರೆ ಕೊನೆಯ ದಿನದಂದು (ಮಾರ್ಚ್‌ 22) ದೇವವಾಣಿ ಆಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ

ವಿಜಯಪುರ ಜಿಲ್ಲೆಯ ಯಲಗೂರಿನ ಯಲಗೂರೇಶ್ವರ ಜಾತ್ರೆ, ಜಾಯವಾಡಗಿ ಸೋಮನಾಥ ಶಿವಪ್ಪ ಮುತ್ಯಾನ ಜಾತ್ರೆ, ಆಲಮಟ್ಟಿಯ ಚಂದ್ರಮ್ಮ ದೇವಿ ಜಾತ್ರೆ, ಇಟಗಿಯ ಮೇಲುಗದ್ದುಗೆ ಮಠದ ಜಾತ್ರೆ, ಕಾಮನಕೇರಿ ದವಲ್ ಮಲಿಕ್ ಜಾತ್ರೆ, ಮಸೂತಿಯ ವೀರಭದ್ರೇಶ್ವರ ಜಾತ್ರೆ, ಸಿಂದಗಿ ತಾಲ್ಲೂಕು ಯಂಕಂಚಿ ದಾವಲಮಲಿಕ್ ಉರುಸ್, ಕಕ್ಕಳ ಮೇಲಿಯಲ್ಲಿ ಸಿದ್ದಲಿಂಗ ಮುತ್ಯಾ ಜಾತ್ರೆ ಅದ್ದೂರಿಯಾಗಿ ನಡೆದು ಜನರ ಸಂಗಮಕ್ಕೆ ಕಾರಣವಾಗಿದ್ದವು.

ಫೆಬ್ರುವರಿಯಿಂದ ಮಾರ್ಚ್ ಅಂತ್ಯದವರೆಗೆ ಹಾವೇರಿ ಜಿಲ್ಲೆಯಲ್ಲಿ ಹಿರೇಕೆರೂರ ದುರ್ಗಾದೇವಿ ಜಾತ್ರೆ, ಹಾನಗಲ್ ಗ್ರಾಮದೇವಿ ಜಾತ್ರೆ,ಹಾವನೂರು ಜಾತ್ರೆ, ಸವಣೂರು ಮಾಯಮ್ಮದೇವಿ ಜಾತ್ರೆ, ಅಕ್ಕಿಅಲೂರು ಉತ್ಸವಗಳು ಜನರ ಸಮ್ಮುಖದಲ್ಲಿ ಜೋರಾಗಿಯೇ ನಡೆದಿವೆ. ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಹಠಯೋಗಿ ಹುಚ್ಚೀರಪ್ಪಜ್ಜನವರ ರಥೋತ್ಸವವು ಫೆಬ್ರುವರಿ 15ರಂದು ಸಾವಿರಾರು ಭಕ್ತರ ನಡುವೆ ವೈಭವದಿಂದ ನಡೆಯಿತು. ಡಂಬಳ ತೋಂಟದಾರ್ಯ ಮಠದ ಜಾತ್ರೆ, ಕದಾಂಪುರ ಗ್ರಾಮದ ಪತ್ರೆಸ್ವರ ಜಾತ್ರೆ, ಡಂಬಳ ಗ್ರಾಮದ ಜಮಾಲಾ ಶ್ಯಾವಲಿ ಉರುಸ್‌, ಗದಗ ತಾಲ್ಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ.

ಮುಳಗುಂದದಲ್ಲಿ ಫೆ.25, 26ರಂದು ನಡೆದ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರೆಗೆ ಸಾವಿರಾರು ಜನರು ಸೇರಿದ್ದರು.

ಉತ್ತರ ಕನ್ನಡದಲ್ಲಿ ಉಳವಿ ಜಾತ್ರೆ ಮತ್ತು ಗೋಕರ್ಣದಲ್ಲಿ ಶಿವರಾತ್ರಿ ಉತ್ಸವಗಳು ಮಾರ್ಚ್‌ನಲ್ಲಿ ಪ್ರಮುಖವಾಗಿ ನಡೆದಿವೆ. ಆದರೆ, ಎರಡೂ ಈ ಬಾರಿ ಸರಳವಾಗಿ ಆಗಿವೆ. ಆದರೆ, ಸಿದ್ದಾಪುರದ ಕೊಂಡ್ಲಿಯಲ್ಲಿ ಮಾರ್ಚ್ 30ರಿಂದ ಏ.6ರ ತನಕ ಜಾತ್ರೆ ನಡೆದಿತ್ತು. ಮಾ.24ರಿಂದ 27ರವರೆಗೆ ಶಿರಸಿಯಲ್ಲಿ ಬೇಡರ ವೇಷ ಅದ್ದೂರಿಯಾಗಿ ನಡೆದಿತ್ತು.

ಜನರ ಪ್ರಾಣ ಪಣಕ್ಕಿಟ್ಟು ರಾಜಕಾರಣಿಗಳ ಪ್ರಚಾರ
ದೇಶದ ಐದು ವಿಧಾನಸಭೆಗಳಗೆ ಚುನಾವಣೆ ಘೊಷಣೆಯಾದ ನಂತರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೇ ಕೋವಿಡ್‌ ಮಾರ್ಗಸೂಚಿಯನ್ನು ಗಾಳಿಗೆ ತೂರಿದ್ದರು ಎಂಬ ಆರೋಪವಿದೆ. ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಆಯೋಜಿಸಿದ್ದ ಸಭೆಗಳಲ್ಲಿ ಸಾವಿರಾರು ಜನರು ಸೇರಿದ್ದರು. ಅದಾಗಲೇ ದೇಶದಲ್ಲಿ ಕೋವಿಡ್‌ನ ಎರಡನೇ ಅಲೆಯು ಕಾಣಿಸಿಕೊಂಡು, ಐದು ರಾಜ್ಯಗಳಲ್ಲಿ ತೀವ್ರಗೊಂಡಿತ್ತು.

ಈ ಚುನಾವಣೆಗಳ ಜತೆಗೆ ಅನೇಕ ರಾಜ್ಯಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆಯ ತೆರವಾದ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆದವು. ಈ ಸಂದರ್ಭದಲ್ಲೂ ರಾಜಕಾರಣಿಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದರು. ಕರ್ನಾಟಕದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. ಆಡಳಿತ ಹಾಗೂ ವಿರೋಧಪಕ್ಷಗಳು ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದವು. ಆದರೆ, ಪ್ರಚಾರದ ಸಂದರ್ಭದಲ್ಲಿ ಕೋವಿಡ್‌ ತಡೆ ಮಾರ್ಗಸೂಚಿ ಪಾಲಿಸದೇ ಇದ್ದರೆ ಪಿಡುಗು ಅಪಾಯಕಾರಿಯಾಗಿ ಹರಡಬಹುದು ಎಂಬುದನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ. ಪ್ರಮುಖ ‍ ಪಕ್ಷಗಳ ನಾಯಕರು ಸಾವಿರಾರು ಜನರನ್ನು ಸೇರಿಸಿ ಸಭೆಗಳನ್ನು ನಡೆಸಿದ್ದರು. ಇಂಥ ಸಭೆಗಳಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಸಭೆಗಳಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಹಾಗೂ ಹಲವು ನಾಯಕರಿಗೆ ಕೋವಿಡ್‌ ದೃಢಪಟ್ಟು ಆಸ್ಪತ್ರೆಗೆ ದಾಖಲಾಗುವಂತಾಗಿತ್ತು. ಜ್ವರದ ನಡುವೆಯೂ ಈ ನಾಯಕರು ಪ್ರಚಾರ ನಡೆಸಿದ್ದರು ಎಂಬುದು ಇವರಲ್ಲಿದ್ದ ಅಸಡ್ಡೆಯ ಪ್ರಮಾಣವನ್ನು ಸೂಚಿಸುತ್ತದೆ.

ಮತದಾನ ಮುಗಿಯುವ ವೇಳೆಗೆ ಇನ್ನಷ್ಟು ನಾಯಕರು ಆಸ್ಪತ್ರೆ ದಾಖಲಾಗುವಂತಾಗಿದೆ. ಇಂಥ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಕೋವಿಡ್‌ ಅಂಟಿಸಿಕೊಂಡವರ ಸಂಖ್ಯೆ ನೂರಾರು ಇರಬಹುದು ಎಂದು ಹೇಳಲಾಗಿದೆ.

ಉಪಚುನಾವಣೆ ವೇಳೆ ಮತ್ತು ನಂತರ ಕೋವಿಡ್ ಪೀಡಿತರಾದ ನಾಯಕರು
* ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
* ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ
* ವಿಧಾನಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ
* ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ
* ಶಾಸಕಿ ಲಕ್ಷ್ಮಿ ಹೆಬ್ಬಾಳಕರ
* ಶಾಸಕ ರಮೇಶ ಜಾರಕಿಹೊಳಿ (ಪ್ರಚಾರಕ್ಕೆ ಹೋಗಿಲ್ಲ)
* ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಮಂಗಲಾಅಂಗಡಿ
* ಕುಡಚಿಶಾಸಕಪಿ.ರಾಜೀವ
* ಮಸ್ಕಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ

ಚಾಟಿ ಬೀಸಿದ್ದ ಹೈಕೋರ್ಟ್‌
ಕೋವಿಡ್‌ ನಿಯಮ ಉಲ್ಲಂಘಿಸಿದವರ ವಿರುದ್ಧ ಚುನಾವಣಾ ಆಯೋಗ ಮೌನವಾಗಿದ್ದರೂ, ಹೈಕೋರ್ಟ್‌ ಮಾತ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ, ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಿತ್ತು. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿದ ಪೊಲೀಸರ ವಿರುದ್ಧವೂ ಚಾಟಿ ಬೀಸಿತ್ತು.

‘ನಿಯಮ ಪಾಲನೆಯ ವಿಚಾರದಲ್ಲಿ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಮಾದರಿಯಾಗಿ ಇರಬೇಕಿತ್ತು. ಆದರೆ, ಅದು ಆಗುತ್ತಿಲ್ಲ. ಈ ಕಾರಣದಿಂದ ಅವರ ವಿರುದ್ಧವೇ ಕ್ರಮಗಳು ತ್ವರಿತವಾಗಿ ಜಾರಿಯಾಗಬೇಕು. ಆದರೆ ಸಂಘಟಕರ ವಿರುದ್ಧ ಮಾತ್ರ ಪೊಲೀಸರು ದೂರು ದಾಖಲಿಸುತ್ತಿದ್ದಾರೆ’ ಎಂದು ಪೀಠ ಆಕ್ಷೇಪಿಸಿತ್ತು. ಆದರೆ, ಇದರ ನಂತರವೂ ಯಾವುದೇ ಪ್ರಮುಖ ರಾಜಕಾರಣಿ ಅಥವಾ ಧಾರ್ಮಿಕ ಮುಖಂಡರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಿಲ್ಲ

ಬೆಂಗಳೂರಿನ ಲೆಟ್ಜ್‌ಕಿಟ್‌ ಫೌಂಡೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠವು ‘ಈ ಆದೇಶದ ಸಾರಾಂಶವನ್ನು ಕೂಡಲೇ ಡಿಜಿಪಿ ಅವರಿಗೆ ರವಾನಿಸಬೇಕು. ಲಿಖಿತ ಆದೇಶದ ಪ್ರತಿಗಾಗಿ ಕಾಯಬಾರದು’ ಎಂದೂ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿತ್ತು.

ಆಧಾರ: ಪ್ರಜಾವಾಣಿ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT