ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ಹಿಜಾಬ್ ಪ್ರಕರಣದಲ್ಲಿ ಭಿನ್ನಮತದ ತೀರ್ಪು: ಹೀಗೆಂದರೇನು? ಮುಂದೇನು?

Last Updated 14 ಅಕ್ಟೋಬರ್ 2022, 5:55 IST
ಅಕ್ಷರ ಗಾತ್ರ

ಹಿಜಾಬ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಗುರುವಾರ ಭಿನ್ನಮತದ ತೀರ್ಪು ನೀಡಿದೆ.

ಹಿಜಾಬ್‌ಗೆ ಸಂಬಂಧಿಸಿದ ಪರ– ವಿರೋಧ ವಾದ ಆಲಿಸಿದ್ದ ನ್ಯಾಯ ಮೂರ್ತಿಗಳಾದ ಹೇಮಂತ್‌ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ಸೆಪ್ಟೆಂಬರ್‌ 22ರಂದು ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ಬೆಳಿಗ್ಗೆ 10.30ಕ್ಕೆ ತೀರ್ಪನ್ನು ಪ್ರಕಟಿಸಿತು.

ನ್ಯಾಯಮೂರ್ತಿ ಹೇಮಂತ್‌ ಗುಪ್ತ ಅವರು ವಿದ್ಯಾರ್ಥಿನಿಯರ ಮೇಲ್ಮನವಿಗಳನ್ನು ತಿರಸ್ಕರಿಸಿದ್ದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಕರ್ನಾಟಕ ಸರ್ಕಾರದ ಅಧಿಸೂಚನೆಯನ್ನು ರದ್ದುಪಡಿಸಿ ಪ್ರತ್ಯೇಕ ತೀರ್ಪು ನೀಡಿದ್ದಾರೆ.

ಹೀಗಾಗಿ ಸೂಕ್ತ ನಿರ್ದೇಶನಗಳಿಗಾಗಿ ಪ್ರಕರಣವನ್ನು ಸದ್ಯ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಅವರ ಎದುರು ಇರಿಸಲಾಗಿದೆ.

ಶಾಲಾ– ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿ ರಾಜ್ಯ ಸರ್ಕಾರವು ಫೆಬ್ರುವರಿ 5ರಂದು ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶವನ್ನು ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಮಾರ್ಚ್‌ 15ರಂದು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು. ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್‌, ಹಿಜಾಬ್‌ಗೆ ನಿಷೇಧ ಹೇರಿದ್ದ ಸರ್ಕಾರದ ಆದೇಶವನ್ನು ಎತ್ತಿಹಿಡಿತ್ತು. ಪ್ರಕರಣವನ್ನು ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದಿದ್ದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಅಭಿಪ್ರಾಯಗಳಿವು

ಹೆಣ್ಣು ಮಗುವಿಗೆ ತನ್ನ ಮನೆಯೊಳಗೆ ಅಥವಾ ಮನೆಯ ಹೊರಗೆ ಹಿಜಾಬ್‌ ಧರಿಸಲು ಅಧಿಕಾರ ಇದೆ. ಆ ಹಕ್ಕು ಶಾಲೆಯ ದ್ವಾರದ ಬಳಿ ಮೊಟಕುಗೊಳ್ಳುವುದಿಲ್ಲ. ವಿದ್ಯಾರ್ಥಿನಿ ಶಾಲೆಯ ಗೇಟ್‌ ಒಳಗೆ ಕೂಡ ತನ್ನ ಘನತೆ ಹಾಗೂ ಗೋಪ್ಯತೆ ಕಾಪಾಡಿಕೊಳ್ಳುವ ಮೂಲಭೂತ ಹಕ್ಕುಗಳನ್ನು ಹೊಂದಿರುತ್ತಾಳೆ. ತರಗತಿಯೊಳಗೆ ಈ ಹಕ್ಕುಗಳು ಅನ್ವಯವಾಗುವುದಿಲ್ಲ ಎಂಬ ವಾದ ಸರಿಯಲ್ಲ.
– ಸುಧಾಂಶು ಧುಲಿಯಾ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

ಯಾವುದೇ ಒಬ್ಬ ವಿದ್ಯಾರ್ಥಿನಿ ತಲೆಗೆ ಸ್ಕಾರ್ಫ್‌ ಧರಿಸುವುದನ್ನು ಅಥವಾ ಯಾವುದೇ ಇತರ ವಿದ್ಯಾರ್ಥಿ ಧಾರ್ಮಿಕ ಸಂಕೇತದ ಬಟ್ಟೆಗಳನ್ನು ಧರಿಸುವುದರಿಂದ ರಾಜಿಯಾಗಲು ಒಪ್ಪದಿದ್ದಲ್ಲಿ ಸಂವಿಧಾನದ 14ನೇ ಪರಿಚ್ಛೇದದ ಅನುಸಾರ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಹಕ್ಕು ಒದಗಿಸುವ ಉದ್ದೇಶದಿಂದ ಆ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸುವುದು ಸರಿ
– ಹೇಮಂತ್‌ ಗುಪ್ತ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

ಭಿನ್ನಮತದ ತೀರ್ಪು ಯಾವಾಗ?

ನಿರ್ದಿಷ್ಟ ಪ್ರಕರಣದಲ್ಲಿ ಒಂದೇ ರೀತಿಯಲ್ಲಿ ನಿರ್ಧರಿಸಲು ಪೀಠಕ್ಕೆ ಸಾಧ್ಯವಾಗದೇ ಹೋದಾಗ ಭಿನ್ನಮತದ ತೀರ್ಪು ಹೊರಬರುತ್ತದೆ. ಪೀಠದಲ್ಲಿ ಸಮ ಸಂಖ್ಯೆಯ ನ್ಯಾಯಮೂರ್ತಿಗಳಿದ್ದಾಗ ಹೀಗಾಗುವುದು ಸಾಮಾನ್ಯ. ಅದಕ್ಕಾಗಿಯೇ, ಬೆಸ ಸಂಖ್ಯೆಯ (ತ್ರಿಸದಸ್ಯ ಪೀಠ, ಪಂಚ... ಇತ್ಯಾದಿ) ನ್ಯಾಯಾಮೂರ್ತಿಗಳಿರುವ ಪೀಠಗಳನ್ನು ರಚಿಸಲಾಗುತ್ತದೆ. ದ್ವಿಸದಸ್ಯ ಪೀಠಗಳು ರಚನೆಯಾಗುವುದು ಅಪರೂಪ.

ಭಿನ್ನಮತದ ತೀರ್ಪಿನ ನಂತರ?

ಭಿನ್ನಮತದ ತೀರ್ಪಿನ ಸಂದರ್ಭದಲ್ಲಿ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗುತ್ತದೆ. ಅಥವಾ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸೂಚಿಸಲಾಗುತ್ತದೆ. ಆದರೆ, ಹಿಜಾಬ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದಲೇ ಭಿನ್ನಮತದ ತೀರ್ಪು ಬಂದಿರುವುದರಿಂದ ಸಿಜೆಐ ಅವರು ಈ ಪ್ರಕರಣದ ವಿಚಾರಣೆಗಾಗಿ ತ್ರಿಸದಸ್ಯ ಪೀಠ ಅಥವಾ ವಿಸ್ತೃತ ಪೀಠವನ್ನು ರಚಿಸುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಮುಂದೇನಾಗಲಿದೆ?

ಹಿಜಾಬ್‌ ನಿಷೇಧ ಕುರಿತು ಸುಪ್ರೀಂಕೋರ್ಟ್‌ ಸ್ಪಷ್ಟ ತೀರ್ಪು ನೀಡುವವರೆಗೂ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. ಹೀಗಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಶಾಲಾ–ಕಾಲೇಜುಗಳಿಗೆ ಹೋಗಲು ಅವಕಾಶವಿಲ್ಲ.

ಭಿನ್ನಮತದ ತೀರ್ಪಿನ ಇತರ ಪ್ರಕರಣಗಳು

ವೈವಾಹಿಕ ಅತ್ಯಾಚಾರ ವಿನಾಯಿತಿ ಸಿಂಧುತ್ವದಲ್ಲಿ ವೈರುಧ್ಯ

ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ವೈವಾಹಿಕ ಅತ್ಯಾಚಾರಕ್ಕೆ ಒದಗಿಸಲಾದ ವಿನಾಯಿತಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಕಳೆದ ‌ಮೇ ತಿಂಗಳಲ್ಲಿ ಭಿನ್ನಮತದ ತೀರ್ಪು ನೀಡಿತ್ತು.

ಐಪಿಸಿಯ ಸೆಕ್ಷನ್ 375 (ಅತ್ಯಾಚಾರಕ್ಕೆ ಸಂಬಂಧಿಸಿದ್ದು) ಅಡಿಯಲ್ಲಿ ನೀಡಲಾದ ವಿನಾಯಿತಿ ಅಸಾಂವಿಧಾನಿಕ ಎಂದು ನ್ಯಾಯಮೂರ್ತಿ ರಾಜೀವ್ ಶಕ್ಧರ್ ಅವರು ಅಭಿಪ್ರಾಯಪಟ್ಟರೆ, ನ್ಯಾಯಮೂರ್ತಿ ಸಿ. ಹರಿಶಂಕರ್ ಅವರು ನಿಬಂಧನೆಯು ಸಮಂಜಸವಾಗಿದೆ ಎಂದಿದ್ದರು.

ಎಐಎಡಿಎಂಕೆ ಶಾಸಕರ ಅನರ್ಹತೆ ಪ್ರಕರಣದಲ್ಲಿ ಭಿನ್ನಮತ

ಟಿಟಿವಿ ದಿನಕರನ್‌ ಬಣದಲ್ಲಿ ಗುರುತಿಸಿಕೊಂಡ ಎಐಎಡಿಎಂಕೆಯ 18 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠವು 2018ರಲ್ಲಿ ಭಿನ್ನಮತದ ತೀರ್ಪು ನೀಡಿತ್ತು.

ತಮಿಳುನಾಡು ವಿಧಾನಸಭಾ ಸ್ಪೀಕರ್ ಪಿ ಧನಪಾಲ್ ಅವರು ಹೊರಡಿಸಿದ್ದ ಅನರ್ಹತೆಯ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಎತ್ತಿ ಹಿಡಿದರೆ, ನ್ಯಾಯಮೂರ್ತಿ ಎಂ ಸುಂದರ್ ಅವರು ಸ್ಪೀಕರ್ ಆದೇಶವನ್ನು ರದ್ದುಗೊಳಿಸಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT