ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

137 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ 6ನೇ ಬಾರಿ ಚುನಾವಣೆ

Last Updated 16 ಅಕ್ಟೋಬರ್ 2022, 13:30 IST
ಅಕ್ಷರ ಗಾತ್ರ

ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 137 ವರ್ಷಗಳ ಹಿಂದೆ (1885ರಲ್ಲಿ) ಸ್ಥಾಪನೆಯಾದ ಕಾಂಗ್ರೆಸ್‌ ಪಕ್ಷ ಆರನೇ ಬಾರಿಗೆ ಚುನಾವಣೆ ಮೂಲಕ ಹೊಸ ಅಧ್ಯಕ್ಷರ ಆಯ್ಕೆಗೆ ಮುಂದಾಗಿದೆ.

ಗಾಂಧಿ ಕುಟುಂಬದವರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಿಂದ ದೂರ ಉಳಿದಿದ್ದಾರೆ. ಹೀಗಾಗಿ, ಕಣದಲ್ಲಿರುವ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇರಳದ ತಿರುವನಂತರಪುರ ಸಂಸದ ಶಶಿ ತರೂರ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಪಕ್ಷದ 9 ಸಾವಿರ ಪ್ರತಿನಿಧಿಗಳು ಮತದಾನದ ಅರ್ಹತೆ ಹೊಂದಿದ್ದು, ಖರ್ಗೆ ಮತ್ತು ತರೂರ್‌ ಅವರ ಭವಿಷ್ಯ ನಿರ್ಧರಿಸಲಿದ್ದಾರೆ.

ಈ ಚುನಾವಣೆಗೆ ನಾಳೆ (ಅಕ್ಟೋಬರ್‌ 17) ದಿನಾಂಕ ನಿಗದಿಯಾಗಿದೆ. ಎರಡು ದಿನಗಳ ಬಳಿಕ (ಬುಧವಾರ, ಅ. 19) ಫಲಿತಾಂಶ ಹೊರಬೀಳಲಿದೆ. ಇದರೊಂದಿಗೆ, ದೇಶದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ಗೆ 24 ವರ್ಷಗಳ ನಂತರ ಗಾಂಧಿ ಕುಟುಂಬದವರಲ್ಲದ ವ್ಯಕ್ತಿಯೊಬ್ಬರು 'ಸಾರಥಿ'ಯಾಗಿ ಆಯ್ಕೆಯಾಗಲಿದ್ದಾರೆ.

ಕೊನೇ ಕ್ಷಣದಲ್ಲಿ ಅಖಾಡಕ್ಕಿಳಿದ ಖರ್ಗೆ
ರಾಜಸ್ಥಾನ ಮುಖ್ಯಮಂತ್ರಿಯಾಗಿರುವ ಅಶೋಕ್‌ ಗೆಹಲೋತ್‌ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಆರಂಭದಲ್ಲಿ ಕೇಳಿ ಬಂದಿತ್ತು. ಅವರೂ ಸ್ಪರ್ಧೆಗೆ ಅಣಿಯಾಗಿದ್ದರು. ಆದರೆ, ಅವರ ಬಳಿಕ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಅಲ್ಲಿನ ಕಾಂಗ್ರೆಸ್‌ ನಾಯಕರ ನಡುವೆ ಬಿಕ್ಕಟ್ಟು ಸೃಷ್ಟಿಯಾಯಿತು. ಹೀಗಾಗಿ, ಹಿರಿಯ ನಾಯಕ ಖರ್ಗೆ ಅವರು ಕೊನೇ ಕ್ಷಣದಲ್ಲಿ ಅಖಾಡಕ್ಕಿಳಿಯಬೇಕಾಯಿತು. ಅವರಿಗೆ ಹಲವು ಹಿರಿಯ ನಾಯಕರ ಬೆಂಬಲವೂ ಇದೆ. ಇತ್ತ ತರೂರ್‌, ಪಕ್ಷದಲ್ಲಿ ಬದಲಾವಣೆ ತರಲು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಆರನೇ ಚುನಾವಣೆ
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ಅವರು ನಾಳೆ ನಡೆಯಲಿರುವ ಚುನಾವಣೆ ಕುರಿತು ಮಾತನಾಡಿದ್ದಾರೆ. 'ಪಕ್ಷದ 137 ವರ್ಷಗಳ ಇತಿಹಾಸದಲ್ಲಿ, ಅಧ್ಯಕ್ಷೀಯ ಹುದ್ದೆಗೆ ಆರನೇ ಬಾರಿಗೆ ಆಂತರಿಕ ಚುನಾವಣೆ ನಡೆಸಲಾಗುತ್ತಿದೆ. 1939, 1950, 1977, 1997 ಹಾಗೂ 2000ನೇ ಇಸವಿಯಲ್ಲಿ ಚುನಾವಣೆಗಳು ನಡೆದಿದ್ದವು' ಎಂದು ತಿಳಿಸಿದ್ದಾರೆ.

ಪಕ್ಷದಲ್ಲಿ ಒಗ್ಗಟ್ಟನ್ನು ಮತ್ತಷ್ಟು ಹೆಚ್ಚಿಸುವ ಕಾಂಗ್ರೆಸ್‌ನ ಈ ಮಾದರಿಯಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದಿರುವ ರಮೇಶ್‌, 'ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ಆ ನಂಬಿಕೆ ಮತ್ತಷ್ಟು ಬಲವಾಗಿದೆ. ಅದಕ್ಕೆ ಕಾರಣಗಳು ಸ್ಪಷ್ಟವಾಗಿಯೇ ಇವೆ' ಎಂದು ವಿವರಿಸಿದ್ದಾರೆ.

ಕಾಂಗ್ರೆಸ್‌ನಲ್ಲಿರುವ ಆಂತರಿಕ ಪ್ರಜಾಪ್ರಭುತ್ವಕ್ಕೆ ಪರ್ಯಾಯವಾದ ವ್ಯವಸ್ಥೆ ಬೇರಾವ ಪಕ್ಷದಲ್ಲಿಯೂ ಇಲ್ಲ ಎಂದು ಹೇಳಿಕೊಂಡಿರುವ ಅವರು, ಕೇಂದ್ರ ಚುನಾವಣಾ ಪ್ರಾಧಿಕಾರವನ್ನು ಹೊಂದಿರುವ ಏಕೈಕ ಪಕ್ಷ ಎಂದೂ ತಿಳಿಸಿದ್ದಾರೆ.

ಮೊದಲ ಚುನಾವಣೆಯಲ್ಲಿ ನೇತಾಜಿಗೆ ಗೆಲುವು
1939ರಲ್ಲಿ ನಡೆದಿದ್ದ ಪಕ್ಷದ ಮೊದಲ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮಹಾತ್ಮಾ ಗಾಂಧೀಜಿ ಅವರ ಬೆಂಬಲದೊಂದಿಗೆ ಕಣಕ್ಕೆ ಇಳಿದಿದ್ದ ಪಟ್ಟಾಭಿ ಸೀತಾರಾಮಯ್ಯ ವಿರುದ್ಧ ಜಯ ಸಾಧಿಸಿದ್ದರು.

ನೆಹರೂ ಎದುರು ಸರ್ದಾರ್‌ಗೆ ಮೇಲುಗೈ
ಸ್ವಾತಂತ್ರ್ಯಾನಂತರ (1950ರಲ್ಲಿ) ನಡೆದ ಮೊದಲ ಚುನಾವಣೆಯಲ್ಲಿ ಪುರುಷೋತ್ತಮ ದಾಸ್‌ ಟಂಡನ್‌ ಹಾಗೂ ಆಚಾರ್ಯ ಕೃಪಲಾನಿ ಮುಖಾಮುಖಿಯಾಗಿದ್ದರು. ಸರ್ದಾರ್‌ ವಲ್ಲಭಭಾಯಿ ಆಪ್ತರಾಗಿದ್ದ ಟಂಡನ್‌, ಪ್ರಧಾನಿ ಜವಾಹರಲಾಲ್ ನೆಹರೂ ಬೆಂಬಲಿತ ಅಭ್ಯರ್ಥಿ ಆಚಾರ್ಯ ಎದುರು ಅಚ್ಚರಿಯ ಜಯ ಸಾಧಿಸಿದ್ದರು.

ಮೂರನೇ ಚುನಾವಣೆ
1977ರಲ್ಲಿ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ದೇವಕಾಂತ್‌ ಬರೂಚ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ನಡೆದ ಚುನಾವಣೆಯಲ್ಲಿ ಕೆ.ಬ್ರಹ್ಮಾನಂದ ರೆಡ್ಡಿ ಅವರು ಸಿದ್ಧಾರ್ಥ ಶಂಕರ್‌ ರೇ ಹಾಗೂ ಕರಣ್‌ ಸಿಂಗ್‌ ಅವರನ್ನು ಮಣಿಸಿದ್ದರು.

1997ರಲ್ಲಿ ತ್ರಿಕೋನ ಸ್ಪರ್ಧೆ
1977ರಲ್ಲಿ ಚುನಾವಣೆ ಆದ ಮೇಲೆ ಪಕ್ಷದ ಅತ್ಯುನ್ನತ ಸ್ಥಾನಕ್ಕೆ ಮತ್ತೊಮ್ಮೆ ಚುನಾವಣೆ ನಡೆದದ್ದು 20 ವರ್ಷಗಳ ಬಳಿಕ. 1997ರಲ್ಲಿ ನಡೆದ ಆ ಚುನಾವಣೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಯಿತು. ಸದ್ಯ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮುಖ್ಯಸ್ಥರಾಗಿರುವ ಶರದ್‌ ಪವಾರ್‌ ಹಾಗೂ ರಾಜೇಶ್‌ ಪೈಲಟ್‌ ಅವರನ್ನು ಸೋಲಿಸಿ ಸೀತಾರಾಂ ಕೇಸ್ರಿ ಅಧ್ಯಕ್ಷರಾಗಿದ್ದರು.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಎಲ್ಲ ರಾಜ್ಯಗಳ ಕಾಂಗ್ರೆಸ್ ಘಟಕಗಳೂ ಸೀತಾರಾಂಗೆ ಬೆಂಬಲ ನೀಡಿದ್ದವು. ಆ ಚುನಾವಣೆಯಲ್ಲಿ ಪವಾರ್‌ 882 ಮತ್ತು ಪೈಲಟ್‌ 354 ಮತ ಪಡೆದರೆ, ಸೀತಾರಾಂ 6,224 ಮತಗಳನ್ನು ಗಳಿಸಿ ಪ್ರಚಂಡ ಜಯ ಸಾಧಿಸಿದ್ದರು.

2000ರಲ್ಲಿ ಕಣಕ್ಕಿಳಿದ ಸೋನಿಯಾ
2000ರಲ್ಲಿ ನಡೆದ ಸೋನಿಯಾ ಗಾಂಧಿ ಅವರು ಅಖಾಡಕ್ಕಿಳಿದಿದ್ದರು. ಆ ಮೂಲಕ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ ಗಾಂಧಿ ಕುಟುಂಬದ ಮೊದಲಿಗರು ಎನಿಸಿಕೊಂಡರು. ಈ ಚುನಾವಣೆಯಲ್ಲಿ ಸೋನಿಯಾ ಎದುರಾಳಿಯಾಗಿದ್ದ ಜೀತೇಂದ್ರ ಪ್ರಸಾದ್‌ ಕೇವಲ 94 ಮತ ಗಳಿಸಿದ್ದರು. ಸೋನಿಯಾಗೆ 7,400 ಪ್ರತಿನಿಧಿಗಳ ಬೆಂಬಲ ದೊರಕಿತ್ತು.

2022ರ ಚುನಾವಣೆ ಬಳಿಕ ಸೋನಿಯಾ ಅಧ್ಯಕ್ಷಗಿರಿ ಅಂತ್ಯ
ಸ್ವಾತಂತ್ರ್ಯಾ ನಂತರ 1948ರಲ್ಲಿ ಸೀತಾರಾಮಯ್ಯ ಅವರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಿದ್ದರು. ಅದಾದ ನಂತರ ಈವರೆಗೆ 17 ಮಂದಿ ಅಧ್ಯಕ್ಷರಾಗಿದ್ದಾರೆ. ಈ ಪೈಕಿ ಗಾಂಧಿ ಕುಟುಂಬದವರೇ 40 ವರ್ಷಗಳ ಕಾಲ ಪಕ್ಷದ ಉನ್ನತ ಸ್ಥಾನ ಅಲಂಕರಿಸಿದ್ದಾರೆ.

ಮಾಜಿ ಪ್ರಧಾನಿಗಳಾದ ನೆಹರೂ ಅವರು 1951ರಿಂದ 55ರ ವರೆಗೆ, ಇಂದಿರಾ ಗಾಂಧಿ ಅವರು 1959ರಲ್ಲಿ ಹಾಗೂ 1978ರಿಂದ 1984ರ ವರೆಗೆ ಅಧ್ಯಕ್ಷರಾಗಿದ್ದರು. ಅದಾದ ಬಳಿಕ ಇಂದಿರಾ ಪುತ್ರ ಹಾಗೂ ಮಾಜಿ ಪ್ರಧಾನಿಯೂ ಆದ ರಾಜೀವ್‌ ಗಾಂಧಿ 1985ರಿಂದ 91ರ ವರೆಗೆ ಈ ಸ್ಥಾನದಲ್ಲಿ ಮುಂದುವರಿದಿದ್ದರು.

2017–2019ರ ಅವಧಿಯಲ್ಲಿ ರಾಹುಲ್‌ ಗಾಂಧಿ ಪಕ್ಷದ ಉನ್ನತ ಸ್ಥಾನದಲ್ಲಿದ್ದರು. ಆ ಎರಡು ವರ್ಷಗಳನ್ನು ಹೊರತುಪಡಿಸಿ 1998ರಿಂದಲೂ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ, ದೀರ್ಘ ಅವಧಿಗೆ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.

2017ರಲ್ಲಿ ಪಕ್ಷದ ನೇತೃತ್ವ ವಹಿಸಿದ್ದ ರಾಹುಲ್‌, 2019ರ ಲೋಕಸಭೆ ಚುನಾವಣೆ ಸೋಲಿನ ನಂತರ ಕೆಳಗಿಳಿದಿದ್ದರು. ಹೀಗಾಗಿ ಸೋನಿಯಾ ಅವರೇ ಮತ್ತೊಮ್ಮೆ ಪಕ್ಷದ ಸಾರಥಿಯಾಗಿದ್ದಾರೆ. ಇದೀಗ ನಡೆಯಲಿರುವ ಚುನಾವಣೆಯು ಸೋನಿಯಾ ಅವರ ಅಧ್ಯಕ್ಷೀಯ ಅವಧಿಯನ್ನು ಕೊನೆಗೊಳಿಸಲಿದೆ. ಹೀಗಾಗಿಯೇ ಇನ್ನಷ್ಟು ಮಹತ್ವವನ್ನೂ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT