ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಭೂಸುಧಾರಣೆ ಕಾಯ್ದೆ ಕುರಿತು ಕಲಾಪದಲ್ಲಿ ನಡೆದಿದ್ದ ಚರ್ಚೆಗಳ ಟಿಪ್ಪಣಿ

Last Updated 19 ಜೂನ್ 2020, 4:54 IST
ಅಕ್ಷರ ಗಾತ್ರ
ADVERTISEMENT
""
""
""

ಭೂಸುಧಾರಣೆ ಕಾಯ್ದೆಗೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ ಹಲವು ಸಲ ಚರ್ಚೆಗಳು ನಡೆದಿವೆ. ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದ ಕೆಲವು ಟಿಪ್ಪಣಿಗಳು ಇಲ್ಲಿವೆ...

***

ಟಿ. ಮಾದಯ್ಯ ಗೌಡ
(ವಿಧಾನಸಭೆಯಲ್ಲಿ 1951ರ ಅಕ್ಟೋಬರ್‌ 26ರಂದು ನಡೆದ ಭೂಸುಧಾರಣೆ ಮಸೂದೆ ಮೇಲಿನ ಚರ್ಚೆಯಲ್ಲಿ ಹಂಚಿಕೊಂಡ ಅಭಿಪ್ರಾಯ)

ನಮ್ಮ ದೇಶದಲ್ಲಿ ವ್ಯವಸಾಯಗಾರರಿಗೂ ಮತ್ತು ಜಮೀನ್ದಾರರಿಗೂ ಒಂದು ಒಳ್ಳೆಯ ಸಂಪರ್ಕವೇರ್ಪಟ್ಟು ಎರಡೂ ಪಕ್ಷಗಳಿಗೆ ಯಾವ ಘರ್ಷಣೆಗೂ ಅವಕಾಶವಿಲ್ಲದಿರುವ ರೀತಿಯಲ್ಲಿ ಇದನ್ನು (ಮಸೂದೆಯನ್ನು) ಮಾಡಲಾಗಿದೆ. ಇದೇ ರೀತಿಯಾಗಿ ನಮ್ಮ ದೇಶದಲ್ಲಿ ಬಹಳ ಹಿಂದಿನಿಂದ ವ್ಯವಸಾಯಗಾರನೂ ಮತ್ತು ಜಮೀನ್ದಾರನೂ ಯಾವ ಘರ್ಷಣೆಯೂ ಇಲ್ಲದಂತೆ ಹೊಂದಾಣಿಕೆಯಿಂದ ನಡೆದುಕೊಂಡು ಬಂದಿದ್ದಾರೆ.

ಆದರೆ, ಒಂದೆರಡು ಕಡೆ ಇತ್ತೀಚೆಗೆ ರೈತನಿಗೂ ಮತ್ತು ಜಮೀನ್ದಾರನಿಗೂ ಉಂಟಾಗಿರತಕ್ಕ ಘರ್ಷಣೆ, ಅವರಿಂದಲೇ ಅದು ಉದ್ಭವಿಸದೇ, ಬೇರೆ ಯಾರೋ ಅದನ್ನು ತಂದು ಹಾಕಿದಂತೆ ನನಗೆ ಭಾಸವಾಗುತ್ತಿದೆ.

ಈ ಸಂಬಂಧವಾಗಿ ಈ ಮಾನ್ಯ ಸಭೆಯಲ್ಲಿರತಕ್ಕ ನಮ್ಮ ಸಮಾಜವಾದಿಗಳೊಬ್ಬರು ಇದನ್ನೇ ಒಂದು ದೊಡ್ಡದಾಗಿ ಮಾಡಿಕೊಂಡು ಈ ಮಸೂದೆಯು ಸರಿಯಾಗಿಲ್ಲ. ಇದನ್ನು ಬದಲಾಯಿಸಲೇಬೇಕು ಎಂದು ಮಾತನಾಡಿದ್ದಾರೆ.

**

ಶಾಂತವೇರಿ ಗೋಪಾಲಗೌಡ
(ವಿಧಾನಸಭೆಯಲ್ಲಿ 1954ರ ಏಪ್ರಿಲ್‌ 14ರಂದು ಚರ್ಚೆಯಲ್ಲಿ ಪಾಲ್ಗೊಂಡು ಆಡಿದ ಮಾತುಗಳು)

ನನ್ನ ಅಭಿಪ್ರಾಯದಲ್ಲಿಭೂಮಿಯು ಆಸ್ತಿಯ ಪಟ್ಟಿಯಲ್ಲಿ ಸೇರಿರುವುದು ತಪ್ಪು. ಭೂಮಿಯನ್ನು ಆಸ್ತಿ ಪಟ್ಟಿಯಿಂದ ಬಂಧಮುಕ್ತ ಮಾಡಬೇಕು. ಅದು ಉತ್ಪತ್ತಿಯ ಸಾಧನವಾಗಿರುವುದರಿಂದ ಯಾರು ಭೂಮಿಯನ್ನು ಉಳುಮೆ ಮಾಡುತ್ತಾರೋ ಯಾರು ಭೂಮಿಯ ಮೇಲೆ ಕೃಷಿಮಾಡಿ, ಕೆಲಸ ಮಾಡಿ ಅದರಿಂದ ಉತ್ಪನ್ನ ಮಾಡುತ್ತಾರೋ ಆ ಉತ್ಪನ್ನ ಅವರ ಸ್ವತ್ತಾಗಬೇಕು.

ಭೂಮಿಯು ಮಾರತಕ್ಕ ಕೊಳ್ಳತಕ್ಕ ವಸ್ತು ಆಗಬಾರದು. ಮನುಷ್ಯನ ಅಸ್ತಿತ್ವಕ್ಕೆ ಅದು ಬಲಿಯಾಗಬಾರದು ಎಂಬ ಒಂದು ನೀತಿಯನ್ನು ನಾವು ಇಟ್ಟುಕೊಳ್ಳುವುದು ಬಹಳ ಉಚಿತ ಎಂದು ಕಾಣುತ್ತೆ.

ನಮ್ಮ ದೇಶದಲ್ಲಿ ಈ ಭೂ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ಇದುವರೆಗೆ ನಾವು ಕಂಡಹಾಗೆ ಮೂರು ಮಾರ್ಗಗಳನ್ನು ನೋಡಿದ್ದೇವೆ.

ಒಂದು ಕಮ್ಯೂನಿಸ್ಟರ ತೆಲಂಗಾಣ ಮಾರ್ಗ. ಎರಡು ಕಾನೂನು ಮಾಡಿ ಭೂಮಿಯನ್ನು ಸಮಾನವಾಗಿ ಹಂಚಿಕೆ ಮಾಡತಕ್ಕ ಮಾರ್ಗ. ಮೂರನೆಯದು ಇತ್ತೀಚೆಗೆ ವಿನೋಬಾ ಭಾವೆ ಯವರು ಆಚರಣೆಗೆ ತಂದಿರತಕ್ಕ, ಭೂಮಿಯನ್ನು ಇದ್ದವರಿಂದ ದಾನವಾಗಿ ತೆಗೆದುಕೊಂಡು ಇಲ್ಲದವರಿಗೆ ಹಂಚಿಕೆ ಮಾಡತಕ್ಕ ಮಾರ್ಗ.

ಆದ್ದರಿಂದ ಮೈಸೂರು ಸಂಸ್ಥಾನದಲ್ಲಿ ಒಂದು ಪ್ರಗತಿಯನ್ನು ಸಾಧಿಸಬೇಕಾದರೆ ಬರೀ ಟೆನೆನ್ಸಿ ಕಾನೂನು ಅಥವಾ ರದ್ದಾಯಿತಿ ಮಸೂದೆ ಮಾಡಿ ನಾವು ಸ್ವಸ್ಥ ಇರುವುದಕ್ಕೆ ಸಾಧ್ಯವಾಗುವುದಿಲ್ಲ; ಅಥವಾ ಅಷ್ಟಕ್ಕೆ ಬಿಟ್ಟರೆ, ನಮ್ಮ ರೈತರ ಅಭಿವೃದ್ಧಿ ಆಯಿತು ಅಥವಾ ಭೂಮಿಯ ಸಮಸ್ಯೆ ಪರಿಹಾರವಾಯಿತು ಎಂದು ತಿಳಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಮ್ಮ ಸಂಸ್ಥಾನದಲ್ಲಿ ಯಾರಿಗೇ ಆಗಲಿ, ಅವರ ಕುಟುಂಬಕ್ಕೆ ಅನುಸಾರವಾಗಿ ಎಷ್ಟು ಭೂಮಿಯನ್ನು ಸ್ವಂತ ಶ್ರಮದಿಂದ ಉಳುಮೆ ಮಾಡಬಹುದೋ ಅಷ್ಟು ಭೂಮಿಗಿಂತ ಹೆಚ್ಚಿಗೆ ಭೂಮಿಯನ್ನು ಯಾರೂ ಇಟ್ಟುಕೊಳ್ಳತಕ್ಕದ್ದಲ್ಲ. ಅದೆಲ್ಲಾ ಸರ್ಕಾರಕ್ಕೆ ಸೇರಬೇಕು.

ನಮ್ಮ ಸಂಸ್ಥಾನದಲ್ಲಿ ಈ ಭೂ ಸುಧಾರಣೆ ಸಮಸ್ಯೆ ಈಗ ಎರಡನೆಯ ಬಾರಿ ಮುಂದೆ ಬಂದಿದೆ. ಈ ಸಂದರ್ಭದಲ್ಲಿ ಒಂದು ಮಾತನ್ನು ಹೇಳಿದರೆ ಸಾಕಾಗಿದೆ. ಇತರ ಪ್ರಾಂತಗಳಾದ ಮದರಾಸು, ಬೊಂಬಾಯಿ ಇತ್ಯಾದಿ ಭಾಗಗಳಲ್ಲಿ ಜಾರಿಯಲ್ಲಿರುವ ಕಾನೂನನ್ನು ಹೋಲಿಸಿದರೆ, ಇದು ಕಾನೂನೇ ಅಲ್ಲ. ಇಂಥ ಒಂದು ಕಾನೂನು ಮಾಡುವುದರಿಂದ ರೈತರ ಯಾವ ಹಿತರಕ್ಷಣೆಯನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ.

ಹಳೆಯ ಪದ್ಧತಿಗಳು ನಾಮಾವಶೇಷವಾಗಿ ಹೋಗದ ಹೊರತು ಅಂಥ ಹೊಸರಾಜ್ಯ ನಿರ್ಮಾಣ ಅಸಾಧ್ಯ. ಹಿಂದಿನ ಎಲ್ಲಾ ಹಳೆಯ ಪದ್ಧತಿಗಳು ಅಳಿಯಬೇಕು. ಈ ಕಾಂಗ್ರೆಸ್‌ ಸರ್ಕಾರದ ಗಮನವೆಲ್ಲ ಆ ಪಟ್ಟ ಭದ್ರತೆಯತ್ತ ಇದೆ.

**

ಬಿ.ವಿ.ಕಕ್ಕಿಲಾಯ
(ಭೂಸುಧಾರಣೆ ಕಾಯ್ದೆಗೆ ರಾಷ್ಟ್ರಪತಿ ಅಂಗೀಕಾರ ದೊರೆತ ನಂತರ ರಾಜ್ಯಪಾಲರ ಭಾಷಣದಲ್ಲಿ ವಿಷಯ ಪ್ರಸ್ತಾಪವಾಗಿತ್ತು. ವಿಧಾನಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯಲ್ಲಿ 1974ರ ಫೆಬ್ರುವರಿ 28ರಂದು ಹಂಚಿಕೊಂಡ ಅಭಿಪ್ರಾಯ)

ಭೂಸುಧಾರಣೆ ಬಗ್ಗೆ ಒಂದೆರಡು ಮಾತು. ಭೂಸುಧಾರಣಾ ಶಾಸನಕ್ಕೆ ರಾಷ್ಟ್ರಪತಿಯವರ ಅಂಗೀಕಾರ ದೊರೆತಿದೆ ಎಂದು ಹೇಳಿದ್ದಾರೆ. ಇದರಲ್ಲಿ ನಾನು ಕೇಳಬೇಕಾಗಿರುವ ಒಂದು ವಿಚಾರವಿದೆ. ಏನೆಂದರೆ, 1972ರ ಡಿಸೆಂಬರ್‌ ಅಂತ್ಯದೊಳಗಾಗಿ ಭೂ ಸುಧಾರಣಾ ಶಾಸನವನ್ನು ರಾಷ್ಟ್ರದಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಜಾರಿಗೆ ತರುತ್ತೇವೆನ್ನುವ ಆಶ್ವಾಸನೆಯನ್ನು ಕೊಟ್ಟು ಅಧಿಕಾರಕ್ಕೆ ಬಂದ ಸರ್ಕಾರ ಆ ರೀತಿ ಮಾಡಲಿಲ್ಲ.

ಆನಂತರ 1973ನೇ ಇಸವಿ ಅಕ್ಟೋಬರ್‌ ಎರಡನೆಯ ತಾರೀಖು ಗಾಂಧಿ ಜಯಂತಿಯ ದಿವಸ ಜಾರಿಗೆ ತರುತ್ತೇವೆಂದು ಹೇಳಿದರು. ಈಗ 1974ರ ಮಾರ್ಚ್‌ ಒಂದನೇ ತಾರೀಖಿನ ಗೆಜೆಟ್ಟಿನಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ. ಈ ರೀತಿ ವಿಳಂಬವಾಗುವುದಕ್ಕೆ ಕಾರಣಗಳೇನು ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಕೊಡಬೇಕು.

ಇದು ಬಹಳ ಮುಖ್ಯವಾದ ಶಾಸನ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಪ್ರಾಮಾಣಿಕವಾದ ರೀತಿಯಲ್ಲಿ ಜಾರಿಗೆ ತರುವುದಾದರೆ ಖಂಡಿತವಾಗಿಯೂ ಹಳ್ಳಿಗಳಲ್ಲಿ ಕ್ರಾಂತಿಯಾಗಿ ಅದಕ್ಕೆ ಒಂದು ಆರಂಭದ ಹೆಜ್ಜೆಯನ್ನು ಇಟ್ಟಹಾಗಾಗುತ್ತದೆ. ಇಂಥ ಶಾಸನಕ್ಕೆ ಕೇಂದ್ರ ಸರ್ಕಾರದವರು ಏಕೆ ತಡೆ ಹಾಕಿದರು? ರಾಜ್ಯ ಸರ್ಕಾರದವರು ಇದನ್ನು ಸಕಾಲದಲ್ಲಿ ಜಾರಿಗೆ ತರುವುದಕ್ಕೆ ಏಕೆ ಪ್ರಯತ್ನ ಮಾಡಲಿಲ್ಲ ಎನ್ನುವುದಕ್ಕೆ ಉತ್ತರ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT