ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ-ಸುದ್ದಿ | ಸರ್ವರಿಗೂ ಎಲ್‌ಪಿಜಿ ಸಂಪರ್ಕ: ತಾಳೆಯಾಗದ ಸರ್ಕಾರದ ಲೆಕ್ಕ

Last Updated 13 ಜನವರಿ 2022, 19:31 IST
ಅಕ್ಷರ ಗಾತ್ರ

ದೇಶದಲ್ಲಿ ಎಲ್‌ಪಿಜಿ ಸಂಪರ್ಕ ಇರುವ ಕುಟುಂಬಗಳ ಪ್ರಮಾಣ ಮತ್ತು ಎಲ್‌ಪಿಜಿ ಸಂಪರ್ಕ ಇಲ್ಲದೇ ಇರುವ ಜನರ ಪ್ರಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಬೇರೆ ಬೇರೆ ವರದಿಗಳಲ್ಲಿ ನೀಡಲಾಗಿರುವ ದತ್ತಾಂಶದಲ್ಲಿ ಭಾರಿ ಅಂತರವಿದೆ. ದೇಶದ ಶೇ 99.50ರಷ್ಟು ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ ಎಂದು ಇಂಧನ ಸಚಿವಾಲಯವು ರಾಜ್ಯಸಭೆಗೆ ಮಾಹಿತಿ ನೀಡಿತ್ತು. ಆದರೆ ಈಚೆಗೆ ಬಿಡುಗಡೆಯಾಗಿರುವ ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕ ವರದಿಯಲ್ಲಿ ದೇಶದ ಶೇ 40ಕ್ಕೂ ಹೆಚ್ಚು ಜನರಿಗೆ ಎಲ್‌ಪಿಜಿ ಸಂಪರ್ಕವೇ ಇಲ್ಲ ಎಂದು ಹೇಳಲಾಗಿದೆ.

ದೇಶದ ಎಲ್ಲಾ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕವನ್ನು ಒದಗಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರವು 2016ರಲ್ಲಿ ಉಜ್ವಲ ಯೋಜನೆಯನ್ನು ಆರಂಭಿಸಿತ್ತು. ಮೊದಲ ಹಂತದ ಯೋಜನೆಯಲ್ಲಿ 8.05 ಕೋಟಿ ಹೊಸ ಎಲ್‌ಪಿಜಿ ಸಂಪರ್ಕವನ್ನು ಒದಗಿಸಲಾಗಿದೆ. ಎರಡನೇ ಹಂತವೂ ಸೇರಿ ಹೊಸದಾಗಿ 9 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕವನ್ನು ನೀಡಲಾಗಿದೆ. ಇದರಿಂದ ದೇಶದ ಬಹುತೇಕ ಎಲ್ಲಾ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಈ ಕುಟುಂಬಗಳು ಎಲ್‌ಪಿಜಿ ಬಳಸುತ್ತಿವೆ ಎಂದು ಸರ್ಕಾರವು ಹೇಳಿದೆ.

‘2021ರ ಜನವರಿ 1ರ ವೇಳೆಗೆ ದೇಶದ 28.90 ಕೋಟಿ ಕುಟುಂಬಗಳು ಎಲ್‌ಪಿಜಿ ಸಂಪರ್ಕ ಪಡೆದಿವೆ. ಅಲ್ಲದೆ, ಎಲ್‌ಪಿಜಿ ಸಂಪರ್ಕ ಹೊಂದಿರುವ ಕುಟುಂಬಗಳ ಪ್ರಮಾಣ ಶೇ 99.50ರಷ್ಟು’ ಎಂದು ಇಂಧನ ಸಚಿವಾಲಯವು 2021ರ ಫೆಬ್ರುವರಿ 3ರಂದು ರಾಜ್ಯಸಭೆಗೆ ಮಾಹಿತಿ ನೀಡಿತ್ತು.ಸರ್ಕಾರವು ರಾಜ್ಯಸಭೆಗೆ ನೀಡಿದ್ದ ವರದಿಯ ಅವಧಿಗೇ ಅನ್ವಯವಾಗುವ ಬಹು ಆಯಾಮದ ಬಡತನ ಸೂಚ್ಯಂಕ ವರದಿಯ ಪ್ರಕಾರ ದೇಶದ ಶೇ 41.40ರಷ್ಟು ಜನರು ಎಲ್‌ಪಿಜಿ ಸಂಪರ್ಕ ವಂಚಿತರು. ಈ ಎರಡೂ ವರದಿಗಳ ಮಾಹಿತಿಯಲ್ಲಿ ಸಾಕಷ್ಟು ಅಂತರವಿದೆ.

ಎರಡೂ ವರದಿಗಳಲ್ಲಿ ಒಂದು ಮೂಲಭೂತ ವ್ಯತ್ಯಾಸವಿದೆ. ರಾಜ್ಯಸಭೆಗೆ ನೀಡಲಾದ ವರದಿಯಲ್ಲಿ ಎಲ್‌ಪಿಜಿ ಸಂಪರ್ಕ ಹೊಂದಿರುವ ಕುಟುಂಬಗಳ ಪ್ರಮಾಣವನ್ನು (ಶೇ 99.50) ತೋರಿಸಲಾಗಿದೆ. ಆದರೆ ಬಹು ಆಯಾಮದ ಬಡತನ ಸೂಚ್ಯಂಕ ವರದಿಯಲ್ಲಿ ಎಲ್‌ಪಿಜಿ ಸಂಪರ್ಕ ವಂಚಿತ ಜನರ ಪ್ರಮಾಣವನ್ನು ತೋರಿಸಲಾಗಿದೆ.

2011ರ ಜನಗಣತಿ ಪ್ರಕಾರ ದೇಶದಲ್ಲಿ 24.50 ಕೋಟಿ ಕುಟುಂಬಗಳಿದ್ದವು. ಅವುಗಳ ಸಂಖ್ಯೆ ಈಗ ಸಹಜವಾಗಿ ಹೆಚ್ಚಳವಾಗಿರುತ್ತದೆ. 2021ರ ಜನಗಣತಿ ನಡೆಯದೇ ಇರುವ ಕಾರಣ, ದೇಶದಲ್ಲಿ ಈಗ ಎಷ್ಟು ಕುಟುಂಬಗಳಿವೆ ಎಂಬುದರ ಕರಾರುವಕ್ಕಾದ ಮಾಹಿತಿ ಇಲ್ಲ. ಆದರೆ ಸರ್ಕಾರವು ರಾಜ್ಯಸಭೆಗೆ ನೀಡುವ ಮಾಹಿತಿಯನ್ನು ಆಧರಿಸಿ ಅಂದಾಜಿಸಿದರೆ ದೇಶದಲ್ಲಿ ಈಗ 29.5 ಕೋಟಿ ಕುಟುಂಬಗಳಿರಬಹದು. ಇದರಲ್ಲಿ 28.90 ಕೋಟಿ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ನೀಡಿರುವುದಾದರೆ, ದೇಶದ ಶೇ 99.50ರಷ್ಟು ಜನರಿಗೆ ಎಲ್‌ಪಿಜಿ ಸಂಪರ್ಕ ಇರಬೇಕಿತ್ತು. ಆದರೆ ಸರ್ಕಾರದ್ದೇ ಇನ್ನೊಂದು ವರದಿಯ ಪ್ರಕಾರ ದೇಶದ ಶೇ 40ಕ್ಕೂ ಹೆಚ್ಚು ಜನರು ಎಲ್‌ಪಿಜಿ ವಂಚಿತರು.

ಕೆಲವು ರಾಜ್ಯಗಳಲ್ಲಿ ಎಲ್‌ಪಿಜಿ ಸಂಪರ್ಕ ಇರುವ ಕುಟುಂಬಗಳ ಪ್ರಮಾಣ ಮತ್ತು ಎಲ್‌ಪಿಜಿ ಸಂಪರ್ಕ ಹೊಂದಿರುವ ಜನರ ಪ್ರಮಾಣ ಬಹುತೇಕ ತಾಳೆಯಾಗುತ್ತವೆ. ಕೆಲವು ರಾಜ್ಯಗಳಲ್ಲಿ ಎರಡೂ ದತ್ತಾಂಶಗಳ ನಡುವೆ ಭಾರಿ ಅಂತರವಿದೆ. ಆದರೆದೇಶದ ಯಾವ ರಾಜ್ಯದಲ್ಲೂ ಎಲ್‌ಪಿಜಿ ಸಂಪರ್ಕ ಹೊಂದಿರುವವರ ಪ್ರಮಾಣ ಶೇ 99ರಷ್ಟನ್ನು ಮುಟ್ಟಿಲ್ಲ.

lದೇಶದ 13 ರಾಜ್ಯಗಳಲ್ಲಿ ಎಲ್‌ಪಿಜಿ ಸಂಪರ್ಕ ವಂಚಿತರ ಪ್ರಮಾಣ
ಶೇ 50ಕ್ಕಿಂತಲೂ ಹೆಚ್ಚು ಇದೆ

lಹಿಂದಿ ಭಾಷಿಕ ರಾಜ್ಯಗಳು, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲೇ ಎಲ್‌ಪಿಜಿ ವಂಚಿತರು ಅತ್ಯಧಿಕ ಪ್ರಮಾಣದಲ್ಲಿ ಇದ್ದಾರೆ

lದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಎಲ್‌ಪಿಜಿ ಸಂಪರ್ಕ ವಂಚಿತರ ಪ್ರಮಾಣ ಶೇ 30ನ್ನು ಮುಟ್ಟಿಲ್ಲ

lಗೋವಾ ಮತ್ತು ತೆಲಂಗಾಣದಲ್ಲಿ ಎಲ್‌ಪಿಜಿ ಸಂಪರ್ಕ ವಂಚಿತರ ಪ್ರಮಾಣ
ಶೇ 10ಕ್ಕಿಂತಲೂ ಕಡಿಮೆ ಇದೆ

lದೆಹಲಿಯಲ್ಲಿ ಎಲ್‌ಪಿಜಿ ಸಂಪರ್ಕ ವಂಚಿತರ ಪ್ರಮಾಣ ದೇಶದ ಎಲ್ಲೆಡೆಗಿಂತ ಕಡಿಮೆ ಇದೆ

ಕರ್ನಾಟಕ: 17 ಜಿಲ್ಲೆಗಳಲ್ಲಿಅರ್ಧದಷ್ಟೂ ತಲುಪಿಲ್ಲ

ದೇಶದ ಶೇ 99ರಷ್ಟು ಕುಟುಂಬಗಳಿಗೆ ಸ್ವಚ್ಛ ಇಂಧನ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಹೇಳಿಕೊಳ್ಳುತ್ತಿದೆಯಾದರೂ, ಕರ್ನಾಟಕದ ಮಟ್ಟಿಗೆ ವಾಸ್ತವ ಹಾಗಿಲ್ಲ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿ ಆಧರಿಸಿ ಸಿದ್ಧಪಡಿಸಲಾಗಿರುವ ‘ಬಹು ಆಯಾಮದ ಬಡತನ ಸೂಚ್ಯಂಕ ವರದಿ’ ಪ್ರಕಾರ, ಕರ್ನಾಟಕದ ಶೇ 21.9ರಷ್ಟು ಜನರು ಅಡುಗೆ ಅನಿಲ ಬಳಕೆಯಿಂದ ವಂಚಿತರಾಗಿದ್ದಾರೆ. ರಾಜ್ಯದ 17 ಜಿಲ್ಲೆಗಳ ಶೇ 50ಕ್ಕೂ ಹೆಚ್ಚು ಜನರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಸೌಲಭ್ಯ ವಂಚಿತ ಜನರ ಪ್ರಮಾಣ ಅತ್ಯಧಿಕವಾಗಿದೆ. ಜಿಲ್ಲೆಯ ಶೇ 79.11ರಷ್ಟು ಜನರಿಗೆ ಈ ಸವಲತ್ತು ಸಿಕ್ಕಿಲ್ಲ ಎಂದು ವರದಿಯ ದತ್ತಾಂಶಗಳು ಹೇಳುತ್ತವೆ. ವಿಜಯಪುರ, ಗದಗ ಹಾಗೂ ರಾಯಚೂರು ಜಿಲ್ಲೆಗಳ ಶೇ 70ಕ್ಕಿಂತಲೂ ಹೆಚ್ಚು ಜನರಿಗೆ ಈ ಸೌಲಭ್ಯ ದೊರೆತಿಲ್ಲ. ಬೆಂಗಳೂರು ನಗರದ ಶೇ 3.96 ಜನರು ಇನ್ನೂ ಈ ಸೌಲಭ್ಯಕ್ಕೆ ಒಳಪಡಬೇಕಿದೆ.

ಈ ದತ್ತಾಂಶಗಳು 2019ರ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ ಕುರಿತ ಸಿಎಜಿ ವರದಿಯ ದತ್ತಾಂಶಗಳಿಗೂ ಹೊಂದಿಕೆಯಾಗುವುದಿಲ್ಲ. ಸಿಎಜಿ ವರದಿ ಪ್ರಕಾರ, ರಾಜ್ಯದ 1.48 ಕೋಟಿ ಕುಟುಂಬಗಳಿದ್ದು, 1.54 ಕೋಟಿ ಸಕ್ರಿಯ ಎಲ್‌ಪಿಜಿ ಸಂಪರ್ಕಗಳಿವೆ. ಅಂದರೆ ಶೇ 103ರಷ್ಟು ಗುರಿ ಸಾಧನೆಯಾಗಿದೆ ಎಂದು ವರದಿ ತಿಳಿಸಿದೆ.

ಆಧಾರ: ಬಹು ಆಯಾಮದ ಬಡತನ ಸೂಚ್ಯಂಕ ವರದಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿ, ರಾಜ್ಯಸಭೆಯಲ್ಲಿ ಇಂಧನ ಸಚಿವಾಲಯ ನೀಡಿರುವ ಉತ್ತರ (ಪಿಐಬಿ ಪ್ರಕಟಣೆ ಸಂಖ್ಯೆ:1694710), ಉಜ್ವಲ ಯೋಜನೆಗೆ ಸಂಬಂಧಿಸಿದ ಸಿಎಜಿ ವರದಿ, ಜನಸಂಖ್ಯಾ ವರದಿ–2011

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT