ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಾ, ಬೋರ್‌ ಆಗ್ತಿದೆ: ಮನೆಯಲ್ಲಿ ಮಕ್ಕಳನ್ನು ಖುಷಿಯಾಗಿಡಲು ಇಲ್ಲಿದೆ ಕಿವಿಮಾತು

ತುಂಬಿದ ಗೃಹಗಳ ಮಕ್ಕಳ ಈ ನಿರಂತರ ಗೊಣಗಾಟ ತಪ್ಪಿಸಲು ಇಲ್ಲಿವೆ ಉಪಾಯಗಳು
Last Updated 20 ಮಾರ್ಚ್ 2020, 20:00 IST
ಅಕ್ಷರ ಗಾತ್ರ
ADVERTISEMENT
""
""
""

ಕೋವಿಡ್ ಕಾಟದಿಂದಾಗಿ ‘ಮನೆಯಿಂದಲೇ ಕೆಲಸ’ ಮಾಡುವ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗೆಯೇ ಸೋಂಕಿನ ಕಾರಣಕ್ಕೆ ಶಾಲೆಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ಮಕ್ಕಳು ಕೂಡ ಮನೆಯಲ್ಲಿದ್ದಾರೆ. ಹೀಗಾಗಿ ನಿಜವಾದ ಅರ್ಥದಲ್ಲಿ ಇಂದಿನ ಮನೆಗಳು ತುಂಬಿದ ಗೃಹಗಳಾಗಿವೆ. ಆದರೆ, ಕಚೇರಿ ಕೆಲಸಗಳನ್ನು ನಿರ್ವಹಿಸಲು ಮಕ್ಕಳು ಬಿಡುತ್ತಿಲ್ಲ ಎಂಬುದು ಬಹುತೇಕರ ಅಳಲು. ಅವರ ಕೈಗಳಲ್ಲಿ ಮೊಬೈಲ್ ಕೊಟ್ಟು ಸುಮ್ಮನಾಗುವವರೇ ಹೆಚ್ಚು. ಹಾಗೆಯೇ ‘ಬೋರ್‌ ಆಗ್ತಿದೆ’ ಎಂದು ಮಕ್ಕಳೂ ಗೊಣಗುತ್ತಿರುವುದು ಹೆಚ್ಚುತ್ತಿದೆ. ಹಾಗಾದರೆ ಅವರನ್ನು ಎಂಗೇಜ್‌ ಆಗಿ ಇಡುವುದು ಹೇಗೆ?

ಮಕ್ಕಳ ಕೈಗೆ ಗ್ಯಾಜೆಟ್‌ಗಳನ್ನು ನೀಡದೇ, ಅವರನ್ನು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸಲು ಪೋಷಕರಿಗೆ ಸಾಧ್ಯವಿದೆ. ಇಂಟರ್‌ನೆಟ್‌ನಲ್ಲಿ ಮಾಹಿತಿ ಪಡೆದು, ಮನೆಯಲ್ಲಿಯೇ ಮಕ್ಕಳನ್ನು ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಬಹುದು. ಪೋಷಕರು ಹಾಗೂ ಮಕ್ಕಳ ನಡುವೆ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳಲು, ಕೌಟುಂಬಿಕ ಮೌಲ್ಯಗಳನ್ನು ಮಕ್ಕಳಿಗೆ ಹೇಳಿಕೊಡಲು ಇದು ಸಕಾಲ.

ಮಕ್ಕಳ ತಜ್ಞರು ನೀಡುವ ಕೆಲವು ಉಪಾಯಗಳು ಇಲ್ಲಿವೆ ನೋಡಿ

–ಮಾಹಿತಿಯನ್ನು ಹೆಕ್ಕಲು ಇಂಟರ್ನೆಟ್‌ ಬಳಸಿಕೊಂಡು, ಮಕ್ಕಳಲ್ಲಿ ಸೃಜನಾತ್ಮಕ ಮನೋಭಾವ ರೂಢಿಸಿ

–ಒಣಗಿದ ಎಲೆ ಹಾಗೂ ಕಟ್ಟಿಗೆ ಬಳಸಿ ಪ್ರಾಣಿ, ಪಕ್ಷಿಗಳ ಆಕೃತಿಗಳನ್ನು ತಯಾರಿಸುವ ಕೆಲಸ ನೀಡಿ

–ಕಾಗದದಲ್ಲಿ ದೋಣಿ, ಕಪ್ಪೆ, ವಿಮಾನ ಮಾಡುವ ವಿಧಾನ ಹೇಳಿಕೊಟ್ಟರೆ ಮಕ್ಕಳಿಗೆ ಖುಷಿ. ಒಮ್ಮೆ ಪ್ರಯತ್ನಿಸಿ ನೋಡಿ

–ಕಸದಿಂದ ರಸ ಮಾಡಲು ಉತ್ತೇಜಿಸಿ. ಉದಾಹರಣೆಗೆ, ಹಳೆ ಸೀರೆ ಅಥವಾ ಬೆಟ್‌ಶೀಟ್‌ ಬಳಸಿ ಮ್ಯಾಟ್‌ಗಳನ್ನು ತಯಾರಿಸಲು ಹೇಳಿಕೊಡಿ

–ಅಡುಗೆಗೆ ಸಹಕರಿಸಲು ಮಕ್ಕಳನ್ನು ಕರೆಯಿರಿ. ಸಿಪ್ಪೆ ಸುಲಿಯುವ, ತಕರಾರಿ ತೊಳೆಯುವ ಚಿಕ್ಕಪುಟ್ಟ ಕೆಲಸಗಳನ್ನು ಕೊಡಿ. ತರಕಾರಿ, ಧಾನ್ಯ, ಮಸಾಲೆ ಪದಾರ್ಥಗಳ ಪರಿಚಯವನ್ನು ಅವರಿಗೆ ಮಾಡಿಕೊಡಿ

–ಮಕ್ಕಳಿಗೆ ನೀರೆಂದರೆ ಇಷ್ಟ. ಬಟ್ಟೆ ತೊಳೆಯುವುದು, ಒಣಗಿಹಾಕುವುದು ಇಂತಹ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಳ್ಳಿ. ಸ್ವಚ್ಛತೆಯ ಮಹತ್ವ ಕಲಿಸಿ

–ಚಿತ್ರ ಬರೆಯಲು ಕಲಿಸಿ. ದಿನಕ್ಕೊಂದು ಪ್ರಾಣಿಯ ಚಿತ್ರಕ್ಕೆ ಬಣ್ಣ ತುಂಬಲು ಪ್ರೇರೇಪಿಸಿ (ಪ್ರಾಣಿಗಳ ಪರಿಚಯವಾಗುವ ಜತೆಗೆ ಚಿತ್ರಕಲೆಯೂ ಸಿದ್ಧಿಸುತ್ತದೆ)

–ತೆಂಗಿನ ಚಿಪ್ಪಿನಲ್ಲಿ ಮಣ್ಣು ತುಂಬಿಸಿ ಅದರಲ್ಲಿ ಕೊತ್ತಂಬರಿ, ಮೆಂತ್ಯೆಯಂತಹ ಬೀಜಗಳನ್ನು ನೆಡಿ. ನೀರು ಚಿಮುಕಿಸಲು ಮಕ್ಕಳಿಗೆ ಹೇಳಿ. ಮೊಳಕೆಯೊಡೆಯುವ ತನಕ ಅವರ ಕುತೂಹಲವನ್ನು ನೋಡುತ್ತಾ ಇರಿ

–ಮರೆತೇ ಹೋಗಿರುವ ಹಾವು-ಏಣಿ, ಪಂತೆಮಣಿ/ಚೆನ್ನೆಮಣೆ, ಮರಳಿನ ದಿಬ್ಬ ಕಟ್ಟುವುದು, ಲಗೋರಿ, ಗೋಲಿ, ಬುಗುರಿ, ಚಿನ್ನಿದಾಂಡು ಮೊದಲಾದ ಸ್ಥಳೀಯ ಆಟಗಳತ್ತ ಮಕ್ಕಳನ್ನು ಪ್ರೇರೇಪಿಸಿ.ಚೆಸ್‌, ಕೇರಂ ಹೇಳಿಕೊಡಿ

–ನಿತ್ಯ ಬೆಳಿಗ್ಗೆ ಹಾಗೂ ಸಂಜೆ ವಿವಿಧ ವಿನ್ಯಾಸದ ರಂಗೋಲಿ ಬಿಡಿಸಲು ಹೇಳಿ (ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸುತ್ತದೆ)

–ಹಾಡುಗಾರಿಕೆಯು ಶ್ವಾಸಕೋಶಗಳ ಶಕ್ತಿ ವೃದ್ಧಿಸುತ್ತದೆ. ಸಂಗೀತ ಕಲೆಯತ್ತ ಮಕ್ಕಳು ಗಮನಹರಿಸುವಂತೆ ಮಾಡಿ

–ಮಕ್ಕಳೊಂದಿಗೆ ಸಾಮೂಹಿಕವಾಗಿ ಪ್ರಾಣಾಯಾಮ, ಯೋಗಾಸನಗಳಲ್ಲಿ ತೊಡಗಿಸಿಕೊಳ್ಳಿ

ಬೇಸಿಗೆ ಶಿಬಿರ ಇಲ್ಲದಿದ್ದರೆ ಏನಂತೆ?

ಮಾರ್ಚ್‌ ಅಂತ್ಯದಿಂದಲೇ ಶುರುವಾಗುತ್ತಿದ್ದ ಬೇಸಿಗೆ ಶಿಬಿರಗಳ ಸದ್ದು ಈ ಸಲ ಇಲ್ಲವೇ ಇಲ್ಲ. ಹಳ್ಳಿಯ ಮಕ್ಕಳು ಸ್ವಚ್ಛಂದವಾಗಿ ಓಡಾಡುತ್ತಾರೆ. ಆದರೆ, ನಗರದ ಮಕ್ಕಳು ಈಗ ಮನೆಯಿಂದ ಹೊರಹೋಗದಂತಹ ಸ್ಥಿತಿ. ಈ ಸಲ ಬೇಸಿಗೆ ಶಿಬಿರಗಳು ಇಲ್ಲದಿದ್ದರೆ ಏನಂತೆ? ಶಿಬಿರದ ಕೆಲವು ಚಟುವಟಿಕೆಗಳನ್ನು ಮನೆಯಲ್ಲೇ ಮಾಡಿಸಲು ಸಾಧ್ಯವಿದೆ.

* ಮನೆಯನ್ನೇ ಶಾಲೆಯಾಗಿಸಲು ಹೋದರೆ ಮಕ್ಕಳಿಗೆ ರುಚಿಸದು. ಅವರ ಮೇಲೆ ಮಾನಸಿಕ ಒತ್ತಡ ಹೇರಿದಂತಾಗಬಹುದು. ಆದ್ದರಿಂದ ಕಲಿಕೆಯ ವಿಧಾನವನ್ನು ಬದಲಿಸಿ

* ಶಾಲಾ ಪಾಠಗಳಲ್ಲಿ ಬರುವ ಸನ್ನಿವೇಶಗಳನ್ನು ಮಕ್ಕಳಿಗೆ ಅಭಿನಯಿಸಿ ತೋರಿಸಲು ಉತ್ತೇಜಿಸಿ

* ‘ಕಥೆ ಕೇಳೋಣ ಬನ್ನಿ’ ಎಂದು ಮಕ್ಕಳ ಕಥೆ, ಕಾದಂಬರಿಗಳನ್ನು ನೀವೇ ಓದಿ ಹೇಳಿ. ಅದಕ್ಕೆ ಒಂದು ಸಮಯ ಗೊತ್ತು ಮಾಡಿ

* ಮನೆಯಲ್ಲಿರುವ ವಸ್ತುಗಳಿಂದಲೇ ವಿಜ್ಞಾನದ ಉಪಕರಣಗಳನ್ನು ತಯಾರಿಸುವುದನ್ನು ಹೇಳಿಕೊಡಿ. ಉಪಕರಣಗಳನ್ನು ಹೇಗೆ ಮಾಡುವುದು ಎಂಬುದಕ್ಕೆ ಸಂಬಂಧಿಸಿದಂತೆ arvindguptatoys.com ವೆಬ್‌ಸೈಟ್‌ನಲ್ಲಿ 4000ಕ್ಕೂ ಅಧಿಕ ವಿಡಿಯೊಗಳಿವೆ. ದೇಶದ 18 ಭಾಷೆಗಳಲ್ಲಿ ಲಭ್ಯವಿವೆ. ಮನೆಯಲ್ಲಿಯೇ ಸಿಗುವ ರಬ್ಬರ್‌, ಸ್ಟ್ರಾ, ಸಿ.ಡಿ, ಪಿಇಟಿ ಬಾಟಲ್‌ಗಳಿಂದ ಅವುಗಳನ್ನು ತಯಾರಿಸಬಹುದು. ಅಂತಹ ಸುಲಭೋಪಾಯಗಳನ್ನು ಹೇಳಿಕೊಡಿ

* ಮನೆಯಲ್ಲೇ ಲಭಿಸುವ ವಸ್ತುಗಳಿಂದ ಸುಂದರ ಕಲಾಕೃತಿಗಳನ್ನು ರಚಿಸುವುದು ಹೇಗೆ ಎಂದು ತಿಳಿಸುವ ಅನೇಕ ಜಾಲತಾಣಗಳಿವೆ (ಉದಾ: Projectkid.com). ಅವುಗಳ ಉಪಯೋಗ ಪಡೆದು, ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಿ

* ರಜೆಯಲ್ಲಿ ಏನೇನನ್ನು ಕಲಿಯಲು ಮತ್ತು ಏನೇನು ಮಾಡಲು ಬಯಸುತ್ತಾರೆ ಎಂಬ ಒಂದು ಪಟ್ಟಿಯನ್ನು ತಯಾರಿಸಲು ಮಕ್ಕಳಿಗೆ ತಿಳಿಸಿ. ಅದರ ಆಧಾರದಲ್ಲಿ ಒಂದು ಕಾರ್ಯಸೂಚಿ ಸಿದ್ಧಪಡಿಸಿ. ಶಾಲೆಯಂತೆ ಕಟ್ಟುನಿಟ್ಟಿನ ವೇಳಾಪಟ್ಟಿ ಬೇಡ. ಆಡುತ್ತಲೇ ಕಲಿಯುವ ವ್ಯವಸ್ಥೆ ಇರಲಿ

* ಗಿಡಗಳನ್ನು ಬೆಳೆಸುತ್ತಾ ಕೆಲವು ಪಾಠಗಳನ್ನು ಕಲಿಸಿ, ಮೊಬೈಲ್‌ ಆ್ಯಪ್‌ ಅಥವಾ ಇಂಟರ್‌ನೆಟ್‌ ಮೂಲಕ ಬಾಹ್ಯಾಕಾಶದ ಬಗ್ಗೆ ತಿಳಿಸಿ, ಮನೆಯಲ್ಲಿ ನಿತ್ಯಬಳಕೆಯ ವಸ್ತುಗಳನ್ನು ತಯಾರಿಸಲು, ದುರಸ್ತಿ ಮಾಡಲು ತರಬೇತಿ ನೀಡಿ

* ಸಾಮಾನ್ಯ ದಿನಗಳಲ್ಲಿ ಮಕ್ಕಳು ಶಾಲೆಗೆ ಹಾಗೂ ಪಾಲಕರು ಕಚೇರಿಗೆ ಹೋಗುವ ಧಾವಂತ ಇರುತ್ತದೆ. ಒಟ್ಟಿಗೆ ಕುಳಿತು ಊಟ ಮಾಡುವುದು ವಿರಳ. ಈ ಅವಕಾಶವನ್ನು ಬಳಸಿಕೊಳ್ಳಿ. ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ಊಟ– ತಿಂಡಿ ಸೇವಿಸಿ. ಮಕ್ಕಳು ಸ್ವಲ್ಪ ತಡವಾಗಿ ಮಲಗಿದರೆ ಗದರಬೇಡಿ

* ಸಂಗೀತ–ನೃತ್ಯಕ್ಕೆ ಸಮಯ ಕೊಡಿ. ಮಕ್ಕಳ ಬುದ್ಧಿಮತ್ತೆ ಹೆಚ್ಚಿಸುವ, ಶೈಕ್ಷಣಿಕವಾಗಿ ಸಹಾಯವಾಗಬಲ್ಲಂತಹ ಆಟಗಳಿಗೆ ಆದ್ಯತೆ ಇರಲಿ

ಶಿಲ್ಪಾ ಶೆಟ್ಟಿ ಮತ್ತು ವಿಯಾನ್‌

(ಕೊರೊನಾವೈರಸ್‌ ಭೀತಿಯಿಂದ ಮನೆಯಲ್ಲೇ ಕಾಲ ಕಳೆಯುತ್ತಿರುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮಗನ ದಿನಚರಿಯನ್ನು ಹೇಗೆ ರೂಪಿಸುತ್ತಿದ್ದಾರೆ? ಟ್ವೀಟ್‌ನಲ್ಲಿ ಹಂಚಿಕೊಂಡ ಅವರ ಅನುಭವವನ್ನು ಕೇಳಿ)

ಮಕ್ಕಳನ್ನು ಎಂಗೇಜ್‌ ಆಗಿ ಇಡುವುದು ಹೇಗೆ?

ಸದ್ಯ ಪ್ರತಿಯೊಬ್ಬ ಪಾಲಕರನ್ನೂ ಕಾಡುತ್ತಿರುವ ಮಿಲಿಯನ್‌ ಡಾಲರ್‌ ಪ್ರಶ್ನೆ ಇದು. ಯೋಜಿತವಲ್ಲದ ಈ ವಿರಾಮವನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಿದೆ. ಏಕೆಂದರೆ, ಸಹಿಸಿಕೊಳ್ಳದೆ ಬೇರೆ ಮಾರ್ಗವೇ ಇಲ್ಲವಾಗಿದೆ. ಮಕ್ಕಳಿಗಾಗಿ ಕೆಲವು ಗಂಟೆಗಳ ಕುತೂಹಲಕಾರಿ ಚಟುವಟಿಕೆಗಳನ್ನು ನಾವು ಯೋಜಿಸಿಸುತ್ತೇವೆ. ಆದರೆ, ಏನು ಮಾಡುವುದು ಸ್ವಲ್ಪೇ ಹೊತ್ತಿನಲ್ಲಿ ‘ಅಮ್ಮ, ಬೋರ್‌ ಆಗ್ತಿದೆ’ ಎಂಬ ಮಾತು ಕೇಳಿ ಬರುತ್ತದೆ. ಆದರೆ, ಅವರಿಗೆ ಐಪಾಡ್‌ಗಳನ್ನು ಕೊಡಲು ನಮಗೆ ಇಷ್ಟವಿಲ್ಲ!

ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಯೋಚನೆ ಮಾಡಿ, ಮಾಡಿ ಕೂದಲು ಕಿತ್ತುಕೊಳ್ಳುವಷ್ಟು ತಲೆ ಕೆಟ್ಟು ಹೋಗುತ್ತದೆ. ಎಷ್ಟು ಸಮಯ ಕಳೆದರೂ ಹೊಸದೇನನ್ನು ಮಾಡಿಸುವುದು ಎಂದು ತಲೆ ಕೆಡಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಮಕ್ಕಳನ್ನು ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಸಿ, ಅವರನ್ನು ಸಂತೋಷವಾಗಿಡುವ ಸಲುವಾಗಿ ಸದಾ ಹೊಸತನ್ನು ಹುಡುಕಲು, ಆವಿಷ್ಕಾರಗಳನ್ನು ಮಾಡಲು ‘ಮಾಡು ಇಲ್ಲವೆ ಮಡಿ’ ಸ್ವರೂಪದಲ್ಲಿ ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ವಿಯಾನ್‌ ಜತೆ ಮನೆಯಲ್ಲಿ ಇವತ್ತು ಅಂಥದ್ದೇ ಒಂದು ಸಂದರ್ಭ. ಕೆಲವೊಮ್ಮೆ ‘ಟೈ’ (ಚೆಸ್‌ನಲ್ಲಿ), ಕೆಲವೊಮ್ಮೆ ‘ಡೈ’ (ಬಣ್ಣಹಚ್ಚುವ) ಆಟ. ಅಲ್ಲಿಯೂ ವಿಶೇಷವಾಗಿ ಕಾಣಿಸಿಕೊಂಡಿದ್ದು ಸಿಂಹ (ಅದರ ಬಾಲಕ್ಕೆ ಬಣ್ಣವನ್ನೂ ಹಚ್ಚಿಸಿಕೊಂಡಿದೆ)!

ನಾವು ಹಾಕಿಕೊಂಡ ಟಿ–ಶರ್ಟ್‌ಗಳನ್ನು ನೋಡಿ, ಅವುಗಳಿಗೆ ಹಿಂದಿನ ಸೆಷನ್‌ ಒಂದರಲ್ಲಿ ನಾವೇ ಬಣ್ಣ ಬಳಿದಿದ್ದು. ನಿಮ್ಮ ಮಕ್ಕಳ ಜತೆ ನೀವು ಹೇಗೆ ಕಾಲ ಕಳೆಯುತ್ತಿದ್ದೀರಿ? ನನಗೂ ಕೆಲವು ಉಪಾಯಗಳನ್ನು ಹೇಳಿಕೊಡಿ. ನಾನು ಬಣ್ಣದ ಟಿ–ಶರ್ಟ್‌ ರೂಪಿಸಿ, ಖುಷಿ ಅನುಭವಿಸಿದ ಹಾದಿ ಹೀಗಿತ್ತು ನೋಡಿ:

ಏನೇನು ಬೇಕು?: ಒಂದು ಜೋಡಿ ಕೈಗವಸು, ಬಿಳಿ ಟಿ–ಶರ್ಟ್‌ಗಳು, ಬಳಕೆಗೆ ಸುರಕ್ಷಿತವಾದ ಬಣ್ಣಗಳು.

ವಿಧಾನ ಹೇಗೆ?: ಟಿ–ಶರ್ಟ್‌ಗಳನ್ನು ಮನಬಂದಂತೆ ತಿರುಗಿಸಿ, ಅದಕ್ಕೆ ರಬ್ಬರ್‌ ಬ್ಯಾಂಡ್‌ ಹಾಕಿ, ಅದರ ಮೇಲೆ ಬೇರೆ, ಬೇರೆ ಬಣ್ಣಗಳನ್ನು ಸುರಿಯಿರಿ. ಬಿಸಿಲಿನಲ್ಲಿ ಒಣಗಿಸಿ, ಆಮೇಲೆ ಅದನ್ನು ಬಿಡಿಸಿ, ಹಾಕಿಕೊಳ್ಳಿ

ಮೊಬೈಲ್‌ ಬಳಕೆ: ಇರಲಿ ನಿಯಂತ್ರಣ

ಮಕ್ಕಳಿಂದ ಗ್ಯಾಜೆಟ್‌ಗಳನ್ನು ಸಂಪೂರ್ಣವಾಗಿ ದೂರ ಇಡುವ ಹಠ ಬೇಡ. ಆದರೆ, ಅವುಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಮೈಮರೆಯುವುದು ಸಹ ತರವಲ್ಲ ಎಂದು ಹೇಳುತ್ತಾರೆ ಮಕ್ಕಳ ಮನಃಶಾಸ್ತ್ರಜ್ಞರು. ಟಿವಿ ಬಳಕೆಗೆ ಸಹ ಇದೇ ನಿಯಮ ಅನ್ವಯವಾಗುತ್ತದೆ ಎಂದು ಅವರು ನೆನಪಿಸುತ್ತಾರೆ.

ಸೂರ್ಯಾಸ್ತದ ಬಳಿಕ ಸಾಧ್ಯವಾದರೆ ಮಕ್ಕಳನ್ನು ಟೆರೇಸ್‌ ಮೇಲೆ ಕರೆದೊಯ್ದು ಆಕಾಶ ಕಾಯಗಳನ್ನು ತೋರಿಸಬೇಕು. ನಕ್ಷತ್ರ ಪುಂಜಗಳನ್ನು ತೋರಿಸಿ, ಅವರಲ್ಲಿ ಕುತೂಹಲವನ್ನು ಮೂಡಿಸಬೇಕು. ಸಿಎನ್‌ಆರ್‌ ರಾವ್‌, ರೊದ್ದಂ ನರಸಿಂಹ ಅವರಂತಹ ದೊಡ್ಡ ವಿಜ್ಞಾನಿಗಳು ಬಾಲ್ಯದಲ್ಲಿ ಹೀಗೆಯೇ ಆಕಾಶ ಕಾಯಗಳನ್ನು ನೋಡುತ್ತಾ ನಿಲ್ಲುತ್ತಿದ್ದರಂತೆ. ವಿಜ್ಞಾನದಲ್ಲಿ ನಮಗೆ ಆಸಕ್ತಿ ಮೂಡಲು ಇಂತಹ ಘಟನೆಗಳೇ ಕಾರಣ ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT