ಬುಧವಾರ, ಜುಲೈ 28, 2021
29 °C

ಪಿಯುಸಿ ನಂತರ ಮುಂದೇನು?: ಕಾಲಕ್ಕೆ ತಕ್ಕಂತೆ ಬಂದಿವೆ ಹೊಸ ಕೋರ್ಸ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಿಯುಸಿ ದ್ವಿತೀಯ ವರ್ಷದ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಮುಂದೆ ಯಾವ ಕೋರ್ಸ್‌ಅನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಕಾಲಕ್ಕೆ ತಕ್ಕಂತೆ ರೂಪುಗೊಂಡು ಬಂದಿರುವ ಕೆಲವು ಹೊಸ ಕೋರ್ಸ್‌ಗಳ ಕುರಿತು ಇಲ್ಲಿ ಮಾಹಿತಿ ನೀಡಿದ್ದಾರೆ ಉಡುಪಿಯ ಅಜ್ಜರಕಾಡು ಡಾ.ಜಿ.ಶಂಕರ್‌ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ವಿ. ಕೇಶವಮೂರ್ತಿ.

ಎಡ್‌ಎಕ್ಸ್‌‌‌
ಎಡ್‌ಎಕ್ಸ್‌‌‌ ಸಂಸ್ಥೆಯು ಕೊರೊನಾವೈರಸ್‌ ಕುರಿತು ಒಂದು ಕೋರ್ಸ್ ಅನ್ನು ಆರಂಭಿಸಿದೆ. ‘ಮೆಕ್ಯಾನಿಕಲ್ ವೆಂಟಿಲೇಷನ್‌ ಫಾರ್‌ ಕೋವಿಡ್–19’ ಎಂಬ ಕೋರ್ಸ್‌ ಇದಾಗಿದೆ. ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಹಯೋಗ ಇದಕ್ಕಿದೆ. ವೆಂಟಿಲೇಟರ್‌ ನಿರ್ವಹಣೆ ಮಾಡುವ ವೃತ್ತಿಪರರಿಗಾಗಿ ಈ ಕೋರ್ಸ್‌ ನಡೆಸಲಾಗುತ್ತಿದೆ. ಮೆಕ್ಯಾನಿಕಲ್ ವೆಂಟಿಲೇಟರ್‌ನ ನಿರ್ವಹಣೆ, ಸಮಸ್ಯೆ ಬಗೆಹರಿಸುವಿಕೆ, ತುರ್ತು ಸಂದರ್ಭದಲ್ಲಿ ಈ ವೆಂಟಿಲೇಟರ್‌ಗಳ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತದೆ.

ಫಿನ್‌ಟೆಕ್!
ತಂತ್ರಜ್ಞಾನ ಬಳಸಿಕೊಂಡು ಹಣಕಾಸು ಸೇವೆಗಳನ್ನು ನೀಡುವುದೇ ‘ಫಿನ್‌ಟೆಕ್’ನ ತಿರುಳು. ಇದು ಹಣಕಾಸು ಹಾಗೂ ತಂತ್ರಜ್ಞಾನ ಮಿಳಿತಗೊಂಡ ಹೊಸ ತಲೆಮಾರಿನ ಪರಿಕಲ್ಪನೆ. ಪಾವತಿ, ಸಾಲ, ವಿಮೆ, ಹಣಕಾಸು ನಿರ್ವಹಣೆಗೆ ಇದು ಸೂಕ್ತವಾದ ವೇದಿಕೆ. ಕೋವಿಡ್ ಆವರಿಸಿರುವ ಈ ಹೊತ್ತಿನಲ್ಲಿ ಫಿನ್‌ಟೆಕ್‌ ತಂತ್ರಜ್ಞರಿಗೆ ಭಾರಿ ಬೇಡಿಕೆಯಿದೆ. ಹಲವು ಶಿಕ್ಷಣ ಸಂಸ್ಥೆಗಳು ಬೇಡಿಕೆ ಮತ್ತು ಪೂರೈಕೆಗೆ ನಡುವೆ ಇರುವ ಅಂತರ ತಗ್ಗಿಸಲು ಹಲವು ಕೋರ್ಸ್‌ಗಳನ್ನು ಜಾರಿಗೊಳಿಸುತ್ತಿವೆ. ಈ ಕೋರ್ಸ್‌ನಲ್ಲಿ ಹಣಕಾಸು ಬ್ಯಾಂಕಿಂಗ್ ಸೇವೆಗಳ ಜತೆಗೆ ತಂತ್ರಜ್ಞಾನಾಧಾರಿತ ಎಪಿಐ, ಬ್ಲಾಕ್‌ಚೈನ್, ಎಎಐಐ/ಎಂಎಲ್, ಬಿಗ್ ಡಾಟಾ ಕೋರ್ಸ್‌ಗಳನ್ನು ಕಲಿಸಿಕೊಡಲಾಗುತ್ತದೆ.

ಸಾಂಪ್ರದಾಯಿಕ ಹಣಕಾಸು ವೃತ್ತಿಪರರಾದ ಚಾರ್ಟರ್ಡ್ ಅಕೌಂಟೆಂಟ್ಸ್, ಕಂಪನಿ ಸೆಕ್ರೆಟರೀಸ್ ಮತ್ತು ಕಾಸ್ಟ್ ಅಕೌಂಟೆಂಟ್ಸ್ ಸಹ ಫಿನ್‌ಟೆಕ್‌ನ ಆಕರ್ಷಣೆಗೆ ಒಳಗಾಗಿದ್ದು, ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಐಐಎಂ ಕಲ್ಕತ್ತ, ಎಸ್‌ಪಿ ಜೈನ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್, ಆಕ್ಸ್‌ಫರ್ಸ್, ಕೊಲಂಬಿಯಾ ಮೊದಲಾದ ಸಂಸ್ಥೆಗಳು ಕೋರ್ಸ್‌ ನೀಡುತ್ತಿವೆ. ಇದರಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳೂ ಲಭ್ಯವಿವೆ. ಸಾಮಾನ್ಯವಾಗಿ ಫಿನ್‌ಟೆಕ್‌ನಲ್ಲಿ ಪದವಿ ಪಡೆಯಬೇಕಾದರೆ ಸರಿಸುಮಾರು ₹15ರಿಂದ ₹50 ಲಕ್ಷ ಖರ್ಚು ತಗುಲಬಹುದು. ವಿಶ್ವವಿದ್ಯಾಲಯ ಮತ್ತು ಅವುಗಳು ಇರುವ ಸ್ಥಳಗಳನ್ನು ಆಧರಿಸಿ ಖರ್ಚು ವ್ಯತ್ಯಾಸವಾಗುತ್ತದೆ. ಕೋರ್ಸ್ ಅವಧಿ 1ರಿಂದ 3 ವರ್ಷಗಳವರೆಗೆ ಇದೆ. ಆನ್‌ಲೈನ್‌ನಲ್ಲೂ ಕೋರ್ಸ್ ಲಭ್ಯವಿವೆ.

ಫ್ಯಾಷನ್ ಡಿಸೈನಿಂಗ್
ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್ ಟೆಕ್ನಾಲಜಿಯು (ಎನ್‌ಐಎಫ್‌ಟಿ) ನಾಲ್ಕು ವರ್ಷಗಳ ‘ಬ್ಯಾಚುಲರ್ ಆಫ್ ಡಿಸೈನ್‌ ಇನ್ ಫ್ಯಾಷನ್ ಡಿಸೈನಿಂಗ್‌’ ಎಂಬ ಕೋರ್ಸ್‌ ನಡೆಸುತ್ತದೆ. ಕಲೆ ಮತ್ತು ವಾಣಿಜ್ಯ ವಿಷಯಗಳಲ್ಲಿ ಪಿಯುಸಿ ಮುಗಿಸಿದವರು ಈ ಕೋರ್ಸ್‌ ತೆಗೆದುಕೊಳ್ಳಬಹುದು. ವಿಜ್ಞಾನದ ವಿದ್ಯಾರ್ಥಿಗಳೂ ಈ ಕೋರ್ಸ್‌ ತೆಗೆದುಕೊಳ್ಳಬಹುದು.

ಬಟ್ಟೆ ವಿನ್ಯಾಸದಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಹೆಚ್ಚು ಜನಪ್ರಿಯವಾದ ಕೋರ್ಸ್‌ ಆಗಿದೆ. ಫ್ಯಾಷನ್‌ ಕ್ಷೇತ್ರವು ಉತ್ತಮ ಪ್ರಗತಿ ಸಾಧಿಸುತ್ತಿರುವ ಕಾರಣ ಈ ಕ್ಷೇತ್ರದಲ್ಲಿ ಉದ್ಯೋಗವಕಾಶ ಹೇರಳವಾಗಿದೆ. ವಿನ್ಯಾಸಕಾರ, ವಿನ್ಯಾಸ ಸಂಯೋಜಕ, ವಸ್ತ್ರವಿನ್ಯಾಸಕ ಮೊದಲಾದ ಹೆಸರಿನ ಹುದ್ದೆಗಳಲ್ಲಿ ಉದ್ಯೋಗವಕಾಶ ಹೆಚ್ಚಿದೆ. ಈ ಕೋರ್ಸ್‌ ಪೂರ್ಣಗೊಳಿಸಿದವರನ್ನು ಹಲವು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಜವಳಿ ಉದ್ಯಮದಲ್ಲಿ ಇರುವ ಕಂಪನಿಗಳು ಕ್ಯಾಂಪಸ್‌ನಲ್ಲೇ ಉದ್ಯೋಗಕ್ಕೆ ತೆಗೆದುಕೊಳ್ಳುತ್ತವೆ.

ಸೆರಾಮಿಕ್ಸ್‌ ಡಿಸೈನಿಂಗ್
ಸೆರಾಮಿಕ್ಸ್‌ ಡಿಸೈನಿಂಗ್ ವಿಷಯದಲ್ಲಿ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸ್‌ಗಳೂ ಲಭ್ಯವಿವೆ. ಒಂದು ವರ್ಷದ ಸರ್ಟಿಫಿಕೇಟ್‌ ಕೋರ್ಸ್‌, ಮೂರು ವರ್ಷದ ಸರ್ಟಿಫಿಕೇಟ್‌ ಕೋರ್ಸ್‌ಗಳೂ ಇವೆ. ದೇಶದಲ್ಲಿ ಹಲವು ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಗೃಹವಿಜ್ಞಾನ ಕಾಲೇಜುಗಳು ಇಂತಹ ಕೋರ್ಸ್‌ಗಳನ್ನು ನಡೆಸುತ್ತಿವೆ. ಆದರೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌– ಎನ್‌ಐಡಿ ನಡೆಸುವ ನಾಲ್ಕು ವರ್ಷಗಳ ಕೋರ್ಸ್‌ಗೆ ಹೆಚ್ಚು ಬೇಡಿಕೆ ಇದೆ.

ಗೃಹನಿರ್ಮಾಣ, ಒಳಾಂಗಣ ಅಲಂಕಾರ, ಆಲಂಕಾರಿಕ ವಸ್ತುಗಳು ಮತ್ತು ಅಡುಗೆಮನೆ ಬಳಕೆಯ ವಸ್ತುಗಳಿಗೆ ಯಾವತ್ತೂ ಬೇಡಿಕೆ ಕುಂದುವುದಿಲ್ಲವಾದ ಕಾರಣ ಈ ಕ್ಷೇತ್ರದಲ್ಲಿ ಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ಉದ್ಯೋಗ ನಷ್ಟದ ಭೀತಿ ಕಡಿಮೆ. ಸೆರಾಮಿಕ್ಸ್‌ ಉದ್ಯಮ ಆರಂಭಿಸುವ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಈ ಕೋರ್ಸ್‌ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಜನಪ್ರಿಯ ಕಂಪನಿಗಳು ಕ್ಯಾಂಪಸ್‌ನಲ್ಲಿಯೇ ಆಯ್ಕೆ ಮಾಡಿಕೊಳ್ಳುತ್ತವೆ. ಸ್ವಂತ ಉದ್ಯಮ ಆರಂಭಿಸಲು ಅವಕಾಶವಿದೆ.

ಟೂರಿಸಮ್
ಇತ್ತೀಚೆಗೆ ಬಹಳ ದೊಡ್ದ ಪ್ರಮಾಣದಲ್ಲಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮವೂ ಒಂದು. ಪ್ರವಾಸ ಒಂದು ಉದ್ಯಮವಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ಉದ್ಯೋಗ ಬೇಡಿಕೆಯೂ ಗಣನೀಯವಾಗಿ ಹೆಚ್ಚಾಗಿದೆ.
ಕೋರ್ಸ್‌ ಹೆಸರು: ಎಂ.ಎ, ಬಿಎನ್‌ ಟೂರಿಸಮ್‌
ಅಮಿಟಿ ವಿ ವಿ, ಎಸ್‌ಇಎ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್, ಬೆಂಗಳೂರು, ಹಿಂದೂಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ನ್ಯಾನೋ ಟೆಕ್ನಾಲಜಿ
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇನ್ನೊಂದು ಕ್ಷೇತ್ರವೆಂದರೆ ಅದು ನ್ಯಾನೋ ತಂತ್ರಜ್ಞಾನ. ವೈದ್ಯಕೀಯ, ರಾಸಾಯನಿಕ, ಕೃಷಿ, ಮುಂತಾದ ಕ್ಷೇತ್ರಗಳಲ್ಲಿ ಯಥೇಚ್ಛವಾದ ಉದ್ಯೋಗವಕಾಶಗಳು ಈ ನ್ಯಾನೋ ತಂತ್ರಜ್ಞಾನದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆ.
ಕೋರ್ಸ್‌ ಹೆಸರು: ಬಿ.ಟೆಕ್‌, ಅವಧಿ: ನಾಲ್ಕು ವರ್ಷ
ಅಮಿಟಿ ವಿಶ್ವವಿದ್ಯಾಲಯ , ಶಿವಾಜಿ ವಿ ವಿ ಕೊಲ್ಲಾಪುರ, ಶ್ರೀನಿವಾಸ್ ವಿ ವಿ, ಕರ್ನಾಟಕ

ಸ್ಟೆಮ್ ಸೆಲ್ ಮತ್ತು ಟಿಶ್ಯೂ ಇಂಜಿನೀರಿಂಗ್
ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೆಯೇ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿರುವ ದೊಡ್ಡ ಕ್ಷೇತ್ರ ಇದಾಗಿದೆ. ಇದರಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯುವ ವಿಪುಲ ಅವಕಾಶವಿದೆ. ಈ ಪದವಿಗೆ ಪಿಯು ಹಂತದಲ್ಲಿ ಜೀವಶಾಸ್ತ್ರವನ್ನು ಅಧ್ಯಯನ ಮಾಡಿರಬೇಕು
ಕೋರ್ಸ್‌ ಹೆಸರು: ಬಿ.ಟೆಕ್‌, ಅವಧಿ: ನಾಲ್ಕು ವರ್ಷ
ಶಾರದಾ ವಿಶ್ವವಿದ್ಯಾಲಯ, ನೋಯಿಡಾ, ಏಳು ಲಕ್ಷ

ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಅಂಡ್ ಶೀನ್ ಲರ್ನಿಂಗ್
ಎಐ ಅಂಡ್ ಎಂ ಎಲ್ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡಲಾಗುತ್ತಿರುವ ಈ ಪದವಿಯು ಇತ್ತೀಚೆಗೆ ವಿಪುಲವಾದ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿದೆ. ರೋಬೋಟ್ ತಂತ್ರಜ್ಞಾನದಿಂದ ಹಿಡಿದು ಕೃಷಿಯವರೆಗೆ ಇದರ ಉಪಯೋಗವಿದೆ.
ಕೋರ್ಸ್‌ ಹೆಸರು: ಬಿ.ಟೆಕ್‌, ಅವಧಿ: ನಾಲ್ಕು ವರ್ಷ
ಜೈನ್ ವಿಶ್ವವಿದ್ಯಾಲಯ, ಬೆಂಗಳೂರು, ಆರುವರೆ ಲಕ್ಷ  
ಅಮೃತ ವಿಶ್ವವಿದ್ಯಾಪೀಠಂ, ಬೆಂಗಳೂರು
ಡಿ.ವೈ. ಪಾಟೀಲ್ ಇಂಟರ್ನ್ಯಾಷನಲ್ ವಿಶ್ವವಿದ್ಯಾಲಯ, ಪುಣೆ, ಎರಡು ಲಕ್ಷ
ಎಸ್ ಆರ್ ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿ, ಚೆನ್ನೈ, ಹತ್ತು ಲಕ್ಷ


ಎಂ.ವಿ. ಕೇಶವಮೂರ್ತಿ

ಡೇಟಾ ಸೈನ್ಸ್
ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿರುವ ಪದವಿ ಇದು. ಸಾಮಾನ್ಯವಾಗಿ ಉದ್ಯಮಗಳಲ್ಲಿ ಡೇಟಾ ಸೈಂಟಿಸ್ಟ್ ಎಂಬ ಅತ್ಯಂತ ಉಪಯುಕ್ತವಾದ ಹುದ್ದೆಗಳು ಸೃಷ್ಟಿಯಾಗುತ್ತಿದ್ದು, ವಿಪುಲವಾದ ಔದ್ಯೋಗಿಕ ಅವಕಾಶಗಳನ್ನು ನೀಡುತ್ತಿದೆ.

ಸಾಂಪ್ರದಾಯಿಕವಾದ ಸ್ಟಾಟಿಸ್ಟಿಕ್ಸ್ ಎಂಬ ವಿಷಯವನ್ನೇ ಆಧಾರವಾಗಿಟ್ಟುಕೊಂಡು, ಅದರ ಬಳಕೆಯ ಮೇಲೆ ಹೆಚ್ಚು ಮಹತ್ವವನ್ನು ನೀಡುವ ವಿಶಿಷ್ಟವಾದ ಪದವಿ ಇದಾಗಿದೆ. ಪದವಿ ಕೋರ್ಸುಗಳಷ್ಟೇ ಅಲ್ಲದೆ, ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮಾ ಪದವಿಯನ್ನು ಪಡೆಯಲೂ ಅವಕಾಶವಿದೆ. ಪಿ ಹೆಚ್ಡಿ ಅಧ್ಯಯನವನ್ನು ಕೂಡಾ ಮಾಡಬಹುದು. ಬಿಗ್ ಡೇಟಾ ಅನಾಲಿಸಿಸ್ ಎಂಬ ಹೆಸರಿನಲ್ಲಿಯೂ ಕೆಲವು ಕೋರ್ಸುಗಳು ಲಭ್ಯ.
ಕೋರ್ಸ್‌ ಹೆಸರು: ಬಿಎಸ್‌ಸಿ ಸ್ನಾತಕ ಪದವಿ, ಅವಧಿ: ಮೂರು ವರ್ಷ
ಶ್ರೀ ರಾಮಚಂದ್ರ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ಎಂಡ್ ರಿಸರ್ಚ್, ಅಂದಾಜು ವೆಚ್ಚ ಎರಡೂವರೆ ಲಕ್ಷ
ನವ್ರಚನ ವಿಶ್ವವಿದ್ಯಾಲಯ, ಅಂದಾಜು ಒಂದೂವರೆ ಲಕ್ಷ
ಜೈನ್ ವಿಶ್ವವಿದ್ಯಾಲಯ ಬೆಂಗಳೂರು, ಅಂದಾಜು ಎರಡೂವರೆ ಲಕ್ಷ
ಐ ಐ ಟಿ ಹೈದರಾಬಾದ್, ಅಂದಾಜು ಆರು ಲಕ್ಷ  (ಬಿ.ಟೆಕ್ ಪದವಿ, ನಾಲ್ಕು ವರ್ಷ)

ಕೊರೊನಾವೈರಸ್‌ ಕೋರ್ಸ್‌ಗಳು
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಒಕ್ಕೂಟವು (ಫಿಕ್ಕಿ) ಕೊರೊನಾವೈರಸ್‌ಗೆ ಸಂಬಂಧಿಸಿದ ಹಲವು ಕೋರ್ಸ್‌ಗಳನ್ನು ಆರಂಭಿಸಿದೆ. ಕೋವಿಡ್‌–19ಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿ, ಸೋಂಕು ತಡೆಯುವಿಕೆ ಮತ್ತು ನಿಯಂತ್ರಣ, ಪಾಸಿಟಿವ್ ಪ್ರಕರಣಗಳ ನಿರ್ವಹಣೆ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ಗಳು ಇವಾಗಿವೆ. ಆಸ್ಪತ್ರೆಗಳು ಅನುಸರಿಸುತ್ತಿರುವ ಕೋವಿಡ್ ನಿರ್ವಹಣೆಯ ಉತ್ತಮ ನಡಾವಳಿಗಳು, ವಿಶ್ವ ಆರೋಗ್ಯ ಸಂಸ್ಥೆ ಮತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಆಧರಿಸಿ ಈ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಫಿಕ್ಕಿ ಹೇಳಿದೆ. ಮೆಡ್‌ವರ್ಸಿಟಿಯಲ್ಲಿ ಆನ್‌ಲೈನ್‌ ಮೂಲಕ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.

______

ಕೋರ್ಸ್ ಆಯ್ಕೆ ಹೇಗಿರಬೇಕು? -ಉಮರ್ ಯು.ಹೆಚ್., ಮಂಗಳೂರು
ಆಕೆ ಎಂಜಿನಿಯರಿಂಗ್ ಪದವೀಧರೆ. ಕೋರ್ಸ್ ಮುಗಿಸಿದ ಕೂಡಲೇ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗ ಗಿಟ್ಟಿಸುವಲ್ಲೂ ಯಶಸ್ವಿಯಾಗಿದ್ದಳು. ಆದರೆ ಆರೇ ತಿಂಗಳಲ್ಲಿ ಕೆಲಸಕ್ಕೆ ಗುಡ್‍ಬೈ ಹೇಳಿ ಮನೆ ಸೇರಿದ್ದಾಳೆ. ಮುಂದೇನು ಎಂಬುದು ಅವಳ ಚಿಂತೆ. ತಾಯಿಯೊಂದಿಗೆ ಕೆರಿಯರ್ ಕೌನ್ಸೆಲಿಂಗ್‍ಗಾಗಿ ಬಂದಿದ್ದ ಹೆಣ್ಣುಮಗಳಿಗೆ ಕೆರಿಯರ್ ಪ್ಲ್ಯಾನಿಂಗ್‍ನ ವಿಧಾನಗಳನ್ನು ಹೇಳಿಕೊಟ್ಟೆ. ಮುಂದಿನ ವಾರ ಭೇಟಿಯ ಸಮಯ ನಿಗದಿಪಡಿಸಿ ಹೊರಡುವಾಗ ಆಕೆ ಹೇಳಿದ ಮಾತು ಇನ್ನೂ ನನ್ನ ಕಿವಿಗಪ್ಪಳಿಸುತ್ತಿದೆ. ‘ತಪ್ಪು ಮಾಡಿದೆ ಸರ್. ಎಸ್‍ಎಸ್‍ಎಸ್‍ಸಿ ಬಳಿಕ ನಾನು ಕೆರಿಯರ್ ಕೌನ್ಸೆಲಿಂಗ್ ಮಾಡಿಸಿಕೊಂಡಿದ್ದರೆ ಅಥವಾ ಪಿಯುಸಿ ಬಳಿಕವಾದರೂ ನಾನೇ ಕೆರಿಯರ್ ಪ್ಲ್ಯಾನಿಂಗ್ ಮಾಡಿ ಕಲಿತಿದ್ದರೆ, ಖಂಡಿತ ಎಂಜಿನಿಯರಿಂಗ್ ಕಲಿಯುತ್ತಿರಲಿಲ್ಲ’.

ಇದು ಆಕೆಯೊಬ್ಬಳ ಸಮಸ್ಯೆಯೇನಲ್ಲ. ನಮ್ಮ ಬಹುತೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎಸ್‍ಎಸ್‍ಎಲ್‍ಸಿ/ಪಿಯುಸಿ ಬಳಿಕ ಕೆರಿಯರ್ ಪ್ಲ್ಯಾನಿಂಗ್ ಮಾಡದೆ ಕೋರ್ಸ್‍ಗಳನ್ನು ಆಯ್ಕೆ ಮಾಡುತ್ತಾರೆ ಎಂಬುದು ವಾಸ್ತವ. ಅನೇಕರಿಗೆ ‘ಕೆರಿಯರ್’ ಅಂದರೇನು ಎಂಬುದೇ ತಿಳಿದಿಲ್ಲ.

* ಆಕರ್ಷಣೆ ಮತ್ತು ಅವಾಸ್ತವ ಭ್ರಮೆಗಳಿಗೆ ಬಲಿಯಾಗಬೇಡಿ
ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಶ್ರೇಣಿಯೊಂದಿಗೆ ಪಾಸಾದರೆ ‘ಸೈನ್ಸ್’, ಉತ್ತಮ ಶ್ರೇಣಿಯಾದರೆ ‘ಕಾಮರ್ಸ್’ ಹಾಗೂ ಕಡಿಮೆ ಅಂಕ ಗಳಿಸಿದರೆ ‘ಆರ್ಟ್ಸ್‌’ ಎಂಬ ತೀರ್ಮಾನ ಚಾಲ್ತಿಯಲ್ಲಿವೆ. ಫೇಲಾದರಂತೂ ಜೀವವನ್ನೇ ಕಳಕೊಂಡಂತೆ ಹತಾಶೆ, ಖಿನ್ನತೆಗೆ ಒಳಗಾಗುವವರೂ ಪರೀಕ್ಷೆಗಳಲ್ಲಿ ಜಾಸ್ತಿ ಅಂಕ ಗಳಿಸಿದರೆ ಮಾತ್ರ ಉತ್ತಮ ಭವಿಷ್ಯವೆಂಬ ತಪ್ಪುಕಲ್ಪನೆಯಿಂದಾಗಿ ಮಕ್ಕಳ ಮೇಲೆ ಒತ್ತಡ ಹೇರುವವರೂ ನಮ್ಮಲ್ಲಿದ್ದಾರೆ.

ಯಾವುದೋ ಆಕರ್ಷಣೆಗೆ, ಅವಾಸ್ತವ ಭ್ರಮೆಗೆ, ಸ್ನೇಹಿತರ ಒತ್ತಾಯಕ್ಕೆ, ಪಾಲಕರ/ಹಿರಿಯರ ಒತ್ತಡಕ್ಕೆ ಮಣಿದು ಕೋರ್ಸುಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳೇ ನಮ್ಮಲ್ಲಿ ಹೆಚ್ಚು. ಆದರೆ, ಪಕ್ಕಾ ಕೆರಿಯರ್‌ ಪ್ಲ್ಯಾನಿಂಗ್‌ ಇದ್ದರೆ ಗುರಿ ತಲುಪುವುದು ಸುಲಭ.

* ಮಕ್ಕಳ ಪಾಲಕರಿಗೆ ಕಿವಿಮಾತು:
ಪಿಯುಸಿ ಫಲಿತಾಂಶ ಬಂದಿದೆ. ಫಲಿತಾಂಶ ಬರುವ ಮೊದಲೇ ಮಕ್ಕಳ ಕೆರಿಯರ್ ಕುರಿತಂತೆ ಚರ್ಚೆ ಆರಂಭಿಸಿದರೂ ಈವಾಗ ಮನೆಯಲ್ಲೊಂದು ಬೈಠಕ್ ನಡೆಯಲಿ. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿಯಿರುವ ಎಲ್ಲರೂ ಆ ಬೈಠಕ್‍ನಲ್ಲಿರಲಿ. ಫಲಿತಾಂಶ ಬಂದಿದೆ, ಮುಂದೇನು ಎಂಬುದು ಚರ್ಚೆಯ ಕೇಂದ್ರ ವಿಷಯವಾಗಲಿ.

ಕೊರೊನಾ ವೈರಾಣುವಿನಿಂದ ಉಂಟಾಗಲಿರುವ ಸಾವು-ನೋವಿಗಿಂತಲೂ, ನಿರುದ್ಯೋಗ ಮತ್ತು ಆರ್ಥಿಕ ಕುಸಿತ ಮುಂದಿನ ದಿನಗಳಲ್ಲಿ ನಾವು ಎದುರಿಸಬೇಕಾದ ಸವಾಲುಗಳಾಗಲಿವೆ. ಈ ಹಿನ್ನೆಲೆಯಲ್ಲಿ ಪಕ್ಕಾ ಕೆರಿಯರ್ ಪ್ಲ್ಯಾನಿಂಗ್ ಮಾಡಿಯೇ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ.

ಕೆರಿಯರ್ ಪ್ಲ್ಯಾನಿಂಗ್ ಮಾಡುವುದು ಹೇಗೆ?
ಕೆಲವು ಶಾಲೆ/ಕಾಲೇಜುಗಳಲ್ಲಿ ಕೆರಿಯರ್ ಗೈಡನ್ಸ್ ವಿಭಾಗಗಳಿರುತ್ತವೆ. ಜಿಲ್ಲಾ ಕ್ರೀಡಾ ಇಲಾಖೆಯ ಕಚೇರಿಯಲ್ಲಿ ‘ಯುವ ಸ್ಪಂದನ ಕೇಂದ್ರ’ವಿದ್ದು ಅಲ್ಲೂ ಕೆರಿಯರ್ ಗೈಡ್‍ಗಳಿರುತ್ತಾರೆ. ಸಾಮಾಜಿಕ ಕಾಳಜಿಯೊಂದಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡುತ್ತಿರುವ ಕೆಲವು ಕೆರಿಯರ್ ಗೈಡ್/ಕೌನ್ಸೆಲರ್‌ಗಳೂ ಜಿಲ್ಲೆಯಲ್ಲಿದ್ದಾರೆ. ಅವರಿಂದ ಮಾಹಿತಿ ಪಡೆಯಬಹುದು.

* ಕೆರಿಯರ್ ಪ್ಲ್ಯಾನಿಂಗ್‍ನ ಹಂತಗಳು: ಪ್ರಮುಖ ಕೆರಿಯರ್ ಕೌನ್ಸೆಲರ್‌ಗಳು, ಕೆರಿಯರ್ ಮನಃಶಾಸ್ತ್ರಜ್ಞರು ಹಾಗೂ ಕೆರಿಯರ್ ಗೈಡ್‍ಗಳ ಒಟ್ಟು ಸಲಹೆಗಳನ್ನು ಕ್ರೋಡೀಕರಿಸಿ, ಸಂಕ್ಷಿಪ್ತ ಮತ್ತು ಸರಳವಾಗಿ ಕೆರಿಯರ್ ಪ್ಲ್ಯಾನಿಂಗ್‍ಗೆ 5 ಪ್ರಮುಖ ಹಂತಗಳಿವೆ ಎನ್ನಬಹುದು.

1) ಸ್ವಯಂ ಅವಲೋಕನ (ನಾನು ಮತ್ತು ನನ್ನ ಕನಸು): ವಿದ್ಯಾರ್ಥಿಯು ತನ್ನ ಕನಸು, ಬುದ್ಧಿಸಾಮರ್ಥ್ಯ, ಪ್ರತಿಭೆ, ವ್ಯಕ್ತಿತ್ವ, ಮನೋಭಾವ, ಕೌಶಲ ಮತ್ತು ದೌರ್ಬಲ್ಯಗಳ ತಾರ್ಕಿಕ ಅವಲೋಕನ ನಡೆಸುವ ಮೂಲಕ ತನ್ನನ್ನು ತಾನೇ ಅರಿತುಕೊಳ್ಳುವುದು ಹಾಗೂ ಸಾಧನೆ ಮಾಡಬಯಸುವ ಕ್ಷೇತ್ರದ ಬಗೆಗಿನ ತೀರ್ಮಾನ ಕೈಗೊಳ್ಳುವುದು

2) ನನ್ನ ಸಾಮರ್ಥ್ಯ ಮತ್ತು ಆಸಕ್ತಿ: ವಿದ್ಯಾರ್ಥಿಯು ತನ್ನ ವಾಸ್ತವ ಸಾಮರ್ಥ್ಯ ಮತ್ತು ಆಸಕ್ತಿಯ ಕ್ಷೇತ್ರವನ್ನು ಅರಿತುಕೊಳ್ಳುವುದು

3) ವೃತ್ತಿ ಪ್ರಪಂಚದ ತಿಳಿವಳಿಕೆ: ತನ್ನ ವ್ಯಕ್ತಿತ್ವ, ಸಾಮರ್ಥ್ಯ ಮತ್ತು ಆಸಕ್ತಿಗೆ ಪೂರಕವಾದ ಲಭ್ಯವಿರುವ ವೃತ್ತಿಗಳನ್ನು ತಿಳಿದುಕೊಳ್ಳುವುದು

4) ಕ್ಷೇತ್ರ ಮತ್ತು ವೃತ್ತಿಯ ಆಯ್ಕೆ: ಆಯ್ಕೆಗೆ ಲಭ್ಯವಿರುವ ಮೂರು ಕ್ಷೇತ್ರಗಳಾದ ಸರಕಾರಿ ಉದ್ಯೋಗ, ಖಾಸಗಿ ಉದ್ಯೋಗ ಮತ್ತು ಸ್ವ ಉದ್ಯೋಗಗಳ ಪೈಕಿ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿ, ಅಲ್ಲಿ ಯಾವ ಉದ್ಯೊಗದೊಂದಿಗೆ ನನ್ನ ಕೆರಿಯರ್‌ ಆರಂಭಿಸಬೇಕು ಎಂಬ ತೀರ್ಮಾನ ಕೈಗೊಳ್ಳುವುದು

5) ಕೋರ್ಸ್ ಮತ್ತು ಸಂಸ್ಥೆಯ ಆಯ್ಕೆ: ತೀರ್ಮಾನಿಸಲಾಗಿರುವ ಕ್ಷೇತ್ರ ಮತ್ತು ಉದ್ಯೋಗಕ್ಕೆ ಪೂರಕವಾದ ಕೋರ್ಸ್ ಮತ್ತು ಕಲಿಯುವ ವಿದ್ಯಾಸಂಸ್ಥೆಯನ್ನು ಆಯ್ಕೆ ಮಾಡುವುದು


ಉಮರ್ ಯು.ಹೆಚ್., ಮಂಗಳೂರು

ಲೇಖಕ: ಕೆರಿಯರ್ ಮಾರ್ಗದರ್ಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು