ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಟಿಆರ್‌ಪಿ ತಿರುಚುವಿಕೆ ಪ್ರಕರಣದ ನೆಪದಲ್ಲಿ ಬೀದಿಗೆ ಬಂತೇ ಮಾಧ್ಯಮ ಜಗಳ

Last Updated 10 ಅಕ್ಟೋಬರ್ 2020, 2:09 IST
ಅಕ್ಷರ ಗಾತ್ರ

ದೇಶದ ಕೆಲವು ಸುದ್ದಿ ಮಾಧ್ಯಮಗಳ ಮೇಲೆ, ‘ಟಿಆರ್‌ಪಿ’ ತಿರುಚಿದ ಆರೋಪ ಬರುತ್ತಿದ್ದಂತೆ, ಮಾಧ್ಯಮ ಕ್ಷೇತ್ರದಲ್ಲಿ ಬಹುಕಾಲದಿಂದ ನಡೆಯುತ್ತಿದ್ದ ಶೀತಲ ಸಮರ ಬಹಿರಂಗಗೊಂಡಿದೆ. ಟಿ.ವಿ. ವಾಹಿನಿಗಳ ವಿಶ್ವಾಸಾರ್ಹತೆ ಮತ್ತು ‘ವಾಲಿಕೆ’ಗಳನ್ನು ಕುರಿತ ಚರ್ಚೆಯೂ ಮುನ್ನೆಲೆಗೆ ಬಂದಿದೆ

ಟಿಆರ್‌ಪಿ ತಿರುಚಿದ ಆರೋಪದ ಮೇಲೆ ಮೂರು ಸುದ್ದಿವಾಹಿನಿಗಳ ವಿರುದ್ಧ ತನಿಖೆ ನಡೆಸುವುದಾಗಿ ಮುಂಬೈ ಪೊಲೀಸ್‌ ಆಯುಕ್ತ ಪರಮ್‌ಬೀರ್‌ ಸಿಂಗ್‌ ಗುರುವಾರ ಘೋಷಿಸಿದ್ದಾರೆ. ಸುದ್ದಿ ವಾಹಿನಿಗಳ ಮಧ್ಯೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಈ ಘೋಷಣೆಯು ಹೊಸ ರೂಪ ಕೊಟ್ಟಿದೆ.

ಸುದ್ದಿ ವಾಹಿನಿಗಳ ನಡುವೆ ಟಿಆರ್‌ಪಿಗಾಗಿ ಸಹಜವಾಗಿಯೇ ಪೈಪೋಟಿ ಇದೆ. ಅದರ ಜತೆಗೆ, ಸ್ವಪ್ರತಿಷ್ಠೆಗಾಗಿ ಮುಸುಕಿನ ಗುದ್ದಾಟವೂ ನಡೆಯುತ್ತಿದೆ ಎಂಬುದು ಈ ಮಾಧ್ಯಮವನ್ನು ಹತ್ತಿರದಿಂದ ಗಮನಿಸಿದವರಿಗೆ ತಿಳಿದಿರುವ ವಿಚಾರವೇ. ವಾಹಿನಿಗಳ ಮುಖ್ಯಸ್ಥರು ಅಥವಾ ಪತ್ರಕರ್ತರ ನಡುವಣ ಮಾತಿನ ಚಕಮಕಿಗಳು ಇತ್ತೀಚಿನವರೆಗೆ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದ್ದವು. ಆದರೆ, ಈಗ ಆರೋಪ–ಪ್ರತ್ಯಾರೋಪಗಳು ನೇರವಾಗಿಯೇ ನಡೆಯುತ್ತಿವೆ.

ಸುದ್ದಿ ವಾಹಿನಿಗಳಿಗೆ ಸಂಬಂಧಿಸಿದ ಇಎನ್‌ಬಿಎ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲೇ ಎನ್‌ಡಿಟಿವಿ ಇಂಡಿಯಾದ ರವೀಶ್‌ ಕುಮಾರ್‌ ಹಾಗೂ ಆಜ್‌ತಕ್‌ ವಾಹಿನಿಯ ಅಂಜನಾ ಓಂ ಕಶ್ಯಪ್‌ ಮಾತಿನ ಚಾಟಿಗಳನ್ನು ಬೀಸಿದ್ದು ಪರಸ್ಪರರನ್ನು ಅವಮಾನಿಸಿದ್ದು ಇದೆ.

ಟಿಆರ್‌ಪಿ ತಿರುಚಲಾಗುತ್ತಿದೆ ಎಂಬ ಸುದ್ದಿ ಬರುತ್ತಿದ್ದಂತೆಯೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವಾಹಿನಿಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿದೆ. ‘ರಿಪಬ್ಲಿಕ್‌ ಚೀಟ್ಸ್‌ ಭಾರತ್‌’, ‘ರಿಪಬ್ಲಿಕ್‌ ರೇಟಿಂಗ್‌ ಗೋಲ್‌ಮಾಲ್’‌, ‘ಸುದ್ದಿ ಟಿಆರ್‌ಪಿಗಾಗಿ ನಗದು’... ಮುಂತಾದ ಶೀರ್ಷಿಕೆಗಳು ಟ್ರೆಂಡ್‌ ಆಗಿವೆ. ಹಿರಿಯ, ಅನುಭವಿ ಪತ್ರಕರ್ತರ ಹೇಳಿಕೆ, ಟ್ವೀಟ್‌ಗಳೂ ಇಲ್ಲಿ ಕಾಣಿಸಿದವು.

ಸುದ್ದಿ ವಾಹಿನಿಗಳ ನಡುವಣ ಗುದ್ದಾಟ ಇಂದು ನಿನ್ನೆಯದೇನೂ ಅಲ್ಲ; ಕೆಲ ವರ್ಷಗಳಿಂದಲೇ ವಾಹಿನಿಗಳ ನಡುವೆ ಶೀತಲ ಸಮರ ನಡೆಯುತ್ತಿದೆ. ಎನ್‌ಡಿಟಿವಿ ಇಂಡಿಯಾದ ರವೀಶ್‌ ಕುಮಾರ್‌ ಅವರು ಈಚೆಗೆ, ‘ಸುದ್ದಿ ವಾಹಿನಿಗಳು ರಾಜಕೀಯ ನಾಯಕರ ಗುಲಾಮರಾಗುತ್ತಿವೆ’ ಎಂದು ಆರೋಪ ಮಾಡಿದ್ದರು. ಸುದ್ದಿ ಪ್ರಸಾರದ ವೇಳೆ ದೀಪಗಳನ್ನು ಆರಿಸಿ, ‘ಪತ್ರಿಕೋದ್ಯಮಕ್ಕೆ ಕತ್ತಲಾವರಿಸಿದೆ’ ಎಂದು ಅದೇ ಚಾನಲ್‌ನಲ್ಲಿ ಬಿಂಬಿಸಲಾಯಿತು. ‘ನಿಮ್ಮ ಮನಸ್ಸಿಗೆ ನೆಮ್ಮದಿ ಬೇಕಾಗಿದ್ದರೆ ಟಿ.ವಿ.ಯನ್ನು ಮನೆಯಿಂದ ಕಿತ್ತೆಸೆಯಿರಿ’ ಎಂದು ರವೀಶ್‌ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದೂ ಇದೆ.

ಸುಶಾಂತ್‌ ಸಿಂಗ್ ಸಾವಿನ ಪ್ರಕರಣ ಹಾಗೂ ಆ ನಂತರದ ಬೆಳವಣಿಗೆಗಳು ಸುದ್ದಿ ವಾಹಿನಿಗಳ ನಡುವಣ ಒಡಕು ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿದೆ. ‘ಇಂಡಿಯಾ ಟುಡೆ’ಯ ಕನ್‌ಸಲ್ಟಿಂಗ್‌ ಎಡಿಟರ್‌ ರಾಜದೀಪ್‌ ಸರ್ದೇಸಾಯಿ ಮತ್ತು ರಿಪಬ್ಲಿಕ್‌ ಟಿವಿಯ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ಅವರು ‍ಪ‍ರಸ್ಪರರ ವಿರುದ್ಧ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ರಾಜದೀಪ್‌ ಅವರು ಸುಶಾಂತ್‌ ಸಿಂಗ್ ಸ್ನೇಹಿತೆ ರಿಯಾ ಚಕ್ರವರ್ತಿ ಅವರ ಸಂದರ್ಶನ ನಡೆಸಿದ ನಂತರ ‘ಇಂಡಿಯಾ ಟುಡೆ’ ಹಾಗೂ ‘ರಿಪಬ್ಲಿಕ್‌’ ವಾಹಿನಿಗಳ ನಡುವಿನ ತಿಕ್ಕಾಟ ಇನ್ನಷ್ಟು ದಟ್ಟವಾಗಿ ಗೋಚರಿಸಿತು.

ರಿಪಬ್ಲಿಕ್‌ ವಾಹಿನಿಯು ಸತತವಾಗಿ ಸುಶಾಂತ್‌ ಆತ್ಮಹತ್ಯೆ ಕುರಿತ ಸುದ್ದಿ ಪ್ರಸಾರ ಮಾಡುತ್ತಲೇ ಇತ್ತು. ಇದರ ಮಧ್ಯದಲ್ಲೇ ರಾಜದೀಪ್‌ ಅವರು ರಿಯಾ ಸಂದರ್ಶನ ನಡೆಸಿದ್ದರು. ಆ ಸಂದರ್ಶನದಲ್ಲಿ ರಿಯಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಯಾವುದೇ ಪ್ರಶ್ನೆ ಕೇಳಿರಲಿಲ್ಲ ಎಂದು ಹೇಳಲಾಗುತ್ತಿದೆ. ‘ರಿಯಾ ಅವರನ್ನು ಸಮರ್ಥಿಸಿಕೊಳ್ಳುವ ಉದ್ದೇಶದಿಂದ ಈ ಸಂದರ್ಶನ ನಡೆದಿದೆ’ ಎಂಬ ಆರೋಪಗಳು ಆಗ ಕೇಳಿಬಂದವು. ಇದು, ರಾಜದೀಪ್‌ ಮತ್ತು ಅರ್ನಬ್‌ ನಡುವಿನ ಜಟಾಪಟಿಗೆ ಕಾರಣವಾಯಿತು.

ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಆಗಿರುವ ರಾಜಕೀಯ ಬದಲಾವಣೆಗಳು ಮತ್ತು ಕೆಲವು ಸುದ್ದಿ ವಾಹಿನಿಗಳ ನಿಲುವುಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗುರುತಿಸಿದ್ದ ವೀಕ್ಷಕರು, ಯಾವ ವಾಹಿನಿ ಯಾವ ಪಕ್ಷದ ಪರ ಕೆಲಸ ಮಾಡುತ್ತಿದೆ ಎಂಬುದನ್ನು ಬಹಿರಂಗವಾಗಿ ಹೇಳಲು ಆರಂಭಿಸಿದರು.

ಸಾಮಾಜಿಕ ಜಾಲತಾಣ ಹಾಗೂ ಟಿವಿ ಪರದೆಗಳಿಗೆ ಸೀಮಿತವಾಗಿದ್ದ ಸುದ್ದಿ ವಾಹಿನಿಗಳ ಜಗಳ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿದೆ. ಸೆಪ್ಟೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಮುಂಬೈಯಲ್ಲಿ ಎನ್‌ಡಿಟಿವಿ ಹಾಗೂ ರಿಪಬ್ಲಿಕ್‌ ಟಿವಿ ವಾಹಿನಿಗಳ ವರದಿಗಾರರು ಜಗಳವಾಡಿಕೊಂಡಿದ್ದು ವರದಿಯಾಗಿತ್ತು.

‘ರಾಜಕೀಯ ಮತ್ತು ಸಿದ್ಧಾಂತಗಳ ಸಂಘರ್ಷ’

ಸುದ್ದಿ ವಾಹಿನಿಗಳ ನಡುವಿನ ಈ ಗುದ್ದಾಟವನ್ನು ‘ರಾಜಕೀಯ ಮತ್ತು ಸಿದ್ಧಾಂತಗಳ ಸಂಘರ್ಷ’ ಎಂದು ಮಾಧ್ಯಮ ವಲಯದಲ್ಲೇ ವಿಶ್ಲೇಷಿಸಲಾಗುತ್ತಿದೆ.

‘ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಚರ್ಚಾ ಕಾರ್ಯಕ್ರಮ ಮತ್ತು ಸುದ್ದಿ ವಿಶ್ಲೇಷಣೆಯಲ್ಲಿ ಆಯಾ ವಾಹಿನಿಯ ರಾಜಕೀಯ ಒಲವು– ನಿಲುವುಗಳು ವ್ಯಕ್ತವಾಗುತ್ತಿವೆ. ಸಾಲದೆಂಬಂತೆ, ನಿಷ್ಪಕ್ಷಪಾತ ಧೋರಣೆ ತಳೆಯಬೇಕಾಗಿದ್ದ ವಾಹಿನಿಗಳು ಎಡ–ಬಲ ಸಿದ್ಧಾಂತಗಳಿಗೆ ಜೋತು ಬಿದ್ದಿರುವುದು ಈಗಿನ ಸಂಘರ್ಷಕ್ಕೆ ಕಾರಣ’ ಎಂದು ಹಿರಿಯ ಪತ್ರಕರ್ತರು ವಿಶ್ಲೇಷಿಸುತ್ತಾರೆ.

ಟಿಆರ್‌ಪಿತಿರುಚಿದ ಆರೋಪ

ಮುಂಬೈಯ ಪೊಲೀಸ್‌ ಆಯುಕ್ತ ಪರಮ್‌ಬೀರ್‌ ಸಿಂಗ್‌ ಗುರುವಾರ ಮಾಧ್ಯಮಗೋಷ್ಠಿ ಕರೆದಿದ್ದರು. ಯಾವುದಾದರೂ ಪ್ರಮುಖ ವಿಚಾರದ ಬಗ್ಗೆ ಮಾಹಿತಿ ನೀಡಲು ಆಯುಕ್ತರು ಆಗಾಗ ಮಾಧ್ಯಮಗೋಷ್ಠಿ ಕರೆಯುವುದು ಸಾಮಾನ್ಯ. ಆದರೆ, ಗುರುವಾರ ಕರೆದ ಗೋಷ್ಠಿಯು ಮಾಧ್ಯಮ ಕ್ಷೇತ್ರದಲ್ಲೇ ನಡೆಯುತ್ತಿದೆ ಎನ್ನಲಾದ ಅಕ್ರಮದ ಬಗ್ಗೆ ಮಾಹಿತಿ ನೀಡುವ ಉದ್ದೇಶದ್ದಾಗಿತ್ತು.

‘ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌ (ಟಿಆರ್‌ಪಿ) ತಿರುಚಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಎರಡು ಮರಾಠಿ ವಾಹಿನಿಗಳ ಮುಖ್ಯಸ್ಥರು ಹಾಗೂ ಟಿಆರ್‌ಪಿಯನ್ನು ನಿರ್ಧರಿಸುವ ‘ಹನ್ಸ ಏಜನ್ಸಿ’ಯ ಇಬ್ಬರು ಮಾಜಿ ಸಿಬ್ಬಂದಿ ಬಂಧಿತರು. ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ರಿಪಬ್ಲಿಕ್‌ ಟಿ.ವಿ. ವಾಹಿನಿಯೂ ಆರೋಪಿ. ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಆಯುಕ್ತರು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ನವರು (ಬಿಎಆರ್‌ಸಿ) ಯಾವುದೇ ದೂರಿನಲ್ಲೂ ನಮ್ಮ ವಾಹಿನಿಯ ಹೆಸರನ್ನು ಉಲ್ಲೇಖಿಸಿಲ್ಲ. ಪೊಲೀಸ್‌ ಆಯುಕ್ತರು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಸುಶಾಂತ್‌ ಸಿಂಗ್‌ ಸಾವಿನ ವಿಚಾರವಾಗಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ ಕಾರಣಕ್ಕೆ ನಮ್ಮ ವಾಹಿನಿಯ ವಿರುದ್ಧ ಇಂಥ ಕ್ರಮ ಕೈಗೊಂಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ’ ಎಂದು ರಿಪಬ್ಲಿಕ್‌ ಟಿ.ವಿ. ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ಹೇಳಿದ್ದಾರೆ. ಹನ್ಸ ಏಜನ್ಸಿ ನೀಡಿದ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಟಿಆರ್‌ಪಿ ಜಾಹೀರಾತಿನ ಜೀವಾಳ

ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್‌ (ಟಿಆರ್‌ಪಿ) ವಾಹಿನಿಗಳ ಜಾಹೀರಾತು ದರವನ್ನು ನಿರ್ಧರಿಸುವ ಮಾನದಂಡ. ನಿಗದಿತ ಅವಧಿಯಲ್ಲಿ ಎಷ್ಟು ಜನರು, ಯಾವ ವಾಹಿನಿಯ, ಯಾವ ಕಾರ್ಯಕ್ರಮವನ್ನು ನೋಡುತ್ತಾರೆ ಮತ್ತು ಆ ಕಾರ್ಯಕ್ರಮವನ್ನು ಎಷ್ಟು ಸಮಯ ನೋಡುತ್ತಾರೆ ಎಂಬುದನ್ನು ಆಧರಿಸಿ ಟಿಆರ್‌ಪಿ ನಿಗದಿಯಾಗುತ್ತದೆ.

ಜಾಹೀರಾತು ದರವನ್ನು ನಿಗದಿ ಮಾಡುವ ಮೂಲ ಮಾನದಂಡವಾಗಿರುವ ಕಾರಣ, ದೇಶದ ಜಾಹೀರಾತುದಾರರ ಸೊಸೈಟಿ, ಭಾರತೀಯ ಬ್ರಾಡ್‌ಕಾಸ್ಟಿಂಗ್ ಫೌಂಡೇಶನ್, ಭಾರತೀಯ ಜಾಹೀರಾತು ಏಜೆನ್ಸಿಗಳ ಸಂಘಟನೆಗಳು ಒಟ್ಟಾಗಿ ‘ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್ ಕೌನ್ಸಿಲ್– ಬಿಎಆರ್‌ಸಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡಿವೆ. ಟಿಆರ್‌ಪಿಯನ್ನು ಪರಿಶೀಲಿಸುವ ಕೆಲಸವನ್ನು ಬಿಎಆರ್‌ಸಿ ಮಾಡುತ್ತದೆ.

ದೇಶದ ಎಲ್ಲೆಡೆ ಆಯ್ದ ಮನೆಗಳ ಟಿ.ವಿ.ಯ ಸೆಟ್‌ಬಾಕ್ಸ್‌ಗಳ ಜತೆ ‘ಬಾರೊ–ಮೀಟರ್‌’ ಎಂಬ ಸಾಧನವನ್ನು ಅಳವಡಿಸಲಾಗುತ್ತದೆ. ಆ ಮನೆಯವರು ಯಾವ ಟಿ.ವಿ.ಯಲ್ಲಿ ಏನು ನೋಡುತ್ತಾರೆ ಎಂಬುದರ ಸಂಪೂರ್ಣ ವಿವರ ಬಾರೊ–ಮೀಟರ್‌ನಲ್ಲಿ ದಾಖಲಾಗುತ್ತದೆ. ಆ ವಿವರವನ್ನು ವಿಶ್ಲೇಷಿಸಿ, ಟಿಆರ್‌ಪಿಯನ್ನು ರೂಪಿಸಲಾಗುತ್ತದೆ. ಯಾವ ವಾಹಿನಿಗೆ, ಯಾವ ಕಾರ್ಯಕ್ರಮಕ್ಕೆ ಎಷ್ಟು ಟಿಆರ್‌ಪಿ ದೊರೆತಿದೆ ಎಂಬುದನ್ನು ವಾರಕ್ಕೊಮ್ಮೆ ಬಿಡುಗಡೆ ಮಾಡಲಾಗುತ್ತದೆ. ಎಷ್ಟು ಮಂದಿ ವಾಹಿನಿಯನ್ನು ನೋಡಿದ್ದಾರೆ? ಎಷ್ಟು ಮಂದಿ ಯಾವ ಕಾರ್ಯಕ್ರಮವನ್ನು ನೋಡಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಸುದ್ದಿ ವಾಹಿನಿಗಳ ಟಿಆರ್‌ಪಿ ಸಂಗ್ರಹಿಸಲೂ ಇದೇ ವಿಧಾನ ಅನುಸರಿಸಲಾಗುತ್ತದೆ.

ಟಿಆರ್‌ಪಿಯಿಂದ ಜಾಹಿರಾತಿನವರೆಗೆ

1. ಆಯ್ದ ಮನೆಗಳಲ್ಲಿ ಬಾರೊ–ಮೀಟರ್ ಅಳವಡಿಸಲಾಗಿರುತ್ತದೆ. ಮನೆಯ ಸದಸ್ಯರಿಗೆ ಪ್ರತ್ಯೇಕ ಗುರುತಿನ ಬಟನ್ ನೀಡಿರಲಾಗುತ್ತದೆ. ಯಾರು ಟಿವಿ ನೋಡುತ್ತಿದ್ದಾರೋ ಅವರು ತಮ್ಮ ಗುರುತಿನ ಬಟನ್‌ ಅನ್ನು ಒತ್ತಬೇಕು. ಆಗ ಆ ವ್ಯಕ್ತಿ ಯಾವ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ ಎಂಬುದು ಬಾರೊ–ಮೀಟರ್‌ನಲ್ಲಿ ದಾಖಲಾಗುತ್ತದೆ.

ಶಿಕ್ಷಣ, ಉದ್ಯೋಗ, ಮನೆಯಲ್ಲಿ ಬಳಸುವ ವಸ್ತುಗಳು, ಸೈಕಲ್‌, ದ್ವಿಚಕ್ರವಾಹನ, ಕಾರುಗಳು ಮೊದಲಾದ ಅಂಶಗಳ ಆಧಾರದಲ್ಲಿ ಈ ಕುಟುಂಬಗಳನ್ನು ಆಯ್ಕೆ ಮಾಡಲಾಗುತ್ತದೆ. ದೇಶದ ಎಲ್ಲಾ ವರ್ಗದ ಜನರನ್ನು ಪ್ರತಿನಿಧಿಸುವಂತಹ ಕುಟುಂಬಗಳನ್ನು ಇಲ್ಲಿ ಆಯ್ಕೆ ಮಾಡಲಾಗಿರುತ್ತದೆ. ಈ ಕುಟುಂಬಗಳ/ಜನರ ವೀಕ್ಷಣಾ ವರ್ತನೆಯನ್ನು ಇಡೀ ದೇಶಕ್ಕೆ ಅನ್ವಯಿಸಲಾಗುತ್ತದೆ.

44,000 ಮನೆಗಳಲ್ಲಿ ಬಾರೊ–ಮೀಟರ್‌ ಅಳವಡಿಸಲಾಗಿದೆ

2. ಟಿವಿಗಳಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳಿಗೆ ‘ಅಡಿಯೊ ವಾಟರ್‌ಮಾರ್ಕ್’ ಹಾಕಲಾಗಿರುತ್ತದೆ. ಇವು ಟಿವಿ ವೀಕ್ಷಣೆ ವೇಳೆ ಕಾಣಿಸುವುದೂ ಇಲ್ಲ, ಕೇಳಿಸುವುದೂ ಇಲ್ಲ. ಆದರೆ ಬಾರೊ–ಮೀಟರ್‌ನಂತಹ ಉಪಕರಣಗಳು ಮಾತ್ರ ಇವನ್ನು ಪತ್ತೆ ಮಾಡಬಲ್ಲವು

3. ಬಾರೊ–ಮೀಟರ್ ದಾಖಲಿಸಿದ ದತ್ತಾಂಶಗಳನ್ನು ಬಿಎಆರ್‌ಸಿ ಸಂಗ್ರಹಿಸಿ, ಸಂಸ್ಕರಣೆ ಮಾಡುತ್ತದೆ. ಯಾವ ವರ್ಗದ, ಎಷ್ಟು ಜನರು, ಯಾವ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ ಎಂಬುದನ್ನು ಲೆಕ್ಕಹಾಕಲಾಗುತ್ತದೆ. ಆ ಸಂಖ್ಯೆಯನ್ನು ಇಡೀ ದೇಶದ ಟಿವಿ ವೀಕ್ಷಕರಿಗೆ ಅನ್ವಯಿಸಿ ಟಿಆರ್‌ಪಿ ಸಿದ್ಧಪಡಿಸಲಾಗುತ್ತದೆ. ಟಿಆರ್‌ಪಿ ಬಿಡುಗಡೆ ಮಾಡಲಾಗುತ್ತದೆ

4. ಟಿಆರ್‌ಪಿ ಆಧಾರದ ಮೇಲೆ ವಾಹಿನಿಗಳ ಮತ್ತು ಕಾರ್ಯಕ್ರಮಗಳ ರೇಟಿಂಗ್ ನಿರ್ಧಾರವಾಗುತ್ತದೆ. ಹೆಚ್ಚು ಟಿಆರ್‌ಪಿ ಇರುವ ವಾಹಿನಿ ಮತ್ತು ಹೆಚ್ಚು ಟಿಆರ್‌ಪಿ ಇರುವ ಕಾರ್ಯಕ್ರಮದಲ್ಲಿ ಜಾಹಿರಾತು ನೀಡಲು, ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಯಾವ ಕಾರ್ಯಕ್ರಮಗಳಿಗೆ ಹೆಚ್ಚಿನ ಟಿಆರ್‌ಪಿ ಸಿಕ್ಕಿದೆಯೋ ಅಂತಹ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ

ತಿರುಚುವಿಕೆ ಹೇಗೆ?

ಟಿಆರ್‌ಪಿ ಸಂಗ್ರಹಿಸಲು ದೇಶದಲ್ಲಿ ಕೇವಲ 44,000 ಮನೆಗಳಲ್ಲಿ ಮಾತ್ರ ಬಾರೊ ಮೀಟರ್ ಅಳವಡಿಸಲಾಗಿರುತ್ತದೆ. ಈ ಮನೆಗಳಿಂದ ಬಂದ ದತ್ತಾಂಶವನ್ನು ಇಡೀ ದೇಶಕ್ಕೆ ಅನ್ವಯಿಸಲಾಗುತ್ತದೆ. ರಾಷ್ಟ್ರೀಯ ವಾಹಿನಿಗಳು, ಇಂಗ್ಲಿಷ್ ಸುದ್ದಿವಾಹಿನಿಗಳು ಮತ್ತು ಹಿಂದಿ ವಾಹಿನಿಗಳ ಟಿಆರ್‌ಪಿ ಸಂಗ್ರಹಕ್ಕೆ ಆಯ್ಕೆ ಮಾಡಿಕೊಂಡ ಮನೆಗಳ ಸಂಖ್ಯೆ ಸ್ವಲ್ಪ ಹೆಚ್ಚು ಇರುತ್ತದೆ. ಆದರೆ ಪ್ರಾದೇಶಿಕ ವಾಹಿನಿಗಳಿಗಾಗಿ ಆಯ್ಕೆ ಮಾಡಿಕೊಂಡ ಮನೆಗಳ ಸಂಖ್ಯೆ ಕೆಲವೇ ನೂರು ಇರುತ್ತದೆ. ಒಂದು ವಾಹಿನಿಯು ತಮ್ಮ ಕಾರ್ಯಕ್ರಮ ವೀಕ್ಷಿಸುವಂತೆ ಒಂದೆರಡು ಮನೆಗಳ ಜನರನ್ನು ಪುಸಲಾಯಿಸಿದರೆ, ಅವರ ಟಿಆರ್‌ಪಿ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತದೆ.

ಉದಾಹರಣೆಗೆ: ಒಂದು ಭಾಷೆಯ ವಾಹಿನಿಗಳ ಟಿಆರ್‌ಪಿ ಸಂಗ್ರಹಕ್ಕೆ ಆಯ್ಕೆ ಮಾಡಿಕೊಂಡ ಮನೆಗಳ ಸಂಖ್ಯೆ 800 ಇರುತ್ತದೆ. ಆದರೆ ಆ ಭಾಷೆಯನ್ನಾಡುವ ಜನರ ಸಂಖ್ಯೆ 4 ಕೋಟಿ ಇರುತ್ತದೆ. 800 ಮನೆಗಳ ದತ್ತಾಂಶವನ್ನು 2 ಕೋಟಿ ಜನರಿಗೆ ಅನ್ವಯಿಸಲಾಗುತ್ತದೆ. 800 ಮನೆಗಳಲ್ಲಿ 80 ಮನೆಯವರು ಒಂದು ಕಾರ್ಯಕ್ರಮವನ್ನು ವೀಕ್ಷಿಸಿದರೆ, 80 ಲಕ್ಷ ಜನರು ಅದನ್ನು ವೀಕ್ಷಿಸಿದಂತಾಗುತ್ತದೆ. ಆ ಕಾರ್ಯಕ್ರಮ ಪ್ರಸಾರವಾಗುತ್ತಿರುವ ವಾಹಿನಿಯವರು, ಆ ಕಾರ್ಯಕ್ರಮವನ್ನು ವೀಕ್ಷಿಸುವಂತೆ 8 ಮನೆಯವರನ್ನು (ಬಾರೊ–ಮೀಟರ್‌ ಇರುವ ಮನೆ) ಪುಸಲಾಯಿಸುತ್ತಾರೆ ಎಂದಿಟ್ಟುಕೊಳ್ಳಿ. ಆ ಕಾರ್ಯಕ್ರಮ ವೀಕ್ಷಿಸುವ ಮನೆಯವರ ಸಂಖ್ಯೆ 88 ಆಗುತ್ತದೆ. 88 ಮನೆಯನ್ನು 2 ಕೋಟಿಗೆ ಅನ್ವಯಿಸಿದರೆ, 88 ಲಕ್ಷವಾಗುತ್ತದೆ. ಹೀಗೆ ವೀಕ್ಷಕರನ್ನು ಪುಸಲಾಯಿಸುವ ಮೂಲಕ, ಸಂಗ್ರಹದ ಹಂತದಲ್ಲೇ ಟಿಆರ್‌ಪಿಯನ್ನು ತಿರುಚಲಾಗುತ್ತದೆ.

ಅಕ್ರಮ ಪತ್ತೆ ಮತ್ತು ದಂಡಕ್ಕೆ ಅವಕಾಶ

ಟಿಆರ್‌ಪಿ ತಿರುಚುವಿಕೆಯನ್ನು ಪತ್ತೆ ಮಾಡಲು ಬಿಎಆರ್‌ಸಿ ಪ್ರತ್ಯೇಕ ವ್ಯವಸ್ಥೆಯನ್ನು ಹೊಂದಿದೆ. ಈ ದತ್ತಾಂಶಗಳ ಸಂಗ್ರಹ ಮತ್ತು ನಿರ್ವಹಣೆಗೆ ಪ್ರತ್ಯೇಕ ಏಜೆನ್ಸಿಗಳನ್ನು ನೇಮಿಸಲಾಗಿದೆ. ಒಂದೇ ಪ್ರದೇಶದಲ್ಲಿ ಬೇರೆ–ಬೇರೆ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಒಂದೇ ಏಜೆನ್ಸಿ ಬಳಿ ಇಡೀ ದೇಶದ ದತ್ತಾಂಶ ಸಂಗ್ರಹ ಇರುವುದಿಲ್ಲ. ವಾಹಿನಿಯವರು ಮತ್ತು ಇತರರು ಇಂಥದ್ದೇ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಬಾರೊ–ಮೀಟರ್ ಇರುವ ಮನೆಯವರನ್ನು ಒತ್ತಾಯಿಸಿದ್ದಲ್ಲಿ, ಅದನ್ನು ಈ ಏಜನ್ಸಿಗಳು ಪತ್ತೆ ಮಾಡುತ್ತವೆ.

ಬಿಎಆರ್‌ಸಿ ಜಾಗೃತದಳಕ್ಕೂ ದೂರು ನೀಡಬಹುದು. ಈ ದೂರುಗಳನ್ನು ಪರಿಶೀಲಿಸಿ, ಅಕ್ರಮ ನಡೆದಿದ್ದರೆ ಅದನ್ನು ಪತ್ತೆ ಮಾಡಲಾಗುತ್ತದೆ. ಅಕ್ರಮ ನಡೆಸಿದವರಿಗೆ ದಂಡ ವಿಧಿಸಲಾಗುತ್ತದೆ. ಅಕ್ರಮ ಪರಿಶೀಲನೆ ಶುಲ್ಕವನ್ನೂ (₹ 4 ಲಕ್ಷದಿಂದ ₹ 12.5 ಲಕ್ಷದವರೆಗೆ) ವಿಧಿಸಲಾಗುತ್ತದೆ.

1. ಮೊದಲ ಬಾರಿ ತಪ್ಪಿಗೆ ಲಿಖಿತ ಎಚ್ಚರಿಕೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ₹ 25 ಲಕ್ಷದವರೆಗೆ ದಂಡ ವಿಧಿಸಬಹುದು

2. ಎರಡನೇ ಬಾರಿ ತಪ್ಪಿಗೆ ಲಿಖಿತ ಎಚ್ಚರಿಕೆ, ದಂಡ ವಿಧಿಸಲು ಅವಕಾಶವಿದೆ. ತಪ್ಪಿತಸ್ಥರ ಹೆಸರನ್ನು ಬಿಎಆರ್‌ಸಿ ಜಾಲತಾಣದಲ್ಲಿ ನಾಲ್ಕು ವಾರ ಪ್ರದರ್ಶಿಸಲಾಗುತ್ತದೆ.₹ 50 ಲಕ್ಷದವರೆಗೆ ದಂಡ ವಿಧಿಸಬಹುದು

3. ಮೂರನೇ ಬಾರಿ ತಪ್ಪಿಗೆ ಲಿಖಿತ ಎಚ್ಚರಿಕೆ, ದಂಡ ವಿಧಿಸಲಾಗುತ್ತದೆ. ತಪ್ಪಿತಸ್ಥರ ಹೆಸರನ್ನು ಬಿಎಆರ್‌ಸಿ ಜಾಲತಾಣದಲ್ಲಿ ಒಂದು ತಿಂಗಳಮಟ್ಟಿಗೆ ಪ್ರದರ್ಶಿಸಲಾಗುತ್ತದೆ. ಒಂದು ತಿಂಗಳ ಮಟ್ಟಿಗೆ ಟಿಆರ್‌ಪಿ ಪಟ್ಟಿಯಿಂದ ಹೊರಗಿಡಲಾಗುತ್ತದೆ. ₹1 ಕೋಟಿವರೆಗೆ ದಂಡ ವಿಧಿಸಬಹುದು

4. ನಾಲ್ಕನೇ ಬಾರಿ ತಪ್ಪಿಗೆ ‘ಎಂಡ್‌ ಯೂಸ್‌ ಲೈಸನ್ಸ್ ಅಗ್ರಿಮೆಂಟ್’ ಅನ್ನು ರದ್ದುಪಡಿಸಲಾಗುತ್ತದೆ. ವಾಹಿನಿಯು ಶಾಶ್ವತವಾಗಿ ಟಿಆರ್‌ಪಿಯಿಂದ ಹೊರಗೆ ಉಳಿಯಬೇಕಾಗುತ್ತದೆ


ಆಧಾರ: ಬ್ರಾಡ್‌ಕಾಸ್ಟ್‌ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‌–ಬಿಎಆರ್‌ಸಿ, ಬಿಎಆರ್‌ಸಿಯ ನೀತಿಸಂಹಿತೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT