ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಓಡಿ ಹೋದವರ ಬೆನ್ನು ಹತ್ತಿ

Last Updated 30 ಮೇ 2021, 20:15 IST
ಅಕ್ಷರ ಗಾತ್ರ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಸುಮಾರು ₹14,000 ಕೋಟಿ ವಂಚನೆ ಪ್ರಕರಣದ ಆರೋಪಿ, ಭಾರತದಿಂದ ಪರಾರಿಯಾಗಿದ್ದ ಮೆಹುಲ್‌ ಚೋಕ್ಸಿಯ ಹಸ್ತಾಂತರ ಶೀಘ್ರ ಸಾಧ್ಯವಾಗುವಂತೆ ಕಾಣಿಸುತ್ತಿದೆ. ಆ್ಯಂಟಿಗಾ–ಬಾರ್ಬುಡಾಕ್ಕೆ ಪರಾರಿಯಾಗಿದ್ದ ಚೋಕ್ಸಿ ಅಲ್ಲಿನ ಪೌರತ್ವ ಪಡೆದುಕೊಂಡಿದ್ದಾರೆ. ಆದರೆ, ಕಳೆದ ವಾರ ಅಲ್ಲಿಂದಲೂ ತಪ್ಪಿಸಿಕೊಂಡ ಅವರು ಡೊಮಿನಿಕಾ ದ್ವೀಪಕ್ಕೆ ಹೋಗಿದ್ದರು. ಅಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಚೋಕ್ಸಿ ಹಸ್ತಾಂತರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊತ್ತ ವಿಮಾನವು ಡೊಮಿನಿಕಾದ ಡಗ್ಲಾಸ್‌–ಚಾರ್ಲ್ಸ್‌ ವಿಮಾನ ನಿಲ್ದಾಣ ತಲುಪಿದೆ ಎಂದು ಆ್ಯಂಟಿಗಾ–ಬಾರ್ಬುಡಾದ ಪ್ರಧಾನಿ ಗ್ಯಾಸ್ಟನ್‌ ಬ್ರೌನ್‌ ಭಾನುವಾರ ಹೇಳಿದ್ದಾರೆ. ಚೋಕ್ಸಿ ಅವರನ್ನು ಮರಳಿ ಆ್ಯಂಟಿಗಾ–ಬಾರ್ಬುಡಾಕ್ಕೆ ಕಳುಹಿಸಬೇಡಿ, ನೇರವಾಗಿ ಭಾರತಕ್ಕೆ ಹಸ್ತಾಂತರಿಸಿ ಎಂದೂ ಬ್ರೌನ್‌ ಅವರು ಡೊಮಿನಿಕಾ ಪ್ರಧಾನಿಗೆ ಹೇಳಿದ್ದಾರೆ.

ಚೋಕ್ಸಿ ಹಸ್ತಾಂತರ ಪ್ರಕ್ರಿಯೆಯಲ್ಲಿ ಈಗ ಆಗಿರುವ ಬೆಳವಣಿಗೆಗಳು, ಬೇರೆ ದೇಶಗಳಿಗೆ ಪರಾರಿಯಾದ ಇತರರ ಹಸ್ತಾಂತರದ ಬಗ್ಗೆಯೂ ಚರ್ಚೆಯಾಗುವಂತೆ ಮಾಡಿದೆ.

ಭಾರತದಲ್ಲಿ ಅಪರಾಧ ಕೃತ್ಯ ಎಸಗಿ ಬೇರೆ ದೇಶಗಳಿಗೆ ಪರಾರಿಯಾಗಿರುವ 72 ಮಂದಿಯನ್ನು ಮರಳಿ ಕರೆತರುವ ಪ್ರಯತ್ನವನ್ನು ಭಾರತ ಸರ್ಕಾರ ನಡೆಸುತ್ತಿದೆ ಎಂಬ ಮಾಹಿತಿಯನ್ನು 2020ರ ಫೆಬ್ರುವರಿಯಲ್ಲಿ ರಾಜ್ಯಸಭೆಗೆ ನೀಡಲಾಗಿತ್ತು. ಹೀಗೆ ಪರಾರಿಯಾದವರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಯತ್ನವು ಸುದೀರ್ಘ ಮತ್ತು ಅದರಲ್ಲಿ ಭಾರತಕ್ಕೆ ಈವರೆಗೆ ಸಿಕ್ಕ ಯಶಸ್ಸು ಅತ್ಯಲ್ಪ.2015ರ ಬಳಿಕ ಇಬ್ಬರನ್ನು ಮಾತ್ರ ಹಿಂದಕ್ಕೆ ಕರೆಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಿದೆ ಎನ್ನಲಾಗಿದೆ.

ಆರೋಪಿಯು ನೆಲೆ ಕಂಡುಕೊಂಡ ದೇಶದಲ್ಲಿ ಅಲ್ಲಿನ ಕಾನೂನು ಪ್ರಕಾರವೇ ಹೋರಾಟ ನಡೆಸಿ ಕರೆ ತರಬೇಕಾಗುತ್ತದೆ. ಸ್ವದೇಶಕ್ಕೆ ಮರಳಿದರೆ ತಮ್ಮ ಜೀವಕ್ಕೇ ಅಪಾಯ ಇದೆ ಎಂದು ಇಂತಹ ಆರೋಪಿಗಳು ವಾದಿಸುತ್ತಾರೆ. ಮಾನವ ಹಕ್ಕುಗಳಿಗೆ ಹೆಚ್ಚು ಮಹತ್ವ ಕೊಡುವ ದೇಶಗಳು ಈ ದಿಸೆಯಲ್ಲಿಯೂ ಸಮಗ್ರವಾದ ಪರಿಶೀಲನೆಗೆ ಮುಂದಾಗುತ್ತವೆ. ಸಾಧ್ಯವಿರುವ ಎಲ್ಲ ಕಾನೂನು ಅವಕಾಶಗಳನ್ನು ಬಳಸಿಕೊಳ್ಳುವ ಆರೋಪಿಗಳು, ಕೆಳ ನ್ಯಾಯಾಲಯಗಳ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಲೇ ಇರುತ್ತಾರೆ. ಹಾಗಾಗಿ, ಹಸ್ತಾಂತರ ಪ್ರಕ್ರಿಯೆಯು ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆ.

ಪಕ್ಷಗಳ ಕೆಸರೆರಚಾಟ

ಉದ್ಯಮಿಗಳಾದ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರು ಸಾಲ ಮರುಪಾವತಿ ಮಾಡದೆ, ದೇಶಬಿಟ್ಟು ಪರಾರಿಯಾಗುವಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ನೆರವು ನೀಡಿದೆ ಎಂದು 2018ರಲ್ಲಿ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು.

ವಿಜಯ ಮಲ್ಯ ಅವರು ದೇಶಬಿಟ್ಟು ಪರಾರಿಯಾಗುವ ಮುನ್ನ ಸಂಸತ್ ಭವನದಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಅರುಣ್ ಜೇಟ್ಲಿ ಅವರು ಈ ಆರೋಪವನ್ನು ತಳ್ಳಿಹಾಕಿದ್ದರು. ಈ ವಿಚಾರವು ಸಂಸತ್ ಕಲಾಪದಲ್ಲಿಯೂ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಆರೋಪಗಳಿಗೆ ಯಾವುದೇ ತಾರ್ಕಿಕ ಅಂತ್ಯ ದೊರೆತಿರಲಿಲ್ಲ.

2018ರ ಜನವರಿ ವೇಳೆಗೆ ಪಿಎನ್‌ಬಿ ಬ್ಯಾಂಕ್ ವಂಚನೆ ಹಗರಣದ ಪ್ರಮುಖ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರು ದೇಶವನ್ನು ಬಿಟ್ಟು ಪರಾರಿಯಾಗಿದ್ದರು. ‘ಇವರ ವಂಚನೆಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು 2017ರ ಜೂನ್‌ನಲ್ಲಿಯೇ ಆದಾಯ ತೆರಿಗೆ ತನಿಖಾ ವರದಿಯನ್ನು ಸಿದ್ಧಪಡಿಸಿತ್ತು. ಆದರೆ ಇಬ್ಬರು ವಂಚಕರೂ ದೇಶವನ್ನು ಬಿಟ್ಟು ಹೋಗುವವರೆಗೂ ಈ ವರದಿಯನ್ನು ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಹಣಕಾಸು ಸಚಿವಾಲಯದ ಗಂಭೀರ ವಂಚನೆಗಳ ತನಿಖಾ ಕಚೇರಿಗೆ ನೀಡಿರಲಿಲ್ಲ. ವರದಿ ಸಲ್ಲಿಸದೇ ಇರುವ ಮೂಲಕ, ವಂಚಕರು ದೇಶವನ್ನು ಬಿಟ್ಟು ಪರಾರಿಯಾಗಲು ಅವಕಾಶ ಮಾಡಿಕೊಡಲಾಯಿತು’ ಎಂದು ಕಾಂಗ್ರೆಸ್‌ನ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದರು.

‘ಈ ವಂಚನೆ ಬಗ್ಗೆ ಅರಿವಿದ್ದ ಕಾರಣದಿಂದಲೇ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮುಖ್ಯಸ್ಥ ಸುಶೀಲ್ ಚಂದ್ರ ಅವರ ಸೇವೆಯನ್ನು ಎರಡು ಬಾರಿ ವಿಸ್ತರಿಸಲಾಗಿತ್ತು. ಈ ಮೂಲಕ ಈ ವಂಚನೆ ಹಗರಣ ಬೆಳಕಿಗೆ ಬರದಂತೆ ನೋಡಿಕೊಳ್ಳಲಾಯಿತು. ಈ ವಂಚಕರು ಪರಾರಿಯಾಗಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಟ್ರಾವೆಲ್ ಏಜೆನ್ಸಿಯಂತೆ ಕೆಲಸ ಮಾಡಿತು’ ಎಂದು ಸುರ್ಜೇವಾಲಾ ಆರೋಪಿಸಿದ್ದರು.

ಇದನ್ನು ಬಿಜೆಪಿ ನಿರಾಕರಿಸಿತ್ತು. ‘ಈ ಎಲ್ಲಾ ವಂಚಕರು ಕಾಂಗ್ರೆಸ್ ನೇತೃತ್ವದ ಯುಪಿಎ-2 ಅವಧಿಯಲ್ಲಿ ಸಾಲ ಪಡೆದಿದ್ದರು. ಕಾಂಗ್ರೆಸ್ ಸರ್ಕಾರವೇ ಇವರಿಗೆ ಅಕ್ರಮವಾಗಿ ಸಾಲ ನೀಡಿತ್ತು. ಈಗ ದೇಶಕ್ಕೆ ನರೇಂದ್ರ ಮೋದಿ ಎಂಬ ಹೊಸ ಕಾವಲುಗಾರ ಬಂದಿದ್ದಾನೆ. ತಾವು ಸಿಲುಕಿಬೀಳುತ್ತೇವೆ ಎಂಬ ಭಯದಿಂದ ಈ ವಂಚಕರೆಲ್ಲಾ ದೇಶಬಿಟ್ಟು ಹೋಗಿದ್ದಾರೆ’ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಮಜಾಯಿಸಿ ನೀಡಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣ ಒಂದರಲ್ಲಿ ಆರೋಪಿಯಾಗಿರುವ ಉದ್ಯಮಿ ಸಂಜಯ್ ಭಂಡಾರಿ, ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಆಪ್ತ. 2012ರಲ್ಲಿ ದೆಹಲಿ ಮತ್ತು ಪ್ಯಾರಿಸ್‌ ಮಧ್ಯೆ ವಾದ್ರಾಗಾಗಿ ಭಂಡಾರಿ ವಿಮಾನದ ಟಿಕೆಟ್ ಖರೀದಿಸಿದ್ದರು ಎಂಬುದು ಜಾರಿ ನಿರ್ದೇಶನಾಲಯದ ಆರೋಪ. ಆರೋಪ ಪಟ್ಟಿಯಲ್ಲಿಯೂ ಇದು ದಾಖಲಾಗಿದೆ. ವಾದ್ರಾ ಮತ್ತು ಸಂಜಯ್ ಮಧ್ಯೆ ವಿವಿಧ ವ್ಯವಹಾರಗಳು ನಡೆದಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಸಂಜಯ್ ಪರಾರಿಯಾಗಿ ತಲೆಮರೆಸಿಕೊಳ್ಳಲು ಕಾಂಗ್ರೆಸ್ ನೆರವು ನೀಡಿದೆ ಎಂಬುದು ಬಿಜೆಪಿ ಆಪಾದನೆ.

ಡೊಮಿನಿಕಾದಿಂದ ಮೆಹುಲ್ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಗಡೀಪಾರು ಮಾಡಿ ಎಂದು ಆ್ಯಂಟಿಗಾ ಸರ್ಕಾರ ಹೇಳಿರುವುದಕ್ಕೆ, ಅಲ್ಲಿನ ವಿರೋಧ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ಚೋಕ್ಸಿಯಿಂದ ದೇಣಿಗೆ ದೊರೆಯಬಹುದು ಎಂಬ ಕಾರಣಕ್ಕೆ ಗಡೀಪಾರಿಗೆ ವಿರೋಧ ಪಕ್ಷ ಅಡ್ಡಿ ಮಾಡುತ್ತಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ನೀರವ್ ಮೋದಿ:

₹14,000 ಕೋಟಿ – ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ

ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಮಾಡಿ ಲಂಡನ್‌ಗೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಅವರು ಭಾರತಕ್ಕೆ ಹಸ್ತಾಂತರವಾಗುವ ಹಾದಿಯಲ್ಲಿದ್ದಾರೆ. ಹಸ್ತಾಂತರ ತಡೆಗೆ ಕಳೆದ ಏಪ್ರಿಲ್‌ನಲ್ಲಿ ಮೋದಿ ಅವರು ಲಂಡನ್ ಕೋರ್ಟ್‌ನಲ್ಲಿ ನಡೆಸಿದ ಹೋರಾಟ ಮುಕ್ತಾಯವಾಗಿದೆ. ನೀರವ್ ಮೋದಿಯನ್ನು ಭಾರತಕ್ಕೆ ಕಳುಹಿಸಲು ಲಂಡನ್ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ನೀರವ್ ಛಲ ಬಿಡದೆ ಮತ್ತೆ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ. 2017ರಲ್ಲಿ ಅವರು ಪಲಾಯನ ಮಾಡಿದ್ದರು. ಹಸ್ತಾಂತರ ಮಾಡುವಂತೆ 2018ರಿಂದಲೂ ಲಂಡನ್‌ಗೆ ಭಾರತ ಮನವಿ ಮಾಡುತ್ತಿದೆ. ಸಂಬಂಧಿ ಮೆಹುಲ್ ಚೋಕ್ಸಿ ಜೊತೆಗೂಡಿ ಈ ವಂಚನೆ ಎಸಗಿದ್ದರು.

ವಿಜಯ ಮಲ್ಯ: ₹9,000 ಕೋಟಿ – ವಿವಿಧ ಬ್ಯಾಂಕ್‌ಗಳಿಗೆ ವಂಚನೆ

ಮದ್ಯದ ದೊರೆ ವಿಜಯ ಮಲ್ಯ ಬ್ಯಾಂಕ್‌ಗಳಿಗೆ ವಂಚಿಸಿ 2016ರ ಮಾರ್ಚ್‌ನಲ್ಲಿ ಭಾರತ ತೊರೆದಿದ್ದರು. ಆ ವೇಳೆ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಸದ್ಯ ಲಂಡನ್‌ನಲ್ಲಿರುವ ಮಲ್ಯ ಅವರು ಹಸ್ತಾಂತರ ತಡೆಗೆ ಅಲ್ಲಿನ ಕೋರ್ಟ್‌ನಲ್ಲಿ ನಡೆಸಿದ ಕಾನೂನು ಹೋರಾಟದಲ್ಲಿ ಸೋತಿದ್ದಾರೆ. ಭಾರತಕ್ಕೆ ಅವರನ್ನು ಹಸ್ತಾಂತರಿಸಲು ಬ್ರಿಟನ್ ಸರ್ಕಾರ ನೀಡುವ ಅಂತಿಮ ಅನುಮತಿಗೆ ಕಾಯಲಾಗುತ್ತಿದೆ.

ನಿತಿನ್ ಸಂದೇಸರ- ₹15,600 ಕೋಟಿ – ಬ್ಯಾಂಕ್‌ ವಂಚನೆ

ಬ್ಯಾಂಕಿಂಗ್ ವಂಚನೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಉದ್ಯಮಿ ನಿತಿನ್ ಸಂದೇಸರ, ಅವರ ಪತ್ನಿ ದೀಪ್ತಿ ಸಂದೇಸರ ಮತ್ತು ಸೋದರ ಮಾವ ಹಿತೇಶ್ ಪಟೇಲ್ ಅವರು ಭಾರತಕ್ಕೆ ಬೇಕಾಗಿದ್ದಾರೆ. ಸಂದೇಸರ ಅವರು ಪ್ರವರ್ತಕರಾಗಿದ್ದ ಸ್ಟರ್ಲಿಂಗ್ ಬಯೊಟೆಕ್ ಗ್ರೂಪ್ ಜೊತೆ ಹಗರಣ ತಳಕು ಹಾಕಿಕೊಂಡಿದೆ. ಕಳೆದ ವರ್ಷ ಇವರನ್ನು ದೇಶಭ್ರಷ್ಟ ವಂಚಕರು ಎಂದು ಸರ್ಕಾರ ಘೋಷಿಸಿತ್ತು. ಈ ಮೂವರೂ 2017ರಲ್ಲಿ ನೈಜೀರಿಯಾಗೆ ಪಲಾಯನ ಮಾಡಿದ್ದರು. ಭಾರತವು ಇವರ ಹಸ್ತಾಂತರಕ್ಕೆ ಮಾಡಿದ್ದ ಮನವಿಯನ್ನು ನೈಜೀರಿಯಾ ಸರ್ಕಾರ 2019ರಲ್ಲಿ ತಿರಸ್ಕರಿಸಿದೆ. ಎಂಬ ಮಾಹಿತಿಯನ್ನು ಇದೇ ಫೆಬ್ರುವರಿಯಲ್ಲಿ ಭಾರತದ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ಜತಿನ್ ಮೆಹ್ತಾ- ₹6,500 ಕೋಟಿ – ಬ್ಯಾಂಕ್ ವಂಚನೆ

ವಿಸ್ಡಮ್‌ ಡೈಮಂಡ್ಸ್ ಅಂಡ್ ಜ್ಯುವೆಲರ್ಸ್ ಪ್ರವರ್ತಕ ಜತಿನ್ ಮೆಹ್ತಾ ಅವರು ಬ್ಯಾಂಕ್ ವಂಚನೆ ಪ್ರಕರಣದಲ್ಲಿ 2013ರಲ್ಲಿಯೇ ದೇಶ ತೊರೆದು ಕೆರಿಬಿಯನ್ ದ್ವೀಪ ಸೇಂಟ್ ಕಿಟ್ಸ್‌ನಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ಇವರು ಸೇಂಟ್ ಕಿಟ್ಸ್ ಮತ್ತು ಲಂಡನ್ ಮಧ್ಯೆ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. 2020ರ ಮಾಹಿತಿ ಪ್ರಕಾರ, ಆಗ್ನೇಯ ಐರೋಪ್ಯ ದೇಶವಾದ ಮಾಂಟೆನಿಗ್ರೊದಲ್ಲಿ ಕಾಯಂ ಆಗಿ ನೆಲೆಸುವ ಸಾಧ್ಯತೆ ಇದೆ. ಅಲ್ಲಿ ಅವರು ಹೊಸ ಉದ್ಯಮ ಆರಂಭಿಸಿದ್ದಾರೆ.

ಸಂಜಯ್ ಭಂಡಾರಿ- ₹4,000 ಕೋಟಿ – ಅಕ್ರಮ ಹಣ ವರ್ಗಾವಣೆ ಪ್ರಕರಣ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತಕ್ಕೆ ಬೇಕಿರುವ ಉದ್ಯಮಿ ಸಂಜಯ್ ಭಂಡಾರಿ 2016ರಲ್ಲಿ ಬ್ರಿಟನ್‌ಗೆ ಪಲಾಯನ ಮಾಡಿದ್ದರು. ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ವಿರುದ್ಧ ಲಂಡನ್ ಕೋರ್ಟ್‌ನಲ್ಲಿ ಹೋರಾಟ ನಡೆಸುತ್ತಿದ್ದು, ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಭಂಡಾರಿ ಹಾಗೂ ರಾಬರ್ಟ್ ವಾದ್ರಾ ನಡುವೆ ವ್ಯವಹಾರದ ನಂಟು ಇದೆ ಎಂಬ ಆರೋಪ ಆಗ ಕೇಳಿಬಂದಿತ್ತು. ವಾದ್ರಾ ಇದನ್ನು ಅಲ್ಲಗಳೆದಿದ್ದರು.

ಪಾರೇಖ್ ಸಹೋದರರು- ₹7,200 ಕೋಟಿ – ವಿದೇಶಿ ವಿನಿಮಯ ಹಗರಣ

ಕೋಲ್ಕತ್ತದ ಶ್ರೀಗಣೇಶ್ ಜ್ಯುವೆಲರಿ ಹೌಸ್‌ನ ಪ್ರವರ್ತಕರಾದ ನಿಲೇಶ್ ಪಾರೇಖ್, ಉಮೇಶ್ ಪಾರೇಖ್ ಮತ್ತು ಕಮಲೇಶ್ ಪಾರೇಖ್ ಸಹೋದರರು ವಿವಿಧ ಬ್ಯಾಂಕ್‌ಗಳಿಗೆ ವಂಚಿಸಿದ ಹಾಗೂ ಅಕ್ರಮವಾಗಿ ವಿದೇಶಿ ವಿನಿಮಯ ವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಇವರಿಗೆ ಜಾರಿ ನಿರ್ದೇಶನಾಲಯವು ಫೆಮಾ ಕಾಯ್ದೆಯಡಿ
ನೋಟಿಸ್ ನೀಡಿದೆ. ಕೋಲ್ಕತ್ತದಲ್ಲಿರುವ ಇವರ 48 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮೂರು ವರ್ಷಗಳ ಹಿಂದೆ ನಿಲೇಶ್ ಪಾರೇಖ್ ಅವರನ್ನು ಸಿಬಿಐ
ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಲಲಿತ್ ಮೋದಿ- ₹753 ಕೋಟಿ – ಬಿಸಿಸಿಐಗೆ ವಂಚನೆ

ಐಪಿಎಲ್ ಶುರು ಮಾಡಿದ ಖ್ಯಾತಿಯ ಲಲಿತ್ ಮೋದಿ ಅವರು ಬಿಸಿಸಿಐಗೆ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಜಾರಿ ನಿರ್ದೇಶನಾಲಯವು ಇವರ ಮೇಲೆ ಪ್ರಕರಣ ದಾಖಲಿಸುವುದಕ್ಕೆ ಮುನ್ನ, 2010ರ ಮೇ ತಿಂಗಳಿನಲ್ಲಿ ಭಾರತದಿಂದ ಪರಾರಿಯಾದರು. ಲಂಡನ್‌ಗೆ ತೆರಳಿದ ಅವರು, ಭಾರತದಲ್ಲಿ ತಮ್ಮ ಜೀವಕ್ಕೆ ಅಪಾಯವಿದೆ ಎಂಬ ಕಾರಣ ನೀಡಿದ್ದರು. ಈಗಲೂ ಅವರು ಲಂಡನ್‌ನಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ.

7 ವರ್ಷಗಳ ಕಾಲ ಪೊಲೀಸರ ತನಿಖೆ ಏನೂ ಪ್ರಗತಿ ಕಂಡಿರಲಿಲ್ಲ. ತನಿಖೆ ತಡವಾದ ಕಾರಣ, ರೆಡ್‌ಕಾರ್ನರ್ ನೋಟಿಸ್ ನೀಡುವಂತೆ ಸಿಬಿಐ ಮಾಡಿದ ಮನವಿಯನ್ನು ಇಂಟರ್‌ಪೋಲ್ ತಿರಸ್ಕರಿಸಿತ್ತು. ಅವರು ಓಡಿಹೋದ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ ಭಾರತವು ಹಸ್ತಾಂತರದ ಕೋರಿಕೆ ಸಲ್ಲಿಸಿತ್ತು.

ಮೆಹುಲ್ ಚೋಕ್ಸಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ನೀರವ್ ಮೋದಿ ಜೊತೆ ಸಹ ಆರೋಪಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಅವರು ಭಾರತದ ತನಿಖಾ ಸಂಸ್ಥೆಗಳಿಗೆ ಸವಾಲಾಗಿದ್ದರು. ಆದರೆ ಇತ್ತೀಚೆಗೆ ಕ್ಯೂಬಾಗೆ ಪಲಾಯನ ಮಾಡುವ ವೇಳೆ ಡೊಮಿನಿಕಾದಲ್ಲಿ ಸಿಕ್ಕಿಬಿದ್ದಿರುವ ಅವರನ್ನು ಭಾರತಕ್ಕೆ ನೇರವಾಗಿ ಹಸ್ತಾಂತರ ಮಾಡಲು ಅಥವಾ ಆ್ಯಂಟಿಗಾ ಮೂಲಕ ಹಸ್ತಾಂತರಿಸಲು ಡೊಮಿನಿಕಾ ಸರ್ಕಾರ ನಿರ್ಧರಿಸಿದೆ. ಚೋಕ್ಸಿ ಅವರು ಹಗರಣ ಬಯಲಿಗೆ ಬರುವ ಕೆಲವು ದಿನದ ಮುನ್ನ ಆ್ಯಂಟಿಗಾಗೆ ಪರಾರಿಯಾಗಿದ್ದರು. ‘ಹೂಡಿಕೆ ಮಾಡಿದವರಿಗೆ ಪೌರತ್ವ ನೀಡುವ ಯೋಜನೆ’ ಅನ್ವಯ ಅವರು ಆ್ಯಂಟಿಗಾದ ಪೌರತ್ವ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT