ಸೋಮವಾರ, ಆಗಸ್ಟ್ 3, 2020
27 °C

ಆಳ- ಅಗಲ | ಪಠ್ಯೇತರ ಎಂಬುದಿಲ್ಲ ಎಲ್ಲವೂ ಪಠ್ಯವೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಿಕೆಯಲ್ಲಿ ವಿವಿಧ ಆಯ್ಕೆಗೆ ಅವಕಾಶವಿರಬೇಕು ಎಂದು ನೂತನ ಶಿಕ್ಷಣ ನೀತಿಯು ಹೇಳುತ್ತದೆ. ವಿವಿಧ ವಿಷಯಗಳಲ್ಲಿ ಪ್ರಯೋಗ ನಡೆಸುವ ಮೂಲಕ ಪ್ರತಿ ವಿಷಯದ ಅನುಭವವನ್ನು ವಿದ್ಯಾರ್ಥಿಗಳೇ ಪಡೆಯಬೇಕು. ಆ ಮೂಲಕ ಉನ್ನತ ಶಿಕ್ಷಣದಲ್ಲಿ ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಪ್ರೌಢಶಿಕ್ಷಣದಲ್ಲಿ ಬುನಾದಿ ದೊರೆಯಬೇಕು.

-ಪಠ್ಯ, ಪಠ್ಯೇತರ ಚಟುವಟಿಕೆ ಮತ್ತು ಇತರೆ ಚಟುವಟಿಕೆಗಳು ಎಂಬ ವಿಭಜನೆ ಇರುವುದಿಲ್ಲ. ಬದಲಿಗೆ ಎಲ್ಲವೂ ಪಠ್ಯದ ಭಾಗವೇ ಆಗಿರುತ್ತವೆ

- ಸಾಮಾನ್ಯ ವಿಷಯಗಳ ಜತೆಗೆ ಆಟ, ಪ್ರದರ್ಶನ ಕಲೆಗಳು, ನೃತ್ಯ–ಗಾಯನ, ಕುಂಬಾರಿಕೆ, ಮರಗೆಲಸದಂತಹ ವಿಷಯಗಳೂ ಪಠ್ಯಕ್ರಮದ ಭಾಗ ಆಗಲಿವೆ

- ಎನ್‌ಸಿಇಆರ್‌ಟಿಯು ಪಠ್ಯಕ್ರಮ ಮತ್ತು ಪಠ್ಯಪುಸ್ತಕವನ್ನು ರೂಪಿಸಲಿದೆ. ಇದು ದೇಶದ ಎಲ್ಲೆಡೆ ಅನ್ವಯವಾಗಲಿದೆ. ಎನ್‌ಸಿಇಆರ್‌ಟಿ ರೂಪಿಸುವ ಪಠ್ಯವು ಸ್ಥಳೀಯವಾಗಿ ಪ್ರಸ್ತುತವಾಗಿರಬೇಕು

- ಎಸ್‌ಸಿಇಆರ್‌ಟಿ ತಮ್ಮ ರಾಜ್ಯಕ್ಕೆ ಅನ್ವಯವಾಗುವಂತೆ ಈ ಪಠ್ಯಕ್ರಮ ಮತ್ತು ಪಠ್ಯಪುಸ್ತಕವನ್ನು ಬದಲಾಯಿಸಲು ಅವಕಾಶವಿದೆ. ಆದರೆ ಪಠ್ಯಕ್ರಮದ ಸ್ವರೂಪದಲ್ಲಿ ಬದಲಾವಣೆ ಮಾಡುವಂತಿಲ್ಲ

- ಎನ್‌ಸಿಇಆರ್‌ಟಿ ರೂಪಿಸುವ ಪಠ್ಯಪುಸ್ತಗಳನ್ನು ಸ್ಥಳೀಯ ಭಾಷೆಗಳಿಗೆ ಅನುವಾದ ಮಾಡಿಕೊಳ್ಳಬೇಕು. ಆದರೆ ಅನುವಾದದಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಇದಕ್ಕಾಗಿ ‘ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟ್ರಾನ್ಸಲೇಷನ್ ಅಂಡ್ ಇಂಟರ್‌ಪ್ರಿಟೇಷನ್‌’ ಸ್ಥಾಪನೆ

- ಪಠ್ಯಕ್ರಮವು ಸಾಂದರ್ಭಿಕ ಕೋರ್ಸ್‌ಗಳನ್ನು ಹೊಂದಿರುತ್ತದೆ. ಇದರಲ್ಲಿ ಕೃಷಿ, ಎಲೆಕ್ಟ್ರಾನಿಕ್ಸ್‌, ಕರಕುಶಲ ಕಲೆಗಳ ಕೋರ್ಸ್‌ಗಳು ಇರುತ್ತವೆ. ಶಾಲೆಗಳು ಇಂತಹ ಕೋರ್ಸ್‌ಗಳನ್ನು ರೂಪಿಸಬೇಕು ಮತ್ತು ಇಂತಹ ಕೋರ್ಸ್‌ಗಳಿಗೆ ಅಗತ್ಯವಿರುವ ಮೂಲಸೌಕರ್ಯವನ್ನು ಶಾಲಾಮಟ್ಟದಲ್ಲಿ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಒದಗಿಸಬೇಕು. ಮೂಲಸೌಕರ್ಯಗಳ ಲಭ್ಯತೆಯನ್ನು ಆಧರಿಸಿ ಈ ಕೋರ್ಸ್‌ಗಳನ್ನು ರೂಪಿಸಬಹುದು

-ವಿದ್ಯಾರ್ಥಿಗಳಿಗೆ ಯಾವ ವಿಷಯದಲ್ಲಿ, ಅಂದರೆ ಕಲೆ, ವಿಜ್ಞಾನ, ಗಣಿತ, ಕ್ರೀಡೆ, ಸಂಗೀತ... ಮೊದಲಾದವುಗಳಲ್ಲಿ ಯಾವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೆಯೋ ಅದಕ್ಕೆ ಪ್ರೋತ್ಸಾಹ ನೀಡಬೇಕು. ಆ ವಿಷಯದಲ್ಲಿ ಅವರು ಪ್ರಗತಿ ಸಾಧಿಸಲು ಶಾಲೆ–ಶಿಕ್ಷಕರು ನೆರವಾಗಬೇಕು

ದೇಶದಾದ್ಯಂತ ತ್ರಿಭಾಷಾ ಕಲಿಕೆ

ದೇಶದಾದ್ಯಂತ ತ್ರಿಭಾಷಾ ಸೂತ್ರವನ್ನು ಪರಿಣಾಮಕಾರಿಯಾಗಿ ಅಳವಡಿಸಲು ನೂತನ ಶಿಕ್ಷಣ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಸ್ಥಳೀಯ ಭಾಷೆ/ಮಾತೃಭಾಷೆಯಲ್ಲಿ ಕಲಿಸಬೇಕು (ಕನಿಷ್ಠ ಐದನೇ ತರಗತಿವರೆಗೆ). ವಿಜ್ಞಾನದ ವಿಷಯಗಳೂ ಮಾತೃಭಾಷೆಯಲ್ಲಿ ಕಲಿಯುವಂತಿರಬೇಕು. ಈಗಲೂ ಮಾತೃಭಾಷೆ/ರಾಜ್ಯ ಭಾಷೆಯಲ್ಲಿ ವಿಜ್ಞಾನವನ್ನು ಬೋಧಿಸಲಾಗುತ್ತದೆ. ಅದರೆ ಇಂಗ್ಲಿಷ್‌ ಪಠ್ಯಪುಸ್ತಕದಲ್ಲಿ ಇರುವ ಗುಣಮಟ್ಟ, ಈ ಭಾಷೆಗಳ ಪಠ್ಯಪುಸ್ತಕದಲ್ಲಿ ಇರುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಬೇಕು. ಸ್ಥಳೀಯ ಭಾಷೆಯಲ್ಲೇ ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳು ರಚನೆಯಾಗಬೇಕು. ಈ ಪಠ್ಯಪುಸ್ತಕಗಳು ಲಭ್ಯವಿಲ್ಲದೇ ಇದ್ದರೂ, ಶಿಕ್ಷಕರು ಇಂಗ್ಲಿಷ್‌ನಲ್ಲಿನ ಪಠ್ಯಪುಸ್ತವನ್ನು ಬಳಸಿಕೊಂಡು ವಿದ್ಯಾರ್ಥಿಗಳ ಮಾತೃಭಾಷೆಯಲ್ಲಿ ಬೋಧನೆ ಮಾಡಬೇಕು. ಇಂಗ್ಲಿಷ್‌ ಮತ್ತು ಮಾತೃಭಾಷೆ/ಸ್ಥಳೀಯ ಭಾಷೆ ಎರಡರಲ್ಲೂ ಏಕಕಾಲದಲ್ಲಿ ವಿಜ್ಞಾನ ಕಲಿಕೆಗೆ ಅವಕಾಶ ಇರಬೇಕು ಎಂದು ನೂತನ ನೀತಿಯು ಹೇಳುತ್ತದೆ.

ತ್ರಿಭಾಷಾ ಸೂತ್ರವನ್ನು ದೇಶದಾದ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಮುಖ್ಯವಾಗಿ ಹಿಂದಿ ಭಾಷಾ ರಾಜ್ಯಗಳಲ್ಲಿ ಬೇರೆ ರಾಜ್ಯಗಳ ಭಾಷೆಗಳನ್ನು, ತೃತೀಯ ಭಾಷೆಯಾಗಿ ಬೋಧನೆ ಮಾಡಲು ಅವಕಾಶವಿರಬೇಕು. ಇದು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಹೋಗುವಾಗ, ತ್ರಿಭಾಷೆಗಳಲ್ಲಿ ಒಂದು ಅಥವಾ ಎರಡು ಭಾಷೆಗಳನ್ನು ಬದಲಿಸಲು ಅವಕಾಶವಿರಬೇಕು ಎಂದು ನೀತಿಯು ಹೇಳುತ್ತದೆ. ಕಿವಿ ಕೇಳಿಸದೇ ಇರುವ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಶಿಕ್ಷಣ ನೀಡಲು ‘ಭಾರತೀಯ ಸಂಜ್ಞಾ ಭಾಷೆ–ಐಎಸ್‌ಎಲ್‌’ ಅನ್ನು ಪ್ರಮಾಣೀಕರಿಸಲಾಗುತ್ತದೆ. ದೇಶದ ಎಲ್ಲಡೆ ಐಎಸ್‌ಎಲ್ ಅನ್ನೇ ಬಳಸಬೇಕಾಗುತ್ತದೆ. ಇದರ ಜತೆಯಲ್ಲೇ ಸ್ಥಳೀಯ ಸಂಜ್ಞಾ ಭಾಷೆಯಲ್ಲಿ ಶಿಕ್ಷಣ ನೀಡಲೂ ಅವಕಾಶವಿದೆ.

***

ಬೇರೆ ಕೆಲಸಕ್ಕೆ ಶಿಕ್ಷಕರ ನಿಯೋಜನೆ ಬೇಡ

ಭವ್ಯ ಭಾರತದ ಭಾವಿ ಪ್ರಜೆಗಳನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಹೊತ್ತಿರುವ ಶಿಕ್ಷಕರ ವೃತ್ತಿಪರತೆ, ಗುಣಮಟ್ಟ ಸುಧಾರಿಸಲು ಒತ್ತು ನೀಡುವುದು ಸೇರಿದಂತೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ–2020 ಹಲವಾರು ರಚನಾತ್ಮಕ ಶಿಫಾರಸು ಮಾಡಿದೆ.

ಚುನಾವಣಾ ಕೆಲಸ, ಮಧ್ಯಾಹ್ನ ಬಿಸಿಯೂಟ ತಯಾರಿಕೆ ಉಸ್ತುವಾರಿ, ಜನಗಣತಿಯಂತಹ ಶಿಕ್ಷಣೇತರ ಚಟುವಟಿಕೆಗಳಿಗೆ ಶಿಕ್ಷಕರನ್ನು ಸರ್ಕಾರ ನಿಯೋಜಿಸಬಾರದು. ಅನಿವಾರ್ಯ ಇಲ್ಲದೇ ಇದ್ದರೆ ಸರ್ಕಾರದ ಅನ್ಯ ಕೆಲಸಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದು.

ಮಕ್ಕಳಿಗೆ ಕಲಿಸುವುದು ಶಿಕ್ಷಕರಿಗೆ ಕೇವಲ ಒಂದು ವೃತ್ತಿಯಾಗಬಾರದು. ಅದನ್ನು ಅವರು ಪ್ರೀತಿಸಬೇಕು. ಉನ್ನತ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಪಡೆದ ಶಿಕ್ಷಕರು ಎಲ್ಲ ಶಾಲೆಗಳಲ್ಲೂ ಇರಬೇಕು.

ಮಕ್ಕಳಲ್ಲಿ ಮೌಲ್ಯ, ಜ್ಞಾನ, ಸೃಜನಾತ್ಮಕತೆ, ಕೌಶಲ ಮತ್ತು ಸಾಮಾಜಿಕ ಮೌಲ್ಯಗಳನ್ನು ಬಿತ್ತುವ ಹೊಣೆಗಾರಿಕೆಯನ್ನು ಶಿಕ್ಷಕರು ಸರಿಯಾಗಿ ನಿಭಾಯಿಸಬೇಕು
ಎನ್ನುವುದು ಹೊಸ ಶಿಕ್ಷಣ ನೀತಿಯ ಆಶಯವಾಗಿದೆ.

***
ಶಿಕ್ಷಕರ ಗುಣಮಟ್ಟ ಸುಧಾರಣೆ

- ಅರ್ಹತೆ ಆಧಾರದಲ್ಲಿ ನೇಮಕಾತಿ: ಶಿಕ್ಷಕರ ನೇಮಕಾತಿಗೆ ಟಿಇಟಿ (ಶಿಕ್ಷಕರ ಪ್ರವೇಶ ಪರೀಕ್ಷೆ) ಕಡ್ಡಾಯ. ಶಿಕ್ಷಕರ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿ ಪಾರದರ್ಶಕ ಮತ್ತು ಕಟ್ಟುನಿಟ್ಟಾಗಿರಬೇಕು. ಶಿಕ್ಷಕ ಹುದ್ದೆಯ ಅರ್ಹತಾ ಮಾನದಂಡ ಕಠಿಣವಾಗಿರಬೇಕು. ಅರ್ಹತೆ ಆಧಾರದಲ್ಲಿ ಮಾತ್ರ ಶಿಕ್ಷಕ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಯಾಗಬೇಕು.

- ಗುಣಮಟ್ಟದ ಶಿಕ್ಷಕ ತರಬೇತಿ: 2030ರ ವೇಳೆ ಶಿಕ್ಷಕರ ಹುದ್ದೆಗೆ ನೇಮಕಾತಿಗೆ ನಾಲ್ಕು ವರ್ಷದ ಬಿ.ಎಡ್ ಪದವಿ‌ ಶಿಕ್ಷಣ ಕನಿಷ್ಠ ವಿದ್ಯಾರ್ಹತೆ ನಿಗದಿ ಕಡ್ಡಾಯ. ಪದವಿ ಹಂತದಲ್ಲೇ ನಿರ್ದಿಷ್ಟ ವಿಷಯ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಎರಡು ವರ್ಷದ ಬಿ.ಎಡ್‌ ಕೋರ್ಸ್‌. ನಾಲ್ಕು ವರ್ಷದ ಸಮಗ್ರ ಪದವಿ ಓದಿದವರಿಗೆ ಒಂದು ವರ್ಷದ ಬಿ.ಎಡ್‌. ಕೋರ್ಸ್‌

- ಶಿಕ್ಷಕರ ತರಬೇತಿ ಕೇಂದ್ರಗಳ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಕ್ರಮ

- ಸಾಂಪ್ರದಾಯಿಕ ಕಲೆ, ಕೃಷಿ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸ್ಥಳೀಯ ವಿಷಯ ತಜ್ಞರನ್ನು ನೇಮಕ ಮಾಡಿಕೊಳ್ಳಬಹುದು. ಅವರಿಗೆ ನಾಲ್ಕು ವರ್ಷದ ಬಿ.ಎಡ್‌. ಕಡ್ಡಾಯವಲ್ಲ.

- ಮುಂದಿನ ದಿನಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ದೇಶದ ಯಾವ ಶಾಲೆಗಳಲ್ಲೂ ಶಿಕ್ಷಕರ ಕೊರತೆ ಎದುರಾಗಬಾರದು.

- ‌ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವಂತೆ ಶಿಕ್ಷಕರನ್ನು ಉತ್ತೇಜಿಸಲು ಗ್ರಾಮಾಂತರ ಭಾಗದ ಶಿಕ್ಷಕರಿಗೆ ಹೆಚ್ಚುವರಿಯಾಗಿ ಪ್ರೋತ್ಸಾಹಧನ ನೀಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆ ಇರುವ ಗ್ರಾಮದಲ್ಲಿಯೇ ವಾಸಿಸುವಂತೆ ಶಿಕ್ಷಕರಿಗೆ ಅನುಕೂಲತೆ ಒದಗಿಸಬೇಕು

- ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಬದಲಾವಣೆ: ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳ ಹೊರತಾಗಿ ಶಿಕ್ಷಕರಿಗೆ ಅನಗತ್ಯವಾಗಿ ಪದೇ ಪದೇ ವರ್ಗಾವಣೆ ಮಾಡುವ ನೀತಿಯನ್ನು ಕೈಬಿಡಬೇಕು. ಬಹಳಷ್ಟು ವರ್ಷಗಳ ಕಾಲ ಅವರನ್ನು ಒಂದೇ ಕಡೆ ನೆಲೆ ನಿಲ್ಲಲು ಅವಕಾಶ ನೀಡಬೇಕು.

- ವಿಷಯ ತಜ್ಞ ಶಿಕ್ಷಕರು ಆಯಾ ವಿಷಯಗಳಲ್ಲಿ ತೆಗೆದುಕೊಂಡ ಅಂಕಗಳನ್ನು ನೇಮಕಾತಿ ವೇಳೆ ಗಣನೆಗೆ ತೆಗೆದುಕೊಳ್ಳಬೇಕು. ಅರ್ಹತೆ ಮತ್ತು ಕಾರ್ಯಕ್ಷಮತೆ ಆಧಾರದ ಮೇಲೆ ಬಡ್ತಿ ಮತ್ತು ಸಂಬಳ ನಿಗದಿ

- ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡುವ ಶಕ್ತಿ, ಸಾಮರ್ಥ್ಯ, ಅನುಭವ ಮತ್ತು ಕೌಶಲಗಳ ಆಧಾರದ ಮೇಲೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಸಂದರ್ಶನ ಮತ್ತು ಪ್ರಾತ್ಯಕ್ಷಿಕೆ ಕಡ್ಡಾಯವಾಗಬೇಕು.

- ಎಲ್ಲ ಶಾಲೆಗಳಲ್ಲಿ, ಅದರಲ್ಲೂ ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರಿಗೆ ಕೆಲಸ ಮಾಡಲು ಪೂರಕವಾದ ವಾತಾವರಣ ಕಲ್ಪಿಸಬೇಕು. ಶೌಚಾಲಯ, ಶುದ್ಧ ಕುಡಿಯುವ ನೀರು, ಉತ್ತಮ ಕಲಿಕಾ ವಾತಾವರಣ, ಮೂಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು.

- ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು ಮುಂದಾಳತ್ವ ವಹಿಸಬೇಕು. ಶಿಕ್ಷಕರಲ್ಲಿ ನಾಯಕತ್ವ, ಮುಂದಾಳತ್ವ ಗುಣಗಳನ್ನು ಬೆಳೆಸಲು ಸೂಕ್ತ ಅವಕಾಶ ಕಲ್ಪಿಸಬೇಕು.

***
ಮಕ್ಕಳು ಹಕ್ಕುಗಳು: ಏನೇನು ಕ್ರಮಗಳು

- ಶಾಲಾ ಸುರಕ್ಷತೆ ಮತ್ತು ಮಕ್ಕಳ ಸುರಕ್ಷತೆಗಾಗಿ ಚೌಕಟ್ಟು ಮತ್ತು ಮಾರ್ಗಸೂಚಿ ಅಭಿವೃದ್ಧಿಪ‍ಡಿಸಲಾಗುವುದು. ಇವುಗಳು ಶಿಕ್ಷಣ ಸಂಸ್ಥೆಯ ನೋಂದಣಿ ಮತ್ತು ಮಾನ್ಯತೆಯ ಅರ್ಹತೆಯ ಭಾಗವಾಗಿರುತ್ತವೆ

- ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಕಾಯ್ದೆಗಳು, ನಿಯಮಗಳು, ನಿಬಂಧನೆಗಳ ಬಗ್ಗೆ ಪ್ರಾಂಶುಪಾಲರು ಮತ್ತು ಶಿಕ್ಷಕರಲ್ಲಿ ಜಾಗೃತಿ ಮೂಡಿಸಲಾಗುವುದು. ಶಿಕ್ಷಕರು/ಪ್ರಾಂಶುಪಾಲರ ಶಿಕ್ಷಣ ತರಬೇತಿ ಕಾರ್ಯಕ್ರಮ ಮತ್ತು ಪುನಶ್ಚೇತನ ಕೋರ್ಸ್‌ಗಳಲ್ಲಿ ಇವುಗಳನ್ನು ಸೇರಿಸಲಾಗುವುದು

- ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗಾಗಿ ಮಕ್ಕಳ ಹಕ್ಕುಗಳ ಬಗ್ಗೆ ಸ್ವಕಲಿಕಾ ಆನ್‌ಲೈನ್‌ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲಾಗುವುದು

- ವಿದ್ಯಾರ್ಥಿಗಳ ಹಕ್ಕುಗಳ ಉಲ್ಲಂಘನೆಯಾದರೆ ಅದನ್ನು ವರದಿ ಮಾಡಲು ಮತ್ತು ಆರೋಪಿಗಳ ವಿರುದ್ಧ ಕ್ರಮಕ್ಕೆ ಸೂಕ್ತವಾದ ವ್ಯವಸ್ಥೆ ರಚನೆ. ಸ್ಥಳೀಯ ಪೊಲೀಸರ ಸಹಭಾಗಿತ್ವದಲ್ಲಿ ಇದು ಜಾರಿಯಾಗಲಿದೆ

- ಹದಿಹರೆಯದ ಶಿಕ್ಷಣ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮವು ಶಾಲಾ ಪಠ್ಯಕ್ರಮದಲ್ಲಿ ಹಂತ ಹಂತವಾಗಿ ವಿಲೀನವಾಗಲಿದೆ. ಹದಿಹರೆಯದ ಶಿಕ್ಷಣವು ಪ್ರೌಢ ಶಾಲಾ ಶಿಕ್ಷಕರ ವೃತ್ತಿಪೂರ್ವ ತರಬೇತಿ ಮತ್ತು ಸೇವಾ ಅವಧಿಯ ತರಬೇತಿಯಲ್ಲಿ ಸೇರ್ಪಡೆಯಾಗಲಿದೆ

- ಹೆಣ್ಣು ಮತ್ತು ಗಂಡು ಮಕ್ಕಳು ಬೆಳವಣಿಗೆಯ ಹಂತದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ಪೋಷಕರು ಮತ್ತು ಶಿಕ್ಷಕರಿಗೆ ಸಲಹೆ ನೀಡಲು ಶಾಲೆ, ಶಾಲಾ ಸಂಕೀರ್ಣದ ಆಪ್ತಸಮಾಲೋಚಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು
***
ಸಾಧನೆಯ ಸಮೀಕ್ಷೆ

ರಾಷ್ಟ್ರೀಯ ಸಾಧನಾ ಸಮೀಕ್ಷೆ (ಎನ್‌ಎಎಸ್‌) ಮತ್ತು ರಾಜ್ಯ ವಿಶ್ಲೇಷಣಾ ಸಮೀಕ್ಷೆಗಳ (ಎಸ್‌ಎಎಸ್‌) ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ನಿಯಮಿತವಾಗಿ ತಿಳಿದುಕೊಳ್ಳಬೇಕು. ಈ ಸಮೀಕ್ಷೆಯನ್ನು ಮೂರು ವರ್ಷಕ್ಕೆ ಒಮ್ಮೆ ಮಾಡಬೇಕು. ಜ್ಞಾನ ಮತ್ತು ಕೌಶಲ ಸೇರಿದಂತೆ ಪಠ್ಯಕ್ರಮದಲ್ಲಿ ಇರುವ ವಿಷಯಗಳು ಮತ್ತು ಇತರ ಕಲಿಕೆಗಳನ್ನು ಇದರಲ್ಲಿ ಒಳಗೊಳ್ಳಿಸಬೇಕು. ಈ ಸಮೀಕ್ಷೆಯು ಶಿಕ್ಷಣದ ‘ಆರೋಗ್ಯ ತಪಾಸಣೆ’ಯ ರೀತಿಯಲ್ಲಿ ಇರಬೇಕು. ಹಾಗಾಗಿ, ಮಾದರಿ ಸಮೀಕ್ಷೆ ನಡೆಸಬೇಕೇ ವಿನಾಃ ಎಲ್ಲರನ್ನೂ ಸಮೀಕ್ಷೆ ಮಾಡುವ ಅಗತ್ಯ ಇಲ್ಲ. ಸಮಾನ ರಾಷ್ಟ್ರೀಯ ಚೌಕಟ್ಟಿನ ಆಧಾರದಲ್ಲಿ ಎನ್‌ಎಎಸ್‌ ರಾಷ್ಟ್ರಮಟ್ಟದಲ್ಲಿ ನಡೆಯಲಿದೆ. ಎನ್‌ಎಎಸ್‌ನ ಚೌಕಟ್ಟು ಏನು ಎಂಬುದನ್ನು ಎನ್‌ಸಿಇಆರ್‌ಟಿ ನಿರ್ಧರಿಸಲಿದೆ. ಎಸ್‌ಎಎಸ್‌ ರಾಜ್ಯ ಮಟ್ಟದಲ್ಲಿ ನಡೆಯುವ ಸಮೀಕ್ಷೆ. 3, 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಸಮೀಕ್ಷೆ ನಡೆಸಬಹುದು. ಈ ಸಮೀಕ್ಷೆಯ ಫಲಿತಾಂಶವು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು, ಎಸ್‌ಡಿಎಂಸಿ ಮತ್ತು ಸಮುದಾಯಕ್ಕೆ ದೊರೆಯುವಂತೆ ಮಾಡಬೇಕು. ಆದರೆ, ವಿದ್ಯಾರ್ಥಿಗಳು ಹೆಸರು ಫಲಿತಾಂಶದಲ್ಲಿ ಇರದಂತೆ ನೋಡಿಕೊಳ್ಳಬೇಕು. ಶೈಕ್ಷಣಿಕ ಫಲಿತಾಂಶ ಉತ್ತಮಪಡಿಸಲು ನೀತಿಯಲ್ಲಿನ ಬದಲಾವಣೆ ಹಾಗೂ ಸಂಶೋಧನಾ ಉದ್ದೇಶಗಳಿಗೆ ಈ ದತ್ತಾಂಶವನ್ನು ಬಳಕೆ ಆಗಬೇಕು.

***
ವೈಯಕ್ತಿಕ ಸುರಕ್ಷೆ ಅಷ್ಟೇ ಅಲ್ಲ

ಮಕ್ಕಳ ಹಕ್ಕುಗಳ ರಕ್ಷಣೆ ಎಂಬುದು ಅವರ ವೈಯಕ್ತಿಕ ಸುರಕ್ಷತೆಗೆ ಸೀಮಿತವಾದ ವಿಚಾರ ಅಲ್ಲ. ದಂಡನೆ, ಭಾವನಾತ್ಮಕ ಮತ್ತು ದೈಹಿಕ ಕಿರುಕುಳ, ದೌರ್ಜನ್ಯ ತಡೆ, ಶಾಲಾ ಚಟುವಟಿಕೆ ಸಂದರ್ಭದಲ್ಲಿ ಗಾಯಗೊಳ್ಳುವುದಕ್ಕೆ ಮುನ್ನೆಚ್ಚರಿಕೆ, ಸುರಕ್ಷಿತ ಮೂಲಸೌಕರ್ಯ, ಮಕ್ಕಳಸ್ನೇಹಿಯಾದ ಭಾಷೆ ಮತ್ತು ಕ್ರಿಯೆ, ತಾರತಮ್ಯರಹಿತ ವರ್ತನೆಗಳೆಲ್ಲವೂ ಮಕ್ಕಳ ಹಕ್ಕುಗಳ ಭಾಗವಾಗಿವೆ.

*************
ಆರ್‌ಟಿಇ ಪರಾಮರ್ಶೆ

ನೀತಿಯು ಪ್ರಸ್ತಾವಿಸುವ ಹಲವು ವಿಚಾರಗಳು ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಅಂಶಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿಯೇ ಆರ್‌ಟಿಇಯ ಸಮಗ್ರವಾದ ಪರಾಮರ್ಶೆ ಅಗತ್ಯ. ಈ ಪರಾಮರ್ಶೆಯ ಬಳಿಕ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬಹುದು. ಅಥವಾ ಈ ನೀತಿಗೆ ಅನುಗುಣವಾಗಿ ಸಮಗ್ರವಾದ ಕಾಯ್ದೆಯನ್ನು ಸರ್ಕಾರವು ರೂಪಿಸಬಹುದು.

ಕಳೆದ ಒಂದು ದಶಕದ ಕಲಿಕೆಗಳು ಮತ್ತು ಅನುಭವಗಳ ಆಧಾರದಲ್ಲಿ ಆರ್‌ಟಿಇಯನ್ನು ಸುಧಾರಿಸಲು ಈ ಪರಾಮರ್ಶೆಯನ್ನು ಬಳಸಿಕೊಳ್ಳಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ಆರ್‌ಟಿಇಯು ಶೈಕ್ಷಣಿಕವಾಗಿ ಆಗುವ ಪರಿಣಾಮಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಪ್ರಕ್ರಿಯೆಗಳಿಗೆ ಸಂಬಂಧಿಸಿ ಯಾಂತ್ರಿಕ ಮತ್ತು ನಿಯಂತ್ರಣಾತ್ಮಕ ಧೋರಣೆ ಇರಬಾರದು.

ನಿಯಮಗಳ ಹೇರಿಕೆ ಬದಲಿಗೆ, ಸಾರ್ವಜನಿಕ ವಿಮರ್ಶೆಗೆ ಮಾಹಿತಿಗಳು ದೊರಕುವುದಕ್ಕೆ ಮಹತ್ವ ನೀಡಬೇಕು. ಮೂಲಸೌಕರ್ಯ, ಪಠ್ಯಕ್ರಮ, ಬೋಧನಾ ವಿಧಾನ, ಮೌಲ್ಯಮಾಪನ, ಪ್ರವೇಶ, ಶಿಕ್ಷಕರು, ವಿದ್ಯಾರ್ಥಿ ವೈವಿಧ್ಯ, ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಸೌಲಭ್ಯ, ಶಿಷ್ಯವೇತನದಂತಹ ವಿಚಾರಗಳನ್ನು ರೂಪಿಸಿಕೊಳ್ಳಲು ಸಾಮರ್ಥ್ಯ ಇರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಸಶಕ್ತಗೊಳಿಸಬೇಕು.

(ಆಧಾರ: ರಾಷ್ಟ್ರೀಯ ಶಿಕ್ಷಣ ನೀತಿ 2020 ಕರಡು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು